ಪ್ರೀತಿಯ ದಡ್ಡ
ಒಂದೊಂದು ಬಾರಿ ನಿನ್ನ ಬಗ್ಗೆ ಯೋಚಿಸುತ್ತಿರುವಾಗ ನಾನ್ಯಾರೆಂಬುದನ್ನೇ ಮರೆತುಬಿಡುತ್ತೇನೆ..ನನ್ನ ಹೃದಯದ ಗೂಡಿನಲಿ ಆವರಿಸಿರುವ ಪ್ರೀತಿಯು ನೀನು..ನನ್ನ ಬಗೆಗೆ ಯೋಚಿಸುವುದನ್ನೇ ಮರೆತು ಬಿಟ್ಟಿರುವ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿರಬಹುದು ಎಂದು ನಿನಗೂ ಗೊತ್ತಲ್ವಾ?ಅದೆಷ್ಟೋ ಸಾವಿರ ಕನಸು ನಂಗೆ. ನಿನ್ನ ಬಗೆಗೆ.. ಪ್ರತೀ ಬಾರಿಯೂ ನಿನ್ನ ಜೊತೆ ಮಾತನಾಡುವಾಗಲೂ ಇನ್ನೂ ಏನೋ ಹೇಳಬೇಕು. ಕೇಳಬೇಕು. ಭಾವನೆಯ ಹಂಚಿಕೊಳ್ಳಬೇಕೆನ್ನಿಸುವುದುಂಟು. ಹಠಮಾರಿ ಹುಡುಗಿ ನಾನು.. ನನ್ನೀ ಜೀವನದ ಪ್ರತೀ ಕ್ಷಣವೂ ನಿನ್ನನ್ನೇ ಪ್ರೀತಿಸುತ್ತಾ, ಹೇಳಿಕೊಳ್ಳಲಾಗದ ಎಷ್ಟೇ ವಿಷಯಗಳಿದ್ದರೂ ನಿನ್ನ ಹತ್ತಿರ ಎಲ್ಲ ವಿಷಯವನ್ನೂ ಹೆಳಿಕೊಳ್ಳುವ ಆಸೆ.. ಈ ಸಂಬಂಧವೆಂದರೆ ಹಾಗಲ್ವಾ ನೀ ಸಿಕ್ಕ ದಿನದಿಂದ ಜೀವನದಲ್ಲಿ ನಗುವು ಎನ್ನುವುದು ನಿರಂತರ ಜಲಧಾರೆಯಾಗಿಬಿಟ್ಟಿದೆ ಅಷ್ಟು ಖುಷಿಯಾಗಿ ಇರುತ್ತೇನೆ. ಗೆಳೆಯಾ ಎಲ್ಲರೂ ಹೇಳುವಂತೆ ನಮ್ಮ ಪ್ರೀತಿಯು ಕುರುಡಲ್ಲ.. ಅದಕ್ಕೆ ಹೃದಯದ ಕಣ್ಣುಗಳಿವೆ. ಕಾಗದದ ರಾಕೆಟ್ ಮಾಡಿ ನನ್ನ ಹೆಸರು ಬರೆದು ಕಳುಹಿಸಿದರೆ ನಿನಗೆ ಬಂದು ತಲುಪಬಹುದೇ ಎಂದು ಆಲೋಚಿಸುತ್ತಿರುವೆ.. ಇಲ್ಲದಿದ್ದರೆ ಪಾರಿವಾಳಕ್ಕೆ ಕೊಟ್ಟು ಕಳುಹಿಸಬೇಕೆನ್ನುವ ಆಸೆಯಿದ್ದರೂ ಅದು ನಿನಗೆ ಬಂದು ತಲುಪಬೇಕಲ್ಲ. ಮೋಡದಲ್ಲಿ ಬರೆದು ಕಳುಹಿಸಲೇ..? ಹಾಂ ..ಅದೇನು ಬರೆದು ಕಳಿಸುತ್ತೀಯಾ ಎಂದು ಯೋಚಿಸುತ್ತಿರುವೆಯಾ?? ನಿನಗೆ ಹೇಳಬೇಕಾದದ್ದು, ನಿನ್ನಲ್ಲಿ ಬೇಡಿಕೊಳ್ಳುವುದು ತುಂಬಾನೇ ಇದೆ ಗೆಳೆಯಾ..
