೧. ನೀನೇಕೆ ಇಲ್ಲಿರುವೆ?
ಒಂದು ದಿನ ನಜ಼ರುದ್ದೀನ್ ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಕತ್ತಲಾಗುತ್ತಿದ್ದಾಗ ಕುದುರೆ ಸವಾರರ ತಂಡವೊಂದು ಅವನತ್ತ ಬರುತ್ತಿದ್ದದ್ದನ್ನು ನೋಡಿದ. ಅವನ ಕಲ್ಪನಾಶಕ್ತಿ ಬಲು ಚುರಕಾಗಿ ಕಾರ್ಯೋನ್ಮುಖವಾಯಿತು. ಅವರು ತನ್ನನ್ನು ದರೋಡೆ ಮಾಡಲೋ ಅಥವ ತನ್ನನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲೋ ಬರುತ್ತಿದ್ದಾರೆಂದು ಅವನು ಊಹಿಸಿಕೊಂಡು ಭಯಭೀತನಾದ. ಭಯ ಎಷ್ಟು ತೀವ್ರವಾಗಿತ್ತೆಂದರೆ ಅವರಿಂದ ತಪ್ಪಿಸಿಕೊಳ್ಳಲೇಬೇಕೆಂಬ ಛಲ ಮೂಡಿ ಪಕ್ಕದಲ್ಲಿದ್ದ ಎತ್ತರದ ಗೋಡೆಯೊಂದನ್ನು ಹೇಗೋ ಹತ್ತಿ ಇನ್ನೊಂದು ಪಕ್ಕಕ್ಕೆ ಹಾರಿದ. ಅದೊಂದು ಸ್ಮಶಾನ ಎಂಬುದು ಅವನಿಗೆ ಆಗ ತಿಳಿಯಿತು. ನಜ಼ರುದ್ದೀನ್ ಕಲ್ಪಿಸಿಕೊಂಡಿದ್ದ ಉದ್ದೇಶಗಳು ಕುದುರೆ ಸವಾರರ ತಂಡದವರದ್ದು ಆಗಿರಲಿಲ್ಲ. ಎಂದೇ, ನಜ಼ರುದ್ದೀನನ ವರ್ತನೆ ಅವರ ಕುತೂಹಲವನ್ನು ಕೆರಳಿಸಿತು. ಅವರೂ ಸ್ಮಶಾನದೊಳಕ್ಕೆ ಬಂದರು.
ಅಲ್ಲಿ ಮೌನವಾಗಿ ಮಲಗಿದ್ದ ನಜ಼ರುದ್ದೀನನನ್ನು ಪತ್ತೆಹಚ್ಚಿ “ನಿನಗೇನಾದರೂ ಸಹಾಯ ಮಾಡಬೇಕೇ? ನೀನೇಕೆ ಇಂತು ಇಲ್ಲಿ ಮಲಗಿರುವೆ?” ಎಂಬುದಾಗಿ ಕೇಳಿದರು. ತನ್ನ ತಪ್ಪಿನ ಅರಿವಾದ ನಜ಼ರುದ್ದೀನ್ ಉತ್ತರಿಸಿದ, “ಇದಕ್ಕೆ ಕಾರಣ ನೀವು ಊಹಿಸಿದ್ದಕ್ಕಿಂತ ಸಂಕೀರ್ಣವಾಗಿದೆ. ನೋಡಿ, ನಾನು ಇಂತಿರಲು ಕಾರಣ ನೀವು, ನೀವು ಇಲ್ಲಿಗೆ ಬರಲು ಕಾರಣ ನಾನು!”
*****
೨. ವರ್ಣಾಂಧತೆ
ರಾಜನ ಕ್ಷೌರಿಕ ಒಂದು ದಿನ ರಾಜನ ದಾಡಿಯನ್ನು ಒಪ್ಪ ಮಾಡತ್ತಾ ಹೇಳಿದ, “ಮಹಾಪ್ರಭುಗಳ ದಾಡಿ ಬಿಳಿಯಾಗಲಾರಂಭಿಸಿದೆ.”
