ಝೆನ್-ಸೂಫಿ ಕತೆಗಳು

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ನಾವು ಪಕ್ಕಾ ಕೆಲಸಗಾರರು
ಒಮ್ಮೆ ನಜ಼ರುದ್ದೀನ್ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಒಂದು ದಿನ ಒಬ್ಬಾತ ಅವನ ಹತ್ತಿರ ಓಡಿ ಬಂದು ಹೇಳಿದ, “ಈ ಹಳ್ಳಿಯ ಗಡಿಯ ಸಮೀಪದಲ್ಲಿ ನನ್ನನ್ನು ಲೂಟಿ ಮಾಡಿದ್ದಾರೆ. ಕಳ್ಳ ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ – ನನ್ನ ಪಾದರಕ್ಷೆಗಳು, ನನ್ನ ಷರಾಯಿ, ನನ್ನ ಅಂಗಿ, ನನ್ನ ಮೇಲಂಗಿ, ನನ್ನ ಕಂಠಹಾರ, ನನ್ನ ಕಾಲುಚೀಲಗಳನ್ನೂ ಬಿಡಲಿಲ್ಲ – ನನ್ನ ಹತ್ತಿರವಿದ್ದ ಎಲ್ಲವನ್ನೂ ಕಿತ್ತುಕೊಂಡ. ಅವನನ್ನು ಪತ್ತೆಹಚ್ಚಿ ನನಗೆ ನ್ಯಾಯ ಕೊಡಿಸಿ.”
ನಜ಼ರುದ್ದೀನ್‌ ಹೇಳಿದ, “ಸರಿ ನೋಡೋಣ. ಆದರೆ ನೀನೀಗ ಒಳ ಉಡುಪುಗಳನ್ನು ಧರಿಸಿರುವೆ. ಅಂದಮೇಲೆ ಕಳ್ಳ ಅದನ್ನು ಕಿತ್ತುಕೊಂಡಿಲ್ಲ, ಅಲ್ಲವೇ?”
“ಇಲ್ಲ.”
“ಅಂದಮೇಲೆ ಕಳ್ಳ ಈ ಊರಿನವನಲ್ಲ ಎಂಬುದು ಖಾತರಿ. ಆದ್ದರಿಂದ ಈ ಪ್ರಕರಣವನ್ನು ನಾನು ತನಿಖೆ ಮಾಡಿಸಲು ಸಾಧ್ಯವಿಲ್ಲ, ಇದು ನನ್ನ ಕಾರ್ಯವ್ಯಾಪ್ತಿಯಲ್ಲಿ ಇಲ್ಲ.”
“ಅಷ್ಟು ಖಚಿತವಾಗಿ ಹೇಗೆ ಹೇಳುವಿರಿ?”
“ಹೇಗೆ ಹೇಳುತ್ತೇನೆ!, ಅವನು ಇಲ್ಲಿಯವನಾಗಿದ್ದಿದ್ದರೆ ನಿನ್ನ ಒಳ ಉಡುಪುಗಳನ್ನೂ ಕಿತ್ತುಕೊಳ್ಳುತ್ತಿದ್ದ. ನಾವು, ಇಲ್ಲಿಯವರು ಏನನ್ನೇ ಮಾಡಲಿ, ಪರಿಪೂರ್ಣವಾಗಿ ಮಾಡುತ್ತೇವೆ. ನಾವು ಪಕ್ಕಾ ಕೆಸಗಾರರು!”

