೧. ಕಿಕ್ಕಿರಿದ ಮನೆ
ಮುಲ್ಲಾ ನಜರುದ್ದೀನ್ ನೆರೆಮನೆಯವನೊಂದಿಗೆ ಒಂದು ದಿನ ಮಾತನಾಡುತ್ತಿರುವಾಗ ಆತ ಬಲು ಸಂಕಟ ಪಡುತ್ತಿರುವವನಂತೆ ಕಾಣುತ್ತಿದ್ದ. ಅವನಿಗೇನು ತೊಂದರೆ ಇದೆ ಎಂಬುದನ್ನು ಮುಲ್ಲಾ ವಿಚಾರಿಸಿದ. ತನ್ನ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಆತ ವಿವರಿಸುತ್ತಾ ಹೇಳಿದ, “ನನ್ನದು ಬಲು ಚಿಕ್ಕ ಮನೆ, ಮುಲ್ಲಾ. ನಾನು, ನನ್ನ ಹೆಂಡತಿ, ನನ್ನ ಮೂರು ಮಕ್ಕಳು, ನನ್ನ ಅತ್ತೆ ಎಲ್ಲರೂ ಇಷ್ಟು ಚಿಕ್ಕ ಮನೆಯಲ್ಲಿ ಒಟ್ಟಿಗೇ ವಾಸ ಮಾಡಬೇಕಾಗಿದೆ. ಸ್ಥಳ ಕಮ್ಮಿ ಇರುವುದರಿಂದ ಓಡಾಡಲು ಸ್ಥಳವೇ ಇಲ್ಲ.” ಆ ಪರಿಸ್ಥಿತಿ ನಿಭಾಯಿಸಲು ಏನಾದರೂ ಉಪಾಯ ತಿಳಿಸುವಂತೆ ಮುಲ್ಲಾನನ್ನು ಆತ ವಿನಂತಿಸಿದ.
ನಜರುದ್ದೀನ್ ಕೇಳಿದ, “ನಿನ್ನ ಹತ್ತಿರ ಕೋಳಿಗಳು ಇವೆಯೇ?”
“ಓಹೋ, ಹತ್ತು ಕೋಳಿಗಳಿವೆ.”
“ಬಹಳ ಒಳ್ಳೆಯದಾಯಿತು. ಆ ಹತ್ತೂ ಕೋಳಿಗಳನ್ನು ಮನೆಯೊಳಕ್ಕೆ ಒಯ್ದು ಅಲ್ಲಿಯೇ ಇರಿಸಿಕೊ.”
“ಅಯ್ಯೋ ಮುಲ್ಲಾ, ಈಗಾಗಲೇ ನನ್ನ ಮನೆಯೊಳಗೆ ಅತೀ ಹೆಚ್ಚು ಮಂದಿ ಇದ್ದಾರೆ.”
“ಮರು ಮಾತನಾಡದೆ ನಾನು ಹೇಳಿದಷ್ಟು ಮಾಡು,” ಆಜ್ಞಾಪಿಸಿದ ಮುಲ್ಲಾ.
ನೆರೆಮನೆಯಾತನನ್ನು ಸ್ಥಳಾವಕಾಶದ ಸಮಸ್ಯೆ ಬಹುವಾಗಿ ಕಾಡುತ್ತಿದ್ದದ್ದರಿಂದ ಮುಲ್ಲಾನ ಸಲಹೆಯಂತೆ ಮಾಡಲು ತೀರ್ಮಾನಿಸಿದ. ಮನೆಗೆ ಹೋದ ತಕ್ಷಣ ಹೊರಗಿದ್ದ ಕೋಳಿಗಳನ್ನು ಮನೆಯೊಳಕ್ಕೆ ಸಾಗಿಸಿದ. ಮಾರನೆಯ ದಿನ ಅವನು ನಜರುದ್ದೀನನ್ನು ಭೇಟಿ ಮಾಡಿ ಹೇಳಿದ, “ಮುಲ್ಲಾ, ನಿನ್ನ ಸಲಹೆಯಂತೆ ಕೋಳಿಗಳನ್ನು ಮನೆಯೊಳಕ್ಕೆ ಸಾಗಿಸಿದೆ. ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ. ವಾಸ್ತವವಾಗಿ ಅದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಮನೆಯೊಳಗೆ ಸ್ಥಳಾವಕಾಶ ಇನ್ನು ಕಮ್ಮಿ ಆಯಿತು.”
