೧. ನಜ಼ರುದ್ದೀನ್ ಒಂದು ಹೊತ್ತಿನ ಊಟ ತಯಾರಿಸಲು ಸಹಾಯ ಮಾಡುವುದು
ಮಾಂಸ, ಅಕ್ಕಿ ಹಾಗು ತರಕಾರಿ ಉಪಯೋಗಿಸಿ ಒಂದು ಹೊತ್ತಿನ ಊಟ ತಯಾರಿಸಲು ಅಗತ್ಯವಾದ ಸಾಮಗ್ರಿಗಳನ್ನು ನಜ಼ರುದ್ದೀನ್ ಹಾಗು ಅವನ ಗೆಳೆಯ ಕೊಂಡುತಂದರು.
ಗೆಳೆಯ: “ನಜ಼ರುದ್ದೀನ್ ನೀನು ಅನ್ನ ಮಾಡು ನಾನು ತರಕಾರಿಗಳನ್ನು ಬೇಯಿಸುತ್ತೇನೆ.”
ನಜ಼ರುದ್ದೀನ್: “ನಿಜ ಹೇಳುವುದಾದರೆ ಅನ್ನ ಮಾಡುವುದು ಹೇಗೆಂಬುದರ ಕುರಿತು ನನಗೇನೂ ಗೊತ್ತಿಲ್ಲ.”
ಗೆಳೆಯ: “ಸರಿ ಹಾಗಾದರೆ, ನೀನು ತರಕಾರಿ ಕತ್ತರಿಸು ನಾನು ಅನ್ನ ಮಾಡುತ್ತೇನೆ.”
ನಜ಼ರುದ್ದೀನ್: “ನಿಜ ಹೇಳುವುದಾದರೆ ನನಗೆ ತರಕಾರಿ ಹೇಗೆ ಕತ್ತರಿಸಬೇಕೆಂಬುದು ತಿಳಿದಿಲ್ಲ.”
ಗೆಳೆಯ: “ಸರಿ ಹಾಗಾದರೆ, ಒಲೆಯಲ್ಲಿ ಬೇಯಿಸಲೋಸುಗ ಮಾಂಸವನ್ನು ಸಿದ್ಧಪಡಿಸು.”
ನಜ಼ರುದ್ದೀನ್: “ಸಿದ್ಧಪಡಿಸುವ ಇಚ್ಛೆ ಇದೆಯಾದರೂ ಹಸಿ ಮಾಂಸ ನೋಡಿದರೆ ಅದೇಕೋ ಅಸಹ್ಯವಾಗುತ್ತದೆ.”
ಗೆಳೆಯ: “ಕೊನೆಯ ಪಕ್ಷ ಒಲೆ ಉರಿಸು ಮಹಾರಾಯ.”
ನಜ಼ರುದ್ದೀನ್: “ಅಯ್ಯಯ್ಯೋ, ಅದು ನನ್ನಿಂದಾಗದು. ನಾನು ಬೆಂಕಿಗೆ ಹೆದರುತ್ತೇನೆ.”
ಕೆಲಸಮಾಡದೇ ಇರುವುದಕ್ಕೆ ನಜ಼ರುದ್ದೀನ್ ನೀಡುತ್ತಿದ್ದ ಸಬೂಬುಗಳನ್ನು ಕೇಳಿ ಕೇಳಿ ಬೇಸತ್ತಿದ್ದ ಆ ಗೆಳೆಯ ತಾನೋಬ್ಬನೇ ಉಣಿಸು ತಯಾರಿಸಿದ. ಎಲ್ಲವನ್ನೂ ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿ ನಜ಼ರುದ್ದೀನ್‌ನಿಗೆ ಹೇಳಿದ, “ನಿನಗೆ ಬೇಯಿಸಿದ ಮಾಂಸ, ತರಕಾರಿ, ಅನ್ನ ತಿನ್ನಲೂ ಆಗುವುದಿಲ್ಲ ಅಲ್ಲವೇ?”
ನಜ಼ರುದ್ದೀನ್: “ಅದೊಂದು ಕೆಲಸ ನಾನು ಮಾಡಬಲ್ಲೆ. ಈ ಊಟಕ್ಕೆ ಬೇಕಾದ ಉಣಿಸನ್ನು ನೀನೊಬ್ಬನೇ ಬಲು ಕಷ್ಟಪಟ್ಟು ತಯಾರಿಸಿರುವೆ. ಆದ್ದರಿಂದ ಅದನ್ನು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ನಾನು ಪ್ರಯತ್ನಿಸುತ್ತೇನೆ!”
*****
೨. ಗಿರಾಕಿಗಳು ಹಣ ವಾಪಸಾತಿ ಕೇಳುತ್ತಿದ್ದಾರೆ
ನಜ಼ರುದ್ದೀನ್‌ನಿಗೆ ತುರ್ತಾಗಿ ಸ್ವಲ್ಪ ಹಣ ಬೇಕಾಗಿತ್ತು. ಎಂದೇ ಆತ ಮರಳನ್ನು ಪುಟ್ಟಪುಟ್ಟ ಚೀಲಗಳಲ್ಲಿ ಹಾಕಿ ಅವನ್ನು ಇಲಿ ಪಾಷಾಣ ಎಂಬುದಾಗಿ ಹೇಳಿ ಮಾರಾಟ ಮಾಡಲು ನಿರ್ಧರಿಸಿದ. ಮೊದಲನೇ ದಿನ ಕೆಲವನ್ನು ಯಶಸ್ವಿಯಾಗಿ ಮಾರಾಟ ಮಾಡಿದ. ಅವನ್ನು ಕೊಂಡುಕೊಂಡ ಗಿರಾಕಿಗಳ ಪೈಕಿ ಸಿಟ್ಟಾದ ಕೆಲವರು ಮಾರನೆಯ ದಿನ ಹಣ ವಾಪಾಸು ಮಾಡುವಂತೆ ನಜ಼ರುದ್ದೀನ್‌ನನ್ನು ಕೇಳಿದರು.
ಅವರು ಹೇಳಿದರು, “ನೀನು ಕೊಟ್ಟ ಇಲಿಪಾಷಾಣವನ್ನು ನಮ್ಮ ಮನೆಗಳಲ್ಲಿ ಉಪಯೋಗಿಸಿದೆವು. ಅದು ಒಂದೇ ಒಂದು ಇಲಿಯನ್ನೂ ಕೊಲ್ಲಲಿಲ್ಲ.”
ನಜ಼ರುದ್ದೀನ್ ವಿಚಾರಿಸಿದ, “ಹಾಗೇನು? ಅಂದ ಹಾಗೆ ನಮ್ಮ ಮನೆಗಳಲ್ಲಿ ಅದನ್ನು ಎರಚಿದೆವು ಎಂಬುದಾಗಿ ಹೇಳುತ್ತಿರುವಿರಾ?”
ಅವರು ಪ್ರತಿಕ್ರಿಯಿಸಿದರು, “ಹೌದು.”
ನಜ಼ರುದ್ದೀನ್ ಹೇಳಿದ, “ಅಂದ ಮೇಲೆ ನೀವು ನಾನು ನೀಡಿದ್ದ ಸೂಚನೆಗಳನ್ನು ಸರಿಯಾಗಿ ಪಾಲಿಸಿಲ್ಲ. ಆದ್ದರಿಂದ ನಿಮಗೆ ಸಿಕ್ಕಿದ ಫಲಿತಾಂಶಕ್ಕೆ ನಾನು ಜವಾಬ್ದಾರಿಯಲ್ಲ.”
ಅವರು ವಿಚಾರಿಸಿದರು, “ಅದನ್ನು ಹೇಗೆ ಉಪಯೋಗಿಸಬೇಕಿತ್ತು?”
“ನೀವು ಇಲಿಯ ತಲೆಯ ಮೇಲೆ ಬಲವಾಗಿ ಹೊಡೆದು ತದನಂತರ ಈ ಪುಡಿಯನ್ನು ಅದರ ಬಾಯೊಳಕ್ಕೆ ತುರುಕಬೇಕಿತ್ತು!”
