೧. ಬಲು ಚಳಿ
ಚಳಿಗಾಲದಲ್ಲಿ ವಿಪರೀತ ಚಳಿ ಇದ್ದ ಒಂದು ದಿನ ದಪ್ಪನೆಯ ಉಣ್ಣೆ ಬಟ್ಟೆಗಳನ್ನು ಧರಿಸಿದ್ದಾತನೊಬ್ಬ ಬಲು ತೆಳುವಾದ ಸಾಧಾರಣ ಬಟ್ಟೆ ಧರಿಸಿದ್ದ ನಜ಼ರುದ್ದೀನ್‌ನನ್ನು ಗಮನಿಸಿದ. ಅವನು ಕೇಳಿದ, “ಮುಲ್ಲಾ, ಇಷ್ಟೊಂದು ಬಟ್ಟೆ ಧರಿಸಿದ್ದರೂ ನನಗೆ ತುಸು ಚಳಿಯಾಗುತ್ತಿದೆ. ನೀನಾದರೋ ಬಟ್ಟೆಯೇ ಇಲ್ಲವೇನೋ ಅನ್ನಬಹುದಾದಷ್ಟು ಕಮ್ಮಿ ಬಟ್ಟೆ ಧರಿಸಿದ್ದರೂ ಈ ಶೀತಹವೆಯಿಂದ ಪ್ರಭಾವಿತನಾಗಿಲ್ಲ, ಏಕೆ?”
ನಜ಼ರುದ್ದೀನ್ ಉತ್ತರಿಸಿದ, “ಕಾರಣ ಇಷ್ಟೇ: ನನ್ನ ಹತ್ತಿರ ಇನ್ನೂ ಹೆಚ್ಚು ಬಟ್ಟೆಗಳಿಲ್ಲ, ಎಂದೇ ಚಳಿಯನ್ನು ಅನುಭವಿಸಲು ಸಾಧ್ಯವಿಲ್ಲ. ನಿಮ್ಮ ಹತ್ತಿರವಾದರೋ ಇನ್ನೂ ಹೆಚ್ಚು ಬಟ್ಟೆಗಳಿವೆ, ಎಂದೇ ತುಸು ಚಳಿ ಅನುಭವಿಸಲು ಸಾಧ್ಯವಾಗುತ್ತಿದೆ.”
*****
೨. ಊಟವೋ ಧರ್ಮೋಪದೇಶವೋ?
ಊರಿನ ಮತೀಯ ನಾಯಕನೊಬ್ಬ ನಜ಼ರುದ್ದೀನ್‌ನನ್ನು ರಾತ್ರಿಯ ಭೋಜನಕ್ಕೆ ಆಹ್ವಾನಿಸಿದ. ಆ ದಿನ ನಜ಼ರುದ್ದೀನ್ ಹೆಚ್ಚೇನೂ ತಿಂದಿರದೇ ಇದ್ದದ್ದರಿಂದ ನಾಯಕನ ಮನೆಗೆ ತಲುಪುವಾಗಲೇ ಬಲು ಹಸಿದಿದ್ದ. ಎಂದೇ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ತಿನ್ನಲು ಆರಂಭಿಸುವುದರಲ್ಲಿ ಉತ್ಸುಕನಾಗಿದ್ದ. ಆ ನಾಯಕನಾದರೋ ನಜ಼ರುದ್ದೀನನಿಗೆ ಉಣಬಡಿಸುವುದಕ್ಕೆ ಬದಲಾಗಿ ಮತಕ್ಕೆ ಸಂಬಂಧಿಸದಂತೆ ಅನೇಕ ವಿಷಯಗಳ ಕುರಿತು ನಿರಂತರವಾಗಿ ಮಾತನಾಡುತ್ತಲೇ ಇದ್ದ. ಎರಡು ತಾಸು ಕಳೆದರೂ ಅವನು ಮಾತು ನಿಲ್ಲಿಸುವ ಲಕ್ಷಣಗಳೇ ನಜ಼ರುದ್ದೀನನಿಗೆ ಗೋಚರಿಸಲಿಲ್ಲ. ಕೊನೆಗೊಮ್ಮೆ ರೇಗಿದ ನಜ಼ರುದ್ದೀನ್ ಅವನ ಮಾತಿನ ಪ್ರವಾಹಕ್ಕೆ ತಡೆಯೊಡ್ಡಿ ಹೇಳಿದ, “ನಾನು ನಿಮ್ಮನ್ನೊಂದು ವಿಷಯ ಕೇಳಬಹುದೇ?”
