೧. ಕೋಳಿ ಮಾರಾಟಗಾರ ನಜ಼ರುದ್ದೀನ್
ಒಂದು ದಿನ ನಜ಼ರುದ್ದೀನ್ ಪೇಟೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ವ್ಯಾಪಾರಿಗಳು ಪುಟ್ಟಪುಟ್ಟ ಗಿಳಿಗಳನ್ನು ತಲಾ ಒಂದಕ್ಕೆ ೨೦೦ ದಿನಾರ್‌ಗಳಂತೆ ಮಾರಾಟ ಮಾಡುತ್ತಿದ್ದದ್ದನ್ನು ಗಮನಿಸಿದ. ಅವನು ಆಲೋಚಿಸಿದ: ‘ಇಷ್ಟು ಪುಟ್ಟದಾಗಿರುವ ಒಂದು ಗಿಳಿಗೆ ೨೦೦ ದಿನಾರ್ ಬೆಲೆ ಇದ್ದರೆ ನನ್ನ ಮನೆಯಲ್ಲಿ ಇರುವ ದೊಡ್ಡ ಕೋಳಿಯ ಬೆಲೆ ಖಂಡಿತವಾಗಿಯೂ ೨೦೦ ದಿನಾರ್‌ಗಳಿಗಿಂತ ಅನೇಕ ಪಟ್ಟು ಹೆಚ್ಚು ಇರಲೇಬೇಕು.’
ಮಾರನೆಯ ದಿನ ನಜ಼ರುದ್ದೀನ್ ಪೇಟೆಬೀದಿಗೆ ತನ್ನ ಕೋಳಿಯಡನೆ ಬಂದ, ದೊಡ್ಡ ಮೊತ್ತದ ಹಣಕ್ಕೆ ಅದನ್ನು ಮಾರುವ ನಿರೀಕ್ಷೆಯೊಂದಿಗೆ. ಆದರೆ ಯಾರೊಬ್ಬರೂ ಅದಕ್ಕೆ ೫ ದಿನಾರ್‌ಗಳಿಗಿಂತ ಹೆಚ್ಚು ಹಣ ಕೊಡಲು ತಯಾರಿಲ್ಲದೇ ಇರುವುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ಬೇಸರದಿಂದ ಆತ ಎಲ್ಲರಿಗೂ ಕೇಳುವಂತೆ ಕೂಗಿ ಹೇಳಿದ, “ಇದು ನನಗೆ ಅರ್ಥವಾಗುತ್ತಿಲ್ಲ. ನಿನ್ನೆ ಇದಕ್ಕಿಂತ ಅನೇಕ ಪಟ್ಟು ಚಿಕ್ಕದಾಗಿದ್ದ ಪಕ್ಷಿಗಳಿಗೆ ಇದಕ್ಕೆ ಕೊಡಲು ಸಿದ್ಧರಾಗಿರುವುದಕ್ಕಿಂತ ಅನೇಕ ಪಟ್ಟು ಹೆಚ್ಚು ಹಣ ಕೊಡಲು ಜನ ಸಿದ್ಧರಿದ್ದರು!”
ಇದನ್ನು ಕೇಳಿದ ಒಬ್ಬಾತ ಪ್ರತಿಕ್ರಿಯಿಸಿದ, “ಮುಲ್ಲಾ, ಆವು ಗಿಳಿಗಳು. ಅವು ಮನುಷ್ಯರಂತೆ ಮಾತನಾಡುತ್ತವೆ ಎಂಬ ಕಾರಣಕ್ಕಾಗಿ ನಿನ್ನ ಕೋಳಿಗಿಂತ ಹೆಚ್ಚು ಬೆಲೆಬಾಳುತ್ತವೆ.”
ನಜ಼ರುದ್ದೀನ್ ಉದ್ಗರಿಸಿದ, “ಶುದ್ಧ ಅವಿವೇಕ. ಅವು ಮಾತನಾಡುತ್ತವೆ ಎಂಬ ಕಾರಣಕ್ಕಾಗಿ ಹೆಚ್ಚು ಬೆಲೆಯೇ? ಈ ನನ್ನ ಪಕ್ಷಿ ಅದಕ್ಕಿಂತ ಎಷ್ಟೋ ಉತ್ತಮವಾದದ್ದು.”
“ಅದು ಹೇಗೆ?” ಆತ ಕೇಳಿದ.
