ಬೆಳಗಿನ ಜಾವ ಮೂರು ಗಂಟೆಗೆ ಇರಬಹುದು, ನನ್ನ ಸೆಲ್ ಫೋನ್ ವೈಬ್ರೇಶನ್ ಮೋಡಲ್ಲಿ ಪತರಗುಟ್ಟುತ್ತಿತ್ತು. ಕರೆಯನ್ನು ಕಟ್ ಮಾಡಿದರೂ ಆ ಕಡೆಯ ಕರೆ ಬರುತ್ತಲೇ ಇತ್ತು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ನಾನು ಫೋನನ್ನು ರಿಸೀವ್ ಮಾಡಿ “ಹರಿ ಓಂ..” ಅಂದೆ. ಆ ಕಡೆಯಿಂದ ನನ್ನ ಮಿತ್ರ ಶಶಿಕುಮಾರ್ ಕಂಪಿಸುವ ಧ್ವನಿಯಲ್ಲಿ “ಸರ್ ಸ್ವಲ್ಪ ನಮ್ಮ ಮನೆಹತ್ರ ಬರ್ತೀರಾ? ನಿಮ್ಮ ಹತ್ರ ಮಾತಾಡಬೇಕು, ಬೇಗ ಬನ್ನಿ ಸಾರ್ ಎನ್ನುತ್ತಲೇ ಫೋನ್ ಕರೆಯನ್ನು ಕಟ್ ಮಾಡಿದರು. ನನ್ನ ಆತ್ಮೀಯ ಸ್ನೇಹಿತರಲ್ಲಿ ಶಶಿಕುಮಾರ ತುಂಬಾ ಸಭ್ಯ, ಜನಪರ ಕಾಳಜಿ, ಸಹಾಯಹಸ್ತ ನೀಡುವ ಗುಣಗಳನ್ನು ಮೈಗೂಡಿಕೊಂಡಿದ್ದ ಅಪರೂಪದ ವ್ಯಕ್ತಿ.
ಕೈಗೆ ಸಿಕ್ಕ ಟೀಶರ್ಟ್ ಹಾಕಿಕೊಂಡ ನಾನು ಶಶಿಕುಮಾರ ಮನೆಯ ಹತ್ತಿರ ದೌಡಾಯಿಸಿದೆ.ನನ್ನ ಮುಖ ನೋಡುತ್ತಲೇ ಶಶಿಕುಮಾರ ಗದ್ಗದಿತರಾಗಿ “ಸರ್ ಒಳ್ಳೆಯವರನ್ನು ದೇವ್ರು ಬೇಗ ಹತ್ತಿರ ಕರಸ್ಕೋಳ್ತಾನೆ” ಎನ್ನುತ್ತ ತಲೆಯ ಮೇಲೆ ಕೈಹೊತ್ತು ಕುಳಿತರು. ಇವರ ಮಾತುಗಳ ತಳಬುಡ ತಿಳಿಯದೇ, “ಏನಾಯ್ತು ಸರ್, ನಂಗೆ ಅರ್ಥ ಆಗ್ತಾ ಇಲ್ಲ ಸರಿಯಾಗಿ ಹೇಳಿ” ಎನ್ನುತ್ತ ಅವರ ಹೆಗಲಿನ ಮೇಲೆ ಕೈಯಿಟ್ಟೆ.
