ನಮ್ಮೂರು ರೈತಾಪಿ ಚಟುವಟಿಕೆಯಿಂದ ಕೂಡಿದ ಸಣ್ಣ ಹಳ್ಳಿ. ಪ್ರತಿ ಮನೆಯಲ್ಲಿ ಏನಿಲ್ಲವೆಂದರು ಒಂದು ಜೊತೆ ಇಲ್ಲವೇ ಎರಡು ಜೊತೆ ಎತ್ತುಗಳು ಸಾಮಾನ್ಯ. ರಾಮನಗೌಡರ ಮನೆಯಲ್ಲಿ ಮಾತ್ರ ಏಳೆಂಟು ಜೊತೆ ರಾಸುಗಳು. ನೊಣ ಕೂತರೆ ಜಾರಬೇಕು ಅಷ್ಟು ಪೊಗರ್ದಸ್ಥಾಗಿದ್ದವು. ಅವುಗಳ ಚಾಕರಿ ಮಾಡಲೆಂದೇ ಇಬ್ಬರನ್ನು ನೇಮಿಸಲಾಗಿತ್ತು. ಏರೆ ಜಮೀನಿನಲ್ಲಿ ಬೆಳೆದ ಹಸಿಯಾದ ಎಳೆ ಬಿಳಿಜೋಳದ ತೆನೆಗಳನ್ನು ಮೇಯಲು ಹಾಕುತ್ತಿದ್ದರು. ಆದ್ದರಿಂದ ಅವುಗಳಿಗೆ ದುಡಿಯುವದಕ್ಕಿಂತ ಮೇಯೆಯುವುದೇ ಕೆಲಸವಾಗಿತ್ತು.
ಹೀಗೆ ಊರ ದನಗಳಿಗೆ ನಾಲು ಕಟ್ಟಲು (ನಾಲು ಎಂದರೆ ಎತ್ತಿನ ಕಾಲಿನ ಕೊಳಗಗಳಿಗೆ ಕಬ್ಬಿಣದ ಪಟ್ಟಿಯನ್ನು ಕಟ್ಟುವುದು,ನಮ್ಮೂರು ಕೆಂಗಲು, ಏರೆ ಮತ್ತು ಬಹುತೇಕ ಕಲ್ಲು ಜಮೀನು ಹೊಂದಿದ್ದರಿಂದ, ಕಲ್ಲು ತುಳಿಯುವ ಎತ್ತುಗಳಿಗೆ ನಾಲು ಕಟ್ಟುವುದು ಸಾಮಾನ್ಯ.) ಬೋಳೂರಿನಿಂದ ಪಾಟ್ಲೆ ಬರುತಿದ್ದ, ನೋಡಲು ಸುಮಾರಾಗಿ ಕುರುಚಲ ಗಡ್ಡ, ಹರಕಲು ಮೀಸೆ, ಕುಳ್ಳಗೆ ನರಪೇತಲನ ಹಾಗೇ ಯಾರೇ ನೋಡಿದರು ಮತ್ತೆ ಮತ್ತೆ ನೋಡಬೇಕು ಎನ್ನುವ ವಾಮಾನವತಾರ.
ಪ್ರತಿ ಸೋಮವಾರ ನಸುಕಿನ ವೇಳೆಗೆ ಸಣ್ಣದೊಂದು ಕೈ ಚೀಲ, ಹೆಗಲ ಮೇಲೊಂದು ಕತ್ತದ ಹಗ್ಗ ಹಿಡಿದು ಒಂದು ಸುತ್ತು ಊರು ಪ್ರದಕ್ಷಣೆ ಹಾಕಿದನೆಂದರೆ ಸಾಕು ಊರ ಮುಂದಿನ ನೆಟ್ಟ ಹುಣಸೆ ಮರದ ಬಳಿ ಎಲ್ಲಾ ದನಗಳು ಜಮಾಯಿಸಿಬಿಡಿತ್ತಿದ್ದವು. ಸರತಿಯಂತೆ ನಾಲು ಬಿಗಿಯುತ್ತಿದ್ದರಿಂದ ಬಹುತೇಕ ಮಧ್ಯಾಹ್ನದವರೆಗೂ ಅದೇ ಕೆಲಸ. ಕೆಲವರು ಮಳೆ ಅಭಾವ, ಬೆಳೆ ನಷ್ಟ, ಮಗಳ ಮದುವೆ, ಪುಡಿಗಾಸಿನ ರಾಜಕಾರಣದ ಬಗ್ಗೆ ಹರಟೆ ಹೊಡೆಯುತ್ತಿದ್ದರು. ಇನ್ನು ಕೆಲವರು ಕೋರೆ ಬಿಡಿ ಜಗ್ಗುವದರಲ್ಲಿ, ಮತ್ತೆಕೆಲವರು ಹುಣಸೆ ಮರದ ನೆರಳಿಗೆ ಮೈಚೆಲ್ಲಿ ಮಲಗುತ್ತಿದ್ದರು.
