ನಂಬಿಕೆ, ಮೂಢನಂಬಿಕೆ: ಅಖಿಲೇಶ್ ಚಿಪ್ಪಳಿ ಅಂಕಣ


ಹೊಸದಾಗಿ ಮದುವೆಯಾಗಿದ್ದ ದಂಪತಿಗಳು ಸಿನಿಮಾ ನೋಡಲು ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಹೆಂಡತಿಗೆ ವಿಪರೀತ ತಲೆನೋವು ಶುರುವಾಯಿತು. ಗಂಡನಿಗೆ ಏನು ಮಾಡುವುದು ತಲೆ ಓಡಲಿಲ್ಲ. ಅಷ್ಟರಲ್ಲಿ ಪರಿಚಿತ ಡಾಕ್ಟರು ಅದೇ ಸಿನೆಮಾ ನೋಡಲು ಬಂದ್ದಿದ್ದರು. ಗಂಡ ಹೋಗಿ ಸಂಕೋಚದಿಂದ ಡಾಕ್ಟರಲ್ಲಿ ಅವಲತ್ತುಕೊಂಡ. ಡಾಕ್ಟರ್ ಬುದ್ಧಿವಂತನಿದ್ದ, ಥಿಯೇಟರ್‌ನ ಒಳಗಡೆ ಕತ್ತಲಿತ್ತು, ಗಂಡನಿಗೆ ಗೊತ್ತಾಗದ ಹಾಗೆ ತನ್ನದೆ ಕೋಟಿನ ಒಂದು ಗುಂಡಿಯನ್ನು ಕಿತ್ತು, ಈ ಮಾತ್ರೆಯನ್ನು ಬಾಯಲಿಟ್ಟುಕೊಳ್ಳಲು ಸಲಹೆ ಮಾಡಿದರು. ಹತ್ತು ನಿಮಿಷದಲ್ಲಿ ತಲೆನೋವು ಮಾಯ. ಗಂಡ-ಹೆಂಡತಿ ಸಿನಿಮಾವನ್ನು ಎಂಜಾಯ್ ಮಾಡಿದರು ಎಂಬಲ್ಲಿಗೆ ಕತೆ ಮುಗಿಯುತ್ತದೆ. ಡಾಕ್ಟರ್ ತನಗೆ ಮಾತ್ರೆ ನೀಡಿದ್ದಾರೆ ಹಾಗಾಗಿ ತಲೆನೋವು ಹೋಯಿತು ಎಂಬುದು ಅವಳ ನಂಬಿಕೆ. ಬರೀ ನಂಬಿಕೆಯೇ ತಲೆನೋವನ್ನು ಹೋಗಲಾಡಿಸಿತು. ನಂಬಿಕೆ-ಮೂಢನಂಬಿಕೆಯ ಮಧ್ಯದ ಗೆರೆ ಅತ್ಯಂತ ತೆಳುವಾದದು. ಹಾಗೆಯೇ ಇದು ಜನರಿಂದ-ಜನರಿಗೆ, ಪ್ರದೇಶದಿಂದ-ಪ್ರದೇಶಕ್ಕೆ, ಕಾಲದಿಂದ-ಕಾಲಕ್ಕೆ ಬದಲಾಗುವಂತಹದು. ಒಂದು ಪ್ರದೇಶದ ಮೂಢನಂಬಿಕೆ ಇನ್ನೊಂದು ಪ್ರದೇಶದ ನಂಬಿಕೆಯಾಗಿರಬಹುದು. ಅಥವಾ ಒಂದು ಕಾಲದ ನಂಬಿಕೆ ಈ ಕಾಲದ ಮೂಢನಂಬಿಕೆಯಾಗಿ ಬದಲಾಗಿರಬಹುದು. 

