ನಂಬಿಕೆ ಮತ್ತು ಜೀವನ: ಜಯಪ್ರಕಾಶ್ ಪುತ್ತೂರು

ಜೀವಿಗಳಲೆಲ್ಲಾ ಶ್ರೇಷ್ಠ ಮಾನವ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಈ ನಂಬಿಕೆ ಅನ್ನುವುದು ಇದ್ದೇ ಇದೆ. ಮತ್ತೆ ಮನುಷ್ಯರಾದ ನಮಗೆ ಇದು ಸಾಮಾನ್ಯವೇ ಅಲ್ಲವೇ. ಜೀವನ ನಿಂತಿರುವುದೇ ನಂಬಿಕೆಯ ಮೇಲೆ ಹಾಗಂತ ನಂಬಿಕೆಯೇ ಜೀವನ ಆಗಲಾರದು ಅನ್ನೋದು ಸತ್ಯ. ಮನುಷ್ಯ ಸಂಘ ಜೀವಿ ಅದಕ್ಕೆ ಕಾರಣ ಹಲವಾರು ಇದ್ದರೂ ನಂಬಿಕೆಯೇ ಮೊದಲು ಹೊರತು ಬೇರಾವ ಮ್ಯಾಜಿಕ್ ಅಂತೂ ಅಲ್ಲ ಅನ್ನೋದು ಸತ್ಯ. ಸಾಮಾಜಿಕವಾಗಿ ಬದುಕುವುದು ಅವಶ್ಯಕವೇ ಆಗಿದ್ದರೂ ಅನಿವಾರ್ಯವೇನಲ್ಲ. ನಂಬಿಕೆಯು ಸೃಷ್ಟಿಸಿರುವ ಬುನಾದಿಯ ಮೇಲೆ ಜೀವನ ನಡೆದಿದೆ ಅಷ್ಟೇ. ಮನುಷ್ಯ ಭೂಮಿ ಮೇಲೆ ಬರುತ್ತಿದ್ದಂತೆ ಮೊದಲು ಆವರಿಸಿಕೊಳ್ಳೋ ಗುಣವೇ ಈ ನಂಬಿಕೆ ಇದು ಪ್ರೀತಿಯ ತಳಹದಿಯೂ ಹೌದು. ಹುಟ್ಟುತ್ತಾ ಮಗು ಅಳುತ್ತದೆ ತಾಯಿ ಎದೆಹಾಲು ಕುಡಿಸುತ್ತಾಳೆ. ಕರುಳುಬಳ್ಳಿಯ ಸಂಭಂಧ ಮಗು ತಾಯಿಯನ್ನು ಗುರುತಿಸಬಹುದು,  ಆದರೆತಂದೆಯ ಬಗ್ಗೆ ಮಗುವಿಗೆ ಹೇಗೆ ತಿಳಿಯಬೇಕು?ತಾಯಿಯೇ ತೋರಿಸಿಕೊಡಬೇಕು. ನಾವು ಯಾರೂ ತಂದೆಯ ಬಗ್ಗೆ ಯಾವತ್ತೂ ಅನುಮಾನಪಟ್ಟಿಲ್ಲ,  ನಮ್ಮ ತಾಯಿಯನ್ನು ಕೇಳಿಲ್ಲ ನನ್ನ ಹುಟ್ಟಿಗೆ ಕಾರಣ ಇವನೇ ಅಂತ ಹೇಗೆ ನಂಬಲಿ ಅಂತ. ಯಾಕೆಂದರೆ ಇದಕ್ಕೆ ಎರಡು ಕಾರಣಗಳಿವೆ ಒಂದು ತಾಯಿಯ ಸಂಸ್ಕಾರ,  ಎರಡನೇಯದು ತಾಯಿಯ ಮೇಲಿನ ನಂಬಿಕೆ ಮತ್ತಾಕೆಯ ಪ್ರೀತಿ. 