ಈ ಹೇಳಿಕೆಯನ್ನು ಕೇಳಿ ಕೋಪೋದ್ರಿಕ್ತನಾದ ರಾಜ ಕ್ಷೌರಿಕನನ್ನು ಎರಡು ವರ್ಷ ಕಾಲ ಸೆರೆಮನೆಯಲ್ಲಿ ಬಂಧಿಯಾಗಿರಿಸುವಂತೆ ಆಜ್ಞಾಪಿಸಿದ.
“ನನ್ನ ದಾಡಿಯಲ್ಲಿ ನಿನಗೇನಾದರೂ ಬಿಳಿ ಕೂದಲು ಕಾಣಿಸುತ್ತಿದೆಯೇ?” ಆಸ್ಥಾನಿಕನೊಬ್ಬನನ್ನು ರಾಜ ಕೇಳಿದ.
“ಹೆಚ್ಚುಕಮ್ಮಿ ಒಂದೂ ಇಲ್ಲವೇ ಇಲ್ಲ,” ಎಂಬುದಾಗಿ ಆ ಆಸ್ಥಾನಿಕ ತುಸು ಹಿಂಜರಿಯುತ್ತಾ ಉತ್ತರಿಸಿದ.
“ಹೆಚ್ಚುಕಮ್ಮಿ ಅಂದರೇನರ್ಥ?” ಎಂಬುದಾಗಿ ಅರಚಿದ ರಾಜ ಅವನನ್ನು ಮೂರು ವರ್ಷಕಾಲ ಸೆರೆಮನೆಯಲ್ಲಿ ಬಂಧಿಯಾಗಿರಿಸುವಂತೆ ಆಜ್ಞಾಪಿಸಿದ. ಇದರಿಂದಾಗಿ ಅರಮನೆಯ ಪ್ರತೀ ನಿವಾಸಿಯೂ ಹೆದರುವಂತಾಯಿತು.
ಹತ್ತಿರದಲ್ಲಿ ನಿಂತಿದ್ದ ಸೇವಕನೊಬ್ಬನಯ್ತ ತಿರುಗಿ ರಾಜ ಕೇಳಿದ, “ನೀನೇನು ಹೇಳುವೆ?”
“ಬಿಳಿಗೂದಲು?” ಉದ್ಗರಿಸಿದ ಆ ಸೇವಕ. “ಖಂಡಿತ ಇಲ್ಲ ಮಹಾಪ್ರಭು, ಖಂಡಿತ ಇಲ್ಲ. ಕಗ್ಗತ್ತಲ ರಾತ್ರಿಗಿಂತ ಕಪ್ಪಾಗಿದೆ ನಿಮ್ಮ ಅತ್ಯಂತ ಸುಂದರವಾದ ದಾಡಿ.”
“ನೀನೊಬ್ಬ ಮಹಾ ಸುಳ್ಳುಗಾರ!” ಕಿರುಚಿದ ರಾಜ. “ ಇವನಿಗೆ ೧೦ ಛಡಿಏಟು ಕೊಡಿ. ನಂತರ ನಾಲ್ಕು ವರ್ಷ ಕಾಲ ಸೆರೆಮನೆ ವಾಸ ಅನುಭವಿಸಿಲಿ.” ಆಜ್ಞಾಪಿಸಿದ ರಾಜ.
ಕೊನೆಯಲ್ಲಿ ನಜ಼ರುದ್ದೀನನ ಕಡೆಗೆ ರಾಜ ತಿರುಗಿ ಕೇಳಿದ, “ಮುಲ್ಲಾ, ನನ್ನ ದಾಡಿಯ ಬಣ್ಣವೇನು?”
