ಬನದ-ಭಾರತ ಹುಣಿವಿಗೆ ಯಲ್ಲಮ್ಮ ತಾಯಿ ಜಾತ್ರೆ ಜೋರು ನಡಿತದ. ಉಡಿ ತುಂಬಸೋದು, ಮುತ್ತು ಕಟಗೊಂಡವರು ಸೇವಾ ಮಾಡೋದು, ಬೇವಿನ ತಪ್ಪಲದಾಗ ಕುಂತ ತಾಯಿಯನ್ನ ಎರೆಯೋದು, ದೀಡ ನಮಸ್ಕಾರ ಹಾಕೋದು, ಪಡ್ಡಲಗಿ ಹಿಡದು ನೇಮದ ಸಲುವಾಗಿ ನಾಕೈದು ಮನಿ ಜೋಗ ಬೇಡೋದು ಹಿಂಗ ಒಕ್ಕಲ ಮಕ್ಕಳ ಮನಿಯೊಳಗ ಸಡಗರ ಹೊಗೆಯಾಡತಿರತದ. ಜಡೆಬಿಟ್ಟ ಜೋಗಮ್ಮ ಜೋಗಪ್ಪಗಳು ತಿಂಗಳ ಕಾಲ ಬಿಡುವಿಲ್ಲದ ಮುಯ್ಯಿ ಮಾಡತಿರತಾರು. ಬಳಿ ಒಡೆದು ರಂಡೆ ಮಾಡೋದರಿಂದ ಶುರುವಾಗುವ ವಿಧಿವಿಧಾನಗಳು ಸೀರಿ ಉಡಿಸಿ, ಮುತ್ತು ಕಟ್ಟಿ, ಕುಂಕಮ ಇಡೋವರೆಗೂ ತಿಂಗಳ ಪರ್‍ಯಂತ ಹಬ್ಬ ನಡಿತದ. ಆ ಟಾಯಮಿಗೆ ಬರೊಬ್ಬರಿ ನಮ್ಮ ಮನಿಗೊಬ್ಬ ಜೋಗಪ್ಪ ಖಾಯಮ್ಮ ಬರುತ್ತಿದ್ದ. ಅಂವ ಅತ್ತಲಾಗ ಇಂಡಿ, ಆಲಮೇಲ ಕಡೆಯಿಂದ ನಡಕೊಂಡು ಗುಡ್ಡಕ್ಕ ಹೋಗತಿದ್ದ. ಹಂಗ ಸವದತ್ತಿ ಮುಟ್ಟಿ ಹರಕೆ ತೀರಿಸಿ ಹೊಡಮರಳಿ ಹೋಗುವಾಗ ತಿಂಗಳೊಪ್ಪತ್ತು ನಮ್ಮ ಮನಿಯೊಳಗ ಇದ್ದು ಹೋಗತಿದ್ದ.
ಹೆಣ್ಣದೇವರಿಗೆ ಹರಕಿ ಹಿಡಿದಾಗ ಹುಟ್ಟಿದ ಕೂಸು ಅಂತ ಅವನ್ನ ಜೋಗಪ್ಪನ್ನ ಮಾಡಿ ದೇವರಿಗ ಬಿಡಲಾಗಿತ್ತು. ಹುಟ್ಟಿದಾರಭ್ಯಕ್ಕ ಇಟ್ಟ ಹೆಸರು ಶ್ಯಾಣಪ್ಪ ಅಂತಾದರೂ ಊರೊಳಗಿನ ತ್ವಾಡೆ ಮಂದಿ ಅಂವಗ ಜೋಗಪ್ಪ ಅಂತಿದ್ದರು. ಯಲ್ಲವ್ವನ ಒಕ್ಕಲು ಭಕ್ತರು ಮಾತ್ರ ಅಂವಗ ಜೋಗಮ್ಮ ಅಂತ ಕರಿತಿದ್ದರು.
