ನಂಬಿ! ನಾನು ಅದೃಷ್ಟ ಅಲ್ಲ!!: ಅಖಿಲೇಶ್ ಚಿಪ್ಪಳಿ

akhilesh
ಲೋ ಗೂಬೆಯಂತವನೇ ಎಂದು ಬಯ್ಯುವುದುಂಟು. ಅದೇಕೆ ಹಾಗೆ ಕೇಳಿದರೆ ಗೊತ್ತಿಲ್ಲ. ಲೇ ಕತ್ತೆ ಎನ್ನುವುದಿಲ್ಲವೇ ಹಾಗೆಯೇ ಇದು. ಗೂಬೆಗಳು ಮನುಷ್ಯರಿಗೆ ಅದರಲ್ಲೂ ರೈತರಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ರಾತ್ರಿ ಹೊತ್ತು ಬೆಳೆಗಳಿಗೆ  ಕನ್ನ ಇಕ್ಕುವ ಇಲಿಗಳನ್ನು ತಿನ್ನುತ್ತದೆ. ಹಗಲುಹೊತ್ತಿನಲ್ಲಿ ವಿಶ್ರಮಿಸುವ ಇದಕ್ಕೆ ನೈಸರ್ಗಿಕ ಶತ್ರುಗಳು ಕಡಿಮೆ. ಆದರೂ ಅಳಿವಿನಂಚಿನಲ್ಲಿರುವ ಪಕ್ಷಿ. ಇದೇಕೆ ಹೀಗೆ ಕೇಳಿದರೆ ಅದಕ್ಕೆ ಕಾರಣ ಮತ್ತೆ ನಾವೇ ಮನುಷ್ಯತ್ವ ಕಳೆದುಕೊಂಡಿರುವವರು. 2016ರ ಕೊನೆಯ ವಾರದಲ್ಲಿ ಒಂದು ಸುದ್ಧಿಯಿತ್ತು. ಗೂಬೆ ಮಾರಾಟಗಾರರ ಬಂಧನ. ಅದೂ ಸಾಗರದ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ. ವಿವರ ತಿಳಿದುಕೊಳ್ಳೋಣವೆಂದು ಇಲಾಖೆಯೆಡೆ ಹೋದೆ. ಅಲ್ಲಿನ ಮಾಹಿತಿಗಳು ಅಚ್ಚರಿಗೊಳಿಸಿದವು.

2016 ಡಿಸೆಂಬರ್ ಕೊನೆಯ ವಾರ. ಎಲ್ಲಾ ವಾಟ್ಸಪ್ ಗ್ರೂಪ್‍ಗಳಲ್ಲಿ ಶುಭಾಶಯಗಳು ವಿನಿಮಯವಾಗುತ್ತಿದ್ದರೆ. ಗೂಬೆ ಕಳ್ಳರ ಗುಂಪಿನಲ್ಲಿ ಜೀವಂತ ಗೂಬೆಯ ವಿಡಿಯೋ ರವಾನೆಯಾಗುತ್ತಿತ್ತು. ವನ್ಯಜೀವಿ ಕಾನೂನು ಇಷ್ಟೊಂದು ಬಿಗಿಯಾಗಿದ್ದರೂ, ಕಳ್ಳರು ನಾನಾ ತಂತ್ರಗಳನ್ನು ಬಳಸಿ ತಮ್ಮ ವ್ಯವಹಾರವನ್ನು ಕುದುರಿಸಿಕೊಳ್ಳುತ್ತಾರೆ. ಈಗಂತೂ ಬಿಡಿ, ಮಾಹಿತಿ-ತಂತ್ರಜ್ಞಾನದ ಯುಗ. ಸೊರಬ ತಾಲ್ಲೂಕಿನ ಆನವಟ್ಟಿಯ ಭಾಗದ ಚಿಟ್ಟೂರು ಮಾರುತಿ, ಈತ ಅರೆಕಾಲಿಕ ದೈಹಿಕ ಶಿಕ್ಷಕ ಮತ್ತು ಕಾರೆಕೊಪ್ಪದ ನಾಗಪ್ಪ ಇವರೊಂದು ಅತಿದೊಡ್ಡ ವ್ಯವಹಾರಕ್ಕೆ ಇಟ್ಟುಕೊಂಡಿದ್ದರು. ಇವರು ಬಳಸುವ ತಾಂತ್ರಿಕತೆಯನ್ನು ಇಲ್ಲಿ ಪರಿಚಯ ಮಾಡಿಕೊಡಬೇಕು. ಗೂಬೆ ತಮ್ಮ ವಶದಲ್ಲಿದೆ ಎಂಬುದನ್ನು ಕೊಳ್ಳುವವರಿಗೆ ಅಥವಾ ಮಧ್ಯವರ್ತಿಗಳಿಗೆ ಮನವರಿಕೆ ಮಾಡಿಕೊಡಲು ವ್ಯಾಟ್ಸ್‍ಅಪ್ ಬಳಕೆಯಾಗುತ್ತದೆ. ಉದಾಹರಣೆಗೆ ಸೊರಬ ತಾಲ್ಲೂಕಿನಲ್ಲಿ ಗೂಬೆ ಮಾರಾಟಕ್ಕಿದೆ ಎಂದರೆ ಅದು ಇದೆ ಎಂದು ಖಚಿತಗೊಳಿಸಬೇಕಾಗುತ್ತದೆ. ಇದಕ್ಕೆ ಆಯಾ ದಿನಪತ್ರಿಕೆಯನ್ನು ಬಳಸಿಕೊಳ್ಳಲಾಗುತ್ತದೆ. ಗೂಬೆಯನ್ನು ದಿನಪತ್ರಿಕೆಯ ಮೇಲೆ ಇಟ್ಟು ಫೋಟೋ ತೆಗೆಯಲಾಗುತ್ತದೆ. ದಿನಪತ್ರಿಕೆಯ ಸ್ಥಳೀಯ ವರದಿಯ ಜೊತೆಗೆ ದಿನಾಂಕ ಹೇಗೂ ನಮೂದಾಗಿರುತ್ತದೆಯಲ್ಲ. ಹೀಗೆ ಗೂಬೆ ಲಭ್ಯವಿದೆ ಎಂಬುದನ್ನು ಕೊಳ್ಳುವವರಿಗೆ ತಿಳಿಸಲಾಗುತ್ತದೆ. ವ್ಯವಹಾರ ಕುದುರುವವರಗೆ  ನಿಖರವಾದ ಸ್ಥಳದ ಮಾಹಿತಿ ನೀಡುವುದಿಲ್ಲ. ಜೊತೆಗೆ ಗೂಬೆಯ ತೂಕ, ಎತ್ತರ ಇತ್ಯಾದಿಗಳು ಪರಿಗಣನೆಯಾಗುತ್ತವೆ. ದೊಡ್ಡ ಗೂಬೆಗೆ ಹೆಚ್ಚು ಬೆಲೆ. ತಾಲ್ಲೂಕು ಮಟ್ಟದಲ್ಲಿ ಗೂಬೆಯ ಬೆಲೆ 5 ಲಕ್ಷವಾದರೆ, ಜಿಲ್ಲಾ ಮಟ್ಟದಲ್ಲಿ ಹತ್ತು ಲಕ್ಷ. ಹೀಗೆ ಬೆಲೆ ಏರುತ್ತಾ ಹೋಗುತ್ತದೆ. ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವ ಹೊತ್ತಿಗೆ ಗೂಬೆಯ ಬೆಲೆ ಅರ್ಧ ಕೋಟಿ ದಾಟಿರುತ್ತದೆ. 