ಈಗ ಕರ್ನಾಟಕದಲ್ಲಿ ಸರ್ಕಾರ-ಬುದ್ಧಿಜೀವಿ ವರ್ಸಸ್ ಧಾರ್ಮಿಕ ಮನೋಭಾವ ಹೊಂದಿದ ಬಲಪಕ್ಷ, ಜಾತ್ಯಾತೀತ ಬಣಗಳ ನಡುವೆ ಮೂಢನಂಬಿಕೆ, ಜ್ಯೋತಿಷ್ಯ ಇತ್ಯಾದಿಗಳ ವಿಚಾರದಲ್ಲಿ ತಗಾದೆ ಶುರುವಾಗಿದೆ. ಮೂಢನಂಬಿಕೆ ನಿವಾರಣೆ ಕರಡು ಮಸೂದೆ ತಯಾರಾಗಿ ಸದನದ ಒಪ್ಪಿಗೆಗೆ ಹೋಗುವ ಪೂರ್ವದಲ್ಲೇ ಬಿದ್ದು ಹೋಗುವ ಲಕ್ಷಣಗಳು ತೋರುತ್ತಿವೆ. ಸೊರಬ ತಾಲ್ಲೂಕಿನ ಚಂದ್ರಗುತ್ತಿಯ ಬೆತ್ತಲೆ ಸೇವೆಯನ್ನು ಅನಾಗರೀಕ ಎಂದು ಪರಿಗಣಿಸಿ, ಮಹಿಳಾ ಹಕ್ಕು ರಕ್ಷಣೆಯಡಿಯಲ್ಲಿ ನಿಷೇಧಿಸಿ ಸರ್ಕಾರ ಆಜ್ಞೆ ಹೊರಡಿಸಿ ಹಲವು ವರ್ಷಗಳು ಸಂದವು. ಅಲ್ಲಿ ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ಹರಕೆಯನ್ನು ತೀರಿಸಲು ಮಹಿಳೆಯರು ಬೆತ್ತಲೆ ಸೇವೆ ಮಾಡುತ್ತಿದ್ದರು (ನನಗೆ ನೆನಪಿರುವ ಹಾಗೆ, ಮೈಯನ್ನು ಲಕ್ಕಿಸೊಪ್ಪಿನಿಂದ ಮುಚ್ಚಿಕೊಂಡಿರುತ್ತಿದ್ದರು). ಈಗ ಹತ್ತು ವರ್ಷದ ಹಿಂದೆ ದಕ್ಷಿಣ ಕನ್ನಡದಲ್ಲಿ ಅಜಲು ಪದ್ಧತಿ ಜಾರಿಯಲ್ಲಿತ್ತು, ಅಜಲು ಪದ್ಧತಿಯೆಂದರೆ, ಆಹಾರದೊಂದಿಗೆ ಕೂದಲು-ಉಗುರು ಇತ್ಯಾದಿಗಳನ್ನು ಸೇವಿಸುವುದಾಗಿತ್ತು. ಆಗಿನ ಸಮಾಜಕಲ್ಯಾಣ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರು ಇದೂ ಕೂಡ ಅನಾಗರೀಕವೆಂದು ಆಕ್ಷೇಪಣೆ ಎತ್ತಿ ಕಾನೂನುಬದ್ಧವಾಗಿ ಅಜಲು ಪದ್ಧತಿಯನ್ನು ನಿಷೇಧಿಸಿದರು. ೨೦೧೨-೧೩ರಲ್ಲಿ ಮಡೆಸ್ನಾನದ ವಿಷಯ ಬಹುಚರ್ಚಿತವಾಯಿತು. ನಿಷೇಧಕ್ಕೆ ಮಡೆಸ್ನಾನ ಮಾಡುವವರಿಂದಲೇ ವಿರೋಧ ವ್ಯಕ್ತವಾಯಿತು. ಮಡೆಸ್ನಾನ ಮಾಡುವುದರಿಂದ ಚರ್ಮರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಇಲ್ಲಿ ಇನ್ನೊಂದು ವಿಷಯವನ್ನು ಪ್ರಸ್ತಾಪ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಮುಖದಲ್ಲಿ ಮೊಡವೆ ಅಥವಾ ಇನ್ನಿತರ ಚರ್ಮರೋಗಗಳಿದ್ದಲ್ಲಿ, ಊಟವಾದ ನಂತರ ಕೈತೊಳೆದ ತಕ್ಷಣ ಅದನ್ನು ಮುಖಕ್ಕೆ ಸವರಿಕೊಂಡಲ್ಲಿ ಕೆಲವು ಚರ್ಮರೋಗಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ ಹಾಗೂ ಹಲವರು ಇದರಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಊಟವೆಂದರೆ ಉಪ್ಪು-ಹುಳಿ-ಖಾರ-ಮಸಾಲೆ ಇತ್ಯಾದಿಗಳು. ಇವುಗಳಲ್ಲೂ ಔಷಧೀಯ ಗುಣಗಳಿರುತ್ತವೆ ಎಂದು ಭಾವಿಸುವುದಾದಲ್ಲಿ, ಮಡೆಸ್ನಾನವೆಂಬ ಪದ್ಧತಿಯಿಂದ ಹಲವು ಚರ್ಮರೋಗಗಳು ವಾಸಿಯಾಗಬಹುದು. ಒಬ್ಬರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಹೊರಳಾಡುವುದು ಅನಾಗರೀಕ ಪದ್ಧತಿಯೇ ಸೈ. ಇದರಲ್ಲಿ ಭಿನ್ನಾಬಿಪ್ರಾಯ ಬೇಡ, ಆದರೆ ಇದನ್ನು ಆಚರಿಸುವವರ ನಂಬಿಕೆಯನ್ನು ಹಾಳು ಮಾಡದೇ ವೈಜ್ಞಾನಿಕವಾಗಿ ಮಡೆಸ್ನಾನದಿಂದ ಚರ್ಮರೋಗಗಳು ವಾಸಿಯಾಗುತ್ತದೆಯೇ ಹಾಗಿದ್ದಲ್ಲಿ ಇದಕ್ಕಿಂತ ಭಿನ್ನವಾದ, ನಾಗರೀಕವಾದ ಪರಿಹಾರವನ್ನು ಹುಡುಕಲು ಸಾಧ್ಯವಿಲ್ಲವೇ? ಅದು ಬಿಟ್ಟು ಮಡೆಸ್ನಾನ ಪದ್ಧತಿಯನ್ನು ರಾಜಕೀಯ ಮೇಲಾಟಕ್ಕೆ ಬಳಸಿಕೊಂಡಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂಬುದೇ ಪ್ರಶ್ನೆ.

