೧. ನಜ಼ರುದ್ದೀನ್‌ನ ಚೆರಿಹಣ್ಣಿನ ತರ್ಕ
ಪೇಟೆಯಲ್ಲಿ ಮಾರುವ ಉದ್ದೇಶದಿಂದ ಒಂದು ಚೀಲ ತುಂಬ ಚೆರಿಹಣ್ಣನ್ನು ತನ್ನ ಕತ್ತೆಯ ಮೇಲೆ ಹೇರಿಕೊಂಡು ನಜರುದ್ದೀನ್ ಪಟ್ಟಣಕ್ಕೆ ಹೋಗುತ್ತಿದ್ದ. ದಾರಿಯಲ್ಲಿ ಒಂದು ಡಜನ್ ಮಕ್ಕಳು ಅವನನ್ನೂ ಅವನು ಒಯ್ಯುತ್ತಿದ್ದ ಚೆರಿಹಣ್ಣುಗಳನ್ನೂ ನೋಡಿದರು. ಕೆಲವು ಚೆರಿಹಣ್ಣುಗಳು ತಿನ್ನಲು ಸಿಕ್ಕುತ್ತವೆಂಬ ಸಂತೋಷದಿಂದ ಅವರು ನಜ಼ರುದ್ದೀನ್‌ನ ಸುತ್ತಲೂ ಹಾಡುತ್ತಾ ಕುಣಿಯತೊಡಗಿದರು.
ಅವರು ಕೇಳಿದರು, “ಮುಲ್ಲಾ, ನಮಗೆ ಕೆಲವು ಹಣ್ಣುಗಳನ್ನು ಕೊಡು.”
ನಜ಼ರುದ್ದೀನ್ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ. ಅವನಿಗೆ ಮಕ್ಕಳ ಮೇಲೆ ಬಲು ಪ್ರೀತಿ ಇತ್ತು, ಎಂದೇ ಅವರಿಗೆ ನಿರಾಸೆ ಉಂಟುಮಾಡಲು ಅವನಿಗೆ ಇಷ್ಟವಿರಲಿಲ್ಲ; ಮಾರಿದರೆ ಬರಬಹುದಾದ ಲಾಭವನ್ನು ಹಣ್ಣುಗಳನ್ನು ಅವರಿಗೆ ಕೊಟ್ಟು ಕಳೆದುಕೊಳ್ಳಲೂ ಅವನಿಗೆ ಇಷ್ಟವಿರಲಿಲ್ಲ.
ಸ್ವಲ್ಪ ಕಾಲ ಆ ಕುರಿತು ಆಲೋಚಿಸಿದ ನಂತರ ಚೀಲದಿಂದ ಆರು ಹಣ್ಣುಗಳನ್ನು ತೆಗೆದು ಅವರಿಗೆ ಕೊಟ್ಟನು.
“ಇನ್ನೂ ಕೆಲವು ಹಣ್ಣುಗಳನ್ನು ಕೊಡುವೆಯಾ?” ಆಸೆಯಿಂದ ಕೇಳಿದರು ಮಕ್ಕಳು.
ನಜ಼ರುದ್ದೀನ್ ಹೇಳಿದ, “ಇಲ್ಲಿ ಕೇಳಿ ಮಕ್ಕಳೇ. ಈ ಚೀಲದಲ್ಲಿ ಇರುವ ಎಲ್ಲ ಚೆರಿಹಣ್ಣುಗಳ ರುಚಿಯೂ ಒಂದೇ ಆಗಿದೆ. ನೀವು ಪ್ರತಿಯೊಬ್ಬರೂ ಅರ್ಧ ಹಣ್ಣು ತಿಂದರೂ ಐವತ್ತು ಹಣ್ಣುಗಳನ್ನು ತಿಂದರೂ ರುಚಿಯಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ!”