*****
೩. ಶಪಿಸಿದ್ದಕ್ಕೆ ದಂಡ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಜ಼ರುದ್ದೀನ್ ಮಾರ್ಗಮಧ್ಯದಲ್ಲಿ ಯಾರೋ ಇಟ್ಟಿದ್ದ ಕಲ್ಲೊಂದನ್ನು ಗಮನಿಸದೇ ಎಡವಿದ. ತಕ್ಷಣವೇ ಕೋಪದಿಂದ ಕಿರುಚಿದ, “ಸೂಳೆಮಗ.”
ದುರದೃಷ್ಟವಶಾತ್ ಅಲ್ಲಿಯೇ ನಿಂತಿದ್ದವನೊಬ್ಬ ನಜ಼ರುದ್ದೀನ್ ತನ್ನನ್ನು ಉದ್ದೇಶಿಸಿ ಅಂತು ಹೇಳಿದ್ದಾನೆಂದು ತಿಳಿದು ಕೋಪೋದ್ರಿಕ್ತನಾಗಿ ನಜ಼ರುದ್ದೀನ್‌ನನ್ನು ನ್ಯಾಯಾಲಯಕ್ಕೆ ಎಳೆದೊಯ್ದ.
ಪ್ರಕರಣದ ವಿವರವನ್ನು ಕೇಳಿ ತಿಳಿದ ನ್ಯಾಯಾಧೀಶರು ನಜ಼ರುದ್ದೀನ್‌ನಿಗೆ ಐದು ದಿನಾರ್ ದಂಡ ವಿಧಿಸಿದರು.
ನಜ್ರುದ್ದೀನ್ ಮರುಮಾತನಾಡದೆ ೧೦ ದಿನಾರ್ ನಾಣ್ಯವೊಂದನ್ನು ನ್ಯಾಯಾಧೀಶರಿಗೆ ಕೊಟ್ಟನು. ನ್ಯಾಯಾಧೀಶರು ಐದು ದಿನಾರ್ ಹಿಂದಿರುಗಿಸುವ ಸಲುವಾಗಿ ಚಿಲ್ಲರೆಗಾಗಿ ಹುಡುಕಾಡುತ್ತಿರುವಾಗ ನಜ಼ರುದ್ದೀನ್ ಅವರನ್ನು ಕೇಳಿದ, “ಹಾಗಾದರೆ ಯಾರನ್ನಾದರೂ ಈ ರೀತಿ ಬೈದರೆ ಐದು ದಿನಾರ್ ದಂಡ ತೆರಬೇಕಾಗುತ್ತದೆ ಅಲ್ಲವೇ?”
ನ್ಯಾಯಾಧೀಶ: “ಹೌದು.”
ತಕ್ಷಣವೇ ನಜ಼ರುದ್ದೀನ್ ನ್ಯಾಯಾಧೀಶರನ್ನು ಉದ್ದೇಶಿಸಿ ಹೇಳಿದ, “ಸರಿ ಹಾಗಾದರೆ ಚಿಲ್ಲರೆಯನ್ನು ನೀನೇ ಇಟ್ಟುಕೊ ಸೂಳೆಮಗನೇ!”
*****
೪. ಮೂರು ತಿಂಗಳು
ಮದುವೆಯಾಗಿ ಮೂರು ತಿಂಗಳಾದ ನಂತರ ನಜ಼ರುದ್ದೀನ್‌ನ ಹೊಸ ಹೆಂಡತಿ ಹೆಣ್ಣು ಮಗುವಿಗೆ ಜನ್ಮವಿತ್ತಳು.
ನಜ಼ರುದ್ದೀನ್ ಹೆಂಡತಿಯನ್ನು ಕೇಳಿದ, “ನಾನು ಈ ವಿಷಯಗಳಲ್ಲಿ ತಜ್ಞನಲ್ಲ. ಆದ್ದರಿಂದ ಈಗ ನಾನು ಕೇಳುವ ಪ್ರಶ್ನೆಯನ್ನು ತಪ್ಪಾಗಿ ತಿಳೀಯಬೇಡ. ಒಬ್ಬಳು ಹೆಂಗಸಿಗೆ ಸಾಮಾನ್ಯವಾಗಿ ಗರ್ಭಧಾರಣೆಗೂ ಶಿಶುವಿಗೆ ಜನ್ಮವೀಯುವುದಕ್ಕೂ ನಡುವೆ ೯ ತಿಂಗಳು ಅಂತರ ಇರಬೇಕಲ್ಲವೇ?”