ನಮ್ಮ ಮನಿತನದ ವಾಡಿಕೆ ಪೂರಾ ಗುಡ್ಡದಮ್ಮಗ ಸೇರಿದ್ದರಿಂದ ಶ್ಯಾಣಪ್ಪ ನಮ್ಮ ಮನಿಮಂದಿಗೆಲ್ಲ ಖರೇನ ಗುಡ್ಡದ ಯಲ್ಲಮ್ಮನ ಆಗಿದ್ದ. ಏಳುತಾಯಿಯರ ಹೆಸರಿನ್ಯಾಗ ಉಧಉಧೋ…. ಉಧೋ.. ಉಧೋ ಹಾಕಿ ದೇವಿ ಒಡಲಾಗ ಇಟಗೊಂಡು ಜೊಗ್ಯಾಡಲಿಕ್ಕ ಹೊಂಟರ ನಮ್ಮ ಆಯಿ-ಮುತ್ಯಾ ಮೊದಲಗೊಂಡು ಅವ್ವ-ಅಪ್ಪನ ತನಕ ಶ್ಯಾಣಪ್ಪ ಜೊಗಮ್ಮಗ ಅಡ್ಡಬಿದ್ದು ನಮಸ್ಕಾರ ಮಾಡತಿದ್ದರು. ಕಾಲಿಗೆ ಗೆಜ್ಜಿ ಕಟ್ಟಿ, ತಲಿಮ್ಯಾಲ ಕೊಡ ಬ್ಯಾಲೆನ್ಸ್ ಮಾಡಿ ಕುಣಿಯುವ ಶ್ಯಾಣಪ್ಪ ಥೇಟ್ ಅವ್ವನ ಗತೆ ಮಾತಾಡತಿದ್ದ. ಸೀರಿ ಉಡತಿದ್ದ, ಕುಬಸ ತೊಡತಿದ್ದ, ಹೇಣ್ಣಹೆಂಗಸು ನಾ ಅಂತ ಕನ್ನಡಿ ಮುಂದ ನಿಂತು ತನ್ನ ತಾನ ಸಿಂಗಾರ ಮಾಡಕೊಂಡು ಸಡಗರಿಸತಿದ್ದ. ಅವ್ವನ ಕೂಡ ಅಡಿಗಿ ಮಾಡತಿದ್ದ. ಸೋಬಾನೆ ಪದ, ಕತೆ, ಚೌಡಕಿ ಹಾಡು ಹಾಡೋದಂದ್ರ ಲೋಕ ಮರೆತ ಬಿಡತಿದ್ದ. ಯಾರಾದರೂ ಹೆಸರ ಕೇಳಿದರಂತೂ, ತಲಿತುಂಬ ಸೆರಗು ಹೊತಗೊಂಡು ’ಶ್ಯಾಣವ್ವರೀ’ ಅಂತ ಹೇಳತಿದ್ದ. ನಮ್ಮ ಮನಿಮಂದಿಗೆಲ್ಲ ಭಾಳ ಪರಿಚಯಸ್ಥ ಆದ ಕಾರಣಕ್ಕೋ ಏನೋ ಅವನಿಗೆ ಎಲ್ಲಾರೂ ಶ್ಯಾಣಪ್ಪ ಅಂತನ ಕರಿತಿದ್ದರು.
ಹಂಗ ನೋಡಿದರ ಅಂವ ನಮಗೇನೂ ಹತ್ತರ-ದೂರದ ಹತ್ತಗಡೀನೂ ಆಗಿರಲಿಲ್ಲ. ಬಬಲಾದಿ ಜಾತ್ರಿಗೆ ಹ್ವಾದಲ್ಲಿ ಅಪ್ಪನ ಪಾರಿಜಾತದ ಪಾಲ್ಟು ನೋಡಿ ಗುರುತಾದಂವ. ತಾನು ಕೊರವಂಜಿ ಪಾಲ್ಟು ಮಾಡಬೇಕು ಅಂತ ನಮ್ಮೂರಿನ ಪಾರಿಜಾತದ ಮ್ಯಾಳ ಸೇರಲಿಕ್ಕ ಬಂದಿದ್ದ. ಪಾಪ! ದೇವರಿಗೆ ತನ್ನ ಭಕುತ ಅಕ್ಷರಾ ಕಲಿಯೂದು ಬ್ಯಾಡಾಗಿತ್ತೋ ಏನೋ ಜೋಗಮ್ಮ ಎಷ್ಟ ಅನೂಲಿ ಉಂಡರೂ ಜ್ಞಾನದ ಒಂದಕ್ಷರಾನೂ ಅವನ ಎದಿಯಾಗ ಇಳಿಲಿಲ್ಲ. ಹಂಗಾಗಿ ಓದು-ಬರ ಕಲಿಯೋದು ಒತ್ತಟ್ಟಿಗಿರಲಿ ಪಾತ್ರದ ಮಾತುಗಳು ನೆಂಪಿಗೆ ಬರಲಾರದ ಎಲ್ಲೆಲ್ಲೋ ಅಡ್ಯಾಡಲಿಕ್ಕ ಹೋಗತಿದ್ದವು. ಅಷ್ಟ ಚಂದ ಹಾಡು ಹೇಳತಿದ್ದ ಶ್ಯಾಣಪ್ಪಗ ಹಾರ್‍ಮೋನಿಯಂ ಪೆಟಿಗಿಯೊಳಗಿನ ಕರೆ ಒಂದು ಬಿಳೆ ಎರಡು ಸ್ವರಗಳು ಭಾಳ ತ್ರಾಸ ಕೊಟ್ಟವು ಅಂತ ಕಾಣತದ. ’ಚಂದ್ರಗಾವಿಯನುಟ್ಟು’ ಅಂತ ಕರೆ ಒಂದರಾಗ ಸುರುಮಾಡಿದ ಪದ್ಯ ಕರಿ-ಬಿಳಿ ಎರಡೂ ಸ್ವರದೊಳಗ ಅಡ್ಯಾಡಿ ಪೆಟಿಗಿ ಸ್ವರಗಳನ್ನ ಮೀರಿಬಿಡತಿತ್ತು. ಪತ್ತಾರ ಮಾಸ್ತರಗ ಬರೊಬ್ಬರಿ ಸೂರ ಹಿಡಿಯಾಕ ಬರೋದಿಲ್ಲವೇನೋ ಅನ್ನುವಷ್ಟ ಮ್ಯಾಲಿನ ಸ್ವರದಾಗ ಹಾಡು ಎತಗೋತಿದ್ದ ಕಾರಣಕ್ಕ ಶ್ಯಾಣಪ್ಪನ್ನ ಪಾರಿಜಾತ ಮ್ಯಾಳದಿಂದನ ಡಿಬಾರ್ ಮಾಡಿಬಿಟ್ಟಿದ್ದರು.
