೧. ಹೋಜನ ಕತ್ತೆ
ನಜರುದ್ದೀನ್ ಹೋಜ ತನ್ನ ಕತ್ತೆಯನ್ನು ಮಾರುಕಟ್ಟೆಗೆ ಒಯ್ದು ೩೦ ದಿನಾರ್‌ಗಳಿಗೆ ಮಾರಿದ.
ಅದನ್ನು ಕೊಂಡುಕೊಂಡವನು ತಕ್ಷಣವೇ ಕತ್ತೆಯನ್ನು ಹರಾಜಿನಲ್ಲಿ ಮಾರಲು ನಿರ್ಧರಿಸಿದ.
“ಅತ್ಯುತ್ತಮ ಗುಣಮಟ್ಟದ ಈ ಪ್ರಾಣಿಯನ್ನು ನೋಡಿ!” ದಾರಿಹೋಕರನ್ನು ತನ್ನತ್ತ ಆಕರ್ಷಿಸಲೋಸುಗ ಅವನು ಬೊಬ್ಬೆಹಾಕಲಾರಂಭಿಸಿದ. “ಇದಕ್ಕಿಂತ ಉತ್ತಮವಾದ ಕತ್ತೆಯನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿ, ಇದು ಎಷ್ಟು ಸ್ವಚ್ಛವಾಗಿದೆ, ಎಷ್ಟು ಬಲವಾಗಿದೆ.”
ಆ ಕತ್ತೆಯ ಇನ್ನೂ ಅನೇಕ ಒಳ್ಳೆಯ ಗುಣಗಳನ್ನು ಪಟ್ಟಿಮಾಡಿದ. ಇದನ್ನೆಲ್ಲ ಕೇಳಿದ ಒಬ್ಬಾತ ಅದಕ್ಕೆ ೪೦ ದಿನಾರ್ ಕೊಡುವುದಾಗಿ ಹೇಳಿದ. ಇನ್ನೊಬ್ಬ ೫೦ ಮತ್ತೊಬ್ಬ ೫೫ ದಿನಾರ್ ಕೊಡುವುದಾಗಿ ಹೇಳಿದರು.
ಇದನ್ನು ಗಮನಿಸುತ್ತಿದ್ದ ಹೋಜನಿಗೆ ಇಷ್ಟೊಂದು ಜನ ಆ ಕತ್ತೆಯನ್ನು ಪಡೆಯಲು ಹವಣಿಸುತ್ತಿದ್ದದ್ದನ್ನು ಕಂಡು ಆಶ್ಚರ್ಯವಾಯಿತು.
ಹೋಜ ಆಲೋಚಿಸಿದ, ‘ಅದೊಂದು ಸಾಧಾರಣ ಕತ್ತೆ ಎಂಬುದಾಗಿ ತಿಳಿದಿದ್ದ ನಾನೆಂಥ ಮೂರ್ಖ. ಅದು ಅದ್ವಿತೀಯವಾದದ್ದು, ಕೋಟಿಗೊಂದು ಇರುವಂಥ ಅಪರೂಪದ್ದು –”
ಕತ್ತೆಯನ್ನು ಹರಾಜಿಗಿಟ್ಟವ ವ್ಯಾಪಾರವನ್ನು ಕುದರಿಸಲು ತಯಾರಾಗಿ ಬೊಬ್ಬೆಹಾಕಿದ, “೭೫ ದಿನಾರ್ ಒಂದು ಸಲ —-, ೭೫ ದಿನಾರ್ ಎರಡು ಸಲ ——”
ಹೋಜ ಕಿರುಚಿದ, “೮೦ ದಿನಾರ್‌ಗಳು!”
*****
೨. ಬೆಂಕಿಯೂ ಹೆದರುತ್ತದೆ!
