ಝೆನ್-ಸೂಫಿ ಕತೆಗಳು

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ವಿದ್ವಾಂಸ ಸಾರಥಿ

ಮುಲ್ಲಾ ನಜರುದ್ದೀನ್‌ ಒಮ್ಮೆ ಕುದುರೆಗಾಡಿಯ ಸಾರಥಿಯ ಕೆಲಸವನ್ನು ಮಾಡಲು ಒಪ್ಪಿಕೊಂಡ. ಒಂದು ದಿನ ಆತ ಪಟ್ಟಣದ ಕುಖ್ಯಾತ ಭಾಗಕ್ಕೆ ಮಾಲಿಕನನ್ನು ಒಯ್ಯಬೇಕಾಗಿತ್ತು.

ಗಮ್ಯಸ್ಥಾನ ತಲುಪಿದ ನಂತರ ಗಾಡಿಯಿಂದಿಳಿದ ಮಾಲಿಕ ಸಲಹೆ ನೀಡಿದ, “ಬಲು ಜಾಗರೂಕನಾಗಿರು. ಇಲ್ಲಿ ತುಂಬಾ ಕಳ್ಳರಿದ್ದಾರೆ.”

ತುಸು ಸಮಯ ಕಳೆದ ನಂತರ ಹೊಸ ಸಾರಥಿ ಏನು ಮಾಡುತ್ತಿದ್ದಾನೆಂಬುದನ್ನು ತಿಳಿಯಲು ಇಚ್ಛಿಸಿದ ಮಾಲಿಕ ತಾನಿದ್ದ ಮನೆಯ ಕಿಟಕಿಯೊಂದರಿಂದ ತಲೆ ಹೊರಹಾಕಿ ಬೊಬ್ಬೆಹಾಕಿದ, “ಎಲ್ಲವೂ ಸರಿಯಾಗಿದೆಯಷ್ಟೆ? ಈಗ ನೀನೇನು ಮಾಡುತ್ತಿರುವೆ?”

“ಒಬ್ಬ ವ್ಯಕ್ತಿ ಕುಳಿತಲ್ಲಿಂದ ಎದ್ದರೆ ಅವನ ಮಡಿಲು ಏನಾಗುತ್ತದೆ ಎಂಬುದನ್ನು ಆಲೋಚಿಸುತ್ತಾ ಇಲ್ಲಿ ಕುಳಿತಿದ್ದೇನೆ,” ಕೂಗಿಹೇಳಿದ ಮುಲ್ಲಾ.

ತುಸು ಸಮಯ ಕಳೆದ ನಂತರ ಮಾಲಿಕ ಪುನಃ ಕೇಳಿದ, “ಈಗ ನೀನೇನು ಮಾಡುತ್ತಿರುವೆ?”

“ಮುಷ್ಟಿಯ ಬೆರಳುಗಳನ್ನು ಬಿಡಿಸಿದರೆ ಏನಾಗುತ್ತದೆ ಎಂಬುದನ್ನು ಆಲೋಚಿಸುತ್ತಾ ಇಲ್ಲಿ ಕುಳಿತಿದ್ದೇನೆ,” ಕೂಗಿಹೇಳಿದ ನಜರುದ್ದೀನ್‌.

ಈ ಉತ್ತರಗಳಿಂದ ಬಲು ಪ್ರಭಾವಿತನಾದ ಮಾಲಿಕ ಅತಿಥೇಯರೊಂದಿಗೆ ಕೊಚ್ಚಿಕೊಂಡ, “ನನ್ನ ಸಾರಥಿ ಸಾಮಾನ್ಯನಲ್ಲ, ಅವನೊಬ್ಬ ತತ್ವಶಾಸ್ತ್ರಜ್ಞ.”

ಅರ್ಧ ತಾಸು ಕಳೆದ ಬಳಿಕ ಮಾಲಿಕ ಪುನಃ ಕೇಳಿದ, “ಈಗ ನೀನೇನು ಮಾಡುತ್ತಿರುವೆ?”

