ಕೂಡ್ಲಹಳ್ಳಿಯಲ್ಲಿ ಸಂಗಮೇಶ್ವರನ ಜಾತ್ರೆ ಸಾಗಿತ್ತು. ಕರೋನ ಅಬ್ಬರದಿಂದ ಜನ ಸೇರಿರಲಿಲ್ಲ. ಜಾತ್ರೆ ಎಂದರೆ ತಪ್ಪಾಗಬಹುದೇನೋ! ಒಂದು ದೇವಸಂತೆ ಎಂದರೆ ಸಮಂಜಸ ಅನ್ನಬಹುದು.ಆದ್ರೂ ಸಹ ಪೂಜೆ ಪುನಸ್ಕಾರಗಳೆಲ್ಲಾ ವಿಧಿವಿಧಾನದಂತೆ ಯತವತ್ತಾಗಿ ನಡೆಯುತ್ತಿದ್ದವು.ನಾನು ಹೋಗಿದ್ದೆ.ಸಾಮಾಜಿಕ ಅಂತರ ಕಾಯ್ದುಕೊಂಡೆ ಅಂದುಕೊಳ್ತಿನಿ ಕಾರಣ ನನಗೆ ಕರೋನ ಸಂಬಂಧ ಯಾವುದೇ ಪಾಸಿಟೀವ್ ತಂಟೆ ತಕರಾರೆದ್ದಿಲ್ಲ. ದರ್ಶನ ಆಯ್ತು, ಅವ್ವ ರೊಟ್ಟಿ ಕಟ್ಟಿ ಕೊಟ್ಟಿದ್ಲು . ಕಜ್ಜಾಯ ಸಹ ಮಾಡಿ ಕೊಟ್ಟಿದ್ಲು. ದೇವಸ್ಥಾನ ಬಿಟ್ಟು ಹತ್ತತ್ರ ೧ ಮೈಲಿ ನಡೆದರೆ ಅಜ್ಜಯ್ಯನ ಆಲದಮರದ ತೋಪು ಸಿಗುತ್ತೆ. ಹೊಟ್ಟೆಗೆ ಏನಾದ್ರೂ ಬಿದ್ದಾಗ ಗಂಟಲು ನೆನೆಸಿಕೊಳ್ಳೋಕೆ ಒಂದು ಅವಕಾಶದ ತರ ಅಲ್ಲಿ ತೊಟ್ಟಿಯು ಸಹ ಇತ್ತು. ಹೇಗೋ ಗಂಟು ತುಂಬಿತ್ತು ಹೊಟ್ಟೆ ಖಾಲಿಯಾಗಿತ್ತು ಹಾಗೆ ಮೆಲ್ಲಗೆ ಗಂಟು ಬಿಚ್ಚಿದೆ. ಎರಡು ರೊಟ್ಟಿ ಕರಂ ಕರಂ ಎಂದು ಚಟ್ನಿಕಾರ ನೆಂಚಿಕೆಗೆ ಇದ್ದುದರಿಂದ ನಳನ ಸವಿಸುಖ ಅನುಭವ ಹೇಳತೀರದು. ಒಂದು ನಾಲ್ಕು ಬೊಗಸೆ ನೀರನ್ನು ಹೀರಿಕೊಂಡು ಆಯಾಸವಾಗಿತ್ತು ಬಿಸಿಲ ಝಳಕ್ಕೆ, ಅರಿಯದೇ ಕಣ್ಣಿನ ರೆಪ್ಪೆಗಳಿಗೆ ಮಂಪರು ಬಡಿದಿತ್ತು;
ಪರಿಮಳ ಅಂಜಾಂಟಿ( ಚಿಕ್ಕಮ್ಮ)ಯ ಹಿರಿಮಗಳು . ಈ ಅರಿವಿನ ಕಾಲದಲ್ಲೂ ಅಂಜವ್ವಗೆ ನಾಲ್ಕು ಹೆಣ್ಣಮಕ್ಕಳು. ಕೊನೆಯದಾಗಿ ಹರಕೆಯ ಫಲವಾಗಿ ವಂಶೋದ್ಧಾರಕ ಮನು ಹುಟ್ಟಿದ್ದಾನೆ. ಅವನಿಗೆ ಎರಡು ವರ್ಷ ವಯಸ್ಸಿರಬೇಕು ಇನ್ನೂ ಎದೆ ಹಾಲನ್ನು ಜಿವುಕುತ್ತಾ ಇದ್ದಾನೆ. ಮಠರಾಜ ಎಂಬ ಅಡ್ಡಹೆಸರು ಉಂಟು ಆ ಕೂಸಿಗೆ. ಪರಿಮಳ ಅಂತೂ ನನ್ನ ವಯಸ್ಸಿನವಳೇ ಮತ್ತೇ ಒಂದೇ ದಿವಸ ಬೆಳಿಗ್ಗೆ ನಾನು ಹುಟ್ಟಿದ್ದು ಸಂಜೆ ಅವಳು ಹುಟ್ಟಿದ್ಲು