ಅವಳು ಉತ್ತರಿಸಿದಳು, “ನೀವು ಗಂಡಸರುಗಳೆಲ್ಲ ಒಂದೇ ತರದವರು, ಹೆಣ್ಣಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಜ್ಞಾನಿಗಳು. ಈಗ ನೀನೇ ನನಗೆ ಹೇಳು: ನಾನು ನಿನ್ನನ್ನು ಮದುವೆಯಾಗಿ ಎಷ್ಟು ಸಮಯವಾಯಿತು?”
ನಜ಼ರುದ್ದೀನ್: “ಮೂರು ತಿಂಗಳು.”
ಹೆಂಡತಿ: “ನೀನು ನನ್ನನ್ನು ಮದುವೆಯಾಗಿ ಎಷ್ಟು ಸಮಯವಾಯಿತು?”
ನಜ಼ರುದ್ದೀನ್: “ಮೂರು ತಿಂಗಳು.”
ಹೆಂಡತಿ: “ನಾನು ಗರ್ಭಿಣಿಯಾಗಿ ಎಷ್ಟು ಸಮಯವಾಯಿತು?”
ನಜ಼ರುದ್ದೀನ್: “ಮೂರು ತಿಂಗಳು.”
ಹೆಂಡತಿ: “ಅಲ್ಲಿಗೆ ಒಟ್ಟು ಎಷ್ಡಾಯಿತು? ೩+೩+೩ = ೯ ಅಲ್ಲವೇ? ಈಗ ನಿನಗೆ ಸಮಾಧಾನವಾಯಿತೇ?”
ನಜ಼ರುದ್ದೀನ್: “ಆಗಿದೆ. ಈ ವಿಷಯವನ್ನು ಚರ್ಚಿಸಲು ಕಾರಣನಾದದ್ದಕ್ಕಾಗಿ ನನ್ನನ್ನು ದಯವಿಟ್ಟು ಕ್ಷಮಿಸು.”
*****
೫. ಹೊಸ ರಾಜನ ಪಂಥಾಹ್ವಾನ
ಪಟ್ಟಣವನ್ನು ಹೊಸದಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದನವನೊಬ್ಬ ಒಂದು ದಿನ ನಜ಼ರುದ್ದೀನ್‌ನಿಗೆ ಹೇಳಿದ, “ಮುಲ್ಲಾ, ನಿನಗೊಂದು ಸವಾಲು. ನೀನು ಮಾಡಿದ ಅಪರಾಧಕ್ಕಿಂತ ಹೆಚ್ಚಾಗಿ ಅದಕ್ಕೆ ನೀನು ನೀಡುವ ವಿವರಣೆ ನನ್ನ ಮನಸ್ಸನ್ನು ನೋಯಿಸಬೇಕು. ಅಂಥದ್ದು ಏನನನ್ನಾದರೂ ಮಾಡು ನೋಡೋಣ!”
ಮಾರನೆಯ ದಿನ ನಜ಼ರುದ್ದೀನ್ ಆಸ್ಥಾನಕ್ಕೆ ಬಂದ ತಕ್ಷಣ ರಾಜನ ಹತ್ತಿರ ಹೋಗಿ ಅವನ ತುಟ್ಟಿಗಳಿಗೆ ಮುತ್ತು ಕೊಟ್ಟ.
ಆಶ್ಚರ್ಯಚಕಿತನಾದ ರಾಜ ಉದ್ಗರಿಸಿದ, “ಏನಿದು?”
“ಕ್ಷಮಿಸಿ ಮಹಾಪ್ರಭು. ನಿಮ್ಮನ್ನು ನಿಮ್ಮ ಹೆಂಡತಿ ಎಂಬುದಾಗಿ ತಪ್ಪಾಗಿ ತಿಳಿದಿದ್ದರಿಂದ ಇಂತಾಯಿತು!”
*****