ಮೆಚ್ಚುನಗು, ಪೆಚ್ಚುನಗು, ಕೆಚ್ಚು ನಗು, ಹುಚ್ಚು ನಗು,ಮನ ಬಿಚ್ಚಿ ನಗು.. ಅಬ್ಬಬ್ಬಾ ಅದೆಷ್ಟೊಂದು ಪರಿ ನಗು ? ಆನಂದ, ಅತ್ಯಾನಂದ, ಮಹದಾನಂದ, ಅದ್ಭುತಾನಂದ ಹೀಗೆ ಹಲ ಪರಿಯ ಖುಷಿಯಾದಾಗಲೆಲ್ಲಾ ತುಂಟಿಯಂಚಿನಲ್ಲಿ ಮೂಡಿ, ಕಣ್ಣಂಚಲ್ಲಿ ಮಿನುಗುತ್ತಲ್ಲ.. ಅದೇ ನಗು. ಏನಪ್ಪಾ ಇದು ಈ ಪರಿ ಪೀಠಿಕೆ ಅಂದ್ರಾ ? ಹೆ.ಹೆ ಇವತ್ತು ಬರೆಯೋಕೆ ಹೊರಟಿರೋ ಲೇಖನ ಅದೇ ಕಣ್ರಿ. ನಗು. ಅಂದಂಗೆ ಇಲ್ಲಿರೋ ಪಾತ್ರ, ವ್ಯಕ್ತಿ, ಸನ್ನಿವೇಷಗಳನ್ನೆಲ್ಲಾ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ತಗೋಬೇಡಿ. ಸುಮ್ನೇ ಓದಿ, ನಕ್ಕು ಬಿಡಿ.
ನಗು ಬಾರದ ಕಾಮಿಡಿಗಳಿಗೆಲ್ಲಾ ಬಿದ್ದು ಬಿದ್ದು ನಗಬೇಕಾದ ಅನಿವಾರ್ಯತೆಯ ನಟ ಭಯಂಕರರನ್ನೂ, ನಟಿಮಣಿಯರನ್ನೂ ನೋಡಿಯೇ ನಗು ಬತ್ತಿ ಹೋಗುತ್ತಿರೋ ಸಂದರ್ಭದಲ್ಲಿ, ಕಾಮಿಡಿ ಟೈಂ ಅಂತ ಮಾಡಿ ನಗಿಸೋಕೆ ಪ್ರಯತ್ನ ಪಟ್ಟೂ ಪಟ್ಟೂ ಸುಸ್ತಾಗಿ ಕೊನೆಗೆ ಹಳೆಯ ಚಿತ್ರದ ತುಣುಕುಗಳ್ನೇ ನಗೆಯ ಸರಕುಗಳಾಗಿ ಉಪಯೋಗಿಸಬೇಕಾದ ಅನಿವಾರ್ಯತೆಯಲ್ಲಿ, ಎದುರಿಗೆ ನಗೆಯ ಮುಖವಾಡ ತೊಟ್ಟಿದ್ರೂ ಒಳಗಡೆ ಏನು ಬತ್ತಿ ಇಡ್ತಿದಾನೋ ಅಂತ ಇವ್ನೂ, ಎಷ್ಟು ಬೇಗ ನನಗಿಂತ ಚೆನ್ನಾಗಿ ಬೆಳೆದು ಬಿಟ್ನಲ್ಲ, ಇವ್ನ ಹೆಂಗೆ ಹಣಿಯೋದು ಅನ್ನೋ ಆಲೋಚನೆಯ ಮಧ್ಯೆಯೂ ಹಿ.ಹಿ.ಹಿ ಅಂತ ಹಲ್ಕಿರಿಯೋ ಅವನು..ಹೀಗೆ ನೂರೆಂಟು ಮುಖವಾಡಗಳ ನೋಡಿ ನೋಡಿ ಮಗುವಿನ ಮುಗ್ದ ನಗುವಿನಂತ ಶುದ್ದ ನಗು ಇನ್ನೂ ಉಳಿದಿದ್ಯಾ ಎಲ್ಲಾದ್ರೂ ಅನಿಸಿಬಿಡತ್ತೆ. ಪರರ ಹಾಸ್ಯ, ಅಪಹಾಸ್ಯ, ಕುಚೇಷ್ಟೆ ಮಾಡೋದ್ರಲ್ಲೇ ಕೆಲವರು ಅಪರಿಮಿತ ನಗುವನ್ನು ಕಂಡರೆ, ತಮ್ಮ ರೂಪ, ಆಕಾರ, ಮರೆವುಗಳನ್ನೇ ಹಾಸ್ಯದ ಅಕ್ಷಯ ಪಾತ್ರೆಯಾಗಿಸೋದು ಇನ್ನು ಕೆಲವರ ದೊಡ್ಡಗುಣ.