ಅಂತ ಅವ್ವ ಆಗಾಗ ಹೇಳ್ತಾ ಇರ್ತಾಳೆ. ಈಗಲೂ ಚಿಕ್ಕಂದಿನಲ್ಲಿ ತೆಗೆಸಿದ್ದ ನಮ್ಮಿಬ್ಬರ ಜೋಡಿ ಫೋಟೋ ಇದೆ ಮನೆಯಲ್ಲಿ. ಚಿಕ್ಕಮ್ಮನ ಮಗಳಾದರೂ ಸಹ ಒಂದು ವಿಶೇಷವಾದ ಸಂಬಂಧ ನಮ್ಮಿಬ್ಬರ ನಡುವೆ ಇತ್ತು ಮತ್ತೆ ಇದೆ. ತುಂಬಾ ಮುದ್ದಾಗಿ ಎಲ್ಲರ ಜೊತೆ ಬೆರೆತು ಬಾಳುವಂತವಳು ಪರಿಮಳ. ಒಂದು ಹಂತಕ್ಕೆ ಮನೆಯವರ ಮುದ್ದಿನ ಮಗಳು ಎಂದುಕೊಳ್ಳಿ. ಕೂಲಿನಾಲಿ ಮಾಡಿ ಕುಟುಂಬದ ಜೀವನ ನಡೆಯಬೇಕಿತ್ತು. ಅಕ್ಷರ ಕಲಿಯೋಕೆ ಶಾಲೆಗಂತೂ ಹೋಗುತ್ತಿದ್ದಳು, ರಜಾ ದಿನಗಳಲ್ಲಿ ಬೆದ್ಲು ಭೂಮಿಕಡೆ ಮುಖಮಾಡುವ ಪರಿಸ್ಥಿತಿ ಇದಿರಾಗಿತ್ತು.
ಅಂಜವ್ವಗೆ ನಾಲ್ಕು ಹೆಣ್ಣಮಕ್ಕಳ ಜವಾಬ್ದಾರಿ ಹೊರಲು ಸಂಕಟವಾಗಿ ಹೋಗಿತ್ತು. ಅದೆಷ್ಟೋ ಸಲ ದೊಡ್ಡಪ್ಪನ ಮನೆಯಿಂದ ದೊಡ್ಡಮ್ಮಗೆ ಕಾಣದೆ ಅಕ್ಕಿ, ನುಚ್ಚು, ಬೇಳೆ ,ಹಿಟ್ಟು ತಂದು ಅವತ್ತಿನ ಹೊತ್ತು ಕಳೆದದ್ದು ಉಂಟು. ಪರಿಮಳಳ ಅಪ್ಪ ಮಹಾಲಿಂಗಯ್ಯ ಕಟ್ಟಿಗೆ ಕಡಿಯೋಕೆ ಹೋಗ್ತಾಯಿದ್ದ ಬರುತ್ತಿದ್ದ ಕೂಲಿಯಲ್ಲಿ ಅರ್ಧ ಮನೆಗಾದ್ರೆ ಇನ್ನರ್ಧ ಗಿಡ್ಡಪ್ಪ ಗೆಜ್ಜಜ್ಜರ ಸಾರಾಯಿ ಒಮ್ಮೊಮ್ಮೆ ಪೂರ್ತಿ ಜಮಾಯಿಸಿದ್ದ ಉದಾಹರಣೆಗಳು ಸಾಕಷ್ಟು. ಇದೆಲ್ಲದರ ನಡುವೆಯೂ ಪರಿಮಳ ೮ನೇ ಕ್ಲಾಸ್ ಮುಗಿಸಿ ೯ನೇ ಕ್ಲಾಸಿಗೆ ನೆಡೆಯೋ ತಯಾರಿ ನಡೆಸಿದ್ದಳು ದೂರದ ಹಿರಿಯೂರಿನ ಅಂಬೇಡ್ಕರ್ ವಸತಿ ಶಾಲೆಗೆ. ಆಗೋ ಈಗೋ ಮಿಡ್ಟರ್ಮ್ ಪರೀಕ್ಷೆ ಬರೆದು ರಜಾದಿನಕ್ಕೆ ತನ್ನೂರು ಹೂವಿನಹೊಳೆಗೆ ಬಂದಿದ್ದಳು. ಯಥಾರೀತಿ ಈ ಸಲದ ಬೇಸಿಗೆಯಲ್ಲೂ ಮೂಲೆಯಲ್ಲಿ ಬಿದ್ದಿದ್ದ ಕುಡುಮಾಡ, ಕುಡುಗೋಲು, ಕುರ್ಜಿಗೆ ಕೈ ಬೀಸಿ ಕರೆಯುತ್ತಿವೆ. ಅವಳನ್ನೂ ನನಗಿಂತ ಮೂರು ವರ್ಷ ತಡವಾಗಿ ಶಾಲೆಗೆ ಹಚ್ಚಿದ್ದರಿಂದ ನಾನು ಪದವಿಪೂರ್ವ ಶಿಕ್ಷಣ ಪಡೆಯುತ್ತಿದೆ.