ಬೆಳೆದು ದೊಡ್ಡವರಾಗುತಿದ್ದಂತೆ ನಮ್ಮನ್ನು ಹಲವಾರು ಸಂಭಂಧಗಳು ಬೆಸೆದುಕೊಳ್ಳುತ್ತವೆ,  ಈ ಸಂಭಂಧಗಳ ಬೆಸೆಯುವಿಕೆಯಲ್ಲಿ ಪಾತ್ರವಹಿಸುವುದು ಈ ನಂಬಿಕೆಯೆ. ಇದು ಕೇವಲ ಒಂದು ಭಾವವಲ್ಲ,  ಇದು ಜೀವನ ಪ್ರೀತಿಯೂ ಹೌದು. ಅದಕ್ಕೆ ಹಿರಿಯರು ಹೇಳಿರುವುದು ಪ್ರೀತಿಯಿಲ್ಲದ ಮೇಲೆ ಹೂವು ಅರಳೀತೂ ಹೇಗೆ ಅಂತ. ಯಾರೋ ಹೇಳಿದ್ರು ಅಂತ ನಾವು ಸಂಭಂಧಗಳನ್ನು ಗಟ್ಟಿಪಡಿಸಿಕೊಳ್ಳುತ್ತೇವೆ ಅಣ್ಣ,  ತಮ್ಮ, ಅಕ್ಕ, ತಂಗಿ, ದೊಡ್ಡಪ್ಪ, ಚಿಕ್ಕಪ್ಪ ಅಂತ. ಇದಕ್ಕೆಲ್ಲಾ ಕಾರಣ ನಮ್ಮ ಜೀವನ ಪ್ರೀತಿ,  ಇದೆಲ್ಲಾ ಅನಿವಾರ್ಯವೂ ಹೌದು ಜೀವನ ಪ್ರವಾಹದಲ್ಲಿ. ಇದೆಲ್ಲವನ್ನು ಬಿಟ್ಟು ನಮ್ಮಲ್ಲಿ ಇನ್ನೂ ಅನೇಕ ನಂಬಿಕೆಗಳಿವೆ. ಭಾರತೀಯ ಪರಂಪರೆಯಲ್ಲಿ ಹಲವಾರು ಮತ ಪಂಥ,   ಜಾತಿಗಳು,  ಧರ್ಮ,  ಧರ್ಮಗ್ರಂಥಗಳು,  ಧರ್ಮಗುರುಗಳನ್ನು ನಾವು ಕಾಣುತ್ತೇವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಕಟ್ಟುಪಾಡುಗಳಿವೆ,  ಅವರದ್ದೇ ಆದ ಆಚರಣೆಗಳಿವೆ ಇವೆಲ್ಲಾ ಬಂದಿದ್ದು ಹೇಗೆ ಮತ್ತು ಯಾಕೆ ಅಂತ ನಮ್ಮನ್ನು ನಾವೇ ಪ್ರಶ್ನಿಸಿಕೊಂಡರೆ ನಮಗೆ ಸಿಗುವ ಉತ್ತರ ಒಂದೇ ಅದು ನಂಬಿಕೆ. ನಾಗರೀಕತೆ ಬೆಳೆದಂತೆ ನಮ್ಮನ್ನು ನಾವು ಸಮರ್ಪಕವಾಗಿ ಸ್ವಸ್ಥ್ಯವಾಗಿ ಬೆಳೆಸಲು ಇದೆಲ್ಲಾ ಕಟ್ಟುಪಾಡುಗಳ ಸೃಷ್ಟಿಯಾಯಿತು. ಹಾಗಾದರೆ ಇವೆಲ್ಲಾ ಅರ್ಥಹೀನವೇ ಖಂಡಿತಾ ಅಲ್ಲಾ. ಪ್ರತಿಯೊಂದರ ಧನ ಮತ್ತುಋಣಾತ್ಮಕ ಅಂಶಗಳ ಅಧ್ಯಯನಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡರೆ ನಮ್ಮ ಹಿರಿಯರ ನಂಬಿಕೆಗಳ ಆಳ ಅಗಲದ ಪರಿಚಯವಾಗುತ್ತದೆ. ಮೋಡ ಕವಿದಾಗ ಮಳೆ ಬರುತ್ತದೆ ಎಂಬುದು ನಂಬಿಕೆ ಆದರೆ ಅದು ನಿಜವೇ ಆಗಬೇಕೆಂದೇನೂ ಇಲ್ಲ ಹಾಗಾಗಿ ನಂಬಿಕೆ ಜೀವನ ಆಗಲಾರದು. ಆದರೆ ಭೂಮಿಯ ಉಳುವುದು ತನ್ನ ಕರ್ತವ್ಯ ಇಂದಲ್ಲಾ ನಾಳೆ ಮಳೆ ಬಂದೇ ಬರುತ್ತದೆ ಅನ್ನುವ ರೈತನ ಆತ್ಮವಿಶ್ವಾಸ ಇದೆಯಲ್ಲಾ ಅದು ನಿಜವಾದ ನಂಬಿಕೆ. 

