ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ಜ್ಞಾನೋದಯವಾಗುವಿಕೆ
ಒಂದು ದಿನ ನಜ಼ರುದ್ದೀನ್‌ ತನ್ನ ಅನುಯಾಯಿಗಳೊಂದಿಗೆ ಪೇಟೆಬೀದಿಯಲ್ಲಿ ಹೋಗುತ್ತಿದ್ದ. ನಜ಼ರುದ್ದೀನ್‌ ಮಾಡುತ್ತಿದ್ದದ್ದನ್ನೆಲ್ಲ ಅನುಯಾಯಿಗಳು ಅಂತೆಯೇ ನಕಲು ಮಾಡುತ್ತಿದ್ದರು. ತುಸು ದೂರ ನಡೆದ ನಂತರ ನಜ಼ರುದ್ದೀನ್ ಕೈಗಳನ್ನು ಮೇಲೆತ್ತಿ ಗಾಳಿಯಲ್ಲಿ ಆಡಿಸುತ್ತಿದ್ದ, ತದನಂತರ ತನ್ನ ಪಾದಗಳನ್ನು ಮುಟ್ಟಿ “ಹು ಹು ಹು” ಎಂಬುದಾಗಿ ಕಿರುಚುತ್ತಾ ಮೇಲಕ್ಕೆ ಹಾರುತ್ತಿದ್ದ. ತಕ್ಷಣ ಅನುಯಾಯಿಗಳೂ ಅಂತೆಯೇ ಮಾಡುತ್ತಿದ್ದರು. 
ಇದನ್ನು ಕುತೂಹಲದಿಂದ ನೋಡಿದ ಒಬ್ಬ ವ್ಯಾಪಾರಿ ನಜ಼ರುದ್ದೀನ್‌ನನ್ನು ಕೇಳಿದ, “ನೀನೇನು ಮಾಡುತ್ತಿರುವೆ ಮಿತ್ರಾ? ಇವರೆಲ್ಲರೂ ನಿನ್ನನ್ನು ಏಕೆ ಅನುಕರಿಸುತ್ತಿದ್ದಾರೆ?”

ನಜ಼ರುದ್ದೀನ್‌ ಉತ್ತರಿಸಿದ, “ನಾನೀಗ ಒಬ್ಬ ಸೂಫಿ ಷೇಕ್‌ ಆಗಿದ್ದೇನೆ. ಇವರೆಲ್ಲ ನನ್ನ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿರುವ ಆಧ್ಯಾತ್ಮಿಕ ಸಾಧಕರು. ಅವರಿಗೆ ಜ್ಞಾನೋದಯವಾಗಲು ನಾನು ನೆರವು ನೀಡುತ್ತಿದ್ದೇನೆ.”

ವ್ಯಾಪರಿ ಕೇಳಿದ, “ಅವರಿಗೆ ಜ್ಞಾನೋದಯವಾದದ್ದು ನಿನಗೆ ಹೇಗೆ ತಿಳಿಯುತ್ತದೆ?”
ನಜ಼ರುದ್ದೀನ್‌ ವಿವರಿಸಿದ, “ಅದು ಬಲು ಸುಲಭ. ಪ್ರತೀದಿನ ಬೆಳಿಗ್ಗೆ ನಾನು ಅವರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಎಣಿಸುತ್ತೇನೆ. ಹಿಂದಿನ ದಿನ ಇದ್ದವರ ಪೈಕಿ ಯಾರು ರಾತ್ರೋರಾತ್ರಿ ಹೊರಟುಹೋಗಿರುತ್ತಾರೋ ಅವರಿಗೆ ಜ್ಞಾನೋದಯವಾಗುರುತ್ತದೆ!”

*****

೨. ನಿನ್ನ ಬೆಕ್ಕು ಸತ್ತಿದೆ
ನಜ಼ರುದ್ದೀನ್‌ನ ಸೋದರಸಂಬಂಧಿಯೊಬ್ಬ ತನ್ನ ಕೆಲವು ಸ್ವತ್ತನ್ನು ನಜ಼ರುದ್ದೀನ್‌ನ ಸುಪರ್ದಿಗೆ ಕೊಟ್ಟು ಬಲು ದೂರದ ನಾಡಿಗೆ ವಲಸೆ ಹೋದ.
ಆ ಸೋದರಸಂಬಂಧಿಯ ಬೆಕ್ಕು ಒಂದು ದಿನ ಸತ್ತು ಹೋಯಿತು. ಆ ಕೂಡಲೆ ನಜ಼ರುದ್ದೀನ್‌ ಅವನಿಗೆ “ನಿನ್ನ ಬೆಕ್ಕು ಸತ್ತು ಹೋಯಿತು” ಎಂಬ ಸಂದೇಶ ರವಾನಿಸಿದ. 
ಈ ಸುದ್ದಿ ಸೋದರಸಂಬಂಧಿಯಲ್ಲಿ ಮನಃಕ್ಷೋಭೆಯನ್ನು ಉಂಟುಮಾಡಿತು. ಅವನು ನಜ಼ರುದ್ದೀನ್‌ನಿಗೆ ಒಂದು ಸಂದೇಶ ಕಳುಹಿಸಿದ: “ನಾನು ವಾಸಿಸುವ ಸ್ಥಳದಲ್ಲಿ ಆಘಾತಕಾರಿ ಸುದ್ದಿಗಳನ್ನು ಯಾರೂ ನೇರವಾಗಿ ತಿಳಿಸುವುದಕ್ಕೆ ಬದಲಾಗಿ ಜಾಣತನದಿಂದ ತಿಳಿಸುತ್ತಾರೆ. ಉದಾಹರಣೆಗೆ, ನೀನು ನನಗೆ ‘ನಿನ್ನ ಬೆಕ್ಕು ಸತ್ತು ಹೋಯಿತು’ ಎಂಬುದಾಗಿ ನೇರವಾಗಿ ತಿಳಿಸುವ ಬದಲು ಮೊದಲಿಗೆ ‘ನಿನ್ನ ಬೆಕ್ಕು ವಿಚಿತ್ರವಾಗಿ ವರ್ತಿಸುತ್ತಿದೆ’ ಎಂಬುದಾಗಿ, ತದನಂತರ ‘ನಿನ್ನ ಬೆಕ್ಕು ಅಡ್ಡಾದಿಡ್ಡಿ ಹಾರಾಡುತ್ತಿದೆ’ ಎಂಬುದಾಗಿಯೂ, ಆನಂತರ ‘ನಿನ್ನ ಬೆಕ್ಕು ಎಲ್ಲಿಗೋ ಹೋಗಿದೆ’ ಎಂಬುದಾಗಿಯೂ ತಿಳಿಸಿ ಕೊನೆಯಲ್ಲಿ ಅದು ಸತ್ತ ಸುದ್ದಿ ರವಾನಿಸಬಹುದಿತ್ತು.”
ಒಂದು ತಿಂಗಳ ನಂತರ ಸೋದರಸಂಬಂಧಿಗೆ ನಜ಼ರುದ್ದೀನ್‌ನಿಂದ ಸಂದೇಶವೊಂದು ಬಂದಿತು: “ನಿನ್ನ ತಾಯಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.”

*****

೩. ಅವನಾರು?
ಮೋಚಿಯೊಬ್ಬ ನಜ಼ರುದ್ದೀನ್‌ನಿಗೆ ಒಗಟೊಂದನ್ನು ಹೇಳಿದ: “ಒಬ್ಬ ವ್ಯಕ್ತಿ ಇದ್ದಾನೆ. ಅವನು ನನ್ನ ಅಪ್ಪನ ಮಗ, ಆದರೂ ನನ್ನ ಸಹೋದರನಲ್ಲ. ಹಾಗಾದರೆ ಅವನು ಯಾರು?”
ನಜ಼ರುದ್ದೀನ್‌ ತುಸು ಆಲೋಚಿಸಿ ಹೇಳಿದ, “ನನಗೆ ಗೊತ್ತಾಗುತ್ತಿಲ್ಲ. ಅವನು ಯಾರು?”
ಮೋಚಿ ಉತ್ತರಿಸಿದ, “ನಾನು!”

ಈ ಒಗಟು ನಜ಼ರುದ್ದೀನ್‌ನನ್ನು ಬಹುವಾಗಿ ರಂಜಿಸಿತು. ತತ್ಪರಿಣಾಮವಾಗಿ ಅವನು ಮಾರನೆಯ ದಿನ ತನ್ನ ಮಿತ್ರವೃಂದವನ್ನ ಕೇಳಿದ, “ಒಬ್ಬ ವ್ಯಕ್ತಿ ಇದ್ದಾನೆ. ಅವನು ನನ್ನ ಅಪ್ಪನ ಮಗ, ಆದರೂ ನನ್ನ ಸಹೋದರನಲ್ಲ. ಹಾಗಾದರೆ ಅವನು ಯಾರು?”

ಅವರು‌ ತುಸು ಆಲೋಚಿಸಿ ಹೇಳಿದರು, “ನಮಗೆ ಗೊತ್ತಾಗುತ್ತಿಲ್ಲ. ಅವನು ಯಾರು?”
ನಜ಼ರುದ್ದೀನ್‌ ಬಲು ಉತ್ಸಾಹದಿಂದ ಹೇಳಿದ, “ನೀವು ನಂಬಿದರೆ ನಂಬಿ, ಇಲ್ಲವಾದರೆ ಬಿಡಿ. ಪಕ್ಕದ ಬೀದಿಯಲ್ಲಿ ಕೆಲಸ ಮಾಡುವ ಮೋಚಿಯೇ ಅವನು!”

