ನನಗೂ ನಿನಗೂ ಅಂಟಿದ ನಂಟಿನ: ಪ್ರವೀಣ

ಆತ ಮರೆತುಹೋದಾಗಲೆಲ್ಲ ಆಕೆ ನೆನಪು ಮಾಡಿಕೊಡುತ್ತಾಳೆ.  ಅದು ಬಾನು, ಇದು ಭುವಿ, ಅವ ಚಂದ್ರ, ಇವ ರವಿ, ಇದು ಇರುವೆ ಸಾಲು, ಅದು ಕುಡಿಯುವ ಹಾಲು. ಆ ದಿನ ರೈಲಿನಲ್ಲಿ ಅವಳು ಎಲ್ಲೋ ಪ್ರಯಾಣಿಸುವಾಗ ಆತ ಮೊದಲ ಬಾರಿಗೆ ಕಂಡಿದ್ದ.  ಕೊಳಕು ಅರಿವೆ, ಜಿಡ್ಡುಗಟ್ಟಿದ ಕೂದಲು, ಮಹಾ ದುರ್ಗಂಧ ಸೂಸುತ್ತ ಬಾಗಿಲ ಬಳಿ ಮುದುಡಿ ಕುಳಿತಿದ್ದ.  ಆತ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರಿಂದ ಅವಳು ಬೆದರಿ, ಬೇರೆಡೆ ದೃಷ್ಟಿ ತಿರುಗಿಸಿ ಬಾತರೂಮು ಹೊಕ್ಕು ಹೊರಬಂದಳು.  ವಾಪಸು ಬರುವಾಗ ಅವನನ್ನು ನೋಡಬಾರದು ಎಂದು ಮನಸ್ಸನ್ನು ಎಷ್ಟು ನಿಯಂತ್ರಿಸಲು ಪ್ರಯತ್ನಿಸಿದರೂ ಅವಳ ಕಣ್ಣುಗಳು ಅವನತ್ತ ಹೊರಳಿದ್ದವು.  ಅಷ್ಟರಲ್ಲೇ ಅದು ಹೇಗೆ ನಿದ್ದೆ ಬಂದಿರಬೇಕೆಂದು ಅಚ್ಚರಿಪಡುತ್ತ ಕೆಲವು ಕ್ಷಣ ಅವನ ಮುಖವನ್ನು ವಿವರವಾಗಿ ನೋಡಿದಳು.  

ಹಾಳಾದ ಯುರಿನ್ ಇನ್ಫೆಕ್ಷನ್ ಅಂತೆ.  ಪ್ರತಿ ಗಂಟೆ ಎರಡು ಗಂಟೆಗೊಮ್ಮೆ ತಡೆಯಲಾಗದ ಮೂತ್ರಬಾಧೆ. ಇದು ಹೀಗೆ ಕಾಡುತ್ತದೆ ಎಂತಲೇ ಸವಿತಾ ರಾತ್ರಿ ಊಟ ಕೂಡ ಸರಿಯಾಗಿ ಮಾಡಿರಲಿಲ್ಲ, ಅರ್ಧ ಗ್ಲಾಸು ಮಾತ್ರ ನೀರು ಕುಡಿದಿದ್ದಳು.  ಆದರೂ ಮತ್ತೆ ಅಪರಾತ್ರಿಯಲ್ಲಿ ಎಲ್ಲರೂ ಗಡದ್ದಾಗಿ ಮಲಗಿರುವಾಗ ನಿದ್ದೆ ಬಾರದೆ ಮೂತ್ರಬಾಧೆಯ ಜೊತೆಗೆ ಯುದ್ಧ ನಡೆಸಿದ್ದಳು.  ಇನ್ನೇನು ಹಾಸಿಗೆಯಲ್ಲೇ ಆಗಿಬಿಡುತ್ತದೆ ಎಂಬ ಭೀತಿ ಕಾಡತೊಡಗಿದಾಗ ಕೆಳಗಿಳಿದು ಚಪ್ಪಲಿ ತೊಟ್ಟು ಹೊರಟಳು.

ಅವನು ಕೂತಿರಲಿಲ್ಲ, ಡಬ್ಬು ಮಲಗಿದ್ದ.  ಇಲ್ಲ ಚಲಿಸುತ್ತಿದ್ದ.  ಅವನ ಸಲುವಾಗಿ ಜಗತ್ತು ಸತ್ತಿತ್ತು.  ಯಾವ ಅಂಜಿಕೆಯೂ ಇಲ್ಲದೇ ತನ್ನ ಕಾಮದಾಹವನ್ನು ತಡೆಯಲಾಗದೇ ಉದ್ದಕೆ ಮಲಗಿದಲ್ಲೇ ತನ್ನ ಆರಡಿ ದೇಹವನ್ನು ಹಿಂದೆ ಮುಂದೆ ಚಲಿಸುತ್ತಿದ್ದ.  ಅದನ್ನು ಕಂಡು ನಿಶ್ಚೇಷ್ಟಿತಳಾಗಿ ನಿಂತುಬಿಟ್ಟಳು. ಆ ಕ್ಷಣ ಏನು ಮಾಡಬೇಕೆಂದು ತೋಚದೇ ಚಡಪಡಿಸಿದಳು.  ಅವನನ್ನು ದಾಟಿ ಬಾತರೂಮಿಗೆ ಹೋಗಲೂ ಆಗುತ್ತಿಲ್ಲ ವಾಪಸು ಬರ್ತಿಗೆ ಹೋಗಲೂ ಆಗುತ್ತಿಲ್ಲ.  ಯಾರೋ ತನ್ನನ್ನು ಕಟ್ಟಿ ಹಾಕಿದಂತೆ ಬಾಗಿಲಿಗೆ ಒರಗಿ ನಿಂತುಕೊಂಡಳು.  ತಾನು ಹೀಗೆ ಅವನನ್ನು ವೀಕ್ಷಿಸುತ್ತಿರುವುದನ್ನು ಯಾರಾದರೂ ನೋಡಿಯಾರು ಎಂಬ ಭಯವೂ ಸೇರಿಕೊಂಡಿತು.  

ಸವಿತಾಗೆ ತನ್ನ ಇರವಿನ ಅರಿವಾದಾಗ ಅವನ ಬಗ್ಗೆ ಕರುಣೆ ಹುಟ್ಟತೊಡಗಿತ್ತು.  ಆತನ ಸ್ಥಾನದಲ್ಲಿ ತಾನು ನಿಂತು ಯೋಚಿಸತೊಡಗಿದ್ದಳು.  ಸುಮಾರು 40ರ ಆಸುಪಾಸಿರಬೇಕು ಅವನ ವಯಸ್ಸು.  ಒಳ್ಳೆಯ ಸದೃಢ ಎತ್ತರ ದೇಹ, ಅಗಲ ಬಾಹುಗಳು, ಉದ್ದ ಕಾಲು ಎತ್ತರಕ್ಕೆ ತಕ್ಕುದಾದ ದೇಹದಾಢ್ರ್ಯ.  ಅವನ ಶರೀರಸೌಷ್ಠವ ಅವನ ಹುಚ್ಚು ಸವಿತಾಳಲ್ಲಿ ಅನುಕಂಪವನ್ನು ಹುಟ್ಟುಹಾಕಿದವು.  ಹುಚ್ಚನಂತೆ ಕಾಣುತ್ತಾನಾದರೂ ನಿಸರ್ಗದತ್ತ ಹಸಿವು ನೀರಡಿಕೆ ಕಾಮ ಅವನಿಗೂ ಇರಲೇಬೇಕಲ್ಲ?  ತನ್ನ ಮಾನಸಿಕ ಆರೋಗ್ಯವನ್ನು ಕಳೆದುಕೊಂಡ ಮನುಷ್ಯನನ್ನು ಈ ಜಗತ್ತು ಎಷ್ಟು ನಿರ್ದಯವಾಗಿ ನಡೆಸಿಕೊಳ್ಳುತ್ತದೆ ಎಂದು ಭಯವಾಯಿತು ಅವಳಿಗೆ.  ಅವನಿಗೆ ಯಾರಾದರೂ ಸಂಬಂಧಿಗಳು ಇದ್ದಿರಬೇಕು.  ಇಲ್ಲದಿದ್ದರೆ ಯಾಕೆ ಹುಚ್ಚನಾಗುತ್ತಿದ್ದ?  ಈತನ ಹುಚ್ಚುಚ್ಚಾರ ನಡವಳಿಕೆಗಳಿಂದ ಬೇಸತ್ತು ಬೀದಿಗೆ ಬಿಟ್ಟಿರಬೇಕು.  ಇಲ್ಲಾ ಇವನೇ ಎಲ್ಲವನ್ನೂ ಮರೆತು ದಾರಿ ಕಂಡತ್ತ ಅಲೆದು ಹೀಗೆ ಜಗತ್ತಿನಿಂದ ತಪ್ಪಿಸಿಕೊಂಡಿರಬೇಕು.  ಹಸಿವು ನೀರಡಿಕೆಯನ್ನು ಹೇಗೋ ನೀಗಿಸಿಕೊಳ್ಳುವ ಮನುಷ್ಯ ಕಾಮಕ್ಕಾಗಿ ಮಾತ್ರ ಇನ್ನೊಬ್ಬರನ್ನು ಅವಲಂಬಿಸಿರುತ್ತಾನೆ.  ಅದೂ ಸಿಗದೇ ಹೋದಾಗ ಹೀಗೆ ತನಗೆ ತಾನೇ ಶಿಕ್ಷಿಸಿಕೊಳ್ಳುತ್ತಾನೆ.

ಯಾವುದೋ ಧ್ವನಿ ಕೇಳಿ ಎತ್ತ ಹೋಗಬೇಕೆಂದು ತಿಳಿಯದೇ ಬಿರಬಿರನೇ ಬಾತರೂಮಿಗೆ ಹೋದಳು.

ವಾಪಸು ಬರುವಾಗ ಅವನನ್ನು ನೋಡುವ ಧೈರ್ಯವಾಗದೇ ನೆಲ ನೋಡುತ್ತ ಬರ್ತು ಸೇರಿಕೊಂಡಳು. ರಾತ್ರಿಯೆಲ್ಲ ನಿದ್ದೆಯಿಲ್ಲದೇ ಒದ್ದಾಡಿದಳು.  ಆಶ್ಚರ್ಯಕ್ಕೆ ಮೂತ್ರಬಾಧೆ ಮಾತ್ರ ಮತ್ತೆ ಕಾಡಲಿಲ್ಲ.  ಯುಗಗಳಂತೆ ಕಳೆದ ರಾತ್ರಿ ಮುಗಿದು ಚುಮುಚುಮು ಬೆಳಕು ಹರಿಯಿತು.  ರೈಲಿನಿಂದಿಳಿಯುವ ತಯಾರಿ ನಡೆಸಿದಳು.  ಹೊರತೆಗೆದ ಸಾಮಾನುಗಳನ್ನೆಲ್ಲ ಬ್ಯಾಗಿನಲ್ಲಿ ತುರುಕಿ ಎದ್ದು ಕುಳಿತಳು.  ಸೀಟಿನ ಕೆಳಗಡೆ ಇಟ್ಟಿದ್ದ ದೊಡ್ಡ ಬ್ಯಾಗನ್ನು ಸರಪಳಿಯಿಂದ ಬಿಚ್ಚಿ ಹೊರತೆಗೆದಳು.  ರೈಲು ನಿಂತೊಡನೆ ತನ್ನೆರಡು ಚೀಲಗಳನ್ನು ಹಿಡಿದುಕೊಂಡು ಆತ ಕುಳಿತಿದ್ದ ಬಾಗಿಲಿನತ್ತ ಹೋಗದೇ ದೂರವಾದರೂ ಮತ್ತೊಂದು ಬಾಗಿಲಿನತ್ತ ಹೊರಟಳು.  

ಇಳಿದು ಬೇಡಬೇಡವೆಂದರೂ ಸವಿತಾಳ ಕಣ್ಣು ಆ ಇನ್ನೊಂದು ಬಾಗಿಲಿನತ್ತ ಹೊರಳಿತು.  ಆತ ಬಾಗಿಲಿಗೆ ಆತು ನಿಂತಿದ್ದ. ಯಾರನ್ನೋ ಹುಡುಕುತ್ತಿದ್ದ ಎಂಬಂತೆ ಒಳಹೊರಗೆ ಅತ್ತಿತ್ತ ಚಡಪಡಿಕೆಯಿಂದ ಕಣ್ಣು ಕತ್ತುಗಳನ್ನು ಹೊರಳಿಸುತ್ತಿದ್ದ.  ಆತ ನನ್ನನ್ನು ನೋಡಿದರೆ?  ಆತನಿಗೆ ತಾನು ನೋಡುತ್ತ ನಿಂತಿದ್ದು ಗೊತ್ತಾಗಿದ್ದರೆ?  ಆತ ಹುಡುಕುತ್ತಿರುವುದು ನನ್ನನ್ನೇ ಆಗಿದ್ದರೆ? ನೂರು ಪ್ರಶ್ನೆಗಳು ಅವಳ ತಲೆಯಲ್ಲಿ ಸಂತೆ ಎಬ್ಬಿಸಿದವು.  ರೈಲು ಚಲಿಸತೊಡಗಿತು, ವೇಗ ಪಡೆಯಿತು.  ಆತನ ಕಣ್ಣುಗಳು ಅವಳಲ್ಲಿ ನಿಂತವು.  ಬುದುಂಗನೆ ಬೆಚ್ಚಿದ ಸವಿತಾ ಮುಖ ತಿರುಗಿಸಿ ನಡೆಯುವುದರಲ್ಲಿದ್ದಳು… 

ಆತ ರೈಲಿನಿಂದ ಹಠಾತ್ತನೆ ಜಿಗಿದ.  ಈಕೆ ಹೌಹಾರಿದಳು.  ಇವಳಿಂದ ಅನತಿ ದೂರದಲ್ಲೇ ಆಕಾಶಕ್ಕೆ ಬೆನ್ನು ಮಾಡಿ ಬಿದ್ದ.  ತಲೆ ನೆಲಕ್ಕೆ ಕುಟ್ಟಿತ್ತು.  ಕ್ಷಣಾರ್ಧದಲ್ಲಿ ಅವನ ತಲೆಯ ಸುತ್ತ ರಕ್ತ ಹರಿಯತೊಡಗಿತು.  ಯಾರ್ಯಾರೋ ಏನೇನೋ ಅನ್ನುತ್ತ ಅವನಿಂದ ದೂರ ದೂರ ದಾಟಿ ಹೊರಟರು.  ಆತನ ಕೊಳಕು ದೇಹ ಅವನಿಗೆ ಸಹಾಯ ಮಾಡಲೂ ಅನರ್ಹವಾಗಿಸಿತ್ತು.  ಕೆಲವೊಬ್ಬರು ಲೊಚಗುಟ್ಟಿದರು, ಕೆಲವರು ಮರುಗಿದರು, ಅಸಹ್ಯಿಸಿಕೊಂಡರು.  ಆತ ಗಾಢ ನಿದ್ದೆಯಲ್ಲಿದ್ದಂತೆ ನಿಶ್ಚಲವಾಗಿ ಬಿದ್ದುಕೊಂಡಿದ್ದ.  ಅವಳಿಗೆ ಒಮ್ಮೆಲೆ ಸತ್ತು ಹೋದನೇನೋ ಎನಿಸತೊಡಗಿತು.  ಹೋಗಿ ನೋಡಬೇಕೆಂದು ಎಷ್ಟು ಮನಸ್ಸು ಹೊಡೆದುಕೊಳ್ಳುತ್ತಿದ್ದರೂ ಧೈರ್ಯ ಸಾಲಲಿಲ್ಲ.  ಯಾರಾದರೂ ಅವನನ್ನು ಎತ್ತಿ ಕೂರಿಸಲಿ, ಆತನಿಗೆ ಸಹಾಯ ಮಾಡಲಿ ಎಂದು ಮನಸ್ಸಿನಲ್ಲೇ ಬೇಡಿಕೊಂಡಳು.  ಆಕೆಯ ಪ್ರಾರ್ಥನೆ ಯಾರಿಗೂ ಕೇಳಿಸಲಿಲ್ಲ.  ರಕ್ತ ಹರಿಯುತ್ತಿತ್ತು.  ಆತ ನಿಶ್ಚಲವಾಗಿ ಬಿದ್ದಿದ್ದ.  

ಬ್ಯಾಗುಗಳನ್ನು ನಿಂತಲ್ಲೇ ಕುಕ್ಕಿ ಅವನ ಬಳಿ ಬಂದು ಕಷ್ಟಪಟ್ಟು ಆತನ ದೇಹ ಹೊರಳಿಸಿದಳು.  ಜಗತ್ತೆಲ್ಲ ನಿಬ್ಬೆರಗಾಗಿ ಅದನ್ನು ನೋಡತೊಡಗಿತು.  ಅದರತ್ತ ವ್ಯಾಕುಲಳಾಗಿ ದೈನ್ಯತೆಯಿಂದ ನೋಡಿದಳು.  ಯಾರಿಗೋ ಕರುಣೆ ಹುಟ್ಟಿರಬೇಕು.  ಸುಮಾರು ಅವನಂತಹವೇ ಬಟ್ಟೆಗಳನ್ನು ತೊಟ್ಟವರಿಬ್ಬರು ಅವನನ್ನು ಎಳೆದು ಕಂಬಕ್ಕೆ ಆನಿಸಿ ಕೂರಿಸಿದರು.  ಇನ್ನೂ ಉಸಿರಾಡುತ್ತಿದ್ದಾನೆಯೆ ಎಂದು ಮೂಗಿಗೆ ಕೈಯಿಟ್ಟು ನೋಡಿದರು.  ಬೇಗ ಆಸ್ಪತ್ರೆಗೆ ಸೇರಿಸಿ ಎಂದು ಈಕೆಯನ್ನು ಕೇಳಿದರು.  ಅವಳು ದಯವಿಟ್ಟು ಒಂದು ಟ್ಯಾಕ್ಸಿ ಕರೆಯಿರಿ ಎಂದು ಬೇಡಿಕೊಂಡಳು.  ಅವರೇ ಎಳೆದುಕೊಂಡು ಟ್ಯಾಕ್ಸಿಯ ಹಿಂಬದಿ ಸೀಟಿನಲ್ಲಿ ಅವನನ್ನು ತುರುಕಿದರು.  ಡ್ರೈವರು ಮುಖ ಸಿಂಡರಿಸಿದರೂ ಲಕ್ಷ್ಯಕೊಡದೇ ಮಲಗಿಸಿ ಕಾಲು ಮಡಚಿದರು.  ಸವಿತಾ ತನ್ನೆರಡು ಬ್ಯಾಗುಗಳನ್ನು ಅಲ್ಲೇ ಇಟ್ಟು ಡ್ರೈವರಿನ ಪಕ್ಕದ ಸೀಟಿನಲ್ಲಿ ಕುಳಿತಳು.  ಯಾವುದಾದರೂ ಆಸ್ಪತ್ರೆಗೆ ಒಯ್ಯಿ ಎಂದಾಗ ಆತ ಸರಕಾರಿ ಆಸ್ಪತ್ರೆಯವರು ಮಾತ್ರ ಇವನನ್ನು ಒಳಗೆ ಕರೆದುಕೊಳ್ಳಬಹುದು ಎಂದು ಹೇಳಿ ಅಲ್ಲಿಗೆ ಕರೆದೊಯ್ದ.

ಅವನಿಗೆ ಹುಷಾರಾಗುವವರೆಗೂ ದಿನಾ ಬಂದು ಊಟ ತಂದು ಕೊಟ್ಟಳು.  ಊಟದ ಡಬ್ಬಿಯನ್ನು ಅವನೆದುರು ತೆರೆದಿಟ್ಟು ಆತ ತಿಂದ ಬಳಿಕ ವಾಪಸು ಒಯ್ಯುತ್ತಿದ್ದಳು.  ಡಾಕ್ಟರು ಅವನ ಹೆಸರು ಕೇಳಿದಾಗ ಏನೋ ಒಂದು ಹೇಳಿದ್ದಳು.  ನರ್ಸುಗಳು ಏನಾಗಬೇಕು ಎಂದಾಗ ಸುಮ್ಮನೆ ಕುಳಿತಳು.  ಎರಡು ಮೂರು ಸಾರಿ ಕೇಳಿ ಮೂಕಿಯಿರಬಹುದು ಎಂದು ಮೂಗು ಮುಚ್ಚಿಕೊಂಡು ದೂರದಿಂದಲೇ ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದರು.  ಒಂದು ವಾರ ಹಿಡಿದಿರಬೇಕು.  ಆತ ಒಂದು ಮಾತನ್ನೂ ಆಡಿರಲಿಲ್ಲ.  ಅವಳ ಕಣ್ಣಲ್ಲಿ ಕಣ್ಣಿಟ್ಟು ಆದ್ರ್ರವಾಗಿ ನೋಡುತ್ತಿದ್ದ.  ಅವಳು ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಳು.  ಅವನು ಅವಳಿಗೆ ಏನಾದರೂ ಸಂಬಂಧವೆಂದುಕೊಂಡ ಆಸ್ಪತ್ರೆಯವರು ಡಿಸಚಾರ್ಜ ಮಾಡಿದ ದಿನ ಅವನಿಗೆ ಸ್ನಾನ ಮಾಡಿಸಿ ಬೇರೆ ಬಟ್ಟೆ ತೊಡಿಸಿ ಎಂದು ಸಲಹೆ ಕೊಟ್ಟರು.  

ಹೊರಗೆ ಬಂದು ಬಿರಬಿರನೆ ನಡೆದಳು.  ಅವನು ಹಿಂಬಾಲಿಸಿದ.  ಮನೆಯ ಕೀಲಿ ತೆಗೆದು ಒಳಹೊಕ್ಕರೆ ಅವನೂ ಹಿಂದಿನಿಂದ ಬಂದದ್ದು ಕಂಡು ಗಾಬರಿ ಬಿದ್ದಳು.  ನಿನ್ನ ಮನೆಗೆ ಹೋಗು ಎಂದಾಗ ಗೊತ್ತಿಲ್ಲ ಎಂಬಂತೆ ತಲೆಯಾಡಿಸಿದ.  ಬಾಗಿಲ ಬಳಿ ಮುದುಡಿಕೊಂಡು ಮೌನವಾಗಿ ಕುಳಿತುಬಿಟ್ಟ.  ಹೋಗು ಹೋಗು ಎಂದು ಬಾಯಲ್ಲಿ ಕೈಯಲ್ಲಿ ಕಣ್ಣಲ್ಲಿ ಹೇಗೆ ಹೇಳಿದರೂ ಮಿಸುಕಲಿಲ್ಲ.  ಹೇಗೆ ಇವನನ್ನು ಹೊರಗೆ ಅಟ್ಟುವುದು ಎಂದು ಯೋಚಿಸಿ ಯೋಚಿಸಿ ತಲೆ ಕೆಟ್ಟು ಕೊನೆಯ ಉಪಾಯವೆಂಬಂತೆ ನಡಿ ಹೊರಗೆ ಎಂದು ಕೆಂಗಣ್ಣು ಬೀರಿ ಕಸಬರಿಗೆ ತೋರಿಸಿದಳು.  ಆತ ಎದ್ದು ಮನೆಯಿಂದ ಸ್ವಲ್ಪ ದೂರ ಹೋಗಿ ರೋಡಿನಾಚೆ ಕುಳಿತುಕೊಂಡ.  

