ನಂ ಸಾಗರ ಜಾತ್ರೆ:ಪ್ರಶಸ್ತಿ ಬರೆವ ಅಂಕಣ


 

ನಮ್ಮುರು ಸಾಗರ. ಇಲ್ಲಿ ಪ್ರತೀ ವರ್ಷ ನಡೆಯೋ ಗಣಪತಿ ಜಾತ್ರೆ ಇಲ್ಲಿನ ವಿಶೇಷ. "ಶ್ರೀ ಮಹಾಗಣಪತಿ ಮಹಾಸ್ಯಂದನ ರಥೋತ್ಸವ" ಅಂತ ಅದರ ಪೂರ್ಣ ಹೆಸರು. ಹೆಸರಲ್ಲಿ ಮಾತ್ರ "ಮಹಾ" ಇದೆ, ಇದೇನ್ ಮಹಾ ಅಂತಂದ್ಕೊಳ್ಬೇಡಿ. ಒಂದು ವಾರಕ್ಕಿಂತಲೂ ಹೆಚ್ಚು ನಡೆಯುವ ಈ ಜಾತ್ರೆ ಸಾಗರಿಗರ ಪಾಲಿಗೆ ಒಂದು ದೊಡ್ಡ ಹಬ್ಬದಂತೆಯೇ . ಯುಗಾದಿಯಾಗಿ ನಾಲ್ಕು ದಿನಕ್ಕೆ ಶುರುವಾಗೋ ಈ ಜಾತ್ರೆಗೆ ಯುಗಾದಿಗೆ ಮನೆಗೆ ಬಂದ ಮಕ್ಕಳು, ಅದಾದ ನಂತರ ಬರೋ ಶನಿವಾರವೋ, ಭಾನುವಾರವೋ ಸೇರೋ ದೂರದೂರಿನ ನೆಂಟರು.. ಜಾತ್ರೆ ಪೇಟೆಲಿ ಸಿಗೋ  ಕೆಲವಾದ್ರೂ ಚಡ್ಡಿ ದೋಸ್ತುಗಳು.. ಹೀಗೆ ಜಾತ್ರೆಯ ಬತ್ತಾಸ್, ಜಿಲೇಬಿ, ಐಸ್ ಕ್ರೀಂ ನಷ್ಟೇ ಮಧುರ ಅನುಭವ..


"ಏ ಮುಂದಿನ ತಿಂಗಳು ಗಣಪತಿ ತೇರೋ ಮಗ.." ಅಂತ ಅಮ್ಮ ಫೋನ್ ಮಾಡಿ ಹೇಳ್ದಾಗ ಯಾಕೋ ಫುಲ್ ಖುಷಿ. ಯುಗಾದಿಗೆ ರಜೆ ಬೇಕು, ಅದಿಲ್ದೇ ಹೋದ್ರೆ ಅದ್ರ  ಮುಂದಿನ ವಾರ ಬರೋ ಜಾತ್ರೆ ವೇಳೆಗಾದ್ರೂ ರಜ ಬೇಕೇ ಬೇಕಂತ ಮೊದ್ಲೇ ಹೇಳಿಟ್ಟಿದ್ದೆ. ಯುಗಾದಿಗೆ ಎಲ್ಲಾ ಹೊರಟಿದ್ರಿಂದ ಆ ರಜಾ ಸಿಗಲಿಲ್ಲ. ಯುಗಾದಿ ಆದ್ಮೇಲೆ ಬಂದ ಭಾನುವಾರದಲ್ಲಿ ಸುಮ್ನೇ ಫೇಸ್ಬುಕ್ಕಲ್ಲಿ ಯಾರ್ಯಾರು ಜಾತ್ರೆಗೆ ಬರೀರಿ ಅಂತ ಕರ್ದಿದ್ದೆ. ನಾನು ಕರ್ಯೋ ಹೊತ್ತಿಗೇ ಹತ್ತು ಜನ ಹೋಗ್ಬಂದಾಗಿತ್ತು! ಎಲ್ಲಾ ಸದ್ಯ ಬೆಂಗಳೂರಲ್ಲಿರೋ ಸಾಗರಿಗರೇ. ಈ ಬೆಂಗ್ಳೂರಲ್ಲಿ ಮಾರಿಗೊಂದು ಸಿಗೋ ಮಾಲುಗಳ ಮಧ್ಯೆಯೋ ನಮ್ಮೂರ ಜಾತ್ರೆ ಗೆಳೆಯರಿಗೆ ಆಕರ್ಷಿಸಿದ ಖುಷಿಗಿಂತ ಅವರೆಲ್ಲಾ ಜಾತ್ರೆಯಲ್ಲಿ ಸುತ್ತಿರೋವಾಗ ನಾನಿಲ್ಲಿ ಅವರ ಫೋಟೋ ನೋಡ್ತಾ ಕೂತಿರೋದು ಒಂತರಾ ಪಿಚ್ಚೆನಿಸಿತು. ಏನೇ ಆಗ್ಲಿ ಜಾತ್ರೆಗೆ ಹೊರಡ್ಲೇಬೇಕು ಅಂತ ಮನ್ಸು ಮಾಡೋ ಹೊತ್ತಿಗೆ ಗೆಳೆಯರು "ದೇವರ ದೇಶ" ಕೇರಳಕ್ಕೆ ಹೋಗೋ ಪ್ಲಾನ್ ಹಾಕಿದ್ರು. ಬಂದ್ರೆ ಎಲ್ಲಾ ಒಟ್ಟೊಟ್ಟಿಗೆ ಬರ್ಬೇಕಾ ? 🙁  ಜಾತ್ರೆ ಪ್ರತೀ ವರ್ಷ ಬರುತ್ತೆ ಅಂದ್ರೂ ಯಾಕೋ ಕೇರಳದ ಬೋಟುಗಳಿಗಿಂತ ನಮ್ಮೂರ ಬೋಟಿ ಪ್ಯಾಕೆಟ್ಟಿನ  , ಮಂಡಕ್ಕಿಯ ನೆನಪುಗಳು , ಭಯಾನಕ ಫಿಲ್ಮ್ ನೋಡಿದ್ರೂ ನಮ್ಮೂರ ಜಾತ್ರೆಯ ಬಾವಿಯೊಳಗಿನ ಮೋಟಾರ್ ಬೈಕ್ ಮೈನವಿರೇಳಿಸೋ ಕ್ಷಣಗಳು , ಬ್ರಹ್ಮಾಂಡ ಜ್ಯೋತಿಷಿಗಳನ್ನು ಬೆಳಗಾದ್ರೆ ನೋಡ್ತಿದ್ರೂ ಹೆಂಡ್ತೀನ ಜಾಸ್ತಿ ಯಾರ್ ಪ್ರೀತಿಸ್ತಾರೆ ಅಂತ ಭವಿಷ್ಯ ನುಡಿಯೋ ಕತ್ತೆ  ಪನ್ನಾಲಾಲ್, ಜಸ್ಟ್ @ ೨೫ ಅನ್ನೋ ಕೆಎಫ್ಸಿ, ಮೆಕ್ಡಿಗಳ ಬಗ್ರರು , ಪಿಜ್ಜಾಗಳಿಗೆ ವಾಕರಿಸಿ ಹತ್ರೂಪಾಯಿಗೆ ಮೂರು ಪಾಪ್ಕಾರ್ನಿಗೆ ನೀರೂರಿಸೋ ನಾಲಿಗೆ, ಮೊದಲು ಐಸ್ ಕ್ರೀಮು ನಂತರ ಕ್ರಿಕೆಟ್ಟಾಡೋ ಬಾಲಾಗುತ್ತಿದ್ದ ಬಾಲೈಸು  .. ಹೀಗೆ ಹತ್ತು ಹಲವು ನೆನಪುಗಳು ಎಲ್ಲಲಿತೀಯೋ ಅಲೆಮಾರಿ, ಊರಿಗ್ಬಾರೋ ಸೊಂಬೇರಿ ಅಂದಗಾಯ್ತು.!