*****
೨. ನಜ಼ರುದ್ದೀನ್‌ನ ಆವಿಷ್ಕಾರ
ತನ್ನ ಕೋಣೆಯಲ್ಲಿ ವರ್ಣಚಿತ್ರವೊಂದನ್ನು ಗೋಡೆಯಲ್ಲಿ ತೂಗುಹಾಕುವ ಸಿದ್ಧತೆ ಮಾಡುತ್ತಿದ್ದ ನಜ಼ರುದ್ದೀನ್. ಗೋಡೆಗೆ ಮೊಳೆ ಹೊಡೆಯುವಾಗ ಬಲು ಜೋರಾಗಿ ಹೊಡೆದದ್ದರ ಪರಿಣಾಮವಾಗಿ ಗೋಡೆಯಲ್ಲಿ ದೊಡ್ಡ ತೂತು ಆಯಿತು. ಆ ತೂತಿನ ಮೂಲಕ ನೋಡಿದಾಗ ಇನ್ನೊಂದು ಪಾರ್ಶ್ವದಲ್ಲಿ ಆಡುಗಳನ್ನು ಕಂಡವು. ತಾನು ತೂತಿನ ಮೂಲಕ ನೆರೆಮನೆಯವನ ಅಂಗಳವನ್ನು ನೋಡುತ್ತಿದ್ದೇನೆ ಎಂಬುದು ಅವನಿಗೆ ತಿಳಿಯಲೇ ಇಲ್ಲ.
ನಜ಼ರುದ್ದೀನ್ ಹೆಂಡತಿಯ ಹತ್ತಿರಕ್ಕೆ ಓಡಿಹೋಗಿ ಆಶ್ಚರ್ಯ ಸೂಚಕ ಧ್ವನಿಯಲ್ಲಿ ಹೇಳಿದ. “ನಾನೀಗ ಹೇಳುವುದನ್ನು ಬಹುಶಃ ನೀನು ನಂಬುವುದಿಲ್ಲ! ಅದೇನೆಂದು ಊಹಿಸಬಲ್ಲೆಯಾ?”
“ಏನದು?”
“ನಾನೊಂದು ವರ್ಣಚಿತ್ರವನ್ನು ನನ್ನ ಕೋಣೆಯಲ್ಲಿ ಗೋಡೆಗೆ ನೇತುಹಾಕುತ್ತಿದ್ದೆ. ಆಗ ——– ನೀನಿದನ್ನು ನಂಬುವುದಿಲ್ಲ!”
“ಏನನ್ನು?”
“ನನ್ನ ಸುತ್ತಿಗೆ ಗೋಡೆಯ ಮೂಲಕ ಹೊರಟುಹೋಯಿತು. ಆಗ ——– ನೀನಿದನ್ನು ನಂಬುವುದಿಲ್ಲ!”
“ಏನನ್ನು?”
“ನಾನು ಆಕಸ್ಮಿಕವಾಗಿ ನನ್ನ ಕೋಣೆಯಲ್ಲಿಯೇ ಇರುವ ಇನ್ನೊಂದು ವಿಶ್ವವನ್ನು, ಆಡುಗಳ ವಿಶ್ವವನ್ನು, ಆವಿಷ್ಕರಿಸಿದೆ!”
*****
೩. ಮೋಸಹೋಗುವಿಕೆ
ಸ್ಥಳೀಯನೊಬ್ಬ ತನಗೆ ಮೋಸಮಾಡಲು ಯಾರಿಗೂ ಸಾಧ್ಯವಿಲ್ಲ ಎಂಬುದಾಗಿ ಪದೇಪದೇ ಘೋಷಿಸುತ್ತಿದ್ದ. ಒಮ್ಮೆ ಇದನ್ನು ಕೇಳಿದ ನಜ಼ರುದ್ದೀನ್ ಹೇಳಿದ, “ಇಲ್ಲಿಯೇ ಸ್ವಲ್ಪ ಕಾಲ ಕಾಯುತ್ತಿರಿ. ನಾನು ಮನೆಗೆ ಹೋಗಿ ನಿಮಗೆ ಮೋಸಮಾಡುವ ಒಂದು ವಿಧಾನವನ್ನು ರೂಪಿಸಿಕೊಂಡು ಬರುತ್ತೇನೆ.”
ಆ ಸ್ಥಳೀಯ ಕಾಯುತ್ತಿದ್ದ, ಕಾಯುತ್ತಿದ್ದ, ಕಾಯುತ್ತಲೇ ಇದ್ದ. ಅವನು ಕಾಯುತ್ತಿದ್ದದ್ದನ್ನು ಗಮನಿಸಿದ ಅಲ್ಲಿನ ವ್ಯಾಪಾರಿಯೊಬ್ಬ ಕೇಳಿದ, “ನೀವು ಇಲ್ಲಿ ಯಾರಿಗಾಗಿ ಕಾಯುತ್ತಿದ್ದೀರಿ?”
