ನಗುವ ಮಗು: ಸುರೇಶ್ ಬಣಕಾರ್

suresh-banakar
ಅದು ಅಮಾವಾಸ್ಯೆಯ ಒಂದು ದಿನ. ಸೂರ್ಯ ಮುಳುಗುವ ಸಮಯ. ಎಂದಿನಂತೆ ಕಮಲ ಮನೆಯ ಮುಂದಿನ ತೆಂಗಿನ ತೋಟದಲ್ಲಿ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದಳು. ತಟ್ಟನೆ ಒಂದು ಮಗು ನಗುವ ಸದ್ದು. ಕಮಲಳಿಗೆ ಆಶ್ಚರ್ಯ. ಏಕೆಂದರೆ ಆ ಸುತ್ತಮುತ್ತಲೂ ಹತ್ತು ಮೈಲಿ ದೂರದಲ್ಲಿ ಒಂದೂ ಮನೆ ಇರಲಿಲ್ಲ. ಅವಳು ಸುತ್ತಮುತ್ತ ನೋಡಿದಳು, ಏನೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ಶಬ್ದ ನಿಂತಿತು. ಏನೋ ಭ್ರಮೆ ಇರಬೇಕೆಂದು ತನ್ನ ಕೆಲಸದಲ್ಲಿ ಮಗ್ನಳಾದಳು. ಮತ್ತದೇ ನಗು!  ಈ ಬಾರಿ ಅವಳು ಗಮನವಿಟ್ಟು ಆಲಿಸಿದಳು. ಅದು ಸಾಮಾನ್ಯ ಮಗುವಿನ ನಗುವಲ್ಲ. ಒಂಥರಾ ಕ್ರೂರವಾಗಿ, ಕರ್ಕಶವಾಗಿದೆ. ಈ ಬಾರಿ ಅವಳಿಗೆ ಭಯವಾಯಿತು. ತೋಟವೆಲ್ಲಾ ತಿರುಗಾಡಿ ನೋಡಿದಳು. ಏನೋ ಕಾಣಿಸಲಿಲ್ಲ. ಮತ್ತದೇ ನಗು. ಮೈಯಲ್ಲಾ ಬೆವರಿ, ಎದೆ ಢವ ಢವ. ತಕ್ಷಣ ಮನೆಯ ಕಡೆ ಓಡಿದಳು. ಗಂಡ ಮತ್ತು ಮಗಳು ಬರುವ ದಾರಿಯನ್ನೇ ಕಾಯುತ್ತಾ ನಿಂತಳು. 

ಶಾಲೆಗೆ ಹೋದ ಎಂಟು ವರ್ಷದ ಮಗಳು ಮಾನ್ವಿತಾಳನ್ನು ಬೈಕಿನಲ್ಲಿ ಕರೆದುಕೊಂಡು ಹರೀಶ ಬಂದ. ಓಡಿ ಹೋಗಿ ತಬ್ಬಿಕೊಂಡಳು. ಹರೀಶನಿಗೆ ಅವಳನ್ನು ನೋಡಿ ದಿಗಿಲು. ತಲೆಕೂದಲು ಕೆದರಿದೆ, ಕಣ್ಣುಗಳಲ್ಲಿ ಭಯ ತುಂಬಿದೆ, ಹಣೆಯ ಕುಂಕುಮ ಅಳಿಸಿದೆ, ಮೈಯೆಲ್ಲ ಬೆವರಿ ನಡುಗುತ್ತಿದೆ. "ಏನಾಯ್ತೆ", ಅಂದ. ತೋಟದ ಕಡೆ ಕೈ ತೋರಿಸಿದಳು. ಮಾತೇ ಹೊರಡುತ್ತಿಲ್ಲ. ಹರೀಶನಿಗೆ ಏನೂ ಅರ್ಥವಾಗಲಿಲ್ಲ. ಅವಳನ್ನು ನಿಧಾನವಾಗಿ ಮನೆಯ ಕಟ್ಟೆಯ ಮೇಲೆ ಕೂಡಿಸಿ, ನೀರು ಕುಡಿಸಿ, ಸಮಾಧಾನ ಮಾಡಿ, "ಈಗ ಹೇಳು, ಏನಾಯ್ತು?", ಅಂದ. ಸ್ವಲ್ಪ ಸುಧಾರಿಸಿಕೊಂಡ ಅವಳು, "ಏನಿಲ್ಲಾ ರೀ, ನಾನು ತೋಟದಲ್ಲಿ ಕೆಲಸ ಮಾಡ್ತಾ ಇದ್ದೇ, ಆಗ ಮಗು ನಗುವ ಸದ್ದು ಕೇಳಿಸಿತು, ಸುತ್ತ ಮುತ್ತ ತಿರುಗಾಡಿ ನೋಡಿದೆ, ಯಾರೂ ಇರಲಿಲ್ಲ. ಹೀಗೆ ಎರಡು ಮೂರು ಸಲ ಆಯ್ತು, ನನಗೆ ತುಂಬ ಭಯವಾಗ್ತಿದೆ", ಅಂದಳು. ಅವನು ನಸುನಕ್ಕು, "ಅದೇನೂ ಇಲ್ಲ, ನಿನಗೆ ತುಂಬಾ ದಿನದಿಂದ ಒಂದು ಗಂಡು ಮಗು ಬೇಕೆಂದು ಆಸೆ ಇದೆ ಅಲ್ವಾ, ಅದನ್ನೇ ವಿಚಾರ ಮಾಡಿ ಹೀಗೆ ಆಗಿದೆ. ತಲೆ ಕೆಡಿಸಿಕೊಳ್ಳಬೇಡ, ಎಲ್ಲ ಸರಿಹೋಗುತ್ತದೆ ಅಂದ". "ಅಲ್ಲ ರೀ ಅದು, ಸಾಮಾನ್ಯ ಮಗು ನಗುವ ರೀತಿಯಲ್ಲಿ ಇಲ್ಲ, ತುಂಬಾ ಕರ್ಕಶವಾಗಿದೆ, ಕೇಳಲು ಆಗುವದಿಲ್ಲ, ನನಗೆ ತುಂಬಾ ಭಯವಾಗ್ತಿದೆ, ಇದು ಭ್ರಮೆ ಅಲ್ಲ, ದಯವಿಟ್ಟು ನನ್ನನ್ನು ನಂಬಿ" ಎಂದು ಬೇಡಿಕೊಂಡಳು. ಅವನಿಗೆ ಇದೆಲ್ಲ ಹುಚ್ಚಾಟ ಎನಿಸಿದರೂ ಹೆಂಡತಿಯ ಸಮಾಧಾನಕ್ಕಾಗಿ, "ಸರಿ, ನಾನು ನೋಡ್ತೀನಿ", ಎಂದು ತೋಟದ ಕಡೆ ಹೊರಟ. 

ಎರಡು ಸಲ ತೋಟವೆಲ್ಲಾ ಸುತ್ತು ಹಾಕಿ ನೋಡಿದರೂ ಏನೋ ಅಸಹಜವಾಗಿ ಕಾಣಿಸಲಿಲ್ಲ. ಈ ಬಾರಿ ಶಬ್ದವೂ ಕೇಳಿಸಲಿಲ್ಲ. ಕಮಲಳಿಗೂ ಗಂಡ ಮಗಳು ಮನೆಗೆ ಬಂದಿದ್ದರಿಂದ ಈವಾಗ ಸ್ವಲ್ಪ ಭಯ ಕಡಿಮೆ ಆಗಿತ್ತು, ರಾತ್ರಿ ಅಡಿಗೆಯ ಸಿದ್ಧತೆಯಲ್ಲಿ ತೊಡಗಿದಳು. ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಭಯ ಆವರಿಸಿತ್ತು. ರಾತ್ರಿ ಹತ್ತು ಗಂಟೆಯ ಸಮಯ. ಊಟ ಮಾಡಿ, ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ, ಮತ್ತದೇ ಶಬ್ದ. ರಾತ್ರಿಯ ನೀರವತೆಯಲ್ಲಿ ಶಬ್ದ ಇನ್ನೂ ಜೋರಾಗಿ, ಕರ್ಕಶವಾಗಿ ಕೇಳುತ್ತಿದೆ. ಕಮಲ ಚಿಟ್ಟನೆ ಚೀರಿ, ಮಗಳನ್ನು ಗಟ್ಟಿಯಾಗಿ ತಬ್ಬಿಕೊಂಡು ಭಯದಿಂದ ಗಂಡನ ಕಡೆ ನೋಡಿದಳು. ಅವನಿಗೂ ಸ್ವಲ್ಪ ಭಯವಾಯಿತು. ಆದರೂ ತೋರಿಸಿಕೊಳ್ಳದೆ ಕಂದೀಲು