ಜಾತ್ರೆಗೆ ಹೋದಾಗ ಸಿಕ್ಕಿದ್ದು ಮಹಾಗಣಪತಿಯ ರಥ. ಮೂರ್ತಿಯನ್ನಿಟ್ಟಿರದಿದ್ದರೂ ನೋಡಿದರೆ ಕೈ ಮುಗಿಯಬೇಕೆನ್ನೋ ಭಾವ.

ರಥಕ್ಕೂ ಬಾಳೆಹಣ್ಣಿಗೂ ಅವಿನಾಭಾವ ಸಂಬಂಧ. ಮೊದಲ ದಿನದ ರಥೋತ್ಸವದ ವೇಳೆ ಎಲ್ಲಾ ದೇವರಿಗೆ ಅಂತ ಬಾಳೆಹಣ್ಣು ಎಸಿಯೋರೇ. ಗುರಿ ಮುಟ್ಟದ ಆ ಬಾಳೆಹಣ್ಣುಗಳು ಎದುರಿಗಿದ್ದವರ ಮುಖ, ತಲೆಗೆ ಹೊಡೆಯೋದು ಕಾಮನ್ ಅನುಭವ 🙂 ಈ ಬಾಳೆಹಣ್ಣಲ್ಲಿ ಹೊಡೆಸ್ಕೊಂಡು, ಮುಖ ಮೂತಿ ಊದಿಸ್ಕೊಂಡ್ರೆ ಹೆಂಗಾಯ್ತು ಅಂದ್ರೆ ಏನನ್ನೋದು ! ಅದ್ಕೆ  ಅಂತ ಮಟ ಮಟ ಮಧ್ಯಾಹ್ನ, ಇಲ್ಲಾ ಸಂಜೆ ಹೊತ್ತಿಗೆ ಜಾತ್ರೆಗೆ ಹೋಗ್ಬರೋರೂ ಉಂಟು 🙂 ಮತ್ತೆ, ಜಾತ್ರೆ ಅಂದ್ರೆ ರಾತ್ರೆ ಅನ್ನೋದೂ ಇಲ್ಲೊಂತರ ಕಾಮನ್ನು. ಮೊದಲ್ನೇ ದಿನ ಹಣ್ಣುಕಾಯಿ ಮಾಡಿಸೋಣ ಅಂತ ಬೆಳಗ್ಗೆ ಬರೋ ತಾಯಂದಿರನ್ನು ಬಿಟ್ರೆ ಬೇರೆ ದಿನ ಜಾತ್ರೆ ಪೇಟೆಯೆಲ್ಲಾ ಬಣಬಣ. ಹನ್ನೊಂದಾದರೂ ಹೊದ್ದು ಮಲಗಿರೋ ಅಂಗಡಿಗಳು ಮಧ್ಯಾಹ್ನವಾಗ್ತಿದ್ದಂಗೆ ಅರಳೋಕೆ ಶುರು ಆಗತ್ತೆ.. ಸಂಜೆ ಸೂರ್ಯ ಮುಳುಗೋ ಹೊತ್ತಿಗೆ ಆಫೀಸು ಮುಗಿಸಿ ಬರೋ ಜನರು, ಕಾಲೇಜ್ ಕ್ಲಾಸ್ಗಳ ಮುಗಿಸಿದ ಯುವ ಪಡೆ, ಬಿಸ್ಲಲ್ಲಿ ಲಿಫ್ ಸ್ಟಿಕ್ ಹಾಳಾಗೋದನ್ನ ತಪ್ಪಿಸೋಕೆ ಅಂತ ಸಂಜೆ ಇಷ್ಟ ಪಡೋ ನಾರೀಮಣಿಯರು.. ಹಳ್ಳಿ ಸೀರೆ, ಟೈಟ್ ಜೀನ್ಸುಗಳ ಮಧ್ಯೆ ತಾವೇನು ಕಮ್ಮಿಯಿಲ್ಲದಂತೆ ಸುತ್ತೋ ಅತ್ತರ್ಗಳ ಘಮ..ಹೀಗೆ ಒಬ್ಬ ಸೂರ್ಯ ಮುಳುಗೋ ಹೊತ್ತಿಗೆ ಒಂದಡಿ ಜಾತ್ರೆ ಬೀದಿಯನ್ನೂ ಬಿಡದಂತೆ ತುಂಬೋ  ನೂರಾರು ದೀಪಕರು. ಅವರಿಗೆ ಕೈ ಕೊಡೋ ಕರೆಂಟ್ ಮಧ್ಯೆಯೋ ಮನಸೆಳೆಯೋ ವಿದ್ಯುದ್ದೀಪಗಳ ಸಾಥ್ ..