ಮಂದಿ ಮಕ್ಕಳು ಅಂತ ಮನಸಬಿಚ್ಚಿ ಮಾತಾಡತಿದ್ದ ಜೋಗಪ್ಪ ಯಾವತ್ತು ಸಣ್ಣತನದ ಮಾತ ಆಡಿದಂವನ ಅಲ್ಲ. ಯಾರನ್ನೂ ಬಟ್ಟಮಾಡಿ ತೋರಿಸಿ ಮಾತಾಡಿದಂವನಲ್ಲ. ಕಾಲೇಜ ಹೋಗತಿದ್ದ ದೊಡ್ಡವರ ಕೂಡ ಭಾಳ ಚ್ಯಾಷ್ಟಿ ಮಾಡತಿದ್ದ. ಅವರು ಅವನ ದೇಹದಲ್ಲಿ ಮುಟ್ಟಬಾರದ ಜಾಗದಲ್ಲೆಲ್ಲ ಮುಟ್ಟಿ ನಕಲಿ ಮಾಡತಿದ್ದರ ಹೆಣ್ಣಿನಕಿಂತ ಹೆಚ್ಚಿನ ವಯ್ಯಾರ ಮಾಡತಿದ್ದ. ಆ ಸೀರೆ ಒಳಗಿರೋದು ಯಾವ ಲಿಂಗ ಅನ್ನುವ ನನ್ನ ಯಾವತ್ತಿನ ಕುತೂಹಲ ಮತ್ತಷ್ಟ ನಿಗೂಢ ಆಗಿ ಅದೊಂದು ಗುಂಭ ಪರಪಂಚ ಅನ್ನೊದೊಂದು ಖಾತ್ರಿಯಾಗತಿತ್ತು. ನಾ ಹೆಚ್ಚೆಚ್ಚು ತಿಳಕೊಳ್ಳಾಕ ಪ್ರಯತ್ನಿಸಿದಷ್ಟು ಶ್ಯಾಣಪ್ಪನ ವ್ಯಕ್ತಿತ್ವ ದೈವಸ್ವರೂಪದ್ದು ಅನಿಸತೊಡಗಿತ್ತು.
ಹೀಂಗ ಒಂದ ದಿವಸ ಬಸನಾಳ ಸಿದ್ದಯ್ಯನೂ ಅವನು ಬಣವೆ ಸಂದಿಯೊಳಗ ಮಾಡಬಾರದು ಮಾಡತಿದ್ದ ದೃಶ್ಯ ಕಂಡು ಬಂದಿದ್ದ ಪಿಂಜಾರ ಸಯ್ಯದ ನನ್ನ ತಲಿಯೊಳಗ ಏನೇನೋ ಹುಳ ಬಿತ್ತಿದ. ಅಂವ ಖರೇಗೂ ಹೆಣ್ಣಾಗಿರಲಿಕ್ಕಬೇಕು ಅಂಬೋದು ಅವರ ವಾದ ಆದರ, ಇಲ್ಲಿಲ್ಲ ಅವನ ಎದಿಯೊಳಗ ಮೊಲೆ ಇಲ್ಲ… ಜಳಕ ಮಾಡುವಾಗ ನಾ ಖುದ್ದ ನೋಡೇನಿ ಅಂತ ನಾ ಎಷ್ಟ ಹೇಳಿದರೂ ಅವರು ನಂಬೋ ಸ್ಥಿತಿಯಲ್ಲಿರಲಿಲ್ಲ. ಖಾತ್ರಿಗಾಗಿ ಆವತ್ತು ರಾತ್ರಿ ಅಂವ ಮಲಗಿದಾಗ ಅವನ ಸೀರಿ ಎತ್ತಿ ಅವನ ಲಿಂಗ ಪತ್ತೆ ಮಾಡಬೇಕೆಂಬುದಾಗಿ ನಾವು ನಾಲ್ಕಾರು ಮಂದಿ ಬೇತ ಮಾಡಿಕೊಂಡ್ವಿ. ದಿನಂಪ್ರತಿ ಬಾಲವಾಡಿ ಅಂಗಳದಾಗ ಮಲಗತಿದ್ದ ಜೋಗಮ್ಮ ಆವತ್ತು ಬಾಜೂ ಹಳ್ಳಿಯೊಳಗ ನಡಿತಿದ್ದ ನಾಟಕ ನೋಡಲಿಕ್ಕ ಹೋಗಿದ್ದ. ಮಳ್ಳಾಮರದಿನ ಅತ್ತಿಂದತ್ತ ಆಲಮೇಲಕ್ಕ ಹೋಗಿಬಿಟ್ಟಿದ್ದ. ನಾವು ಸಂಶೋಧನೆ ಮಾಡಬೇಕೆಂದಿದ್ದ ಯೋಜನ ಅರಕಳಿ ಆಗಿದ್ದು ಹಂಗ ಉಳದ ಹೋಯ್ತು. ಮುಂದಿನ ನಾಲ್ಕಾರು ವರ್ಷದೊಳಗ ನಮ್ಮ ಮುಖದ ಮ್ಯಾಲ ಮೀಸೆ ಚಿಗುರಿ, ಮೊಡವೆಗಳೆದ್ದು, ಮನುಷ್ಯನ ಆಸೆ ಆಕಾಂಕ್ಷೆಗಳ ಹಿಂದಿನ ರಹಸ್ಯ ತಿಳಿಲಿಕ್ಕ ಶುರುವಾದ್ದರಿಂದ ನಾಚಿಕೆಗೆಟ್ಟ ಕೆಲಸಕ್ಕ ಕೈ ಹಾಕೋದು ಹೇಸಿಗೆ ಅನ್ನಿಸಿತು.