*****

೨. ಸೇಡು ತೀರಿಸಿಕೊಳ್ಳುವಿಕೆ 
ನಜ಼ರುದ್ದೀನ್‌ ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಒಂದು ದಿನ ಹೆಂಗಸೊಬ್ಬಳು ಬಂದು ತನಗೆ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿದಳು, “ನಾನು ರಸ್ತೆಯಲ್ಲಿ ಹೋಗುತ್ತಿದ್ದಾಗ ಆ ತನಕ ನಾನು ಭೇಟಿ ಮಾಡದೇ ಇದ್ದ ಪುರುಷನೊಬ್ಬ ಬಂದು ನನಗೆ ಮುತ್ತು ಕೊಟ್ಟ! ನನಗೆ ನ್ಯಾಯ ದೊರಕಿಸಿ ಕೊಡಿ!”
ನಜ಼ರುದ್ದೀನ್ ಉದ್ಗರಿಸಿದ, “ನಿನಗೆ ನ್ಯಾಯ ಸಿಕ್ಕಲೇ ಬೇಕು ಎಂಬ ವಿಷಯವನ್ನು ನಾನು ಒಪ್ಪುತ್ತೇನೆ. ಆದ್ದರಿಂದ ನೀನು ಅವನಿಗೊಂದು ಮುತ್ತು ಕೊಟ್ಟು ಸೇಡು ತೀರಿಸಿಕೊ ಎಂಬುದಾಗಿ ಆಜ್ಞೆ ಮಾಡುತ್ತಿದ್ದೇನೆ!”

*****

೩. ನಾನು ಯಾವಾಗಲೂ ಇತರರ ಕುರಿತೇ ಆಲೋಚಿಸುತ್ತೇನೆ
ವಿರಕ್ತ: “ನನ್ನ ಕುರಿತಾದ ಅನಾಸಕ್ತಿಯ ಒಂದು ನಂಬಲಸಾಧ್ಯವಾದ ಮಟ್ಟವನ್ನು ನಾನು ಸಾಧಿಸಿದ್ದೇನೆ — ತತ್ಪರಿಣಾಮವಾಗಿ ನಾನು ಯಾವಾಗಲೂ ಇತರರ ಕುರಿತಾಗಿಯೇ ಆಲೋಚಿಸುತ್ತಿರುತ್ತೇನೆ, ನನ್ನ ಕುರಿತಾಗಿ ಎಂದೂ ಆಲೋಚಿಸುವುದಿಲ್ಲ.”
ನಜ಼ರುದ್ದೀನ್‌: “ನಾನು ಅದಕ್ಕಿಂತ ಮುಂದುವರಿದ ಸ್ಥಿತಿಯನ್ನು ತಲುಪಿದ್ದೇನೆ.”
ವಿರಕ್ತ: “ಏನದು?”
ನಜ಼ರುದ್ದೀನ್‌: “ನಾನು ಎಷ್ಟು ವಿಷಯನಿಷ್ಠನಾಗಿರುತ್ತೇನೆ ಅಂದರೆ ಇನ್ನೊಬ್ಬನನ್ನು ನಿಜವಾಗಿ ನಾನೇ ಎಂಬಂತೆ ನೋಡುತ್ತೇನೆ. ಅಂತು ಮಾಡುವುದರಿಂದ ಸದಾ ನನ್ನ ಕುರಿತೇ ನಾನು ಆಲೋಚಿಸುತ್ತಿರಲು ಸಾಧ್ಯವಾಗುತ್ತದೆ!”