ನಮ್ಮೂರ ಜಾತ್ರೆ ಅಂದರೆ ತೇರ ಎದುರಿಗೆ ಒಂದು ಬಾಂಬೆ ಮಿಟಾಯಿಯ ಅಂಗಡಿ, ಅದರ ಎಡಗಡೆ ಮಿಟಾಯಿ, ಬತ್ತಾಸುಗಳ ಅಂಗಡಿ, ಬಲಗಡೆ ಬಳೆ ಅಂಗಡಿ, ಸ್ವಲ್ಪ ಪಕ್ಕದಲ್ಲಿ ಸಾಂಸ್ಕೃತಿಕ ವೇದಿಕೆ, ಅಲ್ಲಲ್ಲಿ ಕೊಳಲು, ಪೀಪಿ, ಕನ್ನಡಕ, ಉಂಗುರ, ಕೀ ಚೈನು, ಬಟ್ಟೆ, ಪಾತ್ರೆ ಪಗಡಿ, ಕೀ ಕೊಡೋ ಆಟಿಕೆಗಳ ಅಂಗಡಿಗಳು ಅಂತ  ಫಿಕ್ಸು. ಮೊದಲ ಐದು ದಿನ ದಿನಾ ಒಂತರಾ ಸಾಂಸ್ಕೃತಿಕ ಕಾರ್ಯಕ್ರಮ.ಯಕ್ಷಗಾನ, ವ್ಯಾರ್ಘನತ್ರನ, ರಸಮಂಜರಿ, ಮಿಮಿಕ್ರಿ..ಹೀಗೆ ಅನೇಕ ಹಳೆ-ಹೊಸ ತಲೆ,ಕಲೆಗಳ ಸಂಗಮ ಇಲ್ಲಿ. ಬಂದದ್ದು ಲೇಟಾದರೂ   ಗುರುವಾರ ಜಾತ್ರೆಯ ಐದನೇ ದಿನವಾದ್ದರಿಂದ ಕಾರ್ಯಕ್ರಮ ಸವಿಯೋ ಯೋಗ ನನಗೆ. ಗತಿಸಿದ ಗಾನ ಕೋಗಿಲೆ ಪಿ.ಬಿ.ಶ್ರೀನಿವಾಸ್ ಅವರಿಗೆ ಒಂದು ನಿಮಿಷದ ಮೌನದ ನಂತರ ರಸಮಂಜರಿಯ ಆರಂಭ..ವಿಶ್ವವಿಖ್ಯಾತ ಗಾನಕೋಗಿಲೆಗೆ ನನ್ನೂರಲ್ಲೂ ಸಿಕ್ಕ ಗೌರವ ಸ್ವಲ್ಪ ಹೊತ್ತು ಎದೆಯುಬ್ಬಿಸುವಂತೆ ಮಾಡಿದ್ದು ಸುಳ್ಳಲ್ಲ.