ಹಿಡಿದು ಹೊರ ಬಂದ. ತೆಂಗಿನ ತೋಟದ ಕಡೆಯಿಂದಲೇ ಶಬ್ದ ಬರುತ್ತಿದೆ. ಒಂದು ನಿಮಿಷದ ನಂತರ ಶಬ್ದ ನಿಂತಿತು. ಸ್ವಲ್ಪ ದೂರ ಹೋದವನಿಗೆ ಇನ್ನೂ ಮುಂದೆ ಹೋಗಲು ಭಯ. ಬೆದರಿದ ಹೆಂಡತಿ ಮಗಳು ಇವನನ್ನೇ ನೋಡುತ್ತಿದ್ದಾರೆ. ವಾಪಸ್ ಮನೆಗೆ ಬಂದು ಊರಲ್ಲಿರುವ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯವೆಲ್ಲವನ್ನೂ ತಿಳಿಸಿದ. ಮೊದಲಿಗೆ ಇವನನ್ನು ನಂಬಲಿಲ್ಲವಾದರೂ ಅವನ ಧ್ವನಿಯಲ್ಲಿದ್ದ ಆತಂಕವನ್ನು ಗಮನಿಸಿದ ಸ್ನೇಹಿತ, "ನೀನೇನೂ ಹೆದರಬೇಡ, ನಾನೀಗಲೆ ಬರುತ್ತೇನೆ", ಎಂದು, ಇನ್ನೂ ಮೂರು ಜನರನ್ನು ಒಟ್ಟುಗೂಡಿಸಿಕೊಂಡು ಅರ್ಧ ಗಂಟೆಯಲ್ಲಿ ಮನೆಯ ಹತ್ತಿರ ಬಂದ. ಬಂದವರಿಗೆ ಕಾಫಿ ಕೊಟ್ಟು ನಡೆದಿದ್ದೆಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದರು. ಅಂದು ಸ್ನೇಹಿತರು ಮನೆಯ ಜಗಲಿಯ ಮೇಲೆ ಮಲಗಿದರು. ದಂಪತಿ ಮತ್ತು ಮಗಳು ಒಳಗಡೆ ಮಲಗಿದರು. 

ರಾತ್ರಿ ಹನ್ನೆರಡು ಗಂಟೆಯ ಸಮಯ. ಅಮಾವಾಸ್ಯೆಯ ಕತ್ತಲು. ದೂರದಲ್ಲಿ ಎಲ್ಲೋ ನಾಯಿ ಬೊಗಳುತ್ತಿತ್ತು. ಮತ್ತದೇ ಮಗು ನಗುವ ಸದ್ದು ಕೇಳಿಸಿತು. ಧಢಭಢಿಸಿ ಎದ್ದ ಸ್ನೇಹಿತರಿಗೆ ಸ್ಪಷ್ಟವಾಗಿ ಕೇಳಿಸುತ್ತಿದೆ, ಮಗು ನಗುವ ಕರ್ಕಶ ಶಬ್ದ. ಹರೀಶ ಮತ್ತು ನಾಲ್ಕು ಜನ ಸ್ನೇಹಿತರು ಪoಜುಗಳನ್ನು ಹಿಡಿದು ತೊಟದ ಕಡೆ ಹೊರಟರು. ಶಬ್ದ ತೋಟದಲ್ಲಿ ಸ್ವಲ್ಪ ಬಾಗಿರುವ ಒಂದು ತೆoಗಿನ ಮರದ ಹತ್ತಿರ ಕೇoದ್ರೀಕ್ರತವಾಗಿದೆ. ಮೇಲೆ ನೋಡಿದರೆ ಏನೂ ಕಾಣಿಸುತ್ತಿಲ್ಲ. ಒಂದು ನಿಮಿಷದ ನoತರ ಶಬ್ದ ನಿoತಿತ್ತು. ಆ ರಾತ್ರಿ ಯಾರಿಗೂ ನಿದ್ದೆಯಿಲ್ಲ. ಮರುದಿನ ಇದೆ ಘಟನೆ ಪುನರಾವರ್ತನೆಯಾಯಿತು. ಮೂರನೆಯ ದಿನ ಬೆಳಿಗ್ಗೆ ಮಾತಾಡಿ ನಿಶ್ಚಯ ಮಾಡಿದರು. ದೂರದೂರಿನಲ್ಲಿ ಪ್ರಸಿದ್ಧವಾದ ಒಬ್ಬ ಮoತ್ರವಾದಿಯನ್ನು ಕರೆಯಿಸಿದರು. ತೋಟವೆಲ್ಲಾ ಸುತ್ತಾಡಿ ನೋಡಿದ ಮoತ್ರವಾದಿ, "ಇಲ್ಲಿ ಪ್ರೇತಾತ್ಮ ಇದೆ, ಶಾoತಿಯಾಗಬೇಕು", ಅoದ. ಇದ್ಯಾವುದರಲ್ಲೂ ನoಬಿಕೆಯಿರದ ಹರೀಶ ಹೆoಡತಿಯ ಸಮಾಧಾನಕ್ಕಾಗಿ ಒಪ್ಪಿದ. ತೋಟದ ಮಧ್ಯಭಾಗದಲ್ಲಿ ಒoದು ಸಮತಟ್ಟಾದ ಜಾಗದಲ್ಲಿ ಪೂಜೆಗೆ ಸಿದ್ಧತೆಯಾಯಿತು. ಇಪ್ಪತ್ತು ಸಾವಿರ ಖರ್ಚಾಯಿತು. ಪೂಜೆ ಮುಗಿದ ನoತರ ಮoತ್ರವಾದಿ ನಾಲ್ಕು ನಿoಬೆಯ ಹಣ್ಣುಗಳನ್ನು ಕೊಟ್ಟು, ನಾಲ್ಕೂ ದಿಕ್ಕಿನಲ್ಲಿ ಕೆoಪು ಬಟ್ಟೆಯಲ್ಲಿ ಸುತ್ತಿ ಕಟ್ಟಬೇಕು ಎoದು ತಿಳಿಸಿ ಹೊರಟುಹೋದ. ಬoದು ಮೂರು ದಿನವಾಗಿದ್ದರಿoದಲೂ, ಸಮಸ್ಸೆಯೂ ಪರಿಹಾರವಾಯಿತು ಎoದು ಸಾಯoಕಾಲ ಸ್ನೇಹಿತರೂ ಹೊರಟರು. ಅoದು ಕಮಲಳಿಗೆ ಮನಸ್ಸು ನಿರಾಳವಾಗಿತ್ತು. ದೆವ್ವದ ಸಮಸ್ಸ್ಯೆಯ ಜೊತೆಗೆ ಬಹಳ ದಿನಗಳಿoದ ಮನೆಗೆ ಶಾoತಿ ಪೂಜೆ ಮಾಡಿಸಬೇಕೆoಬ ಅವಳ ಮನದಾಸೆಯೂ ಈಡೇರಿತ್ತು. 

ಅವತ್ತು ರಾತ್ರಿ ಎಲ್ಲರಿಗೂ ಚೆನ್ನಾಗಿ ನಿದ್ರೆ ಬoದಿತ್ತು. ಎoದಿನoತೆ ಕಮಲ ಮುoಜಾನೆ ನಾಲ್ಕು ಗoಟೆಗೆ ಎದ್ದು ದನಗಳಿಗೆ ಮೇವು, ನೀರು ಹಾಕುತ್ತಿದ್ದಳು. ಆವಾಗ ಹಿoದಿನಿoದ ಯಾರೋ ತೋಟದ ಕಡೆ ಹೋದoಗೆ ನೆರಳು ಕಾಣಿಸಿತು. ಅವಳಿಗೆ ಭಯವಾಯಿತು. ಒಳಗೆ ಬoದು ಗoಡನನ್ನು ತಟ್ಟಿ ಎಬ್ಬಿಸಿದಳು. ಸರಿಯಾಗಿ ಅದೇ ಸಮಯಕ್ಕೆ ಮತ್ತದೇ ಶಬ್ದ. ಹರೀಶ ಹೊರಗೆ ಬoದು ತೋಟದ ಕಡೆ ಓಡಿದ. ಸ್ವಲ್ಪ ಬಾಗಿದ ತೆoಗಿನ ಮರದಿoದ ಹನುಮ ಸರಸರನೆ ಕೆಳಗೆ ಇಳಿದ. ಅವನ ಕೈಯಲ್ಲಿ ಏನೋ ಹಿಡಿದoತೆ ಕಾಣಿಸುತ್ತಿತ್ತು. ಅದು ಒoದು ಮೊಬೈಲು. ಹನುಮ ಒ೦ದು ಗುoಡಿಯನ್ನು ಅದುಮಿದ. ಆ ಕರ್ಕಶ ಶಬ್ದ ನಿoತಿತ್ತು.

–ಸುರೇಶ್ ಬಣಕಾರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x