“ನನಗೆ ಮೋಸಮಾಡಲು ನಜ಼ರುದ್ದೀನ್‌ನಿಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ತಿಳಿಯಲೋಸುಗ ನಾನು ಒಂದು ಗಂಟೆಯಿಂದ ಇಲ್ಲಿ ಕಾಯುತ್ತಿದ್ದೇನೆ. ಇಲ್ಲಿಯೇ ಸ್ವಲ್ಪ ಕಾಲ ಕಾಯುತ್ತಿರಿ, ಮನೆಗೆ ಹೋಗಿ ನಿಮಗೆ ಮೋಸಮಾಡುವ ಒಂದು ವಿಧಾನವನ್ನು ರೂಪಿಸಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿ ಹೋದವ ಇಷ್ಟು ಹೊತ್ತಾದರೂ ಬರಲೇ ಇಲ್ಲ.”
“ಓ ಸರಿ ಹಾಗಾದರೆ. ಇನ್ನು ನೀವು ಕಾಯುವ ಅಗತ್ಯವಿಲ್ಲ. ಏಕೆಂದರೆ ನೀವು ಈಗಾಗಲೇ ಮೋಸಹೋಗಿದ್ದೀರಿ!”
*****
೪. ಬಲ ಪರೀಕ್ಷೆ
ಒಂದು ದಿನ ನಜ಼ರುದ್ದೀನನೂ ಕೆಲ ಮಂದಿ ಸ್ಥಳೀಯರೂ ಪಟ್ಟಣದ ಮುಖ್ಯಚೌಕದಲ್ಲಿ ಹರಟುತ್ತಿದ್ದರು. ಚರ್ಚೆ ಬಲು ಬೇಗನೆ ಚಿಕ್ಕ ವಯಸ್ಸಿನವರಾಗಿದ್ದಾಗಕ್ಕಿಂತ ತಾವೆಷ್ಟು ಬದಲಾಗಿದ್ದೇವೆ ಎಂಬ ವಿಷಯಕ್ಕೆ ತಿರುಗಿತು. ಕೆಲವರು ಈಗ ತಾವೆಷ್ಟು ವಿವೇಕಿಗಳಾಗಿದ್ದೇವೆ ಎಂಬುದನ್ನು, ಕೆಲವರು ತಾವೆಷ್ಟು ನಿಶ್ಶಕ್ತರಾಗಿದ್ದೇವೆ ಎಂಬುದನ್ನು ವಿವರಿಸಿದರು.
ನಜ಼ರುದ್ದೀನ್ ಹೇಳಿದ, “ಈಗ ನಾನು ಅಂದಿಗಿಂತ ಹೆಚ್ಚು ವಿವೇಕಿಯಾಗಿರುವುದಷ್ಟೇ ಅಲ್ಲದೆ ಅಂದಿನಷ್ಟೇ ಬಲಶಾಲಿಯಾಗಿ ಉಳಿದಿದ್ದೇನೆ.”
ಅಲ್ಲಿದ್ದವರ ಪೈಕಿ ಒಬ್ಬ ಕೇಳಿದ, “ನಿಜವಾಗಿಯೂ?”
“ನಿಜವಾಗಿಯೂ ಹೌದು. ನಾನಿದನ್ನು ಪರೀಕ್ಷಿಸಿದ್ದೇನೆ.”
“ಪರೀಕ್ಷಿಸಿದ್ದು ಹೇಗೆ?”
“ನನ್ನ ಮನೆಯ ಪಕ್ಕ ಒಂದು ಬಂಡೆಕಲ್ಲು ಇದೆಯಲ್ಲವೇ? ಚಿಕ್ಕ ವಯಸ್ಸಿನವನಾಗಿದ್ದಾಗ ಅದನ್ನು ಎತ್ತಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಈಗಲೂ ನನಗೆ ಸಾಧ್ಯವಾಗುತ್ತಿಲ್ಲ!”