ಕಾಲ ಚಕ್ರ ತಿರುಗುತ್ತಿರೋತ್ತೆ.. ಎಲ್ಲಾ ಬದಲಾಗಬೇಕು ಅಂತಾರೆ ಹಿರಿಯರು.ಅದರಲ್ಲಿ ಕೆಲವು ನಮಗೆ ಇಷ್ಟ ಆದ್ರೆ ಕೆಲವು ಆಶ್ಚರ್ಯ ಮೂಡ್ಸುತ್ತೆ. ಅದೇ ತರ ಈ ಸಲ ಆಶ್ಚರ್ಯ ಮೂಡ್ಸಿದ್ದು ಜಾತ್ರೇಲಿ ಕಂಡ ವಿಗ್, ಚೌಲಿ ಅಂಗಡಿ ಮತ್ತು ಎಲ್ಲೆಲ್ಲೂ ಕಾಣ್ತಿದ್ದ ಜೋಳದಂಗಡಿಗಳು. ಹಿಂದಿನ ಜಾತ್ರೇಲಿ ಒಂದೋ ಎರಡೋ ಇದ್ದ ಜೋಳದಂಗಡಿಗಳು ಈ ಸಲ ಎಲ್ಲೆಲ್ಲೂ. ಹಿಂದಿನ ಸಲ ಹಪ್ಪಳ, ಬೋಂಡಾ, ಮಂಡಕ್ಕಿ ಸಿಕ್ತಿದ್ದ ಕಡೆಯೆಲ್ಲಾ ಈ ಬಾರಿ ಜೋಳ ! ಎರಡೂ ಕೈ ದಾಟಿ ಆಚೆ ಹೋಗ್ತಿದ್ದಂತಹ ಹಪ್ಪಳಗಳು, ಬಾಂಬೆ ಮಿಟಾಯಿ ! ಅದೇ ಕಣ್ರಿ ಬೆಂಗಳೂರಿಗರ ಬಾಯಲ್ಲಿನ ಕಾಟನ್ ಕ್ಯಾಂಡಿ(!)ಯ ಜಾಗಕ್ಕೆ ಈ ಬಾರಿ ಜೋಳ ಬಂದಿದ್ದು ಬಿಟ್ರೆ ಬೇರೇನೂ ಬದಲಾವಣೆ ಕಾಣ್ತಿರಲಿಲ್ಲ. ಸಾಮಾನ್ ರೇಟೆಲ್ಲಾ ಜಾಸ್ತಿ ಕಣ್ರಿ, ವ್ಯಾಪಾರನೇ ಇಲ್ಲ ಅಂತಿದ್ರೂ ಬೆಂಡು ಬತ್ತಾಸಿನವ್ರಿಗೆ  ಜಾತ್ರೇಲಿ ಲಾಸೆಂತೂ ಇದ್ದಂಗೆ ಅನಿಸ್ತಿರ್ಲಿಲ್ಲ. ಈಗಿನ ಜಮಾನಕ್ಕೂ ಲೈಕಾಗೋವಂತ ಹಲ ತರ ಖಾರ ಮಾಡೋದು, ಸ್ವೀಟುಗಳ್ನ ಹಲತರ ಆಕಾರಗಳಲ್ಲಿ ನಿಲ್ಸೋದು, ಸೇಲಾಗದ ಬಿಲ್ಲೆ (ರೌಂಡ್) ಬತ್ತಾಸುಗಳ್ನ ಕಮ್ಮಿ ಮಾಡಿ ಹುಡುಗರು ಇಷ್ಟ ಪಡೋ ಕೋಲು ಬತ್ತಾಸು ಜಾಸ್ತಿ ಮಾಡೋದು. ..ಹೀಗೆ ಅವ್ರೂ ಮಾಡರ್ನು ಆಗಿದಾರೆ ಕಣ್ರಿ :-). ಕೋಲು ಬತ್ತಾಸುಗಳಲ್ಲಿ ಕೆಲವು ಸೀಮೆಸುಣ್ಣದಂತೆಯೇ ಇರುತ್ತವೆ. ಸಣ್ಣಕಿದ್ದಾಗ ನನ್ನಜ್ಜ ಕೋಲು ಬತ್ತಾಸು ಅಂತ ನನಗೆ ಕೊಟ್ಟು ಅದನ್ನು ತಿಂದ ಮೇಲೆ ಸೀಮೆಸುಣ್ಣ ತಿಂದ ಅಂತ ತಮಾಷೆ ಮಾಡಿದ್ದು..ಆಗಿನ ನನ್ನ ಮುಖ, ನಂತರ ಕೋಲು ಬತ್ತಾಸೇ ಎಂಬ ನನ್ನ ಸಮಜಾಯಿಷಿಯ ಶೈಲಿ.. ಹೆ ಹೆ ಹೆ, ಅದನ್ನೆಲ್ಲಾ ನೆನಸ್ಕಂಡ್ರೆ ಈಗ್ಲೂ ನಗು ಉಕ್ಕುತ್ತೆ 🙂

 

ಪ್ರತೀವರ್ಷವೂ ಹೊರ ಊರಿನ ಅಕ್ಕ-ತಂಗಿಯರನ್ನ ಜಾತ್ರೆಗೆ ಕರ್ಯೋದು ಪದ್ದತಿ. ಬಂದ ಅತ್ತಿಗೆಗೆ ಬಳೆ ಕೊಡ್ಸೋದು ಅಮ್ಮಂದಿರ ಕೆಲಸ. ತಮ್ಮ ಅತ್ತಿಗೆಯ ಮಕ್ಕಳು ಮದುವೆಯಾದರೂ, ತಮ್ಮ ಮಕ್ಕಳೇ ಮದುವೆಗೆ ಬಂದರೂ ಈ ಕರೆಯೋ ಸಂಪ್ರದಾಯ ಇನ್ನೂ ಇದೆ. ಇವ್ರು ಅರ್ಧ ಡಜನ್ ಬಳೆ ತಗೊಳ್ಳೋದಾದ್ರೂ ಜಾತ್ರೆಯಿಡೀ ಇರೋ ಬಳೆಯಂಗಡಿಗಳಲ್ಲಿ ಕಾಲ್ಕಾಲು ಗಂಟೆಯಾದ್ರೂ ಬಳೆ ಆರ್ಸೋದು ಗ್ಯಾರಂಟಿ 🙂 ಅದ್ಕೆ  ಮಣಿಗಾರ್ತಿಯರ ಅಂಗ್ಡಿ ನೋಡ್ತಾ ಕೂತ್ರೆ ಟೈಮೇ ಗೊತ್ತಾಗಲ್ಲ ಅಂತ ನಮ್ಮನೇಲಿ ಯಾವಾಗ್ಲೂ ತಮಾಷೆ. 

ಈಗ ಬಳೆಯನ್ನೇ ಹಾಕದ ಜೀನ್ಸುಗಳ ನಡುವೆಯೋ ಬಳೆ ಅಂಗಡಿಗಳು ತಮ್ಮ ಎಂದಿನ ಗಾಜಿನ ಬಳೆಗಳ ಜೊತೆಗೆ ಮೆಟಲ್, ಫೈಬರ್.. ಹೀಗೆ ಅನ್ ಬ್ರೇಕಬಲ್ ಬಳೆಗಳನ್ನು ಹೊತ್ತು ಮೆರೆಯುತ್ತಿವೆ. ಸಾಣಿ ಬಳೆ, ಚಕ್ಕಿ ಬಳೆ, ಪ್ಲೇನ್ ಬಳೆ ಅಂತ ಮೂರೇ ಗೊತ್ತಿದ್ದ ಹಳೆಯ ಜಮಾನದವರ ಬಾಯಲ್ಲಿ ಆ ಬಳೆಗಳ ಬಗ್ಗೆ ಕೇಳೋದೇ ಒಂದು ಚಂದ. ತಗೊಂಡು ಮನೆಗೆ ಹೋಗೋದ್ರೊಳಗೇ ಬಟ್ಟೆಗೆ ಬಣ್ಣ ಬಿಡೋ ಈ ಬಳೆಗಳ ನಡುವೆ, ಒಂದು ವರ್ಷದ ಜಾತ್ರೆಯಿಂದ ಮುಂದಿನ ವರ್ಷದ ಜಾತ್ರೆಯವರೆಗೂ ಏನೂ ಆಗದಿದ್ದ ಸಾಣಿ ಬಳೆಗಳನ್ನು ಹಿಂದಿನೋರು ಈಗ್ಲೂ ನೆನಿತಾರೆ..