ವರದಾಪುರದ ಶ್ರೀ ಶ್ರೀಧರಸ್ವಾಮಿಗಳಿಗೆ ನಡೆದಾಡುವ ದೇವರು ಎಂಬ ಹೆಸರಿತ್ತು. ಆಗಿನ ಕಾಲದಲ್ಲಿ ಸಾಗರದ ಮಾರಿಜಾತ್ರೆಯಲ್ಲಿ ಕೋಣವನ್ನು ಬಲಿಕೊಡುವ ಪದ್ಧತಿಯಿತ್ತು. ಮೂಢನಂಬಿಕೆಗಳನ್ನು ಸ್ವತ: ಶ್ರೀಧರಸ್ವಾಮಿಗಳೇ ವಿರೋಧಿಸುತ್ತಿದ್ದರು, ಜನರ ನಂಬಿಕೆಗೆ ಧಕ್ಕೆ ಬಾರದಂತೆ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿ ಶ್ರೀಧರರ ಮೇಲಿತ್ತು. ಮಾರೆಮ್ಮನಿಗೆ ಕೋಣದ ರಕ್ತ ಬೇಕು. ಕೋಣವನ್ನು ಬಲಿಕೊಡುವ ಹಾಗಿಲ್ಲ. ಇಂಜಕ್ಷನ್ ಸಿರಿಂಜ್‌ನಿಂದ ಒಂದಿಷ್ಟು ರಕ್ತವನ್ನು ತೆಗೆದು ಮಾರೆಮ್ಮನಿಗೆ ಅಭಿಷೇಕ ಮಾಡುವ ನಾಗರೀಕ ಪದ್ಧತಿಯಿಂದ ಜನರ ನಂಬಿಕೆ ಉಳಿಯಿತು ಕೋಣದ ಬಲಿಯನ್ನು ತಡೆದ ಹಾಗಾಯಿತು. ಪರಿಹಾರವನ್ನು ಸೂಚಿಸದೇ ಅಥವಾ ಆಯಾ ಮೂಢನಂಬಿಕೆಗಳ ಬಗ್ಗೆ ಜನಜಾಗೃತಿಯಾಗದೇ ಬರೀ ಕಾನೂನಿಂದ ತಡೆಗಟ್ಟುವುದು ಸಾಧ್ಯವಿಲ್ಲದ ಮಾತು. ಕರ್ನಾಟಕದಲ್ಲಿ ನಡೆಯುವ ಅನೇಕ ಜಾತ್ರೆಗಳಲ್ಲಿ ಪೊಲೀಸರ ಎದುರೆ ಈಗಲೂ ಕೋಣವನ್ನು ಬಲಿಕೊಡುವ ಸಂಪ್ರದಾಯವುಂಟು. ಕಾನೂನು ಪ್ರಕಾರ ಕೋಣವನ್ನು ಬಲಿಕೊಡುವಂತಿಲ್ಲ. ಸಾವಿರಾರು ಭಕ್ತರ ಮುಂದೆ ನೂರಾರು ಪೊಲೀಸರು ನಿಸ್ಸಾಹಯಕರಾಗಿ ಕಾನೂನು ವಿರೋಧಿ ಕೃತ್ಯವನ್ನು ನೋಡಬೇಕಾಗಿ ಬರುತ್ತದೆ. ನೆಲದ ಕಾನೂನು ಗಾಳಿಯಲ್ಲಿ ತೂರಿಹೋಗುತ್ತದೆ. ಸಾರ್ವಜನಿಕರು ಒಮ್ಮೆ ಕಾನೂನಿಗೆ ಬೆಲೆ ಕೊಡುವುದನ್ನು ನಿಲ್ಲಿಸಿದಲ್ಲಿ ಅರಾಜಕತೆಯುಂಟಾಗುತ್ತದೆ.