ಇಷ್ಟೆಲ್ಲಾ ಖರ್ಚು ಮಾಡಿದ ಮೇಲೆ ಗೂಬೆಯಿಂದ ಮನುಷ್ಯನಿಗೆ ಏನು ಲಾಭ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಇಲ್ಲೂ ಪ್ರಮುಖ ಪಾತ್ರವಹಿಸುವುದು ಮೂಢನಂಬಿಕೆ.  ನಿರ್ಧಿಷ್ಟ ದಿನದಂದು, ಗೂಬೆಗೆ ಲವಂಗವನ್ನು ಪೋಣಿಸಿದ ಹಾರ ಹಾಕಿ ಪೂಜಿಸಿದರೆ, ಆ ಪೂಜಾ ಕೊಠಡಿ ನೋಟಿನಿಂದ ತುಂಬಿ ಹೋಗುವುದಂತೆ? ಅಮಾನ್ಯವಾದ ನೋಟೋ ಅಥವಾ ಹೊಸ ನೋಟೋ ಗೊತ್ತಿಲ್ಲ. ಆದರೆ ಈ ಮೂಢನಂಬಿಕೆ ಎಷ್ಟು ಭದ್ರವಾಗಿ ಬೇರೂರಿದೆಯೆಂದರೆ, ಈ ಜಾಲದ ಎಲ್ಲಾ ಕೊಂಡಿಗಳ ಮೂಢರು ಇದನ್ನು ಬಲವಾಗಿ ನಂಬುತ್ತಾರೆ. ಹಾಗೆ ನಂಬಿಸುತ್ತಾರೆ!.  ಈ ದಂಧೆಯಲ್ಲಿ ಬಲಿಯಾಗುತ್ತಿರುವುದು ಗೂಬೆಯೊಂದೇ ಅಲ್ಲ, ಮಣ್ಣುಮುಕ್ಕ ಹಾವು, ಮುಳ್ಳುಹಂದಿ ಇತ್ಯಾದಿಗಳು ಇವೆ. ಕಾಡುಕೋಣದ ತಲೆ ಅಥವಾ ಜಿಂಕೆ ಕೊಂಬು ಅಥವಾ ಚರ್ಮ ಇತ್ಯಾದಿಗಳು ಪ್ರತಿಷ್ಟೆಗಾಗಿ ಬಳಕೆಯಾಗುತ್ತವೆ.

ಈ ತರಹದ ಮೂಢನಂಬಿಕೆಗಳು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಚಿಕ್ಕಮಗಳೂರಿನಲ್ಲಿ ಅಳಿವಿನಂಚಿನಲ್ಲಿರುವ ಉಡವೊಂದನ್ನು ಕೊಂದು ಕುಣಿದ ಫೋಟೋಗಳು ಪತ್ರಿಕೆಗಳಿಗೆ ಲಭ್ಯವಾಗಿದೆ. ಹೊಸವರ್ಷದ ಮತ್ತಿನಲ್ಲಿ ಹರಣವಾದ ಅದೆಷ್ಟೋ ಪ್ರಾಣಿಗಳ ಅಂಕಿ-ಅಂಶ ಎಲ್ಲೂ ಲಭ್ಯವಿಲ್ಲ. ಭಾರತದ ಅದರಲ್ಲೂ ಕರ್ನಾಟಕದ ಪರಿಸ್ಥಿತಿ ಇದಾದರೆ, ಅತ್ತ ಅಮೆರಿಕದಲ್ಲೂ ಭಿನ್ನ ಪರಿಸ್ಥಿತಿ ಇಲ್ಲ. ಅಲ್ಲೂ ವನ್ಯಜೀವಿಗಳಿಗೆ ಉಳಿಗಾಲವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಡೋನಾಲ್ಡ್ ಟ್ರಂಪ್ ಆಡಳಿತ ಮುಂದಿನ ನಾಲ್ಕು ವರ್ಷಗಳಲ್ಲಿ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರಬಹದು ಎಂಬುದನ್ನೂ ಊಹಿಸಲೂ ಸಾಧ್ಯವಿಲ್ಲ. ಖುದ್ಧು ಅಧ್ಯಕ್ಷರ ಮಕ್ಕಳಾದ ಜ್ಯೂನಿಯರ್ ಟ್ರಂಪ್ ಹಾಗೂ ಎರಿಕ್ ಬೇಟೆಯಾಡಿದ ಚಿತ್ರ ಇಲ್ಲಿದೆ. ಚಿರತೆಯನ್ನು ಕೊಂದು ಅಪ್ಪಿ ಹಿಡಿದುಕೊಂಡು ಮೆರೆಯುತ್ತಿರುವ ಚಿತ್ರವೊಂದಾದರೆ, ಆನೆಯನ್ನು ಕೊಂದು ಅದರ ಬಾಲವನ್ನು ತುಂಡು ಮಾಡಿ ಪ್ರದರ್ಶಿಸುತ್ತಿರುವ ಚಿತ್ರ ಇನ್ನೊಂದು. ಪ್ರಪಂಚದಲ್ಲಿ ಪ್ರತಿವರ್ಷ 35 ಸಾವಿರ ಆನೆಗಳನ್ನು ದಂತಕ್ಕಾಗಿ ಬೇಟೆಯಾಡಲಾಗುತ್ತಿದೆ ಎಂದು ಜಾಗತಿಕ ಸಮೀಕ್ಷೆ ಹೇಳುತ್ತದೆ. ಇದೇ ರೀತಿ ಮುಂದುವರೆದರೆ, ಮುಂದಿನ 20 ವರ್ಷಗಳಲ್ಲಿ ಆನೆಗಳು ನಾಮಾವಶೇಷವಾಗುತ್ತವೆ ಎಂದು ಎಚ್ಚರಿಕೆ ನೀಡಲಾಗಿದೆ. ಮೂಲತ: ಅತ್ಯಂತ ಶ್ರೀಮಂತ ಕುಟುಂಬದವರಾದ ಡೋನಾಲ್ಡ್ ಟ್ರಂಪ್ ತನ್ನ ಮಕ್ಕಳ ಕೃತ್ಯವನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಟ್ರೋಪಿ ಹಂಟಿಂಗ್ ಎಂದು ಕರೆಯಲಾಗುವ ಈ ವನ್ಯಜೀವಿ ಹರಣದ ಆಟಕ್ಕೆ ಅಲ್ಲಿನ ಯುವಜನತೆ ಮುಗಿಬಿದ್ದಲ್ಲಿ, ಪರಿಣಾಮ ಊಹಿಸಲು ಸಾಧ್ಯವಿಲ್ಲದಂತಾಗುತ್ತದೆ.

ಈಗ ಮತ್ತೆ ಗೂಬೆಯ ವಿಚಾರಕ್ಕೆ ಬರೋಣ. ಗೂಬೆಯ ಕಳ್ಳ ವ್ಯಾಪಾರದ ಸರಪಳಿಯಲ್ಲಿ 9 ಜನರನ್ನು ಅರಣ್ಯ ಇಲಾಖೆ ಹರಸಾಹಸ ಪಟ್ಟು ಬಂಧಿಸಿತ್ತು. ನ್ಯಾಯಾಲಯಕ್ಕೆ ಮನವಿ ಮಾಡಿದ ಹೊರತಾಗಿಯೂ ಆ 9 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿತು. ಸರಪಣಿಯ ಮುಂದಿನ ಹಂತವನ್ನು ಕಂಡು ಹಿಡಿಯಲು ಅರಣ್ಯ ಇಲಾಖೆಗೆ ಆಗಲಿಲ್ಲ. ಇದಕ್ಕೆ ಕಾರಣ ಆ ದೊಡ್ಡ ಆರೋಪಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸಿದ್ದು ಹಾಗೂ ಮೊಬೈಲ್ ಟವರ್ ವಿವರಗಳನ್ನು ಆದಷ್ಟು ಬೇಗ ಅರಣ್ಯ ಇಲಾಖೆಗೆ ಪಡೆಯಲು ಸಾಧ್ಯವಾಗದೆ ಹೋಗಿದ್ದು. ಮತ್ತೆ ಯಥಾಪ್ರಕಾರ ಸಾಕ್ಷಿಗಳ ಕೊರತೆಯನ್ನು ಇಲಾಖೆ ಎದುರಿಸಬೇಕಾಗುತ್ತದೆ. ಇನ್ನಾರು ವರ್ಷಗಳಲ್ಲಿ ಮೊಕದ್ದಮೆಯನ್ನು ನ್ಯಾಯಾಲಯ ಖುಲಾಸೆ ಮಾಡಬಹುದು. ಇಷ್ಟರಲ್ಲೇ, ರಾಜಕೀಯ ಒತ್ತಡಗಳೂ ಇಲಾಖೆಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿವೆ ಎಂಬ ಮಾಹಿತಿ ಲಭ್ಯವಿದೆ. ವಲಯ ಅರಣ್ಯಾಧಿಕಾರಿಗಳಿಗಿಂತ ಕೆಳಹಂತದ ಅರಣ್ಯ ಇಲಾಖೆಯ ನೌಕರರು ಗೂಬೆಯ ವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ ಎಂಬ ಊಹಾಪೋಹಗಳು ಆನವಟ್ಟಿ ಭಾಗದಲ್ಲಿ ಹರಿದಾಡುತ್ತಿದೆ.