ಪ್ರತೀ ವರ್ಷವೂ ಜಾತ್ರೆಲೀ ಕೆಲವೊಂದು ಬದಲಾವಣೆ ಕಂಡೇ ಕಾಣುತ್ತೆ, ಮುಂಚೆ ಎಲ್ಲೆಲ್ಲೂ ಕಾಣ್ತಿದ್ದ ಪುಗ್ಗೆ ಅಂಗಡಿಗಳು ಈ ಸಲ ಅಪರೂಪಕ್ಕೊಂಬತೆ  . ಮುಂಚೆ ಇಡೀ ಜಾತ್ರೇಲೊಬ್ಬ ಕಾಣ್ತಿದ್ದ ಸಾಬೂನ್ ಬುರುಗಲ್ಲಿ ಗುಳ್ಳೆ ಹಾರಿಸೋ ಗುಳ್ಳೆ ಮಾಮ ಈಗ ಜಾತ್ರೆಯಿಡೀ ಕಾಣ್ತಿದ್ದ. ಹಿಂದಿನ ಬಾರಿಗಿಂತ ಈ ಬಾರಿ ಹುಡುಗಿಯರು ಹೊಸ ಫ್ಯಾಷನ್ ಚೂಡಿಗಳಲ್ಲಿ ಮಿಂಚಿದಂತೆ ಕಲರ್ ಕಲರ್ರ್ ಆಗಿ ಕಂಡಿದ್ದು ಫಾರ್ಮಲ್, ಕ್ಯಾಸುಯಲ್.. ಸರ್ವವೂ ಪ್ಯಾಂಟುಮಯವಾದ ಬೆಂಗಳೂರಲ್ಲಿದ್ದ ಪ್ರದೂಷಣೆಯ ಪ್ರಭಾವವೋ, ಅತವಾ ಸಾಗರಕ್ಕೂ ಚಾಚಿದ ಫ್ಯಾಷನ್ ಅಲೆಯ ಪ್ರಭಾವವೋ ಗೊತ್ತಾಗಲಿಲ್ಲ ! 🙂

ಜಾತ್ರೆ ಅಂದ್ಮೇಲೆ ದೋಸ್ತುಗಳು , ನೆಂಟ್ರು ಸಿಗದಿದ್ರೆ ಹೇಗೆ ? ಒಂದನೇ ಕ್ಲಾಸಿನಿಂದ , ಹೈಸ್ಕೂಲವರೆಗೆ ಓದಿದ ಹಲವು ಶಾಲೆಗಳ, ಎಲ್ಲೆಲ್ಲಿಗೋ ವರ್ಗವಾದ ಶಿಕ್ಷಕರು ಸಿಗೋದು ಈ ವರ್ಷದ ಜಾತ್ರೆಯ ಸಂದರ್ಭದಲ್ಲೇ. ಜೀವನದಲ್ಲಿ ಏನೂ ಮಾಡಿಲ್ಲ ಅಂದ್ಕೊಂಡ್ರೂ, ಎಷ್ಟೇ ಸೋತಿದೀವಿ ಅಂದ್ಕೊಂಡ್ರೋ ಹೀಗೆ  ಗುರುವಿನ ಕಣ್ಣಲ್ಲಿ ನಮ್ಮನ್ನು ಕಂಡಾಗ ಕಾಣೋ ಹೊಳಪನ್ನು, ನಮ್ಮ ವರ್ತಮಾನವನ್ನು ತಿಳಿಯೋ ಹೊತ್ತಿಗೆ ಅರಳೋ ಅವರ ಮುಖವನ್ನು ನೋಡೋದ್ರಲ್ಲಿರೋ ಆನಂದವನ್ನು ಅನುಭವಿಸಿಯೇ ತಿಳಿಯಬೇಕು. ಎಷ್ಟು ಹೊಡೆದಿದ್ರೂ, ಕಿವಿ ಚಟ್ಟೆ ತಿರುಪಿದ್ರೂ ಆ ಗುರುಗಳೂ ಈಗ್ಲೂ ನಮ್ಮನ್ನು ನೊಡಿ ಖುಷಿ ಪಡ್ತಾರೆ. ಈಗ್ಲೂ ನೆನ್ಪಿಟ್ಕೊಂಡು ಮಾತಾಡ್ಸುತೀಯಲಪ್ಪಾ/ಮ್ಮಾ  ಚೆನ್ನಾಗಿರು, ಅಮ್ಮನ್ ಚೆನ್ನಾಗಿ ನೋಡ್ಕೋ ಅಂತ ಬಾಯ್ತುಂಬಾ ಹರಸ್ತಾರೆ. ಇನ್ನು ದೋಸ್ತುಗಳು, ನೆಂತರದ್ದೋ . ಅವ್ರುದ್ದೆಲ್ಲಾ ಓಂತರಾ ಅನಿರೀಕ್ಷಿತ ಭೇಟಿ. ಎಲ್ಲಿಂದಲೋ ತಲೆಗೆ ಒಂದೇಟು ಬಿತ್ತು, ಭುಜದ್ಮೇಲೆ, ಹೆಗಲ್ಮೇಲೆ ಕೈ ಬಿತ್ತು ಅಂದ್ರೆ , ಹ್ವಾಯ್,  ಹಾಯ್, ಲೋ, ಏ, ಮಾಣಿ, ಪಾಪು.. ಅಂತೆಲ್ಲಾದ್ರೂ ಧ್ವನಿ ಕೇಳ್ತು ಅಂತದ್ರೆ ಯಾರೋ ನೆಂಟ್ರೋ, ದೋಸ್ತುಗಳು ಸಿಕ್ರು ಅಂತನೇ ಲೆಕ್ಕ. ಬೆಂಗ್ಳೂರು, ಮೈಸೂರು, ಬಾಂಬೆ ಹೀಗೆ ಎಲ್ಲೆಲ್ಲೋ ಓದ್ತಿರೋರು, ಹೊಟ್ಟೆಪಾಡಿಗಾಗಿ ಹೊಗಿರೋರು ಎಲ್ಲಾ ಈ ಜಾತ್ರೆ ಟೈಮಲ್ಲಿ ಸಿಕ್ತಾರೆ. ಪ್ರತೀವರ್ಷನೂ ಎಲ್ಲಾ ಸಿಕ್ತಾರಂತಲ್ಲ. ಕೆಲವೊಂದ್ಸಲ ಕೆಲೋರು. ವರ್ಷಗಟ್ಲೆ ಮುಖ ನೋಡ್ದಿದ್ದ ಚಡ್ಡಿ ದೋಸ್ತುಗಳು, ಫೇಸ್ಬುಕ್ ಅಕೌಂಟೇ ಇಲ್ಲದ ಬಾಲ್ಯದ ಗೆಣೆಕಾರ್ರು ಜಾತ್ರೇಲಿ ಎಷ್ಟೋ ಸಲ ಸಿಕ್ಕಿದ್ದುಂಟು. ಮೊಬೈಲ್ ಕಳೆದೋಗಿ, ಮೆಸೇಜ್ ಪ್ಯಾಕ್ ಖಾಲಿ ಆಗಿ, ಏನೇನ್ರಲ್ಲೋ ಬಿಸಿಯಾಗಿ ಬಾಡಿ ಹೋದ ಸ್ನೇಹದ ನಂಟುಗಳು ಮತ್ತೆ ನಳನಳಿಸೋದು ಈ ಜಾತ್ರೇಲೆ.