ಸಾಗರದ ಹತ್ತಿರದ ಹಳ್ಳಿಯಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ನೀಡುತ್ತಾರೆ. ಹಾವು ಕಚ್ಚಿದೆ ಎಂದು ದೂರವಾಣಿ ಮುಖಾಂತರ ಹೇಳಿದರೂ ಸಾಕು, ಅವರು ಚಿಕಿತ್ಸೆ ಮಾಡುತ್ತಾರೆ. ಒಂದು ತಂಬಿಗೆಯಲ್ಲಿ ನೀರನ್ನು ತುಂಬಿ, ಒಂದು ಪಂಚೆಯನ್ನು ಹಾವಿನ ತರಹ ಸುತ್ತಿ ಅದಕ್ಕೆ ಅದೇನೋ ಮಂತ್ರಗಳನ್ನು ಹೇಳುತ್ತಾ ನೀರನ್ನು ಚಿಮುಕಿಸುತ್ತಾರೆ. ಬಹಳಷ್ಟು ಜನ ಇದರ ಪ್ರಯೋಜನ ಪಡೆದು ಬದುಕಿದ್ದಾರೆ (ಅಲ್ಲಿಗೆ ಹೋದವರೆಲ್ಲರು ಬದುಕಿಬಂದಿಲ್ಲ, ಅಲ್ಲಿ ಚಿಕಿತ್ಸೆ ಪಡೆದೂ ಸತ್ತವರು ಹಲವು ಜನ). ಹಾಗಾದರೆ ಒಳಗುಟ್ಟೇನು?. ಮೊದಲನೆಯದಾಗಿ, ಎಲ್ಲಾ ತರಹದ ಹಾವುಗಳು ವಿಷಕಾರಿ ಹಾವುಗಳಲ್ಲ, ಎರಡನೆಯದಾಗಿ ವಿಷಕಾರಿ ಹಾವು ಕಚ್ಚಿದಾಗ ಅದರ ಹಲ್ಲಿನಲ್ಲಿ ವಿಷವಿದ್ದರೆ ಮಾತ್ರ ಕಚ್ಚಿಸಿಕೊಂಡ ವ್ಯಕ್ತಿಗೆ ವಿಷವೇರುವ ಸಾಧ್ಯತೆ ಹೆಚ್ಚು. ಹೆಚ್ಚಿನ ಬಾರಿ ವ್ಯಕ್ತಿ ಭಯದಿಂದಲೇ ಮರಣ ಹೊಂದುತ್ತಾನೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಸರಿ ಹಾವು ಕಚ್ಚಿಸಿಕೊಂಡ ವ್ಯಕ್ತಿ ತಾನು ಸತ್ತೇ ಹೋಗುತ್ತೇನೆ ಎಂಬ ಭಯದಲ್ಲಿರುತ್ತಾನೆ. ಅಷ್ಟರಲ್ಲಿ ಆಪತ್ಪಾಂಧವನಂತೆ ಬರುವ ವ್ಯಕ್ತಿ ಹಾವು ಕಡಿತಕ್ಕೆ ಚಿಕಿತ್ಸೆ ನೀಡುವ ಊರಿಗೆ ದೂರವಾಣಿ ಮುಖಾಂತರ ತಿಳಿಸುತ್ತಾನೆ. ಅಲ್ಲಿಂದ ಗ್ಯಾರೆಂಟಿಯಾಗಿ ಬದುಕಿಕೊಡುವ ಭರಪೂರ ಭರವಸೆ ಸಿಗುತ್ತದೆ. ಹಾವು ಕಚ್ಚಿಸಿಕೊಂಡ ವ್ಯಕ್ತಿಗೆ ತಾನಿನ್ನು ಬದುಕುತ್ತೇನೆ ಎಂಬ ವಿಶ್ವಾಸ ಮೂಡುತ್ತದೆ. ವಾಸ್ತವಿಕವಾಗಿ ಅಲ್ಲಿ ಹೋಗಿ ಚಿಕಿತ್ಸೆ ಪಡೆಯಲಿರುವ ವ್ಯಕ್ತಿಗೆ ಹಾವಿನ ವಿಷವೇರಿರುವುದಿಲ್ಲ. ಆದರೂ ಈ ಚಿಕಿತ್ಸೆಯಿಂದ ಹಲವು ಜನ ಭಯದಿಂದ ಪ್ರಾಣ ಬಿಡುವುದು ತಪ್ಪಿದೆ. ಈಗ ಹೇಳಿ ಇದ್ಯಾವ ನಂಬಿಕೆ? ಯಾವುದೇ ಹಣಕಾಸು ಶೋಷಣೆ ಮಾಡದೆ ಬರೀ ಒಂದು ತೆಂಗಿನ ಕಾಯಿ ತೆಗೆದುಕೊಂಡು ಹಾವು ಕಡಿತಕ್ಕೆ ವಿಷ ನೀಡುವ ಇವರನ್ನು ಮೂಢನಂಬಿಕೆ ಪ್ರಚೋದಕರು ಎನ್ನಲಾದೀತೆ?

