೧. ಒಲೆ
ನಜ಼ರುದ್ದೀನ್ ತನ್ನ ಮನೆಯ ಅಂಗಳದಲ್ಲಿ ಒಲೆಯೊಂದನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಉತ್ತರಾಭಿಮುಖವಾಗಿರುವುದರಿಂದ ಚಳಿಗಾಲದಲ್ಲಿ ಬೀಸುವ ಶೀತಗಾಳಿಗೆ ಬೆಂಕಿ ಬೇಗನೆ ನಂದಿ ಹೋಗುತ್ತದೆ.”
ನಜ಼ರುದ್ದೀನ್ ಆ ಒಲೆಯನ್ನು ಕಿತ್ತುಹಾಕಿ ದಕ್ಷಿಣಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಗಟ್ಟಿಮುಟ್ಟಾಗಿ ಬಲು ಚೆನ್ನಾಗಿದೆ. ಆದರೂ ದಕ್ಷಿಣಾಭಿಮುಖವಾಗಿರುವುದರಿಂದ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ ಬೀಸಿದಾಗ ಅಡುಗೆ ಮಾಡುವುದು ಕಷ್ಟವಾಗಬಹುದು.” ನಜ಼ರುದ್ದೀನ್ ಆ ಒಲೆಯನ್ನು ಕಿತ್ತುಹಾಕಿ ಪೂರ್ವಾಭಿಮುಖವಾಗಿ ಇರುವ ಇನ್ನೊಂದು ಒಲೆಯನ್ನು ನಿರ್ಮಿಸಿದ. ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರ ಪೈಕಿ ಒಬ್ಬ ಹೇಳಿದ, “ಒಲೆಯೇನೋ ಚೆನ್ನಾಗಿದೆ. ಆದರೂ ವರ್ಷದ ಕೆಲವು ಸಮಯಗಳಲ್ಲಿ ಒಂದು ನಿರ್ದಿಷ್ಟ ದಿಕ್ಕಿನಿಂದ ಗಾಳಿ ಬೀಸಿದಾಗ ಹೊಗೆ ನಿನ್ನ ಮನೆಯತ್ತ ಬರುತ್ತದೆ ಎಂಬುದು ನಿನಗೆ ತಿಳಿದಿದೆಯಷ್ಟೆ.” ಹತಾಶನಾದ ನಜ಼ರುದ್ದೀನ್ ಆ ಒಲೆಯನ್ನೂ ಕೆಡವಿ ಹಾಕಿ ಮತ್ತೊಮ್ಮೆ ಒಲೆಯನ್ನು ನಿರ್ಮಿಸಿದ. ಈ ಸಲ ಅವನ ಒಲೆಯ ಅಡಿಪಾಯಕ್ಕೆ ಚಕ್ರಗಳಿದ್ದವು! ತದನಂತರ ನೆರೆಹೊರೆಯವರನ್ನು ಕರೆದು ಅದನ್ನು ತೋರಿಸಿದ. ಅವರೆಲ್ಲರೂ ಅದನ್ನು ಪರೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಒಬ್ಬ ಅವನನ್ನು ಅದ್ಭುತ ಹೊಸ ಒಲೆಗಾಗಿ ಅಭಿನಂದಿಸಿದ. ಒಬ್ಬ ಗೆಳೆಯ ಕೇಳಿದ, “ನಿನ್ನಿಂದ ನನಗೊಂದು ಉಪಕಾರವಾಗಬೇಕು. ಈ ಒಲೆಯನ್ನು ಈ ಒಂದು ದಿನದ ಮಟ್ಟಿಗೆ ನನಗೆ ಎರವಲು ಕೊಡುವೆಯಾ? ಈ ದಿನ ನನ್ನ ಮನೆಗೆ ಅನೇಕ ಬಂಧುಗಳು