ಇತ್ತಿತ್ತಲಾಗ ಶ್ಯಾಣಪ್ಪ ನನಗ ಬಾಯತುಂಬ ಮಗಾ, ಮಗನ ಅನ್ನಲಿಕ್ಕತ್ತಿದ. ಅವ್ವನ ಪ್ರೀತಿ, ಅಕ್ಕರಾಸ್ಥೆಗಿಂತ ಹೆಚ್ಚಿನ ಮಮಕಾರ ತೋರಸತಿದ್ದ. ಚಂದ ಓದಿಬರದು ಮಾಡಿ ದೊಡ್ಡ ಮನಶ್ಯಾ ಆಗು ಅಂತ ಯಲ್ಲಮ್ಮನ ಚಾಮರದಿಂದ ಮನಸಾರೆ ಹಾರೈಸತಿದ್ದ. ವಯಸ್ಸಿನ ಹದ ದಾಟಿದ್ದರಿಂದ ಮಾತಿನ ಲಯ, ಮೈಬಳುಕಿನ ಬಿಂಕ ಕಮ್ಮಿಯಾಗಿತ್ತು. ಜೋಗಪ್ಪ ಹೋಗಿ ಈಗ ಪಕ್ಕ ಜೋಗಮ್ಮ ಜೋಗತಿ ಆಗಿದ್ದ. ಮೈಮ್ಯಾಗ ಜೋಗುಳಬಾವಿ ಸತ್ತ್ಯೆವ್ವ ಬರತಾಳು, ಅಂವ ದೇವರ ನುಡಿ ಹೇಳತಾನು ಅನ್ನೋದು ಜಗಜ್ಜಾಹೀರ ಮಾತಾಗಿತ್ತು. ಸಾಕ್ಷಾತ್ ಯಲ್ಲಮ್ಮ ತಾಯಿ ಸವದತ್ತಿ ಕೊಳ್ಳ ಬಿಟ್ಟು ರಾಮದುರ್ಗ ಗುಡ್ಡಕ್ಕ ಬಂದಾಳು ಅನ್ನೋ ಗಾಸಿಪ್ ಕಿವಿಯಿಂದ ಕಿವಿಗೆ ಹರಡಿ ಅವನು ವಾಸವಾಗಿದ್ದ ಜಾಗದಲ್ಲೊಂದು ತಗಡಿನ ಸೂರು ತಲೆಎತ್ತಿ ನಿಂತಿತು. ನಾನು ಧಾರವಾಡದಿಂದ ಊರಿಗೆ ಹೋದಾಗೊಮ್ಮೆ ಜೊಗಮ್ಮ ಮಂತ್ರಿಸಿಕೊಟ್ಟ ಭಂಡಾರವನ್ನ ಅವ್ವ ಶ್ರದ್ಧೆಯಿಂದ ನನ್ನ ಹಣೆಗೆ ಮೆತ್ತತಿದ್ದಳು. ಮೊದಮೊದಲು ನಂಬಿಕೆ ಅಂದಕೊಂಡು ಸುಮ್ಮನಿರುತ್ತಿದ್ದ ನಾನು ಕಡೆಕಡೆಗೆ ’ಯಾವ ದೇವರೂ ಭೂಮಿ ಮ್ಯಾಲ ಇಲ್ಲ, ಇದ್ದಿದ್ದರ ಜೋಗಮ್ಮನಿಗೆ ಇಂಥ ಹೀನ ಬದುಕು ಯಾಕ ಬರತಿತ್ತು’ ಅಂತ ವಿರೋಧಿಸುತ್ತಿದ್ದೆ. ಆಗೆಲ್ಲ ಅಪ್ಪ-ಅವ್ವ ಒಂದಾಗಿ ಜೋಗಮ್ಮನ ಪರ ವಕಾಲತ್ತು ವಹಿಸಿ ನನ್ನ ಮ್ಯಾಲ ಸಿಟ್ಟಾಗತಿದ್ದರು. ’ಅದು ದೇವರ ಬರೆದ ಬರಹ ಅದನ್ನ ಯಾರೂ ತಪ್ಪಿಸಲಿಕ್ಕ ಬರೋದಿಲ್ಲ’ ಅನ್ನೋ ಸಗಣಿ ಸಾರಿಸಿ ’ದೈವಬಲವೊಂದಿದ್ದರ ಮನಶ್ಯಾ ಏನೆಲ್ಲ ಸಾಧಿಸ್ತಾನು. ಹಿಂಗ ಕೊಂಕು ಮಾತಾಡಿ ಇನ್ನೊಬ್ಬರ ಎದಿಗೆ ಚೂರಿ ಹಾಕಬ್ಯಾಡ, ಅವರವರ ನಂಬಿಕಿ ಮ್ಯಾಲ ದೇವರು ಒಲಿತಾನು’ ಅಂತ ಅಪ್ಪ ಬೈದು ಬುದ್ಧಿ ಹೇಳತಿದ್ದ.
ಗಂಡಾಗಿ ಹುಟ್ಟಿ ಹೆಣ್ಣಾಗಿ ಬದುಕು ಸವೆಸಿದ ಜೋಗಮ್ಮನ ಅಂತರಂಗವನ್ನ ಕದಡಬೇಕು, ಆಕೆಯೊಳಗಿನ ಬದುಕಿನ ತೀವ್ರ ಪ್ರೀತಿಯ ಆಸೆ ಆಕಾಂಕ್ಷೆಗಳ ಸೊಲ್ಲು ಕೇಳಬೇಕು ಅಂದುಕೊಂಡರೂ ಆಕೆಯ ಹಣೆಯ ಮೇಲಿನ ಕುಂಕುಮ ಅವಳು ಅವನಲ್ಲ ಎಂಬುದನ್ನ ಸಾಬೀತುಪಡಿಸುತ್ತಿತ್ತು. ಹೆಣ್ಣಿನ ಏಕಾಂತ ಜೋಗಮ್ಮನ ಏಕಾಂತವೂ ಆಗಿರುವುದರಿಂದ ಆತ ತಾನು ಹೆಣ್ಣೆಂದು ಭ್ರಮಿಸಿಕೊಂಡವನಲ್ಲ, ಹೆಣ್ಣಾಗಿಯೇ ಬಾಳಿದವ.
ಮುಂದ ಊರೂರು ಅಲೆಯುವ ನಮ್ಮ ನಾಟಕದ ತಿರುಗಾಟದಲ್ಲಿ ಊರಿನ ಸಂಪರ್ಕ ಕಮ್ಮಿಯಾದ್ದರಿಂದ ಶ್ಯಾಣಮ್ಮಳ ಕತಿಯೂ ಅರಕಳಿಯಾಗುಳಿದಿತ್ತು.
*** *** ***
ನನ್ನ ಮದುವಿಗೆ ಬಂಗಾರ ಮುಯ್ಯಿ ಮಾಡತೀನಿ, ಮಾದುನ ಲಗ್ನಕ್ಕ ಹೇಳೋದ ತಪ್ಪಸಬ್ಯಾಡ ಅಂತ ಹೇಳಿ ರಾಮದುರ್ಗ ಬಿಟ್ಟು ಹೋದಾಕಿ ಪತ್ತಾ ಇಲ್ಲದ ನಾಪತ್ತೆ ಆಗಿದ್ದಳು. ನನ್ನ ಲಗ್ನವೂ ಅವಸರಕ್ಕ ಆದ್ದರಿಂದ ಮಂದಿಮಕ್ಕಳಿಗೆ ಹೇಳಿಕೆ ಕೊಡುವಷ್ಟ ಟಾಯಮು ನನಗಿರಲಿಲ್ಲ. ಅವ್ವ-ಅಪ್ಪನ ಹೊರತಾಗಿ ಒಬ್ಬನೇ ಒಬ್ಬನೂ ನಮ್ಮ ಒಗತನದ ಪ್ರತಿನಿಧಿಯಾಗಿ ಬಂದಿರಲಿಲ್ಲ. ಗಣೇಶ ಮಾಸ್ತರರೂ ಸುಜಾತಕ್ಕನೂ ನನ್ನ ಒಡಹುಟ್ಟಿದವರಾಗಿ ಲಗ್ನಕಾರೇವು ಮುಗಿಸಿಕೊಟ್ಟಿದ್ದರು. ಹಿಂಗ ಮಂದಿ ಮನಿಯೊಳಗ ಮದುವಿ ಆದ ಸುದ್ದಿ ಯಾರಯಾರದೋ ಬಾಯಿಂದ ಜೋಗಮ್ಮನ ಕಿಂವಿಗೆ ಬಿದ್ದದ್ದ ತಡ ಆಲಮೆಲುದಿಂದ ಡಾಯಿರೆಕ್ಟ್ ಊರಿಗಿ ಬಸ್ ಹತ್ತಿ ಬಂದು ಬಿಟ್ಟಿದ್ದಳು.