ಮನುಜ ಮೂಲತ: ಕ್ರೂರಿ ಮತ್ತು ಶೋಷಕ. ಲಾಗಾಯ್ತಿನಿಂದ ತನ್ನ ಸ್ವಾರ್ಥಕ್ಕಾಗಿ ಏನೆನೆಲ್ಲಾ ಕಂಡು ಹಿಡಿದ. ರೋಗ ನಿವಾರಣೆಗೆ ಅನೇಕ ಔಷಧಗಳನ್ನು ಕಂಡು ಹಿಡಿದ, ಇದರಲ್ಲಿ ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಪದಾರ್ಥಗಳು ಸೇರಿರುತ್ತವೆ. ಆಧುನಿಕಯುಗದಲ್ಲೂ ಹಲವು ರೋಗಗಳಿಗೆ ಚಿಕಿತ್ಸೆ ಕಂಡು ಹಿಡಿಯುವ ಪೂರ್ವದಲ್ಲಿ ಪ್ರಾಣಿಗಳ ಮೇಲೆ ಪ್ರಯೋಗಾರ್ಥವಾಗಿ ಪರೀಕ್ಷೆ ನಡೆಸುತ್ತಾರೆ. ಇದಕ್ಕೆ ಬಳಕೆಯಾಗುವ ಪ್ರಾಣಿಗಳೆಂದರೆ, ಮಂಗ, ಮೊಲ, ಇಲಿ, ಹಂದಿ ಇತ್ಯಾದಿಗಳು. ಸೌಂಧರ್ಯವರ್ಧಕಗಳು ಮಾನವನ ಕಣ್ಣಿಗೆ ಹಾನಿಮಾಡುವುದಿಲ್ಲ ಎಂಬುದನ್ನು ಪರೀಕ್ಷಿಸಲು ಮೊಲದ ಕಣ್ಣಿನೊಳಗೆ ರಾಸಾಯನಿಕಗಳನ್ನು ಹಾಕಿ ಪರೀಕ್ಷಿಸುತ್ತಾರೆ. ಏಕೆಂದರೆ, ಪ್ರಸಾಧನ ತಯಾರಕರಿಗೆ ಗ್ರಾಹಕರ ನಂಬಿಕೆಯನ್ನು ಮೊದಲು ಗೆಲ್ಲುವುದು ಅಗತ್ಯವಾಗಿರುತ್ತದೆ. ಒಬ್ಬರ ನಂಬಿಕೆಯನ್ನು ಗೆಲ್ಲಲು ಆಧುನಿಕ ವಿಜ್ಞಾನ ಮೂಢನಂಬಿಕೆಯಾದ ಪ್ರಾಣಿಬಲಿಗಿಂತ ಕ್ರೂರವಾದ ಪದ್ಧತಿಯನ್ನು ಅನುಸರಿಸುತ್ತದೆ. ಮಂಗಳನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸುವುದಕ್ಕೆ ಪೂರ್ವತಯಾರಿಯಾಗಿ ಮಂಗನನ್ನು ಕೂರಿಸಿ ಕಳುಹಿಸುವ ಪ್ರಯತ್ನ ಮಾಡಲಾಗಿತ್ತು. ಬಾಯಿಬಿಟ್ಟು ಹೇಳಲಾರದ ಮಂಗನ ತಲೆಗೆ ನಟ್-ಬೋಲ್ಟ್ ಗಳನ್ನು ಅಳವಡಿಸಿ, ವೈರುಗಳನ್ನು ತೂರಿಸಿ ಅದರ ಭಾವನೆಗಳನ್ನು ಕಂಡು ಹಿಡಿಯುವ ಪ್ರಯತ್ನವನ್ನು ಅಮೆರಿಕ ಮಾಡಿದೆ.