ನಜರುದ್ದೀನ್ ಹೇಳಿದ, “ಓ ಹಾಗಾಗಿದೆಯೋ! ಈಗ ನಿನ್ನ ಕತ್ತೆಯನ್ನೂ ಮನೆಯೊಳಕ್ಕೆ ಒಯ್ದು ಅಲ್ಲಿಯೇ ಇಟ್ಟುಕೊ.”
ಈ ಸಲಹೆ ನೆರೆಮನೆಯಾತನಿಗೆ ಪಥ್ಯವಾಗದೇ ಇದ್ದರೂ ನಜರುದ್ದೀನ್ ಅವನನ್ನು ಒಪ್ಪಿಸುವುದರಲ್ಲಿ ಯಶಸ್ವಿಯಾದ.
ಮಾರನೆಯ ದಿನ ಅವನು ನಜರುದ್ದೀನನ್ನು ಭೇಟಿ ಮಾಡಿ ಬಲು ಬಳಲಿಕೆಯಿಂದ ಹೇಳಿದ, “ಈಗ ಆರು ಮನುಷ್ಯರು, ಹತ್ತು ಕೋಳಿಗಳು ಹಾಗೂ ಒಂದು ಕತ್ತೆ ಮನೆಯೊಳಗೆ. ಅಲುಗಾಡುವುದೇ ಕಷ್ಟವಾಗುತ್ತಿದೆ.”
ನಜರುದ್ದೀನ್ ಕೇಳಿದ, “ನಿನ್ನ ಹತ್ತಿರ ಆಡು ಇದೆಯೇ?”
“ಇದೆ.”
“ಬಹಳ ಒಳ್ಳೆಯದಾಯಿತು. ಅದನ್ನೂ ಮನೆಯೊಳಗೆ ಸಾಗಿಸು.”
“ಅದರಿಂದ ಸಮಸ್ಯೆ ಹೇಗೆ ಪರಿಹಾರವಾಗುತ್ತದೆ,” ಸಿಟ್ಟಿನಿಂದ ಕೇಳಿದ ನೆರೆಮನೆಯಾತ. ಏನೇನೋ ಹೇಳಿ ಮುಲ್ಲಾ ಅವನನ್ನು ಒಪ್ಪಿಸಿದ.
ಮಾರನೆಯ ದಿನ ಕೋಪೋದ್ರಿಕ್ತನಾಗಿದ್ದ ನೆರೆಮನೆಯಾತ ನಜರುದ್ದೀನನನ್ನು ಭೇಟಿ ಮಾಡಿ ಹೇಳಿದ, “ನಿನ್ನ ಯೋಜನೆಯ ಅನುಷ್ಠಾನದಿಂದ ನಾವು ಮನೆಯೊಳಗೆ ಜೀವಿಸುವುದೇ ಕಷ್ಟವಾಗಿದೆ. ಪರಿಸ್ಥಿತಿ ಏನಾಗಿದೆಯೆಂದರೆ ಉಸಿರಾಡುವುದೇ ಕಷ್ಟವಾಗಿದೆ. ನನ್ನ ಕುಟುಂಬದ ಎಲ್ಲ ಸದಸ್ಯರೂ ಸ್ಥಳವೇ ಇಲ್ಲದಿರುವುದಕ್ಕೆ ಗೊಣಗಲಾರಂಭಿಸಿದ್ದಾರೆ.”