ನಗುನಗುತಾ ನಲಿ, ನಲಿ ಏನೇ ಆಗಲಿ ಅಂತ ಅಣ್ಣಾವ್ರು ಹಾಡಿದ್ರೆ , ನಮ್ಮ ಗಣೇಶ ನಗೂ ನಗು ನಗೂ ನಗು ನಗೂ ನಗೂ ನಗು.. ಅಂತ್ಲೇ ಅರಮನೆಯಲ್ಲಿ ಜೋಕರಾಗಿ ನಗಿಸೋಕೆ ಬರ್ತಾರೆ.
ನಗುವ ಗುಲಾಬಿ ಹೂವೆ ಅಂತ ಅಂಬರೀಷ್ ನಗುನಗುತ್ತಲೇ ವಿಷಾದದ ಭಾವಕ್ಕೆ ತಳ್ಳಿದ್ರೆ, ವಿಷ್ಣು ಭಾಯ್ ಆಪ್ತರಕ್ಷಕನ ರಾಜನ ನಗು, ಗೆಳೆಯನ ಹಾಸ್ಯದಲ್ಲಿ ಮಿಂಚುತ್ತಾರೆ.
ಉಮೇಶ್, ಜಹಾಂಗೀರ್, ಸಿಹಿಕಹಿ ತಮ್ಮನ್ನೇ ಹಾಸ್ಯ ಮಾಡ್ಕೊಂಡ್ರೆ, ಬೀಚಿ, ಪ್ರಾಣೇಶ್, ರಮೇಶ್ರಂತರ್ವು ಚುಚ್ಚದ್ರಲ್ಲೇ ನಗು ತರಿಸ್ತಾರೆ. ತುಟಿ ಬಿಚ್ಚದಿದ್ದರೂ, ಮಾತೊಡೆಯದಿದ್ದರೂ ಕಣ್ಣುಗಳಲ್ಲೇ ನಗು ಬೀರೋದು ಒಂದು ಪರಿಯಾದ್ರೆ ನಾಚೊ ನಗು, ಆತ್ಮವಿಶ್ವಾಸದ ನಗು, ಜಗದಲ್ಲಿ ನನ್ನ ಬಿಟ್ಟರಿಲ್ಲವೆಂಬ ಹಮ್ಮಿನ ನಗು, ಅಸಹನೆಯ ನಗು.. ಹೀಗೆ ಹನುಮನ ಬಾಲದಂತಹ ಪಟ್ಟಿ ನಗುವಿನ ಪರಿಯದು.
ನಗೋದ್ರಿಂದ ಏನೇನು ಪ್ರಯೋಜನ ಅಂತೊಂದು ಲೇಖನ ಓದ್ತಾ ಇದ್ದೆ. ಅದನ್ನ ಓದಿದ್ರೆ ನಿಮಗೂ ನಗು ಬರ್ಬೋದು ಅನಿಸ್ತು. ಅದರಲ್ಲಿದ್ದ ಅಂಶಗಳ್ನ ಹಾಕ್ತಿದೀನಿ ನೋಡಿ.
೧)ನಗೋದ್ರಿಂದ ದೇಹಕ್ಕೆ ಭಾರೀ ಅನುಕೂಲ: ಹೌದಂತೆ. ಸಿಟ್ಟು ಮಾಡ್ಕೊಂಡಾಗ ೪೩ ಸ್ನಾಯುಗಳ್ನ ಉಪಯೋಗಿಸಿದ್ರೆ ನಕ್ಕಾಗ ಬರೀ ೧೭ ಸ್ನಾಯುಗಳ್ನ ಮಾತ್ರ ಉಪಯೋಗಿಸ್ತೀವಿ. ಈ ತರ ದೇಹಕ್ಕೆ ಕಮ್ಮಿ ಶ್ರಮ ಕೊಟ್ರೂ ಮನಸ್ಸಿಗೆ ಖುಷಿಯಾಗುತ್ತೆ. ಪಕ್ಕದ ಪರಿಸರದಲ್ಲಿರೋರಿಗೂ ಒಳ್ಳೇದು. ಹೌದಪ್ಪಾ ಹೌದು. ಬೇಜಾರಾಯ್ತು ಅಂತ ಪಕ್ಕದಲ್ಲಿರೋರ ಮೇಲೆಲ್ಲಾ ಹರಿಹಾಯ್ತಾ, ಬೈಯ್ತಾ ಹೋದ್ರೆ ನಮ್ಮ ಬೇಜಾರು, ಸಿಟ್ಟು ಪರಿಹಾರ ಆಗ್ಬೋದು(??) ತಕ್ಷಣಕ್ಕಾದ್ರೂ . ಆದ್ರೆ ಪಕ್ಕದ ಪರಿಸರ ಕೆಟ್ಟು ಅವರೂ ತಿರುಗಾ ನಮ್ಮ ಮೇಲೆ ಹರಿಹಾಯ್ತಾರೆ. ಬಯ್ಯೋದು, ಹೊಡೆಯೋದು.. ಎಲ್ಲಾ ದೇಹಕ್ಕೆ ಅಷ್ಟು ಒಳ್ಳೇದಲ್ಲ ಅಲ್ವಾ ? (ಕಿಸೆಗೂ). ಮತ್ತೆ ಈ ಸಿಟ್ಟು ಮಾಡ್ಕೊಳ್ಳೋದ್ರಲ್ಲಿ ಬಳಕೆ ಆಗೋ ಸ್ನಾಯುಗಳು ಯಾವ ತರಹದ ಸಿಟ್ಟು ಅಂತೆಲ್ಲ ಅಲ್ಲಿ ಹಾಕಿಲ್ಲ ಮತ್ತೆ. ಸಿಟ್ಟು ಮಾಡ್ಕೊಂಡು ಅಟ್ಟಿಸ್ಕೊಂಡು ಹೋಗೋದು, ಹೊಟ್ಟೆ ಹಿಡಿದುಕೊಂಡು ಉರುಳಾಡಿಕೊಂಡು ನಗೋದು ಎಲ್ಲಾ ಎಷ್ಟು ಸ್ನಾಯುಗಳ್ನ ಬಳಸತ್ತೆ ಅಂತಲೂ ಹೇಳಿಲ್ಲ ಮತ್ತೆ. ಹೆ ಹೆ.
೨)ನಗೋದು ಮನುಷ್ಯನಿಗೆ ಮಾತ್ರ ಸಾಧ್ಯವಾಗೋವಂತ ಒಂದು ವರ(?): ಯಾಕೋ ಇದ್ನ ಓದೇ ನಗು ಬಂತು ನನಗೆ. ಅಲ್ಲಾ ಸ್ವಾಮಿ ಹಲ್ಲು ಕಿರೀಯೋ ಕೋತಿಗಳ್ನ, ಚಿಂಪಾಂಜಿಗಳ್ನ ನೋಡೇ ಇಲ್ವಾ ? ಮನುಷ್ಯನಂತೆ ನಗಬಲ್ಲ ಮತ್ತೊಂದು ಪ್ರಾಣಿ “ಹೈನಾ” ಅಂತ ಜೀವಶಾಸ್ತ್ರದಲ್ಲಿ ಓದಿದ್ದು ಮರ್ತೇ ಹೋಯ್ತ ಇವನಿಗೆ ಅನುಸ್ತು . ಅವಗಳ ಭಾವ ಅರ್ಥ ಆಗಲ್ಲ ಅಂದ ಮಾತ್ರಕ್ಕೆ ಅವು ಸುಮ್ನೆ ಹಲ್ಲು ಕಿರಿಯತ್ತೆ, ನಾವು ಮಾತ್ರ ಸಾಚಾ ನಗು ಬೀರೋದು ಅನ್ನಬೋದಾ ? ಹೆ ಹೆ. ಒಳ್ಳೆ ಕತೆ ಆಯ್ತು ಇದು.
೩)ಮಹಿಳೆಯರು ಜಾಸ್ತಿ ನಗುತ್ತಾರೆ : ಹಿ ಹಿ. ಇದು ನಿಜ ಇಅರಬಹುದೇನೋ. ಮಾತಾಡೋದೂ ಅವ್ರೇ ಜಾಸ್ತಿ. ಆಪಾದನೆ ಅಂತಲ್ಲ ಮೇಡಂಗಳೇ, ನೋಡಿದ್ದು, ಕೇಳಿದ್ದು ಅಷ್ಟೇ. ಕಂಪ್ಲೇಂಟಲ್ಲ, ಕಾಂಪ್ಲಿಮೆಂಟು ಅಂತ್ಲೇ ಇಟ್ಕೊಳಿ. ಮಾತಿನ ಮಧ್ಯೆ ಮನೆಯ, ಆಫೀಸಿನ, ಮಕ್ಕಳ ಸುದ್ದಿ, ತರಲೆ ನೆನಪಿಸಿಕೊಂಡು ನಗೋದು ಕಾಮನ್ನೇ. ಇದ್ರ ಬಗ್ಗೆನೂ ಸಂಶೋಧನೆ ಮಾಡಿದ ಯೇಲ್ ಅನ್ನೋ ವಿಶ್ವವಿದ್ಯಾಲಯದವರು(ಅದು ಎಲ್ ಬಂತು ಅಂದ್ರಾ ? ನಂಗೂ ಗೊತ್ತಿಲ್ಲ ಬಾಸ್ . ಹಿ.