ನಂಬಿಕೆ-ಮೂಢನಂಬಿಕೆಗಳು ಖಾಸಾ ಅಕ್ಕ-ತಂಗಿಯರು. ಎಲ್ಲಿವರೆಗೆ ನಂಬಿಕೆ ಎನ್ನುವುದು ಜೀವಂತವಾಗಿರುತ್ತದೆಯೋ ಅಲ್ಲಿವರೆಗೂ ಮೂಢನಂಬಿಕೆಯೂ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಹಾಗಂತ ಮೂಢನಂಬಿಕೆಯನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಆದರೆ ಇದರಿಂದ ಹೊರಬರುವ ಮಾರ್ಗ ಏನು ಮತ್ತು ಹೇಗೆ? ಇದನ್ನು ಮುಗಿಸುವ ಮೊದಲು ಇನ್ನೊಂದು ವಿಚಾರವನ್ನು ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಸಾಗರದಲ್ಲಿ ಈ ಹಿಂದೆ ಆರ್.ಎಂ.ಪಿ. ಡಾಕ್ಟರ್‌ರೊಬ್ಬರು ಇದ್ದರು. ಅಂದಿನ ದಿನಗಳಲ್ಲಿ ಅವರೊಬ್ಬ ಅತ್ಯಂತ ಜನಪ್ರಿಯ ವೈದ್ಯರಾಗಿದ್ದರು. ಅವರ ಮೇಜಿನ ಮೇಲೆ ಸದಾ ಚಾಕೊಲೇಟ್ ತುಂಬಿದ ಡಬ್ಬಿಯಿರುತ್ತಿತ್ತು. ಚಿಕ್ಕಮಕ್ಕಳಿಗೆ ಚಾಕೊಲೇಟ್ ನೀಡುವುದು ಅವರ ಅಭ್ಯಾಸ. ಹಾಗಯೇ ಮೇಜಿನ ಮೇಲೆ ಒಂದು ತಂಬಿಗೆಯಲ್ಲಿ ನೀರು. ಕಾಯಿಲೆ-ಕಸಾಲೆಯಿಂದ ಬಳಲುತ್ತಿರುವವರಿಗೆ ಮೊದಲಿಗೆ ನೀರನ್ನು ಪ್ರೋಕ್ಷಣೆ ಮಾಡಿ ಆಮೇಲೆ ಯಂತಾಯಿತ ಹೆಣರಂಡಿದೆ ಎಂದು ಕೇಳುವುದು ಅವರ ಭಾಷಾವಾಡಿಕೆ. ಸರ್ವರಿಗೂ ಒಂದೇ ಭಾಷೆ ಅದೇ ಏಕವಚನದಲ್ಲೇ ಕರೆಯುವುದು. ದೊಡ್ಡಾಸ್ಪತ್ರೆಗಳಿಗೆ ಹೋಗಿ ಹುಷಾರಾಗದೇ ಬಂದ ಅದೆಷ್ಟೋ ರೋಗಿಗಳನ್ನು ತಮ್ಮ ನಿಗದಿತ ಜ್ಞಾನದಿಂದಲೇ ಹುಷಾರು ಮಾಡಿ ಕಳುಹಿಸಿದ ಕೀರ್ತಿ ಅವರಿಗಿತ್ತು. ಎಷ್ಟೋ ಜನರಿಗೆ ಔಷಧವನ್ನೇ ನೀಡುತ್ತಿರಲಿಲ್ಲ. ಬರೀ ಜಲ ಪ್ರೋಕ್ಷಣೆ ಮಾತ್ರ. ಸಾಮಾನ್ಯ ಜನರಲ್ಲಿ ಈ ಗೀಳು ಎಷ್ಟಿತ್ತೆಂದರೆ, ಐತಾಳ್ ಡಾಕ್ಟ್ರ ಶಾಪಿಗೆ ಹೋಯಿ ನೀರ್ ಹೊಡ್ಸಕಂಡ್ ಬರಕ್ ಮಾರಾಯ, ತಲೆನೋವು ಏನ್ ಮಾಡ್ರೂ ಹೋತಿಲ್ಲೆ ಎಂಬುದನ್ನು ನಾನೇ ಕೇಳಿದ್ದೇನೆ. ಸದಾ ದಮ್ಮಿನಿಂದ ಬಳಲುತ್ತಿರುವ ತಿಪ್ಪಣ್ಣನಿಗೆ ಬಂದ ತಲೆನೋವು ಏನು ಮಾಡಿದರೂ ಹೋಗಲಿಲ್ಲ, ಆಗ ಈ ಡಾಕ್ಟರ್ ಮಾಡಿದ ಚಿಕಿತ್ಸೆಯೆಂದರೆ ಅವರ ಹಣೆಗೆ ಇಂಜಕ್ಷನ್ ನೀಡಿದ್ದು. ಸಾಮಾನ್ಯವಾಗಿ ವೈದ್ಯಲೋಕದಲ್ಲಿ ಈ ಪದ್ಧತಿಯಿಲ್ಲ. ಆದರೆ ಅಚ್ಚರಿಪಡುವಂತೆ ತಿಪ್ಪಣ್ಣನಿಗೆ ಸಾಯುವವರೆಗೂ ತಲೆನೋವು ಬರಲಿಲ್ಲ. ಹಣೆಗೆ ಇಂಜಕ್ಷನ್ ನೀಡಿದ್ದು ವೈದ್ಯಕೀಯ ಪರಿಭಾಷೆಯಲ್ಲಿ ತಪ್ಪೇ ಇರಬಹುದು. ಆದರೆ ಇಲ್ಲಿ ಕೆಲಸ ಮಾಡಿದ್ದು, ತಲೆಗೆ ಇಂಜಕ್ಷನ್ ಕೊಟ್ಟಿದ್ದರಿಂದ ನನಗಿನ್ನು ತಲೆನೋವು ಬರುವುದಿಲ್ಲ ಎಂಬ ತಿಪ್ಪಣ್ಣನ ಅಗಾಧ ನಂಬಿಕೆ.