“ಮನಃಕ್ಷೋಭೆಗೊಳಗಾಗ ಬೇಡ ಗೆಳೆಯ! ಈಗ ಮನೆಗೆ ಹೋಗಿ ಎಲ್ಲ ಪ್ರಾಣಿಗಳನ್ನೂ ಹೊರಕ್ಕೆ ತಾ.”
ಆತ ಅಂತೆಯೇ ಮಾಡಿದ.
ಮಾರನೆಯ ದಿನ ನಜರುದ್ದೀನನನ್ನು ಭೇಟಿ ಮಾಡಿ ಬಲು ಆನಂದದಿಂದ ಹೇಳಿದ, “ಧನ್ಯವಾದಗಳು ಮುಲ್ಲಾ. ನಿನ್ನ ಸಲಹೆ ಪವಾಡವನ್ನೇ ಮಾಡಿದೆ. ಪ್ರಾಣಿಗಳನ್ನು ಹೊರಕ್ಕೆ ಸಾಗಿಸಿದ ಮೇಲೆ ಕುಟುಂಬದ ಎಲ್ಲ ಸದಸ್ಯರಿಗೂ ಸಾಕಾಗುವಷ್ಟು ಸ್ಥಳಾವಕಾಶ ಸಿಕ್ಕಿದೆ. ಎಲ್ಲರಿಗೂ ಸಂತೋಷವಾಗಿದೆ. ಎಲ್ಲರೂ ಮನೆಯಲ್ಲಿ ಲಭ್ಯವಿರುವ ಸ್ಥಳಾವಕಾಶದ ಕುರಿತು ಈಗ ತೃಪ್ತರಾಗಿದ್ದಾರೆ.”
*****
೨. ಖಾತರಿ ಕೊಡುವಿಕೆ.
ರಾಜನ ಆಸ್ಥಾನಕ್ಕೆ ಒಮ್ಮೆ ನಜರುದ್ದೀನ್ ಹೋಗಿದ್ದಾಗ ರಾಜ ಅವನನ್ನು ಕೇಳಿದ, “ಮುಲ್ಲಾ ನಜರುದ್ದೀನ್, ನೀನು ಯಾವಾಗಲೂ ನಿನ್ನ ವಿವೇಕ ಹಾಗೂ ಚಾಣಾಕ್ಷತನದ ಕುರಿತು ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತೀಯಲ್ಲ, ನಿನ್ನ ಕತ್ತೆಗೆ ಓದಲು ಕಲಿಸಲು ನಿನ್ನಿಂದ ಸಾಧ್ಯವೇ ಹೇಳು ನೋಡೋಣ.”
“ಓಹೋ, ಖಂಡಿತ ಮಹಾಪ್ರಭು, ಅದು ಬಲು ಸುಲಭದ ಕಾರ್ಯ,” ಉತ್ತರಿಸಿದ ನಜರುದ್ದೀನ್.
“ನಂಬಲಸಾಧ್ಯ,” ರಾಜ ಪ್ರತಿಕ್ರಿಯಿಸಿದ.
ನಜರುದ್ದೀನ್ ಹೇಳಿದ, “ನಾನು ನಿಜ ಹೇಳುತ್ತಿದ್ದೇನೆ ಮಹಾಪ್ರಭು. ನಾನು ಅದನ್ನು ಸಾಬೀತು ಪಡಿಸಬಲ್ಲೆ.”
“ಹಾಗಿದ್ದರೆ ಈ ಕಾರ್ಯವನ್ನು ಪಂಥಾಹ್ವಾನವಾಗಿ ಸ್ವೀಕರಿಸಲು ನೀನು ಸಿದ್ಧನಿರುವೆಯಾ?” ಕೇಳಿದ ರಾಜ.