ಬರುವವರಿದ್ದಾರೆ. ಇದರಿಂದ ಅವರಿಗೆಲ್ಲ ಭೋಜನ ತಯಾರಿಸುವುದು ಸುಲಭವಾಗುತ್ತದೆ.” ನಜ಼ರುದ್ದೀನ್ ಸಮ್ಮತಿಸಿದ್ದರಿಂದ ಆತ ಒಲೆಯನ್ನು ತಳ್ಳಿಕೊಂಡು ಹೋದ. ಆತ ಒಲೆ ಹಿಂದಕ್ಕೆ ತಂದುಕೊಟ್ಟ ನಂತರ ತಯಾರಿಸಬಹುದಾದ ಖಾದ್ಯಗಳ ಗುಂಗಿನಲ್ಲಿಯೇ ಆ ದಿನ ಕಳೆದ ನಜ್ರುದ್ದೀನ್. ಮಾರನೆಯ ದಿನ ಬೆಳಗ್ಗೆ ಆ ಗೆಳೆಯ ಒಲೆಯನ್ನು ಹಿಂದಿರುಗಿಸಿದನಾದರೂ ಕಾರ್ಯನಿಮಿತ್ತ ನಜ಼ರುದ್ದೀನ್ ಹೊರಹೋಗಬೇಕಾಗಿದ್ದದ್ದರಿಂದ ಒಲೆಯನ್ನು ಉಪಯೋಗಿಸಲಾಗಲಿಲ್ಲ. ಸಂಜೆಯ ವೇಳೆಗೆ ಅವನು ಮನೆಗೆ ಹಿಂದಿರುಗಿದಾಗ ಅವನ ಹೆಂಡತಿ ಹಿಯ್ಯಾಳಿಸಿದಳು, “ನೀನೋ ನಿನ್ನ ಮೂರ್ಖ ಆಲೋಚನೆಗಳೋ. ಚಕ್ರವಿರುವ ಒಲೆಯಂತೆ ಚಕ್ರವಿರುವ ಒಲೆ.”
ನಜ಼ರುದ್ದೀನ್ ಕೇಳಿದ, “ಏಕೆ ಏನಾಯಿತು?”
ಅವಳು ವಿವರಿಸಿದಳು, “ಹೊಸ ಒಲೆಯಲ್ಲಿ ಸ್ವಾದಿಷ್ಟ ತಿನಿಸು ತಯಾರಿಸೋಣ ಅಂದುಕೊಂಡು ಮಾಂಸ ತರಲೋಸುಗ ನಾನು ಮಾರುಕಟ್ಟೆಗೆ ಹೋಗಿ ಬರುವಷ್ಟರಲ್ಲಿ ನಮ್ಮ ಅಂಗಳದಲ್ಲಿದ್ದ ನಿನ್ನ ಚಕ್ರದ ಒಲೆಯನ್ನು ಕಳ್ಳರು ಕದ್ದೊಯ್ದಿದ್ದಾರೆ!”
*****
೨. ನಜ಼ರುದ್ದೀನ್ ಗೋಧಿ ಕದ್ದದ್ದು
ಸ್ಥಳೀಯ ಗಿರಣಿಯಲ್ಲಿ ಗೋಧಿ ಹಿಟ್ಟು ಮಾಡಿಸಲೋಸುಗ ನಜ಼ರುದ್ದೀನ್ ಇನ್ನೂ ಅನೇಕರೊಂದಿಗೆ ತನ್ನ ಸರದಿಗಾಗಿ ಕಾಯುತ್ತಿದ್ದ. ಇಂತು ಕಾಯುತ್ತಿದ್ದಾಗ ನಜ಼ರುದ್ದೀನ್ ಇತರರ ಚೀಲದಿಂದ ಒಂದೊಂದು ಮುಷ್ಟಿಯಷ್ಟು ಗೋಧಿಯನ್ನು ತೆಗೆದು ತನ್ನ ಚೀಲಕ್ಕೆ ಸೇರಿಸಿಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಗಿರಣಿ ಮಾಲಿಕ ನಜ಼ರುದ್ದೀನ್ನಿಗೆ ಮುಖಾಮುಖಿಯಾಗಿ ಕೇಳಿದ, “ನೀನೇನು ಮಾಡುತ್ತಿರುವೆ?”
ನಜ಼ರುದ್ದೀನ್ ಹೇಳಿದ, “ ನನ್ನನ್ನು ನಿರ್ಲಕ್ಷಿಸು. ನಾನೊಬ್ಬ ಪೆದ್ದ, ಅರೆಬುದ್ಧಿಯವ. ನನಗೇನು ತೋಚುತ್ತದೋ ಅದನ್ನು ಮಾಡುತ್ತೇನೆ.”