ಶುಕ್ರವಾರ ರಾಮನವಮಿ . ಬೆಳಿಗ್ಗೆ ಇಕ್ಕೇರಿಯ ಅಘೋರೇಶ್ವರನಿಗೆ ನಮನ. ಗಣಪತಿ ದೇವಸ್ಥಾನದ ಪಕ್ಕದಲ್ಲೇ ಇರುವ ರಾಮದೇವಸ್ಥಾನದಲ್ಲಿ ಸಂಜೆಯ ಪಾನಕ, ಕೋಸಂಬರಿ. ಹನುಮನ ವೇಷಧಾರಿ, ತೊಟ್ಟಿಲಲ್ಲಿ ತೂಗುತ್ತಿದ್ದ ರಾಮನ ಮೂರ್ತಿ, ಆರತಿಗಳ ಬೆಳಕು. .ಸರಿಯಾಗಿ ಕೈಕೊಟ್ಟ ಕರೆಂಟು ! ದೀಪ, ಆರತಿಗಳ ಬಂಗಾರದ ಬೆಳಕಲ್ಲಿ ಕಂಗೊಳಿಸುತ್ತಿದ್ದ ರಾಮ, ಲಕ್ಷ್ಮಣ, ಸೀತೆ, ಹನುಮರ ವಿಗ್ರಹಗಳನ್ನು ನೋಡುವುದೇ ಒಂದು ಚಂದ. "ರಾಮ್ ಮೇರೆ ಘರ್ ಆಯೋ.." ಎಂದು ಹಾಡುತ್ತಿದ್ದ ಮಾರ್ವಾಡಿ ಹೆಂಗಳೆಯರು, ಸಂಸ್ಕೃತದ ಶ್ಲೋಕಗಳು, ಹೊರಗಡೆ ಕೇಳಿಸುತ್ತಿದ್ದ ಕನ್ನಡದ ಭಜನೆಗಳು ಅಲ್ಲೆಲ್ಲಾ ಭಕ್ತಿರಸವನ್ನು ಹರಿಸಿದ್ದವು. ಅಂದೇ ಹೊರಟಿದ್ದ ಇನ್ನೊಂದು ದೇವರ ಪಲ್ಲಕ್ಕಿ..ಬೆಂಗಳೂರ ಸುಡೋ ಸೆಖೆಯಿಂದ ಬೇಸತ್ತಿದ್ದವನಿಗೆ ಸಾಗರ ಜಾತ್ರೆ ಸಮಯದಲ್ಲಿ ೨ ದಿನದಿಂದ ತಂಪು ವಾತಾವರಣ, ಈ ರೀತಿ ದೇವದರ್ಶನಗಳ ಯೋಗ.. ದೇವರೇ ಇವತ್ತು ಭಕ್ತರಲ್ಲಿಗೆ ತೆರಳುವಷ್ಟು ಪ್ರಸನ್ನನಾದನಾ ಅಂತೊಮ್ಮೆ ಅನಿಸಿತು. 