ಮುಲ್ಲಾ ಉತ್ತರಿಸಿದ, “ಕುದುರೆಗಳನ್ನು ಕದ್ದವರು ಯಾರು ಎಂಬುದನ್ನು ಆಲೋಚಿಸುತ್ತಿದ್ದೇನೆ.”

*****

೨. ನಾನು ಹೇಳಲಿಲ್ಲವೇ?

ಮುಲ್ಲಾ ನಜರುದ್ದೀನ್ ಒಮ್ಮೆ ಆಹಾರದ ತುಣುಕುಗಳನ್ನು ತನ್ನ ಮನೆಯ ಸುತ್ತಲೂ ಎಸೆಯುತ್ತಿದ್ದ. ಯಾರೋ ಕೇಳಿದರು, “ನೀನೇನು ಮಾಡುತ್ತಿರುವೆ?” ಮುಲ್ಲಾ ಉತ್ತರಿಸಿದ, “ಹುಲಿಗಳು ನನ್ನ ಮನೆಯ ಹತ್ತಿರ ಬರದಂತೆ ಮಾಡುತ್ತಿದ್ದೇನೆ.”

“ಆದರೆ ಇಲ್ಲಿ ಆಸುಪಾಸಿನಲ್ಲೆಲ್ಲೂ ಹುಲಿಗಳೇ ಇಲ್ಲವಲ್ಲಾ?”

 “ನಿಜ. ನನ್ನ ವಿಧಾನ ಬಲು ಪರಿಣಾಮಕಾರಿಯಾಗಿದೆಯಲ್ಲವೇ?”

*****

೩. ಪಾತ್ರೆಗಳು ಮರಿ ಹಾಕುವುದಾದರೆ!

ನಜರುದ್ದೀನನ ನೆರೆಮನೆಯಾತ ಒಂದು ದಿನ ಔತಣಕೂಟವನ್ನು ಆಯೋಜಿಸಿದ್ದರಿಂದ ನಜರುದ್ದೀನ್ ಅವನಿಗೆ ಕೆಲವು ಅಡುಗೆ ಪಾತ್ರೆಗಳನ್ನು ಎರವಲು ನೀಡಿದ್ದ. ನೆರೆಮನೆಯಾತ ಮರುದಿನ ಅವನ್ನು ಹಿಂದಿರುಗಿಸುವಾಗ ಒಂದು ಪುಟಾಣಿ ಪಾತ್ರೆ ಹೆಚ್ಚುವರಿಯಾಗಿ ಸೇರಿಸಿ ಕೊಟ್ಟನು. ಅದೇನೆಂದು ನಜರುದ್ದೀನ್‌ ಕೇಳಿದಾಗ ಆತ ಹೇಳಿದ, “ನಿನ್ನ ಪಾತ್ರೆಗಳು ನನ್ನ ಉಸ್ತುವಾರಿಯಲ್ಲಿ ಇದ್ದಾಗ ಅವು ಮರಿಹಾಕಿದ ಈ ಪಾತ್ರೆಯನ್ನು ಕಾನೂನಿನ ಪ್ರಕಾರ ನಿನಗೆ ಒಪ್ಪಿಸುತ್ತಿದ್ದೇನೆ.”