ಬಾಗಿಲು ಹಾಕಿಕೊಂಡು ಬಟ್ಟೆ ಬದಲಿಸಿ ಬಾಗಿಲಿಗೆ ಕೀಲಿ ಹಾಕಿ ನಡೆದಾಗ ಅಲ್ಲೇ ಆತ ಕುಳಿತಿದ್ದ.  ಸಂಜೆಯವರೆಗೂ ಹೋಗಿರುತ್ತಾನೆ ಎಂದುಕೊಂಡು ಬಿರಬಿರನೆ ನಡೆದು ಹೋದಳು.  ಅವನು ಹಿಂಬಾಲಿಸುತ್ತಿದ್ದಾನೆಯೇ ಎಂದು ಹಿಂತಿರುಗಿ ನೋಡಿದಳು.  ಇಲ್ಲವೆಂದು ಖಚಿತವಾದಾಗ ಎದೆ ಮೇಲಿನ ಭಾರ ಇಳಿದಂತೆ ಕಂಡಳು. ಸಂಜೆ ವಾಪಸು ಬಂದಾಗ ಆತ ಇನ್ನೂ ಅದೇ ಜಾಗದಲ್ಲಿ ಅದೇ ಭಂಗಿಯಲ್ಲಿ ಕುಳಿತಿದ್ದ.  ಅವಳತ್ತ ದೀನನಾಗಿ ನೋಡಿದ.  ಕರುಳು ಚುರುಕ್ಕೆಂದಿತು.  ಆದರೆ ಒಬ್ಬಂಟಿ ಹೆಣ್ಣು, ಅವನ ಹಿಂದುಮುಂದಿನ ಪರಿಚಯವಿಲ್ಲ, ಕಡೆಗಣಿಸಬೇಕು ಎಂದು ಅವನಿಂದ ದೃಷ್ಟಿ ಕಿತ್ತಳು.  ಮರುದಿನ ಬೆಳಿಗ್ಗೆಯೂ ಅಲ್ಲಿಯೇ ಮುದುಡಿ ಮಲಗಿದ್ದ.  ಉಂಡನೋ ಇಲ್ಲವೋ ಎಂಬ ಚಿಂತೆ ಕಾಡಿತು.  ಅದನ್ನು ಅಲ್ಲೇ ಕೊಂದಳು.  ನೀರುಗ್ಗಿ ರಂಗೋಲಿಯಿಕ್ಕಿ ಬಾಗಿಲು ಹಾಕಿಕೊಂಡು ತನ್ನ ದಿನನಿತ್ಯದ ಕಾರ್ಯದಲ್ಲಿ ಲೀನಳಾದಳು.  ಮನಸ್ಸು ಅವನಲ್ಲೇ ನೆಟ್ಟಿತ್ತು.  ಕೆಲಸಕ್ಕೆ ಹೋಗುವ ವೇಳೆಗೆ ಎದ್ದು ಕುಳಿತಿದ್ದ.  ಮೂರು ದಿನ ಹೀಗೆಯೇ ಸಾಗಿದವು.  ಮೂರನೇ ರಾತ್ರಿ ಗುಡುಗು ಸಿಡಿಲು ಜಡಿಮಳೆ.  ಮನಸ್ಸು ಹೊಯ್ದಾಡತೊಡಗಿತು.  ಬಾಗಿಲು ತೆರೆದು ಅವನಿಗೆ ಕೈಬೀಸಿ ಕರೆದಳು.  ಅವನು ಸಮ್ಮೋಹನಗೊಂಡಂತೆ ಒಳಗೆ ಬಂದ.  ಅವನ ದೇಹದಿಂದ ನೀರು ಸೋರಿ ಬಾಗಿಲಚಾಪೆ ತೋಯ್ದು ತೊಪ್ಪಡಿಯಾಯಿತು.  ಅವನಿಗೆ ಬಚ್ಚಲುಮನೆಯ ದಾರಿ ತೋರಿಸಿದಳು.  ಒಳಗೆ ಹೋಗಿ ನಡುಗುತ್ತ ನಿಂತ.  ಟವಲ್ಲು ತನ್ನದೊಂದು ಟೀಶರ್ಟು, ಪೈಜಾಮಾ ತೆಗೆದುಕೊಂಡು ಹೋಗಿ ಬಟ್ಟೆ ಬಿಚ್ಚು ಎಂದಳು.  ಚೆನ್ನಾಗಿ ನೀರುಗ್ಗಿ ಸಾಬೂನು ಕೊಟ್ಟು ಮೈಯೆಲ್ಲಾ ತಿಕ್ಕಿಕೊಳುವಂತೆ ಸಂಜ್ಞೆ ಮಾಡಿದಳು.  ಹಾಗೇ ಮಾಡಿದ.  ಟವಲ್ಲು ಕೊಟ್ಟು ಒರೆಸಿಕೊ ಎಂದಳು, ಮಾಡಿದ.  ಬಟ್ಟೆ ಕೊಟ್ಟು ತೊಟ್ಟುಕೊ ಎಂದಳು ಮಾಡಿದ.   ಊಟ ಕೊಟ್ಟು ಮೂಲೆಯಲ್ಲಿ ಚಾಪೆ ಹಾಸಿದಳು ಮಲಗಿದ.  ಅಡುಗೆ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಹೋಗಿ ಮಲಗಿದಳು.  

ಸ್ವಲ್ಪ ದಿನಗಳಲ್ಲಿ ನೆರೆಯವರಿಗೆ ಅವಳ ಜೊತೆಗೆ ಯಾರೋ ಗಂಡಸು ಇರುವುದು ಗೊತ್ತಾಗತೊಡಗಿತು.  ಮುಖ ಸೊಟ್ಟಗಾದವು.  ಅವಳು ಲಕ್ಷ್ಯಗೊಡಲಿಲ್ಲ.  ಆತ ಅಪಾಯಕಾರಿಯಲ್ಲ ಎಂಬುದು ಅವಳಿಗೆ ವಾರದಲ್ಲಿ ವಿದಿತವಾಯಿತು.  ಆದರೆ ಅವನನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಇರುಸುಮುರುಸಾಗಿತ್ತು.  ಹೇಗೆ ಅವನನ್ನು ಮನೆಯಿಂದ ಕಳಿಸುವುದು ತಿಳಿಯದೇ ಊಟ ಚಾಪೆ ಊಟ ಚಾಪೆಯಲ್ಲಿ ದಿನ ಕಳೆಯುತ್ತಿದ್ದಳು.  ಆತನೊಡನೆ ಮಾತಾಡಲು ಪ್ರಯತ್ನಿಸಿದಳು.  ಅವನು ಒಂದೋ ಎರಡೋ ಶಬ್ದಗಳಲ್ಲಿ ಮಾತ್ರ ಉತ್ತರಿಸುತ್ತಿದ್ದ.  ಅದರ ಅರ್ಥ ಮಾತ್ರ ಅವಳಿಗೆ ಗೊತ್ತಾಗುತ್ತಿದ್ದಿಲ್ಲ.  ತಾಟಿನ ಸುತ್ತೆಲ್ಲ ಚೆಲ್ಲಾಡಿ ಬೆರಳುಗಳಲ್ಲಿ ಅನ್ನವನ್ನು ಹಿಡಿಯಲು ಒದ್ದಾಡಿ ಹೇಗೇಗೋ ಊಟ ಮಾಡುತ್ತಿದ್ದ.  ಅವಳು ಸ್ನಾನಕ್ಕೆ ಕರೆಯುವವರೆಗೆ ಹಾಗೇ ಮೂಲೆಯಲ್ಲೇ ಕೂತಿರುತ್ತಿದ್ದ.  ಅವಳೇ ಬ್ಲೇಡು ತಂದು ಅವನಿಗೆ ದಾಡಿ ಮಾಡಿದಳು.  ತನ್ನ ಪಾಡಿಗೆ ತಾನಿದ್ದು ಯಾರಿಗೂ ಏನೂ ತೊಂದರೆ ಕೊಡದೇ ಇದ್ದರೂ ಆತನ ಅನ್ಯಮನಸ್ಕತೆ ಕೂತಲ್ಲೇ ಕೂರುವುದು ಮೌನ ನೆರೆಹೊರೆಯವರಿಗೆ ಆತ ಹುಚ್ಚನಿರಬೇಕು ಎಂದು ಅಂದಾಜಿಸುವುದಕ್ಕೆ ಸಹಾಯ ಮಾಡಿದವು.  ಸವಿತಾಳ ಆಫೀಸಿನಲ್ಲಿಯೂ ಸುದ್ದಿ ಹರಡಿತು.  ಪರೋಕ್ಷ ಪ್ರಶ್ನೆಗಳು ದಾಳಿ ಮಾಡತೊಡಗಿದವು.  ಹೇಗೆ ತಪ್ಪಿಸಿಕೊಳ್ಳುವುದು? ಸರಕಾರಿ ನೌಕರಿಯಾದುದರಿಂದ ಯಾರೂ ಏನೂ ಮಾಡುವಂತಿರಲಿಲ್ಲ ಎಂದು ಧೈರ್ಯ ತಂದುಕೊಂಡಳು.  ಏಕಾಏಕಿ ಅವಳಿಗೆ ದೂರದ ಊರಿಗೆ ವರ್ಗವಾಯಿತು.  ಒಂದು ವಾರದಲ್ಲಿ ರಿಲೀವ್ ಮಾಡುವೆವು ಎಂದು ಮೊದಲೇ ಹೇಳಿಲಾಯಿತು.

ಆತನಿಗೆ ಏನೂ ಗೊತ್ತಾಗುತ್ತಿದ್ದಿಲ್ಲ.  ಅಂದು ರೈಲಿನಲ್ಲಿ ಮಾಡಿದಂತೆ ಮನೆಯಲ್ಲಿ ಆತ ಎಂದೂ ಮಾಡಿದ್ದನ್ನು ಆಕೆ ಕಂಡಿರಲಿಲ್ಲ.  ಅವನಿಗಾಗಿ ಎರಡು ಜೋಡಿ ಅಂಗಿ ಪ್ಯಾಂಟುಗಳನ್ನು ತಂದಿದ್ದಳು.  ಅವು ಅವನಿಗೆ ದೊಗಳೆಯಾಗಿ ಜೋತು ಬೀಳುತ್ತಿದ್ದವು.  ನಡೆಯುವಾಗ ಪ್ಯಾಂಟನ್ನು ಎತ್ತಿ ಹಿಡಿದು ನಡೆಯುತ್ತಿದ್ದ.  ಮನೆ ಬಿಟ್ಟು ಕದಲುತ್ತಿದ್ದಿಲ್ಲ.  ಅವನನ್ನು ಇಲ್ಲೇ ಎಲ್ಲೋ ಬಿಟ್ಟು ಹೋಗುವುದು ಸುಲಭವಾಯಿತು ಎಂದೆನ್ನಿಸಿದರೂ ಮನಸ್ಸು ಕೇಳದೇ ಅವನನ್ನು ವರ್ಗವಾದಲ್ಲಿಗೆ ಕರೆದುಕೊಂಡು ಹೋದಳು.

ಅಲ್ಲಿ ಹೋದ ಮೇಲೆ ಅವನನ್ನು ಮನುಷ್ಯನನ್ನಾಗಿ ಮಾಡುವುದೆಂದು ಸಂಕಲ್ಪ ತೊಟ್ಟಳು.  ಅವನಿಗೆ ದಿನನಿತ್ಯದ ಕರ್ಮಗಳನ್ನು ಸ್ವತ: ಮಾಡಿಕೊಳ್ಳುವುದಕ್ಕೆ ಕಲಿಸಲು ಪ್ರಾರಂಭಿಸಿದಳು.  ಆತ ಸ್ವಲ್ಪ ಸ್ವಲ್ಪವೇ ಕಲಿಯತೊಡಗಿದ.  ಶಬ್ದಗಳನ್ನು ಜೋಡಿಸಿ ವಾಕ್ಯ ಮಾಡುವುದು ಕಲಿತ.  ಅನ್ನಕ್ಕೆ ಸಾರು ಕಲಿಸುವುದನ್ನು ಕಲಿತ.  ಐದು ಬೆರಳುಗಳ ಸಂದಿನಿಂದ ಜಾರಿಹೋಗದಂತೆ ಎತ್ತಿ ತಿನ್ನುವುದ ಕಲಿತ, ತಾನೇ ಸ್ನಾನ ಮಾಡುವುದನ್ನು ಕಲಿತ, ದಾಡಿ ಮಾಡಿಕೊಳ್ಳುವುದನ್ನು ಕಲಿತ.  ಸವಿತಳೊಂದಿಗೆ ಅಂಗಡಿಗಳಿಗೆ ಹೋಗಿ ಮನೆ ಬಳಕೆಯ ಸಾಮಾನುಗಳನ್ನು ತರಲು ಕಲಿತ.  ಬರ್ತಾ ಬರ್ತಾ ಮನುಷ್ಯನಾಗತೊಡಗಿದ್ದ ಅವನೊಡನೆ ಆಕೆ ಮಾತುಗಳನ್ನು ಆಡಲು ಪ್ರಾರಂಭಿಸಿದಳು.  ಆತ ಕೆಲವು ಸಾರಿ ಉತ್ತರಗಳನ್ನು ಕೊಡಲಾರಂಭಿಸಿದ.  ಅನೇಕ ನಮೂನೆಯ ಕತೆಗಳನ್ನು ಹೇಳತೊಡಗಿದಳು.  ಆತ ಮನಸ್ಸಿಟ್ಟು ಕೇಳತೊಡಗಿದ.  ಕತೆಗಳಲ್ಲಿ ಜೀವನವನ್ನು ಕಲಿಸುವುದಕ್ಕೆ ಪ್ರಾರಂಭಿಸಿದಳು.  ಅವನು ಸ್ಪಂದಿಸತೊಡಗಿದ.  

ಎರಡು ವರ್ಷ ಕಳೆದಿದ್ದವು.  ಕಚೇರಿಯಿಂದ ತುಂಬ ದೂರ ಮನೆ ಮಾಡಿದ್ದ ಅವಳು ಅಲ್ಲಿ ಯಾರೊಡನೆಯೂ ಕೆಲಸದ ವಿಷಯ ಬಿಟ್ಟು ಒಂದು ಮಾತೂ ಆಡುತ್ತಿದ್ದಿಲ್ಲ.  ಕೆಣಕುವವರು ಬೇಜಾರಾಗಿ ಸೊಕ್ಕೆಂಬ ಹೆಸರು ಕೊಟ್ಟಿದ್ದರು.  ಅವಳಿಗೆ ಏನೂ ಫರಕಾಗುತ್ತಿದ್ದಿಲ್ಲ.  ಅವಳನ್ನು ಹಿಂಬಾಲಿಸಿ ಮನೆ ಬಂದು ಅಲ್ಲಿ ಯಾವನೋ ತಲೆತಿರುಕ ಇರುವುದನ್ನು ಕಂಡುಕೊಂಡವರೂ ಅವಳ ಮೌನದ ಮುಂದೆ ಸೋತರು.  ತನ್ನ ವೈಯಕ್ತಿಕ ಜೀವನದ ಸುತ್ತ ಏಳು ಸುತ್ತಿನ ಕೋಟೆ ಕಟ್ಟಿಕೊಂಡು ಅದರೊಳಗಡೆ ತಮ್ಮಿಬ್ಬರನ್ನು ಬಿಟ್ಟು ಬೇರೆಯವರು ಪ್ರವೇಶಿಸದಂತೆ ನೋಡಿಕೊಂಡಳು.  