*****

೪. ಸುದ್ದಿ ರವಾನೆ
ನಗರಾಧ್ಯಕ್ಷರು ಹೇಳಿದರು, “ನಜ಼ರುದ್ದೀನ್‌, ಶ್ರೀಮತಿ ಶಾಹ್ರ್ಜಾದ್‌ ರಹಮಾನ್‌ ಅವರ ಪತಿ ವಿಧಿವಶರಾಗಿದ್ದಾರೆ. ನೀನಿಗಲೇ ಹೋಗಿ ಅವರಿಗೆ ಸುದ್ದಿ ತಲುಪಿಸು. ಆಕೆ ಬಹಳ ಸೂಕ್ಷ್ಮ ಪ್ರಕೃತಿಯವಳಾಗಿರುವುದರಿಂದ ಈ ಸುದ್ದಿಯನ್ನು ಆಕೆಗೆ ತೀವ್ರ ಆಘಾತವಾಗದ ರೀತಿಯಲ್ಲಿ ಮಿದುವಾಗಿ ತಿಳಿಸು.”

ನಜ಼ರುದ್ದೀನ್‌ ಆಕೆಯ ಮನೆಗೆ ಹೋಗಿ ಬಾಗಿಲು ತಟ್ಟಿದ. ಒಬ್ಬ ಬಡಕಲು ಹೆಂಗಸು ಬಾಗಿಲು ತೆಗೆದಳು. 
ನಜ಼ರುದ್ದೀನ್‌ ಕೇಳಿದ, “ಇದು ವಿಧವೆ ಶಾಹ್ರ್ಜಾದ್‌ ರಹಮಾನ್ ಅವರ ಮನೆಯಷ್ಟೆ?”
ಆಕೆ ಉತ್ತರಿಸಿದಳು, “ನನ್ನ ಹೆಸರು ಶಾಹ್ರ್ಜಾದ್‌ ರಹಮಾನ್. ನಾನು ಈ ಮನೆಯಲ್ಲಿ ವಾಸಿಸುತ್ತಿದ್ದೇನೆ. ಆದರೆ ನಾನು ವಿಧವೆಯಲ್ಲ.”
ನಜ಼ರುದ್ದೀನ್‌ ಹೇಳಿದ, “ಹಂ. ನೀವೀಗ ವಿಧವೆಯಾಗಿರುವಿರಿ ಎಂಬುದಾಗಿ ನಾನೀಗ ೧೦೦ ದಿನಾರ್‌ ಬಾಜಿ ಕಟ್ಟಲು ಸಿದ್ಧನಿದ್ದೇನೆ.”

*****

೫. ಛತ್ರಿ
ನಜ಼ರುದ್ದೀನ್‌ ತನ್ನ ಗೆಳೆಯನೊಬ್ಬನ ಜೊತೆಯಲ್ಲಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದಾಗ ಇದಕ್ಕಿದ್ದಂತೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ನಜ಼ರುದ್ದೀನ್‌ನ ಕೈನಲ್ಲಿ ಛತ್ರಿಯೊಂದು ಇದ್ದದ್ದನ್ನು ಗಮನಿಸಿದ ಗೆಳೆಯ ಹೇಳಿದ, “ಬೇಗನೆ ಛತ್ರಿ ಬಿಡಿಸು, ಇಲ್ಲದೇ ಇದ್ದರೆ ಸಂಪೂರ್ಣವಾಗಿ ಒದ್ದೆಯಾಗುತ್ತೇವೆ.”
ನಜ಼ರುದ್ದೀನ್‌ ಹೇಳಿದ, “ಅದರಿಂದೇನೂ ಪ್ರಯೋಜನವಾಗುವುದಿಲ್ಲ. ಛತ್ರಿಯಲ್ಲಿ ತುಂಬಾ ತೂತುಗಳಿವೆ.”
ಆಶ್ಚರ್ಯಚಕಿತನಾದ ಗೆಳೆಯ ಕೇಳಿದ, “ಅಂಥ ಛತ್ರಿಯನ್ನು ತಂದದ್ದಾದರೂ ಏಕೆ?”
ನಜ಼ರುದ್ದೀನ್‌ ವಿವರಿಸಿದ, “ಏಕೆಂದರೆ, ಈ ದಿನ ನಿಜವಾಗಿ ಮಳೆ ಬರುತ್ತದೆ ಎಂಬುದಾಗಿ ನಾನು ಅಂದುಕೊಂಡೇ ಇರಲಿಲ್ಲ!”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x