ಸ್ವಲ್ಪಹೊತ್ತು ಸಾವರಿಸಿಕೊಂಡ ನಂತರ ನನ್ನ ಮಿತ್ರ “ರಾಮನಾಥ ಹೋದ್ರು ಸರ್,ಒಂದು ಗಂಟೆ ಟೈಮಲ್ಲಿ” ಅನ್ನುತ್ತಿದ್ದಂತೆ, ನನಗೆ ನಿಂತ ನೆಲ ಕುಸಿದಂತೆ ಭಾಸವಾಯಿತು. ರಾಮನಾಥ ವಯಸ್ಸಿನಲ್ಲಿ ಅನುಭವದಲ್ಲಿ ಹಿರಿಯರು. ಎಪ್ಪತ್ತು ವರ್ಷ ವಯಸ್ಸಿನ ಪುಟಿಯುವ ಚೆಂಡಿನಂತಹ ಉತ್ಸಾಹಿ. ಆತ್ಮೀಯ ಮಿತ್ರ, ಮಾರ್ಗದರ್ಶಿ, ಜೀವನದ ಅನೇಕ ಏಳು-ಬೀಳುಗಳ ಮಗ್ಗುಲನ್ನು ಕಂಡವರು. ನನ್ನ ವಿಚಿತ್ರ ಪ್ರಪಂಚದ ಒಡನಾಡಿಗಳಲ್ಲಿ ರಾಮನಾಥ ಎಂದರೆ ಬೆಂಕಿಯಜ್ವಾಲೆಯಂತಹ ಕಠೋರ ಮನಸ್ಸಿನ, ನೇರನಡೆ-ನುಡಿಗಳುಳ್ಳ ಹಿರಿಯಮಿತ್ರರು.
ಕೈಲಾಸಂರಿದ ಮೊದಲುಗೊಂಡು ಕನ್ನಡದ ಸಾಹಿತ್ಯಲೋಕದ ದಿಗ್ಗಜರ ಕೃತಿಗಳನ್ನು ಓದಿಕೊಂಡವರು. ಸಮಯ ಸಿಕ್ಕಾಗಲೆಲ್ಲ ಅನೇಕ ಸಾಹಿತ್ಯ-ಸಾಹಿತಿಗಳ ಬಗ್ಗೆ ಗಂಟೆಗಟ್ಟಲೆ ಹರಟುತ್ತಿದ್ದೆವು. ನನಗೆ ಅವರ ಪರಿಚಯವಾದ ಬಗೆ ಬಲು ವಿಚಿತ್ರ. ಅದನ್ನೀಗ ಹೇಳುತ್ತೇನೆ ಕೇಳಿ…
ಅದೊಂದು ದಿನ ನನ್ನ ಸ್ನೇಹಿತರೊಂದಿಗೆ ಕಾಲಹರಣ ಮಾಡುವದಕ್ಕೆ ಮೈಸೂರು-ಊಟಿಗೆ ಪ್ರವಾಸ ಹೋಗಿದ್ದೆ. ಸಂಜೆ ಆರು ಗಂಟೆಗೆ ಬೆಂಗಳೂರಿನಿಂದ ಟೆಂಪೊಟ್ರಾವೆಲ್ಲರ್ ಒಂದರಲ್ಲಿ ಹತ್ತು ಜನ ಸ್ನೇಹಿತರು ಹೊರಟಿದ್ದೆವು. ಎಲ್ಲರೂ ಸಿಕ್ಕಾಪಟ್ಟೆ ತಲೆಹರಟೆ-ನಗೆಚಟಾಕಿಗಳನ್ನು ಹಾರಿಸುತ್ತ ಮದ್ದೂರ ಟಿಫಾನೀಸ್ ಹತ್ತಿರ ಗಾಡಿಯನ್ನು ನಿಲ್ಲಿಸಿದೆವು. ಯಲಹಂಕದಲ್ಲಿದ್ದ ನನ್ನ ಮಿತ್ರರಾದ ಶಶಿಕುಮಾರ ಕೂಡ ನಮ್ಮ ಜೊತೆಗೆ ಇದ್ದರು.ನಾವೆಲ್ಲರೂ ಟಿಫಾನೀಸ್ ಒಳಗೆ ಹೋದ ಸ್ವಲ್ಪ ಸಮಯದ ನಂತರ, ಶಶಿಕುಮಾರ್ ಬಿಳಿಗಡ್ಡದ ಆರಡಿ ಎತ್ತರದ ಅಜಾನುಬಾಹು ವ್ಯಕ್ತಿಯೊಬ್ಬನ ಜೊತೆ ನಾವಿರುವ ಕಡೆಗೆ ಬಂದರು. ತನ್ನ ಸಂಗಡ ಬಂದಿದ್ದ ವ್ಯಕ್ತಿಗೆ ನಮ್ಮೆಲ್ಲರ ಪರಿಚಯ ಮಾಡಿಸಿ,ಅವರಿಗೊಂದು ಛೇರನ್ನು ಎಳೆದು ಕೊಟ್ಟು, ನನಗೆ ಸ್ವಲ್ಪ ಹೊರಗೆ ಬರುವಂತೆ ಶಶಿಕುಮಾರ್ ಕರೆದರು.
