ನಗೀ ನವಿಲು ಆಡುತ್ತಿತ್ತ: ರೇಷ್ಮಾ ಎ.ಎಸ್.

ಕೊಪ್ಪದಿಂದ ಬಾಳೆಹೊನ್ನೂರಿಗೆ ಜಯಪುರದ ಮೇಲಿನ ಮಾರ್ಗವಲ್ಲದೇ ಇನ್ನೊಂದು ಮಾರ್ಗವೂ ಇದೆ. ಅದು ಮೇಲ್ಪಾಲು ರಸ್ತೆ. ಇದು ಎರೆಡು ಕಿ.ಮೀ. ಕಡಿಮೆ ಇದ್ದು ಟಿಕೆಟ್ ದರ ಒಂದು ರೂ. ಕಡಿಮೆ ಇದ್ದರೂ ಜಯಪುರ ರಸ್ತೆ ಬಿಟ್ಟು ಈ ರಸ್ತೆಯಲ್ಲಿ ಪಯಣಿಸುವವರು ಕಡಿಮೆ. ಬೇರೆ ಬಸ್ ಸಿಗದಿದ್ದಾಗ, ಇಲ್ಲವೇ ಈ ಮಾರ್ಗದಲ್ಲಿಯೇ ಮನೆಗಳಿದ್ದವರು, ಈ ಮಾರ್ಗದಲ್ಲಿರುವ ಊರುಗಳಿಗೆ ಹೋಗಬೇಕಾದವರು ಮಾತ್ರ ಇತ್ತ ಕಡೆ ಪಯಣಿಸುತ್ತಾರೆ. ಕಾರಣ ತುಂಬ ಹಾಳಾದ ರಸ್ತೆ. ಆಮೆ ನಡಿಗೆಯಲ್ಲಿ ತಿರುವು ರಸ್ತೆಯಲ್ಲಿ ಸಾಗುತ್ತಾ ಮಧ್ಯ ಮಧ್ಯ ನಿಂತೂ ನಿಂತೂ ಹೋಗುವ ಬಸ್, ಮಾರ್ಗ ಮಧ್ಯದಲ್ಲೇನಾದರೂ ಹಾಳಯಿತೋ ಇನ್ನೊಂದು ಬಸ್ ಇತ್ತ ಬರಬೇಕಾದರೆ ಗಂಟೆಗಟ್ಟಲೆ ಕಾಯಬೇಕಾದ ಭಯ. ಆದರೆ ಈ ಮಾರ್ಗದಲ್ಲಿಯೇ ಸಹಕಾರ ಸಾರಿಗೆ ಬಸ್ಸಿನಲ್ಲಿ ಎರೆಡು ಮೂರು ಬಾರಿ ಪಯಣಿಸಿ ನೋಡಿ-ನಿಮಗೊಂದು ವಿಶಿಷ್ಟ ಅನುಭವವಾಗುತ್ತದೆ.

ಬಸ್ ಆಮೆವೇಗದಲ್ಲಿಯೇ ಚಲಿಸಿದರೂ ತಲೆ ಕೆಳಗೆ ಹಾಕಿ ನಿದ್ದೆ ಮಾಡದೇ ತೂಕಡಿಸದೇ ಕಣ್ಣು ಬಿಟ್ಟು ಎರಡೂ ಬದಿ ನೋಡುತ್ತಿದ್ದರೆ ಮನಮೋಹಕ ಪ್ರಕೃತಿ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಕಣ್ಸಾಗುವಷ್ಟು ದೂರ ಹಸಿರು ಕಾಫಿ ಕಾಡು, ಮಧ್ಯೆ ಮಧ್ಯೆ ಪುಟ್ಟ ಪುಟ್ಟ ಮನೆಗಳು, ಯಾವ ಅವಸರವೂ ಇಲ್ಲವೇ ಇಲ್ಲ ಎಂಬಂತೆ ನಿರಾಳವಾಗಿರುವ ಜನರು, ಮಳೆರಾಯ ನಿರ್ಮಿಸಿರುವ ಪುಟ್ಟ ಪುಟ್ಟ ಜೋಗಜಲಪಾತಗಳೂ, ಅಲ್ಲೊಂದು, ಇಲ್ಲೊಂದು ಶಾಲೆ, ದೇವಸ್ಥಾನ ಹೀಗೆ ಈ ಎಲ್ಲ ಸೌಂದರ್ಯದ ಸ್ವಾದ ಸವಿಯುತ್ತಾ ಇದ್ದರೆ ಕಲ್ಲು ಎದ್ದು ನಿಂತಿರುವ ಅತಿ ಕೆಟ್ಟ ರಸ್ತೆಯ ಮೇಲೆ ಸಾಗುತ್ತಾ ಬಸ್ಸು ನಿಮ್ಮನ್ನು ಎತ್ತಿ ಕುಕ್ಕಿದರೂ ನೀವದನ್ನು ಗಮನಿಸುವುದೇ ಇಲ್ಲ.

ಇದಕ್ಕಿಂತ ವಿಶಿಷ್ಟವಾದುದೆಂದರೆ ಈ ಬಸ್ಸಿನ ಸಿಬ್ಬಂದಿ. ಈ ಕೆಟ್ಟ ರಸ್ತೆಯಲ್ಲಿ ಆಮೆಯಂತೆ, ಬಸವನ ಹುಳುವಿನಂತೆ ತೆವಳುತ್ತಾ ಸಾಗುವ ಬಸ್ಸಿನಲ್ಲಿ ಉದ್ದಕ್ಕೂ ನಿಲ್ಲಿಸುತ್ತಾ ಪ್ರಯಾಣಿಕರನ್ನು ಏರಿಸಿಕೊಂಡು, ಇಳಿಸಿಕೊಂಡು ಸಾಗಬೇಕಲ್ಲಾ ಎಂಬ ಬೇಸರವಾಗಲೀ, ಅಸಹನೆಯಾಗಲೀ, ಅಸಮಾಧಾನವಾಗಲೀ, ಕೋಪವಾಗಲೀ ಇವರುಗಳ ಮೊಗಗಳ ಮೇಲೆ ತುಸುವಾದರೂ ಕಂಡುಬರುವುದಿಲ್ಲ. ಬದಲಿಗೆ “ಮಾರೀ ಮ್ಯಾಲ ನಗೀ ನವಿಲು ಆಡುತ್ತಿತ್ತ” ಎಂಬಂತೆ ಇವರ ಮೊಗಗಳ ಮೇಲೆ ನಗೆಯೇ ನಗೆ. ಪಿಕ್‍ನಿಕ್‍ಗೆ ಹೊರಟವರಂತೆ ನಗು, ಹಾಸ್ಯ, ಹರಟೆ. ಮೂರು ವರ್ಷಗಳಿಂದ ಸತತವಾಗಿ ನೋಡುತ್ತಿದ್ದರೂ ಈ ನಗೆಗೆ ಹೊಗೆಯೇ ಹಿಡಿದಿಲ್ಲ.

ಪ್ರಯಾಣಿಕರೆಲ್ಲ ಇವರಿಗೆ ಅತಿ ಆತ್ಮೀಯರೇ. ಎಲ್ಲರನ್ನೂ ಬಲು ಆತ್ಮೀಯತೆಯಿಂದ “ಓ… ಇತ್ಲಾ ಕಡೆ ಹೊರಟ್ರಾ? ಬಾಳ ಅಪ್ರೂಪ, ತುಂಬಾ ಸಮಯ ಆಗಿತ್ತು ಈ ಕಡೆ ಬರದೇ?” ಎಂದೆಲ್ಲಾ ವಿಚಾರಿಸಿಕೊಳ್ಳುತ್ತಿದ್ದರೆ ಬಸ್ಸಿಗೆ ಬಂದಿರುವುದೋ ನೆಂಟರ ಮನೆಗೋ ಅಂದುಕೋಬೇಕು ಹಾಗೆ. ಬಸ್‍ಗೆ ಕೈ ತೋರಿಸಿ ಬಸ್ ನಿಂತರೂ ನಿಧಾನವಾಗಿ ಸಮಾನು-ಸರಂಜಾಮು ತರೋದರಲ್ಲೇ ಇರುವ ಜನರನ್ನು ಕಂಡರೂ ಇವರಿಗೇನು ಸಿಡಿಮಿಡಿಯಿಲ್ಲ. “ಹೋಯ್, ಬನ್ನಿ ಬೇಗ. ನೆಂಟ್ರ ಮನೆ ಊಟ ಗಡದ್ದಾಗಿ ನಡೆಯೋಕೆ ಆಗ್ತಿಲ್ಲ ಎಂತ ಮರಾಯ್ರೇ? ಬಸ್ ಬರೋ ಹೊತ್ಗೆ ನಿದ್ದೆ ಹಿಡಿದಿತ್ತಾ ಎಂತ?” ಎನ್ನುತ್ತಾ ನಗುನಗುತ್ತಾ ಬರಮಾಡಿಕೊಳ್ತಾರೆ. “ಇಲ್ಲಿದೆ ನೋಡಿ ಸಿಂಹಾಸನ” ಎಂದು ಕೂರಿಸುತ್ತಾರೆ ಬೇರೆ. ಇಳಿಯುವವರನ್ನೂ ಅಷ್ಟೆ. “ಅಜ್ಜಾ ಮೆತ್ಗೆ, ನಿಧಾನ ಅಮ್ಮಾ. ಓಹೋ ಬಿದ್‍ಗಿದ್ದೀರಿ, ಬಸ್ ನಿಲ್ಲಲಿ ತಾಳಿ. ಏನುಂಟು ಮನ್ಯಾಗೆ? ಏನವಸ್ರ?” ಎಂದು ಕೀಟಲೆ. ಒಮ್ಮೊಮ್ಮೆ ಅತಿಯಾಯ್ತು ಎಂಬಷ್ಟು ಅಬ್ಬರದ ನಗೆ, ಮಾತು.

ಬಸ್ ನಿಲ್ಲಿಸಿ “ಕೊಡೆ ಮಡಿಸ್ರಿ ಮಾರಾಯ್ರೆ, ಬಸ್ಸೊಳ್ಗೆ ಅಂಥಾ ಮಳೆ ಏನಿಲ್ಲ” ಎನ್ನುತ್ತ್ಗಾ ಕಂಡಕ್ಟರ್ ಕೂಗಿಕೊಂಡರೆ ಎಲ್ಲರ ತಲೆಗಳು ಹಿಂಬಾಗಿಲಿನತ್ತ ಹೊರಳುತ್ತವೆ. ಆ ಮನುಷ್ಯ ಕೊಡೆ ಮುಚ್ಚದೆಯೇ ಒಳಗೆ ನುಗ್ಗಿದಾಗ ಕಂಡಕ್ಟರ್, ಕ್ಲೀನರ್‍‍ರ ಅಬ್ಬರದ ನಗು. ಓಡಿ ಬಂದ ರಭಸಕ್ಕೆ ಕೊಡೆ ಉಲ್ಟಾ ಆಗಿಬಿಟ್ಟಿದೆ, ಮಡಿಸಲಾಗಿತ್ತಿಲ್ಲ. ಪ್ರಯಾಣಿಕರೆಲ್ಲರಿಗೂ ನಗುವೋ ನಗು. “ತಾಳಿ ಮರಾಯ್ರೇ ಸರಿ ಮಾಡೋಣ” ಎನ್ನುತ್ತಾ ಕಂಡಕ್ಟರ್ ಪ್ರಯಾಣಿಕನಿಗೆ ಕೊಡೆ ಮಡಿಸಲು ನೆರವಿಗೂ ಧಾವಿಸುತ್ತಾನೆ. ಇಂಥ ಮೋಜಿನ ಪ್ರಸಂಗಗಳು ಅದೆಷ್ಟೋ. ಅಮ್ಮ, ಅಕ್ಕ, ಅಣ್ಣಾ ಎನ್ನುತ್ತಾ, ನಗುತ್ತಾ, ಬಾಯ್ತುಂಬಾ ಮಾತನಾಡುತ್ತಾ ಇಡೀ ಪ್ರಯಾಣ ಬೇಸರವಾಗದಂತೆ ಮಾಡುತ್ತಾರೆ. ಮಳೆಗಾಲದಲ್ಲೊಂದು ಬಗೆಯಾದರೆ ಬೇಸಿಗೆಯಲ್ಲಿ ಈ ಬಸ್‍ನ ಪ್ರಯಾಣವೆಂದರೆ ಹೊಂಬಣ್ಣದ ಧೂಳಿನ ಓಕುಳಿಯಾಟವೇ ಸರಿ. ಬಸ್ ಪೂರ್ತಿ ಕೆಂಪಾಗಿ ಹೋಗುತ್ತೆ. ಕುಳಿತವರ ಕೂದಲು, ಬಟ್ಟೆ  ಎಲ್ಲ ತೆಳು ಕೆಂಧೂಳಿನಿಂದ ಮೆಹಂದಿ ಹಚ್ಚಿಸಿಕೊಂಡಂತೆ ಕಾಣತೊಡಗುತ್ತದೆ. ಮನೆಗೆ ಹೋದಮೇಲೆ ಸ್ನಾನ ಮಾಡಲೇಬೇಕು. ಆದರೇನಂತೆ ಈ ಬಸ್ಸಿನ ಸಿಬ್ಬಂದಿಯ ನಗುವಿಗೆ, ಸ್ನೇಹಪರತೆಗೆ ಯಾವುದೇ ಧೂಳು ಹತ್ತಿಕೊಳ್ಳದೇ ಬೆಳ್ಳ ಬೆಳ್ಳಗೆ ಹರಡಿಕೊಂಡಿರುತ್ತದೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಶಶಿ
ಶಶಿ
10 years ago

ನಮ್ಮ ಮಲೆನಾಡಿಗರೇ ಹಾಗೆ……….. ಎಂತಹ ಕಸ್ಟದಲ್ಲಿದ್ದರೂ ನಗುತಾ ನಗಿಸುತ್ತಾ ಬದುಕುತ್ತಾರೆ……………ಮಾತು, ಪ್ರೀತಿ, ವಿಶ್ವಾಸವೇ ಉಸಿರು……….. ಅತಿಥಿ ದೇವೋಭವ ನಮ್ಮ ಮಲೆನಾಡಿನ ಸಂಸ್ಕೃತಿ………………… ಅಲ್ಲಿ ಒಬ್ಬರಿಗೊಬ್ಬರು ಸಹಾಯ, ಸಹಕರ.  ಅದಕ್ಕೆ ಶಂಕರ್ ಸಾರಿಗೆ ಬಸ್ ಈಗ ಸಹಕಾರ ಸಾರಿಗೆ ಬಸ್…………. 🙂

 

Rajendra B. Shetty
10 years ago

ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ಹಳೆ ನೆನಪುಗಳನ್ನು ಕೆದಕುವಂತೆ ಮಾಡಿತು. ಇಂತಹ ಅನುಭವಗಳನ್ನು ನಾನೂ ಅನುಭವಿಸಿದ್ದೇನಲ್ಲಾ ಅನಿಸುತ್ತಾ ಲೇಖನ ಬಹಳ ಆತ್ಮೀಯವಾಯಿತು.

Venkatesh
Venkatesh
10 years ago

Malegalada sahakara sarige bus prayana para urinalliruva namage nijakku ondu vishisha.

Chumu chumu chali adakke ottu koduva gali?( thangali alla) oladuva bus, thukadikege berewnu beku? 

3
0
Would love your thoughts, please comment.x
()
x