ಆತ ಪ್ರಿನ್ಸ್ ಹ್ಯಾಮ್ಲೆಟ್ ಕಪ್ಪು ಬಟ್ಟೆ ಧರಿಸಿದ ಆತ ಮಾನಸಿಕವಾಗಿ ದ್ವಂದ್ವ ಸ್ಥಿತಿಯಲ್ಲಿದ್ದಾನೆ. ಅಷ್ಟೇ ಅಲ್ಲ ರೊಚ್ಚಿಗೆದ್ದಿದ್ದಾನೆ. ಕಾರಣ ತಂದೆ ಡೆನ್ಮಾರ್ಕನ ರಾಜ ಹ್ಯಾಮ್ಲೆಟ್ ಸಾವನ್ನಪ್ಪಿದ್ದಾರೆ. ತಾಯಿ ರಾಣಿ ನಾಚಿಕೆಯಿಲ್ಲದೇ ನಿಷ್ಠೆ ಇಲ್ಲದೇ ಮರುವಿವಾಹವಾಗಿದ್ದಾಳೆ. ಅದು ರಾಜಕುಮಾರನಿಗೆ ಇಷ್ಟವಿಲ್ಲ. ಆಕೆ ಹಾಗೆ ಮಾಡಿದ್ದು ತನ್ನ ತಂದೆಗೆ ಮಾಡಿದ ದ್ರೋಹವೆಂದೆನ್ನಿತ್ತದೆ.ಹಾಗಾಗಿ ಆತನ ಒಳಗುದಿ ಕುದಿಯುತ್ತಿರುವುದು ಬರಿಯ ತಂದೆಯ ಸಾವಿನಿಂದಲ್ಲ. ಬದಲಿಗೆ ತಾಯಿಯ ಮರುವಿವಾಹ ಅದೂ ತನ್ನ ಚಿಕ್ಕಪ್ಪ ಕ್ಲಾಡಿಯಸ್ ನೊಂದಿಗೆ ಹಾಗೂ ಆತ ರಾಣಿ ಗೆರ್ಟ್ರೂಡ್ ಳನ್ನು ಮದುವೆಯಾಗಿ ಹಿಂದಿನ ರಾಜ ಹಾಗೂ ತನ್ನ ತಂದೆ ಹ್ಯಾಮ್ಲೆಟ್‍ನ ಸಿಂಹಾಸನವನ್ನು ಏರಿ ಕುಳಿತಿರುವುದು. ಆತ ತನ್ನ ಕಹಿ ಅನುಭವಗಳನ್ನು ಸ್ವಗತದಲ್ಲೆಂಬಂತೆ ತೋಡಿಕೊಳ್ಳುತ್ತಿದ್ದಾನೆ. ಅದಾಗಲೇ ಆಸ್ಥಾನ ಭಟರು ಎಲ್ಸಿನೋರ್ ಕೋಟೆಯಲ್ಲಿ ಮರಣಿಸಿದ ರಾಜ ಹ್ಯಾಮ್ಲೆಟ್‍ನ ಪ್ರೇತಾತ್ಮವನ್ನು ನೋಡಿದ್ದಾಗಿ ಪ್ರಿನ್ಸ ಹ್ಯಾಮ್ಲೆಟ್ನಲ್ಲಿ ವಿವರಿಸುತ್ತಾರೆ.