“ಏಕೆಂದರೆ ಇದರ ತಲೆಯಲ್ಲಿ ಎಷ್ಟೋ ಅದ್ಭುತವಾದ ಆಲೋಚನೆಗಳಿವೆ, ಮನುಷ್ಯರ ತಲೆಯೊಳಗೆ ಇರುವಂತೆ. ಅಷ್ಟೇ ಅಲ್ಲ, ಇದು ಸದಾ ವಟವವಟ ಅನ್ನುತ್ತಿದ್ದು ಇತರರ ತಲೆ ತಿನ್ನುವುದಿಲ್ಲ!”
*****
೨. ದೀಪ
ಒಂದು ರಾತ್ರಿ ನಜ಼ರುದ್ದೀನನೂ ಅವನ ಹೆಂಡತಿಯೂ ನಿದ್ರಿಸುತ್ತಿದ್ದರು. ಆ ಸಮಯದಲ್ಲಿ ಹೊರಗೆ ರಸ್ತೆಯಲ್ಲಿ ಯಾರೋ ಇಬ್ಬರು ಜಗಳವಾಡಲಾರಂಭಿಸಿದರು. ಅವರ ಬೊಬ್ಬೆಗೆ ಮಲಗಿದ್ದ ದಂಪತಿಗಳಿಗೆ ಎಚ್ಚರವಾಯಿತು.
ನಜ಼ರುದ್ದೀನ್ ಹೆಂಡತಿಗೆ ಹೇಳಿದ, “ಅವರೇಕೆ ಜಗಳವಾಡುತ್ತಿದ್ದಾರೆ ಎಂಬುದನ್ನು ತಿಳಿದು ಬರುತ್ತೇನೆ.”
“ಅದಕ್ಕೂ ನಿಮಗೂ ಏನೇನೂ ಸಂಬಂಧವಿಲ್ಲ. ಸುಮ್ಮನೆ ನಿದ್ದೆ ಮಾಡಿ,” ಉದ್ಗರಿಸಿದಳು ಹೆಂಡತಿ.
“ಸರಿ.”
ಎಷ್ಟು ಕಾಲ ಕಳೆದರೂ ಹೊರಗಿನ ಜಗಳ ನಿಲ್ಲುವ ಲಕ್ಷಣ ಕಾಣಲಿಲ್ಲ. ಎಂದೇ ನಜ಼ರುದ್ದೀನ್ ಅದೇನು ವಿಷಯ ಎಂಬುದನ್ನು ತಿಳಿಯಲೋಸುಗ ದೀಪವೊಂದನ್ನು ತೆಗೆದುಕೊಂಡು ಹೊರಕ್ಕೆ ಹೋದ. ಅವನು ಹೊರಬಂದ ತಕ್ಷಣ ಜಗಳವಾಡುತ್ತಿದ್ದವರ ಪೈಕಿ ಒಬ್ಬ ದೀಪವನ್ನು ಕಿತ್ತುಕೊಂಡು ಓಡಿಹೋದ.
ನಜ಼ರುದ್ದೀನ್ ಪುನಃ ಒಳಬಂದು ಮಲಗಿದ.
ಅವನ ಹೆಂಡತಿ ಕೇಳಿದಳು, “ಅವರು ಏನಕ್ಕಾಗಿ ಜಗಳವಾಡುತ್ತಿದ್ದರು?”
ನಜ಼ರುದ್ದೀನ್ ಉತ್ತರಿಸಿದ, “ಅವರು ಜಗಳವಾಡುತ್ತಿದ್ದದ್ದು ನನ್ನ ದೀಪಕ್ಕಾಗಿ. ಅದು ದೊರೆತೊಡನೆ ಜಗಳವಾಡುವುದನ್ನು ನಿಲ್ಲಿಸಿದರು!”
*****
೩. ಅತಿಥಿ
ಒಂದು ರಾತ್ರಿ ಮನೆಯ ಮುಂಬಾಗಿಲನ್ನು ಯಾರೋ ತಟ್ಟುತ್ತಿರುವುದು ನಜ಼ರುದ್ದೀನ್‌ನಿಗೆ ಕೇಳಿಸಿತು. ಅವನು ಬಾಗಿಲನ್ನು ತೆರೆದಾಗ ಹೊರಗೆ ನಿಂತಿದ್ದವ ಹೇಳಿದ, “ಮುಲ್ಲಾ, ರಾತ್ರಿ ತಂಗಲು ಅವಕಾಶ ನೀಡುವುದರ ಮುಖೇನ ನೀನು ಒಬ್ಬ ಸಹೋದರನಿಗೆ ಸಹಾಯ ಮಾಡುವೆಯಾ? ದೇವರ ತಮ್ಮನ ಮಗ ನಾನು.”
“ಓ ಹೌದೇ?”
“ಖಂಡಿತಾ ಹೌದು.”