ಆತನನ್ನು ರವಿ ಎಂದು ಕರೆಯಲು ಪ್ರಾರಂಭಿಸಿದಳು.  ಹೇಳಿಕೊಟ್ಟಿದ್ದೆಲ್ಲವನ್ನೂ ಚೊಕ್ಕವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ರವಿಗೆ.  ಪದೇ ಪದೇ ನೆನಪು ಮಾಡಿಕೊಡಬೇಕಾಗುತ್ತಿತ್ತು.  ಅನೇಕ ಸಾರಿ ಸಿಕ್ಕಾಪಟ್ಟೆ ಸಿಟ್ಟು ಉಕ್ಕುತ್ತಿತ್ತು.  ಹಿಡಿದು ಗುದ್ದುತ್ತಿದ್ದಳು.  ಆತ ಪುಟ್ಟ ಮಗುವಿನಂತೆ ಪೆಚ್ಚು ಮೋರೆ ಹಾಕಿ ಅಳುತ್ತ ಕುಳಿತುಕೊಳ್ಳುತ್ತಿದ್ದ.  ಅವಳಿಗೇ ಕೆಡುಕೆನಿಸಿ ರಮಿಸಿ ಅವನ ದು:ಖವನ್ನು ತೊಡೆಯುತ್ತಿದ್ದಳು.  ಐದು ನಿಮಿಷಗಳಲ್ಲಿ ಅವನೂ ಮರೆತು ಮತ್ತೆ ಮೊದಲಿನಂತಾಗುತ್ತಿದ್ದ.  ಅವಳ ಖಾಲಿ ಜೀವನದ ಮೂಲೆಮೂಲೆಯನ್ನು ರವಿ ತುಂಬಿಕೊಂಡಿದ್ದ.  ಅವಳ ಭೂತ ವರ್ತಮಾನ ಭವಿಷ್ಯಗಳನ್ನೆಲ್ಲ ಅಳಿಸಿ ಹೊಸ ಹಾಡು ಬರೆದಿದ್ದ.  ಅವಳು ಆ ಹಾಡ ಗುನುಗುತ್ತ ಸೂರ್ಯ ಹುಟ್ಟುವ ಸಾಯುವ ಪವಾಡಗಳಲ್ಲಿ ಮೈಮರೆಯುತ್ತಿದ್ದಳು.

* * * * *

ಒಂದು ರವಿವಾರ ಮುಂಜಾನೆ ಹೊರಗೆಲ್ಲ ಮಂಜಿತ್ತು.  ಒಳಗೆ ಚಳಿಯಾಗುತ್ತಿತ್ತು.  ರವಿ ಮೂಲೆಯೊಂದರಲ್ಲಿ ಬೆಳ್ಳುಳ್ಳಿಯ ಸಿಪ್ಪೆಗಳನ್ನು ಸುಲಿಯುತ್ತ ಕೂತಿದ್ದ.  ಅವನಿಗೆ ಇಷ್ಟದ ಬಿರಿಯಾನಿ ಮಾಡುವುದಕ್ಕೆ ತಯಾರಿ ಮಾಡುವುದರಲ್ಲಿ ಸವಿತಾ ವ್ಯಸ್ತವಾಗಿದ್ದಾಗ ಯಾರೋ ಬಂದು ಬಾಗಿಲು ಬಡಿದರು.  ಯಾರಿರಬಹುದು ಎಂದು ಯೋಚಿಸುತ್ತಲೇ ಬಾಗಿಲು ತೆರೆಯಲು ಹೊರಬಂದರೆ ಆಗಲೇ ಆತ ಬಾಗಿಲು ತೆರೆದು ಹೊರಗೆ ಯಾರನ್ನೋ ನೋಡುತ್ತ ನಿಂತಂತೆ ನಿಂತಿದ್ದ.  “ಯಾರೋ?” ಎಂದಳು.  ಅವನು ಅವಳತ್ತ ಆಶ್ಚರ್ಯದ ಕಣ್ಣುಗಳಿಂದ ನೋಡಿದ.  ಅವನು ಹೇಳುವುದು ಅಷ್ಟರಲ್ಲೇ ಇದೆ ಎಂದು ತಾನೇ ಬಾಗಿಲಿಗೆ ಬಂದು ನೋಡಿದಳು.  

ಅವಳ ಗಂಡ.  ಹದಿಮೂರು ವರ್ಷಗಳ ಹಿಂದೆ ತನ್ನನ್ನು ತೊರೆದು ಹೋದವ ಬಂದು ನಿಂತಿದ್ದ.  ವಿಚಿತ್ರವಾದ ವೇದನೆಯಾಯಿತು.  ಮಾತುಗಳು ಸತ್ತುಹೋದವು.  ಮಂಜುಗಡ್ಡೆಯಲ್ಲಿ ಹುಗಿದಂತೆ ತಲೆ ಜಮ್ಮುಗಟ್ಟಿತು. ಅವಕ್ಕಾಗಿ ಸುಮ್ಮನೆ ನೋಡುತ್ತ ನಿಂತಳು

ಹದಿಮೂರು ವರ್ಷಗಳ ನಂತರ ತನ್ನನ್ನು ಸವಿತಾ ಎಂದು ಕರೆಯುವ ಗಂಡಸು ಅವಳ ಎದುರಿಗೆ ನಿಂತಿದ್ದ. ಅವನ ಜೊತೆಗೆ ನಾಲ್ಕು ವರ್ಷಗಳ ಸಂಸಾರ ಸಾಗಿಸಿದ್ದಳು.  ಐದೂವರೆ ಫೂಟಿನ ಸಾಧಾರಣ ಎತ್ತರದ, ತುಸುಗಪ್ಪು ಬಣ್ಣದ ಉದ್ದ ಮೂಗಿನ ತಲೆಯ ಮೇಲಿನ ಅರ್ಧ ಕೂದಲುಗಳನ್ನು ತನ್ನ ಇಪ್ಪತ್ತೆಂಟನೆಯ ವಯಸ್ಸಿನಲ್ಲೇ ಕಳೆದುಕೊಂಡ ಡೊಳ್ಳು ಹೊಟ್ಟೆಯ ಆಕೆಯ ಗಂಡ.

ಸವಿತಳ ತಂದೆ ಅವಳು ಕಾಲೇಜು ಕಲಿಯುವಾಗಲೇ ತೀರಿಕೊಂಡಿದ್ದ.  ಅವನು ಸತ್ತ ಆರು ತಿಂಗಳಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಆಕೆಗೆ ಎಸ್ ಡಿ ಎ ನೌಕರಿ ಸಿಕ್ಕು ಬೆಳಗಾವಿಯ ಕಚೇರಿಗೆ ನೇಮಿಸಿದ್ದರು.  ದೂರದ ಚಿಕ್ಕಮಗಳೂರಿನÀ ಹರೀಶ ಆಗ ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.  ಎಲ್ಲಿಂದಲೋ ಗುರುತು ತೆಗೆದು ತನ್ನ ಜಾತಿಯವಳು ಎಂದು ಗೊತ್ತಾಗಿ ಸವಿತಳನ್ನು ಕಂಡು ತನ್ನ ತಂದೆ ತಾಯಿಗೆ ತಿಳಿಸಿ ಅವರು ಬಂದು ನೋಡಿ ಒಂದು ತಿಂಗಳಿನಲ್ಲೇ ಮದುವೆ ಮುಗಿದು ಮಾಡಿಕೊಂಡಿದ್ದ.  

ಸವಿತಾ ನೋಡಲು ಸಾಧಾರಣವಾಗಿಯೇ ಇದ್ದಳು.  ಎಷ್ಟು ತಲೆ ಬಾಚಿದರೂ ಮುಂದಿನ ಗುಂಗುರು ಕೂದಲುಗಳು ಎದ್ದು ನಿಂತು ಬೆಳಕಿಗೆ ಕೆಂಪಗೆ ಕಾಣುತ್ತಿದ್ದವು.  ದುಂಡನೆಯ ಮೂಗು ಮುಖದ ತುಂಬಾ ಕಾಣುತ್ತಿತ್ತು.  ಗೋಧಿ ಬಣ್ಣ ದೇಹ ಎಲ್ಲ ಕಡೆಗೂ ಗುಂಡಗುಂಡಗೆ ಇದ್ದದ್ದು ಕುಳ್ಳಗಿರುವುದರಿಂದ ಸ್ವಲ್ಪ ದಪ್ಪ ಕಾಣುತ್ತಿದ್ದಳು.  ಉದ್ದ ತೋಳಿನ ಬ್ಲೌಜು, ನಡುವೂ ಕಾಣದಂತೆ ಸೀರೆ ಉಡುತ್ತಿದ್ದುದರಿಂದ ಇನ್ನೂ ದಪ್ಪ ಕಾಣುತ್ತಿದ್ದಳು.  ನಗದಿದ್ದರೂ ಅವಳ ಮುಖ ಕಳಕಳೆಯಾಗಿ ಕಂಡು ನಗುಮುಖ ಇದ್ದಂತೆ ಅನಿಸುತ್ತಿತ್ತು.  ಮೊದಲ ಎರಡು ವರ್ಷಗಳು ಹೇಗೋ ಕಳೆದಿದ್ದವು.  ಹರೀಶ ನಾಚಿಕೆ ಸ್ವಭಾವದ ಹಿಂಜರಿಕೆಯ ಮನುಷ್ಯ.  ಯಾರಿಗಾದರೂ ನೋವಾದೀತು ಎಂದು ಅಳುಕುತ್ತಲೇ ಮೆತ್ತಗೆ ಮಾತನಾಡುತ್ತಿದ್ದ. ಹೆಂಡತಿಗೂ ಎಂದೂ ಎತ್ತರದ ಧ್ವನಿಯಿಂದ ಮಾತಾಡಿಸಿದ್ದಿಲ್ಲ.  ಕೆಲಸದಿಂದ ಬರುವುದು ತಡವಾದರೆ ಅವಳು ಕೇಳದೇ ಅರ್ಧ ಗಂಟೆ ಸಮಜಾಯಿಷಿ ಕೊಡುತ್ತಿದ್ದ.  ತನ್ನ ಬಟ್ಟೆಬರೆಗಳನ್ನು ಒಪ್ಪವಾಗಿ ಇಡುತ್ತಿದ್ದ.  ಅವಳೂ ಕೆಲಸ ಮಾಡುತ್ತಾಳೆ ಎಂಬುದರಿಂದಲೋ ಅಥವಾ ಅವನಿಗೆ ಅಭ್ಯಾಸವಿತ್ತೋ ಎಂದೋ ಮನೆಯಲ್ಲಿ ಕಸ ಹೊಡೆಯುವುದು, ಒಗೆದ ಅರಿವೆಗಳನ್ನು ಒಣಗಲು ಹಾಕುವುದು, ಒಣಗಿದ ಮೇಲೆ ಮಡಚಿಡುವುದು ಮುಂತಾದ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ.  ಅವರ ನಡುವೆ ಮಾತುಗಳು ಅಷ್ಟಕಷ್ಟೇ.  ಸವಿತಳಿಗೂ ಮಾತುಗಳ ಚಟವಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಇಬ್ಬರೂ ಬಿಜಿಯಾಗಿರುತ್ತಿದ್ದರು.  ಎರಡು ವರ್ಷಗಳಾದರೂ ಮಕ್ಕಳಾಗಲಿಲ್ಲ.