*****

೪. ತರಕಾರಿ ಮೂಟೆ
ನಜ಼ರುದ್ದೀನ್‌ ಬೇರೆ ಯಾರದೋ ತೋಟಕ್ಕೆ ಸದ್ದಿಲ್ಲದೆ ಹೋಗಿ ತರಕಾರಿಯನ್ನು ಕೊಯ್ದು ತನ್ನೊಂದಿಗಿದ್ದ ಚೀಲಕ್ಕೆ ತುಂಬಿಸಲಾರಂಭಿಸಿದ. ತೋಟದ ಮಾಲಿಕ ಅವನನ್ನು ನೋಡಿ ಬೊಬ್ಬೆ ಹಾಕಿದ, “ನನ್ನ ತೋಟದಲ್ಲಿ ನೀನೇನು ಮಾಡುತ್ತಿರುವೆ?”
ನಜ಼ರುದ್ದೀನ್ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದ, “ಗಾಳಿ ಜೋರಾಗಿ ಬೀಸಿ ನನ್ನನ್ನು ಇಲ್ಲಿಗೆ ತಂದು ಹಾಕಿತು.”
ಮಾಲಿಕ ಹೇಳಿದ, “ಅದು ಹಸಿಹಸಿ ಸುಳ್ಳು ಎಂಬುದಾಗಿ ನನಗನ್ನಿಸುತ್ತಿದೆ. ನೀನು ಹೇಳಿದ್ದು ನಿಜ ಅಂದುಕೊಳ್ಳೋಣ. ಆದರೆ ನನ್ನ ತೋಟದ ತರಕಾರಿಯನ್ನು ನೀನು ಕಿತ್ತದ್ದು ಏಕೆ ಎಂಬುದನ್ನು ವಿವರಿಸು ನೋಡೋಣ.”
ನಜ಼ರುದ್ದೀನ್‌ ವಿವರಿಸಿದ, “ಓ ಅದು ಬಹಳ ಸರಳವಾದ ವಿಷಯ. ಗಾಳಿ ನನ್ನನ್ನು ಎಲ್ಲಿಗೋ ಬಹುದೂರಕ್ಕೆ ಒಯ್ಯುವುದನ್ನು ತಪ್ಪಿಸಲೋಸುಗ ಅವನ್ನು ನಾನು ಹಿಡಿದುಕೊಳ್ಳಬೇಕಾಯಿತು.”
ಮಾಲಿಕ ಅಷ್ಟಕ್ಕೇ ಸುಮ್ಮನಾಗಲಿಲ್ಲ, “ಹಾಗಿದ್ದರೆ ಆ ತರಕಾರಿ ನಿನ್ನ ಚೀಲದೊಳಕ್ಕೆ ಹೋದದ್ದು ಹೇಗೆ ಎಂಬುದನ್ನು ಹೇಳು ನೋಡೋಣ.”
ನಜ಼ರುದ್ದೀನ್ ಉತ್ತರಿಸಿದ, “ನಿನಗೊಂದು ವಿಷಯ ಗೊತ್ತಿದೆಯೇ? ಇಲ್ಲಿ ನಿಂತುಕೊಂಡು ಅದು ಹೇಗಾಯಿತೆಂಬುದನ್ನು ನಾನೂ ಆಶ್ಚರ್ಯ ಪಡುತ್ತಿದ್ದೆ!”

*****

೫. ನಜ಼ರುದ್ದೀನ್‌ ಪೆಟ್ಟು ತಿಂದದ್ದು
ಒಂದು ದಿನ ನಜ಼ರುದ್ದೀನ್‌ ಪಕ್ಕಾ ಅರಬ್‌ ಉಡುಪನ್ನು ಧರಿಸಲು ನಿರ್ಧರಿಸಿದ. ಅವನು ಮನೆಗೆ ಹಿಂದಿರುಗಿ ಬಂದಾಗ ಅವನ ಬಟ್ಟೆ ಹರಿದು ಚಿಂದಿಚಿಂದಿಯಾಗಿತ್ತು.
ಅವನ ಹೆಂಡತಿ ಕೇಳಿದಳು, “ನಿಮಗೇನಾಯಿತು? ಯಾರಾದರೂ ಹೊಡೆದರೇನು?”
ನಜ಼ರುದ್ದೀನ್‌ ಉತ್ತರಿಸಿದ, “ಹೌದು.”
ಅವಳು ವಿಚಾರಿಸಿದಳು, “ಏಕೆ? ಈ ತೆರನಾದ ಉಡುಪು ಧರಿಸಿದ್ದಕ್ಕೆ ಯಾರೂ ಹೊಡೆಯುವುದಿಲ್ಲವಲ್ಲ?”
ನಜ಼ರುದ್ದೀನ್ ಹೇಳಿದ, “ಅರಬ್ಬನೊಬ್ಬನಿಗೆ ಹೊಡೆಯಲೇಬೇಕೆಂದು ತೀರ್ಮಾನಿಸಿದ್ದ ಕರ್ಡ್‌ ದೇಶವಾಸಿಗಳ ಗುಂಪಿಗೆ ಅದನ್ನು ಹೇಳು.”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *