ಸದಭಿರುಚಿಯ ನಾಟಕಕಾರ ಹುಬ್ಬಳ್ಳಿಯ ಡಾ.ಗೋವಿಂದ ಮಣ್ಣೂರ ಅವರು ಹಿಂದೊಂದು ಕಾಲದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ ನಿರ್ದೇಶನದ ಕನ್ನಡ ಚಿತ್ರ ‘ಉಪಾಸನೆ’ಯಲ್ಲಿ ನಾಯಕಿ ಆರತಿಗೆ ಸಮಸಮನಾಗಿ ನಾಯಕ ಪಾತ್ರದಲ್ಲಿ ನಟಿಸಿ, ಹೆಸರಾದವರು. ಮುಂದೆ ಏನಾಯಿತೋ ಗೊತ್ತಿಲ್ಲ, ಚಿತ್ರರಂಗದ ಸಹವಾಸ ಬಿಟ್ಟು, ಹುಬ್ಬಳ್ಳಿಯಲ್ಲಿ ಸೈಲೆಂಟಾಗಿ ತಮ್ಮ ವೃತ್ತಿಯೊಂದಿಗೆ ಆಗಾಗ ಧಾರವಾಡ ಆಕಾಶವಾಣಿಗೆ ಸದಭಿರುಚಿಯ ಹಾಸ್ಯ ನಾಟಕಗಳನ್ನು ರಚಿಸಿ ಕೊಡುವುದು, ಕಲಾವಿದರನ್ನು ಪ್ರೋತ್ಸಾಹಸಿ, ಸಂಘಟಿಸುವುದು, ಪತ್ರಿಕೆಗಳಿಗೆ ಕಾಲಮ್ ಬರೆಯುತ್ತಾ ತಮ್ಮಲ್ಲಿರುವ ಸೃಜನಶೀಲತೆಯನ್ನು ಇಂದಿಗೂ ಕಾಪಿಟ್ಟುಕೊಂಡು ಸಕ್ರೀಯರಾಗಿದ್ದಾರೆ. ಇಂತಹ ಹಿರಿಯರ ಹಲವಾರು ನಾಟಕಗಳಲ್ಲಿಯ ಆಯ್ದ ಕೆಲವನ್ನು ಇತ್ತೀಚೆಗೆ ಮೂರು ದಿನಗಳ ಡಾ.ಗೋವಿಂದ ಮಣ್ಣೂರ ನಗೆ ನಾಟಕೋತ್ಸವ ಮತ್ತು ಧೀಮಂತ ಕಲಾವಿದರ ಸನ್ಮಾನ ಕಾರ್ಯಕ್ರಮವನ್ನು ನಾವೀಕಾ ಸಂಸ್ಥೆ ಧಾರವಾಡದಲ್ಲಿ ಹಮ್ಮಿಕೊಂಡಿತ್ತು. ಪಾರ್ವತಿಬಾಯಿ ಪಂಚಸೂತ್ರ (ನಿರ್ದೇಶನ : ಆರತಿ ಡಿ), ಕಳ್ಳರು-ಮಹಾಕಳ್ಳರು (ನಿರ್ದೇಶನ : ಚನ್ನಬಸಪ್ಪ ಕಾಳೆ) ಮತ್ತು ಮಾವ (ನಿರ್ದೇಶನ : ಪರಿಮಳಾ ಕಲಾವಂತ) ಎಂಬ ಮೂರು ನಾಟಕಗಳು ಪ್ರಯೋಗಗೊಂಡವು. ಈ ಮೂರು ನಾಟಕಗಳು ಈಗಗಲೇ ಬಾನುಲಿಯಲ್ಲಿ ಪ್ರಸಾರಗೊಂಡಿವೆ ಮತ್ತು ಹಲವಾರು ಬಾರಿ ಹಲವಾರು ವೇದಿಕೆಗಳಲ್ಲಿ ಪ್ರಯೋಗದ ಭಾಗ್ಯ ಕಂಡಿವೆ.
ನಗೆ ನಾಟಕಗಳೆಂದರೆ ರಂಗಪ್ರಿಯರಿಗೆ ಹಾಸ್ಯದ ಭೂರಿ ಭೋಜನ ಒದಗಿಸುತ್ತವೆಂಬುದು ಎಲ್ಲರ ಅಪೇಕ್ಷೆ. ಆಕಾಶವಾಣಿಯಲ್ಲಿ ಧ್ವನಿ ಮಾತ್ರದಿಂದ ಕೇಳಿಸಿಕೊಂಡ ನಾಟಕಗಳು ರಂಗದ ಮೇಲೆ ಹೇಗೆ ಪ್ರಯೋಗಗೊಳ್ಳಬಹುದು ಎಂಬ ಕುತೂಹಲ ಶ್ರೀಸಾಮಾನ್ಯ ಪ್ರೇಕ್ಷಕನಲ್ಲಿ ಇರುವುದು ಸಹಜ. ಆದರೆ ಪ್ರದರ್ಶನಗೊಂಡ ಪ್ರತಿದಿನದ ನಾಟಕ ಪ್ರಯೋಗಗಳ ನಂತರ ಎಲ್ಲಾ ನಟ-ನಿರ್ದೇಶಕರದ್ದು ಒಂದೇ ಗೋಳು. ಬಹಳ ಅವಸರದಲ್ಲಿ ಕಡಿಮೆ ಅವಧಿಯಲ್ಲಿ ನಾಟಕಗಳನ್ನು ತಯಾರಿ ಮಾಡಿಕೊಳ್ಳಲು ಸೂಚಿಸಿದ ಸಂಘಟಕರು ಮುಂದಾದರೂ ಸಂಯಮದಿಂದ ಹೆಚ್ಚು ಕಾಲಾವಕಾಶ ನೀಡಬೆಕು. ಕಡಿಮೆ ಅವಧಿಯಲ್ಲಿ ಎರಡ್ಮೂರು ದಿನಗಳಲ್ಲಿ ತಯಾರಿ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಹೆಸರು ಕೆಡಸಿಕೊಳ್ಳಲು ಇಷ್ಟವಿಲ್ಲದೆ, ಸಂಘಟಕರ ಮುಲಾಜಿಗೆ ಬಿದ್ದು ಸರಿಯಾಗಿ ಪ್ರದರ್ಶನ ನೀಡಲಾಗದೇ ಮಕ್ಕಳ ನಾಟಕಗಳಿಗಿಂತಲೂ ಕಡೆಯಾಗಿ ಪ್ರಯೋಗಿಸಿದ್ದಕ್ಕೆ ಬೇಜಾರಾಯ್ತು ಎಂದು ಎಲ್ಲ ತಂಡದವರು ಗೋಳು ಹೊಯ್ದುಕೊಳ್ಳುತ್ತಿದ್ದುದು ಸಾಮಾನ್ಯ ಸಂಗತಿಯಾಗಿದ್ದು ಮತ್ತೊಂದು ಗಂಭೀರ ಹಾಸ್ಯ ಉಕ್ಕಿಸಿದಂತಿತ್ತು.