ಪ್ರತೀ ಘಳಿಗೆಯು, ಪ್ರತೀ ಕ್ಷಣವೂ ನಿನ್ನ ನೆನಪಿನಲ್ಲೇ ಭಾವಗೀತೆಯನ್ನು ಹಾಡುತ್ತೇನಾದರೂ ನಿನ್ನೊಂದಿಗೆ ಪದೇ ಪದೇ ಮಾತನಾಡಬೇಕೆನ್ನುವ ಆಸೆ.. ಈ ಸಂಬಂಧ ಎನ್ನುವುದು ಎಷ್ಟು ದೊಡ್ಡ ಬೆಸುಗೆ ಅಲ್ಲವಾ? ನಿನಗಾಗಿ ಕಾಯುವ ಪ್ರತೀ ಘಳಿಗೆಗೆ ಏನೆಂದು ಹೆಸರು ಕೊಡಲಿ. ಕಾಲವು ಅರ್ಥಮಾಡಿಕೊಂಡು ಬಾಳುವುದರೊಳಗೇ ಸರಸರನೇ ಮುಂದೆ ಸಾಗುತ್ತಿರುತ್ತೆ.. ಪ್ರೀ ಬಾರಿಯೂ ನಿನ್ನ ಜೊತೆ ಮಾತನಾಡಬೇಕೆಂದುಕೊಂಡಾಗಲೂ ನಿನ್ನ ಬ್ಯೂಸಿ ಅನ್ನೋ ಶಬ್ದ ನನಗೆ ಅಸಾಧ್ಯ ನೋವನ್ನುಂಟು ಮಾಡುತ್ತೆ ನನಗೂ ಗೊತ್ತು ಗೆಳೆಯಾ ಎಲ್ಲಾ ಸಮಯದಲ್ಲೂ ಮಾತನಾಡುತ್ತಾ ಕುಳಿತರೆ ಕೆಲಸ ಮಾಡುವವರು ಯಾರು ಅಂತಆ॒ದರೆ ಈ ನನ್ನ ಮನಸ್ಸಿಗೆ ಗೊತ್ತಿರಬೇಕಲ್ಲ.. ಅದೆಷ್ಟು ಹಠ ಮಾಡುತ್ತವೆಯೆಂದರೆ ಪುಟ್ಟ ಮಗುವು ಅಮ್ಮನನ್ನು ಸ್ವಲ್ಪ ಹೊತ್ತು ಕಾಣದೇ ಇದ್ದರೂ ಹೇಗೆ ಹಠ ಮಾಡುತ್ತವೋ ಹಾಗೆ..ನನಗೆ ನೀನು ತಿಂಗಳು ತಿಂಗಳು ಲಕ್ಷಗಟ್ಟಲೆ ದುಡಿಯುವುದಕ್ಕಿಂತ ನನ್ನ ಜೊತೆ ಸಮಯವನ್ನು ಕಳೆದರೆ ಅದರ ಮುಂದೆ ಎಲ್ಲವೂ ಸಣ್ಣವಾಗಿಬಿಡುತ್ತೆ.. ನಾ ಕಳೆಯೋ ದಿನಗಳಿಗಿಂತ ಕಳೆಯುವ ದಿನಗಳೇ ಹೆಚ್ಚಿರುವಾಗ ನಿನ್ನ ಸಮಯ ನನಗೆ ಅದೆಷ್ಟು ಅಮೂಲ್ಯವಾದದ್ದು ಎಂದು ಊಹಿಸಿರುವೆಯಾ.ಯಾವುದೋ ಒಂದು ಸೇತುವೆಯು ನಮ್ಮ ನಡುವೆ ಕಟ್ಟಿರುವಾಗ ನದಿಯಂತೆ ಸರಾಗವಾಗಿ ಸಾಗಬೇಕಲ್ಲವೇ?? ನೀನು ಕೆಲವೊಂದು ಬಾರಿ ಹೇಳುವುದನ್ನು ಕೇಳಿದ್ದೇನೆ. ಜೀವನದಲ್ಲಿ ಸಾಧನೆ ಮಾಡಬೇಕು. ಎಂದು ಆದರೆ ಎಷ್ಟು ಹಣ ದುಡಿದರೂ ಅದೆಲ್ಲಕ್ಕಿಂತಲೂ ನೀ ಕೊಡುವ ಪ್ರೀತಿಯು ನನಗೆ ಸಾಕು.. ಹಣ ಬೇಕು ಆದರೆ ಹಣವೊಂದೇ ಜೀವನವಲ್ಲ ಗೆಳೆಯಾ.. ದಿನಕಳೆದಂತೆ ಕೆಲಸದಲ್ಲಿ ನೀಬ್ಯೂಸಿಯಾಗಿರುತ್ತೀಯಾ ಎತ್ತರ ಸ್ಥಾನಕ್ಕೆ ಹೋದಂತೆಲ್ಲಾ ಇನ್ನಷ್ಟು ಬ್ಯೂಸಿ.. ಆಗ ನನಗೆ ಹೆದರಿಕೆಯೇ ಆಗುವುದು ನಿನ್ನ ಬ್ಯೂಸಿ ಲೈಫಿನ ನಡುವೆ ನನಗೆ ಸಮಯವನ್ನೇ ಕೊಡದಿದ್ರೆ, ನನ್ನ ಭಾವನೆಗಳು ಅದರ ಅಸ್ತಿತ್ವವನ್ನು ಕಳೆದುಕೊಂಡರೆ ಎಂದೆಲ್ಲಾ ಅನಿಸುತ್ತೆ.. ಹೇಗೆ ಅರ್ಥ ಮಾಡಿಸಲಿ ನಿನಗೆ ನನ್ನೀ ಮುಗ್ಧ ಮನಸ್ಸನ್ನು..? ನಿನ್ನ ದಿನದ ಇಪ್ಪತ್ನಾಲ್ಕು ಘಂಟೆಯಲ್ಲಿ ನನಗಾಗಿ ಎರಡು ಘಂಟೆಯನ್ನಾದರೂ ಕೊಡುವೆಯಾ ಗೆಳೆಯಾ.. ಪ್ರತೀ ಬಾರಿಯೂ ನಿನ್ನೊಂದಿಗೆ ಸಿಟ್ಟು, ಜಗಳ ಮಾಡಿಕೊಳ್ಳುತ್ತೇನಾದರೂ ಎಂದಿಗೂ ನಿನ್ನ ಬಗೆಗೆ ಬೇಸರ ಎಂಬುದು ಇಲ್ಲವೇಇಲ್ಲ.
ನಿನಗೆ ಬಾರಿ ಬಾರಿ ಬೇಡಿ ಕೊಳ್ಳುವೆ ಸಂಬಂಧಗಳು ಒಂದು ಬಾರಿ ನಮ್ಮ ಅದೃಷ್ಟದಿಂದ ಸಿಕ್ಕಿರುತ್ತೆ.. ಅರ್ಥಮಾಡಿಕೊಳ್ಳುವವರು ಪ್ರೀತಿಸುವವರು ಎಂದಿಗೂ ಎಲ್ಲರಿಗೂ ಸಿಗಲಾರವು.. ಸಿಕ್ಕ ಒಂದು ಜೀವನದಲ್ಲಿ ಈ ಪ್ರೀತಿಯು ಎಲ್ಲರಿಗೂ ಸಿಗುವುದಿಲ್ಲ.. ಅದನ್ನು ಎಂದಿಗೂ ಕಳೆದುಕೊಳ್ಳಬಾರದೆಂದರೆ ಕೆಲಸದ ಜೊತೆಗೆ ಆ ಬಾಂಧವ್ಯಕ್ಕೂ ಬೆಲೆಕೊಡಬೇಕು ಅಲ್ವಾ?? ಇನ್ನೇನನ್ನೂ ಕೇಳಲಾರೆನು ಗೆಳೆಯಾ ನಿನ್ನ ಪ್ರೀತಿ ಜೊತೆಗೆ ನಿನ್ನ ಸಮಯವನ್ನು ದಿನದಲ್ಲಿ ಕೆಲವೊಂದು ನಿಮಿಷವಾದರೂ ನನಗಾಗಿ ಮೀಸಲಿಡುವೆಯಾ??
ಇಂತಿ ನಿನ್ನ ಪ್ರೀತಿಯ
ಅನಾಮಿಕ
*****
ದುಡ್ಡಿನ ಮುಂದೆ ಸಮಯಕ್ಕೆಲಿದೆ ಬೆಲೆ.
ಪ್ರೀತಿ ಮಳ್ಳು. ಚೆನ್ನಾಗಿದೆ ಬರಹ.
ಚೆಂದಿದ್ದು ಪದ್ಮಾ.. ಆದ್ರೂ ನಿನ್ನ ಭಾವಗಳ ಬಂಡಿ ಈ ಸಲ ಮುಕ್ಕಾಲು ದಾರಿಗೆ ನಿಂತಂಗೆ ಅನಿಸ್ತು..
ಇನ್ನೊಂಚೂರೇ ಚೂರು ಸಮಯ ಬೇಕಿತ್ತಾ ? ಗೊತ್ತಿಲ್ಲೆ 🙂