ಹೊರಗೆ ಹೋಗಲು ನಾನು ಮೇಲೆಳುತ್ತಿದ್ದಾಗ ನಮ್ಮ ಗುಂಪಿನಲ್ಲಿದ್ದ ಸ್ನೇಹಿತನೊಬ್ಬ ನನ್ನ ಕಡೆಗೆ ನೋಡುತ್ತ “ರೀ ಕಲಾವಿದ್ರೆ, ಬೇಗ ಬನ್ರಿ ಟೈಮಾಯ್ತು, ಶಶಿ ಅಣ್ಣ ನಮ್ಮ ಕಲಾವಿದ್ರಿಗೆ ಕಾಡು-ಕವಿತೆ,ನದಿ ತೋರಿಸಬಾರದು, ಅಲ್ಲೇ ಸೆಟ್ಲ್ ಆಗ್ತಾರೆ ಅವರು” ಅನ್ನತೊಡಗಿದ್ದ.
‘ಕಲಾವಿದ’ ಎನ್ನುವುದು ನನ್ನ ಆತ್ಮೀಯ ಮಿತ್ರರು ನನ್ನನ್ನು ಪ್ರೀತಿಯಿಂದ ಗೋಳಾಡಿಸಲು ಕರೆಯುತ್ತಿದ್ದ ಹೆಸರು. ಹೋಟೆಲಿನಿಂದ ಹೊರಬಂದು,ಶಶಿಕುಮಾರ ಅವರತ್ತ “ಏನು..?” ಎನ್ನುವಂತೆ ಹುಬ್ಬುಹಾರಿಸಿದೆ “ಸರ್ ನನ್ನ ಸ್ನೇಹಿತ್ರು ಅವರು,ತುಂಬಾ ಒಳ್ಳೆಯ ಮನುಷ್ಯ, ನಮ್ಜೊತೆ ಅವರೂ ಬರ್ತೀನಿ ಅಂತಾ ಕೇಳ್ತಾ ಇದಾರೆ, ಗಾಡಿಯಲ್ಲಿ ಸೀಟು ಖಾಲಿ ಇದೆ, ನೀವು ಹೂಂ ಅಂದ್ರೆ ಯಾರೂ ಏನೂ ಅನ್ನಲ್ಲ, ಹೇಗೆ ಸರ್ ನಮ್ಜೊತೆ ಅವರು ಬರ್ಲೀ ಅಲ್ವಾ ಸರ್” ಎಂದು ಕೇಳಿದರು.
“ಸರಿ ಬರ್ಲಿ ಬಿಡಿ” ಎನ್ನುತ್ತಾ ಶಶಿಕುಮಾರಗೆ ತಲೆಯಲ್ಲಾಡಿಸಿದೆ. ಎಲ್ಲರೂ ಗಾಡಿಯನ್ನು ಹತ್ತಿದೆವು. ಶಶಿಕುಮಾರ ಹಾಗೂ ರಾಮನಾಥ ಇಬ್ಬರೂ ಒಂದೇ ಕಡೆಗೆ ಕುಳಿತಿದ್ದರು.ಅವರೀರ್ವರ ಮಾತು ಸಾಹಿತ್ಯದ ಸುತ್ತ ಗಿರಕಿಹೊಡೆಯುತ್ತಿದ್ದಾಗ, ಕಿವಿಯಗಲಿಸಿಕೊಂಡು ಕೇಳುತ್ತಿದ್ದ ನಾನು, ಉತ್ಸಾಹವನ್ನು ಹತ್ತಿಕ್ಕಲಾಗದೆ, ಎಸ್.ಎಲ್.ಭೈರಪ್ಪನವರ ‘ಪರ್ವ’ ಪುಸ್ತಕದ ಬಗ್ಗೆ ಆಗಾಗ ನನ್ನ ಅಭಿಪ್ರಾಯಗಳನ್ನು ಹೇಳತೊಡಗಿದೆ. ನನ್ನ ಸಾಹಿತ್ಯಾಸಕ್ತಿ ಗಮನಿಸಿದ ರಾಮನಾಥ್ ಅವರು “ನೀವು ನಿಜವಾಗಲೂ ಕಲಾವಿದ್ರೆ, ಬನ್ನಿ ಇವ್ರೇ ಸಾಹಿತ್ಯದ ಬಗ್ಗೆ ಮಾತಾಡೋಣ, ಸಾಹಿತ್ಯದ ಚಟ ಅನ್ನೋದು ಗಿಣ್ಣದಹಾಲು ಇದ್ದಂಗೆ ಎನ್ನುತ್ತ, ಸೀಗರೇಟೊಂದಕ್ಕೆ ಬೆಂಕಿ ತಾಗಿಸಿದರು. ಟೆಂಪೊಟ್ರಾವೆಲ್ಲರನ ಕೊನೆಯ ಸೀಟಿಗೆ ನಾವು ಮೂವರು ಆಸೀನರಾಗಿ ಹರಟೆ ಕೊಚ್ಚತೊಡಗಿದೆವು. ಸುಮಾರು ಇಪ್ಪತ್ತು ಕೀಲೋಮೀಟರ್ ದಾಟುವಷ್ಟರಲ್ಲಿ, ರಾಮನಾಥ ನನ್ನ ಕಿವಿಯಲ್ಲಿ “ಸ್ವಲ್ಪ ತೀರ್ಥ ಸಿಗೋ ಜಾಗದಲ್ಲಿ ಗಾಡಿ ನಿಲ್ಸೋಕೆ ಹೇಳ್ತಿರಾ ಕಲಾವಿದ್ರೆ” ಎಂದರು. “ಆಯ್ತು” ಎಂದು ನಾನು ಕತ್ತು ಅಲ್ಲಾಡಿಸಿದೆ. ಗಾಡಿಯಿಂದ ಕೆಳಗೆ ಇಳಿಯುತ್ತಿದ್ದ ರಾಮನಾಥ “ಏ ಹುಡಗ್ರಾ ಯಾರಗಾದ್ರು ತೀರ್ಥ ಬೇಕಾ?” ಎಂದು ಅವರು ಕೇಳಿದ್ದೆ ತಡ ಎಲ್ಲರೂ ತಮ್ಮ ಸೀಟಿನಿಂದ ಮೇಲೆದ್ದು,ಹ್ಯಾಪುಮೋರೆ ಹಾಕಿಕೊಂಡು, ನನ್ನ ಮುಖ ನೋಡುತ್ತ “ಸ್ವಲ್ಪ-ಚೂರು ಸಾಕು ಸರ್” ಎನ್ನುತ್ತ ಎಲ್ಲರೂ ಅವರನ್ನು ಹಿಂಬಾಲಿಸಿದರು. ನನ್ನ ಗದರಿಸುವಿಕೆ ಸ್ನೇಹಿತರ ಕಿವಿಗೆ ತಲುಪಲೇ ಇಲ್ಲ. ಎಲ್ಲರೂ ತಮಗೆ ಇಷ್ಟವಾದ ತೀರ್ಥದ ಬಾಟಲಿಗಳನ್ನು ತೆಗೆದುಕೊಂಡು ಗಾಡಿಯಲ್ಲಿ ಆಸೀನರಾದರು. ರಾಮನಾಥ ಒಳಗೆ ಬಂದು “ಬನ್ನಿ, ಈಗ ಶುರು ಹಚ್ಕೋಳಣಾ” ಎನ್ನುತ್ತ ಕಣ್ಣು ಮಿಟುಕಿಸಿದರು. ನಾನು ಸುಮ್ಮನೆ ಅವರ ಮುಖವನ್ನು ದಿಟ್ಟಿಸುತ್ತಿದ್ದಾಗ ರೆಡ್ ಲೇಬಲ್ ಬ್ರಾಂಡಿನ ಸೀಸೆಯನ್ನು ನನ್ನ ಮುಂದಿಟ್ಟರು. ಅವರ ಈ ಅನೀರಿಕ್ಷಿತ ಊಹಿಸುವಿಕೆಯ ಗುಣ ನನ್ನನ್ನು ಒಂದು ಕ್ಷಣ ತಬ್ಬಿಬಾಗಿಸಿತು. “ಸರ್ ನಿಮ್ಗೆ ಹೇಗೆ ಗೊತ್ತು ನಂಗೆ ಇದೇ ಬೇಕು ಅಂತ ಅಂದೆ” ನನ್ನ ಮಾತಿಗೆ ತಟ್ಟನೆ ಉತ್ತರವಿತ್ತರು ರಾಮನಾಥ. “ನೀವು ತುಂಬಾ ಸೂಕ್ಷ್ಮ, ಭಾವುಕಜೀವಿ.ನಿಮ್ಗೆ ಸಾಫ್ಟ್ ವಿಷಯ ಇಷ್ಟ ಆಗುತ್ತೆ ಅಂತ ಅನ್ಕೊಂಡೆ” ರಾಮನಾಥರ ಉವಾಚ.