ಹಲವಾರು ಕಲಾವಿದರು, ಹಲವಾರು ವೇದಿಕೆಗಳಲ್ಲಿ ತಮ್ಮ ಮನಸೋ ಇಚ್ಛೆ ಪ್ರದರ್ಶಿಸಿರುವ ಮತ್ತು ಎಲ್ಲರಿಗೂ ಗೊತ್ತಿರುವ ಕಥೆಯನ್ನೊಳಗೊಂಡ ‘ಪಾರ್ವತಿಬಾಯಿ ಪಂಚಸೂತ್ರ’ ನಾಟಕವು ಪ್ರದರ್ಶನ ಗೊಂಡಿದ್ದು ನಾಟಕೋತ್ಸವದ ಮೊದಲ ದಿನ. ನಾಟಕ ನಿದೇರ್ಶನ ಮಾಡಿದ ಆರತಿ ಡಿ. ಅವರು ರಂಗ ಸಜ್ಜಿಕೆ ಮತ್ತು ಇತರೆ ವಿಷಯಗಳಲ್ಲಿ ಏನಾದರೂ ಹೊಸತನ್ನು ನೀಡುತ್ತಾರೆಂದು ಬಂದ ಪ್ರೇಕ್ಷಕರಿಗೆ ನಿರಾಶೆಯನ್ನುಂಟು ಮಾಡಿದರು. ಕೆಲವೊಂದು ದೃಶ್ಯಗಳಲ್ಲಿ, ಕೆಲವು ಪಾತ್ರಗಳು ಪ್ರಮುಖವಾಗಿ ಕುಂಟ ಕುಲಕರ್ಣಿ ಪಾತ್ರವು ಸಂಭಾಷಣೆ ಮರೆತು ಡಬ್ಬಲ್ ಮೀನಿಂಗ್ ಡೈಲಾಗ್ ಹೇಳಿದ್ದನ್ನು ಕೇಳಿ, ಪ್ರೇಕ್ಷಕರ ಮೊದಲ ಸಾಲಿನಲ್ಲಿ ಕುಳಿತ ನಾಟಕ ಕರ್ತೃಗಳು ಏನು ಪ್ರತಿಕ್ರಿಯಿಸಿದರೋ ಗೊತ್ತಾಗಲಿಲ್ಲ. ಒಂದು ವಲಯದ ಪ್ರೇಕ್ಷಕ ಪರಮಾತ್ಮರು ಅಂಥಹ ಸಂಭಾಷಣೆಗಳನ್ನೂ ಸಹ ಆಸ್ವಾದಿಸಿದರು. ಈ ನಾಟಕವು ಅತ್ತೆಯ ಸೊಕ್ಕು ಮುರಿದು ತನ್ನ ಸಂಸಾರವನ್ನು ಸರಿಪಡಿಸಿಕೊಳ್ಳಲು ಅಳಿಯನೊಬ್ಬ ಹೂಡುವ ತಂತ್ರೋಪಾಯಗಳು, ಆತನಿಗೆ ಸಹಕರಿಸುವ ಮಾವ, ಗೆಳೆಯರ ಪ್ರಸಂಗ ಹಾಸ್ಯವನ್ನು ಉಣಬಡಿಸುತ್ತದೆ.
ಎರಡನೇಯ ದಿನ ಹುಬ್ಬಳ್ಳಿಯ ನಟರಾಜ ಕಲಾ ಬಳಗದ ಕಲಾವಿದರು ಅಭಿನಯಿಸಿದ ಕಳ್ಳರು-ಮಹಾಕಳ್ಳರು ನಾಟಕವು ಮೂಲತಃ ಹಾಸ್ಯ ನಾಟಕವಾದರೂ ಅದರಲ್ಲಿ ಎನ್.ಎಸ್.ರಾವ್ ಅವರ ‘ರಣದುಂದುಬಿ’ ನಾಟಕದ ದೃಶ್ಯವನ್ನು ಅಳವಡಿಸಿದ್ದರಿಂದ ಗಂಭೀರ ನಾಟಕವಾಗಿ ಹೊರಹೊಮ್ಮಲು ಪ್ರಯತ್ನಿಸಿತು. ಕಳ್ಳ-ಪೋಲಿಸರಾಟದ ಕಥೆಯ ಈ ನಾಟಕದಲ್ಲಿ ಪೋಲೀಸರಿಂದ ತಪ್ಪಿಸಿಕೊಂಡು ಆಶ್ರಯಕ್ಕಾಗಿ ಬಡ-ಕಲಾವಿದನೊಬ್ಬನ ಮನೆಯೊಳಗೆ ಧಾವಿಸಿ ಬರುತ್ತಾನೆ. ಪ್ರಾಣಭಯದಿಂದ ಬಳಲುವ ಕಳ್ಳನನ್ನು ಹಲವಾರು ನೆಪಗಳನ್ನು ಹೇಳಿ ಕದ್ದು ತಂದಿರುವ ಹಣವನ್ನು ಉಪಾಯವಾಗಿ ಸುಲಿಗೆ ಮಾಡುವ ಕಲಾವಿದರ ಕುಟುಂಬದ ಎಲ್ಲರೂ ಹೂಡುವ ಆಟ ಮಹಾಕಳ್ಳರ ಹಾಸ್ಯ ಪ್ರಸಂಗ ಈ ಮೊದಲಿನ ಪ್ರಯೋಗದಲ್ಲಿ ಹಾಸ್ಯದ ರಸದೌತಣ ಉಕ್ಕಿಸಿತ್ತು. ಈ ಪ್ರಯೋಗದ ಕುರಿತು ಅಸಮಾಧಾನವನ್ನು ನಾಟಕ ಕರ್ತೃಗಳು ವ್ಯಕ್ತಪಡಿಸಿರುವುದು ಸಹಜವಾಗಿದೆ.
ಕೊನೆಯ ದಿನದ ‘ಮಾವ’ ನಾಟಕವು ಇಬ್ಬರ ನ್ಯಾಯ ಮೂರನೇಯವನಿಗೆ ಆದಾಯ ಎಂಬ ಮಾತಿನಂತೆ ನಡೆದು, ಕೊನೆಯಲ್ಲಿ ಆ ಮೂರನೇಯ ವ್ಯಕ್ತಿಯ ಮೋಸದ ಮುಖವಾಡ ಬಯಲಾಗುವುದರೊಂದಿಗೆ ಸಿಹಿ ಮಾತುಗಳನ್ನಾಡುವ ಪಂಚರಂಗಿ ವ್ಯಕ್ತಿತ್ವದವರ ಕುರಿತು ಎಚ್ಚರವಾಗಿರಲು ತಿಳಿಸುತ್ತದೆ. ಈ ನಾಟಕವನ್ನು ಹುಬ್ಬಳ್ಳಿಯ ಹಿರಿಯ ಕಲಾವಿದೆ ಪರಿಮಳಾ ಕಲಾವಂತ ನಿರ್ದೇಶನದಲ್ಲಿ ರಾಘವೇಂದ್ರ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದೆಯರು ಅಭಿನಯಿಸಿದರು. ಮೂರು ದಿನಗಳ ಉತ್ಸವದಲ್ಲಿ ಹೆಚ್ಚು ಗಮನ ಸೆಳೆದ ಈ ನಾಟಕವನ್ನು ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆಯರು ಅಭಿನಯಿಸಿದ್ದು, ಕಲೆಯೆಂಬುದು ಎಂದಿಗೂ ಬತ್ತದ ಅಮೃತಗಂಗೆ ಎಂಬುದನ್ನು ಸಾಬೀತು ಪಡಿಸಿದರು. ಈ ನಾಟಕೋತ್ಸವದ ಎಲ್ಲಾ ನಾಟಕಗಳಿಗೆ ಸೋಮಶೇಖರ ಜಾಡರ ಅವರು ನಿರ್ವಹಿಸಿದ ಹಿನ್ನಲೆ ಸಂಗೀತ ಅದ್ಭುತವಾಗಿತ್ತು.
ಈ ಸಂದರ್ಭದಲ್ಲಿ ಮೂರು ನಾಟಕಗಳನ್ನು ವೀಕ್ಷಿಸಿದ ನಂತರ ಅಭಿನಯ ಎನ್ನುವುದು ತನ್ನ ಪರಿಧಿಯನ್ನು ದರ್ಶನದ ಮಟ್ಟಿಗೆ ಕೊಂಡೊಯ್ದಾಗ ಮಾತ್ರ ಅದು ಕೊಡಬೇಕಾದ ರಸಾನುಭವವನ್ನು ಎದುರಿಗಿರುವ ಪ್ರೇಕ್ಷಕರಿಗೆ ಕೊಡುತ್ತದೆ. ಇಲ್ಲದಿದ್ದರೆ ಅದೊಂದು ಗೊತ್ತು ಗುರಿಯಿಲ್ಲದೆ ಸಾಗುವ ಟೈಂಪಾಸ್ ಆಟವಾಗುತ್ತದೆ. ಅಭಿನಯ ಮತ್ತು ಪ್ರಸ್ತುತಿಯಲ್ಲಿ ಬದಲಾವಣೆ ಕಂಡರೂ ಸ್ಕ್ರಿಪ್ಟ್ ಮಾತ್ರ ಬದಲಾಗುವುದಿಲ್ಲ. ಆದರೂ ಬದಲಾವಣೆ ಬಯಸುವ ಪ್ರೇಕ್ಷಕನಿಗೆ ನಾಟಕ ನಡೆಯುವ ವಾತಾವರಣ, ರಂಗಪರಂಪರೆಗಳ ಮೂಲಕ ಸಾಮಾಜಿಕ ಬದ್ಧತೆಯನ್ನು ನೆನಪಿಸುವುದು ಅವಶ್ಯಕವಾಗಿರುತ್ತದೆ. ಲೋಕದಲ್ಲಿ ಕಂಡಿದ್ದನ್ನು ಕವಿ, ನಾಟಕಕಾರ, ಕಲಾವಿದರು ರಂಗದಲ್ಲಿ ಆಕೃತಿ-ಪ್ರತಿಮೆಗಳನ್ನು ಕಟ್ಟಿಕೊಡಬಲ್ಲರು. ದಿನನಿತ್ಯದ ಜಂಜಾಟ ಮತ್ತು ಕೆಲಸದ ಒತ್ತಡಗಳನ್ನು ಮರೆತು ಸ್ವಲ್ಪ ಸಮಯ ಮನರಂಜನಾತ್ಮಕವಾಗಿ ವಿಶಾಂತಿ ಪಡೆದು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಸಾಮಾಜಿಕ ಹಾಸ್ಯ ನಾಟಕಗಳು ಮುಖ್ಯ ಪಾತ್ರ ವಹಿಸುತ್ತವೆ ಎಂಬುದು ಅತಿಶಯೋಕ್ತಿಯ ಸಂಗತಿಯೇನಲ್ಲ. ಹಾಸ್ಯ ನಾಟಕಗಳ ಜೀವಾಳವೆಂದರೆ ಕಚಗುಳಿಯಿಡುವ ಸಂಭಾಷಣೆ, ಸಮಯ ಪ್ರಜ್ಞೆ, ಚತುರೋಕ್ತಿಗಳ ಉದ್ಧರಣೆ, ದೇಹಭಾಷೆ, ರಂಗಚಲನೆ ಇತ್ಯಾದಿಗಳು. ಹಾಸ್ಯ ನಾಟಕಗಳು ಮೂಲತಃ ಸಾಮಾನ್ಯರ ಬದುಕಿಗೆ ಹತ್ತಿರವಾಗುವ ಕಥಾನಕಗಳನ್ನು ಒಳಗೊಂಡಿರುತ್ತವೆ. ಕೆಲವೊಮ್ಮೆ ಹದವರಿತ ಕಲಾವಿದರ ಅಭಿನಯದ ನಡುವೆ ಹೊಸ ನಟರ ಮುಗ್ದ ತಪ್ಪುಗಳು ಸಹ ಮರೆ ಮಾಚಲ್ಪಡುತ್ತವೆ. ನಾಟಕೋತ್ಸವದ ಸಂಘಟಕರು ಧೀಮಂತ ಕಲಾವಿದರ ಸನ್ಮಾನಕ್ಕೆ ಹೆಚ್ಚು ಗಮನವಹಿಸಿದಂತೆ ನಾಟಕ ಪ್ರಯೋಗಗಳಿಗೆ ಕೊಂಚ ಗಮನವಹಿಸಿದ್ದರೆ ಧಾರವಾಡದ ಪ್ರೇಕ್ಷಕರ ನೆನಪಿನ ಪುಟಗಳಲ್ಲಿ ಬಹುಕಾಲ ಉಳಿಯುವಂಥಹ ಅವಕಾಶವನ್ನು ತಪ್ಪಿದ್ದು ಬೇಜಾರಿನ ಸಂಗತಿ.
*****