ನಜ಼ರುದ್ದೀನ್ ಉತ್ತರಿಸಿದ, “ ಮಹಾಪ್ರಭು, ನಾನು ವರ್ಣಾಂಧನಾದ್ದರಿಂದ ಆ ಪ್ರಶ್ನಗೆ ಉತ್ತರ ಹೇಳಲು ಸಾಧ್ಯವಿಲ್ಲ!”
*****
೩. ಸಾಲ ಮರುಪಾವತಿ
ಹೋಜ ಮಾರುಕಟ್ಟೆಯಲ್ಲಿ ಆಲಿವ್‌ಗಳನ್ನು ಮಾರುತ್ತಿದ್ದ. ವ್ಯಾಪಾರ ಹೇಳಿಕೊಳ್ಳುವಷ್ಟು ಚೆನ್ನಾಗಿ ಆಗುತ್ತಿರಲಿಲ್ಲ. ಸಮೀಪದಲ್ಲಿ ಹೋಗುತ್ತಿದ್ದ ಹೆಂಗಸೊಬ್ಬಳನ್ನು ಕರೆದು ಆಲಿವ್ ಕೊಳ್ಳುವಂತೆ ಅವಳ ಮನವೊಲಿಸಲು ಪ್ರಯತ್ನಿಸಿದ. ಅವಳು ಬೇಡವೆಂದು ತಲೆಯಾಡಿಸುತ್ತ ತನ್ನ ಹತ್ತಿರ ಹಣವಿಲ್ಲವೆಂಬುದಾಗಿ ಹೇಳಿದಳು.
“ಅದೊಂದು ಸಮಸ್ಯೆಯೇ ಅಲ್ಲ,” ಹಲ್ಲುಕಿರಿದ ಹೋಜ. “ನೀನು ನನಗೆ ಆಮೆಲೆ ಹಣ ಕೊಟ್ಟರೆ ಸಾಕು.” ಆಗಲೂ ಅವಳು ಆಲಿವ್ ಕೊಳ್ಳಲು ಉತ್ಸಾಹ ತೋರಿಸಲಿಲ್ಲ. ರುಚಿ ನೋಡಲು ಒಂದು ಆಲಿವ್‌ಅನ್ನು ಹೋಜ ಅವಳಿಗೆ ಕೊಡಲು ಮುಂದಾದ.
“ಬೇಡ ಬೇಡ. ನಾನೀಗ ಉಪವಾಸ ಮಾಡುತ್ತಿದ್ದೇನೆ,” ಅವಳು ಪ್ರತಿಕ್ರಿಯಿಸಿದಳು.
“ಉಪವಾಸವೇ? ರಾಮದಾನ ಹಬ್ಬ ಆರು ತಿಂಗಳ ಹಿಂದೆಯೇ ಆಯಿತಲ್ಲ?”
“ಅದು ನಿಜ. ಆಗ ನಾನು ಒಂದು ದಿನ ಉಪವಾಸ ಮಾಡಲು ಸಾಧ್ಯವಾಗಲಿಲ್ಲ, ಅದಕ್ಕೆ ಬದಲಾಗಿ ಈಗ ಮಾಡುತ್ತಿದ್ದೇನೆ. ಸರಿ ಹಾಗಾದರೆ ಒಂದು ಕಿಲೋ ಕಪ್ಪು ಆಲಿವ್‌ಗಳನ್ನು ಕೊಡು.”
“ಆಲಿವ್‌ಗಳನ್ನು ಮರೆತುಬಿಡು!” ಬೊಬ್ಬೆಹಾಕಿದ ಹೋಜ. “ಅಲ್ಲಾನ ಸಾಲ ಮರುಪಾವತಿಸಲು ನಿನಗೆ ೬ ತಿಂಗಳು ಬೇಕಾಯಿತು ಅನ್ನುವುದಾದರೆ ನನ್ನ ಸಾಲ ಯಾವಾಗ ಮರುಪಾವತಿಸುವೆ ಎಂಬುದನ್ನು ಹೇಗೆ ಹೇಳಲು ಸಾಧ್ಯ?”