ಜಾತ್ರೇಲಿ ಎಲ್ಲಾ ಕಡೆ, ಮಸಾಲೆ, ಪಾನಿಪೂರಿ, ಗೋಬಿ, ಮಂಡಕ್ಕಿ, ಜಿಲೇಬಿ, ಖಾರಾ ಸೇವ್ಗಳು ಕಾಮನ್ನು.ಈ ಸಲ ನೂಡಲ್ಸ್, ಪಾವ್ ಬಾಜಿಗಳದ್ದೊಂದು ಸೇರ್ಪಡೆ. ಕಲ್ಲಂಗಡಿಯ ಜೊತೆಗಿರುತ್ತಿದ್ದ ಬನಸ್ಪತ್ರೆ ಹಣ್ಣು ಈ ಬಾರಿ ಯಾಕೋ ನಾಪತ್ತೆ ! ತೇರಿಂದ ಸ್ವಲ್ಪ ಹೊರಗಡೆ ಬಂದ್ರೆ ಗಣಪತಿ ಕೆರೆ ಮೈದಾನದಲ್ಲಿ ಆಟಗಳ ದುನಿಯಾ. ಜಾಯಿಂಟ್ ವೀಲ್, ಟೊರಾಟೊರಾ, ಡೊನಾಲ್ಡ್ ಡಕ್ಕಿನ ಮಕ್ಕಳ ಸ್ಪಂಜ ಜಾರುಬಂಡಿಗಳು, ಮಕ್ಕಳ ಕಾರು, ಬೈಕುಗಳನ್ನು ಹೊತ್ತ ತಿರುಗೋ ಯಂತ್ರಗಳು, ಜಾದೂ , ಯಕ್ಷಿಣಿ, ಭಯದ ಲೋಕ, ಭವಿಷ್ಯ ಹೇಳೋ ಕತ್ತೆ ಪನ್ನಾಲಾಲ್, ಬಾವಿಯೊಳಗಿನ ಮೋಟಾರ್ ಸೈಕಲ್.. ಹೀಗೆ ಒಂದೇ ಎರಡೇ. ಆ ಫಿಲ್ಮ್ ಸಿಟಿ, ಈ ಪಾರ್ಕುಗಳಲ್ಲಿ ಎಷ್ಟೆಷ್ಟೋ ದೊಡ್ದದೊಡ್ಡದ ತೊಟ್ಟಿಲು ನೋಡಿದ್ದೇವೆ , ಈ ಜಾತ್ರೇಲೇನಿದೆ ಮಹಾ, ಒಂದು ಜಾಯಿಂಟ್ ವೀಲ್ ಬಂದ್ರೆ ಹೆಚ್ಚು ಅನ್ನೋ ಅನೇಕ ಗೆಳೆಯರ ನಡುವೆಯೂ ಇವು  ಯಾಕೋ ಆಶ್ಚರ್ಯ ಮೂಡಿಸುತ್ತವೆ. ನಾಲ್ಕೈದು ವರ್ಷದ ಹಿಂದೆ ಬಾವಿಯೊಳಗೆ ಮೋಟಾರ್ ಬೈಕಿಗೆ ೨೫ ರೂ ಕೊಟ್ಟ ನೆನಪು. ಆಗ ಸಾಗರದಿಂದ ಶಿವಮೊಗ್ಗೆಯ ಬಸ್ಚಾರ್ಜೂ ಸುಮಾರು ಅಷ್ಟೇ ಇತ್ತು. ಈಗ ಬಸ್ಚಾರ್ಜು ೫೭ ಮುಟ್ಟಿದರೂ ಮೋಟಾರ್ ಬೈಕಿನ ರೇಟು ೩೦ ಮುಟ್ಟಿದೆಯಷ್ಟೇ!  ಏರುತ್ತಿರೋ ರೇಟುಗಳಲ್ಲಿ, ಜೀವದ ಮೇಲೆ ಒತ್ತೆಯಿಟ್ಟು ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ನಡೆಯೋ ಇಂತ ಜಾತ್ರೆಗಳನ್ನೇ ನಂಬಿ  ನಡೆಯೋ ಅವರ ಜೀವನವೂ ಪಾಪ ಅನಿಸುತ್ತದೆ.  ಸಣ್ಣಕ್ಕಿದ್ದಾಗ ಟೊರೋ ಟೊರೋ ೪೫-೫೦ ಡಿಗ್ರಿ ಮಗಚುವಾಗ ಕಂಬಿಗೆ ಮುತ್ತಿಟ್ಟು ತುಟಿ ಒಡೆದುಕೊಂಡಿದ್ದು, ಜೀವವೇ ಹೋಯಿತೇನೋ ಅಂದ್ಕೊಂಡು ಕೂಗಿದ್ದು.. ಎಲ್ಲಾ ನೆನಪಾಗುತ್ತದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ೧೮೦ ಅಡಿ ತಲೆಕೆಳಗಾಗಿ ಕೂತರೂ, ದೊಡ್ಡ ದೊಡ್ಡ ತೊಟ್ಟಿಲಲ್ಲಿ ತಲೆಕೆಳಗಾದರೂ ಆಗದ ಭೀತಿ, ಕಾಲುನಡುಗುವಿಕೆ ಮೋಟಾರ್ ಬೈಕು, ಕಾರಿನವರು ಮಾಡೋ ಸರ್ಕಸ್ ನೊಡುವಾಗ, ಹಲಗೆಗಳು ಅಲುಗಾಡುವಾಗ ಆಗುತ್ತೆ !. ಕೈ ಬಿಟ್ಟು. ಮಲಗಿ, ಒಂದೇ ಪಾರ್ಶ್ವದಲ್ಲಿ ಕೂತು, ಪ್ರೇಕ್ಷಕರು ಕೊಡೋ ನೋಟಿಗಾಗಿ ಮೇಲೊರೆಗೂ ಬರೋ ಬೈಕಿಗರು , ಕಾರಿಗರು, ಕಾರಿನ ಕಿಟಕಿ ತೆಗೆದು, ಕಾಲಿಂದಲೇ ಡ್ರೈವ್ ಮಾಡೋ ಅವರ ನಿಪುಣತನ, ಕೈ ಕೈ ಹಿಡಿದು ಸಾಗೋ, ಎರಡು ಕಾರು, ಬೈಕುಗಳು!, ಕಾರಿಂದ ಹೊರಬಂದು ಮೇಲೆ ಹತ್ತೋ ಹುಡುಗಿಯರು.. ಇನ್ನೇನು ಡ್ಯಾಷ್ ಹೊಡೆದೇ ಬಿಟ್ಟಿತು ಅನ್ನುವಷ್ಟು ಹತ್ತಿರಕ್ಕೆ ಬಂದು ಮತ್ತೆ ದೂರ ಸಾಗೋ ಬೈಕಿಗರು.. ಹೀಗೆ ಪ್ರತೀ ಕ್ಷಣವೂ ಮೈ ಜುಂ. ಹೆಲ್ಮೆಟ್ಟಿಲ್ಲದ, ಬ್ರೇಕೂ ಇಲ್ಲದ ಬೈಕುಗಳಲ್ಲಿ ವೇಗದ್ದೇ ಕಂಟ್ರೋಲು, ಅದರದ್ದೇ ಬ್ಯಾಲೆನ್ಸು! ಪ್ರತೀ ಬಾರಿಯೂ ಟೆಸ್ಟಿಂಗಿಗೆ ಒಳಗಾಗೋ, ಎಲ್ಲಾ ಭದ್ರತೆಯ ಸೌಲಭಗಳಿರೋ ಪೇಟೆಯ ಎಲ್ಲಾ ವೀಲ್ಗಳಿಗಿಂತಾ ಇವು ಕೈಕಾಲ್ ನಡುಗಿಸೋದು ಇದೇ ಕಾರಣಕ್ಕೆ. ಎಲ್ಲರೂ ಇದನ್ನೇ ಪ್ರೋತ್ಸಾಹಿಸಬೇಕು, ಇನ್ನಷ್ಟು ಲಟೂರಿ ಬೈಕ್ ಕೊಟ್ಟು, ಇನ್ನಷ್ಟು ಜನರನ್ನ ಸಾವು ಬದುಕಿನ ಆಟಕ್ಕೆ ತಳ್ಳಬೇಕು ಅನ್ನೋದು ನನ್ನ ಉದ್ದೇಶ ಖಂಡಿತಾ ಅಲ್ಲ 🙁 ಯಮವೇಗದಲ್ಲಿ ಯದ್ವಾತದ್ವಾ ಗಾಡಿ ಹೊಡೆದು ಯಾರ್ಯಾರದೋ ಜೀವ ತೆಗೆಯೋ ಯುವಕರು, ವೇಗ ಅನ್ನೋದನ್ನು ಒಂದು ಆಟವಾಗಿ ತೆಗೆದುಕೊಳ್ಳುವವರು ಹೊಟ್ಟೆಗಾಗಿ ಬೇರೆ ಯಾವ ದಾರಿಯೂ ಕಾಣದೇ ಇದನ್ನಾಯ್ದು ಕೊಂಡ, ದುಡ್ಡಿಗಾಗಿ ಜೀವ ಪಣಕ್ಕಿಡುವ ಈ  ಸಾಹಸಿಗರನ್ನು ಒಮ್ಮೆಯಾದರೂ ನೊಡಬೇಕೆಂದು ಖಂಡಿತಾ ಅನಿಸುತ್ತದೆ 🙁