ಒಂದು ದಿನ ಹರೀಶನಿಗೆ ತನ್ನ ಕೈಗಳ ಮೇಲೆ ಬಿಳಿ ಕಲೆಗಳು ಕಾಣಿಸಿ ಭಯಂಕರ ಭಯಕ್ಕೆ ಬಿದ್ದ.  ಅವು ದಿನೇ ದಿನೇ ಪಸರಿಸತೊಡಗಿದವು.  ಕೈಯಲ್ಲಿ ಕಂಡದ್ದು ದೇಹದ ಅನೇಕ ಭಾಗಗಳಲ್ಲಿ ಕಾಣಿಸತೊಡಗಿದವು.  ಗಾಬರಿಯಾಗಿ ತಿಳಿದ ಡಾಕ್ಟರುಗಳನ್ನೆಲ್ಲ ಕಂಡು ಹತ್ತಾರು ನಮೂನೆಯ ಔಷಧಿಗಳನ್ನು ತೆಗೆದುಕೊಳ್ಳಲಾರಂಭಿಸಿದ.  ಅವನಿಗೆ ತನ್ನ ಬಗ್ಗೆಯೇ ಹೇಸಿಗೆಯಾಗತೊಡಗಿತು.  ತನಗೆ ತೊನ್ನು ರೋಗ ಬಂದಿದೆಯೆಂದು ನಂಬಲು ಕಷ್ಟವಾಗತೊಡಗಿತು.  ದಿನಕ್ಕೆ ಹತ್ತಾರು ಬಾರಿ ತನ್ನ ಬ್ಯಾಗಿನಲ್ಲಿಟ್ಟುಕೊಳ್ಳುತ್ತಿದ್ದ ಕ್ರೀಮಿನಿಂದ ಬಿಳಿ ಕಲೆ ಕಂಡಲ್ಲೆಲ್ಲ ಬಳಿದುಕೊಳ್ಳತೊಡಗಿದ.  ಅವುಗಳು ಕಾಣದಂತೆ ಮಾಡುವ ಕ್ರೀಮುಗಳನ್ನು ಬಳಸತೊಡಗಿದ.  ತೊನ್ನು ಹಟ ಹಿಡಿದಂತೆ ವೇಗವಾಗಿ ಪಸರಿಸತೊಡಗಿತು.  ತುಟಿ, ಕೊರಳು, ಕಾಲು ಎಲ್ಲಿ ಬೇಕೆಂದರಲ್ಲಿ ಅವನ ಕಪ್ಪು ಬಣ್ಣ ಹೋಗಿ ಹೊಲಸು ಬಿಳಿ ಬಣ್ಣ ಮೂಡತೊಡಗಿತು.  ಅದರಿಂದ ಹರೀಶ ಖಿನ್ನನಾಗತೊಡಗಿದ.  ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳತೊಡಗಿದ.  ಮನೆಕೆಲಸ ಬಿಟ್ಟುಬಿಟ್ಟ, ತನ್ನ ಸಾಮಾನುಗÀಳನ್ನು ಇಟ್ಟಲ್ಲಿಯೇ ಮರೆಯತೊಡಗಿದ.  ಸಿಗದಾಗ ಹುಚ್ಚರಂತೆ ಮನೆಯೆಲ್ಲ ಹುಡುಕತೊಡಗಿದ.  ಕೆಲಸಕ್ಕೆ ಹೋಗುವುದನ್ನು ತಪ್ಪಿಸತೊಡಗಿದ.  ಯಾವುದೋ ವಿಚಾರದಲ್ಲಿ ಕಳೆದುಹೋದಂತೆ ಮನೆಯ ಮೂಲೆಯಲ್ಲಿ ಕೂರತೊಡಗಿದ.  ಸವಿತಾಳ ಜೊತೆಗೂ ಮಾತುಗಳನ್ನು ನಿಲ್ಲಿಸಿದ.

ಸವಿತಾ ಏನು ಹೇಳಲು ಹೋದರೂ ಹರೀಶ ಲಕ್ಷ್ಯಗೊಡಲಿಲ್ಲ.  ಅವಳು ಪರಿಪರಿಯಾಗಿ ಬೇಡಿಕೊಂಡರೂ ತನ್ನ ಮಾನಸಿಕ ವ್ಯಾಧಿಯಿಂದ ಹೊರಬರಲಿಲ್ಲ.  ತೊನ್ನು ರೋಗಕ್ಕಿಂತ ಅವನ ಖಿನ್ನತೆಯೇ ಅವಳನ್ನು ತಿನ್ನತೊಡಗಿತು.  ಅವಳು ಅವನೊಂದಿಗೆ ಹೆಚ್ಚು ಮಾತನಾಡತೊಡಗಿದಳು.  ಅವಳು ಮಾತಾಡಿದಷ್ಟೂ ಆತನ ಮೌನದ ಮೊರೆಹೊಕ್ಕ.  ಮುಂದೆ ತಂದಿಟ್ಟ ಊಟವನ್ನೂ ಅಲಕ್ಷಿಸಿದ.  ದಿಕ್ಕು ತೋಚದಂತಾಗಿ ಸವಿತಾ ಅವನ ತಂದೆತಾಯಿಗೆ ಫೋನು ಮಾಡಿ ತಿಳಿಸಿದಳು. ಅವರು ಬಂದು ಅವನಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಅವನ ತಲೆಗೆ ಹೋಗಲಿಲ್ಲ.  ಮನೆ ಬಿಟ್ಟು ಹೊರಹೋಗುವುದನ್ನು ನಿಲ್ಲಿಸಿದ.  ಸ್ನಾನ ಮಾಡುವುದನ್ನು ನಿಲ್ಲಿಸಿದ.  ಅವನ ತೊನ್ನು ರೋಗ ಬೆಳೆದಂತೆ ಆತ ಮಾನಸಿಕವಾಗಿ ಕುಗ್ಗತೊಡಗಿದ.  ಯಾರಿಂದಲೂ ಅವನ ಮನಸ್ಸನ್ನು ಬದಲಿಸುವುದು ಸಾಧ್ಯವಾಗಲಿಲ್ಲ.

ತನಗೆ ತಾನೇ ಮನೆಯಲ್ಲಿ ಸಿಕ್ಕ ಸಾಮಾನುಗಳಿಂದ ಏನೇನೋ ವಿಚಿತ್ರವಾದ ಆಕಾರಗಳನ್ನು ಮಾಡತೊಡಗಿದ.  ಕತ್ತರಿ, ಚಾಕು, ಕಟ್ಟರ್, ಸೂಜಿ ಮುಂತಾದ ಎಂತೆಂಥದೋ ಉಪಕರಣಗಳನ್ನು ತಂದು ಇಟ್ಟುಕೊಂಡ.  ದಿನವಿಡೀ ಕುಳಿತು ಪೆನ್ಸಿಲಿನ ಲೆಡ್ಡನ್ನು ಸೂಜಿಯಂತದೊಂದು ಉಪಕರಣದಿಂದ ಕೊರೆದು ತೆಗೆದು ಅದರ ಸುತ್ತ ಅನೇಕ ವಿನ್ಯಾಸಗಳನ್ನು ಬಿಡಿಸಿದ.  ಅದಕ್ಕೆ ಹೊರಗಿನಿಂದ ತೂತುಗಳನ್ನು ಕೊರೆದು ಅದನ್ನು ಕೊಳಲಿನಂತೆ ಆದರೆ ಸಣ್ಣ ದನಿಯನ್ನು ಹೊರಡಿಸುವ ವಾದ್ಯವಾಗಿಸಿದ.  ಒಡೆದ ಕನ್ನಡಿಯ ಚೂರುಗಳನ್ನು ಚಂದದ ವಿನ್ಯಾಸಗಳಲ್ಲಿ ಕೊರೆದು ಮೂರು ಚೂರುಗಳನ್ನು ಒಂದರ ಬದಿಗೊಂದು ಅಂಟಿಸಿ, ಕೆಳಗೊಂದು ಚೂರನ್ನು ಆಧಾರಕ್ಕೆ ಅಂಟಿಸಿ ಅವುಗಳ ಮೇಲೆ ಬಿದ್ದ ಬಿಂಬ ಛಿದ್ರಗೊಳ್ಳುವಂತೆ ಮಾಡಿದ.  ಪ್ಲಾಸ್ಟಿಕ್ಕಿನ ಕಾಗದಗಳನ್ನು ಒಂದು ರಟ್ಟಿನ ಮೇಲೆ ವಿಚಿತ್ರ ರೀತಿಯಲ್ಲಿ ಅಂಟಿಸಿ ಆಧುನಿಕ ಪೇಂಟಿಂಗನಂತೆ ಕಾಣುವಂತೆ ಮಾಡಿದ.  ಬಾಟಲಿಗಳ ಚೂರುಗಳನ್ನು ಒಡೆದು ಪುಡಿ ಮಾಡಿ ಅದನ್ನು ದೊಡ್ಡ ಕ್ಯಾನ್ವಾಸಿನ ಮೇಲೆ ಚಿತ್ರದಂತೆ ಅಂಟಿಸಿ ಹೊಸ ಕಲೆಯನ್ನು ತಯಾರಿಸಿದ.  ಕಬ್ಬಿನ ತುಂಡುಗಳು, ನಟ್ಟು ಬೋಲ್ಟುಗಳನ್ನು ಜೋಡಿಸಿ, ಮೇಣದ ಬತ್ತಿಗಳಲ್ಲಿ ವಿವಿಧ ಆಕಾರಗಳನ್ನು, ಸಾಬೂನುಗಳ ಮೇಲೆ ಕಲೆಯನ್ನು ಏನೇನೋ ವಿಚಿತ್ರ ವಿಚಿತ್ರ ರೂಪಗಳನ್ನು ಮಾಡಿ ಇರಿಸಲಾರಂಭಿಸಿದ.  ಸವಿತಾ ಆತನ ಹೊಸ ಹುಚ್ಚನ್ನು ಕಂಡು ಹೇಗಾದರೂ ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಿ ಎಂದು ಸಮಾಧಾನಗೊಂಡಳು.  

ಕೆಲಸಕ್ಕೆ ಹೋಗುವುದನ್ನು ಪೂರ್ತಿ ಬಿಟ್ಟುಬಿಟ್ಟಿದ್ದ.  ಮಾತುಗಳು ಬಹುತೇಕ ನಿಂತುಬಿಟ್ಟಿದ್ದವು.  ಯಾವಾಗಲೋ ಮಲಗುವುದು, ಯಾವಾಗಲೋ ಏಳುವುದು, ತಿಂದರೆ ತಿಂದ ಬಿಟ್ಟರೆ ಬಿಟ್ಟ.  ಅತ್ತ ಹುಚ್ಚನೂ ಅಲ್ಲ ಇತ್ತ ಸಾಮಾನ್ಯನಂತೆಯೂ ಇರದೆ ಎಡಬಿಡಂಗಿಯಂತೆ ಕಾಲ ಕಳೆಯಹತ್ತಿದ.  ಅವನಿಗೆ ತಾನು ತಯಾರಿಸಿದ ಆ ಎಲ್ಲ ಕಲೆಗಳ ಮೇಲೆ ವಿಚಿತ್ರ ಪ್ರೀತಿ ಹುಟ್ಟಿತು.  ಅವುಗಳ ಲೋಕದಲ್ಲಿ ತನ್ನನ್ನೇ ತಾನು ಕಳೆದುಕೊಂಡ.  ಒಂದು ದಿನ ಸೂಟಕೇಸಿನಲ್ಲಿ ಅವನ್ನೆಲ್ಲ ಮುತುವರ್ಜಿಯಿಂದ ಜೋಡಿಸಿ ಇಟ್ಟುಕೊಂಡ.  ಸ್ನಾನ ಮಾಡಿ ಮೊದಲ ದಿನ ಇಸ್ತ್ರಿ ಮಾಡಿದ ಬಟ್ಟೆಗಳನ್ನು ತೊಟ್ಟುಕೊಂಡು ಹೆಂಡತಿಗೆ ತಾನು ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ.  ಅವಳು ಗಾಬರಿಯಾದಳು.  ಯಾಕೆ ಏನು ಎಂದು ವಿಚಾರಿಸತೊಡಗಿದಳು.  ಸೂಟಕೇಸು ತೋರಿಸಿ ಇವುಗಳನ್ನು ಪ್ರದರ್ಶನಕ್ಕೆ ಇಡುವೆನು ಎಂದ.  ಎಲ್ಲಿ? ಅಲ್ಲಿ ಯಾರಿದ್ದಾರೆ? ಎಂಬ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಗೋಜಿಗೆ ಹೋಗದೇ ಮೂರು ದಿನದ ನಂತರ ಬರುವೆ ಎರಡು ಸಾವಿರ ರೂಪಾಯಿ ಕೊಡು ಎಂದು ಕೇಳಿದ.  ಅವಳಿಗೆ ಭಯವಾಗತೊಡಗಿತ್ತು.  ಆದರೆ ಆತ ಹಟ ಹಿಡಿದಿದ್ದ.  ಸುಮ್ಮನೆ ಕೊಡು ಎಂದು ದುಂಬಾಲು ಬಿದ್ದಿದ್ದ.  ಏನೂ ತಿಳಿಯದೇ ಹಣ ಕೊಟ್ಟಳು.  ಆಗ ತೊನ್ನು ಅವನ ಬಹುತೇಕ ದೇಹವನ್ನು ವ್ಯಾಪಿಸಿತ್ತು.  ತಲೆಯ, ಹುಬ್ಬಿನ, ಮೀಸೆಯ, ರೆಪ್ಪೆಯ ಕೂದಲುಗಳೆಲ್ಲ ಬೆಳ್ಳಗಾಗಿದ್ದವು.  ಮುಖದಲ್ಲಿ ಒಂದು ಕಡೆಯ ಗಲ್ಲದ ಮೇಲೆ ಮಾತ್ರ ಮೊದಲಿನ ಬಣ್ಣ ಉಳಿದಿತ್ತು, ಅದರ ಸುತ್ತಲೆಲ್ಲ ಕೆಂಪಗಾಗಿ ಅದೂ ಬಿಳಿಯಾಗುವ ಮುನ್ಸೂಚನೆ ಕೊಟ್ಟಿತ್ತು.  ಎಲ್ಲ ಕಡೆಗೂ ಒಂದೇ ಬಣ್ಣವಾಗಿದ್ದರಿಂದ ಅವನ ಮುಖದಲ್ಲಿನ ಉಬ್ಬುಗಳು ಮೊದಲಿನಂತೆ ಸ್ಪಷ್ಟವಾಗಿ ಕಾಣುತ್ತಿದ್ದಿಲ್ಲ.  ಪಟದಲ್ಲಿನ ಮುಖದಂತೆ ಚಪ್ಪಟೆ ಕಾಣುತ್ತಿತ್ತು.  ಅವನು ಹೊರಟು ಹೋದ.