ಅಂಜವ್ವನ ತಮ್ಮ ಮಂಜ ಬೇಸಾಯ ಮಾಡ್ಕೊಂಡಿದ್ದ. ಓದು ತಲೆಗೆ ಹತ್ತಿರ್ಲಿಲ್ಲಾದ್ರೂ ಬಂಡಾಟಕ್ಕೆ ಮೂರನೇ ತರಗತಿಯವರೆಗೂ ಅಭ್ಯಾಸ ಮುಗಿಸಿದ್ದ. ಅವ್ನು ಎಣ್ಣೆ ಪಾರ್ಟಿನೇ; ಹೇಗೋ ತನ್ನ ತಮ್ಮನಿಗೆ ಪರಿಮಳನ ಕೊಟ್ರೆ ತವರುಮನೆ ಸಂಬಂಧ ಉಳಿಯುತ್ತೆ ಅಂಬೋದು ಅಂಜವ್ವಳ ಇರಾದೆಯಾಗಿತ್ತು. ಇನ್ನೂ ಬೇಸಿಗೆಯ ರಜೆ ಮುಗಿದಿರಲಿಲ್ಲ ದಿಢೀರನೇ ಮದುವೆ ನಿಶ್ಚಯ ಮಾಡಿಯೇ ಬಿಟ್ಟಳು ಅಂಜವ್ವ. ಅಂತೆಯೇ ಮಾರಿಕಣಿವೆಯ ಕಣಿವೆಮಾರಮ್ಮ ಗುಡಿಯ ಬಳಿ ಲಗ್ನ ನಡೆದೊಯ್ತು, ಪರಿಮಳಳ ಶಾಲೆಯ ಕನಸೂ ದೂರಯ್ತು. ಲಂಗ ಹಾಕೊಂಡು ಶಾಲೆಗೆ ನಡೆಯುತ್ತಿದ್ದ ಪರಿಮಳ ಸೀರೆ ಉಟ್ಟುಕೊಂಡು ಹೊಲಕ್ಕೆ ಹೋಗಬೇಕಾದ ಅನಿವಾರ್ಯತೆ. ಅಂಜವ್ವಗೇನೋ ಸೆರಗಲ್ಲಿ ಕಟ್ಟಿಕೊಂಡಿದ್ದ ಬೆಂಕಿ ಸ್ವಲ್ಪ ತಣ್ಣಗಾದ ಅನುಭವ. ಪರಿಮಳಗೆ ಬದುಕಿನಲ್ಲಿ ಇಷ್ಟುಬೇಗನೆ ದಾಂಪತ್ಯ ಜೀವನ ಶುರುವಾ ಗುವುದೆಂದು ಊಹಿಸಿರಲಿಲ್ಲ ಆ ನೋವಲ್ಲೆ ಕಣ್ಣಲ್ಲಿ ಕಂಬನಿಯ ತುಂಬಿ ಅಜ್ಜಿ ಮನೆಯ ದೀಪ ಬೆಳಗಲು ಹೊರಟು ನಿಂತಳು. ಇತ್ತಾ ನನಗೂ ಸುದ್ದಿ ಮುಟ್ಟಿದ್ದು ಫೋನಿನಲ್ಲೇ ; ಮೌನ ಆವರಿಸಿತು ಒಂದು ಕ್ಷಣ ಬೇಸರವಾಗಿತ್ತು ಇಷ್ಟು ಬೇಗ ತಂಗಿಗೆ ಮದುವೆನಾ?! ಎಂಬ ಪ್ರಶ್ನೆ ನೋವಿನ ರೂಪ ತಾಳಿ ಕಾಡಲಾರಂಭಿಸಿತು.