ಹಾಕಿದ ರಜಾ ಮುಗೀತಾ ಬಂತು. ವಾರದ ಅಂಕಣವನ್ನು ಸಾಹಸ ಮತ್ತು ಸಾವುಗಳ ಬಗ್ಗೆ ಬರೆಯೋಣ ಅಂತಂದ್ಕೊಡಿದ್ದೆ. ಆದರೆ ಅದರ ಬಗ್ಗೆ ಬೆಂಗಳೂರಲ್ಲೇ ಬರೆದಿಟ್ಟಿದ್ದ ಅರೆಬರೆ ಲೇಖನ ಪೆನ್ ಡ್ರೈವಲ್ಲಿ ಮಾಯವಾಗಿತ್ತು. ಸಾಹಸ ಸಾವಿನ ಬಗ್ಗೆಯೂ ಒಂದುದ್ದ ಕೊನೆ ಪ್ಯಾರಾ ಹೊಂದಿದ ಜಾತ್ರೆಯ ಬಗ್ಗೆಯೇ ಬರೆಯಬೇಕೆಂಬುದು ಆ ಗಣಪತಿಯ ಆಸೆಯೂ ಆಗಿತ್ತು ಅನ್ಸುತ್ತೆ 🙂  ನಮ್ಮೂರ ಜಾತ್ರೆಯ ಬಗೆಗಿನ ನನ್ನ ಹಳೆ-ಹೊಸ ನೆನಪುಗಳಲ್ಲಿ ಕೆಲವಾದರೂ ಸೆರೆಹಿಡಿಯೋ ಪ್ರಯತ್ನದಲ್ಲಿದ್ದೆ ಈ ಬಾರಿ. ಇದರಲ್ಲೇನಾದರೂ ಮಿಸ್ಸಾಗಿದ್ದರೆ ಓದಬಹುದಾದ ಸಾಗರದ ಗೆಳೆಯರು ಕ್ಷಮಿಸುತ್ತಾರೆಂಬ ಭರವಸೆಯಲ್ಲಿ..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
niharika
niharika
11 years ago

 
ಸಾಗರ ಜಾತ್ರೆಗೆ ನಾನೇ ಹೋಗಿಬಂದ ಹಾಗಾಯ್ತು. ಸೂಪರ್…
ಮತ್ತೆ ನಮ್ಗೆ ಬೆಂಡು-ಬತ್ತಾಸು ಎಲ್ಲಿ…? 🙂

prashasti
10 years ago

Thanks a lot Neeharika avre.. Mundina baari banni jatrege 🙂

Nagaraja LG
Nagaraja LG
10 years ago

Thumba Channagide sir

3
0
Would love your thoughts, please comment.x
()
x