ತೀರ್ಥದ ಮಹಿಮೆಯಿಂದ ಎಲ್ಲರೂ ಮಿಂಚು-ಗುಡುಗುಗಳ ಅಪರಾವತಾರವಾಗಿದ್ದರು. ಅಲ್ಲಿ ಹಾಡು-ಕೇಕೆ, ನಗೆಚಟಾಕಿಗಳೊಂದಿಗೆ ಅದ್ಭುತವಾದ ಲೋಕವೇ ನಿರ್ಮಾಣವಾಗಿತ್ತು. ಎಲ್ಲರೂ ಮನಸ್ಸಿನ ಒಳಗಡೆ ಇರುವ ರಂಗು-ರಂಗಾದ ಮಾತುಗಳನ್ನು ಉದುರಿಸತೊಡಗಿದ್ದರು. ಇದ್ದಕ್ಕಿದ್ದಂತೆ ಮೂಲೆಯೊಂದರ ಸೀಟಲ್ಲಿ ಕುಳಿತಿದ್ದ ಗುಂಪಿನಲ್ಲಿದ ಭಗ್ನಪ್ರೇಮಿಯೊಬ್ಬ ಗಳಗಳನೆ ಅಳತೊಡಗಿದ. ಆತನ ಸ್ಥಿತಿಯನ್ನು ಕಂಡ ನಾವೆಲ್ಲರೂ ಆತನನ್ನು ಸಂತೈಸುತ್ತಿದ್ದಾಗ, ಧುತ್ತನೆ ಅಲ್ಲಿಗೆ ಬಂದ ರಾಮನಾಥ ಆತನ ಕೆನ್ನೆಗೆ ಛಟೀರನೆ ಬಾರಿಸಿದರು! ಅನೀರಿಕ್ಷಿತವಾದ ಈ ಬೆಳವಣಿಗೆಯಿಂದ ಎಲ್ಲರೂ ಕಕ್ಕಾಬಿಕ್ಕಿಯಾಗಿ ಒಬ್ಬರ ಮುಖವನ್ನು ಮತ್ತೊಬ್ಬರು ನೋಡತೊಡಗಿದೆವು. “ಲೇ ಗೂಬೆ ಯಾವದೋ ಒಂದು ಹುಡ್ಗಿ ಸಿಕ್ಕಿಲ್ಲ ಅಂತ, ಜೀವನ ಹಾಳ್ ಮಾಡ್ಕೋತೀಯಾ, ಆ ಹುಡ್ಗಿ ಬಗ್ಗೆ ನೀನು ಯೋಚ್ನೆ ಮಾಡಿದಷ್ಟು ನಿಮ್ಮ ಅಪ್ಪ-ಅಮ್ಮನ ಬಗ್ಗೆ ಯೋಚ್ನೆ ಮಾಡಿದ್ರೆ ಉಧ್ಧಾರ ಆಗ್ತಾ ಇದ್ದೆ ಕಣೋ ಬೇವರ್ಸಿ, ಜೀವನ ಅಂದ್ರೆ ಕಳ್ಳೆಪುರಿ ಅಲ್ವೋ ರಾಸ್ಕಲ್, ಕಷ್ಟ ಅಂದ್ರೆ ನಿಂಗೇನು ಗೊತ್ತು, ಎಳಸು ನನ್ನ ಮಗನೆ” ರಾಮನಾಥರ ಬಾಯಿಂದ ಕಟುಸತ್ಯದ ಮಾತುಗಳು ಹೊರಬಿದ್ದಿದ್ದವು.