ನನ್ನ ವಾರ್ಷಿಕ ಪರೀಕ್ಷೆ ಶುರುವಾಗುವ ವೇಳಾಪಟ್ಟಿ ಪ್ರಕಟಗೊಂಡಿತ್ತು ನಮ್ಮ ಕಾಲೇಜಿನ ಪ್ರಾಚಾರ್ಯರ ಕೊಠಡಿಯ ಮಗ್ಗೆಲೆ ಇದ್ದ ನೋಟಿಸ್ ಬೋರ್ಡಿನಲ್ಲಿ. ಅತ್ತಾ ಪರಿಮಳ ಮದುವೆಯಾಗಿ ಸುಮಾರು ನಾಲ್ಕೈದು ತಿಂಗಳುಗಳು ಕಳೆದವು. ಅಂದೇಕೊ ಅಜ್ಜಿ ಮನೆಯಲ್ಲಿದ್ದ ನನಗೆ ಓದಲು ಮನಸ್ಸಾಗಲಿಲ್ಲ ಪುಸ್ತಕ ಮುಚ್ಚಿಟ್ಟು ಅವ್ವಅಪ್ಪನ್ನ ನೋಡಿಕೊಂಡು ಬರೋಣ ಎಂದು ತೀರ್ಮಾನಿಸಿ ನಾ ಓದುತ್ತಿದ್ದ ಆರನಕಟ್ಟೆಯಿಂದ ೧೦ ಕಿ.ಮೀ ಇರುವ ನನ್ನೂರು ಹೂವಿನಹೊಳೆಗೆ ಬಂದಿಳಿದೆ. ಅವತ್ತಿನ ರಾತ್ರಿ ಊಟ ಮಾಡುವಾಗ ಅವ್ವ ತೊದಲುತ್ತಲೆ ನಿಧಾನವಾಗಿ ಉಸುರು ಬಿಟ್ಟಳು ” ಅಂಜವ್ವನ ತಮ್ಮ ಮಂಜ ಕೆರೆಗಾರಿ ಸತ್ತೋದ ಕಣಪ್ಪ, ಆ ಸಣ್ಹುಡ್ಗೀನ ನಡಬೀದೆಗ್ಬಿಟ್ಟು.” ಆ ಕ್ಷಣ ನನ್ನ ಕಣ್ಮುಂದೆ ಹಾದು ಹೋಗಿದ್ದು ಕತ್ತಲಕೋಣೆಯಲ್ಲಿ ಒಂಟಿ ದೀಪದ ಬತ್ತಿ ಸುಟ್ಟು ಕರಕಲಾಗುತ್ತಿರುವ , ಬತ್ತಿಯ ತುದಿಯಲ್ಲಿ ಹಾಯ್ವ ಮಂದಬೆಳಕು ಅವಳ ಅರ್ಧಮುಖಚರ್ಯೆಕಷ್ಟೆ ಬೀಳುತ್ತಿದ್ದು, ಬಳೆಯಿಲ್ಲದೆ ಬರಿದಾದ ಕೈಗಳು, ಬೊಕ್ಕ ಹಣೆ, ಮಬ್ಬು ಮಬ್ಬಾಗಿ ಕಾಣುವ ಕೆದರಿದ ತಲೆಗೂದಲು, ಕಣ್ಣಲ್ಲಿ ತನ್ನನ್ನೇ ಸೇಡಿನ ಕಿಚ್ಚಲ್ಲಿ ಸುಡುತ್ತಿರುವ ಕುಲುಮೆ, ದೂರದಲ್ಲಿ ಎತ್ತಲಿಂದಲೋ ಬಂದ ಮಂಗಳವಾದ್ಯ ಸ್ವರ ಕರ್ಣಪಟಲಗಳ ಹಿಂಡಿ ಹಾಕುವಂತಹ ಭಾವವನ್ನು ಮುಖದಲ್ಲಿ ತುಂಬಿಕೊಂಡ ನಾಳಿನ ಸೂರ್ಯನ ಬೆಳಕನ್ನು ಸಹಿಸದ ಅಸಹಾಯಕ ಹೆಣ್ಣುಮಗಳ ಸಾಮಾಜಿಕ ರೂಪ. ಆಲದಮರದಡಿಯಲ್ಲಿ ಮಂಪರು ಬಡಿದಿದ್ದ ಕಣ್ಣುಗಳಿಗೆ ಹೆಚ್ಚರಗೊಂಡು ಒದ್ದೆಯಾಗಿ ತೆರೆದುಕೊಂಡವು.