ಮಾಲಿಕ ಪ್ರತಿಕ್ರಿಯಿಸಿದ, “ಓ ಹಾಗೋ? ನಿನ್ನ ಚೀಲದಿಂದ ಗೋಧಿಯನ್ನು ತೆಗೆದು ಇತರರ ಚೀಲಕ್ಕೆ ಸೇರಿಸಬೇಕೆಂಬುದಾಗಿ ನಿನಗೇಕೆ ತೋಚುತ್ತಿಲ್ಲ?”
ನಜ಼ರುದ್ದೀನ್ ವಿವರಿಸಿದ, “ಏಯ್, ನಾನೊಬ್ಬ ಅರೆಬುದ್ಧಿಯವ ಎಂಬುದಾಗಿ ಹೇಳಿದ್ದೆನೇ ವಿನಾ ಸಂಪೂರ್ಣ ಮಂದಬುದ್ಧಿಯವ ಎಂಬುದಾಗಿ ಅಲ್ಲ!”
*****
೩. ಭೋಜನದ ಬೆಲೆ ಪಾವತಿಸುವಿಕೆ
ನಜ಼ರುದ್ದೀನ್ ಉಪಾಹಾರ ಗೃಹವೊಂದರಲ್ಲಿ ಭೋಜನ ಮಾಡಿ ಪಾವತಿಸಬೇಕಾಗಿದ್ದ ನಿಗದಿತ ಮೊತ್ತದ ಹಣವನ್ನು ಪಾವತಿಸದೆಯೇ ಹೊರಟ. ಮಾಲಿಕ ಓಡಿ ಬಂದು ನಜ಼ರುದ್ದೀನ್‌ನನ್ನು ಅಡ್ಡಗಟ್ಟಿ ಕೇಳಿದ, “ನೀವು ಭೋಜನ ಮಾಡಿದ್ದರ ಬಾಬ್ತು ಕೊಡಬೇಕಾದ ಹಣ ಕೊಟ್ಟಿಲ್ಲ.”
ನಜ಼ರುದ್ದೀನ್ ಮಾಲಿಕನನ್ನು ಕೇಳಿದ, “ನಿಜ, ನಾನು ನಿಮ್ಮನ್ನೊಂದು ಪ್ರಶ್ನೆ ಕೇಳುತ್ತೇನೆ: ಈ ಭೋಜನ ತಯಾರಿಸಲು ಉಪಯೋಗಿಸಿದ ಸಾಮಗ್ರಿಗಳನ್ನು ಅಂಗಡಿಯಲ್ಲಿ ಕೊಂಡುಕೊಳ್ಳುವಾಗ ನೀವು ಅವುಗಳ ಬೆಲೆ ಪಾವತಿಸಿದ್ದೀರೋ?”
ಮಾಲಿಕ ಉತ್ತರಿಸಿದ, “ಖಂಡಿತವಾಗಿಯೂ ಪಾವತಿಸಿದ್ದೇನೆ.”
ನಜ಼ರುದ್ದೀನ್ ವಿವರಿಸಿದ, “ಅಂದ ಮೇಲೆ ಈ ಆಹಾರದ ಬೆಲೆಯನ್ನು ಈಗಾಗಲೇ ಒಮ್ಮೆ ಪಾವತಿಸಿ ಆಗಿದೆ. ಪುನಃ ಎರಡನೇ ಸಲ ಅದಕ್ಕೇಕೆ ಹಣ ಪಾವತಿಸಬೇಕು?”
*****
೪. ನಾನು ಹೋಗುವುದು ಸ್ವರ್ಗಕ್ಕೋ ನರಕಕ್ಕೋ?
ಒಂದು ದಿನ ನಜ಼ರುದ್ದೀನ್‌ನನ್ನು ರಾಜ ಕೇಳಿದ, “ಮುಲ್ಲಾ, ನಾನು ಸತ್ತ ನಂತರ ಹೋಗುವುದು ಸ್ವರ್ಗಕ್ಕೋ ನರಕಕ್ಕೋ?”
ನಜ಼ರುದ್ದೀನ್ ಉತ್ತರಿಸಿದ, “ನರಕಕ್ಕೆ.”