ತಾನು ಮಾತನಾಡುತ್ತಿದ್ದ ವಿಷಯಗಳಿಗೆ ಸಂಬಂಧಿಸಿದಂತೆ ಏನೋ ಪ್ರಶ್ನೆಯನ್ನು ನಜ಼ರುದ್ದೀನ್ ಕೇಳಬಹುದೆಂದೂ ಅದಕ್ಕೆ ಉತ್ತರವಾಗಿ ತಾನು ಇನ್ನಷ್ಟು ಮಾತನಾಡಬಹುದೆಂದೂ ಭಾವಿಸಿ ನಾಯಕ ಕೇಳಿದ, “ಏನು?”
ನಜರುದ್ದೀನ್ ಕೇಳಿದ, “ನನಗೊಂದು ಕುತೂಹಲ ಉಂಟಾಗಿದೆ. ನೀವು ಹೇಳುತ್ತಿದ್ದ ಕತೆಗಳಲ್ಲಿ ಉಲ್ಲೇಖಿತರಾದ ವ್ಯಕ್ತಿಗಳು ಯಾವಾಗಲಾದರೂ ಏನನ್ನಾದರೂ ತಿನ್ನುತ್ತಿದ್ದರೋ?”
*****
೩. ಮಗ ತನಗೆ ಹೆಂಡತಿಯಾಗಬಲ್ಲವಳೊಬ್ಬಳನ್ನು ಹುಡುಕುತ್ತಿದ್ದಾನೆ
ಮಗ ತನಗೆ ಹೆಂಡತಿಯಾಗಬಲ್ಲವಳೊಬ್ಬಳನ್ನು ಹುಡುಕುತ್ತಿದ್ದಾನೆ ಎಂಬ ವಿಷಯ ನಜ಼ರುದ್ದೀನ್‌ನಿಗೆ ತಿಳಿಯಿತು. ಅವಳು ಯಾವ ತೆರನಾದವಳಾಗಿರಬೇಕು ಎಂಬುದನ್ನು ನಜ಼ರುದ್ದೀನ್ ಮಗನ ಹತ್ತಿರ ವಿಚಾರಿಸಿದ.
ಮಗ ವಿವರಿಸಿದ, “ಬುದ್ಧಿವಂತಳೂ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವಳೂ ಆಗಿರಬೇಕು.”
“ಸರಿ. ಅಂಥವಳೊಬ್ಬಳನ್ನು ಹುಡುಕಲು ನಾನು ನಿನಗೆ ನೆರವು ನೀಡುತ್ತೇನೆ,” ಪ್ರತಿಕ್ರಿಯಿಸಿದ ನಜ಼ರುದ್ದೀನ್.
ಹುಡುಕುವಿಕೆಯ ಯೋಜನೆಯ ಮೊದಲನೇ ಕ್ರಮವಾಗಿ ನಜ಼ರುದ್ದೀನ್ ಮಗನನ್ನು ಪಟ್ಟಣದ ಮುಖ್ಯ ಚೌಕಿಗೆ ಕರೆದುಕೊಂಡು ಹೋದ. ಅಲ್ಲಿ ಅವನು ಎಲ್ಲರ ಎದುರು ಮಗನ ಕಪಾಳಕ್ಕೆ ಹೊಡೆದು ಹೇಳಿದ, “ನಾನು ಹೇಳಿದಂತೆಯೇ ನೀನು ಮಾಡಿದರೆ ನಿನಗೆ ಸಿಕ್ಕುವುದು ಇದೇ ಆಗಿರುತ್ತದೆ.”