ಒಂದು ಬಾರಿ ದೀರ್ಘವಾಗಿ ನಿಟ್ಟುಸಿರ ಬಿಟ್ಟು ಅಲ್ಲೇ ತೊಟ್ಟಿಯಲಿದ್ದ ನೀರನ್ನು ಮುಖದ ಮೇಲೆ ಎರಚಿಕೊಂಡು ಹೆಗಲ ಮೇಲಿದ್ದ ಚೌಕದಿಂದ ಮುಖ ತೀಡಿಕೊಂಡು ರೋಡಿನೆಡೆಗೆ ಕಣ್ಣಾಯಿಸಿದೆ. ಹೊತ್ತು ಮಧ್ಯಾಹ್ನ ಮೀರಿತ್ತು. ದೂರದಲ್ಲಿ ಮುಖಪರಿಚಯವಿರುವ ಯಾರೋ ಒಬ್ಬ ಮನುಷ್ಯ ಬೈಕಿನಲ್ಲಿ ನಮ್ಮೂರ ಕಡೆಗೆ ಪಯಣ ಬೆಳೆಸಿದ್ದ. ನಮ್ಮೂರಿನವನೆ ಅವನು ಕುರುಬರ ರಂಗಪ್ಪ ಎಂದು ಹೆಸರು. ಬೆಳಿಗ್ಗೆ ಸುಮಾರು ೫ ಕಿಮೀ ನಡೆದುಕೊಂಡೆ ಬಂದಿದ್ದ ನಾನು ಈಗ ಬೈಕ್ ಜೊತೆಗಾರ ಸಿಕ್ಕಿ ಆಗಿದ್ದ ಆಯಾಸವನ್ನು ಶಮನಗೊಳಿಸಿದ. ಸಮಾಜದ ಕಟ್ಟುಪಾಡಿನ ಸಂಕೋಲೆಯಲ್ಲಿ ಪರಿಮಳ ಸಿಕ್ಕಿ ಹಾಕಿಕೊಂಡಿಲ್ಲಾ. ಬಂದು ಹೋಗುವ ಬಾಳಲ್ಲಿ ಮುತೈದೆತನ ಒಂದು ಭಾಗ್ಯದಭಾಗವಷ್ಟೆ. ಬಾಳ ಸಂಗಾತಿ ಬೇಕು ಎಂದು ಅವಳಿಗೂ ಗಂಡ ಸತ್ತ ಮೇಲೆ ಅನ್ನಿಸಿರಬೇಕು. ಆದರೆ ತನ್ನ ಬದುಕಿಗೆ ತಾನೇ ಸಂಗಾತಿಯಾಗಿ ದಿಟ್ಟತನದಿಂದ ಸಮಾಜದ ಎಲ್ಲ ಕಟ್ಟಳೆಗಳನು ಎದುರಿಸಿ ನಿಂತು ವ್ಯವಸಾಯವನ್ನು ಜೀವನದ ಆಧಾರಸ್ತಂಭವಾಗಿಸಿಕೊಂಡು ತನ್ನ ತಂಗೀಯರ ವಿಧ್ಯಾಭ್ಯಾಸ ಮಾಡಿಸುತ್ತಾ ಮನೆಯ ನಿಭಾಯಿಸುವ ಜೀವನದ ಆಶಾಜ್ಯೋತಿಯಾಗಿದಾಳೆ ನನ್ನ ಪರಿ, ನನ್ನೊಳಗಿನ ಪರಿ. ರಂಗಪ್ಪ ಬೈಕ್ ನಿಲ್ಲಿಸಿದ ನಾನು ಜೇಬಲ್ಲಿದ್ದ ಮಾಸ್ಕ್ ಹೊರತೆಗೆದೆ.
-ಮಸಿಯಣ್ಣ ಆರನಕಟ್ಟೆ.