ತಕ್ಷಣವೇ ರಾಜ ಕೋಪೋದ್ರಿಕ್ತನಾಗಿ ಕೇಳಿದ, “ಅದೇಕೆ?”
ನಜ಼ರುದ್ದೀನ್ ವಿವರಿಸಿದ, “ನೀವು ನಿಮ್ಮ ಆಡಳಿತಾವಧಿಯಲ್ಲಿ ಗಲ್ಲಿಗೇರಿಸಿದ ಅಮಾಯಕರಿಂದ ಸ್ವರ್ಗ ತುಂಬಿತುಳುಕುತ್ತಿದೆ. ಆದ್ದರಿಂದ ಅಲ್ಲಿ ಸ್ಥಳವಿಲ್ಲ. ಆದರೂ ತಾವು ಚಿಂತೆ ಮಾಡಬೇಡಿ. ನಿಮ್ಮ ಗೌರವಾರ್ಥ ಈಗಾಗಲೇ ಅವರೊಂದು ಸ್ಥಳವನ್ನು ನರಕದಲ್ಲಿ ನಿಮಗಾಗಿ ಕಾಯ್ದಿರಿಸಿದ್ದಾರೆ!”
*****
೫. ಮನೆಯ ಹಾದಿ
ನಜ಼ರುದ್ದೀನ್‌ನ ಊರಿನಲ್ಲಿಯೇ ವಾಸಿಸುತ್ತಿದ್ದ ಮತೀಯ ಮುಖಂಡನಿಗೆ ನಜ಼ರುದ್ದೀನ್ ಪ್ರಿಯನಾದವನೇನೂ ಆಗಿರಲಿಲ್ಲ.
ಆದರೂ ಒಂದು ರಾತ್ರಿ ಒಬ್ಬಂಟಿಯಾಗಿ ಮನೆಗೆ ನಡೆದುಕೊಂಡು ಹೋಗಲು ಇಷ್ಟವಿಲ್ಲದಿದ್ದ ಕಾರಣ ಅವನು ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ನಜ಼ರುದ್ದೀನ್‌ನೊಂದಿಗೆ ಹೋಗಲು ನಿರ್ಧರಿಸಿದ. ಇಬ್ಬರೂ ಜತೆಗೂಡಿ ನಡೆಯಲಾರಂಭಿಸಿದರು. ಕಡಿದಾದ ಏರು ಚಡಾವನ್ನು ಕ್ರಮಿಸಬೇಕಾಗಿ ಬಂದಾಗ ಮತೀಯ ಮುಖಂಡ ಒಮ್ಮೆ ಚಡಾವನ್ನು ನೋಡಿ ಹೇಳಿದ, “ಓ ದೇವರೇ, ನನ್ನ ಜೊತೆಗಾರನ ಅಷ್ಟೇನೂ ಅನುಕರಣಯೋಗ್ಯವಲ್ಲದ ವರ್ತನೆಗಾಗಿ ಅವನನ್ನು ಶಿಕ್ಷಿಸಲೋಸುಗ ಈ ಚಡಾವು ಅತೀ ಕಡಿದಾಗಿರುವಂತೆ ನೀನು ಮಾಡಿರಬೇಕು.”
ಮಜ಼ರುದ್ದೀನ್ ಪ್ರತಿಕ್ರಿಯಿಸಿದ, “ಓ ಮಿತ್ರನೇ, ಸನ್ನಿವೇಶವನ್ನು ನೀನು ತಪ್ಪಾಗಿ ಅರ್ಥೈಸಿರುವೆ. ಇಂದು ಬೆಳಗ್ಗೆ ನಾನು ಈ ಮಾರ್ಗವಾಗಿ ಬಂದಾಗ ಇದು ಇಳಿಜಾರು ಆಗಿದ್ದು ನಡೆಯಲು ಬಲು ಸುಲಭವಾದುದಾಗಿತ್ತು. ಆದರೆ ಈಗ ನೀನು ನನ್ನ ಜೊತೆಯಲ್ಲಿ ಇರುವುದರಿಂದಲೋ ಏನೋ ಹಾದಿ ಈ ರೀತಿಯಲ್ಲಿ ಏರುಮುಖವಾಗಿದೆ!”
*****
beautifulll