ಒಲೆಯಲ್ಲಿ ಇದ್ದ ಕೆಂಡಕ್ಕೆ ಗಾಳಿಯೂದಿ ಬೆಂಕಿ ಹೊತ್ತಿಸಲು ನಜರುದ್ದೀನ್ ಹೋಜ ಪ್ರಯತ್ನಿಸುತ್ತಿದ್ದ. ಬೆಂಕಿಯ ಬದಲು ಕಣ್ಣುರಿಸುವಷ್ಟು ದಟ್ಟವಾದ ಕಪ್ಪು ಹೊಗೆ ಉತ್ಪಾದಿಸುವುದರಲ್ಲಿ ಅವನು ಯಶಸ್ವಿಯಾದ. ಕಣ್ಣಿಗೆ ಹೋಗೆ ತಗಲುವುದನ್ನು ತಡೆಗಟ್ಟಲೋಸುಗ ಅವನು ತನ್ನ ಹೆಂಡತಿಯ ಟೊಪ್ಪಿಯೊಂದನ್ನು ಹಾಕಿಕೊಂಡು ಪುನಃ ಗಾಳಿಯೂದಲಾರಂಭಿಸಿದ. ಈ ಸಲ ಬೆಂಕಿ ಹೊತ್ತಿಕೊಂಡಿತು.
“ಆಹಾ! ನೀನೂ ಸಹ ನನ್ನ ಹೆಂಡತಿಗೆ ಹೆದರುವೆ ಎಂಬುದು ಈಗ ತಿಳಿಯಿತು,” ಉದ್ಗರಿಸಿದ ಹೋಜ.
*****
೩. ಹೋಜನೂ ಪಂಡಿತನೂ
ಒಬ್ಬ ಪಂಡಿತನನ್ನು ನಜರುದ್ದೀನ್ ಹೋಜ ದೋಣಿಯ ನೆರವಿನಿಂದ ನದಿ ದಾಟಿಸುತ್ತಿದ್ದಾಗ ವ್ಯಾಕರಣಬದ್ಧವಾಗಿಲ್ಲದ ವಾಕ್ಯವೊಂದನ್ನು ಹೇಳಿದ.
ತಕ್ಷಣ ಆ ಪಂಡಿತ ಕೇಳಿದ, “ನೀನು ಎಂದೂ ವ್ಯಾಕರಣ ಕಲಿಯಲೇ ಇಲ್ಲವೇ?”
“ಇಲ್ಲ,” ಉತ್ತರಿಸಿದ ಹೋಜ.
“ಹಾಗಿದ್ದರೆ ನಿನ್ನ ಅರ್ಧ ಆಯುಷ್ಯ ವ್ಯರ್ಥವಾದಂತೆ,” ಉದ್ಗರಿಸಿದ ಪಂಡಿತ.
ತುಸು ಸಮಯದ ನಂತರ ಹೋಜ ಪಂಡಿತನತ್ತ ತಿರುಗಿ ಕೇಳಿದ, “ನೀವು ಎಂದಾದರೂ ಈಜು ಕಲಿತಿದ್ದಿರಾ?”
“ಇಲ್ಲ,” ಉತ್ತರಿಸಿದ ಪಂಡಿತ.
“ಹಾಗಿದ್ದರೆ ನಿಮ್ಮ ಪೂರ್ಣ ಆಯುಷ್ಯ ವ್ಯರ್ಥವಾದಂತೆ, ಏಕೆಂದರೆ ನಮ್ಮ ದೋಣಿ ಮುಳುಗುತ್ತಿದೆ,” ಉದ್ಗರಿಸಿದ ಹೋಜ.
*****
೪. ಹೋಜ ದರ್ಜಿಯ ಹತ್ತಿರ ಹೋದದ್ದು
ಹೋಜ ಒಬ್ಬ ದರ್ಜಿಯ ಹತ್ತಿರ ಹೋಗಿ ಅವನಿಗೊಂದು ಬಟ್ಟೆಯ ತುಂಡನ್ನು ಕೊಟ್ಟು ಅದರಲ್ಲಿ ತನಗೊಂದು ಅಂಗಿ ಹೊಲಿದು ಕೊಡುವಂತೆ ಹೇಳಿದ. ಅಂಗಿ ಹೊಲಿಯಲು ಅಗತ್ಯವಾದ ಅಳತೆಗಳನ್ನು ದರ್ಜಿ ಗುರುತು ಹಾಕಿಕೊಂಡ.
“ಅಂಗಿ ಯಾವಾಗ ಸಿಕ್ಕುತ್ತದೆ?” ಕೇಳಿದ ಹೋಜ.
“ದೈವೇಚ್ಛೆಯಾದರೆ ಒಂದು ವಾರದ ಅವಧಿಯಲ್ಲಿ ಅಂಗಿ ತಯಾರಾಗುತ್ತದೆ,” ಉತ್ತರಿಸಿದ ದರ್ಜಿ.