ಈ ಮೊದಲೇ ಹೇಳಿದಂತೆ, ಅತ್ಯಂತ ಕ್ರೂರವಾದ, ಸಮಾಜವಿರೋಧಿಯಾದ, ಸಹಿಸಲಾರದ, ನಾಗರೀಕ ಸಮಾಜ ತಲೆತಗ್ಗಿಸುವಂತಹ ಹೇಸಿಗೆ ಹುಟ್ಟಿಸುವ, ಮೈಜುಂವೆನ್ನುವಂತಹ ಅನೇಕ ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿವೆ. ಇವನ್ನೆಲ್ಲಾ ತೊಡೆದು ಹಾಕಬೇಕಾದ ಅಗತ್ಯ ಖಂಡಿತಾ ಇದೆ. ಆದರೆ ಜನಜಾಗೃತಿಯ ಮೂಲಕ ಇದನ್ನು ತೊಡೆಯುವುದು ಸೂಕ್ತ. ಈಗಿನ ಟಿ.ವಿ. ಜಮಾನದಲ್ಲಿ ಬೆಳಗ್ಗೆಯಿಂದ ಜ್ಯೋತಿಷಿಗಳು ರಾಶಿ ನಕ್ಷತ್ರಗಳನ್ನು ಹೇಳುತ್ತಾ, ಇಂತವರಿಗೆ ಈ ಹರಳು ಸೂಕ್ತ, ಇಂತವರು ಇದನ್ನು ಮಾಡಬೇಕು, ಮನೆಯಲ್ಲಿ ಜಗಳವಿದ್ದರೆ ಕರೆಎಳ್ಳು ಬೀರಿ, ಜಗಳವಿಲ್ಲದಿದ್ದರೆ ಬಿಳಿಎಳ್ಳು ಬೀರಿ ಹೀಗೆ ಏನೇನೋ ಬಡಬಡಾಯಿಸುತ್ತಿರುತ್ತಾರೆ. ಟಿ.ವಿ.ಜ್ಯೋತಿಷಿಗಳ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಸಮಾಜದಲ್ಲಿದೆ. ಗಂಡ-ಮಕ್ಕಳಿಗೆ ತಿಂಡಿ ಕೊಡದೆ ಇವರ ಜ್ಯೋತಿಷವನ್ನು ವಿಕ್ಷೀಸುವ ಮಹಿಳೆರೂ ಇದ್ದಾರೆ. ಇವೆನ್ನೆಲ್ಲಾ ಹೇಗೆ ನಿಷೇಧಿಸುತ್ತೀರಿ? ಸರ್ಕಾರಿಸ್ವಾಮ್ಯದ ಟಿ.ವಿ.ಯಲ್ಲಿ ಮೂಡನಂಬಿಕೆಗಳನ್ನು ತೊಡೆದು ಹಾಕಲು ಬೇಕಾದ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು. ಪವಾಡ ರಹಸ್ಯಗಳನ್ನು ಬಯಲು ಮಾಡುವ ಯುವ ಐಂದ್ರಜಾಲಿಕರನ್ನು ತಯಾರುಮಾಡಬೇಕು. ತಲೆ ಮೇಲೆ ಟೀ ಕಾಸಿ ತೋರಿಸುವ ಕೆಲಸವನ್ನು, ತೆಂಗಿನಕಾಯಿಯಿಂದ ರಕ್ತ ಒಸರವು ರಹಸ್ಯಗಳನ್ನು ಬಯಲುಮಾಡುವ ಕೆಲಸ ನಿರಂತರವಾಗಿ ನಡೆಯಬೇಕು. ಪರಿವರ್ತನೆ ಜಗದ ನಿಯಮ, ಪರಿವರ್ತನೆಯಾಗಲೇ ಬೇಕು, ಮೂಢನಂಬಿಕೆಗಳು ತೊಲಗಲೇ ಬೇಕು, ತೊಲಗಿಯೇ ತೊಲಗುತ್ತವೆ, ನಿರಂತರ ಪ್ರಯತ್ನದಿಂದ ಸಾಧ್ಯವಿದೆ. ಇದನ್ನು ಸರ್ಕಾರಗಳು ಮನಗಾಣಬೇಕು. ಬಲವಂತವಾಗಿ ಹೇರುವ ಯಾವುದೇ ಕಾಯ್ದೆ ಒಳಿತಿಗಿಂತ ಅಪಾಯವನ್ನೇ ಹೆಚ್ಚುಮಾಡೀತು? 