ಆ ದಿನ ರಾತ್ರಿ ಎಲ್ಲರೂ ಮಂಕುಬಡಿದವರಂತೆ ಸುಮ್ಮನೆ ಕುಳಿತಿದ್ದೆವು. ಮಾರನೇ ದಿನ ರಾಮನಾಥರನ್ನು ಎಲ್ಲರೂ ತುಸು ತಿರಸ್ಕಾರ ದೃಷ್ಠಿಯಿಂದ ನೋಡತೊಡಗಿದೆವು. ಕಾರಣ ಅವರ ಖಾರವಾದ ಮಾತುಗಳು, ಬೇರೆಯವರ ದುಃಖಕ್ಕೆ ಸ್ಪಂದಿಸದ ಅವರ ಮನೋಸ್ಥಿತಿ, ಎಲ್ಲರಲ್ಲೂ ರೇಜಿಗೆ ಹುಟ್ಟಿಸಿತ್ತು. ಸರಿಯಾಗಿ ಯಾರೂ ಅವರೊಂದಿಗೆ ಬೆರೆಯದೆ ಮೂರು ದಿನಗಳ ಟ್ರಿಪನ್ನು ಮುಗಿಸಿ, ಕೊನೆಗೆ ರಾಮನಗರಕ್ಕೆ ಬಂದಾಗ,ಡ್ರೈವರ್ ಸೀಟಿಗೆ ಬೆನ್ನುಕೊಟ್ಟು ನಿಂತುಕೊಂಡು, ನಮ್ಮೆಲ್ಲರ ಕಡೆಗೆ ನೋಡುತ್ತ ಸೀಗರೇಟಿಗೆ ಬೆಂಕಿ ತಾಗಿಸಿದ ರಾಮನಾಥ, “ಸಾರಿ ಫ಼್ರೆಂಡ್ಸ್ ನಿಮ್ಮ ಮನಸ್ಸಿಗೆ ನಾನು ತುಂಬಾ ನೋವು ಮಾಡ್ದೆ, ಆದರೆ ಒಂದು ಮಾತು,ಕಷ್ಟ ಯಾರಿಗೆ ಇಲ್ಲ ಹೇಳಿ,ಎಲ್ಲರಿಗೂ ಇದೆ,ಹಾಗಂತ ಅಳ್ತಾ ಕೂತ್ರೆ ಸರಿ ಹೋಗತ್ತಾ? ನೆಲಗುದ್ದಿ ನೀರು ತೆಗಿಯೋ ವಯಸ್ಸಲ್ಲಿ ನೀವು ಹುಡುಗ್ರು ಹಿಂಗೆಲ್ಲಾ ಅಡ್ಡಕಸುಬಿ ತರ ಜೀವನ ಮಾಡ್ಕೊಂದ್ರೆ ಹೆಂಗೆ, ಜೀವನ ಎದುರಿಸಿ, ಗುರಿ ಇಟ್ಕೊಂಡು ಬಾಳಿ, ನಿಮ್ಮ ಹೆತ್ತವರ ಋಣ ತೀರಸಿ, ನಂಗೆನೂ ಕಷ್ಟ ಇಲ್ಲ ಅನ್ಕೊಂಡ್ರಾ, ಐದು ವರ್ಷದ ಹಿಂದೆ ಬೈಕ್ ಆಕ್ಸಿಡೆಂಟಲ್ಲಿ ನನ್ನ ಮಗ ತೀರ್ಕೊಂಡ, ಆ ದುಃಖ ಕಳೆಯೋದ್ರಲ್ಲಿ, ಹದಿನೈದು ದಿವ್ಸದ ಹಿಂದೆ ನನ್ನ ಮಗಳು-ಹೆಂಡ್ತಿ ಹರಿದ್ವಾರಕ್ಕೆ ಟ್ರಿಪಗೆ ಹೋಗಿದ್ದಾಗ ಹಿಮಗಡ್ಡೆ ಮುಚ್ಚಿ ಸತ್ತುಹೋದ್ರು, ನಿಮ್ಗೆ ಸಿಕ್ಕಿದ ದಿನ ಅವರ ತಿಥಿ ಶ್ರೀರಂಗಪಟ್ಟಣದಲ್ಲಿ ಮಾಡಿ ಬಂದಿದ್ದೆ, ನಾನು ತುಂಬಾ ಸುಖವಾಗಿದೀನಿ ಅಂತ ಅನ್ಕೊಂಡ್ರಲ್ಲ, ಈಗ ಹೇಳಿ ಯಾರು ನಿಜವಾಗ್ಲೂ ಕಳಕೊಂಡಿರೋರು, ದುಃಖ ಯಾರಿಗೆ ಜಾಸ್ತಿ ಇದೆ ಅಂತ..?” .