ಹಿ.) ಮಹಿಳೆಯರು ದಿನಕ್ಕೆ ೬೨ ಬಾರಿ ನಗ್ತಾರೆ. ಗಂಡಸರು ಬರೀ ೮ ಬಾರಿ ನಗ್ತಾರೆ ಅಂತಂದಿದಾರೆ. ಗಂಡಸರ ನಗು, ಅಳು ಎಲ್ಲಾ , ಬಾರಿನಲ್ಲೆ. ಅಲ್ಲಿಗೆ ಈ ಸಂಶೋಧಕರು ಹೋಗಿರಲಿಕ್ಕಿಲ್ಲ ಅದಕ್ಕೇ ಹೀಗೆ ಅಂತ ಈ ಸಂಶೋಧನೆ ಸುದ್ದಿ ಕೇಳಿದ ನಮ್ಮ ಪೋಲಿಬಾರಿನ ಕುಮಾರ್ ಕುಹಕ ನಗು ಬೀರ್ತಾ ಇದ್ರು. ಮಗುವಿನ ಮುಗ್ದ ನಗು ಅಂದ ತಕ್ಷಣ ನೆನಪಾಯ್ತು. ಮಗು ಹುಟ್ಟಿದ ತಕ್ಷಣ ಅಳೋದಕ್ಕೆ ಶುರು ಮಾಡುತ್ತೆ ಅನ್ನೋದು ಎಲ್ರಿಗೂ ಗೊತ್ತಿದ್ರೂ ಮಗು ಹುಟ್ಟಿದ ಎರಡು ಘಂಟೆಗಳಲ್ಲೇ ಮೊದಲ ನಗು ಬೀರುತ್ತೆ ಅನ್ನೋದು ಗಮನಕ್ಕೆ ಬರದೆ ಹೋಗುತ್ತೆ.
೪)ಬೇರೆ ಬೇರೆ ತರದ ನಗುಗಳಿವೆ. ಇದು ಮಾತ್ರ ೧೦೦% ಹೌದ್ರಿ ಸರ. ಹೆಹೆ, ಹಹ, ಹಾಹಾಹಾ ಅಂತ ತರಹೇವಾರಿ ನಗೋರನ್ನು, ಸೂರೇ ಕಿತ್ತು ಹೋಗೋ ಪರಿ ನಗೋರನ್ನು, ಹಕ್ ಹಕ್ ಅಂತ ಬಿಕ್ಕಳಿಕೆ ಬಂದ ಹಾಗೆ ನಗೋರನ್ನ. ನಕ್ರೆ ಮಾನಗೇಡು ಅಂತ್ಲೋ , ನಗುವುದು ಸಭ್ಯತೆ ಅಲ್ಲ ಅಂತ್ಲೋ ನಗುವನ್ನು ತಗೆಹಿಡಿಯಕ್ಕೆ ಪ್ರಯತ್ನ ಪಟ್ರೂ ಅದು ನಿಯಂತ್ರಣಕ್ಕೆ ಸಿಗದೇ ನಗೋರನ್ನೂ, ಏನೋ ಕಿತಾಪತಿ ಮಾಡಿದ ಖುಷಿಯಲ್ಲಿ ಮೀಸೆಯಂಚಲ್ಲಿ, ಹುಳ್ಳ ಹುಳ್ಳಗೆ, ಮುಖಕ್ಕೆ ಕೈಯೋ, ಕರ್ಚೀಪೋ ಅಡ್ಡ ಇಟ್ಟುಕೊಂಡು ನಗೋದನ್ನೂ ನೋಡಿರ್ತೀವಿ. ನಗುವಲ್ಲಿ ಎಷ್ಟು ತರ ಇದೆ ಅಂತ ಸುಮ್ನೆ ಗೂಗಲ್ಲಲ್ಲಿ ಕೊಟ್ಟೆ. ಒಂದು ಸೈಟು ೨೩ ಅಂದ್ರೆ ಮತ್ತೊಂದು ೧೯ ಅಂತು. ಮತ್ತೊಂದ್ರ ಪ್ರಕಾರ ಬರೀ ಎಂಟಂತೆ. ಮತ್ತೊಂದು ಹೇಗೆ ನಗೋದು ಅಂತ ಹೇಳ್ಕೊಡ್ತೀನಿ ಬಾ ಅಂತಿತ್ತು.. ಯಪ್ಪಾ ಶಿವನೆ , ಎಂತಾ ಕಾಲ ಬಂತು ಅಂತ ನಗು ಬಂತು. ನಗು ಕ್ಲಬ್ಬು ಅಂತ ಮಾಡ್ಕೊಂಡು ಬೆಳಬೆಳಗ್ಗೆ ಎಲ್ಲಾ ಸೇರಿ ಬಿದ್ದು ಬಿದ್ದು ನಗೋದು ಈ ಪೇಟೆಗಳಲ್ಲಿ ಹೊಸ ಆರೋಗ್ಯವರ್ಧಕ ವಿಧಾನ. ಮನೆಯವರ ಜೊತೆ ನಗುನಗುತ್ತಾ ನಾಲ್ಕು ಒಳ್ಳೆ ಮಾತಾಡಿದ್ರೆ ಆಗಲ್ವಾ ಗುರು ? ಫೇಸ್ಬುಕ್ಕಲ್ಲಿ, ಅಲ್ಲಿ ಇಲ್ಲಿ ಹೀಗೆ ಬೀದಿಯವ್ರಿಗೆ ಮಾತ್ರ ಇವ್ರ ಈ ನಗು. ಮನೆಗೆ ಹೋದ ತಕ್ಷಣ ಉಗ್ರನಾರಾಯಣರು ಅಂತ ಕೆಲವರ ಹಿಂದೆ ಬಿಟ್ಟು ನಗ್ತಿದ್ದ ಗುಂಡ. ನಿನ್ನಿಂದ ಆಗಲ್ಲ ಬಿಡು, ಹಿ ಹಿ. ನೀನು ಹೀಗೆ ಬಂದೇ ಬರ್ತೀಯ ಅಂತ ಗೊತ್ತಿತ್ತು. ಬಂದ್ಯಾ, ಬಾ ಬಾ ಅನ್ನೋ ಆತ್ಮವಿಜೃಂಭಣೆಯ ನಗು.. ಓಹೋ, ಉಗ್ರ ಪ್ರತಾಪಿ ಎಂಬ ಅಣ್ಣಾವರ ಬಭ್ರುವಾಹನನ ಹೀಯಾಳಿಕೆ ನಗು, ನಗುವೆಂದರೆ ನರಸಿಂಹರಾಜ್ ಅನ್ನುವಂತಿದ್ದ ಹೊಟ್ಟೆ ಹುಣ್ಣಾಗಿಸುವಂತಹ ನಗು, ಧೀರೇಂದ್ರ ಗೋಪಾಲ್, ಹೊನ್ನವಳ್ಳಿ ಕೃಷ್ಣರಿಂದ ಶುರುವಾಗಿ ಕಾಶೀನಾಥ್,ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಜಗ್ಗೇಶ್,ಕೋಮಲ್, ಬುಲೆಟ್ ಪ್ರಕಾಶ್, ಚರಣ್ , ಮಾಸ್ಟರ್ ಆನಂದ್, ಪಾಪ ಪಾಂಡು ವರೆಗೆ ಮುಂದುವರೆದು ಬಂದಿರೋ ಚಿತ್ರ ವಿಚಿತ್ರ ಪರಿಯ ನಗು. ಕನ್ನಡವೊಂದೇ ಅಲ್ಲದೇ ಹಿಂದಿಯ ಜಾನಿ ಲಿವರ್, ತೆಲುಗಿನ ಬ್ರಹ್ಮಾನಂದಂ ತನಕ ಚಿತ್ರವೆಂದರೆ ನಗು,ನಗಿಸೋರು ಇದ್ದೇ ಇರಬೇಕೆಂಬ ಅಘೋಷಿತ ನಿಯಮ ಬಂದಿದೆ ಅಂದ್ರೆ ಲೆಕ್ಕ ಹಾಕಿ . ನಗುವೊಂದು ಹಿಟ್ ಮಂತ್ರವೇ ಆಗಿ ಹೀರೋವೂ ರೊಚ್ಚಿಗೆ ಬಿದ್ದವನಂತೆ ನಗಿಸಲು ಅವಸ್ಥೆ ಪಡೋದ್ನ ನೋಡಿದ್ರೆ ನಗ್ಬೇಕೋ ಅಳ್ಬೇಕೋ ಗೊತ್ತಾಗಲ್ಲ.