ಮರುದಿನ ರಾತ್ರಿ ರಾಜಕುಮಾರ ತನ್ನ ತಂದೆಯ ಆತ್ಮದೊಂದಿಗೆ ಮುಖಾಮುಖಿಯಾಗುತ್ತಾನೆ. ತಂದೆಯ ಸಾವು ಆಕಸ್ಮಿಕವಾದ ಸಹಜ ಸಾವಲ್ಲವೆಂದು, ಈಗ ಅಧಿಕಾರದ ಗದ್ದುಗೆ ಏರಿದ ಸಹೋದರ ಕ್ಲಾಡಿಯಸ್ ತನ್ನ ಕೊಲೆಗೈದಿರುವ ಸಂಗತಿಯನ್ನು ಪ್ರೇತಾತ್ಮ ತಿಳಿಸುತ್ತದೆ. ರಾಜಕುಮಾರ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವ ಶಪಥಮಾಡುತ್ತಾನೆ. ಆದರೆ ಆತ್ಮ ತಾಯಿಯನ್ನು ಕೊಲ್ಲದೇ ಆಕೆಯನ್ನು ದೇವರ ಶಿಕ್ಷೆಗೆ ಬಿಡುವಂತೆ ಹೇಳುತ್ತದೆ. ಈ ಎಲ್ಲ ವಿಚಾರ ತಿಳಿದ ಹ್ಯಾಮ್ಲೆಟ್ ಮಾನಸಿಕ ಕ್ಷೋಭೆಗೊಳಗಾಗುತ್ತಾನೆ.ಇವು ನಾಟಕದ ಮೊದಲ ದೃಶ್ಯದಲ್ಲಿ ಬರುವ ಸಂಗತಿಗಳಿವು. ಅಂದಿನ ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದ ಅಧಿಕಾರದ ದಾಹ, ಅದಕ್ಕಾಗಿ ನಡೆಯುತ್ತಿದ್ದ ಕೊಲೆಗಳು, ವಿಷಯ ವ್ಯಾಮೋಹಕ್ಕೆ ಒಳಗಾದ ಸಹೋದರರ ನಡುವಿನ ಪೈಪೋಟಿ ಕುರುಡಾದ ಪ್ರೇಮ ವಾತ್ಸಲ್ಯಗಳು, ವಿಷಯ ವಾಂಛೆಯ ಸುತ್ತ ಸುತ್ತುವ ಜಗತ್ತಿನ ಭ್ರಮೆಗಳೇ ಶೇಕ್ಸಪಿಯರ ನಾಟಕದ ತಿರುಳುಗಳು. ಮಾನಸಿಕ ಕ್ಷೇಶದಿಂದ ಜರ್ಜರಿತನಾದ ರಾಜಕುಮಾರ ಮತಿಭ್ರಾಂತನಂತೆ ವರ್ತಿಸುವಲ್ಲಿ ಕೂಡಾ ಬದುಕಿನ ಆಟದಲ್ಲಿ ಗತಿ ತಪ್ಪಿದ ದಾಳವಾಗಿ ತೊಳಲಾಡುತ್ತಿರುವ ಚಿತ್ರಣವಿದೆ.
ಅದಲ್ಲದೇ ಆತನ ಯುವ ಪ್ರಾಯದ ಆಕರ್ಷಣೆ ಎಂದರೆ ಒಫೇಲಿಯ. ಆಕೆ ಲಾರ್ಡ ಚೆಂಬರ್ಲಿನ್ ಪೊಲೊನಿಯಸ್ ನ ಮಗಳು. ಆತ ಆಕೆಯನ್ನು ಪ್ರೀತಿಸುತ್ತಾನೆ. ಆದರಾಕೆಯ ತಂದೆ ಪೊಲೊನಿಯಸ್ ಆಕೆಯನ್ನು ಹ್ಯಾಮ್ಲೆಟ್‍ನಿಂದ ದೂರವಿರುವಂತೆ ನಿರ್ದೇಶಿಸುತ್ತಾನೆ. ತಂದೆಯ ಮಾತಿಗೆ ಆಕೆ ಸುಮ್ಮನಿದ್ದರೂ ಆಂತರ್ಯದಲ್ಲಿ ಆತನ ಪ್ರೇಮಿಸುವ ಹೆಣ್ಣು ಆಕೆ. ತಂದೆಯ ಕೊಲೆ ಸೇಡು ಹಾಗೂ ತನ್ನ ಉದ್ದೇಶ ಸಾಧನೆಗೆ ರಾಜಕುಮಾರ ಮರಳುತನದ ನಾಟಕವಾಡುತ್ತಲೇ ಸಂಶಯಗೊಂಡ ಕ್ಲಾಡಿಯಸ್ ಪೊಲೊನಿಯಸ್ ನ ಜೊತೆಗೂಡಿ ಆತನ ನೈಜತೆಯನ್ನು ಬಯಲಿಗೆಳೆಯಲು ಪ್ರೇಯಸಿ ಓಫೇಲಿಯಾಳನ್ನು ಆತನಲ್ಲಿಗೆ ಕಳಿಸಲಾಗುತ್ತದೆ. ಹಿಂದೆ ಹ್ಯಾಮ್ಲೆಟ್‍ನೊಂದಿಗೆ ಸೇರದಿರುವಂತೆ ಬುದ್ಧಿ ಹೇಳಿದ ತಂದೆ ಈಗ ಮಗಳನ್ನು ತಾನಾಗಿಯೇ ಆತನಲ್ಲಿಗೇ ಕಳಿಸುವುದರ ಹಿಂದೆ ಆತನ ರಾಜಕೀಯ ದುರುದ್ದೇಶವೇ ಕಾರಣವಾಗಿರುತ್ತದೆ. ಅಲ್ಲಿ ಹ್ಯಾಮ್ಲೆಟ್ ಆಕೆಯನ್ನು ತಾನು ಹಿಂದೆ ಪ್ರೀತಿಸಿದ್ದುದ್ದಾಗಿಯೂ ಈಗ ಇಲ್ಲವೆಂದು ಸುಳ್ಳುನುಡಿಯಲು ಆಕೆ ನೊಂದುಕೊಳ್ಳುತ್ತಾಳೆ. ಆತನ ಮಾನಸಿಕ ಸ್ಥಿತಿ ಸರಿ ಇಲ್ಲದಿರುವುದರಿಂದ ಹಾಗೆ ನುಡಿಯುತ್ತಿರುವನೆಂದು ಗೃಹಿಸಿ ಆತನಿಗಾಗಿ ಪ್ರಾರ್ಥಿಸುತ್ತಾಳೆ. ಇವರಿಬ್ಬರ ಸಂಭಾಷಣೆ ಆಲಿಸಿದ ರಾಜ ಹಾಗೂ ಪೋಲೊನಿಯಸ್ ಇಬ್ಬರೂ ಹ್ಯಾಮ್ಲೆಟ್ ಯಾವುದೋ ಹೊಸ ಯೋಜನೆ ಹಾಕಿಕೊಂಡಿರುವನೆಂದು ಭ್ರಮಿಸುತ್ತಾರೆ. ಅದಕ್ಕಾಗಿ ರಾಜ ಅತನನ್ನು ಇಂಗ್ಲೆಂಡಿಗೆ ಕಳಿಸುವ ನಿರ್ಧಾರ ಮಾಡುತ್ತಾನೆ. ಅದಾಗಲೇ ನಗರಕ್ಕೆ ಬಂದ ನಾಟಕದ ತಂಡವೊಂದರ ಸಹಾಯ ಪಡೆದ ರಾಜಕುಮಾರ ತನ್ನ ತಂದೆಯ ಹತ್ಯೆಯ ಹೋಲುವ ನಾಟಕವನ್ನು ಆಡಿಸುತ್ತಾನೆ. ತನ್ನ ಗುಟ್ಟು ಬಯಲಾದ ಸಂಗತಿ ಅರಿತ ರಾಜ ಕ್ಲಾಡಿಯಸ್ ಬೆವೆತುಹೋಗುತ್ತಾನೆ. ಅರಮನೆಗೆ ಹಿಂದಿರುಗಿದ ತಾಯಿ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಅದೇ ಸಮಯದಲ್ಲಿ ಏಕಾಂಗಿಯಾಗಿ ಸಿಕ್ಕರೂ ಪ್ರಾರ್ಥನಾನಿರತನಾಗಿದ್ದ ಕ್ಲಾಡಿಯಸ್‍ನನ್ನು ಹ್ಯಾಮ್ಲೆಟ್ ಕೊಲ್ಲುವುದಿಲ್ಲ. ಇದು ಆತನ ಸದ್ಗುಣಕ್ಕೆ ಸಾಕ್ಷಿ. ಮುಂದೆ ರಾಜಕುಮಾರನಿಂದ ತನಗೆ ತೊಂದರೆ ಅರಿತ ರಾಜ ಆತನನ್ನು ಇಂಗ್ಲೆಂಡಿಗೆ ಕಳಿಸಿ ಅಲ್ಲಿ ಆತನ ಕೊಲೆಗೆ ಸಂಚು ಹೂಡುತ್ತಾನೆ. ಅದನ್ನರಿತ ಹ್ಯಾಮ್ಲೆಟ್ ಅಲ್ಲಿಂದ ಪುನಃ ತಪ್ಪಿಸಿಕೊಂಡು ಡೆನ್‍ಮಾರ್ಕಗೆ ಮರಳಿಬರುತ್ತಾನೆ.