ಪಾಟ್ಲೆ ಮಾತ್ರ ತನ್ನ ಕಾಯಕದಲ್ಲಿ ತಲ್ಲೀನ. ಗಿಡ್ಡಗೆ, ಕುಳ್ಳಗೆ ಹೇಳಿ ಮಾಡಿಸಿದ ಹಾಗೇ ಇದ್ದ ಪಾಟ್ಲೆ ಕ್ಷಣ ಮಾತ್ರದಲ್ಲಿ ಗಜ ಗಾತ್ರದ ಎತ್ತುಗಳ ಕಾಲಿನ ಸಂದಿಗಳಲ್ಲಿ ಸಲೀಸಾಗಿ ನುಸುಳಿ ಇಂಗಾಲಿಗೆ ಹಗ್ಗ ಹಾಕುವುದರ ಮೂಲಕ ನೆಲಕ್ಕೆ ಕೆಡುವುತ್ತಿದ್ದಂತೆ ನಾಲ್ಕು ಕಾಲಿಗೂ ಹಗ್ಗ ಬಿಗಿದು ಕಟ್……ಕಟ್ ಕಟ್ ಕಟ್….ಕಟ್ ಎಂದು ನಾಲು ಜಡಿಯಲು ಪ್ರಾರಂಭಿಸುತ್ತಿದ್ದ. ಜನಗಳೆಲ್ಲ “ಬಲೇ ಪಾಟ್ಲೆ ಬಲೇ “ಎಂದು ಹೊಗಳುತ್ತಿದ್ದರು. ನಾಲು ಬಡಿಯಲು ಬಳಸುತ್ತಿದ್ದ ಚೂಪಾದ ಮೊಳೆಗಳು ಮಳೆ ಹುಳುವಿನ ರೀತಿ ನಾಚಿ ಮುದುರಿಕೊಳ್ಳುತ್ತಿದ್ದವು. ನಾಲು ಕಟ್ಟವುದನ್ನ ನಾನು ಮತ್ತು ನನ್ನ ಅಣ್ಣ ಕುತೂಹಲದಿಂದ ನೋಡುತಿದ್ದೆವು.
ಈಗ ನನ್ನೂರು ಸಂಪೂರ್ಣವಾಗಿ ಬದಲಾಗಿದೆ, ತುಂಗೆ ಕಾಲುವೆಗಳಲ್ಲಿ ಹರಿಯುತ್ತಿದ್ದಾಳೆ ಇದರ ಫಲವಾಗಿ ಎಲ್ಲಾ ಜಮೀನುಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತವೆ. ನೋಡುವುದೇ ಕಣ್ಣಿಗೆ ಹಬ್ಬ. ಊರ ಮುಂದಿನ ಕೆರೆ ಸದಾ ತುಂಬಿ ತುಳುಕುತ್ತದೆ. ಅಪ್ಪ ಚಿಕಪ್ಪ ಅಣ್ಣ ತಮ್ಮಂದಿರು ಎಲ್ಲರೂ ನಾಟಿಯಲ್ಲಿ ನಿರತರಾಗಿದ್ದಾರೆ. ಊರಿನ ಹಿರಿಯರು, ಯುವಕರು ಸಮಾಜದ ಮುಖಂಡರು ಸೇರಿ ಎರಡು ಕೋಟಿ ಮೌಲ್ಯದ ಭವ್ಯವಾದ ವೀರಭದ್ರೇಶ್ವರ ದೇವಸ್ಥಾನ ಕಟ್ಟಿದ್ದಾರೆ. ಜಾತ್ರೆ, ಕಾರ್ತಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ತೊಂಬತ್ತು ಕುಟುಂಬಗಳ ಪುಟ್ಟ ಊರಾದರು ಏಳೆಂಟು ಕಾರುಗಳಿವೆ, ಮೂವತ್ತು ಟ್ರಾಕ್ಟರ್ಗಳು, ಐವತ್ತು ಬೈಕ್ಗಳು, ಆಧುನಿಕ ಜಗತ್ತಿನ ಬದಲಾವಣೆಯ ಗಾಳಿ ನನ್ನೂರಿಗೂ ಸೋಕಿದೆ.
ಆದರೆ ಯಾರ ಮನೆಗಳಲ್ಲೂ ದನಗಳಿಲ್ಲ. ಕೊಟ್ಟಿಗೆಗಳು ಮಾಯಾವಾಗಿವೆ. ಒಕ್ಕುವ ಕಣಗಳು ಬಿಕ್ಕುತ್ತಿವೆ. ಅನಾಥವಾಗಿ ಯಾವದೋ ಪ್ರಾಗೈತಿಹಾಸಿಕ ಕುರುಹುನಂತೆ ಕಾಣುವ ರೋಣಕಲ್ಲು. ಜಾಡು ಸಿಗದೇ ಹಾಗಿರುವ ಬಂಡಿಯ ಜಾಡು. ನೋಡಲು ಕೂಡಾ ಸಿಗದ ಮರದ ಚಕ್ಕಡಿ ಬಂಡಿ.
ಹೇಳಿ…… ಹುಡುಕಿ ಕೊಡುವಿರಾ..?
ಹುಡುಕಿದರೂ ಸಿಗಬಹುದೇ….?
-ಮಂಜಯ್ಯ ದೇವರಮನಿ.