“ಸಿದ್ಧನಿದ್ದೇನೆ ಮಹಾಪ್ರಭು, ನೀವು ಈ ಕ್ಷಣದಲ್ಲಿ ನನಗೆ ೫೦ ಸಾವಿರ ಚಿನ್ನದ ನಾಣ್ಯಗಳನ್ನು ಕೊಟ್ಟರೆ ಇನ್ನು ಎಂಟು ವರ್ಷಗಳು ಕಳೆಯುವಷ್ಟರಲ್ಲಿ ನನ್ನ ಕತ್ತೆಗೆ ಓದಲು ಕಲಿಸುವ ಭರವಸೆ ಕೊಡುತ್ತೇನೆ,” ಎಂಬುದಾಗಿ ಉತರಿಸಿದ ನಜರುದ್ದೀನ್.
ರಾಜ ಹೇಳಿದ, “ಬಹಳ ಒಳ್ಳೆಯದು, ನಿನ್ನ ಷರತ್ತಿಗೆ ನನ್ನ ಒಪ್ಪಿಗೆ ಇದೆ. ಆದರೆ, ನನ್ನದೂ ಒಂದು ಷರತ್ತು ಇದೆ. ಎಂಟು ವರ್ಷಗಳ ನಂತರ ನಿನ್ನ ಕತ್ತೆ ಓದಲು ಅಸಮರ್ಥವಾಗಿದ್ದರೆ ನಿನ್ನನ್ನು ಸೆರೆಮನೆಗೆ ಹಾಕಿ ಪ್ರತೀದಿನ ಚಿತ್ರಹಿಂಸೆ ಮಾಡಲಾಗುತ್ತದೆ.”
ಇಬ್ಬರೂ ಈ ಷರತ್ತುಗಳನ್ನು ಉಲ್ಲೇಖಿಸಿ ಯುಕ್ತ ಒಪ್ಪಂದ ಮಾಡಿಕೊಂಡ ನಂತರ ನಜರುದ್ದೀನ್ ತನ್ನ ಮನೆಗೆ ಹಿಂದಿರುಗಿದ.
ರಾಜನ ಆಸ್ಥಾನದಲ್ಲಿ ಏನು ನಡೆಯಿತೆಂಬುದನ್ನು ನಜರುದ್ದೀನ್ ತನ್ನ ಮಿತ್ರನಿಗೆ ಮಾರನೆಯ ದಿನ ವಿವರಿಸಿದ.
“ಮುಲ್ಲಾ, ಇಂಥದ್ದೊಂದು ಅಸಾಧನೀಯ ಕಾರ್ಯವನ್ನು ಮಾಡುತ್ತೇನೆಂದು ಹೇಗೆ ಒಪ್ಪಿಕೊಂಡೆ? ನಿನ್ನ ಕತ್ತೆ ಅಲುಗಾಡದಂತೆ ನಿಲ್ಲುವಂತೆ ಮಾಡುವುದೂ ನಿನ್ನಿಂದ ಸಾಧ್ಯವಿಲ್ಲ. ಅಂದ ಮೇಲೆ ಎಂಟು ವರ್ಷಗಳಲ್ಲಿ ಅದಕ್ಕೆ ಓದಲು ಕಲಿಸುತ್ತೇನೆಂದು ಹೇಗೆ ಭರವಸೆ ಕೊಟ್ಟೆ? ಸೆರೆಮನೆ ವಾಸವನ್ನು ನೀನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ.
ಶಾಂತಚಿತ್ತನಾಗಿ ನಜರುದ್ದೀನ್ ಉತ್ತರಿಸಿದ, “ನಿಶ್ಚಿಂತನಾಗಿರು ಮಿತ್ರ! ಆ ವೇಳೆಗೆ ಬಹುಶಃ ನಮ್ಮ ರಾಜನೇ ಸತ್ತು ಹೋಗಿರುತ್ತಾನೆ ಅಥವ ಅವನು ರಾಜನಾಗಿ ಉಳಿದಿರುವುದಿಲ್ಲ. ಎಂಟು ವರ್ಷಗಳ ನಂತರವೂ ಅವನು ರಾಜನಾಗಿ ಉಳಿದಿದ್ದರೆ, ಬಹುಶಃ ನನ್ನ ಕತ್ತೆಯೇ ಸತ್ತು ಹೋಗಿರುತ್ತದೆ. ಏಳು ವರ್ಷಗಳು ಕಳೆಯುವುದರೊಳಗೆ ಇವು ಯಾವುದೂ ಸಂಭವಿಸದೇ ಇದ್ದರೆ ಉಳಿದ ಒಂದು ವರ್ಷದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ಯೋಜನೆಯೊಂದನ್ನು ರೂಪಿಸುತ್ತೇನೆ.”
*****
೩. ಮರದ ಮೇಲಿನ ಮನುಷ್ಯ
ಒಬ್ಬ ಒಂದು ಎತ್ತರವಾಗಿದ್ದ ಮರವನ್ನು ಹತ್ತಿದ. ಹತ್ತುವಾಗ ಅದು ಎಷ್ಟು ಎತ್ತರ ಇರಬಹುದೆಂಬುದು ಆತನಿಗೆ ಹೊಳೆದಿರಲಿಲ್ಲ. ತುದಿಯನ್ನು ತಲುಪಿ ಕೆಳಗೆ ನೋಡಿದಾಗ ಇಳಿಯುವುದು ಏರಿದಷ್ಟು ಸುಲಭವಲ್ಲ ಎಂಬುದು ಅವನಿಗೆ ಹೊಳೆಯಿತು. ತೀವ್ರವಾದ ಗಾಯವಾಗದೇ ಇಳಿಯುವುದು ಹೇಗೆಂಬುದು ಅವನಿಗೆ ತಿಳಿಯಲಿಲ್ಲ. ಆ ಮರದ ಸಮೀಪದಲ್ಲಿ ಹೋಗುತ್ತಿದ್ದವರನ್ನು ತನಗೆ ಸಹಾಯ ಮಾಡುವಂತೆ ವಿನಂತಿಸಿದ. ಆದರೆ ಸುರಕ್ಷಿತವಾಗಿ ಅವನನ್ನು ಕೆಳಕ್ಕೆ ಇಳಿಸುವುದು ಹೇಗೆಂಬುದು ಯಾರಿಗೂ ತಿಳಿದಿರಲಿಲ್ಲ. ಅವನಿಗೆ ಸಹಾಯ ಮಾಡಲು ಇಚ್ಛಿಸುವವರ ಒಂದು ಗುಂಪು ಮರದ ಸುತ್ತಲೂ ಸೇರಿತಾದರೂ ಯಾರಿಗೂ ಏನು ಮಾಡಬೇಕೆಂಬುದು ಗೊತ್ತಿರಲಿಲ್ಲ. ಆ ಮನುಷ್ಯ ಮರದ ತುದಿಯಲ್ಲಿಯೇ ಇದ್ದ. ಆ ಸಮಯಕ್ಕೆ ಸರಿಯಾಗಿ ಆ ಮಾರ್ಗವಾಗಿ ಹೋಗುತ್ತಿದ್ದ ನಜರುದ್ದೀನ್ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಅಲ್ಲಿಗೆ ಬಂದ. ವಿಷಯ ಏನೆಂಬುದನ್ನು ತಿಳಿದ ನಜರುದ್ದೀನ್ ಹೇಳಿದ, “ಅಷ್ಟೇನಾ? ಕ್ಷಣ ಮಾತ್ರದಲ್ಲಿ ನಾನು ಅವನನ್ನು ಕೆಳಕ್ಕೆ ಇಳಿಸುತ್ತೇನೆ.” ಒಂದು ಉದ್ದನೆಯ ಹಗ್ಗವನ್ನು ಎಲ್ಲಿಂದಲೋ ತರಿಸಿದ ಆತ ಅದರ ಒಂದು ತುದಿಯನ್ನು ಮೇಲಕ್ಕೆಸೆಯುವುದಾಗಿಯೂ ಅದನ್ನು ಹಿಡಿದು ತನ್ನ ಸೊಂಟಕ್ಕೆ ಭದ್ರವಾಗಿ ಕಟ್ಟಿಕೊಳ್ಳುವಂತೆಯೂ ಮರದ ಮೇಲಿದ್ದಾತನಿಗೆ ಹೇಳಿದ.