೫)ನಗುವೇ ಸೌಂದರ್ಯ: ನಿಜವಾಗ್ಲೂ ಕಣ್ರಿ. ಐಶ್ವರ್ಯ ರೈ ನೋಡಿ. ಸೌಂದರ್ಯ ಅವರನ್ನೇ ನೋಡಿ. ನಕ್ಕಾಗ ಅವ್ರು ಏನ್ ಚಂದ. ದೇವಾನುದೇವತೆಗಳ ಫೋಟೋನೇ ನೋದ್ರಿ, ಅಭಯ ಹಸ್ತ ಇದೆ ಅಂದ್ರೆ ಅವ್ರು ನಗ್ತಿರ್ತಾರೆ. ಅಂದಂಗೆ ಫೋಟೋ ಹೊಡೆಯುವಾಗ್ಲೂ ಇಸ್ಮಾಯಿಲ್ ಅಂತ್ಲೇ ಹೇಳೋದು. ನಗ್ತಿದ್ದಾಗ್ಲೇ ಯಾಕೆ ಫೋಟೋ ತೆಗಿಬೇಕು ಅಂತ್ಲೂ ಕೆಲವರು ಅಂದ್ಕೊಂಡಿರಬಹುದು. ಈ ನಗು ಅನ್ನೋದು ಒಂತರಾ ಸಾಂಕ್ರಾಮಿಕ ಕಣ್ರಿ. ಯಾರಾದ್ರೂ ನಗೋದ್ನ ನೋಡಿದ್ರೆ ನಾವು ಪರರ ನಗುವಿನ ಕಾರಣ ತಿಳಿದಿದ್ರೂ ನಗೋಕೆ ಶುರು ಮಾಡ್ತೀವಿ. ಪಕ್ಕದಲ್ಲಿದ್ದವ ಬಿದ್ದು ಬಿದ್ದು ನಗ್ತಾ ಇದ್ರೆ, ನಮ್ಮ ತುಟಿಯಂಚಲ್ಲಾದ್ರೂ ನಗು ಮೂಡೇ ಮೂಡತ್ತೆ. ಈ ನಗೂನೆ ಮುಂದಿನ ಕಾಲಕ್ಕೆ ಸೆರೆಹಿಡಿದು ಭದ್ರಪಡಿಸೋಕೆ, ಫೋಟೋ ನೋಡಿದಾಗಲೆಲ್ಲಾ ಈ ನಗುವಿನ ಸವಿ ಮತ್ತೆ ಮತ್ತೆ ಮೂಡ್ತಾ ಇರ್ಲಿ ಅಂತ್ಲೇ ನಗಿರಪ್ಪಾ ಸ್ವಲ್ಪಾಂತ ಹೇಳ್ಬೋದೇನೋ.
೬) ನಗುವಿನಿಂದ ಆರೋಗ್ಯ ವರ್ಧಿಸುತ್ತೆ: ಇದು ಇಲಿನಾಯ್ಸ್ ವಿಶ್ವವಿದ್ಯಾಲಯದ (ಇಲ್ಲಿ noice ಅಲ್ಲ ಮತ್ತೆ. ಹೆ ಹೆ) ಸಂಶೋಧನೆ. ನಗ್ತಾ ನಗ್ತಾ ಇದ್ರೆ, ಆ ನಗುವಲ್ಲೇ ನೋವುಗಳು ಕರಗಿ ಹೋಗಿ, ಚಿಂತೆಗಳು , ದುಗುಡಗಳು ಕರಗಿಹೋಗಿ ಮನಸ್ಸು ಶಾಂತವಾಗುತ್ತೆ. ಜಾಸ್ತಿ ನಗ್ತಾ ಇರೋರ ನಗು ಹಿಂದೆ ಎಷ್ಟೋ ಆಳದ ನೋವುಗಳಿರುತ್ತೆ . ಆದ್ರೆ ಅದ್ನ ತೋರಿಸಿಕೊಳ್ದೇ ಅವ್ರು ಎಲ್ಲರಂತೆಯೇ ಇರ್ತಾರೆ ಅಂತಾನೊಬ್ಬ ವೇದಾಂತಿ. ಈ ವೇದಾಂತವೇ ಅತಿಯಾಗಿ ವಾಂತಿಯಾಗೋ ಮೊದ್ಲು ಮುಂದಿನದ್ರ ಬಗ್ಗೆ ನೋಡೋಣ.
೭)ಸುಖೀ ಕುಟುಂಬಗಳೆಲ್ಲಾ ನಗುವಿನ ಮೇಲೇ ನಿಂತಿದೆ: ನಂಗೆ ಮದ್ವೆ ಆಗದೇ ಕುಟುಂಬದ ಬಗ್ಗೆ ಮಾತಾಡೋ ಹಾಗಿಲ್ಲದಿದ್ರೂ (ಹಿ ಹಿ) ಅಪ್ಪ, ಅಮ್ಮ , ಅಣ್ಣ, ತಂಗಿ, ನೆಂಟರು .. ಅಂತೆಲ್ಲಾ ಲೆಕ್ಕಕ್ಕೆ ತಗೊಂಡು ಕುಟುಂಬ ಅನ್ನೋ ದೊಡ್ಡ ಲೆಕ್ಕದಲ್ಲಿ ಈ ಬಗ್ಗೆ ಹೇಳ್ಬೋದೇನೋ. ಮನೆಗೆ ಬಂದ ಅಪ್ಪ, ಅಮ್ಮ ದಿನಾ ಮುಖ ಗಂಟು ಹಾಕಿಕೊಂಡ್ರೆ ಬಯ್ತಾ ಇದ್ರೆ ಮಕ್ಕಳಲ್ಲಿ ಅಪ್ಪ ಬಯ್ತಾ, ಅಪ್ಪ ಭೂತ ಅನ್ನೋ ಭಯಾನಕ ಭಾವಗಳು ಮೂಡಬಹುದು !! ನಗುನಗುತ್ತಾ ಗೆಳೆಯರಂತಿರೋ ಅಪ್ಪ ಅಮ್ಮ ಯಾರಿಗೆ ತಾನೇ ಇಷ್ಟ ಆಗಲ್ಲ. ನಗು ತುಂಬಿ ತುಳುಕ್ತಿರೋ ಮನೆ ಸಹಜವಾಗೇ ಸುಖಿಯಾಗಿರತ್ತೆ.