ಇಲಾಖೆ ನಿಯೋಜಿಸಿದ ಕೆಲಸವನ್ನು ಮಾಡದ ಹಲವು ಫಾರೆಸ್ಟರ್‍ಗಳನ್ನು ಸಾಗರದಲ್ಲೇ ನೋಡಬಹುದು. ಬರೀ ಹದಿನೈದು-ಇಪ್ಪತು ಸಾವಿರ ಸಂಬಳ ಎಣಿಸುವ ಈ ನೌಕರರು ಕೋಟಿ ಹತ್ತಿರದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ವಾತಾನುಕೂಲ ವ್ಯವಸ್ಥೆ ಇರುವ ಐಷರಾಮಿ ಕಾರುಗಳನ್ನು ಹೊಂದಿದ್ದಾರೆ ಅಂದರೆ ಇವರಿಗೆ ಇಲಾಖೆಯ ಸಂಬಳದ ಹೊರತಾಗಿ ಮತ್ತೇನೋ ಆದಾಯವಿದೆ ಎಂದೇ ಆಗುತ್ತದೆ. ಹಾಗಾದರೆ ಈ ಆದಾಯ ಎಲ್ಲಿಂದ ಬರುತ್ತದೆ ಎಂಬುದನ್ನು ಮೇಲ್ಮಟ್ಟದ ಅಧಿಕಾರಿಗಳು ಗಮನಿಸಬೇಕಾದ ಅಗತ್ಯವಿದೆ. 

ಇದು ಅರಣ್ಯ ಇಲಾಖೆಗೆ ಸಂಬಂಧಿಸಿದ್ದರಿಂದ ಇಲ್ಲಿ ದಾಖಲಿಸಬೇಕಾಗಿದೆ. ಈ ಘಟನೆ ನಡೆದದ್ದೂ ಡಿಸೆಂಬರ್‍ನಲ್ಲೇ. ಆಗಿದ್ದಿಷ್ಟು. ಶಿರಸಿ ವಲಯ ವ್ಯಾಪ್ತಿಯಲ್ಲಿ ಒಂದಷ್ಟು ಸಾಗುವಾನಿ ಹಾಗೂ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿತ್ತು. ಈ ಘಟನೆಯ ಸಮಗ್ರ ತನಿಖೆಗೆ ಒತ್ತಾಯಿಸಿ ಶ್ರೀ ಶಿವಾನಂದ ಕಳವೆಯವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಇಲಾಖೆಯ ತಪ್ಪು ಮುಚ್ಚಿಕೊಳ್ಳಲು ತೇಪೆ ಸಾರಿಸಿದ ಅಲ್ಲಿನ ಉದ್ಧಟ ಉಪಅರಣ್ಯಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ ಇವರು ಶಿವಾನಂದ ಕಳವೆಯವರು ಸುಳ್ಳು ಹೇಳುತ್ತಿದ್ದಾರೆ. 23 ಸಾಗುವಾನಿ ಮರಗಳನ್ನು ಕಡಿದೇ ಇಲ್ಲ. ಅಕೇಶಿಯಾದ ನಾಟದಲ್ಲೂ ಅಪರ-ತಪರಾ ಆಗಿಲ್ಲವೆಂದು ಹೇಳಿಬಿಟ್ಟರು. ಮುಂದುವರೆದು, ಕಳವೆಯವರು ಬಹಿರಂಗವಾಗಿ ಕ್ಷಮೆ ಯಾಚಿಸದಿದ್ದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಸಿದರು. ಈ ತರಹದ ಬೆದರಿಕೆಗಳಿಗೆ ಬಗ್ಗಬೇಕಾದ ಅವಶ್ಯಕತೆ ಕಳವೆಯವರಿಗೆ ಇರಲಿಲ್ಲ. ಈ ವಿಷಯವನ್ನು ಕಳವೆ ಸಾಮಾಜಿಕ ತಾಣಗಳಲ್ಲೂ ಹರಿಯ ಬಿಟ್ಟರು. ಕಳವೆಯ ಬೆಂಬಲಕ್ಕೆ ಇಡೀ ರಾಜ್ಯದ ಪರಿಸರ ಪ್ರೇಮಿಗಳು ಬೆನ್ನೆಲುಬಾಗಿ ನಿಂತರು. ಖುದ್ಧು ಕಳವೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಅದೇನು ಮಾಡುತ್ತಿರೋ ಮಾಡಿಕೊಳ್ಳಿ ಎಂದು ಬಿಟ್ಟರು.  ಶಿರಸಿಯಲ್ಲೆ ತುರ್ತಾಗಿ ಸಭೆ ಸೇರಿದರು. ಪಾಂಡುರಂಗ ಹೆಗಡೆ, ಅನಂತ ಹೆಗಡೆ ಮುಂತಾದವರು ಘಟನೆಯನ್ನು ಖಂಡಿಸಿದರು. ಇದೀಗ ಬಂದ ಸುದ್ಧಿಯೆಂದರೆ, ಪ್ರತಿವರ್ಷ ಪ್ಲಾಂಟೇಷನ್ ಹೆಸರಿನಲ್ಲಿ ದುಡ್ಡು ಹೊಡೆದು ಕೋಟಿಗಟ್ಟಲೆ ಗಳಿಸುತ್ತಿದ್ದ ಕೆ.ಬಿ.ಮಂಜುನಾಥನ ಮೇಲೆ ಹಲವು ಆಪಾದನೆಗಳ ಸುರಿಮಳೆಯಾಗುತ್ತಿದೆ. ಪ್ಲಾಂಟೇಷನ್ ಹೊರಗಡೆ ಇರುವ ಬಿತ್ತಿ ಫಲಕದಲ್ಲಿ 25 ಸಾವಿರ ಗಿಡಗಳನ್ನು ನೆಡಲಾಗಿದೆ ಎಂಬ ಮಾಹಿತಿ ಇದೆ. ಒಳಗೆ ಹೋಗಿ ನೋಡಿದರೆ ಸಾವಿರ ಗಿಡಗಳೂ ಇಲ್ಲ. ಹೀಗೆ ಎಲ್ಲಾ ಪ್ಲಾಂಟೇಶನ್ ಯೋಜನೆಗಳನ್ನು ನುಂಗಿದ ಬಲವಾದ ಆರೋಪಕ್ಕೆ ಸದರಿ ಅಧಿಕಾರಿ ತತ್ತರಿಸುತ್ತಿದ್ದಾನೆ. ಬಹುಷ: ಸಧ್ಯದಲ್ಲೇ ಆತ ಶಿರಸಿ ಬಿಟ್ಟು ಹೋದರೆ ಆಶ್ಚರ್ಯವಿಲ್ಲ. ವನ-ಜನ ಪರವಲ್ಲದ ಅಧಿಕಾರಿ ಇದ್ದರೆಷ್ಟು, ಬಿಟ್ಟರೆಷ್ಟು!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Anantha Ramesh
7 years ago

ಗೂಬೆಗಳಿಗೂ ಕಂಟಕವಿದೆಯೆನ್ನುವುದು ಬಹಳ ನೋವಿನ ವಿಷಯ.  ಇಂಥ ಭಯಾನಕ ನಿಗೂಢತೆಗಳು ಮನುಷ್ಯರಲ್ಲೆಷ್ಟಿವಿಯೋ.. ಚಿಪ್ಪಳಿಯವರ ಉತ್ತಮ ಲೇಖನಕ್ಕೆ ಧನ್ಯವಾದ.

1
0
Would love your thoughts, please comment.x
()
x