ಮೂರು ದಿನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಂತೆ ಅವನಿಗಾಗಿ ಕಾದಳು.  ಕಚೇರಿಯಲ್ಲಿಯೂ ಅವಳಿಗೆ ಅವನದೇ ಚಿಂತೆಯಾಗತೊಡಗಿತು.  ಕೆಲಸಗಳಲ್ಲಿ ತಪ್ಪುಗಳಾಗಿ ಮೇಲಧಿಕಾರಿಗಳಿಂದ ಬೈಗುಳಗಳು ಹೆಚ್ಚಾದವು.  ನಾಲ್ಕನೆಯ ದಿನ ಬೆಳಿಗ್ಗೆ ಬಂದ.  ಬಂದವನ ಕಣ್ಣಲ್ಲಿ ಹೊಸ ಹೊಳಪಿತ್ತು.  ಮುಖ ಗೆಲುವಾಗಿತ್ತು.  ಹೊಸ ಲೋಕವೊಂದನ್ನು ಕಂಡು ಬಂದಂತೆ ಹೊಸ ಜೀವನವನ್ನು ಕಂಡುಕೊಂಡಂತೆ ಅವನ ದೇಹದ ಅಂಗಾಂಗಗಳಲ್ಲಿ ಖುಷಿ ಪುಟಿಯುತ್ತಿರುವಂತೆ ಸವಿತಾಳಿಗೆ ಭಾಸವಾಯಿತು.  ಕೊನೆಗೂ ಏನಾದರೊಂದು ಖುಷಿ ಇವನಿಗೆ ದಕ್ಕಿತಲ್ಲ ಎಂದು ಅವಳಿಗೂ ಮನಸ್ಸು ಸಮಾಧಾನವಾಯಿತು.  ಬಂದು ಸ್ನಾನ ಮಾಡಿ ಬನಿಯನ್ನು ಲುಂಗಿಯಲ್ಲಿ ಕುರ್ಚಿಯಲ್ಲಿ ಕುಳಿತು ನೂರರ ಗಂಟೊಂದನ್ನು ಸವಿತಾಳ ಕೈಯಲ್ಲಿ ಕೊಟ್ಟ.  ಬೆರಗಿನಿಂದ ಅವನ್ನು ಎಣಿಸಿದರೆ ಹತ್ತು ಸಾವಿರವಿತ್ತು.  ಎಲ್ಲಿಂದ ಬಂತು ಎಂದು ಕೇಳಬೇಕೆಂದು ಬಾಯಿಗೆ ಬಂದ ಪ್ರಶ್ನೆಯನ್ನು ನುಂಗಿಕೊಂಡಳು.  

ಅವನ ಹೊಸ ಕೈಂಕರ್ಯ ಜೋರು ಹಿಡಿಯಿತು.  ಸೂಟಕೇಸು ತುಂಬ ಇನ್ನೂ ಏನೇನೋ ಚಿಕ್ಕ ಚಿಕ್ಕ ಉಪಕರಣಗಳನ್ನು ತಂದಿದ್ದ.  ಹೊಸ ಹೊಸ ಸಾಧನಗಳೂ ಇದ್ದವು.  ದಿನಗಳೆದಂತೆ ಅನೇಕ ಕಲಾಕೃತಿಗಳನ್ನು ತಯಾರು ಮಾಡತೊಡಗಿದ.  ತಿಂಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ಮಾರಿ ಬರತೊಡಗಿದ.  ಅವನ ಆದಾಯ ಹೆಚ್ಚತೊಡಗಿತು.  ಮೂರನೆಯ ಬಾರಿ ಹೋದಾಗ ಹೊಸ ಕ್ಯಾಮೆರಾವೊಂದನ್ನು ತೆಗೆದುಕೊಂಡು ಬಂದ.  ತಾನು ಮಾಡಿದ ಕಲಾಕೃತಿಗಳ ಫೋಟೋ ತೆಗೆದು ಪ್ರಿಂಟು ಹಾಕಿಸಿಕೊಂಡು ಬಂದು ಎಲ್ಲೆಲ್ಲಿಗೋ ಪೋಸ್ಟು ಮಾಡತೊಡಗಿದ.  ವಾರಕ್ಕೊಂದು ಎರಡು ಪತ್ರಗಳು ಅವನಿಗೂ ಬರತೊಡಗಿದವು.  ಸವಿತಾಳ ಕಣ್ಣಿಗೆ ಬಿದ್ದ ಅಂಥ ಒಂದು ಪತ್ರ ಒಂದು ಬಣ್ಣದ ಚಿತ್ರದ ಹಾಳೆಯ ಮೇಲೆ ಬರೆಯಲಾಗಿತ್ತು.  ಅದು ಇಂಗ್ಲೀಷಿನಲ್ಲಿತ್ತು.  ಅದನ್ನು ತದೇಕಚಿತ್ತದಿಂದ ಹರೀಶ ಓದುತ್ತಿದ್ದ.  ಅವಳು ಹಾದು ಹೋದ ಪರಿವೆ ಕೂಡ ಅವನಿಗಿರಲಿಲ್ಲ.  ಅವನ್ನು ಒಂದು ಕಪಾಟಿನಲ್ಲಿ ತೆಗೆದಿಡುತ್ತಿದ್ದ.  ಸವಿತಾ ಕುತೂಹಲದಿಂದ ಅವನು ಎಲ್ಲಿಯೋ ಹೋದಾಗ ತೆಗೆದು ನೋಡಿದಳು.  ಅವುಗಳಿಂದ ಸುವಾಸನೆ ಬರುತ್ತಿತ್ತು.  ಆ ಪತ್ರಗಳ ಕೆಳಗೆ ಒಂದು ಬಣ್ಣದ ಹಾಳೆಗಳ ಲೆಟರ್ ಪ್ಯಾಡಿತ್ತು.  ಅವುಗಳಿಗೆ ಕ್ರೆಯಾನ್ ಪೆನ್ಸಿಲ್ಲುಗಳಿಂದ ಕಾಮನಬಿಲ್ಲನ್ನು ಹರೀಶನೇ ಬರೆದಿದ್ದ.  ಒಂದೆರಡು ಪತ್ರಗಳನ್ನು ತೆಗೆದು ಓದಿ ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡಿದಳು.  ಅಲ್ಲಲ್ಲಿ ಲವ್, ಲೈಕನಂಥ ಶಬ್ದಗಳು ಕಂಡು ಅವಳಿಗೆ ದುಗುಡ ಆರಂಭವಾಯಿತು.  ಹರೀಶನನ್ನು ನೇರವಾಗಿ ಕೇಳುವುದೇ ಬೇಡವೇ, ಕೇಳಿದರೂ ಏನೆಂದು ಕೇಳುವುದು ಎಂಬ ಗೊಂದಲದಲ್ಲಿ ಮುಳುಗಿದಳು.  ಐ ಲವ್ ಯೂ ಎಂಬ ವಾಕ್ಯ ಎಲ್ಲಿಯೂ ಕಾಣದಿದ್ದರೂ ಅಲ್ಲಲ್ಲಿ ಅಂಥ ಶಬ್ದಗಳಿದ್ದದ್ದು ಅವಳಲ್ಲಿ ಆತಂಕ ಹುಟ್ಟಿಸಿತು.  ಒಮ್ಮೆ ಒಳ್ಳೆಯ ಸಮಯ ನೋಡಿ ಅವನನ್ನು ಕೇಳಿಯೇ ಬಿಡುವುದು ಎಂದು ನಿರ್ಧರಿಸಿದಳು.  ಹಾಗೆ ಒಂದು ತಿಂಗಳು ಕಳೆದು ಹೋಗಿತ್ತು.

ಕೆಲಸದಿಂದ ವಾಪಸು ಬಂದ ಆ ದಿನ ಅವಳಿಗೆ ಮತ್ತೊಂದು ಆಘಾತ ಕಾದಿತ್ತು.  ಯಾವುದೋ ವಿದೇಶಿ ಹೆಣ್ಣೊಂದು ತನ್ನ ಗಂಡನೊಡನೆ ಇಂಗ್ಲೀಷಿನಲ್ಲಿ ಮಾತನಾಡುತ್ತ ಕುಳಿತಿತ್ತು.  ಸವಿತಾ ಚಪ್ಪಲಿ ಕಳೆದು ಒಳಗೆ ಬರುವುದನ್ನು ನೋಡಿ ನಕ್ಕು, ಹರೀಶನತ್ತ ತಿರುಗಿ “ಯುವರ್ ವೈಫ್?” ಎಂದು ಕೇಳಿತು.  ಅದಕ್ಕೆ ಹರೀಶ “ಎಸ್” ಎಂದು ಉತ್ತರಿಸಿ ಅವಳು ಯಾರು ಎಂದು ಪರಿಚಯಿಸುವ ಅಗತ್ಯವೇ ಇಲ್ಲ ಎಂಬಂತೆ ಮತ್ತೆ ತನ್ನ ಕೆಲಸವನ್ನು ಮುಂದುವರೆಸಿದ.  ಏನೂ ತಿಳಿಯದೇ ಗೊಂದಲದಲ್ಲಿ ಸವಿತಾ ಅಲ್ಲಿಯೇ ನಿಂತಳು.  ವಿದೇಶಿ ಅವಳನ್ನು ಕಣ್ಣೆತ್ತಿ ನೋಡಿತು.  “ಹೌ ಡು ಯೂ ಡು” ಎಂತು.  ಸವಿತಾ ಕಕ್ಕಾಬಿಕ್ಕಿಯಾಗಿ ಏನು ಉತ್ತರಿಸಬೇಕೆಂದು ತಿಳಿಯದೇ ಪೇಲವವಾಗಿ ನಕ್ಕಳು.  ಅವಳೂ ನಕ್ಕಳು.  ಗಂಡನನ್ನು “ಯಾರಿವಳು?” ಎಂದು ಕೇಳಿದಳು.  ಅದಕ್ಕೆ ಅವನು ಅವಳು ಪ್ಯಾರಿಸ್ಸಿನವಳು ಹೆಸರು ಮೆಲಿಸ್ಸಾ ತನ್ನ ಹತ್ತಿರ ತನ್ನ ಕಲೆಯನ್ನು ಕಲಿಯಲು ಬಂದಿದ್ದಾಳೆ ಎಂದು ಉತ್ತರಿಸಿದ.  ಮುಂದೆ ಏನು ಕೇಳಬೇಕೆಂದು ತಿಳಿಯದೇ ಎಲ್ಲಿ ಇರುತ್ತಾಳೆ ಎಂದು ಕೇಳಿದಳು.  ಅವಳು ಬೆಳಗಾವಿಯಲ್ಲಿಯೇ ಒಂದು ಹೊಟೇಲಿನಲ್ಲಿ ಇರುತ್ತಾಳೆ ಎಂದುತ್ತರಿಸಿದ.  ನನಗೇಕೆ ಹೇಳಲಿಲ್ಲ ಎಂದುದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗದೇ ಅವಳಿಗೆ ತನ್ನ ಕಲಾಕೃತಿಗಳನ್ನು ತೋರಿಸುವ ಕಾರ್ಯದಲ್ಲಿ ಮಗ್ನನಾದ.

ಇಷ್ಟು ದಿನ ತನ್ನ ಗಂಡನನ್ನು ಅವನಿಗೆ ಮನಸ್ಸಿಗೆ ಬಂದಿದ್ದನ್ನೆಲ್ಲ ಮಾಡಲು ಬಿಟ್ಟದ್ದೇ ತಪ್ಪಾಯಿತೇ ಎಂದು ಚಿಂತೆಗೊಳಗಾದಳು.  ಯಾವುದೋ ದೇಶದಿಂದ ಇಲ್ಲಿ ಬಂದು ಒಬ್ಬಳೇ ಹೊಟೇಲಿನಲ್ಲಿದ್ದು ತನ್ನ ಗಂಡ ಒಬ್ಬನೇ ಇದ್ದರೂ ಅವನ ಜೊತೆಗೆ ನಾಚಿಕೆಯಿಲ್ಲದೇ ತನ್ನ ಮನೆಯಲ್ಲಿಯೇ ಹಲ್ಲು ಕಿಸಿಯುತ್ತ ಕುಳಿತಿದ್ದಾಳೆಂದರೆ ಎಂಥ ಹಾದಿಬಿಟ್ಟ ಹೆಣ್ಣು ಇರಬಹುದು ಎಂದು ನೆನೆಸಿ ಅವಳಿಗೆ ಹೇಸಿಗೆ ಹುಟ್ಟಿತು.  ಅವಳ ಕತ್ತು ಹಿಡಿದು ಈಗಲೇ ಹೊರದಬ್ಬಲೇ ಎಂಬಂಥ ಸಿಟ್ಟು ಬರತೊಡಗಿತು.  ತೊನ್ನು ರೋಗದಿಂದ ಮಾನಸಿಕವಾಗಿ ಅಸ್ವಸ್ಥಗೊಂಡ ಗಂಡ ಎಂಥ ಕೆಲಸದಲ್ಲಾದರೂ ಖುಷಿಯಾಗಿರಲಿ ಎಂದು ಬಿಟ್ಟುಕೊಟ್ಟದ್ದೇ ತಾನು ಮಾಡಿದ ಪ್ರಮಾದ ಎಂದು ಪದೇ ಪದೇ ಅವಳಿಗೆ ಅನ್ನಿಸತೊಡಗಿತು.  ಅವನಿಗೆ ಏನಾದರೂ ಹೇಳಿ ಹಳೇ ಕೆಲಸಕ್ಕೆ ಹೋಗುವಂತೆ ತಾನೇಕೆ ಪ್ರೇರೇಪಿಸಲಿಲ್ಲ ಎಂದು ಪಶ್ಚಾತ್ತಾಪವಾಗತೊಡಗಿತು.  ಸುಮ್ಮನೆ ಅಡುಗೆಮನೆಯೊಳಗೆ ಹೋಗಿ ಸೀರೆಯನ್ನೂ ಬದಲಿಸದೇ ಯೋಚಿಸುತ್ತ ಕುಳಿತುಬಿಟ್ಟಳು. 