ಪಾಪ, ಆಕೆಯಲ್ಲಿ ಮೊದಲಿನ ನಿತ್ರಾಣ ಉಳಿದಿರಲಿಲ್ಲ. ಗಾಳಿ ಸುದ್ದಿಗೆ ಆಹಾರವಾಗಿದ್ದ ಆಕೆ ಗುಣಪಡಿಸಲಾರದಂತ ರೋಗ ಇರುವುದಕ್ಕೆ ಸಾಕ್ಷಿ ಎಂಬಂತೆ ತೀಡಿ ನಿಲ್ಲಿಸಿದ ಗೊಂಬೆ ಆಗಿದ್ದಳು. ಸೆಟೆದು ನಿಂತ ಬೆರ್ಚಪ್ಪನಿಗೆ ಸೀರೆ ಸುತ್ತಿದಂತೆ ಸೊರಗಿ ಕಡ್ಡಿಯಾಗಿದ್ದಳು. ಮನಸಾರೆ ಹರಸಿ ಹಾರೈಸುತ್ತಿದ್ದ ಜೋಗಮ್ಮ ನೋಡನೋಡುತ್ತಿದ್ದಂತೆ ಮುಪ್ಪಾನು ಮುದುಕಿಯಾಗಿದ್ದಳು.
ಆಕೆ ಅಣ್ಣ-ತಮ್ಮಂದಿರು ಕ್ಷುಲ್ಲಕ ಆಸ್ತಿಪ್ರೇಮದ ದೆಸೆಯಿಂದ ಜೋಗತಿಯ ನೇಮ, ವ್ರತಗಳನ್ನ ಮುರದು ಖಾಲಿ ಕೈ ಮಾಡಿಬಿಟ್ಟಿದ್ದರು. ವರ್ಷಕ್ಕೊಮ್ಮೆ ಗುಡ್ಡಕ್ಕ ಬಂದು ಹೋಗುವುದ ಸಹಿತ ನಿಂತುಹೋಗಿತ್ತು. ಕಂಕುಳ ಪಡ್ಡಲಗಿಯಲ್ಲಿ ಪವಡಿಸಿದ್ದ ಅಂಗೈಯಗಲದ ದೇವಿಯ ಮೂರ್ತಿಗೂ ಆಕೆಗೂ ಬಿಡಲಾರದ ನಂಟು ಬೆಳದಿತ್ತು. ಹೌದು. ಅದೇ ದೇವಿ ಹೆಸರಲ್ಲಿ ನಾಕಾರು ಮನಿ ಜೋಗ ಬೇಡಿ ತಂದ ರೊಕ್ಕದೊಳಗ ಓದಿ ಮಾಸ್ತರರಾದವರು ಮರ್ಯಾದೆಗಂಜಿ ಸಾಕಿದ ನಾಯಿಗಿಂತ ಕಡೆ ಮಾಡಿ ಹೊರಗ ಹಾಕಿದ್ದರು.
’ಮಾನಗೆಟ್ಟ ಹೆಣ್ಣಹೆಂಗಸು ನಾ ಅಬಲಿ, ತಮ್ಮಗೋಳ್ನ ಬಿಟ್ಟರ ನನಗ್ಯಾರು ಅದಾರು? ನನ್ನ ಬೆನ್ನಿಗೆ ದೇವಿ ಇದಾಳ ನನ್ನ ತಮ್ಮಗೋಳ ಬೆನ್ನಿಗೆ ಯಾರೂ ಇಲ್ಲಂತ ಆಸ್ತಿ ಮಾಡಿದೆ. ಅವರು ಎಲ್ಲಾನು ನುಂಗಿ ನೀರು ಕುಡದು ಈಗ ನನ್ನ ಹೊರಗಿನ್ಯಾಕಿನ ಮಾಡಿರು’ ಬಿಕ್ಕಿದಳು. ಒಡಲೊಳಗಿನ ಬೆಂಕಿಗೆ ಸುಟ್ಟು ಕರಕಲಾದವಳು ಮುಂದ ಸಾಯೋತನಕ ನಮ್ಮೂರು ಬಿಟ್ಟು ಕದಡಲಿಲ್ಲ. ನಾನು ಆಗಾಗ ಊರಿಗೆ ಹೋದಾಗೊಮ್ಮೆ ಶ್ಯಾಣಮ್ಮ ಬಂದು ಮಾತಾಡಿಸುತ್ತಿದ್ದಳು. ಜೋಗ್ಯಾಡಲಿಕ್ಕ ಹೋದ ಹೊತ್ತಲ್ಲಿ ನಾನು ಹೊಗಿಬಂದರೆ ಆ ದಿನ ಸಂಜೆ ಅವಳು ತಪ್ಪಿಸದೆ ಫೋನಾಯಿಸುತ್ತಿದ್ದಳು. ಕೈಕಾಲೊಳಗ ಶಕ್ತಿ ಇರೋತನಕ ಸುತ್ತ ಹತ್ತು ಹಳ್ಳಿಗೆ ತಿರುಗಿ ಬೇಡಕೊಂಡ ಬಂದು ಸ್ವಾಭಿಮಾನದಿಂದ ಕೂಳ ಅಟ್ಟಕೊಂಡು ಬದುಕಿದಳು. ಆ ಹಾಳುಬಿದ್ದ ಮನೆಯಲ್ಲಿ ಆಕೆ ಒಂಟಿದೆವ್ವಿನಂತೆ ಜೀವ ಸವೆಸುತ್ತಿದ್ದಳು. ಬದುಕು ಸಾಕೆನಿಸಿದ್ದರೂ ದೇವಿ ಇಚ್ಛೆಗಾಗಿ, ಅಪ್ಪಣೆಗಾಗಿ ಜಾತಕಪಕ್ಷಿಯಾಗಿದ್ದಳು.