*****
೪. ಸೋಮಾರಿಯ ಹೊರೆ
ಸದಾ ಅಧಿಕ ಕೆಲಸದೊತ್ತಡವಿರುತ್ತಿದ್ದ ಧಾನ್ಯಾಗಾರವೊಂದರಲ್ಲಿ ಧಾನ್ಯಗಳನ್ನು ಮಾರುಕಟ್ಟೆಗೆ ಒಯ್ಯುವ ಬಂಡಿಗಳಿಗೆ ಧಾನ್ಯದ ಮೂಟೆಗಳನ್ನು ತುಂಬುವ ಕೆಲಸವೊಂದು ನಜ಼ರುದ್ದೀನನಿಗೆ ಸಿಕ್ಕಿತು. ಸದಾ ಕೆಲಸದವರನ್ನು ವೀಕ್ಷಿಸುತ್ತಲೇ ಇರುತ್ತಿದ್ದ ಮೇಲ್ವಿಚಾರಕ ಅವನೊಂದಿಗೆ ಮಾತನಾಡಲೋಸುಗವೇ ಅವನ ಹತ್ತಿರಕ್ಕೆ ಬಂದ.
ಆತ ಕೇಳಿದ, “ಎಲ್ಲರೂ ಒಂದು ಬಾರಿಗೆ ಎರಡು ಮೂಟೆಗಳನ್ನು ಹೊರುತ್ತಿದ್ದಾರೆ. ಆದರೆ ನೀನು ಮಾತ್ರ ಒಂದೇ ಮೂಟೆ ಹೊರುತ್ತಿರುವುದೇಕೆ?”
ನಜ಼ರುದ್ದೀನ್ ಸುತ್ತಲೂ ಒಮ್ಮೆ ನೋಡಿ ಹೇಳಿದ, “ನಾನು ಮಾಡುತ್ತಿರುವಂತೆ ಎರಡು ಬಾರಿ ಬಂದು ಹೋಗಲಾರದಷ್ಟು ಸೋಮಾರಿಗಳು ಅವರಾಗಿರಬೇಕು!”
*****
೫. ಮೊದಲು ಬಲಗಾಲು
ಒಂದು ದಿನ ನಜ಼ರುದ್ದೀನ್ ಉಡುಪು ಧರಿಸುತ್ತಿರುವಾಗ ಅವನ ಹೆಂಡತಿ ಕೇಳಿದಳು, “ಮುಲ್ಲಾ ನೀವು ಯಾವಾಗಲೂ ಮೊದಲು ಬಲಗಾಲಿಗೆ ಅದರ ಪಾದರಕ್ಷೆ ಧರಿಸುತ್ತೀರಿ, ಏಕೆ?”
ನಜ಼ರುದ್ದೀನ್ ಉತ್ತರಿಸಿದ, “ಮೊದಲು ಬಲಗಾಲಿಗೆ ಇನ್ನೊಂದು ಕಾಲಿನ ಪಾದರಕ್ಷೆ ಧರಿಸುವುದು ಮೂರ್ಖತನವಾಗುವುದಿಲ್ಲವೇ?”
*****
ಈ ಮುಲ್ಲಾ ನಸ್ರುದ್ದೀನ್ ಕತೆಗಳು ನನ್ನ ಬ್ಲಾಗ್ ನಿಂದ, ʻಸಂವಾದʼ ಪತ್ರಿಕೆಯಲ್ಲಿ ೪೮ ತಿಂಗಳುಗಳ ಕಾಲ ಪ್ರಕಟವಾದ ಕತೆಗಳಿಂದ ಕದ್ದ ಕತೆಗಳಾಗಿವೆ. ಸಂಪಾದಕರು ಇವುಗಳನ್ನು ಪರಿಶೀಲಿಸುವುದಿಲ್ಲವೆ?