ಚಿಕ್ಕ ಪ್ರಾಯದ ಒಬ್ಬಳು ಹುಡುಗಿ ಇದನ್ನು ನೋಡಿ ನಜ಼ರುದ್ದೀನ್‌ನಿಗೆ ಕೂಗಿ ಹೇಳಿದಳು, “ಅವನಿಗೆ ಹೊಡೆಯುವುದನ್ನು ನಿಲ್ಲಿಸು. ನೀನು ಹೇಳಿದಂತೆ ಕೇಳುವ ಅವನಿಗೆ ಹೊಡೆಯುವುದು ಸರಿಯೇ?”
ಅವಳ ಮಾತುಗಳನ್ನು ಕೇಳಿದ ಮಗ ಕೇಳಿದ, “ಅವಳು ನನಗೆ ಸರಿಯಾದ ಜೋಡಿ ಆಗಬಲ್ಲಳು ಎಂಬುದಾಗಿ ನನಗನ್ನಿಸುತ್ತದೆ. ನಿನ್ನ ಅಭಿಪ್ರಾಯವೇನು?”
ನಜ಼ರುದ್ದೀನ್ ಉತ್ತರಿಸಿದ, “ಖಂಡಿತವಾಗಿಯೂ ಅವಳು ಬುದ್ಧಿವಂತಳೂ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವಳೂ ಆಗಿದ್ದಾಳೆ. ಅದರೂ ಅವಳಿಗಿಂತ ಉತ್ತಮವಾದವಳೊಬ್ಬಳು ಸಿಕ್ಕಿದರೂ ಸಿಕ್ಕಬಹುದು ನೋಡೋಣ.”
ನಜ಼ರುದ್ದೀನ್ ಮಗನನ್ನು ಪಕ್ಕದ ಪಟ್ಟಣಕ್ಕೆ ಕರೆದೊಯ್ದು ಅಲ್ಲಿಯೂ ಹಿಂದಿನಂತೆಯೇ ಮಾಡಿದ.
ಅಲ್ಲಿಯೂ ಚಿಕ್ಕ ಪ್ರಾಯದ ಒಬ್ಬಳು ಹುಡುಗಿ ಇದನ್ನು ನೋಡಿ ನಜ಼ರುದ್ದೀನ್‌ನಿಗೆ ಕೂಗಿ ಹೇಳಿದಳು, “ಅವನಿಗೆ ಇನ್ನೂ ನಾಲ್ಕು ಬಾರಿಸು. ಒಬ್ಬ ಅವಿವೇಕಿ ಮಾತ್ರ ಆಜ್ಞೆಯನ್ನು ಕುರುಡಾಗಿ ಪಾಲಿಸುತ್ತಾನೆ.”
ನಜ಼ರುದ್ದೀನ್ ಹೇಳಿದ, “ಮಗನೇ, ಮೊದಲನೆಯವಳು ಬುದ್ಧಿವಂತಳೂ ತನ್ನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವಳೂ ಆಗಿದ್ದಳು. ಈಕೆಯಾದರೋ ಸಂಪೂರ್ಣವಾಗಿ ಇನ್ನೂ ಮೇಲಿನ ಸ್ತರದಲ್ಲಿದ್ದಾಳೆ. ನಿನ್ನ ಭಾವೀ ಹೆಂಡತಿ ಸಿಕ್ಕಿದಳು ಅಂದನ್ನಿಸುತ್ತಿದೆ.”