ಈ ಸಂದರ್ಭದಲ್ಲಿ ಪೋಲೊನಿಯಸ್ ಕೊಲೆಯಾಗುತ್ತಾನೆ. ಅದಕ್ಕೆ ತಾನೇ ಕಾರಣವಾಗಿದ್ದರೂ ಹ್ಯಾಮ್ಲೆಟ್‍ನೇ ಆ ಸಾವಿಗೆ ಕಾರಣವೆಂದು ಕಥೆಕಟ್ಟಿ ಪೊಲೊನಿಯಸ್‍ನ ಮಗ ಲೇರ್ಟಸ್ ನು ಹ್ಯಾಮ್ಲೆಟ್ ವಿರುದ್ಧ ಸೆಣಸುವಂತೆ ಮಾಡಲಾಗುತ್ತದೆ. ಅಲ್ಲದೇ ತಂಗಿ ಒಫೆಲಿಯಾ ಕೂಡಾ ನೀರಲ್ಲಿ ಮುಳುಗಿ ಸಾಯುತ್ತಾಳೆ. ಇದೆಲ್ಲದರ ಹಿಂದೆ ಕ್ಲಾಡಿಯಸ್‍ನ ಕಪಟತೆ ಕೆಲಸ ಮಾಡುತ್ತದೆ. ಕೋಪಗೊಂಡ ಲ್ಯಾರ್ಟಸ್ ಹ್ಯಾಮ್ಲೆಟ್‍ನೊಂದಿಗೆ ದ್ವಂದ್ವ ಯುದ್ಧಕ್ಕೆ ಬರುತ್ತಲೇ ಕ್ಲಾಡಿಯಸ್ ಹ್ಯಾಮ್ಲೆಟ್‍ನನ್ನು ಕೊಲ್ಲುವುದೇ ಪ್ರಮುಖ ಗುರಿಯಾಗಿ ಆ ಯುದ್ಧ ಖಡ್ಗಗಳಿಗೆ ವಿಷ ಲೇಪಿಸಿಡಿಸುತ್ತಾನೆ. ಅಷ್ಟೇ ಅಲ್ಲದೇ ವೀರರಿಗೆ ಮೀಸಲಿಟ್ಟ ಪಾನಕದಲ್ಲಿಯೂ ವಿಷ ಬೆರಸಲ್ಪಡುತ್ತದೆ. ಯುದ್ಧದಲ್ಲಿ ಹ್ಯಾಮ್ಲೆಟ್ ವಿಷಭರಿತ ಖಡ್ಗದ ಇರಿತಕ್ಕೊಳಗಾಗುತ್ತಾನೆ. ಆ ಸಮಯದಲ್ಲಿಯೇ ಅಲ್ಲಿ ಯುದ್ಧ ನೋಡಲು ಬಂದ ತಾಯಿ ಉದ್ವೇಗಕ್ಕೆ ಒಳಗಾಗಿ ಆ ವಿಷ ಭರಿತ ಗ್ಲಾಸಿನ ಪಾನಕವನ್ನು ತಿಳಿಯದೇ ಸೇವಿಸುತ್ತಾಳೆ. ಯುದ್ಧದಲ್ಲಿ ವಿಪರೀತ ಗಾಯಗೊಡ ಲೇರ್ಟಸ್ ಇವೆಲ್ಲವೂ ಕ್ಲಾಡಿಯಸ್‍ನ ಕುತಂತ್ರವೆಂದು ಇರಿತಕ್ಕೊಳಗಾದ ಹ್ಯಾಮ್ಲೆಟ್ ಕೂಡಾ ಇನ್ನರ್ಧ ಗಂಟೆಯಲ್ಲಿ ಸಾಯುವನೆಂದು ಸತ್ಯ ಸಂಗತಿಯನ್ನು ಹೇಳಿ ಸತ್ತುಹೋಗುತ್ತಾನೆ. ದ್ವೇಷದ ಹೊಗೆಯಲ್ಲಿ ತನ್ನವರೆಲ್ಲರ ಸಾವಿಗೆ ಕಾರಣನಾದ ರಾಜ ಕ್ಲಾಡಿಯಸ್‍ನನ್ನು ತನ್ನ ಕೊನೆಯ ಕ್ಷಣದಲ್ಲಿ ವಿಷದ ಖಡ್ಗದಿಂದ ಇರಿದು ಬಿಡುತ್ತಾನೆ ಹ್ಯಾಮ್ಲೆಟ್ ಹೀಗೆ ಕ್ಲಾಡಿಯಸ್ ಎಂಬ ದುಷ್ಟ ವ್ಯಕ್ತಿಯ ದುರುದ್ದೇಶದಿಂದ ಎಲ್ಲರ ಅಂತ್ಯವಾಗುತ್ತದೆ.