*****
೫. ಭಾರ ಎತ್ತುವ ಸ್ಪರ್ಧೆ
ಒಂದು ದಿನ ನಜ಼ರುದ್ದೀನನೂ ಕೆಲ ಮಂದಿ ಸ್ಥಳೀಯರೂ ಪಟ್ಟಣದ ಮುಖ್ಯಚೌಕದಲ್ಲಿ ಹರಟುತ್ತಿದ್ದರು. ಆ ಹರಟೆ ಬಲು ಬೇಗನೆ ಬಡಾಯಿಕೊಚ್ಚಿಕೊಳ್ಳುವ ಸ್ಪರ್ಧೆಯಾಗಿ ಮಾರ್ಪಟ್ಟಿತು. ಒಬ್ಬರಾದ ನಂತರ ಒಬ್ಬರು ತಮ್ಮ ತಮ್ಮ ಅದ್ಭುತ ಸಾಧನೆಗಳನ್ನು ವರ್ಣಿಸಿದರು. ಪ್ರತೀ ಕತೆಯೂ ಹಿಂದಿನದ್ದಕ್ಕಿಂತ ಬಹಳ ವಿಲಕ್ಷಣವಾಗಿತ್ತು.
ಇತರ ಎಲ್ಲರ ಮಾತುಗಳನ್ನೂ ಕೇಳಿದ ನಂತರ ನಜ಼ರುದ್ದೀನ್ ಕೊನೆಯಲ್ಲಿ ಎದ್ದು ನಿಂತು ಹೇಳಿದ, “ನಾನು ಹೇಳುವ ವಿದ್ಯಮಾನ ಜರಗಿ ಬಹಳ ಕಾಲ ಕಳೆದಿದೆ. ಈ ಪಟ್ಟಣದ ಎಲ್ಲ ಬಲಾಢ್ಯರು ತಮ್ಮ ಪೈಕಿ ಯಾರು ಅತ್ಯಂತ ಬಲಶಾಲಿ ಎಂಬುದನ್ನು ಪತ್ತೆಹಚ್ಚಲು ನಿರ್ಧರಿಸಿದರು. ದಿನಸಿ ಅಂಗಡಿಯ ಸಮೀಪದಲ್ಲಿ ಭಾರಿ ತೂಕದ ಕಲ್ಲಿನ ಕಂಬವೊಂದು ಬಿದ್ದುಕೊಂಡಿತ್ತು. ಬಲಾಢ್ಯರ ಪೈಕಿ ಯಾರು ಅದನ್ನು ಎತ್ತಬಲ್ಲರು ಎಂಬುದನ್ನು ಅವರು ತಿಳಿಯಲಿಚ್ಛಿಸಿದರು. ಒಬ್ಬರಾದ ನಂತರ ಒಬ್ಬರಂತೆ ಅದನ್ನು ಎತ್ತಲು ಪ್ರಯತ್ನಿಸಿದರು. ಯಾರಿಂದಲೂ ಅದನ್ನು ಎತ್ತಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಕಟ್ಟುಮಸ್ತಾದ ಬೃಹತ್‌ದೇಹಿಗಳಾಗಿದ್ದರು ಎಂಬುದು ನಿಮ್ಮ ಗಮನದಲ್ಲಿರಲಿ. ಎಲ್ಲರೂ ಸೋಲೊಪ್ಪಿಕೊಂಡ ನಂತರ ನಾನು ಕಂಬದ ಹತ್ತಿರ ಹೋದೆ. ಕೈಗಳನ್ನು ಜೋರಾಗಿ ಉಜ್ಜಿಕೊಂಡೆ. ಕಂಬವನ್ನು ಎರಡೂ ಕೈಗಳಿಂದ ಹಿಡಿದುಕೊಂಡೆ. ಎಲ್ಲರೂ ಏಕಾಗ್ರತೆಯಿಂದ ನನ್ನನ್ನೇ ನೋಡುತ್ತಿದ್ದರು.” ಇಷ್ಟು ಹೇಳಿ ನಜ಼ರುದ್ದೀನ್ ನಿಟ್ಟುಸಿರು ಬಿಡುತ್ತಾ ಎಲ್ಲರನ್ನೂ ಒಮ್ಮೆ ನೋಡಿದ.
“ಹೇಳು, ಹೇಳು. ಮುಂದೇನಾಯಿತು ಬೇಗ ಹೇಳು,” ಎಲ್ಲರೂ ಕುತೂಹಲದಿಂದ ಕಿರುಚಿದರು.
“ಅದನ್ನು ಎತ್ತಲು ನನ್ನಿಂದಲೂ ಸಾಧ್ಯವಿಲ್ಲ ಎಂಬುದು ಆಗ ತಿಳಿಯಿತು!”
*****