ಮತ್ತೆ ಹುಣ್ಣಿವೆ ಬಂದಿತ್ತು. ಆಕೆ ಬಳೆ ಒಡೆದುಕೊಂಡು, ಕುಂಕುಮ ಒರೆಸಿಕೊಂಡು ವಿಧವೆಯಾಗಿ ತಿಂಗಳು ಕಾಲ ಕಳೆಯಬೇಕಾದ ಸಂದರ್ಭ. ವರ್ಷಕ್ಕೊಮ್ಮೆ ಸಡಗರದಿಂದ ಆಚರಿಸುವ ಆ ಹಬ್ಬದ ಸರಿಹೊತ್ತಿಗೆ ಹಿಂಗಾರಿನ ಕೊಯ್ಲು ಜೋರ ನಡೆದಿರತದ. ಈ ಸಲದ ಬಿಳಿಜೋಳದ ರಾಶಿ ಛಲೋ ಬಂದಿತ್ತು. ಸುಗ್ಗಿಯ ರಾಶಿಪೂಜೆಗೆ ಊರಿಗೆ ಹೋದಾಗ ಜೋಗಮ್ಮ ತ್ವಾಡೆ ಗೆಲುವಾಗಿದ್ದಳು. ನಾ ಮೊದಲು ಕಂಡ ಉತ್ಸಾಹ ಈಗ ಇಮ್ಮಡಿಸಿತ್ತು.
ಯಾಕೋ ನನ್ನ ಮೇಲಿನ ಕಾಳಜಿ ಕಮ್ಮಿಯಾಗಿರುವ ಬಗ್ಗೆ ಅನುಮಾನ ಬಂದು ನಾನೇ ಅವಳ ಮನೆಯತ್ತ ಹೊರಟೆ. ಥಳಕುಬಳಕು ಯಾರೋ ಆ ಮನೆ ತುಂಬ ಓಡಾಡುವ ಸದ್ದು ಕೇಳಿಸಿತು. ಜೋಗಮ್ಮನ ಮನಿಯೊಳಗ ಯಾರೋ ಒಬ್ಬ ಹೊಸ ಜೋಗಪ್ಪ ಬಂದಿದ್ದ. ಕಟ್ಟಿಮ್ಯಾಲ ಎಣ್ಣೆಗೆ ಬತ್ತಿ ಹೊಸೆಯುತ್ತ ಕುಂತಿದ್ದ ಜೋಗಮ್ಮ ನನ್ನ ಕಂಡದ್ದೆ ಅಡರಾಸಿ ಹಾಸಿಗೆ ಚಲ್ಲಿ ಅದರ ಮೇಲೆ ಕೂರಿಸಿದಳು. ಒಳಗಿದ್ದವರು ಯಾರು ಎಂಬಂತೆ ಹುಬ್ಬು ಹಾರಿಸಿದಾಗ ಆಕೆ ಖಡಕ್ಕಾಗಿ ಉತ್ತರಿಸಿದಳು. ’ನನ್ನ ಮಗಳು. ಬೆಂಗಳೂರಾಗ ಇರತಾಳು… ಬಿ.ಎ ಪಾಸ ಮಾಡ್ಯಾಳು’ ನನ್ನನ್ನು ಮಗನಂತೆ ಕಾಣುತ್ತಿದ್ದ ಆಕೆಯಲ್ಲಿ ನಿಜವಾದ ತಾಯಿಪ್ರೇಮದ ಗುಣವೊಂದು ಕಾಣತೊಡಗಿತು. ತನ್ನವರು, ತನ್ನ ಅಂತರಂಗದ ಗುಟ್ಟುಗಳನ್ನು ಕೇಳುವ, ಖಾಸಗಿಯಾಗಿ ಒಡನಾಡುವ ಜೀವಚೈತನ್ಯದ ಚಲುವು ಶ್ಯಾಣಮ್ಮನ ಮಂದಹಾಸದಲ್ಲಿ ಕುಣಿಯುತ್ತಿತ್ತು.
ಏನ ಹೆಸರೂ..?