ರಾಜನಾದ ಕ್ಲಾಡಿಯಸ್ ತನ್ನ ಕರ್ತವ್ಯ ನಿರ್ವಹಣೆ ಅಧಿಕಾರ ನಿಭಾಯಿಸುವಲ್ಲಿ ಸಮರ್ಥನಾಗಿದ್ದರೂ, ಆತನೊಬ್ಬ ಪ್ರಾಮಾಣಿಕನಲ್ಲ. ಧೂರ್ತ ಬುದ್ದಿಯ ಆತ ಎಲ್ಲವನ್ನೂ ತನ್ನ ಸ್ವಾರ್ಥಸಾಧನೆಗೆ ಬಳಸಿಕೊಳ್ಳುವ ಸಂಬಂಧಗಳನ್ನು ಆ ಹಿನ್ನೆಲೆಯಲ್ಲಿಯೇ ಕಟ್ಟಿಕೊಳ್ಳುವ ಅವಕಾಶವಾದಿ. ರಾಣಿ ಗೆಟ್ರೂಡ್ ಳೊಂದಿಗೆ ಬೆಸೆದುಕೊಳ್ಳುವ ಪ್ರೇಮ ಸಂಬಂಧ ಕೊನೆಯಲ್ಲಿ ವೈವಾಹಿಕ ಸಂಬಂಧವಾಗಿ ಗಟ್ಟಿಗೊಂಡಾಗಲೂ ಆತ ಆಕೆಯನ್ನು ಬಳಸಿಕೊಂಡು ತನ್ನ ಏಳ್ಗೆಯ ಏಣಿಯನ್ನು ಸುಭದ್ರವಾಗಿ ನಿಲ್ಲಿಸಬಯಸುತ್ತಾನೆ. ಆದರೆ ರಾಣಿ ಮಾತ್ರ ಆತನ ನೈಜವಾಗಿ ಪ್ರೀತಿಸುವ ಹೆಣ್ಣು. ಪತಿಗೆ ದ್ರೋಹ ಬಗೆದರೂ ಪುತ್ರ ಹ್ಯಾಮ್ಲೆಟ್ ಹಾಗೂ ತನ್ನ ಹೊಸ ಗಂಡನೊಂದಿಗೆ ಹೊಂದಿಕೊಂಡು ಒಟ್ಟಿಗೆ ಬದುಕುವ ಆಸೆ ಹೊಂದಿದವಳು. ಗಂಡನನ್ನು ಕೊಂದ ಅಪರಾಧ ತನಗೆ ತಿಳಿಯದಂತೆ ವರ್ತಿಸುವ ಆಕೆಯ ನಡುವಳಿಕೆ ಓದುಗನಲ್ಲಿ ಆಕೆಯ ಬಗ್ಗೆ ಅಸಹ್ಯ ಹಾಗೂ ಗೊಂದಲ ಹುಟ್ಟಿಸುತ್ತದೆ.
ಆದರಾಕೆಯ ವರ್ತನೆಗಳು ಪುತ್ರ ಹ್ಯಾಮ್ಲೆಟ್‍ನಲ್ಲಿ ಜಿಗುಪ್ಸೆ ಹುಟ್ಟಿಸುತ್ತವೆ.ಇದು ಮಾನವ ಸಹಜಗುಣ. ತಂದೆತಾಯಿಯ ಸಮರಸದ ಜೀವನವನ್ನು ಬಯಸುವ ಮಕ್ಕಳು ಎಲ್ಲ ಕಾಲಕ್ಕೂ ದೇಶಕ್ಕೂ ಒಂದೇ ಎಂಬುದು ಸರ್ವವೇದ್ಯ. ತಂದೆಯ ಇಲ್ಲವೇ ತಾಯಿಯ ಸಂಬಂಧಗಳಲ್ಲಿ ಬಿರುಕು ಇಲ್ಲವೇ ಸ್ಪೋಟ.ಇತರ ಸಂಬಂಧಗಳು ಮಕ್ಕಳನ್ನು ರೊಚ್ಚಿಗೆಬ್ಬಿಸುವುದು. ಅದು ಅಪರಾದ ಇಲ್ಲವೇ ಕೊಲೆಯಲ್ಲಿ ಪರ್ಯಾವಸಾನಗೊಳ್ಳುವುದು. ಇಂತಹ ಕಥೆಗಳು ಇತಿಹಾಸದ ಉದ್ದಕ್ಕೂ ಪುರಾಣಗಳ ಕಾಲದಲ್ಲೂ ಇತ್ತೆಂಬುದು ಸತ್ಯ.