ಈ ಮಾತುಗಳನ್ನು ಕೇಳಿದ ಎಲ್ಲರ ಕಣ್ಣಲ್ಲೂ ನೀರು ಚಿಮ್ಮತೊಡಗಿತು. ಕೊನೆಗೆ ಎಲ್ಲರೂ ರಾಮನಾಥರ ಧೈರ್ಯ-ಕಷ್ಟವನ್ನು ಎದುರಿಸಿ ಬದುಕುತ್ತಿರುವ ರೀತಿಯನ್ನು ಕಂಡು ಮರುಗಿದೆವು.
ಇಂತಿಪ್ಪ ರಾಮನಾಥ ಹಾಗೂ ನನ್ನ ಒಡನಾಟ ಇನ್ನೂ ಆಪ್ತವಾಗತೊಡಗಿತು. ಆ ದಿನ ಗಾಡಿಯಲ್ಲಿ ಅಳುತ್ತಿದ್ದ ಆ ಹುಡುಗನಿಗೆ ರಾಮನಾಥರು ತಮ್ಮಪರಿಚಯದ ಕಂಪನಿಯೊಂದರಲ್ಲಿ ಕೆಲಸವನ್ನು ಕೊಡಿಸಿ,ತಮ್ಮ ಸ್ವಂತ ಖರ್ಚಿನಲ್ಲಿ ಆ ಹುಡುಗನ ಮದುವೆಯನ್ನು ಮಾಡಿದರು.ಅನೇಕ ಜನ ಬಡಬಗ್ಗರಿಗೆ ಸಹಾಯ ಮಾಡುತ್ತಿದ್ದ ರಾಮನಾಥರು ಕೊನೆಗೊಂದು ದಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಕೆಲವು ತಿಂಗಳುಗಳ ನಂತರ ಚೇತರಿಕೊಂಡಿದ್ದ ಅವರು,ಕಾಲೆಳೆದುಕೊಳ್ಳುತ್ತ ಅತ್ತಿತ್ತ ತಿರುಗಾಡುತ್ತಿದ್ದರು.ಬಹುಶಃ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿತ್ತೇನೋ,ಕಟ್ಟಕಡೆಯದಾಗಿ ತಮ್ಮ ಹೆಸರಿನಲ್ಲಿದ್ದ ಸ್ಥಿರ-ಚರಾಸ್ಥಿಗಳನ್ನು ಅನಾಥಾಶ್ರಮವೊಂದಕ್ಕೆ ದೇಣಿಗೆ ರೂಪದಲ್ಲಿ ಬರೆದುಕೊಟ್ಟಿದ್ದರು. ಪ್ರತಿನಿತ್ಯದಂತೆ ಅವರು ಕೊನೆಯುಸಿರು ಎಳೆಯುವ ದಿನ ನನ್ನ ಸ್ನೇಹಿತ ಶಶಿಕುಮಾರನೊಂದಿಗೆ ರಾತ್ರಿ ಹನ್ನೆರಡು ಗಂಟೆಯವರೆಗೂ ಹರಟುತ್ತ, ಕೆಲವು ಪುಸ್ತಕಗಳನ್ನು ಆತನ ಕೈಗಿತ್ತು, ಅದನ್ನು ನನಗೆ ತಲುಪಿಸುವಂತೆ ತಿಳಿಸಿದ್ದರಂತೆ.ಒಂದು ಗಂಟೆಗೆ ರಾಮನಾಥರ ಮನೆಯಿಂದ ಜೋರಾಗಿ ಕಿರುಚಿದ ಶಬ್ದ ಕೇಳಿ ಅವರ ಪಕ್ಕದ ಮನೆಯಲ್ಲಿದ್ದವರು ಧಾವಿಸಿಬಂದು ನೋಡಿದಾಗ,ರಾಮನಾಥರ ಪ್ರಾಣಪಕ್ಷಿ ಹಾರಿಹೋಗಿತ್ತು.