*****
೪. ಗಿಟಾರ್ ವಾದಕ ನಜ಼ರುದ್ದೀನ್
ನಝರುದ್ದೀನ್‌ನನ್ನು ಪಟ್ಟಣದ ಮುಖ್ಯ ಚೌಕಿಯಲ್ಲಿದ್ದ ಜನರ ಗುಂಪೊಂದು ಅವನಿಗೆ ಗಿಟಾರ್ ನುಡಿಸಲು ಬರುತ್ತದೆಯೇ ಎಂಬುದಾಗಿ ಕೇಳಿತು. ನಜ಼ರುದ್ದೀನ್‌ನಿಗೆ ಗಿಟಾರ್ ನುಡಿಸಲು ಬರುತ್ತಿರಲಿಲ್ಲವಾದರೂ ಹೇಳಿದ, “ಓ, ಬರುತ್ತದೆ. ನಾನೊಬ್ಬ ನುರಿತ ಗಿಟಾರ್ ವಾದಕ. ನಿಜ ಹೇಳಬೇಕೆಂದರೆ ಜಗತ್ತಿನಲ್ಲಿಯೇ ಶ್ರೇಷ್ಠನಾದ ಗಿಟಾರ್ ವಾದಕ ನಾನು.”
ಅಲ್ಲಿದ್ದವರು ಅವನು ಆ ರೀತಿ ಬಡಾಯಿ ಕೊಚ್ಚಿಕೊಳ್ಳುತ್ತಾನೆ ಎಂಬುದನ್ನು ನಿರೀಕ್ಷಿಸಿದ್ದರು. ಆದ್ದರಿಂದ ಆ ತಕ್ಷಣವೇ ಒಬ್ಬ ಗಿಟಾರ್ ಒಂದನ್ನು ನಜ಼ರುದ್ದೀನ್‌ನಿಗೆ ಕೊಟ್ಟು ನುಡಿಸಲು ಹೇಳಿದ. ನಜ಼ರುದ್ದೀನ್ ಅದನ್ನು ತೆಗೆದುಕೊಂಡು ಒಂದೇ ಒಂದು ತಂತಿಯನ್ನು ಮೀಟುತ್ತಾ ನುಡಿಸಲಾರಂಭಿಸಿದ. ಒಂದು ನಿಮಿಷವಾದ ನಂತರ ಯಾರೋ ಅವನನ್ನು ತಡೆದು ಕೇಳಿದರು, “ಮುಲ್ಲಾ, ಗಿಟಾರ್ ವಾದಕರು ಅದರಲ್ಲಿರುವ ಎಲ್ಲ ತಂತಿಗಳ ಮೇಲೂ ಕೈಯಾಡಿಸುವುದನ್ನು ನೋಡಿದ್ದೇವೆ. ನೀನಾದರೋ ಒಂದೇ ಒಂದು ತಂತಿಯನ್ನು ಮಾತ್ರ ಮೀಟುತ್ತಿರುವೆಯಲ್ಲಾ, ಏಕೆ?”
ನಜ಼ರುದ್ದೀನ್ ಉತ್ತರಿಸಿದ, “ಓ ಅದೋ. ಅದೇಕೆಂದರೆ ಅವರೆಲ್ಲಾ ತಮಗೆ ಬೇಕಾದ ಒಂದು ನಿರ್ದಿಷ್ಟ ತಂತಿಯನ್ನು ಹುಡುಕುತ್ತಾ ಎಲ್ಲ ತಂತಿಗಳ ಮೇಲೆ ಕೈಯಾಡಿಸುತ್ತಾರೆ. ನಾನಾದರೋ ಮೊದಲನೇ ಪ್ರಯತ್ನದಲ್ಲಿಯೇ ನನಗೆ ಬೇಕಾದ ತಂತಿಯನ್ನು ನಿಖರವಾಗಿ ಗುರುತಿಸಿದ್ದರಿಂದ ಉಳಿದ ತಂತಿಗಳನ್ನು ಮೀಟಿ ಪರೀಕ್ಷಿಸುವ ಗೊಡವೆಗೆ ಹೋಗಲಿಲ್ಲ!”