೮)ನಗುವಿನಿಂದ ಸೀತ ದೂರ ಓಡುತ್ತೆ !!. ಇದೊಂತರ ಭಯಂಕರ ನಗು ತರುಸ್ತಾ ಇದೆ. ನಗ್ತಾ ನಗ್ತಾ ಇದ್ರೆ, ಮೂಗಿಗೆ ಸೋರೋದು ಮರ್ತು ಹೋಗಿ ಶೀತ ವಾಸಿಯಾಗುತ್ತೆ ಅಂದ್ರಾ ? ಹೆ ಹೆ. ಹಂಗಲ್ಲ. ನಗೋದೇನು ಬೇಡಂತೆ. ಸುಮ್ನೆ ಮುಖ ಮೇಲೆತ್ತಿ ಹಲ್ಲು ಎಷ್ಟು ಬೆಳ್ಳಗಿದೆ ಅಂತ ತೋರಿದ್ರೆ ಸಾಕಂತೆ ಎಂಡೋಫ್ರಿನ್ ಎಂಬ ಹಾರ್ಮೋನ್ಗಳು ಬಿಡುಗಡೆ ಆಗತ್ತಂತೆ. ಎಂಡೋರ್ಫಿನ್ ಅಂದ್ರೆ ಅದು ಸಂತೋಷದ ಅನುಭವ ಕೊಡೋ ಹಾರ್ಮೋನು. ಅದೇ ತರಹ ಟೆನ್ಸನ್ನು ಕಡಿಮೆ ಮಾಡೊ ಸೆರೋಟಿನಿನ್ ಅನ್ನೋ ಹಾರ್ಮೋನ್ ಕೂಡ ಬಿಡುಗಡೆ ಆಗತ್ತಂತೆ !ನಗ್ತಾ ನಗ್ತಾ ಇದ್ರೆ ಚಿಂತೆ ಕಮ್ಮಿ ಆಗತ್ತೆ ಅನ್ನೋದು ಸುಮ್ನೆ ಅಲ್ಲ ಸ್ವಾಮಿ. ಇನ್ನು ಶೀತದ ವಿಷ್ಯ. ಪ್ರತಿ ಸಲ ಹಲ್ಲು ಕಿರಿಯೋದ್ರಿಂದ ಬಿಳಿ ರಕ್ತಕಣಗಳು ಉತ್ಪಾದನೆ ಆಗತ್ತಂತೆ ಇದರಿಂದ ಶೀತ ದೂರ ಓಡತ್ತಂತೆ !. ಇದು ಎಷ್ಟರ ಮಟ್ಟಿಗೆ ಕಾಗೆ ಅಂತ ಆ ಸಂಶೋಧಕರಾಣೆ ಗೊತ್ತಿಲ್ಲ ಗುರು. ಹಿ ಹಿ. ಬಿಳಿ ಹಲ್ಲು ತೋರಿಸಿದ ತಕ್ಷಣ ಬಿಳಿ ರಕ್ತಕಣಗಳು ಉತ್ಪಾದನೆ ಆಗದಿದ್ರೆ ದ್ವಾರಪಾಲಕರು ರಕ್ತ ಕಣದ ಫ್ಯಾಕ್ಟರೀನೇ ಇಡ್ಬೋದಲ್ವಾ ಅನ್ನೋ ಖತರ್ ನಾಕ್ ಐಡಿಯಾ ಮಾಡಿದ್ರಾ ? ಟ್ರೈ ಮಾಡೋದ್ರಲ್ಲಿ ತಪ್ಪೇನಿಲ್ಲ ಅನಿಸುತ್ತೆ. ಹೆ ಹೆ. ಅಂತೂ ನಗುವಿನ ಅಷ್ಟಲಾಭಗಳನ್ನ ಓದೋ ಹೊತ್ತಿಗೆ ಆಕಳಿಸಿ ನಿದ್ರೆ ತೆಗೆದಿರಬಹುದಾದ, ಬೈಕಂಡಿರಬಹುದಾಗ, ಓದೋ ಕರ್ಮ ಬೇಡವೆಂದು ಅಲ್ಲಲ್ಲಿ ಹಾರಿಸಿ ಕೊನೆಯ ಪ್ಯಾರಾಕ್ಕೆ ಬಂದಿರಬಹುದಾದ ಎಲ್ಲರಿಗೂ ಒಮ್ಮೆ ಧ.ವಾ. ಓದ್ತಾ ಓದ್ತಾ ಕೆಲವಾದ್ರೂ ನಿಮಗೆ ನಿಮ್ಮ ಬಾಲ್ಯದ, ಮೋಜಿನ ಪ್ರಸಂಗಗಳ, ನಗುವಿನ ನೆನಪು ತಂದು ನಕ್ಕು ನಗಿಸಿರಬಹುದು. ಕಲ್ಪನೆಗಳ ಏಣಿ ಏರಿಸಿರಬಹುದು. ಹಾಗಾಗಿದ್ದರೆ ನನ್ನ ಶ್ರಮ ಧನ್ಯ. ಮತ್ತೊಮ್ಮೆ ಸಿಗೋಣ..