ನಜರುದ್ದೀನನ ಯೋಜನೆ ಏನೆಂಬುದು ಯಾರಿಗೂ ಅರ್ಥವಾಗಲಿಲ್ಲ. ಎಂದೇ ಒಬ್ಬ ಅದೇನೆಂದು ವಿಚಾರಿಸಿದಾಗ ನಜರುದ್ದೀನ್ ಹೇಳಿದ, “ಸುಮ್ಮನೆ ಈ ಕೆಲಸವನ್ನು ನನಗೆ ಬಿಟ್ಟುಬಿಡಿ. ನನ್ನ ಯೋಜನೆ ಯಶಸ್ವಿಯಾಗುವುದು ಖಾತರಿ.”
ಮರದ ಮೇಲಿದ್ದಾತ ಹಗ್ಗವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡ ನಂತರ ನಜರುದ್ದೀನ್ ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಹಗ್ಗವನ್ನು ಜೋರಾಗಿ ಎಳೆದ. ತತ್ಪರಿಣಾಮವಾಗಿ ಮರದ ಮೇಲಿದ್ದಾತ ದೊಪ್ಪನೆ ಕೆಳಕ್ಕೆ ಬಿದ್ದು ಅವನ ಮೂಳೆ ಮುರಿಯಿತು. ನೋಡುತ್ತಿದ್ದವರಿಗೆ ಆಘಾತವಾಯಿತು. ಅವರ ಪೈಕಿ ಒಬ್ಬಾತ ಕೇಳಿದ, “ಏನಾಗುತ್ತದೆಂದು ನೀನು ಊಹಿಸಿದ್ದೆ? ಇದೆಂಥ ಮೂರ್ಖ ವಿಧಾನ?”
ನಜರುದ್ದೀನ್ ಉತ್ತರಿಸಿದ, “ಹಿಂದೊಮ್ಮೆ ಇದೇ ವಿಧಾನದಿಂದ ನಾನೊಬ್ಬನ ಪ್ರಾಣ ಉಳಿಸಿದ್ದೆ.”
ಇನ್ನೊಬ್ಬ ಕೇಳಿದ, “ನಿಜವಾಗಿಯೂ?”
“ನಿಜವಾಗಿಯೂ. ಒಂದೇ ಒಂದು ವಿಷಯವೆಂದರೆ ನಾನು ಅವನನ್ನು ಬಾವಿಯೊಳಗಿದ್ದಾಗ ರಕ್ಷಿಸಿದೆನೋ ಅಥವ ಮರದ ಮೇಲಿದ್ದಾಗಲೋ ಎಂಬುದು ನೆನಪಾಗುತ್ತಿಲ್ಲ.”
*****
೪. ನಿದ್ದೆ ಮಾಡುತ್ತಿರುವೆಯೇನು?
ಒಮ್ಮೆ ಮುಲ್ಲಾ ನಜರುದ್ದೀನ್ ಹಾಸಿಗೆಯಲ್ಲಿ ಕಣ್ಣುಮುಚ್ಚಿ ಮಲಗಿದ್ದಾಗ ಅವನ ಭಾವ ಒಳಬಂದು ಕೇಳಿದ. “ನಿದ್ದೆ ಮಾಡುತ್ತಿರುವೆಯೇನು?” ನಜರುದ್ದೀನ್ ಪ್ರತಿಕ್ರಿಯಿಸಿದ, “ಏಕೆ? ಏನು ವಿಷಯ?”