*****
೫. ನಜ಼ರುದ್ದೀನ್‌ನ ಹಸು
ಒಂದು ದಿನ ನಜ಼ರುದ್ದೀನ್‌ನ ಹೆಂಡತಿ ಹೇಳಿದಳು, “ನಾವೊಂದು ಹಸು ಕೊಂಡುಕೊಳ್ಳೋಣ. ಆಗ ನಾವು ಪ್ರತೀ ದಿನ ಹಾಲು ಕುಡಿಯಬಹುದು.”
ನಜರುದ್ದೀನ್ ಪ್ರತಿಕ್ರಿಯಿಸಿದ, “ನಮ್ಮ ಕೊಟ್ಟಿಗೆಯಲ್ಲಿ ಈಗ ಇರುವ ನನ್ನ ಕತ್ತೆ ಹಾಗು ಹೊಸ ಹಸು ಎರಡನ್ನೂ ಕಟ್ಟಲು ಸ್ಥಳಾವಕಾಶ ಇಲ್ಲ.”
ನಜ಼ರುದ್ದೀನ್‌ನ ಪ್ರತಿರೋಧವಿದ್ದಾಗ್ಯೂ ಹೆಂಡತಿ ಪಟ್ಟು ಹಿಡಿದಿದ್ದರಿಂದ ಅವನು ಸಮ್ಮತಿಸಲೇ ಬೇಕಾಯಿತು.
ಅಂತೂ ಕೊನೆಗೊಂದು ಹಸುವನ್ನು ಮನೆಗೆ ತಂದದ್ದಾಯಿತು. ತತ್ಪರಿಣಾಮವಾಗಿ ನಜ಼ರುದ್ದೀನ್ ಮೊದಲೇ ಹೇಳಿದ್ದಂತೆ ಅವನ ಪ್ರೀತಿಯ ಕತ್ತೆ ಬಲು ಕಿರಿದಾದ ಜಾಗದಲ್ಲಿ ಇರಬೇಕಾಯಿತು. ಇದರಿಂದ ಬೇಸರಗೊಂಡ ಆತ ಒಂದು ರಾತ್ರಿ ಇಂತು ಪ್ರಾರ್ಥನೆ ಮಾಡಿದ: “ಓ ದೇವರೇ, ದಯವಿಟ್ಟು ಆ ಹಸುವನ್ನು ಸಾಯಿಸು ಹಾಗು ಮುಂದೆಂದೂ ನನ್ನ ಹೆಂಡತಿ ನನ್ನನ್ನು ಪೀಡಿಸದಂತೆ ಮಾಡು. ನನ್ನ ಕತ್ತೆ ನೆಮ್ಮದಿಯಿಂದ ಜೀವಿಸುವಂತಾಗಲಿ.”
ಮಾರನೆಯ ದಿನ ನಜ಼ರುದ್ದೀನ್ ಕೊಟ್ಟಿಗೆಗೆ ಹೋಗಿ ನೋಡಿದಾಗ ಅವನ ಪ್ರೀತಿಯ ಕತ್ತೆ ಸತ್ತು ಬಿದ್ದಿತ್ತು! ಅವನು ಆಕಾಶದತ್ತ ನೋಡುತ್ತಾ ಹೇಳಿದ, “ಓ ದೇವರೇ, ನಿನ್ನ ಮನನೋಯಿಸುವ ಉದ್ದೇಶ ನನಗಿಲ್ಲವಾದರೂ ಒಂದು ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ. ನೀನು ಅದೇಷ್ಟೋ ವರ್ಷಗಳಿಂದ ಇದ್ದರೂ ಕತ್ತೆಗೂ ಹಸುವಿಗೂ ನಡುವಣ ವ್ಯತ್ಯಾಸ ನಿನಗಿನ್ನೂ ತಿಳಿದಿಲ್ಲವೇ?”
*****