ಒಂದು ತಾಸು ಹಾಗೇ ಕುಳಿತವಳು ಹೊಟ್ಟೆಗೆ ಅಡುಗೆಯಾದರೂ ಮಾಡಲೇಬೇಕಲ್ಲ ಎಂದು ಎದ್ದಳು.  ಬಿಕನಾಸಿ ಅಲ್ಲಿಯೇ ಕುಳಿತಿದ್ದಳು.  ಇನ್ನೊಂದು ಕೋಣೆಗೆ ಹೋಗಿ ಬಟ್ಟೆ ಬದಲಿಸಿ ಬಂದಳು.  ಅವಳನ್ನು ನೋಡಿ ಕಣ್ಣುಕಿಸಿದಳು.  ಅವಳು ನಕ್ಕಳು.  ಸವಿತಾ ಚೀರಬೇಕೆಂದುಕೊಂಡವಳು ಸುಮ್ಮನೆ ಹೋದಳು.  ರಾತ್ರಿ ಒಂಬತ್ತಾದರೂ ಅವಳು ಹೋಗುವ ಲಕ್ಷಣಗಳು ಕಾಣಲಿಲ್ಲ. ಒಂಬತ್ತೂವರೆಗೆ ತಡೆಯಲಾಗದೇ ಹರೀಶನಿಗೆ ಊಟಕ್ಕೆ ಕರೆದಳು.  ಅವನು ಇಲ್ಲಿಯೇ ಇಬ್ಬರಿಗೂ ತೆಗೆದುಕೊಂಡು ಬಾ ಎಂದಾಗ ಅವಳ ಮೈಯೆಲ್ಲ ಉರಿಯಿತು.  ಇಬ್ಬರಿಗೇ ಸಾಕಾಗುವಷ್ಟು ಅಡುಗೆ ಮಾಡಿದ್ದಳು.  ಅವನು ಇಂಗ್ಲೀಷಿನಲ್ಲಿ ಮೆಲಿಸ್ಸಾಗೆ ಊಟ ಮಾಡುವಂತೆ ಕೇಳಿಕೊಂಡ.  ಅವಳು ಒಡನೆಯೇ ತಯಾರಾದಳು.  ಅವಳ ಮಾತು, ನಗೆ, ಹರೀಶನಿಗೆ ಕೈತಾಗಿಸಿ ಮಾತನಾಡುವುದು ಎಲ್ಲವೂ ಸವಿತಳಲ್ಲಿ ಕಿಚ್ಚೆಬ್ಬಿಸಿದ್ದವು.  ಆದರೂ ಏನೂ ಅನ್ನಲಾಗದಿರುವುದಕ್ಕೆ ಅವಳ ಸಿಟ್ಟು ಇನ್ನೂ ಹೆಚ್ಚಾಗತೊಡಗಿತು.

ಊಟ ಮಾಡಿದ ಮೇಲೆ ಅಂತೂ ಅವಳು ಹೋದಳು.  ತನ್ನ ಮನಸ್ಸು ಗಟ್ಟಿಮಾಡಿಕೊಂಡು ಹರೀಶನನ್ನು ಅವಳು ಇನ್ನೂ ಎಷ್ಟು ದಿನ ಇಲ್ಲಿಯೇ ಇರುತ್ತಾಳೆ ಎಂದು ಕೇಳಿದಳು.  ಅವನು ಒಂದು ತಿಂಗಳಿರಬಹುದು ಎಂದು ಉತ್ತರಿಸಿದ.  ಒಂದು ತಿಂಗಳು ಈ ಪೀಡೆಯನ್ನು ಹೇಗೆ ಸಹಿಸಿಕೊಳ್ಳುವುದು ಎಂದು ಸಿಡಿಮಿಡಿಗೊಂಡಳು.  

ದಿನವೂ ತಾನು ಕಚೇರಿಯಿಂದ ವಾಪಸು ಬರುವವರೆಗೆ ಮೆಲಿಸ್ಸಾ ಅಲ್ಲಿಯೇ ಇರುತ್ತಿದ್ದಳು. ದಿನೇದಿನೇ ಅವರ ನಡುವೆ ಆತ್ಮೀಯತೆ ಹೆಚ್ಚಾಗುತ್ತಿರುವಂತೆ ಸವಿತಾಳಿಗೆ ಭಾಸವಾಗತೊಡಗಿತು.  ತನ್ನ ಸಿಟ್ಟನ್ನು ಅದುಮಿಕೊಳ್ಳುವುದು ಅಸಾಧ್ಯವಾಗತೊಡಗಿತು.  ಕೈ ಮೈ ಮೆತ್ತಿಕೊಂಡು ಹರೀಶ ಅವಳಿಗೆ ತನ್ನ ಕಲೆಯನ್ನು ಕಲಿಸಿಕೊಡುವುದು ಅವಳಿಗೆ ಸಹಿಸಲಸಾಧ್ಯವಾಗತೊಡಗಿತ್ತು.  ಒಮ್ಮೊಮ್ಮೆ ತಾನು ಬಂದುದು ಗೊತ್ತಾದ ಕೂಡಲೇ ಅವರು ದೂರ ಸರಿದು ಕೂತುಕೊಳ್ಳುವಂತೆ ಅನ್ನಿಸುತ್ತಿತ್ತು.  ತಾನು ಇಲ್ಲದಾಗ ಇವರಿಬ್ಬರೂ ಏನೇನು ಮಾಡುತ್ತಿರಬಹುದು ಎಂಬ ಚಿಂತೆ ಕಾಡತೊಡಗಿತು.  ಮನಸ್ಸಿನಲ್ಲಿ ಕೆಟ್ಟ ಕೆಟ್ಟ ವಿಚಾರಗಳು ಅವಳನ್ನು ಕಿತ್ತು ತಿನ್ನತೊಡಗಿದವು.  ಕಚೇರಿಯಲ್ಲೂ ಮನೆಯಲ್ಲೂ ಅವಳಿಗೆ ಕೆಲಸದಲ್ಲಿ ಏಕಾಗ್ರತೆ ಭಂಗವಾಗತೊಡಗಿತು.  ರಜೆಯ ದಿನಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವಳು ಇರುತ್ತಿದ್ದಳು.  ಅವಳ ಅಡುಗೆಯನ್ನೂ ಸವಿತಾ ಮಾಡಬೇಕಾಯಿತು.  

ಹದಿನೈದಿಪ್ಪತ್ತು ದಿನ ಕಳೆದಿರಬೇಕು ಸವಿತಾ ಕಚೇರಿಯಿಂದ ವಾಪಸಾದಾಗ ಹರೀಶ ಮತ್ತು ಮೆಲಿಸ್ಸಾ ಯಾವುದೋ ವಸ್ತುವಿಗಾಗಿ ಕಚ್ಚಾಡುತ್ತಿದ್ದರು.  ಒಬ್ಬರ ಮೇಲೊಬ್ಬರು ಬಿದ್ದು ಏನನ್ನೋ ಕಸಿದುಕೊಳ್ಳುವುದಕ್ಕಾಗಿ ಪ್ರಯತ್ನ ಪಡುತ್ತಿದ್ದರು.  ಅವಳ ಸಹನೆ ಮೀರಿತು.  ತನ್ನ ಗಂಡನನ್ನು ಬೈಯ್ಯತೊಡಗಿದಳು.  ಅವಳಿಗೂ ನಿಮಗೂ ಏನು ಸಂಬಂಧ ಅವಳನ್ನು ಮೊದಲು ಮನೆಯಿಂದ ಹೊರಗೆ ಹಾಕಿ ಎಂದು ಚೀರತೊಡಗಿದಳು.  ಮೆಲಿಸ್ಸಾ ಆಘಾತದಿಂದ ಹೆದರಿಬಿಟ್ಟಳು.  ಒಡನೆಯೇ ಚಪ್ಪಲಿ ಹಾಕಿಕೊಂಡು ಹೊರ ಹೋಗಿ ಬಿಟ್ಟಳು.  ಹರೀಶ ಅವಳು ಅಂದುದನ್ನು ಅನ್ನಿಸಿಕೊಂಡು ಕೊನೆಗೆ ನೀನು ತಿಳಿದಿರುವಂತೆ ನಮ್ಮ ನಡುವೆ ಏನೂ ಇಲ್ಲ ಎಂದಷ್ಟೇ ಹೇಳಿ ಮಲಗಲು ಹೋದ.  ಸವಿತಾ ರಾತ್ರಿಯೆಲ್ಲ ಗುನುಗುತ್ತ ಉರಿದಳು.

ಮರುದಿನದಿಂದ ಮೆಲಿಸ್ಸಾ ಕಾಣಲಿಲ್ಲ.  ಹರೀಶ ಮೊದಮೊದಲು ತನ್ನ ಕೆಲಸದಲ್ಲಿ ಲೀನವಾದಂತೆ ಕಂಡರೂ ಒಂದು ವಾರದಲ್ಲಿ ಮತ್ತೆ ಖಿನ್ನತೆಗೆ ಒಳಗಾದಂತೆ ಕೆಲಸವನ್ನೆಲ್ಲ ಬಿಟ್ಟು ಸುಮ್ಮನೆ ಶೂನ್ಯದಲ್ಲಿ ದೃಷ್ಟಿಯಿಕ್ಕಿ ಕುಳಿತುಕೊಳ್ಳತೊಡಗಿದ.  ಸವಿತಾ ಮೊದಮೊದಲು ಅದನ್ನು ಅಲಕ್ಷಿಸಿದಳು.  ತನ್ನ ಕೆಲಸ ಮಾಡಿಕೊಂಡು ಇರತೊಡಗಿದಳು.  ಸ್ವಲ್ಪ ದಿನದಲ್ಲಿ ಮತ್ತೆ ಮೊದಲಿನಂತಾಗುತ್ತಾನೆ ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕಿದಳು.  ಆದರೆ ಅವಳ ಲೆಕ್ಕ ತಪ್ಪಿತ್ತು.

ಒಂದು ದಿನ ಬಹುಶ: ಗುರುವಾರ ತಾನು ಕಚೇರಿಯಿಂದ ವಾಪಸು ಬಂದಾಗ ಹರೀಶ ಮನೆಯಲ್ಲಿರಲಿಲ್ಲ.  ಅವನ ಸೂಟಕೇಸು ಇದ್ದಲ್ಲಿಯೇ ಇತ್ತು.  ಅಂದರೆ ಬೆಂಗಳೂರಿಗೆ ಹೋಗಿಲ್ಲ ಎಂದುಕೊಂಡಳು.  ಎರಡು ದಿನ ರಾತ್ರಿ ನಿದ್ದೆಯಿಲ್ಲದೇ ಮನೆಯಲ್ಲಿಯೇ ಕುಳಿತು ಅವನಿಗಾಗಿ ಕಾದಿದ್ದಳು. ಯಾರಿಗೂ ಹೇಳಲಿಲ್ಲ, ಯಾರನ್ನೂ ವಿಚಾರಿಸಲೂ ಇಲ್ಲ.  ಅವನಿಗೆ ಬರುತ್ತಿದ್ದ ಪತ್ರಗಳನ್ನು ಹುಡುಕಾಡಿದಳು.  ಅವು ಮಾಯವಾಗಿದ್ದವು.  ಮೆಲಿಸ್ಸಾ ಇದ್ದ ಹೊಟೇಲಿಗೆ ಹೋಗಿ ವಿಚಾರಿಸಿದಳು.  ಅವಳು ಹೋಗಿ ವಾರದ ಮೇಲಾಯಿತು ಎಂದು ತಿಳಿದು ಬಂತು.  ಮೂರನೆಯ ದಿನ ಕಚೇರಿಗೆ ಹೋದಳು.  ತನ್ನ ಸಹೋದ್ಯೋಗಿ ಕನಕನಿಗೆ ವಿಷಯ ತಿಳಿಸಿದಳು.  ಅವಳೊಡನೆ ಹೋಗಿ ಪೋಲೀಸು ಕಂಪ್ಲೇಂಟು ಕೊಟ್ಟಳು.  ಒಂದು ವಾರವಾದರೂ ಹಿಂದಿರುಗಲಿಲ್ಲ.  