ಭಾವ ಹೇಳಿದ, “ನನಗೆ ೩೦೦ ಚಿನ್ನದ ನಾಣ್ಯಗಳ ಸಾಲ ಬೇಕಾಗಿತ್ತು. ನೀನು ಅಷ್ಟು ಹಣ ಸಾಲ ನೀಡಬಲ್ಲೆಯಾ ಎಂಬುದಾಗಿ ಆಲೋಚಿಸುತ್ತಿದ್ದೆ.”
ಮುಲ್ಲಾ ಉತ್ತರಿಸಿದ, “ಓ, ಅದೋ ವಿಷಯ. ಹಾಗಾದರೆ ಈಗ ನಿನ್ನ ಮೊದಲನೇ ಪ್ರಶ್ನೆ ‘ನಿದ್ದೆ ಮಾಡುತ್ತಿರುವೆಯೇನು?’ ಅನ್ನು ಈಗ ಗಮನಿಸೋಣ. ಅದಕ್ಕೆ ನನ್ನ ಉತ್ತರ ‘ಹೌದು, ನಾನು ನಿದ್ದೆ ಮಾಡುತ್ತಿದ್ದೇನೆ’. ಆದ್ದರಿಂದ ಈಗ ಇಲ್ಲಿಂದ ಹೊರಡು, ಪುನಃ ಬಂದು ನನಗೆ ತೊಂದರೆ ಕೊಡಬೇಡ.”
*****
೫. ಯಾವಾಗ ಅನ್ನುವುದು ಪ್ರಶ್ನೆ
ನಜರುದ್ದೀನ್ ಹೋಜ ತನ್ನ ಜಮೀನನ್ನು ಉಳುತ್ತಿದ್ದಾಗ ಒಬ್ಬ ಬೇಟೆಗಾರ ಕುದುರೆ ಸವಾರಿ ಮಾಡುತ್ತಾ ಅಲ್ಲಿಗೆ ಬಂದ.
ಬೇಟೆಗಾರ ಕೇಳಿದ, “ಏಯ್ ನೀನು! ಗಂಡು ಹಂದಿಯೊಂದು ಈ ಸ್ಥಳದ ಮೂಲಕ ಓಡಿದ್ದನ್ನು ನೋಡಿದೆಯಾ?”
“ನೋಡಿದೆ,” ಉತ್ತರಿಸಿದ ಹೋಜ.
“ಅದು ಯಾವ ಕಡೆಗೆ ಹೋಯಿತು,” ವಿಚಾರಿಸಿದ ಬೇಟೆಗಾರ.
ಅದು ಹೋದ ದಿಕ್ಕನ್ನು ತೋರಿಸಿದ ಹೋಜ.
ಧನ್ಯವಾದಗಳನ್ನೂ ಹೇಳದೆ ಬೇಟೆಗಾರನು ಹೋಜ ತೋರಿಸಿದ ದಿಕ್ಕಿನತ್ತ ದೌಡಾಯಿಸಿದ, ಕೆಲವೇ ನಿಮಿಷಗಳಲ್ಲಿ ಹಿಂದಕ್ಕೆ ಬಂದ.
“ಎಲ್ಲಿಯೂ ಅದರ ಸುಳಿವೇ ಇಲ್ಲ. ಆ ದಿಕ್ಕಿಗೇ ಅದು ಹೋದದ್ದು ನಿಜವಷ್ಟೆ?” ಪ್ರಶ್ನಿಸಿದ ಬೇಟೆಗಾರ.
ಹೋಜ ಉತ್ತರಿಸಿದ, “ಸಂಶಯವೇ ಇಲ್ಲ. ಅದು ಆ ದಿಕ್ಕಿಗೇ ಹೋಯಿತು, ಎರಡು ವರ್ಷಗಳ ಹಿಂದೆ.”
*****