ಕೆಲವು ದಿನಗಳ ನಂತರ ನರೆಮನೆಯಾತನಿಂದ ಕೆಲವು ಪಾತ್ರೆಗಳನ್ನು ನಜರುದ್ದೀನ್ ಎರವಲು ಪಡೆದನಾದರೂ ಅವನ್ನು ಹಿಂದಿರುಗಿಸಲಿಲ್ಲ. ನೆರೆಮನೆಯಾತ ತನ್ನ ಪಾತ್ರೆಗಳನ್ನು ವಾಪಾಸು ಪಡೆಯಲು ಬಂದಾಗ ನಜರುದ್ದೀನ್ ಹೇಳಿದ, “ಅಯ್ಯೋ, ಅವು ಸತ್ತು ಹೋಗಿವೆ! ಪಾತ್ರೆಗಳೂ ಮನುಷ್ಯರಂತೆ ಹುಟ್ಟು ಸಾವುಗಳಿರುವಂಥವು ಎಂಬುದನ್ನು ನಾವು ಈಗಾಗಲೇ ಸಾಬೀತು ಪಡಿಸಿದ್ದೇವೆ, ಅಲ್ಲವೇ?”

*****

೪. ನಾನು ಅವಳನ್ನು ಬಲು ಚೆನ್ನಾಗಿ ತಿಳಿದಿದ್ದೇನೆ

ಮುಲ್ಲಾನ ಅತ್ತೆ ನದಿಗೆ ಬಿದ್ದ ಸುದ್ದಿಯನ್ನು ಜನ ಓಡಿ ಬಂದು ಅವನಿಗೆ ತಿಳಿಸಿದರು. “ಅವಳು ಬಿದ್ದ ಸ್ಥಳದಲ್ಲಿ ನೀರಿನ ಹರಿವಿನ ವೇಗ ಬಹಳ ಹೆಚ್ಚಿದೆಯಾದ್ದರಿಂದ ಅವಳು ಸಮುದ್ರಕ್ಕೆ ಒಯ್ಯಲ್ಪಡುತ್ತಾಳೆ,” ಬೊಬ್ಬೆಹಾಕಿದರು ಜನ. ಒಂದಿನಿತೂ ಅಳುಕದೆ ಮುಲ್ಲಾ ನದಿಗೆ ಹಾರಿ ನೀರಿನ ಹರಿವಿನ ವಿರುದ್ಧ ದಿಕ್ಕಿನಲ್ಲಿ ಈಜಲಾರಂಭಿಸಿದ. “ಅತ್ತ ಕಡೆಗಲ್ಲ! ನೀರಿನ ಹರಿವಿನ ದಿಕ್ಕಿನಲ್ಲಿ ಹೋಗು. ಇಲ್ಲಿ ಬಿದ್ದ ಯಾರನ್ನೇ ಆಗಲಿ ನೀರು ಒಯ್ಯುವ ದಿಕ್ಕು ಅದೊಂದೇ,” ಬೊಬ್ಬೆಹಾಕಿದರು ಮಂದಿ. “ನಾನು ಹೇಳುವುದನ್ನು ಕೇಳಿ!” ಏದುಸಿರು ಬಿಡುತ್ತಾ ಹೇಳಿದ ಮುಲ್ಲಾ, “ನನ್ನ ಹೆಂಡತಿಯ ತಾಯಿಯನ್ನು ನಾನು ಬಲು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಎಲ್ಲರನ್ನೂ ನೀರು ಆ ದಿಕ್ಕಿನಲ್ಲಿ ಒಯ್ಯುತ್ತದೆಂದಾದರೆ ನನ್ನ ಅತ್ತೆಯನ್ನು ಹುಡುಕಬೇಕಾದದ್ದು ಖಂಡಿತವಾಗಿಯೂ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ.”

*****

೫. ಹೋಜನ ತರ್ಕ

ಚಿಕ್ಕವನಾಗಿದ್ದಾಗ:-

“ನಜರುದ್ದೀನ್‌, ನನ್ನ ಮಗನೇ, ಬೆಳಗ್ಗೆ ಬೇಗನೆ ಏಳು.”

“ಅಪ್ಪಾ ಏಕೆ?”

“ಅದೊಂದು ಒಳ್ಳೆಯ ಅಭ್ಯಾಸ. ಒಮ್ಮೆ ನಾನು ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮಕ್ಕಾಗಿ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಚಿನ್ನದ ನಾಣ್ಯಗಳಿದ್ದ ಚೀಲವೊಂದನ್ನು ಕಂಡೆ.”