“ಹಾಗಾದರೆ ತಮ್ಮಂಥ ಘನತೆವೆತ್ತ ಅತಿಥಿಗಳು ರಾತ್ರಿಯನ್ನು ಕಳೆಯಲು ಅತ್ಯತ್ತಮವಾದ ಸ್ಥಳವನ್ನೇ ನಾನು ಒದಗಿಸಬೇಕು.” ಉದ್ಗರಿಸಿದ ನಜ಼ರುದ್ದೀನ್.
ನಜ಼ರುದ್ದೀನ್ ಮನೆಯಿಂದ ಹೊರಬಂದು ಬಾಗಿಲನ್ನು ಮುಚ್ಚಿದ. ಆನಂತರ ಬಂದವನತ್ತ ತಿರುಗಿ “ನನ್ನನ್ನು ಹಿಂಬಾಲಿಸಿ” ಎಂಬುದಾಗಿ ಹೇಳಿದ.
ಕುತೂಹಲದಿಂದ ಬಂದಾತ ಹಿಂಬಾಲಿಸಿದ. ಸುಮಾರು ೧೦೦ ಮೀಟರ್ ದೂರ ಕ್ರಮಿಸಿ ಅವರು ಸ್ಥಳೀಯ ಮಸೀದಿಯನ್ನು ತಲುಪಿದರು.
ನಜ಼ರುದ್ದೀನ್ ಬಂದವನಿಗೆ ಹೇಳಿದ, “ರಾತ್ರಿ ಕಳೆಯಲು ನಿಮ್ಮ ದೊಡ್ಡಪ್ಪನ ನಿವಾಸಕ್ಕಿಂತ ಉತ್ತಮವಾದ ಬೇರೆ ಸ್ಥಳ ಇರಲು ಸಾಧ್ಯವೇ?”
*****
೪. ನನಗೊಂದು ಪೆನ್ಸಿಲ್ ಹಾಗು ಒಂದು ಕಾಗದ ಕೊಡು
ಒಂದು ರಾತ್ರಿ ನಜ಼ರುದ್ದೀನ್ ಇದ್ದಕ್ಕಿದ್ದಂತೆ ಎದ್ದು ಹೆಂಡತಿಗೆ ಹೇಳಿದ, “ಏಳು, ಏಳು, ಬೇಗ ಏಳು! ನನಗೆ ಈಗಷ್ಟೇ ದೈವೀ ಪ್ರೇರಣೆ ಆಗಿದೆ! ಬೇಗನೆ ಒಂದು ಪೆನ್ಸಿಲ್ ಹಾಗು ಕಾಗದ ತಂದುಕೊಡು!”
ಅವನ ಹೆಂಡತಿ ದಡಬಡನೆ ಎದ್ದು ಮೋಂಬತ್ತಿ ಉರಿಸಿ ಕಾಗದ ಪೆನ್ಸಿಲ್ ತಂದು ನಜ಼ರುದ್ದೀನ್‌ನಿಗೆ ಕೊಟ್ಟಳು.
ನಜ಼ರುದ್ದೀನ್ ವೇಗವಾಗಿ ಬರೆದು ಮುಗಿಸಿ ಮೋಂಬತ್ತಿಯನ್ನು ನಂದಿಸಿ ಮಲಗುವ ತಯಾರಿ ನಡೆಸುತ್ತಿದ್ದಾಗ ಅವನ ಹೆಂಡತಿ ಉದ್ಗರಿಸಿದಳು, “ನಿಲ್ಲು, ನಿಲ್ಲು. ನೀನೇನು ಬರೆದಿದ್ದೀಯೋ ಅದನ್ನು ನನಗೆ ದಯವಿಟ್ಟು ಓದಿ ಹೇಳು.”
ನಜ಼ರುದ್ದೀನ್ ಕಾಗದ ತೆಗೆದುಕೊಂಡು ಬರೆದದ್ದನ್ನು ಓದಿದ, “ನೀನು ಎಲ್ಲೆಲ್ಲಿ ಹೋಗುತ್ತಿಯೋ ಅಲ್ಲೆಲ್ಲ ನೀನೇ ಇರುವೆ!”
*****
ನಜ಼ರುದ್ದೀನ್ ಕತೆಗಳಲ್ಲಿ ಮೊದಲನೆಯದು ಮತ್ತೆ ಐದನೆಯದಾಗಿ ರಿಪೀಟಾಗಿದೆ. ದಯಮಾಡಿ ಗಮನಿಸಿ ಮತ್ತು ಮುಂದೆ ಹೀಗಾಗದಂತೆ ಎಚ್ಚರ ವಹಿಸಿ. ಇದು ನನ್ನ ಮನವಿ.