ಹರೀಶನ ತಂದೆ ತಾಯಿ ದೂರದ ಚಿಕ್ಕಮಗಳೂರಿನಲ್ಲಿ ಇದ್ದರು.  ಅವರಿಗೆ ಫೋನು ಮಾಡಿ ತಿಳಿಸಿದಳು.  ಅವರು ಹೌಹಾರಿ ಬೆಳಗಾವಿಗೆ ಬಂದರು, ಹರೀಶನ ಅಣ್ಣ ಗಿರೀಶನೂ ಬಂದ.  ಮೊದಲೇ ಏಕೆ ತಿಳಿಸಲಿಲ್ಲ ಎಂದು ಸಿಟ್ಟು ಮಾಡಿದರು.  ಅವರೂ ಒಂದು ವಾರ ಕೊಲ್ಲಾಪುರ, ಸಾಂಗಲಿ, ಬಿಜಾಪೂರ, ಬೆಂಗಳೂರು, ಮೈಸೂರು, ಹಾಸನ, ಉಡುಪಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹುಡುಕಾಡಿದರು.  ತಮ್ಮ ಸಂಬಂಧಿಕರಿಗೆ ಗೊತ್ತಿದ್ದವರಿಗೆಲ್ಲ ಫೋನು ಮಾಡಿ ವಿಚಾರಿಸಿದರು. ಎಲ್ಲಿಯೂ ಆತನ ಸುಳಿವು ದೊರೆಯಲಿಲ್ಲ.  ಒಂದು ವಾರವಾದ ಮೇಲೆ ವಾಪಸು ಹೋದರು. ಅವಳಿಗೆ ನೌಕರಿಯಿದ್ದುದರಿಂದ ಅಲ್ಲೇ ಉಳಿದಳು.  ವಾರಕ್ಕೊಮ್ಮೆ ಎರಡು ಬಾರಿ ಪೋಲೀಸು ಠಾಣೆಗೆ ಹೋಗಿ ವಿಚಾರಿಸಿ ನಿರಾಶೆಯಿಂದ ವಾಪಸಾಗುತ್ತಿದ್ದಳು.

ರಾಯಬಾಗದಲ್ಲಿದ್ದ ತನ್ನ ತಾಯಿಗೆ ಫೋನು ಮಾಡಿ ಅಲ್ಲಿಗೆ ಹೋಗಿ ಎರಡು ದಿನ ಇದ್ದಳು.  ಇದ್ದ ಎರಡೂ ದಿನವೂ ತನ್ನ ಗಂಡ ಬಂದು ಮನೆ ಕೀಲಿ ಹಾಕಿದ್ದು ನೋಡಿ ಹೊರಳಿ ಹೋದಾನು ಎಂಬ ಹೆದರಿಕೆಯಲ್ಲೇ ನಿದ್ದೆ ಕೂಡ ಮಾಡದೇ ಕಳೆದಳು.  ಮೂರನೆಯ ದಿನ ಇರಲಿಕ್ಕಾಗದೇ ಚಡಪಡಿಸಿ ವಾಪಸು ಬೆಳಗಾವಿಗೆ ಬಂದಳು.  ನೆರೆಮನೆಯವರನ್ನು ತನ್ನ ಗಂಡ ಬಂದಿದ್ದನೇ ಎಂದು ಕೇಳಿದಳು.  ಬಂದಿದ್ದನ್ನು ಅವರು ನೋಡಿರಲೇಬೇಕೆಂದೇನಿಲ್ಲ ಎಂಬ ಸಂಶಯಕೂಪದಲ್ಲಿ ಮುಳುಗಿದಳು.

** * * * 

ಇಂದು ಬಂದು ಎದುರಿಗೆ ನಿಂತಿದ್ದ.  ತೊನ್ನು ಅವನ ಜೋತುಬಿದ್ದ ಅವನ ಚರ್ಮವನ್ನೆಲ್ಲ ವ್ಯಾಪಿಸಿತ್ತು.  ಕಣ್ಣುಗಳು ಇಳಿದುಹೋಗಿದ್ದವು.  ದೇಹ ಕುಗ್ಗಿತ್ತು.  ಅವನ ತೊನ್ನಿನಿಂದ ಮಾತ್ರ ಅವನನ್ನು ಗುರುತು ಹಿಡಿಯಬಹುದು ಎಂಬಂತಾಗಿತ್ತು.  ಅವಳನ್ನು ನೋಡಿ ನಕ್ಕ.  ಇನ್ನೂ ಸವಿತಾ ಆಘಾತದಲ್ಲಿಯೇ ಇದ್ದಳು.  ಚಪ್ಪಲಿ ಕಳೆದು ಒಳಗೆ ಬಂದ.  ಇಬ್ಬರೂ ಸರಿದು ನಿಂತರು.  ಸವಿತಾ ವಾಸ್ತವಕ್ಕೆ ಬರಲು ಕೆಲ ನಿಮಿಷಗಳೇ ಹಿಡಿದವು.

ಹರೀಶ ನೀರು ಕೇಳಿದ.  ಸವಿತಾ ಗ್ಲಾಸು ಹಿಡಿದುಕೊಂಡು ಬಂದಳು.  ಅವನು ಯಾರು ಎಂದು ಕೇಳಿದ.  ಏನು ಹೇಳಬೇಕೆಂದು ಹೊಳೆಯದೇ ಸುಮ್ಮನೆ ನಿಂತಳು.  ಅವಳ ಗೊಂದಲವನ್ನು ಅರ್ಥಮಾಡಕೊಂಡಂತೆ ಇರಲಿ ಆಮೇಲೆ ಹೇಳು ಎಂದ.  ಅವರ ನಡುವೆ ಮಾತುಗಳು ಕಳೆದುಹೋಗಿದ್ದವು.  ಸವಿತಾ ಅವನನ್ನು ಹೇಗೆ ಮಾತನಾಡಿಸುವುದು ಏನು ಕೇಳುವುದು ಎಂದು ತಿಳಿಯದೇ ಚಡಪಡಿಸುತ್ತ ಕುಳಿತಿದ್ದಳು.  ಹರೀಶ ಮನೆಯನ್ನೆಲ್ಲ ಕೂತಲ್ಲಿಂದಲೇ ವೀಕ್ಷಿಸುತ್ತ ಕಣ್ಣಾಡಿಸುತ್ತಿದ್ದ.  ಸವಿತಾಳನ್ನು ನೋಡಿದ.  ಅವಳಿಗೆ ವಯಸ್ಸಾಗಿದ್ದುದು ಎದ್ದು ಕಾಣುತ್ತಿತ್ತು.  ಅವಳ ಬಣ್ಣ ಕಪ್ಪಾದಂತೆ ಕಂಡಿತು.  ಇವನು ಯಾರು ಎಂದು ಹೊಳೆಯಲಿಲ್ಲ.  ಮತ್ತೊಮ್ಮೆ ಕೇಳಬೇಕೆಂದೆನಿಸಿದರೂ ಅವಳನ್ನು ಗೊಂದಲಕ್ಕೀಡುಮಾಡುವುದು ಬೇಡ ಎಂದು ಸುಮ್ಮನಾದ.  ಸವಿತಾ ಅಡುಗೆ ಮಾಡಲು ಒಳಗೆ ಹೋದಳು.

ಹರೀಶ ಅವನನ್ನು ಮಾತನಾಡಿಸಲು ಪ್ರಯತ್ನಿಸಿದ.  ಹೆಸರೇನೆಂದರೆ ಆತ ರವಿ ಎಂದ.  ಒಳಗೆ ಅದನ್ನೆಲ್ಲ ಕೇಳುತ್ತ ಸವಿತಾ ದುಗುಡದಲ್ಲಿದ್ದಳು.  ತಾನೊಬ್ಬಳೇ ಒಬ್ಬ ಗಂಡಸಿನ ಜೊತೆಗೆ ಇರುವುದನ್ನು ಕಂಡು ಗಂಡ ಏನಂದಾನು ಎಂದು ಭಯ ಹುಟ್ಟಿತ್ತು.  ಆದರೆ ಅಂಥ ಪ್ರಶ್ನೆಗಳಿಂದೆಲ್ಲ ತನ್ನ ಅವಮಾನವಾಗುವ ದಿವಸಗಳು ಕಳೆದುಹೋಗಿವೆ ಎಂದೆನಿಸಿತು.  ಹದಿಮೂರು ವರ್ಷಗಳಿಂದ ತನ್ನ ಬಗ್ಗೆ ಒಂದಿನಿತೂ ಯೋಚಿಸದ ಹರೀಶನಿಗೆ ತನ್ನ ಬಗ್ಗೆ ವಿಚಾರಣೆ ಮಾಡುವ ಅಧಿಕಾರವಿಲ್ಲ ಎನಿಸಿತು.  ತಾನು ಬೇರೆ ಮದುವೆಯಾಗಿದ್ದರೂ ಅವನಿಗೆ ಅದನ್ನು ಕೇಳುವ ಹಕ್ಕಿಲ್ಲ ಎನಿಸಿತು.  ಆದರೂ ಯಾವುದೋ ಅವ್ಯಕ್ತ ಭಯ ಅವಳನ್ನು ಸುತ್ತಿಕೊಂಡಿತ್ತು.

ಮೂವರು ಕುಳಿತು ಊಟ ಮಾಡಿದರು.  ಹರೀಶ ಮತ್ತು ರವಿಗೆ ಹೊರಗಡೆ ಹಾಸಿಗೆ ಹಾಸಿ ತಾನು ಹೋಗಿ ಅಡುಗೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ಮಲಗಿದಳು.  

ನಿದ್ದೆಯಿಲ್ಲದೇ ಒದ್ದಾಡುತ್ತಿದ್ದ ಸವಿತಾಳಿಗೆ ಯಾರೋ ಬಾಗಿಲು ಬಾರಿಸಿದಂತೆ ಆಯಿತು.  ಹರೀಶ ಇರಬೇಕೆಂದು ಎದೆ ಹೊಡೆದುಕೊಳ್ಳತೊಡಗಿತು.  ಮತ್ತೆ ಐದು ನಿಮಿಷ ಬಿಟ್ಟು ಮತ್ತೆ ಬಾರಿಸಿತು.  ಸವಿತಾ ಗಾಬರಿಯಿಂದ ಮುದುಡಿ ಮಲಗಿದಳು.  ಎದ್ದು ಬಾಗಿಲು ತೆರೆಯಲೇ ಬೇಡವೇ ಎಂದು ಅವಳ ತಲೆಯಲ್ಲಿ ಯುದ್ಧ ಶುರುವಾಯಿತು.  ಏನೂ ತೋಚದೇ ಸುಮ್ಮನೆ ಮಲಗಿದಳು.  ಮತ್ತೆ ಶಬ್ದ ಬಂದೀತೆಂದು ಬೆಳಗಿನವರೆಗೆ ಕಾದಳು. 

ಬೆಳಕು ಹರಿದ ಭಾಸವಾದ ಕೂಡಲೇ ಬಾಗಿಲು ತೆರೆದು ಹೊರಬಂದಳು.  ಹೊರಬಾಗಿಲ ಸಂದಿಯಿಂದ ಬಿಸಿಲ ಕೋಲು ಅಡುಗೆ ಮನೆಯವರೆಗೆ ಬಂದು ಸವಿತಾಳ ಸೀರೆಯ ಮೇಲೂ ಹರಡಿತು.  ರಾತ್ರಿ ಹೊರಬಾಗಿಲು ಮುಚ್ಚದೇ ಮಲಗಿದೆನೇ ಎಂದು ದಿಗಿಲಾಗಿ ಹೊರಬಂದು ಬಾಗಿಲು ತೆರೆದಳು.  ಕತ್ತಲನ್ನಳಿಸಿ ಬೆಳಕು ಮನೆಯನ್ನೆಲ್ಲ ತುಂಬಿಕೊಂಡಿತು.  ಎದುರಿನ ಗಿಡದ ಎಲೆಗಳ ಮೇಲೆ ಮಂಜಿನ ಮುತ್ತುಗಳು ಮಿನುಗುತ್ತಿದ್ದವು.  ಹೊರಳಿ ಒಳಗೆ ನೋಡಿದಳು.  ರವಿ ಒಬ್ಬನೇ ಮಲಗಿದ್ದ.  ಹರೀಶ ಹೊದೆಯಲು ಕೊಟ್ಟ ಚಾದರನ್ನು ಮಡಚಿ ತಲೆದಿಂಬಿನ ಮೇಲೆ ಇಟ್ಟಿದ್ದ.  ಸರಕ್ಕನೆ ಬಾಗಿಲ ಮೂಲೆಯಲ್ಲಿ ಹರೀಶನ ಚಪ್ಪಲಿಗಳಿಗಾಗಿ ಹುಡುಕಿದಳು. ಅವು ಅಲ್ಲಿರಲಿಲ್ಲ.  ಅಂಗಳದಲ್ಲಿ ರಂಗೋಲಿಯ ಬದಿಯಿಂದ ನಡೆದು ಹೋದ ಹೆಜ್ಜೆಯ ಗುರುತುಗಳಿದ್ದವು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x