ಶೇಕ್ಸಪಿಯರ ನಾಟಕಗಳಲ್ಲಿ ಅತಿಮಾನುಷ ಶಕ್ತಿಗಳಾದ ಪ್ರೇತಾತ್ಮಗಳು ಕಥಾವಸ್ತುವಿನ ವಿಸ್ತೃತ ಕಲ್ಪನೆಗಳಿಗೆ ಅದ್ಭುತ ಮೆರಗನ್ನು ಕೊಡುವ ಪರಿಕರಗಳಂತೆ ಬಳಸಲ್ಪಡುತ್ತವೆ. ಹ್ಯಾಮ್ಲೆಟ್ ನಾಟಕದ ಅತ್ಯಂತ ಸಶಕ್ತ ಪಾತ್ರವಾಗಿ ರಾಜ ಹ್ಯಾಮ್ಲೆಟ್‍ನ ಪ್ರೇತಾತ್ಮ ಕಾಣಿಸಿಕೊಳ್ಳುತ್ತದೆ. ನಾಟಕ ಮುಂದುವರಿಕೆಗೆ ಸಕಾರಣ ಹಿನ್ನೆಲೆಯಾಗಿ [part of machinery] ಬಳಸಲ್ಪಡುವ ಈ ಪಾತ್ರ ಸದ್ಗುಣತೆಗೆ ಹಾಗೂ ನೈತಿಕತೆಯ ಸಾದರಪಡಿಸುತ್ತದೆ. ಸದ್ಗುಣಿಗಳಿಗೆ ಮಾತ್ರ ಗೋಚರಿಸುತ್ತ, ರಾಣಿಗೂ ಗೋಚರಿಸದೆ ಆಕೆಯ ದುಷ್ಟ ನಡತೆಗೆ ಪ್ರೇತವೂ ನಿರಾಕರಿಸುವ ಮೂಲಕ ಮಾನವ ಜಗತ್ತಿನಲ್ಲಿರಬೇಕಾದ ಸನ್ನಡತೆಗೆ ಸಂದೇಶ ನೀಡುತ್ತದೆ. ನಾಟಕ ತಂದೆ ಮಗನ ನಡುವಿನ ಸಂಬಂಧಗಳು ಮಧುರತೆಯನ್ನು ಬಿಂಬಿಸಿದರೆ ಗಂಡಹೆಂಡತಿಯ ನಡುವಿನ ಮೋಸ ನಂಬಿಕೆ ದ್ರೋಹಕ್ಕೆ ದೃಷ್ಟಾಂತವಾಗಿದೆ.
ಮಾನವ ಜಗತ್ತಿನ ಶಿಷ್ಟತೆ ಹಾಗೂ ದುಷ್ಟತೆ, ಪ್ರೀತಿ-ಸ್ನೇಹ ದ್ವೇಷ, ಅಸೂಯೆ, ಸಾಮಾಜಿಕ ರಾಜಕೀಯ ಸಂಗತಿಗಳು ಇವೆಲ್ಲವೂ ಶೇಕ್ಸಪಿಯರ್ ನಾಟಕಗಳಲ್ಲಿ ಪರಿಗಣಿಸಲ್ಪಡುವ ಪ್ರಮುಖ ವಿಚಾರಗಳು. ಆತನ ನಾಟಕದ ಪಾತ್ರಗಳು ಮಾನವ ಜಗತ್ತಿನ ಹಲವು ವ್ಯಕ್ತಿತ್ವಗಳಿಗೆ ನಿದರ್ಶನವಾಗಿ ಸಂಕೇತಗಳಾಗಿ ಮೂಡಿಬರುತ್ತವೆ.
–ನಾಗರೇಖ ಗಾಂವಕರ