ಇನ್ನೂ ಪ್ರೌಢರಾಗಿ ಯೋಚನೆ ಮಾಡಿದಾಗ ನಮಗೆ ದೇವರ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ನಾಸ್ತಿಕ ಮತ್ತು ಆಸ್ತಿಕ ವಾದಗಳು ಬಹುಶಃ ನಾಗರೀಕತೆಯ ಆಧುನೀಕರಣದ ದಿನದಿಂದಲೇ ಶುರುವಾಯ್ತೇನೊ. ದೇವರಿಲ್ಲ ಅನ್ನುತ್ತಾರೆ ನಾಸ್ತಿಕರು,  ಇರಬಹುದು ಅದು ಅವರ ವಾದವಷ್ಟೇ ಅಲ್ಲ ನಂಬಿಕೆಯೂ,  ಕಾರಣವಿಷ್ಟೇ ಅವರು ದೇವರನ್ನು ನೋಡಿಲ್ಲ. ದೇವರಿದ್ದಾನೆ ಅನ್ನೋ ಅಚಲ ನಂಬಿಕೆ ಆಸ್ತಿಕರದ್ದು,  ಇಲ್ಲಿಯೂ ಈ ವಾದವನ್ನು ನಾವು ಅಲ್ಲಗಳೆಯುವಂತಿಲ್ಲ ಪ್ರಕೃತಿಯಲ್ಲಿ ದೇವರ ಅಸ್ತಿತ್ವ ಕಂಡವರು ಅವರು. ಯಾವುದೇ ನಂಬಿಕೆಯನ್ನು ವಿರೋಧಿಸುವ ಅಥವಾ ಇದೇ ಸರಿ ಅಂತ ಇನ್ನೊಬ್ಬರ ಮೇಲೆ ಹೇರುವ ಅಧಿಕಾರವಂತೂ ಯಾರಿಗೂ ಇಲ್ಲ. ದೇವರನ್ನು ನಾನು ನೋಡಿಲ್ಲ ಅನ್ನುವುದು ಎಷ್ಟು ಸತ್ಯವೋ ನೋಡಿದವರು ಆ ಶಕ್ತಿಯನ್ನು ಕರಗತ ಮಾಡಿಕೊಂಡಿರುವವರು ಇದ್ದಾರೆ ಅನ್ನುವುದು ಸೂರ್ಯ ಚಂದ್ರರಷ್ಟೇ ಸತ್ಯ. ಪ್ರಕೃತಿಯಲ್ಲಿರುವ ಕಲ್ಲು ಮಣ್ಣನ್ನೇ ಪೂಜಿಸಿರುವ ಹಿರಿಯರ ಈ ನಂಬಿಕೆಗಳೇ ದೇವರು,  ವ್ರತಗಳು,  ಹಬ್ಬಗಳ ಆಚರಣೆಗೆ ಕಾರಣವಾಗಿದ್ದು. ಹಾಗಂತ ತಮ್ಮ ಮನಸ್ಸಿಗೆ ಬಂದಂತೆ ಕಾರಣವಿಲ್ಲದೆ ಈ ಹಬ್ಬ ಹರಿದಿನಗಳು ಹುಟ್ಟಿಕೊಳ್ಳಲಿಲ್ಲ,  ಪ್ರತಿಯೊಂದಕ್ಕೂ ಒಂದೊಂದು ಅರ್ಥವಿದೆ. ನಮ್ಮ ಋಣಾತ್ಮಕ ಯೋಚನೆಗಳನ್ನು ಬದಿಗಿಟ್ಟು ಸಾಮಾಜಿಕವಾಗಿ ಯೋಚಿಸೋಣ ಹಬ್ಬ ಅಂದಾಗ ಏನೋ ಸಂಭ್ರಮ,  ಸಡಗರ ಎಲ್ಲರೂ ಜೊತೆಯಾಗಿ ಕೂಡಿ ನಲಿಯುತ್ತೇವೆ ಹಂಚಿ ತಿನ್ನುತ್ತೇವೆ ಖುಷಿಯನ್ನು ಕಾಣುತ್ತೇವೆ,  ಬಹುಶಃ ಈ ಸಮ್ಮಿಲನಗಳು ಪದೇ ಪದೇ ನಡೆಯಲಿ ಎನ್ನುವ ಆಶಯಕ್ಕಾಗಿಯೇ ನಾನಾ ಆಚರಣೆಗಳು ಹುಟ್ಟಿರಬಹುದು ಅಲ್ಲವೇ?ನಾವೇನು ಕಂಡಿದ್ದೇವೆ ನಾವ್ಯಾಕೆ ಹೀಗೇ ನಡೆಯಬೇಕು ಅಂತ ಅಂದುಕೊಳ್ಳದೆ ಪರಸ್ಪರರ ಭಾವನೆಗಳನ್ನು ಗೌರವಿಸಿದಾಗಲೇ ಜೀವನಕ್ಕೆ ಒಂದು ಬೆಲೆ ಅಲ್ಲವೇ?ಆದರೂ ನಮ್ಮ ನಂಬಿಕೆಗಳು ಮಿತಿ ಮೀರಿದಾಗ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಿ ಮೂಢನಂಬಿಕೆಗಳಾಗಿವೆ ಅನ್ನೋದು  ನಿಜ,   ಹಾಗೆಯೇ ಅತಿಯಾದ ಆಧುನಿಕತೆಯ ನಾಸ್ತಿಕವಾದವೂ ಸೃಷ್ಟಿಯ ಸಮತೋಲನ ಕಾಪಾಡುವಲ್ಲಿ ಎಡವಿದೆ ಅನ್ನುವುದು ವಸ್ತುಸತ್ಯ. 

ನಂಬಿಕೆ ಬದುಕಿನ ಆಧಾರ ಬದುಕಿನ ಉನ್ನತೀಕರಣದಲ್ಲಿ ನಂಬಿಕೆ ತನ್ನ ಮೌಲ್ಯ ಕಳೆದುಕೊಳ್ಳದಿರಲಿ,  ಮೌಡ್ಯದ ಪರಮಾವಧಿಯೂ ಆಗದಿರಲಿ ಎಂಬ ಆಶಯದೊಂದಿಗೆ ಬದುಕೋಣ ಮಾನವೀಯ ಮೌಲ್ಯಗಳ ಪ್ರೀತಿಯ ಜೊತೆಗೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
10 years ago

ಚೆನ್ನಾಗಿದೆ ಬರಹ..ಜಯಪ್ರಕಾಶ್

prakash tadadikar
prakash tadadikar
10 years ago

ತುಂಬಾ ಸುಂದರ ಬರಹ. ನಂಬಿಕೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಚೆನ್ನಾಗಿ ಪ್ರಸ್ತುತಪಡಿಸಿದ ಲೇಖನ 

2
0
Would love your thoughts, please comment.x
()
x