ಒಂದು ವಾರ ಕಳೆಯುವುದನ್ನು ಬಲು ಕಾತರದಿಂದ ಕಾಯುತ್ತಿದ್ದ ಹೋಜ ಏಳನೆಯ ದಿನ ಬೆಳಗ್ಗೆ ದರ್ಜಿಯ ಅಂಗಡಿಗೆ ಓಡಿದ. ಅಂಗಿ ಇನ್ನೂ ಹೊಲಿದು ಆಗಿಲ್ಲವೆಂಬುದನ್ನು ತಿಳಿದು ಅವನಿಗೆ ಬಲು ನಿರಾಸೆಯಾಯಿತು. “ದೈವೇಚ್ಛೆಯಾದರೆ ನಾಡಿದ್ದು ಅಂಗಿ ತಯಾರಾಗಿರುತ್ತದೆ,” ಹೇಳಿದ ದರ್ಜಿ.
ಎರಡು ದಿನಗಳು ಕಳೆದ ಬಳಿಕ ಹೋಜ ದರ್ಜಿಯ ಅಂಗಡಿಗೆ ಪುನಃ ಹೋದ, ಅಂಗಿ ಸಿದ್ಧವಾಗಿರಲಿಲ್ಲ. “ದೈವೇಚ್ಛೆಯಾದರೆ ಶನಿವಾರದ ಹೊತ್ತಿಗೆ ಅಂಗಿ ತಯಾರಾಗುತ್ತದೆ,” ಹೇಳಿದ ದರ್ಜಿ. ಶನಿವಾರವೂ ಅಂಗಿ ಸಿದ್ಧವಾಗಿರಲಿಲ್ಲ. “ದೈವೇಚ್ಛೆಯಾದರೆ —–” ಈ ಹಿಂದಿನಂತೆ ಹೇಳಲಾರಂಭಿಸಿದ ದರ್ಜಿ. “ನಿಲ್ಲು, ನಿಲ್ಲು. ದೇವರನ್ನು ಈ ವ್ಯವಹಾರದಿಂದ ದೂರವಿಟ್ಟರೆ ಅಂಗಿ ಯಾವಾಗ ಹೊಲಿದಾಗುತ್ತದೆ ಎಂಬುದನ್ನು ಹೇಳು,” ಕಿರುಚಿದ ದರ್ಜಿಯ ಅಂಗಡಿಗೆ ಅಲೆದಲೆದು ಸುಸ್ತಾಗಿದ್ದ ನಜರುದ್ದೀನ್ ಹೋಜ.
*****
೫. ಹೋಜನ ಪವಿತ್ರ ಮನೆ
ಒಂದು ಕಾಲದಲ್ಲಿ ಹೋಜ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಅದು ಬಹಳ ಹಳೆಯದಾದ ಮನೆಯಾಗಿತ್ತು. ಜೋರಾಗಿ ಗಾಳಿ ಬೀಸಿದಾಗಲೆಲ್ಲ ಮನೆಯ ದೂಲಗಳು ಕಿರುಗುಟ್ಟುತ್ತಿದ್ದವು. ಮನೆಯ ಮಾಲಿಕ ಬಾಡಿಗೆ ತೆಗೆದುಕೊಳ್ಳಲು ಬಂದಾಗ ಮನೆ ಮಾಡುತ್ತಿದ್ದ ಗಾಬರಿ ಹುಟ್ಟಿಸುವ ಶಬ್ದಗಳ ಕುರಿತು ವಿವರಿಸಿದ. ಮಾಲಿಕ ಲಘು ಮನೋಭಾವದಿಂದ ಹೇಳಿದ, “ಅದರಿಂದ ನೀವು ಗಾಬರಿಯಾಗ ಬೇಕಾದ ಅಗತ್ಯವಿಲ್ಲ. ಆ ಶಬ್ದಗಳು ಹಳೆಯ ಕಟ್ಟಡ ಉಲಿಯುತ್ತಿರುವ ಸರ್ವಶಕ್ತನ ಕುರಿತಾದ ಹೊಗಳಿಕೆಯ ಹಾಡುಗಳು!”
*****