ಲಾಲಿ.. ಅನ್ನೋ ಹೆಸರು ಕರಿಬೇಕು. ಹೆಂಗದ ಹೆಸರು? ಕೇಳಿದಳು. ಶ್ಯಾಣಮ್ಮ ಯಾವದೋ ವಿಶೇಷ ಪೂಜಾ ಮಾಡಲಿಕ್ಕಾಗಿ ತಯಾರಿ ನಡೆಸಿದ್ದಳು. ಅಕ್ಕಿಕಾಳಲ್ಲಿ ಮಂಡಳ ಬರೆದು ತುಂಬುಕೊಡದಲ್ಲಿ ಕಳಶ ಇಟ್ಟು ಕರಿಕಂಬಳಿ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಟಾಪಿಸಿದ್ದಳು. ’ನೋಡಪಾ ಮಾದೇವು ಸಂಜಿ ಮುಂದ ಸುತ್ತಲ ಸೀಮಿ ದೇವರಿಗೆ ಕರೀಕಟ್ಟಿದರ ಇನ್ನು ಮೂರುದಿವಸ ಈಕಡೆ ಯಾ ನರಪಿಳ್ಳೆನೂ ಬರಂಗಿಲ್ಲ. ಇಲ್ಲಿ ಅವನ ಮೈಗೆಲ್ಲ ಅರಿಷಿಣ ಹಚ್ಚಿ, ಬಳೆತೊಡಿಸಿ, ದೇವಿ ಅಪ್ಪಣಿ ತಗೊಂಡು ಮುತ್ತೈದೆ ಮಾಡೋತನಕ ಈ ಜಾಗ ಮೈಲಿಗೆ ಆಗಬಾರದು ನೋಡು ಅದಕ ವ್ರತ ಮಾಡಾಕತ್ತೀನಿ’ ಅಂವನು ಅವಳಾಗಲು ಹಂಬಲಿಸುತ್ತಿದ್ದ.
’ಇಂವ ಕೊಪ್ಪಳ ಕಡೆಯಿಂದ ಬಂದಾನು. ಮನ್ನೆ ರಂಡೆಹುಣಿವಿ ದಿವಸ ಬಳಿ ಒಡಕೊಳ್ಳೋ ಮುಂದ ಗುರುತಾದ. ನಾ ಮುತ್ತ ಕಟಗೊಂಡು ಮುತ್ತೈದೆ ಆಗಬೇಕು ಅಂತ ಹಲಬತಿದ್ದ ನೋಡ, ಅದಕ ನನ್ನ ಮಗಳಾಗಿ ಮಾಡಕೊಂಡು ಕರಕೊಂಡು ಬನ್ನಿ. ಅವ್ವಗ ಶಿಶುಮಗಳಾಗಿ ಬಿಡತೀನಿ.’ ಆ ಹುಡುಗ ಮೈಯಲ್ಲ ಅರಿಷಿಣದಿಂದ ಶೋಭಿತನಾಗಿದ್ದ. ನವಮುತ್ತೈದೆಯಾಗಿ ಆದಿಶಕ್ತಿ ಯಲ್ಲಮ್ಮತಾಯಿಯ ಮುತ್ತುಕಟ್ಟಿಸಿಕೊಳ್ಳುವ ತವಕದಲ್ಲಿದ್ದ. ಅಂವ ಹೆಣ್ಣಾಗಿ ಗುರುತಿಸಿಕೊಳ್ಳಲು ಶ್ಯಾಣಮ್ಮ ಜೋಗತಿ ಅವ್ವ ಆಗಿದ್ದಳು. ಅವ್ವನ ಪರದಾ ಸರಿಯುವ ಹೊತ್ತಿಗೆ ಮಗಳಂಬೋ ಮಗಳು ಕಣ್ಣತುಂಬ ಕನಸುಗಳ ಕಟ್ಟಿಕೊಂಡು ಅಸ್ತಿತ್ವ ಇಲ್ಲದ ಜಗತ್ತಿನಲ್ಲಿ ಹರಿಯುವ ನದಿಗೆ ಎದುರಾಗಿ ಈಸಲು ತಯಾರಗಿ ನಿಂತಿದ್ದಳು.
– ಮಹಾದೇವ ಹಡಪದ
*****
ಶಾಣ್ಯಪ್ಪ ಹೋಗಿ ಜೋಗಪ್ಪನಾಗಿ, ಜೋಗಮ್ಮ ಹೋಗಿ ಎಲ್ಲರ ನಿರ್ಲ್ಯಕ್ಶ್ಯಕ್ಕೊಳಗಾಗೋ ಮುದುಕಿಯಾಗೋ ಪ್ರಸಂಗವೋದಿ ಬೇಸರವಾಯಿತು. ಹೊಸ ಜೀವವೊಂದರಲ್ಲಿ ತನ್ನನ್ನು ಕಾಣೋ ಆಕೆಯ ಜೀವನಪ್ರೇಮ ಮೆಚ್ಚುವಂತದ್ದೇ.. ಭೂಮಿ ಹುಣ್ಣಿಮೆ, ಬನದ ಹುಣ್ಣಿಮೆ ದಿನ ಸವದತ್ತಿ ಯಲ್ಲಮನ ಜಾತ್ರೆ ಆಗುತ್ತೆ ಅಂತ ಓದಿದ್ದೆ. ಆ ವಿಷಯದ ಬಗ್ಗೆ ಸಖತ್ ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದಕ್ಕೆ ವಂದನೆಗಳು. ಚೆನ್ನಾಗಿದೆ ಲೇಖನ