ತೆರೆದ ಕಣ್ಣುಗಳು…ಹಾಸಿಗೆಯ ಪಕ್ಕದಲ್ಲಿ ಬಿದ್ದಿದ್ದ ಸೀಗರೇಟಿನ ತುಂಡುಗಳು ನನ್ನನ್ನು ಅಣಕಿಸುತ್ತಿದ್ದವು..
-ರಮೇಶ್ ಕುಲಕರ್ಣಿ
ಕಥೆ ಚೆನ್ನಾಗಿದೆ. ಕುಶಿ ಕೊಟ್ಟ ವಿಷಯ ರಾಮನಾಥರು ನಿಮ್ಮ ಗೆಳೆಯನಿಗೆ ಕಪಾಳ ಮೋಕ್ಷ ಮಾಡಿದ್ದು.
(ಒಂದು ಹುಡುಗಿ /ಗ ಕೈ ಕೊಟ್ಟಳು /ನು ಎಂದು ಅಳುತ್ತಾ ತಮ್ಮ ಜೀವನ ಹಾಳು ಮಾಡುವವರಿಗೆ ಸರಿಯಾದ ಪಾಠ ಅದು. ತಮ್ಮ ಸಂಗಾತಿಗೆ ಇಲ್ಲದ ಆ ಸೆಂಟಿಮೆಂಟ್ಸ್, ತಮ್ಮಲ್ಲಿ ಯಾಕೆ ಇರಬೇಕು ಎಂದು ಯೋಚಿಸಬೇಕು.)
ರಾಮನಾಥವರು ಇರುವುದು ಬರೇ ಕಥೆಗಳಲ್ಲಿ, ಸಿನೇಮಾ, ನಾಟಕಗಳಲ್ಲಿ ಮಾತ್ರ ಎಂದು ನನ್ನ ಅನಿಸಿಕೆ.
ಕಥೆ ತುಂಬಾ ಆಪ್ತವಾಗಿದೆ. ಉತ್ತಮವಾದ ಶೀರ್ಷಿಕೆಯೇ ಕಥೆಯ ಕುರಿತಾದ ಕುತೂಹಲ ಹುಟ್ಟಿಸುತ್ತದೆ. ಬೇಜವಾಬ್ದಾರರಂತೆ ವರ್ತಿಸುವ ಯುವ ಸಮುದಾಯಕ್ಕೆ ಮಾರ್ಗದರ್ಶಿಯಾಗಿದೆ.
ಪರಿಣಾಮಕಾರಿ ಬರವಣಿಗೆ, ಚೆನ್ನಾಗಿದೆ ಸರ್
Chenagidhe nimma lekana
Yuvakaru odale bekadantha lekana
ಚನ್ನಾಗಿದೆ
ಚೆನ್ನಾಗಿದೆ ಕಥೆ, ಹಿಡಿಸಿತು. ರಾಮನಾಥರು ಮನಸ್ಸಿನಲ್ಲುಳಿದರು.
– ಪ್ರಸಾದ್.ಡಿ.ವಿ.
ಕಥೆ ತುಂಬಾ ಇಷ್ಟ ಆಯ್ತು …