*****
ನಗುವುದು ನನ ಧಮ೯
ನಗಿಸುವುದು ಪರ ಧಮ೯
ನೀ ನಗುವುದು, ನಗಿಸುವುದೆಲ್ಲಾ ಪರಮೋಚ್ಚ ಧಮ೯
ನಗದಿರಿವುದು ನರನ ಕಮ೯
ನಕ್ಕು-ನಗಿಸುತಾ ಬಾಳುವುದೊಳಿತು ಮಂಕುತಿಮ್ಮ
ಚೆನ್ನಾಗಿದೆ ಪ್ರಶಸ್ತಿ. ಕೀಪ್ ಇಟ್ ಅಪ್!
ಧನ್ಯವಾದಗಳು ಅಖಿಲೇಶ್ ಭಾಯ್ 🙂
😀
🙂 🙂
ಚೆನ್ನಾಗಿದೆ… ಲೇಖನ…..
🙂 🙂 🙂 🙂 🙂
Nagave irad dinagalu nashtavad dinaglu….Channagide sir.
ನಮಸ್ಕಾರ..
ನನ್ನ ಲೇಖನ ಪ್ರಕಟ ಆಗ್ತಾ ಇದ್ಯಾ ಪತ್ರಿಕೇಲಿ ? ಯಾವತ್ತು ಬರಬಹುದು ?
ವಂದನೆಗಳೊಂದಿಗೆ
ಪ್ರಶಸ್ತಿ
ಗೌಡ್ರೆ ಏನಿದು ? !!!
ಮೆಚ್ಚಿದ ಎಲ್ಲರಿಗೂ ವಂದನೆಗಳು:-)
ಮೆಚ್ಚಿದ ಎಲ್ಲರಿಗೂ ವಂದನೆಗಳು..
ಮೇಲಿನದು ಮುಂಚೆ ಎಲ್ಲಾದ್ರೂ ಲೇಖನ ಕಳುಹಿಸೋ ಸಾವಿರ ಲೇಖಕರಲ್ಲೊಬ್ಬನಾಗಿ ನಾನು ಕೇಳಬೇಕಾಗ್ತಿದ್ದ ಮಾತುಗಳು..ಆದರೆ ಪಂಜುವಿನಲ್ಲಿ ಬರೆಯೋಕೆ ಶುರುಮಾಡಿದ ಮೇಲೆ ಲೇಖಕ ಲೇಖನ ಕಳುಹಿಸಿದ್ದಲ್ದೇ ಅದು ಪ್ರಕಟವಾಗತ್ತೋ ಇಲ್ವೋ ವಿಚಾರಿಸೋ ಬದ್ಲು, ಲೇಖನ ಬರೆಯೊಕ್ಕೆ ಆಮಂತ್ರಣ ಪಡೇಯೋ ಖುಷಿಯ ಕ್ಷಣಗಳು ಸಿಕ್ಕಿವೆ… ಬರಹಗಾರನೊಬ್ಬನಿಗೆ ಅದಕ್ಕಿಂತ ಹೆಚ್ಚು ಖುಷಿ ಬೇರಿಲ್ಲ. ಇಂತಹ ಎಷ್ಟೋ ಬರಹಗಾರರಿಗೆ ವೇದಿಕೆ ಒದಗಿಸೋ ಪಂಜು ೫೦ ಸಂಚಿಕೆ ಪೂರೈಸ್ತಿರೋ ಸಂದರ್ಭದಲ್ಲಿ ಅದನ್ನು ಅಭಿನಂದಿಸಲೇ ಬೇಕಾಗಿದೆ.. ಒದಗಿಸಿಕೊಟ್ಟ ವೇದಿಕೆಗೆ ವಂದಿಸಲೇ ಬೇಕಾಗಿದೆ..
ವಂದನೆಗಳು ಪಂಜು ಮತ್ತು ಅದರಿಂದ ಸಿಕ್ಕಿದ ಗೆಳೆಯರೆಲ್ಲರಿಗೂ.
ಇಂತಿ
ಪ್ರಶಸ್ತಿ