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
sharada.m
sharada.m
11 years ago

nice article
easily readable interesting real facts.by Akhilesh chippalli

Santhoshkumar LM
11 years ago

Very matured way of writing sir….Loved the way you presented the matter.

ಗುರುಪ್ರಸಾದ ಕುರ್ತಕೋಟಿ

ಲೇಖನ ತುಂಬಾ ಚೆನ್ನಾಗಿದೆ! ನಿಜವಾಗಿಯೂ ಎಷ್ಟೋ ರೋಗಗಳನ್ನು ಮನೋಬಲದಿಂದಲೇ ಕಡಿಮೆ ಮಾಡಿಕೊಳ್ಳಬಹುದು. ಆ ಮನೊಬಲವನ್ನು ಹೆಚ್ಚಿಸುವಲ್ಲಿ 'ನಂಬಿಕೆ'ಯ ಪಾತ್ರ ತುಂಬ ದೊಡ್ಡದು. ನೀವು ಹೇಳಿದಂತೆ ನಂಬಿಕೆ ಹಾಗೂ ಮೂಢ ನಂಬಿಕೆಯ ನಡುವೆ ಅಂತರ ತುಂಬಾ ತೆಳುವಾಗಿದೆ.

sridhar gopalakrishna rao mulabagalಶ್ರೀಧರ್ ಗೋಪಾಲಕೃಷ್ಣರಾವ್ ಮುಳಬಾಗಲು
sridhar gopalakrishna rao mulabagalಶ್ರೀಧರ್ ಗೋಪಾಲಕೃಷ್ಣರಾವ್ ಮುಳಬಾಗಲು
11 years ago

ನಿಮ್ಮ ಲೇಖನದ ಮೂಲ ಬಗ್ಗೆ ನನ್ನ ಪ್ರತಿಕ್ರಿಯೆ ಇಲ್ಲ . ಆದರೆ ನವದಂಪತಿ ತಲೆ ನೋವು ಪ್ರಕರಣ ,  ಕಾಲೇಜ್ ನಲ್ಲಿ ವ್ಯಾಸಂಗ ಮಾಡುವಾಗ ನನ್ನ ಮ್ಯಾಥ್ಸ್ ಲೆಕ್ಚರರ್ ಹೇಳಿದ ಒಂದು ಪ್ರಸಂಗ ನೆನಪಿಗೆ ಬರುತ್ತದೆ . let x=y ಎಂದು ಹೇಳುವಂತೆ ,ತಲೆ=ಕಾಲು ಎಂದು ತಿಳಿದುಕೊಳ್ಳಿ ,ಆಗ ತಲೆನೋವು=ಕಾಲುನೋವು . ಆದರೆ ನಿಮಗೆ ಕಾಲು ನೋಯಿತ್ತಿಲ್ಲ ,ಅದ್ದರಿಂದ ತಲೆ ನೋಯುತ್ತಿಲ್ಲ,ಎಂದು ಹೇಳಿ ಪ್ರಮೇಯ-theorm ಬಿಡಿಸಿದ್ದರು 

Akhilesh Chipli
Akhilesh Chipli
11 years ago

ಓದಿದ, ಮೆಚ್ಚಿದ ಮತ್ತು ಪ್ರತಿಕ್ರಯಿಸಿದ ಎಲ್ಲಾ ಸಹೃದಯರಿಗೂ
ಹೃದಯಪೂವ೯ಕ ಧನ್ಯವಾದಗಳು

Suman Desai
Suman Desai
11 years ago

Khare ada ri nivu helodu.. Ittitlag TV jotishigalu bhal agyar. tamman tavu ati vidvanaru anta torisikollikke manyag adagi mado padarthadolagella devaran hesaru kottu kirani bill hechislikattar ashta… satat prayatnadinda inthavnnella tadibahudu khare aadra inthaddar bagge janaralle kurudu nambiki tumbibittad. mostly shatamanagal varegu prayatna munduvarisbekagbahudu anta nanna anisike… sudharaneyatta nimma prayatnada nimma barah odi cholo anistu……. suman…………….

prashasti
11 years ago

ಸಖತ್ತಾಗಿದ್ದು.. ನಂಬಿಕೆಗಳು ಕಾಲಘಟ್ಟದಲ್ಲಿ ಮೂಡನಂಬಿಕೆಗಳಾಗಿ ಪರಿವರ್ತಿತವಾಗೋ ಪರಿಯನ್ನು ವರ್ಣಿಸಿರೋ ಪರಿ ಇಷ್ಟವಾಯ್ತು 🙂

7
0
Would love your thoughts, please comment.x
()
x