“ಅದು ಹಿಂದಿನ ರಾತ್ರಿ ಯಾರೋ ಕಳೆದುಕೊಂಡಿದ್ದ ಚೀಲ ಅಲ್ಲ ಎಂಬುದು ನಿನಗೆ ಹೇಗೆ ಗೊತ್ತಾಯಿತು?”

“ನಾನು ಹೇಳುತ್ತಿರುವ ವಿಷಯಕ್ಕೆ ಸಂಬಂಧಿಸಿದ ಅಂಶ ಅದಲ್ಲ. ಆದರೂ ಹೇಳುತೇನೆ.  ಗೊತ್ತಾದದ್ದು ಹೇಗೆಂದರೆ ಅದು ಹಿಂದಿನ ರಾತ್ರಿ ಅಲ್ಲಿರಲಿಲ್ಲ, ನಾನು ನೋಡಿದ್ದೆ.”

“ಅಂದ ಮೇಲೆ ಬೆಳಗ್ಗೆ ಬೇಗನೆ ಏಳುವುದು ಎಲ್ಲರಿಗೂ ಒಳ್ಳೆಯದನ್ನು ಉಂಟುಮಾಡುವುದಿಲ್ಲ. ಆ ಚಿನ್ನವನ್ನು ಕಳೆದುಕೊಂಡಾತ ಬೆಳಗ್ಗೆ ನಿನಗಿಂತ ಬೇಗನೆ ಎದ್ದಿರಬೇಕು.”

ಪ್ರೌಢನಾಗಿದ್ದಾಗ:-

ವಿದ್ವಾಂಸನೊಬ್ಬ ಹೋಜನನ್ನು ಕೇಳಿದ, “ವಿಧಿ ಅಂದರೇನು?”

“ಒಂದನ್ನೊಂದು ಪ್ರಭಾವಿಸುವ ಪರಸ್ಪರ ಹೆಣೆದುಕೊಂಡಿರುವ ಘಟನೆಗಳ ಅಂತ್ಯವಿಲ್ಲದ ಸರಣಿ!”

“ಅದು ಬಲು ಅಸಮರ್ಪಕ ಉತ್ತರ. ನಾನು ಕಾರ್ಯ-ಕಾರಣ ಸಂಬಂಧ ಎಂಬುದಾಗಿ ನಂಬಿದ್ದೇನೆ.”

‘ಬಹಳ ಒಳ್ಳೆಯದು,” ಹೇಳಿದ ಮುಲ್ಲಾ, “ಅದನ್ನು ನೋಡಿ.” ಆ ಬೀದಿಯಲ್ಲಿ ಹೋಗುತ್ತಿದ್ದ ಮೆರವಣಿಗೆಯೊಂದನ್ನು ತೋರಿಸಿದ ಹೋಜ.

“ಅವನನ್ನು ಗಲ್ಲಿಗೇರಿಸಲು ಕರೆದೊಯ್ಯುತ್ತಿದ್ದಾರೆ. ಏಕೆ ಗೊತ್ತೆ? ಯಾರೋ ಒಬ್ಬರು ಅವನಿಗೊಂದು ಬೆಳ್ಳಿ ನಾಣ್ಯವನ್ನು ಕೊಟ್ಟರು, ಅದರಿಂದಾತ ಚಾಕುವೊಂದನ್ನು ಕೊಂಡುಕೊಂಡ, ಯಾರೂ ನೋಡುತ್ತಿಲ್ಲದೇ ಇದ್ದದ್ದರಿಂದಲೋ ಯಾರೂ ತಡೆಯದೇ ಇದ್ದದ್ದರಿಂದಲೋ ಆ ಚಾಕುವಿನಿಂದ ಒಬ್ಬನನ್ನು ಇರಿದು ಕೊಂದ!”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *