ಧ್ವಜ ಹಾರಿ ಪಾರಿವಾಳವಾಗಿ: ಪ್ರವೀಣ

೬೭ನೆಯ ಸ್ವಾತಂತ್ರ್ಯ ದಿನಾಚಾರಣೆಯ ಬೆಳಿಗ್ಗೆ ಎಂಟೂವರೆಗೆ ಕಣ್ಣೂರಿನ ಇತಿಹಾಸದಲ್ಲಿ ಅಸ್ತಿತ್ವವೇ ಇಲ್ಲದ ಜಾಲಪ್ಪ ಹೀಗೆ ಏಕಾಏಕಿ ಗೊಂದಲದಲ್ಲಿ ಸ್ಥಿಮಿತ ಕಳೆದುಕೊಂಡ ಜನಜಂಗುಳಿಯಲ್ಲಿ ಗೂಳಿಯಂತೆ ನುಗ್ಗಿ ತೋರಿದ ಧೈರ್ಯಕ್ಕೆ, ಮೆರೆದ ಸಾಹಸಕ್ಕೆ ಪೊಲೀಸ್ ಕೈಕೋಳ ತೊಡಿಸಿದರೆ ಊರಜನತೆ ಕರತಾಡನ ಜಯಕಾರಗಳಲ್ಲಿ ದುಮುದುಮಿಸಿತು.  

ಜಾಡರ ಜಾಲಪ್ಪನ ಕೈಗೆ ಪೊಲೀಸರು ಕೈಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆಯೋಪಾದಿಯಲ್ಲಿ ಅವನನ್ನು ಎಳೆದೊಯ್ಯುತ್ತಿದ್ದಾರೆಂಬ ಸುದ್ದಿ ಶರವೇಗದಲ್ಲಿ ಊರಿನ ಮೂಲೆಮೂಲೆಗಳಲ್ಲಿ ತಲುಪಿದರೆ ಅವನ ಜೋಕುಗಳನ್ನು ಗುಲಾಬ ಜಾಮೂನಿನಂತೆ ನುಂಗಿ ನಕ್ಕು ನಲಿದವರೂ ನಂಬುತ್ತಿರಲಿಲ್ಲ, ಬೆಳಿಗ್ಗೆ ಭಾಂಡೆ ತಿಕ್ಕಿ, ಕಸ ಮುಸುರೆ ಮುಗಿಸಿ, ಸಕಲ ಅಡುಗೆಗಳನ್ನು ತಯಾರಿಸಿ, ಒಂಬತ್ತು ಗಂಟೆಗೆ ತನ್ನ ಮೂವರೂ ಮಕ್ಕಳನ್ನು ಶಾಲೆಗೆ ಕಳಿಸಿ ಕೈಮಗ್ಗದ ಮೇಲೆ ಕುಳಿತನೆಂದರೆ ಏಳುವುದು ಎಲ್ಲರೂ ಮಲಗಿದ ಮೇಲೆ ಎಂದು ಕರುಬುವವರೂ, ಹೆಂಗ್ಸೂ ಎಂದು ಹಂಗಿಸಿ ನಗುವವರೂ ನಂಬಲು ತಯಾರಿರಲಿಲ್ಲ.  ಚೊರಚೊರ ಬಿಸಿಲಿಗೂ ಒಣಗಲು ಧಿಮಾಕು ತೋರಿಸುತ್ತಿರುವ ಅವನ ಮೈತುಂಬ ಮೆತ್ತಿರುವ ಗಟಾರಿನ ರಾಡಿಯ ಮುಜುಗರದಲ್ಲೂ ತಾನೇ ಸ್ವಾತಂತ್ರ್ಯ ಹೋರಾಟಗಾರ ಎಂಬಂಥ ಹಮ್ಮಿನಲ್ಲಿ ಎದೆಯುಬ್ಬಿಸಿ ದಾಪುಗಾಲು ಹಾಕುತ್ತ ನಡೆಯುತ್ತಿರುವ ಅವನನ್ನೇ ಜನ ತದೇಕಚಿತ್ತದಿಂದ ಗಮನಿಸುತ್ತಿರುವುದನ್ನು ಮನಗಂಡು ಅವನನ್ನು ಬಂಧಿಸಿ ದೊಡ್ಡ ಸಾಹಸ ಮಾಡಿದೆವು ಎಂದು ಬೀಗುತ್ತಿದ್ದ ಅವನ ಇಕ್ಕೆಲದ ಪೊಲೀಸರಿಗೆ ಝಗ್ಗನೆ ಸಿಟ್ಟು ಬಂದು ಅವನ ಉಬ್ಬಿದ ಎದೆಗೆ ತಮ್ಮ ಲಾಟಿಯಿಂದ ಒಂದೊಂದು ಏಟು ಕೊಟ್ಟರು.  ತನ್ನ ತಾಯ್ನೆಲಕ್ಕಾಗಿ ಪ್ರಾಣಾರ್ಪಣಗೈಯ್ಯಲು ಹೊರಟಿರುವ ಭಗತ್ ಸಿಂಗನ ಅವತಾರವನ್ನೇ ಆ ಚಣದಲ್ಲಿ ಆವಾಹಿಸಿಕೊಂಡಿರುವ ಜಾಲಪ್ಪನಿಗೆ ನೋವಾದರೂ ಅವ ಎದೆಗುಂದಲಿಲ್ಲ. ಆಪಾದಮಸ್ತಕ ಕೊಳಚೆಯ ಅಭಿಷೇಕದಿಂದ ಒಸರುತ್ತಿದ್ದ ಸಹಿಸಲಸದಳ ದುರ್ವಾಸನೆಯನ್ನು ಸಹಿಸಿಕೊಂಡೇ ಯಾರಾದರೂ ತಮ್ಮನ್ನು ನೋಡಿಯಾರು ಎಂಬ ಆಸೆಗಂಗಳಿಂದ ಅತ್ತಿತ್ತ ಮಿಕಿಮಿಕಿ ನೋಡುತ್ತಿರುವ ಪ್ಯಾದೆಗಳಿಗೆ ತೃಣಮಾತ್ರ ಗೌರವಸಿಗದೇ ಸಿಟ್ಟಿನಿಂದ ಭುಗಿಲೇಳುತ್ತಿದ್ದ ಅಗ್ನಿಕುಂಡಕ್ಕೆ ತುಪ್ಪವನೆರೆದಂತೆ ಯಾರೋ ದೂರದಿಂದ ಜಾಡರ ಜಾಲಪ್ಪನಿಗೆ ಎಂದು ಗಟ್ಟಿದನಿಯಲ್ಲಿ ಚೀರಿದ್ದಕ್ಕೆ ಮತ್ಯಾವುದೋ ದನಿಗಳು ಜಯವಾಗಲಿ ಎಂದು ಒಕ್ಕೊರಲಿನಿಂದ ಒದರಿದವು. ಅದರಿಂದ ಹುರುಪುಗೊಂಡ ಮತ್ಯಾರೋ ಜಯಕಾರ ಹಾಕಿದರು.  ನೋಡುನೋಡುವುದರೊಳಗೆ ಅಲ್ಲಿ ನೆರೆದ ಸಕಲ ಜನಸ್ತೋಮವೂ ಜಾಲಪ್ಪನ ಜಯಕಾರದಲ್ಲಿ ಮುಳುಗಿ ಹೋಯಿತು.

ಆ ಜನಸಾಗರದ ಪ್ರೀತಿಯ ಭೋರ್ಗರೆತದಲ್ಲಾತನ ವೈಭವ ಕಂಡ ಆತನ ಗೆಳೆಯರೆನಿಸಿಕೊಳ್ಳದ ವೃತ್ತಿಬಾಂಧವರ ಕಣ್ಣಲ್ಲಿ ನೀರು ಜಿನುಗತೊಡಗಿದವು.  ಎದುರಿಗೆ ಕಂಡ ವಿನ: ಅವನ ನೆನಪನ್ನೂ ಮಾಡಿಕೊಳ್ಳದವರು ಜಾಲಪ್ಪನ ಜೊತೆಗೆ ಒಡನಾಡಿದ, ಅವನ ಜೋಕುಗಳಿಗೆ ನಕ್ಕ, ಅವನ ದು:ಖಗಳನ್ನು ದೂರದಿಂದಲೇ ನೋಡಿ ಅಲಕ್ಷಿಸಿದ, ಅವನು ಸೀರೆ ನೇಯುವುದನ್ನು ಬಿಟ್ಟು ಹುಬ್ಬಳ್ಳಿಗೆ ಹೋಗಿ ಧ್ವಜ ನೇಯುವ ಕೆಲಸ ಪ್ರಾರಂಭಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದವರೂ ಒಳಗೊಳಗೆ ಹೊಟ್ಟೆಕಿಚ್ಚು ಪಟ್ಟವರೆಲ್ಲರೂ ಅವನ ಬಗೆಗೆ ಹೆಮ್ಮೆ ಪಡತೊಡಗಿದರು.  ಮೂರು ಮಕ್ಕಳನ್ನು ಹಡೆದಾದ ಮೇಲೆ ಒಂದು ದುರ್ದಿನ ಯಾರಿಗೂ ಹೇಳದೇ ಕೇಳದೇ ತನಗಿಂತ ಹತ್ತು ವರ್ಷ ಚಿಕ್ಕವನಾದ ಪತ್ತಾರನ ಮಗ ಚಿನ್ನಪ್ಪನ ಜೊತೆ ಅವನ ಹೆಂಡತಿ ಓಡಿಹೋದಳು ಎಂದು ಅವನನ್ನೇ ಜೋಕು ಮಾಡಿ ನಕ್ಕವರೂ, ಹಾಗೆ ಓಡಿ ಹೋದ ಹೆಂಡತಿ ಮೂರು ತಿಂಗಳ ಬಳಿಕ ಅದೇ ಚಿನ್ನಪ್ಪನೊಂದಿಗೆ ಅದೇ ಊರಲ್ಲಿ ಮನೆ ಮಾಡಿಕೊಂಡು ಹೊಸ ಸಂಸಾರ ಸಾಗಿಸತೊಡಗಿದ ಮೇಲೂ ಒಂದಿನಿತೂ ಸಿಟ್ಟು ತೋರದ ಅವನನ್ನು ನರಸತ್ತ ನಪುಂಸಕನೆಂದು ನಗಾಡಿದವರೂ ಅವನು ತಮ್ಮವನೆಂದು ಆಜುಬಾಜೂನವರಿಗೆ ಹೇಳಿ ಉಬ್ಬತೊಡಗಿದರು.  ಹಾಗೆ ಅವಳು ಓಡಿ ಹೋದ ದಿನದಿಂದಲೇ ಕೈಮಗ್ಗ ನಡೆಸುವುದರ ಜೊತೆಜೊತೆಗೆ ತನ್ನ ಮೂರು ಮಕ್ಕಳ ತಾಯಿಯಾಗಿ ಅವರನ್ನು ಪೊರೆಯತೊಡಗಿದುದನ್ನು ಕಂಡು ಲೊಚಗುಟ್ಟಿದ್ದ ಅವನ ಆಪದ್ಬಾಂಧವರ ಕಣ್ಣುಗಳೂ ತೇವಗೊಂಡವು.   ಆದರೆ ಇದಾವುದನ್ನೂ ತಲೆಗೇರಿಸಿಕೊಳ್ಳದೇ ಜಗದೇಕವೀರನಂತೆ ಪೊಲೀಸರು ಒಯ್ದತ್ತ ಹೊರಟು ನಿಂತಿದ್ದ ಜಾಲಪ್ಪ.

ತಲೆತಲಾಂತರಗಳಿಂದ ಅವನ ಕುಟುಂಬ ಹತ್ತಿಯ ಬಟ್ಟೆ ನೇಯುವುದರಲ್ಲಿ ತಮ್ಮ ಹೊಟ್ಟೆಹೊರೆ, ಪಾಲಣ ಪೋಷಣ ಮಾಡುತ್ತ ನಾಕು ದಿಕ್ಕುಗಳಲ್ಲಿ ಹೆಸರು ಮಾಡಿತ್ತು.  ಗಾಂಧೀಜಿ ಚರಕದ ಸುತ್ತ ಸ್ವಾತಂತ್ರ್ಯ ಹೋರಾಟದ ನೂಲು ಸುತ್ತುವುದಕ್ಕಿಂತ ಎಷ್ಟೋ ವರ್ಷಗಳ ಮೊದಲಿನಿಂದ ಈ ಕಾಯಕ ಅವರ ಕುಲಕಸುಬಾಗಿತ್ತು.  ಜಾಲಪ್ಪನ ಅಜ್ಜ ಹರೆಯದವನಾಗಿದ್ದಾಗ ಗಾಂಧೀಜಿಯ ಸಾಬರಮತಿ ಆಶ್ರಮಕ್ಕೆ ಹೋಗಿ ಚರಕದ ಮೇಲೆ ತನ್ನ ಕೈಚಳಕ ತೋರಿಸಿ ಅವರ ಹೊಗಳಿಕೆಯನ್ನು ಪಡೆದು ಸಾಯುವವರೆಗೂ ಆ ಘಟನೆಯನ್ನು ತನ್ನ ತುಟಿಯ ಮೇಲೆ ಹೊತ್ತುಕೊಂಡು ತಿರುಗಿದ.  ಆದರೂ ಜಾಲಪ್ಪನಿಗೆ ಮೊದಲಿನಿಂದಲೂ ಬರೀ ನೂಲು ಲಾಳಿ ಕಂಡಿಕೆಗಳಲ್ಲಿ ತನ್ನ ಜೀವನವನ್ನು ಬರಬಾದು ಮಾಡುವುದಕ್ಕಿಂತ ದೇಶಕ್ಕಾಗಿ ಪ್ರಾಣ ಕೊಡುವ ಸೈನ್ಯ ಸೇರಬೇಕೆಂದು ಅದಮ್ಯ ಆಸೆ ಇದ್ದಿತು.  ಆದರೆ ಹದಿನಾಲ್ಕನೇ ವರ್ಷಕ್ಕೆ ಸತ್ತು ಹೋದ ತಾಯಿಯ ಜೊತೆಗೆ ಆ ಆಸೆಯನ್ನೂ ಮಣ್ಣಿನಲ್ಲಿ ಹುಗಿದು ಬಂದನು.  ತಂದೆ ತಾಯಿಗೆ ಒಬ್ಬನೇ ಮಗನಾದ ಜಾಲಪ್ಪ ತಾಯಿ ತೀರಿಹೋದ ನಂತರ ದಮಾ ರೋಗದಿಂದ ಬಳಲುತ್ತಿದ್ದ ತಂದೆಗೆ ಆಸರೆಯಾಗಿ ನಿಲ್ಲಬೇಕಿತ್ತು.  ಹಾಗೆ ನಿಲ್ಲಲು ಆಕೆ ತನ್ನ ಸಾವನ್ನು ಮೊದಲೇ ಕಂಡುಕೊಂಡವಳಂತೆ ಜಾಲಪ್ಪನನ್ನು ಮೊದಲಿನಿಂದಲೇ ಅಡುಗೆಯ ಜೊತೆಜೊತೆಗೆ ಮನೆಯ ಎಲ್ಲ ಚಿಕ್ಕ ದೊಡ್ಡ ಜವಾಬ್ದಾರಿಗಳನ್ನು ಹೊರಲು ಆಣಿಗೊಳಿಸಿದ್ದಳು.  ರೋಗ ಉಲ್ಬಣವಾಗಿ ಅಪ್ಪ ಮಗ್ಗದ ಮೇಲೆ ಕುಳಿತುಕೊಳ್ಳುವುದು ಅಶಕ್ಯವಾದ ದಿನ ಅವನ ಮನಸಿನ ಮೂಲೆಯಲ್ಲಿ ಇನ್ನೂ ಜೀವಬಿಡದೇ ಉಸಿರಾಡುತ್ತಿದ್ದ ಕೊನೆಯಾಸೆಯೂ ಸತ್ತು ಹೋಯಿತು.

ಬ್ರಿಟಿಷರ ಆಗಮನದಿಂದ ಅವನತಿಯತ್ತ ಮುಖ ಮಾಡಿದ್ದ ನೇಕಾರಿಕೆ ಅವರು ದೇಶ ತೊರೆದ ಬಳಿಕ ಕೊನೆಯುಸಿರೆಳೆಯಲು ಪ್ರಾರಂಭಮಾಡಿತ್ತು.  ಸಿಕ್ಕ ಸವಲತ್ತುಗಳನ್ನೆಲ್ಲ ದೊಡ್ಡ ಮಗ್ಗಿನ ಮಾಲೀಕರು ಕೊಳ್ಳೆ ಹೊಡೆದು ಮನೆಯಲ್ಲೇ ನೇಕಾರಿಕೆ ಮಾಡುವವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದರು.  ಜಾಲಪ್ಪನಿಗೆ ಕೆಲಸ ಕೊಡುತ್ತಿದ್ದ ಸಖಾರಾಮ ಪಾಟೀಲ ತಿಂಗಳುಗಟ್ಟಲೇ ನೇಯ್ಗೆಯ ಕೂಲಿ ಕೊಡುತ್ತಲೇ ಇರಲಿಲ್ಲ.  ಮಕ್ಕಳು ಹೊಟ್ಟೆಗಿಲ್ಲದೇ ಎಲುವಿನ ಹಂದರವಾಗಿದ್ದವು.  ಔಷಧಿಗೆ ರೊಕ್ಕ ಸಾಲದೇ ದಮಾ ಹಿಡಿದ ಅಪ್ಪ ಕೂಡ ಕೆಮ್ಮಿ ಕೆಮ್ಮಿ ಒಂದಿನ ಗೋವಿಂದನ ಪಾದ ಸೇರಿದ.  ಮನೆಯಲ್ಲಿ ಇದ್ದಬಿದ್ದ ಸಾಮಾನುಗಳನ್ನೆಲ್ಲ ಮಾರಿ ಎಷ್ಟೋ ದಿನಗಳವರೆಗೆ ಗೊಂಜಾಳದ ನುಚ್ಚನ್ನು ಎರಡೂ ಹೊತ್ತು ಮಕ್ಕಳಿಗೆ ತಿನ್ನಿಸಿ ತಾನು ಉಪವಾಸ ಮಲಗಿದ.  

ಇನ್ನು ತನ್ನ ಮಕ್ಕಳನ್ನು ರೈಲುಟ್ರಾಕಿನ ಮೇಲೆ ಮಲಗಿಸಿಯೋ, ಸಾಲ ಮಾಡಿ ಕೊಂಡು ತಂದು ವಿಷವುಣಿಸಿಯೋ ಅವರನ್ನೂ ಕೊಂದು ತಾನೂ ಸಾಯುವ ಸ್ಥಿತಿ ಬಂದಾಗ ರೋಷಾವೇಶದಲ್ಲಿ ಪಾಟೀಲನ ಮನೆಗೆ ಹೋಗಿ ಒತ್ತರಿಸಿಕೊಂಡು ಬರುತ್ತಿದ್ದ ಆಕ್ರೋಶವನ್ನು ಅದುಮಿಟ್ಟುಕೊಂಡು ತುಟಿಪಿಟಕ್ಕೆನ್ನದೇ ಮೌನವಾಗಿ ಅವನ ಮನೆಯ ಹೊಸಿಲಿನ ಮೇಲೆ ಕುಳಿತುಕೊಂಡ.  ಮಾಲೀಕ ಎಷ್ಟು ಗಂಟಲು ಹರಿದುಕೊಂಡರೂ ಜಗ್ಗದೇ ಅಲ್ಲಿಯೇ ಸತ್ಯಾಗ್ರಹ ಹೂಡಿದ.  ಪಾಟೀಲನ ಮಗಳನ್ನು ನೋಡಲು ಗಂಡಿನ ಕಡೆಯವರು ಬರುವವರಿಹರೆಂದು ಬಂಗಲೆಯಲ್ಲ್ಲಿ ಭರ್ಜರಿ ಸಂಭ್ರಮವಿತ್ತು.  ಅಂಥದರಲ್ಲಿ ಕಬಾಬಮೇ ಹಡ್ಡಿಯಂತೆ ಈ ಶನಿ ವಕ್ಕರಿಸಿತಲ್ಲ ಎಂದು ಅಂಡಿಗೆ ಬೆಂಕಿ ಹತ್ತಿದಂತೆ ಪಾಟೀಲ ಶತಪಥ ಹಾಕುತ್ತಿದ್ದ.  ಅವನ ಹೆಂಡತಿಯೂ ಸಿಟ್ಟಿಗೇರಿ ಅವನನ್ನು ಭಾಡ್ಯಾ ಹಾಂಟ್ಯಾ ಎಂದು ಬಾಯಿಗೆ ಬಂದ ಬೈಗುಳಗಳ ಜಳಕ ಮಾಡಿಸಿದಳು.  ಪೊಲೀಸರ ಕೈಗೆ ಕೊಡುತ್ತೇನೆ ಎಂದು ಹಾಕಿದ ಧಮಕಿಗೆ ಅಳುಕುವ ಆಳಲ್ಲ ಜಾಲಪ್ಪ.  ಹೆಂಗಾದರೂ ತನ್ನ ಮನೆಯಿಂದ ತೊಲಗಲಿ ಎಂದು ಅವನ ಎದುರಿಗೆ ಪಾಟೀಲ ಒಗೆದ ನೂರು ರೂಪಾಯಿಯನ್ನು ಕಂಡೇ ಇಲ್ಲವೆಂಬಂತೆ ಜಾಲಪ್ಪ ಸತ್ಯಾಗ್ರಹ ಮುಂದುವರೆಸಿದ.  ಇನ್ನ ಇಲ್ಲಿಂದ ಯಳಲಿಲ್ಲಂದ್ರ ಕಾಲ ಮುರದ ಕೈಯಾಗ ಕುಡತೇನ ಮಗನಾ ಎಂದು ಗದರಿಸಿದ್ದೂ ಪರಿಣಾಮ ಬೀರದಿದ್ದುದು ಪಾಟೀಲನ ಅಂಗಾಂಗಗಳಲ್ಲಿ ಬೆಂಕಿಯೆಬ್ಬಿಸಿತು.  ಗಂಡಿನ ಕಡೆಯವರು ಬರುವ ಹೊತ್ತು ಸಮೀಪವಾದಂತೆ ತನ್ನ ಮರ್ಮಾಂಗಕ್ಕೇ ಯಾರೋ ಹೊಡೆದಂತೆ ವಿಲಿವಿಲಿ ಒದ್ದಾಡಿದ ಮಾಲೀಕ ಹಾಳಾಗಿ ಹೋಗಲಿ ಪೀಡೆ ಎಂದು ನೂರು ರೂಪಾಯಿಯ ನೋಟಿನ ಜಾಗದಲ್ಲಿ ಐನೂರರ ನೋಟನ್ನು ಇರಿಸಿದ.  ಇವತ್ತ ಮನ್ಯಾಗ ಪಾವಣ್ಯಾರ ಬರಾವರಾದರ್.  ಕೊಟ್ಟಟ್ಟ ತೊಗೊಂಡ ಹೋಗ್.  ಮುಂದಿನ ವಾರ ನಿನ್ ಬಾಕಿಯೆಲ್ಲ ಬಗಿಹರಸ್ತೇನ್.  ಆಮ್ಯಾಲ ಕೆಲಸಾ ಕೇಳಾಕೇನಾರ ನನ್ ಹಂತೇಕ ಬಂದ್ಯಂದ್ರ ಮೈತುಂಬ ಲತ್ತಿ ಬೀಳ್ತಾವ ಮಗನಾ ಎಂದು ಮೈಯಲ್ಲಿನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಕಿರುಚಾಡಿ ಕೆಂಪಗಾದ.  ಒಂದೂ ಇಲ್ಲಾ ಎರಡೂ ಇಲ್ಲ ತನ್ನೆದುರಿಗೆ ಬೆತ್ತಲೆ ಹೆಣ್ಣಿನಂತೆ ಬಿದ್ದಿದ್ದ ಐನೂರರ ನೋಟನ್ನು ಕಿಸೆಗೆ ಹಾಕಿಕೊಂಡು ನೇರ ಬಸ್ ನಿಲ್ದಾಣಕ್ಕೆ ಹೋಗಿ ಎದುರಿಗೆ ಸಿಕ್ಕ ಬಸ್ಸು ಹತ್ತಿದ.

ಹುಬ್ಬಳ್ಳಿಯ ಗಲ್ಲಿಗಲ್ಲಿ ಅಲೆದು ಎಲ್ಲಿಯೂ ಕೆಲಸ ಸಿಗದೇ ಮಧ್ಯಾಹ್ನದವರೆಗೆ ಸುಸ್ತಾಗಿ ಹೋದ.  ಎಲ್ಲೋ ಹೊಟೇಲಿನಲ್ಲಿ ಒಂದು ಕಪ್ಪು ಚಹಾ ತೆಗೆದುಕೊಂಡು ಕೂತಾಗ ಮಕ್ಕಳ ನೆನಪು ಕಾಡಿ ಕರುಳು ಚುರುಕ್ಕೆಂದಿತು.  ಒಂದು ಗುಟುಕೂ ಗಂಟಲೊಳಗೆ ಇಳಿಯಲಿಲ್ಲ.  ಭಗವಂತ ಇವತ್ತೊಂದಿನ ಅವರನ್ನ ಕಾಪಾಡು ಎಂದು ಕ್ಷಣಕ್ಷಣಕ್ಕೆ ಕೈಮುಗಿದು ಹುಚ್ಚರಂತೆ ಬೀದಿ ಬೀದಿ ಅಲೆದ.  ಹೀಗೆ ಕೇಳುತ್ತ ಕೇಳುತ್ತ ಧ್ವಜ ಮಾರುವ ಖಾದಿ ಅಂಗಡಿಯೊಂದು ಕೈಬೀಸಿ ಕರೆದಂತಾಗಿ ಅದರೊಳಗೆ ಕಾಲಿರಿಸಿದ.  ಸುತ್ತಲೂ ಮಡಚಿಟ್ಟ, ತೂಗುಬಿಟ್ಟ ಖಾದಿ ಬಟ್ಟೆಗಳು, ಧ್ವಜಗಳು ಅವನನ್ನು ಕರುಣೆಯಿಂದ ಕಂಡಂತಾಗಿ ತಡೆಯಲಾಗದೇ ಅಂಗಡಿಯ ನಡುಮಧ್ಯ ಕೂತು ಗಳಗಳನೇ ಅಳಲು ಸುರುವಾದ.  ಮಾರುವವರೂ ಕೊಳ್ಳುವವರೂ ಅವನನ್ನು ಕಕ್ಕಾಬಿಕ್ಕಿಯಾಗಿ ನೋಡಿದರು.  ಯಾರೋ ಅವನ ಬೆನ್ನು ನೇವರಿಸುತ್ತ ಕುಡಿಯಲು ನೀರು ಕೊಟ್ಟರು.  ಗಟಗಟನೇ ನೀರು ಕುಡಿದು ತನ್ನಂಥ ನೇಕಾರರು ಜನ್ಮಕೊಟ್ಟ ಬಟ್ಟೆಗಳೇ ತನ್ನ ಬಂಧುಬಾಂಧವರು ಎಂಬಂತೆ ತನ್ನ ಕತೆಯನ್ನೆಲ್ಲ ಅವುಗಳಿಗೆ ಹೇಳಿದ.  ಅದನ್ನು ಮೌನದಲ್ಲಿ ಕೇಳಿದ ಅಂಗಡಿಯ ಮಾಲೀಕ ಅವನ ಕೈಗೆ ಒಂದು ದೊಡ್ಡ ನೂಲಿನ ಚೀಲವನ್ನು ಕೊಟ್ಟು ಅದರಲ್ಲಿ ಯಾವ ಯಾವ ಅಳತೆಯ ಏನೇನು ನೇಯಬೇಕೆಂದು ಹೇಳಿ ಅದಕ್ಕೆ ಮುಂಗಡವಾಗಿ ಎರಡು ಸಾವಿರ ರೂಪಾಯಿ ಕೊಟ್ಟು ಮುಂದಿನ ವಾರ ಇದನ್ನೆಲ್ಲ ನೇಯ್ದುಕೊಂಡು ಬಾ ಎಂದು ಹೇಳಿಕಳುಹಿದ.  ಉದ್ದಕೆ ಅವರ ಕಾಲಿಗೆ ಸಾಷ್ಟಾಂಗ ಬಿದ್ದು ಕೊಟ್ಟುದನ್ನೆಲ್ಲ ಪ್ರಸಾದ ಎಂಬ ಭಯಭಕ್ತಿಯಿಂದ ಎದೆಗವಚಿಕೊಂಡು ಊರಿಗೆ ಬಂದ.  

ಅಂದಿನಿಂದ ಅವನ ಬದುಕು ಲಾಳಿಯಂತೆ ಅತ್ತಿತ್ತ ಜಿಗಿದಾಡದೇ ಸಮಾಧಾನವಾಗಿ ಸಾಗತೊಡಗಿತು.  ಕೊನೆಗೂ ತನ್ನ ಜೀವನವನ್ನು ಕಾಪಾಡಿದ್ದು ನನ್ನ ದೇಶದ ಧ್ವಜವೆಂದು ನಿಯತ್ತಿನಿಂದ ವಾರಕ್ಕೊಮ್ಮೆ ನೇಯ್ದ ಬಟ್ಟೆಯನ್ನು ಕೊಡುವುದು, ಬರುವಾಗ ಕೆಲಸದ ಪೂರ್ತಿ ಕೂಲಿ ಹಾಗೂ ಹೊಸ ಕೆಲಸ ತೆಗದುಕೊಂಡು ಬರುವುದು ಸಾಗುತ್ತ ಹೆಂಡತಿ ಓಡಿಹೋದದ್ದು, ಅಪ್ಪ ಸತ್ತಿದ್ದು, ಅಮ್ಮನ ನೆನಪೇ ಹಾರಿಹೋದದ್ದು ಅವನ ಎದೆಯನ್ನು ಒಣಗಿಸದೇ ಮಕ್ಕಳ ಮುಖಕಾಂತಿಯಲ್ಲಿ ತನ್ನ ಜೀವನ ಬೆಳಗಿದಂತೆ ಹಗಲು ರಾತ್ರಿಗಳನ್ನು ಮಗ್ಗದ ಕಟಕ್ ಕುಟುಕ್ ರಾಗದಲ್ಲಿ ಕಳೆಯತೊಡಗಿದನು.  

ಹುಬ್ಬಳ್ಳಿ ಸಂಘದವರು ಕೊಟ್ಟ ಕೆಲಸವನ್ನು ಹೇಳಿದ ಅಳತೆ ಗುಣಮಟ್ಟಕ್ಕೆ ಕರಾರುವಕ್ಕಾಗಿ ನೇಯ್ದು ಕೊಡಲಾಗಿ ಅಧ್ಯಕ್ಷರು ಖುಷಿಗೊಂಡು ಅವನಿಗೆ ಧ್ವಜ ನೇಯುವುದಕ್ಕೆ ಕೇಸರಿ ಬಿಳಿ ಹಸಿರು ಬಣ್ಣದ ನೂಲುಗಳನ್ನು ಕೊಡತೊಡಗಿದರು.  ಆ ಬಣ್ಣಗಳನ್ನು ಕಂಡು ಬಾಲ್ಯದ ಸೈನ್ಯ ಸೇರುವ ಉಮೇದಿನ ನೆನಪುಗಳು ಆತನ ಮನಸ್ಸಿನಲ್ಲಿ ಬಣ್ಣ ಹುಯ್ಯತೊಡಗಿದವು. ಈ ಬಾರಿ ತಾನೇ ನೇಯ್ದ ಧ್ವಜವನ್ನು ಪಂಚಾಯಿತಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾರಿಸಬಹುದೇ ಎಂಬ ಆಸೆ ಮೊಳೆಯಿತು.  ಜುಲೈ ಕೊನೆಯ ವಾರದಲ್ಲಿ ನೇಯ್ದ ಧ್ವಜಗಳನ್ನು ಕೊಟ್ಟು ಬರುವಾಗ ಅಧ್ಯಕ್ಷರಿಗೆ ತನ್ನ ಮನದಾಳದ ಅಭೀಪ್ಸೆಯನ್ನು ಅಂಜುತ್ತಂಜುತ್ತಲೇ ಉಸುರಿದ.  ಅದಕ್ಕೆ ಖುಷಿಯಿಂದ ಒಪ್ಪಿಕೊಂಡು ಆತ ನೇಯ್ದ ಧ್ವಜವೊಂದನ್ನು ಆರಿಸಿ ಅದರಲ್ಲಿ ಅಶೋಕ ಚಕ್ರವನ್ನು ಮುದ್ರಿಸಿ ಇಡುವುದಾಗಿಯೂ ಮುಂದಿನ ವಾರ ಬಂದಾಗ ಒಯ್ಯಬಹುದು ಎಂದು ಹೇಳಿದಾಗ ಖುಷಿಯಿಂದ ಕುಣಕೋತ ಊರಿಗೆ ಬಂದ.  ಧ್ವಜವನ್ನು ಮುಂದಿನ ವಾರ ಹೋಗಿ ತರುವವರೆಗೂ ತಡೆಯಲಾಗದೇ ಪಂಚಾಯತಿ ಅಧ್ಯಕ್ಷರನ್ನು ಭೇಟಿಯಾಗಲು ಹೋದ.  ಅನೇಕ ಬಾರಿ ನೇಕಾರರ ಸಂಘದಿಂದ ಬೇಡಿಕೆಗಳನ್ನು ಪೂರೈಸಲು ನಡೆಸುತ್ತಿದ್ದ ಮೆರವಣಿಗೆಗಳಲ್ಲಿ ನೋಡಿ ಪರಿಚಯವಿದ್ದ ಜಾಲಪ್ಪನನ್ನು ಕಂಡು ಮತ್ತೇನೋ ಹೊಸ ಬೇಡಿಕೆಗಳನ್ನು ಹಿಡಿದುಕೊಂಡು ಬಂದನೇನೋ ಎಂದು ಅರ್ಧ ಗಾಬರಿಯಲ್ಲೇ ಅವನನ್ನು ಬರಮಾಡಿಕೊಂಡ ಅಧ್ಯಕ್ಷರು ಅವನ ಇಟ್ಟ ಬೇಡಿಕೆಯನ್ನು ಮನಸಾರಾ ಒಪ್ಪಿಕೊಂಡು ಮುಂದಿನ ವಾರ ತಂದು ಧ್ವಜವನ್ನು ಒಪ್ಪಿಸಿ ಹೋಗೆಂದು ಆಶೀರ್ವಾದ ಮಾಡಿ ಕಳುಹಿಸಿದರು.

ತಾನೇ ನೇಯ್ದ ಧ್ವಜವು ತಮ್ಮ ಊರಿನ ಮುಖ್ಯ ಧ್ವಜಸ್ತಂಭದಿಂದ ಹಾರುವ ದೃಶ್ಯವನ್ನು ಹಗಲು ರಾತ್ರಿ ಕನಸು ಕಾಣುತ್ತ ಒಳಗೊಳಗೆ ಹೆಮ್ಮೆಪಡುತಾ ವಾರ ಕಳೆದನು.  ಹುಬ್ಬಳ್ಳಿಯಿಂದ ತೆಗೆದುಕೊಂಡು ಬಂದ ಧ್ವಜವನ್ನು ಅಧ್ಯಕ್ಷರ ಸುಪರ್ದಿಗೆ ಒಪ್ಪಿಸಿ ಹತ್ತು ಸಾರಿಯಾದರೂ ಇದೇ ಧ್ವಜ ಈ ವರ್ಷ ಹಾರಿಸುವಿರಲ್ಲ ಎಂದು ಕೇಳಿದ್ದೇ ಕೇಳಿ ಅವರಿಂದ ಅಷ್ಟೂ ಬಾರಿ ವಾಗ್ದಾನ ಪಡೆದುಕೊಂಡು ಮನಸ್ಸು ತಂಪು ಮಾಡಿಕೊಂಡು ಮನೆಗೆ ಹಾರುತ್ತ ಬಂದ.

ಯಾವಾಗ ಅಗಸ್ಟ ಹದಿನೈದು ಬರುವುದೆಂದು ಕಾದೂ ಕಾದೂ ಮನಸ್ಸು ಬೇಜಾರಾಗುತ್ತಿತ್ತು.  ಬಂದೇ ಬರುತ್ತದೆ ಎಲ್ಲಿ ಹೋಗುತ್ತದೆ ಎಂದು ಮನಸ್ಸಿಗೆ ಸಾವಿರ ಸಾರಿ ಹೇಳಿಕೊಂಡರೂ ಸಮಾಧಾನವಾಗುತ್ತಿಲ್ಲ.  ಹನ್ನೊಂದು ಹನ್ನೆರಡು ಹದಿಮೂರು ಹದಿನಾಲ್ಕು … ನಾಲ್ಕು ದಿನ ಉಳಿದವು ಎಂದು ಎಣಿಸಿಕೊಂಡು ಮಗ್ಗ ನಡೆಸುತ್ತ ಕುಳಿತಿದ್ದ ಜಾಲಪ್ಪನಿಗೆ ತನ್ನ ಎರಡೂ ಮಕ್ಕಳು ಜೋರಾಗಿ ಕಿರುಚಾಡಿ ಜಗಳಾಡುತ್ತಿದ್ದುದು ಕೇಳಿಸಿ ಏನಾಗಿರಬಹುದು ಎಂದು ನೋಡಲು ಮಗ್ಗ ನಿಲ್ಲಿಸಿ ಒಳಹೊಕ್ಕು ನೋಡಿದರೆ ಹತ್ತು ವರ್ಷದ ಪಾಂಡುರಂಗನನ್ನು ಕೆಳಕ್ಕೆ ಬೀಳಿಸಿ ಅವನ ಮೇಲೆ ಹದಿನಾರು ವರ್ಷದ ವಿಠಲ ಸವಾರನಾಗಿ ಹೊಡೆಯಲು ಅನುವಾಗಿದ್ದಾನೆ.  ಅಪ್ಪ ಬಂದುದನ್ನು ಕಂಡು ಸರಭರನೆ ತಮ್ಮ ಸ್ಥಾನಗಳನ್ನು ಬದಲಿಸಿಕೊಂಡು ಎದ್ದು ನಿಂತು ಒಬ್ಬರು ಇನ್ನೊಬ್ಬರ ಮೇಲೆ ಚಾಡಿ ಹೇಳತೊಡಗಿದರು.  ಇಬ್ಬರನ್ನೂ ಸಮಾಧಾನಗೊಳಿಸಿ ಇನ್ನೇನು ತಿರುಗಿ ಹೊರಟಿದ್ದ ಜಾಲಪ್ಪನನ್ನು ಪಾಂಡುರಂಗ ಅಪ್ಪಾ ಎಂದು ನಿಲ್ಲಿಸಿದ.  ಯಾಕೋ ಮಗನೇ ಎಂದರೆ ನನಗ್ ಕಾರ್ ತೊಗೊಂಬಂದಿ? ಎಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟ.  ಮರತ್ನ್ಯೋ, ನಾಳಿ ತೊಗೊಂಬರ್‍ತೇನಿ ಎಂದ ತಪ್ಪಿತಸ್ಥನಂತೆ.  ಹೀಂಗ ಸುಳ್ಳ ಹೇಳ್ತೀ ನೀ ಎಂದುದಕ್ಕೆ, ಇಲ್ಲಪಾ ಖರೇನ ನಾಳಿ ತರ್‍ತೇನಿ ಎಂದುದಕ್ಕೆ ವ್ಯಗ್ರಗೊಂಡ ಪೋರ ಇದ ಆತ ತೊಗೋ ನಿಂದ್.  ನಾಯೀಗಿ ಬಿಸ್ಕಿಟ್ ತೋರಿಸ್ಧಂಗ ಮಾಡಿ ರೊಕ್ಕಾ ಕೂಡಿಡತಿ ಎಂದ.  ಒಮ್ಮೆಲೆ ಬೆಚ್ಚಿದ ಜಾಲಪ್ಪ ಇಂಥ ಚಿಕ್ಕ ಹುಡುಗನ ಬಾಯಲ್ಲಿ ಎಂಥ ಮಾತು ಎಂದು ಯಾರ ಕಲಸ್ಯಾರಲೇ ನಿಂಗ ಹಿಂತಾ ಮಾತ್ ಅಂದ.  

ಯಾರರೆ ಕಲಸ್ವಾರ ಬಿಡ್.  ಹಿಂಗ ಜೀನತನಾ ಮಾಡಿದ್ದಕ್ಕ ನಿನ್ ಅವ್ವಾ ಬಿಟ್ ಹೋದ್ಲೂ. ಎಂದ ಇನ್ನೂ ಸಿಟ್ಟಾಗಿ.  ಸಿಡಿಲೆರಗಿದಂತಾಗಿ ಏನ್ ಮಾತಾಡಾಕತ್ತಿ ಖಬರೈತಿ ನಿನಗಾ? ಎಂದು ಸಿಡುಕಿದ.  ಅದಕ್ಕೆ ಇನ್ನೂ ಜೋರಾಗಿ ಅಣ್ಣಗೂ ಹಂಗ ಮಾಡಿದಿ, ಒಂದೊರ್ಸ ಆತ್ ಸೈಕಲ್ ಕೊಂಡ ಕುಡತೇನಿ ಅಂತೇಳಿ ನಾಯಿಹಂಗ ಓಡಾಡಸ್ತಿ.  ಎಲ್ಲಾ ರೊಕ್ಕಾ ಇಟಗೊಂಡ ಏನ್ ಸತ್ತ ಮ್ಯಾಲ್ ಒಯ್ಯಾಂವಿದಿ? ಎಂದು ಮನಸ್ಸಿನಲ್ಲಿದ್ದ ಕಹಿಯನ್ನೆಲ್ಲ ಉಗುಳಿದ.  ಪಿತ್ತ ನೆತ್ತಿಗೇರಿದ ಜಾಲಪ್ಪ ಯಾರ ಹೇಳಿಕೊಟ್ರ ನಿಂಗಿದೆಲ್ಲಾ ಎಂದು ಕೆಂಗಣ್ಣವದನನಾಗಿ ರಭಸದಿಂದ ಕೈಯೆತ್ತಿದ್ದಕ್ಕೆ ಹೆದರಿದ ಪಾಂಡುರಂಗ, ಅಣ್ಣಾನ ಹೇಳಿದಾ ಎಂದು ನಿಂತಲ್ಲೇ ಉಚ್ಚೆ ಹೊಯ್ಕೊಂಡ.  ಬಂದ ಸಿಟ್ಟನ್ನೆಲ್ಲ ವಿಠಲನತ್ತ ತಿರುಗಿಸಿ ಕೈಗೆ ಸಿಕ್ಕ ಕಟ್ಟಿಗೆಯಿಂದ ಮನಸೋ ಇಚ್ಛೆ ಬಾರಿಸಿದ.  ಮುಖ ಮೂತಿ ನೋಡದೇ ಮನಬಂದಂತೆ ಥಳಿಸಿದ.  ಅಪ್ಪನ ಸಿಟ್ಟನ್ನು ಎಂದೂ ನೋಡಿಲ್ಲದ ಪಾಂಡುರಂಗ ಮೂಲೆಯಲ್ಲಿ ಹೋಗಿ ಕುಳಿತರೆ ಸುಭದ್ರಾ ಮಗ್ಗದ ಅಡಿಯಲ್ಲಿ ಅವಿತುಕೊಂಡಳು.  ವಿಠಲನ ಚೀರಾಟ ಕೇಳಿ ನೆರೆಮನೆಯ ಮಾದೇವ ಬಂದು ಜಾಲಪ್ಪನ ಕೈಯಿಂದ ಕಟ್ಟಿಗೆಯನ್ನು ಕಸಿದುಕೊಂಡು ಜೋರಾಗಿ ಗದರಿಸಿದಾಗಲೇ ಅವನ ಸಿಟ್ಟಿನ ನಂಜಿಳಿದು ನೆಲದ ಮೇಲೆ ಕುಸಿದು ಕುಳಿತ.  ಮಾದೇವ ವಿಠಲನನ್ನೂ ಉಳಿದ ಹುಡುಗರನ್ನೂ ತನ್ನ ಮನೆಗೆ ಕರೆದುಕೊಂಡು ಹೋದ.  ಜಾಲಪ್ಪ ಅಲ್ಲೇ ಕುಳಿತು ಮನಸ್ಸಿಗೆ ಸಮಾಧಾನವಾಗುವವರೆಗೆ ಅತ್ತ.  

ಸಂಜೆಯಾಗಿ ರಾತ್ರಿಯಾಗಿ ಮನೆಯೆಲ್ಲ ಕಪ್ಪಿಟ್ಟಿತು.  ಅತ್ತು ಅತ್ತು ಸುಸ್ತಾಗಿ ಹೋದ ಜಾಲಪ್ಪ ತಾನು ಮಾಡಿದುದನ್ನು ನೆನೆದು ಪಶ್ಚಾತ್ತಾಪದಿಂದ ಜರ್ಜರಿತನಾದ.  ಮಗನ ಒಂದು ಚಿಕ್ಕ ಮಾತಿಗೆ ತಾನೇಕೆ ಹೀಗೆ ರಾಕ್ಷಸನಂತೆ ವರ್ತಿಸಿದೆ ಎಂದು ಗೋಡೆಗೆ ಹೋಗಿ ತಲೆ ಜಜ್ಜಿಕೊಂಡ.  ತಲೆಯಿಂದ ರಕ್ತ ಜಿನುಗಿ ಹಣೆಯೆಲ್ಲ ತೋಯ್ದ ಮೇಲೆಯೇ ಅವನಿಗೆ ಪ್ರಜ್ಞೆ ಮರುಕಳಿಸಿತು.  ಬಚ್ಚಲಿನಲ್ಲಿ ನೀರುಗ್ಗಿಕೊಂಡು ಚೆನ್ನಾಗಿ ಮುಖ ತೊಳೆದು ಮಾದೇವನ ಮನೆಗೆ ಹೋಗಿ ತಪ್ಪಾಯಿತು ಎಂದು ಕ್ಷಮಾಪಣೆ ಕೇಳಿ ಮಕ್ಕಳನ್ನು ಕರೆದುಕೊಂಡು ಬಂದ.  ತನ್ನ ತಂದೆಯ ರುದ್ರಾವತಾರವನ್ನು ಹಿಂದೆಂದೂ ಕಂಡಿರದ ಮಕ್ಕಳು ಅವನು ಹೇಳಿದಂತೆ ಮನೆಗೆ ಬಂದು ಚಾಪೆಯ ಮೇಲೆ ಸುಮ್ಮನೆ ಕುಳಿತುಕೊಂಡವು.  ಜಾಲಪ್ಪ ಅಡುಗೆ ಮಾಡುವವರೆಗೆ ಅತ್ತಿತ್ತ ಕದಲದೇ ದೇವರಂತೆ ಇದ್ದುಬಿಟ್ಟವು.  ಅಡುಗೆ ಮುಗಿಸಿ ವಿಠಲನನ್ನು ಅಪ್ಪಿಕೊಂಡು ಅವನ ಅಂಗಿ ತೆಗೆದು ಮೈತುಂಬ ಮೂಡಿದ ಬಾಸುಂಡೆಗಳನ್ನು ಕಂಡು ಬೆದರಿ ಅವನ ಕಾಲು ಹಿಡಿದು ಗಳಗಳನೇ ಅತ್ತ.  ಮನೆಯಲ್ಲಿದ್ದ ಮುಲಾಮನ್ನು ನೋವಾಗದಂತೆ ಮೈತುಂಬ ಸವರಿ ಅವನನ್ನು ಸಮಾಧಾನಪಡಿಸಿದ.  ಉಳಿದವರಿಬ್ಬರೂ ಮಾತನಾಡದೇ ಅಪ್ಪ ಮಾಡುತ್ತಿದ್ದ ನಾಟಕವನ್ನೆಲ್ಲ ನೋಡಿದವು.  ಎಲ್ಲರೂ ಮಾತಿಲ್ಲದೇ ಊಟ ಮುಗಿಸಿದರು.  

ರಾತ್ರಿ ಊಟ ಮುಗಿಸಿ ಎಲ್ಲರೂ ಕೂಡಿ ಮಲಗಿದ್ದೇ ಕೊನೆ ಬೆಳಗಾಗೆದ್ದು ನೋಡಿದರೆ ವಿಠಲ ಮನೆಯಲ್ಲಿಲ್ಲ.  ಹೌಹಾರಿಹೋದ ಜಾಲಪ್ಪ ಊರೆಲ್ಲ ಅವನನ್ನು ಹುಡುಕಿ ಅಲೆಯತೊಡಗಿದ.  ಅವನ ಜೊತೆಗೆ ಅವನ ಸುತ್ತಮುತ್ತಲಿನ ಜನವೆಲ್ಲ ದಶದಿಕ್ಕುಗಳಲ್ಲಿ ವಿಠಲನನ್ನು ಅರಸತೊಡಗಿತು.  ಪಕ್ಕದ ಊರುಗಳಲ್ಲಿ ಒಬ್ಬೊಬ್ಬರು ಹೋಗಿ ಹುಡುಕಿದರು.  ಸುತ್ತಲ ನೂರಾರು ಕಿಲೋಮೀಟರುಗಳವರೆಗೆ ಅವನ ಸುಳಿವೇ ದೊರೆಯಲಿಲ್ಲ.  ಸಂಬಂಧಿಕರಿಗೆಲ್ಲ ಫೋನು ಮಾಡಿ ವಿಠಲ ಅಲ್ಲಿರುವನೇ ಎಂದು ಜಾಲಪ್ಪ ವಿಚಾರಿಸಿದ.  ಅವರೂ ಹುಡುಕತೊಡಗಿದರು.  ನಾಲ್ಕು ದಿನ ಊರೂರು ಅಲೆಅಲೆದು ಹುಡುಹುಡುಕಿ ಜಾಲಪ್ಪ ಹಣ್ಣಾಗಿ ಹೋದ.  ಆತನನ್ನು ದೆವ್ವ ಹೊಕ್ಕ ಹಾಗೆ ಹೊಡೆದು ಬಹುದೊಡ್ಡ ತಪ್ಪು ಮಾಡಿದೆಯೆಂದು ಪರಿಪರಿಯಾಗಿ ಪಶ್ಚಾತ್ತಾಪ ಪಟ್ಟ.  ಹೆಂಡತಿ ಹೊಸಲು ದಾಟಿ ಹೋದಾಗಿನಿಂದ ತಾನೇ ತಾಯಿಯಾಗಿ ತಂದೆಯಾಗಿ ಮಕ್ಕಳು ನಗುನಗುತ್ತ ಮನೆಯಲ್ಲಿದ್ದರೆ ಸಾಕೆಂದು ತನ್ನ ಸುಖ ಸಂತೋಷಗಳನ್ನು ತ್ಯಾಗಮಾಡಿ ಬೆಳೆಸಿದ್ದ ಒಂದೊಂದೇ ನೆನಪುಗಳು ಅವನನ್ನು ನೀರುಗಾಯಿ ಹಣ್ಣುಗಾಯಿ ಮಾಡಿದವು.  ತೆಂಗಿನ ಮರದ ತುದಿಗೇರಿ ಇನ್ನೇನು ಕಾಯಿ ಹರಿಯಬೇಕು ಎಂಬಾಗ ಕಾಲು ಜಾರಿ ನೆಲದ ಮೇಲೆ ಅಂಗಾತ ಬಿದ್ದಷ್ಟು ನೋವು ಅವನ ಮೈಮನಸ್ಸಿಗೆ ಆಯಿತು.  ಯಾರೆಷ್ಟೇ ಸಮಾಧಾನ ಹೇಳಿದರೂ ಅವನ ರೋದನ ನಿಲ್ಲಲಿಲ್ಲ.  ವಿಠಲ ಕಳೆದುಹೋದ ದಿನದಿಂದ ತಾನೂ ಒಂದು ಹಿಡಿ ಉಣಲಿಲ್ಲ, ಮಕ್ಕಳಿಗೂ ಅಡುಗೆ ಮಾಡಲಿಲ್ಲ.  ಪಕ್ಕದ ಮನೆಯವರು ಮಕ್ಕಳನ್ನು ತಮ್ಮ ಮನೆಯಲ್ಲಿ ಉಣಿಸಿ ಮಲಗಿಸಿದರು.  ಯಾರ ಒತ್ತಾಯಕ್ಕೂ ಮಣಿಯದ ಜಾಲಪ್ಪ ಮಾತ್ರ ಒಂದು ತುತ್ತು ಬಾಯಿಗೆ ಹಾಕಿಕೊಳಲಿಲ್ಲ.  ನಿದ್ದೆ ಕೂಡ ಮಾಡದೇ ಊರೂರು ಅಲೆದು ಎಲ್ಲಿಯೂ ವಿಠಲ ಸಿಗದಿದ್ದುದಕ್ಕೆ ಹೈರಾಣಾಗಿ ಅಗಸ್ಟ ಹದಿನೈದನೇ ತಾರೀಖು ಸರಿಯಾಗಿ ಬೆಳಿಗ್ಗೆ ಮನೆಗೆ ಬಂದ.  

ಇನ್ನು ಪೊಲೀಸರಿಗೆ ಫಿರ್ಯಾದಿ ನೀಡುವುದೊಂದೇ ಮಾರ್ಗ ಎಂದು ನಿರ್ಧರಿಸಿಕೊಂಡು ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ಹೆಣ್ಣು ಕಾನ್ಸಟೇಬಲ್ ಒಬ್ಬಳನ್ನು ಬಿಟ್ಟು ಯಾರೂ ಇರಲಿಲ್ಲ.  ಇವತ್ತು ಸ್ವಾತಂತ್ರ್ಯ ದಿನಾಚಾರಣೆಯಾದ ನಿಮಿತ್ಯ ಯಾವುದೇ ಫಿರ್ಯಾದಿ ತೆಗೆದುಕೊಳ್ಳುವುದಿಲ್ಲ ಎಂದು ಅವನನ್ನು ಬೈದು ಹೋಗೆಂದಳು.  ಅವನು ಎಷ್ಟೇ ದೈನ್ಯನಾಗಿ ಅವಳ ಕಾಲಿಗೆ ಬಿದ್ದು ಕೇಳಿದರೂ ಮನಸ್ಸು ಕರಗದ ಅವಳು ಅವನ ಯಾವುದೇ ಮಾತುಗಳನ್ನು ಕೇಳಲಿಲ್ಲ.  ಅವನು ಹಿಡಿದ ಹಟಕ್ಕೆ ರೇಗಿ ಬೇಕಾದರೆ ಪಂಚಾಯತಿಯಲ್ಲಿ ಧ್ವಜಾರೋಹಣ ನಡೆಯುತ್ತಿದೆ ಅಲ್ಲಿ ಇನ್ಸಪೆಕ್ಟರು ಇದ್ದಾರೆ ಅಲ್ಲಿಗೇ ಹೋಗಿ ನೇರ ನಿನ್ನ ಫಿರ್ಯಾದಿ ಕೊಡು ಎಂದು ಗದರಿಸಲಾಗಿ ಅಲ್ಲಿಗೆ ತೆರಳುತ್ತಾನೆ.  

ಪಂಚಾಯತಿ ಅಂಗಳದಲ್ಲಿ ಬಂದು ನಿಂತರೆ ಅಲ್ಲಿ ಕಂಡಿದ್ದೇನು?  ಧ್ವಜಸ್ತಂಭದ ಮೇಲೆ ಇಬ್ಬರು ಧ್ವಜವನ್ನು ಹಾರಿಸಲು ಜಗಳವಾಡುತ್ತಿದ್ದಾರೆ.  ಒಬ್ಬನ ಕೈಯಿಂದ ಮತ್ತೊಬ್ಬ ಧ್ವಜ ಹಾರಿಸಲು ಹಗ್ಗವನ್ನು ಕಿತ್ತುಕೊಳ್ಳುತ್ತಿದ್ದಾನೆ.  ನೆರೆದ ಜನರೆಲ್ಲ ಹೋ ಎಂದು ಕೂಗುತ್ತಿದ್ದಾರೆ.  ಒಬ್ಬ ಪುಢಾರಿಯ ಕೈಗೆ ಬಂದ ಮೇಲೆ ಒಂದಷ್ಟು ಜನ ಕೂಗಿದರೆ ಇನ್ನೊಬ್ಬನ ಕೈಯಲ್ಲಿ ಬಂದಾಗ ಇನ್ನಷ್ಟು ಜನ ಕೂಗುತ್ತಿದ್ದಾರೆ.  ಆ ಪುಢಾರಿ ಈ ಪುಢಾರಿಯನ್ನೂ, ಈ ಪುಢಾರಿ ಆ ಪುಢಾರಿಯನ್ನೂ ಮೊಳಕೈಯಿಂದ ನೂಕುತ್ತಿದ್ದಾರೆ, ಕಾಲಿನಿಂದ ಒದೆಯುತ್ತಿದ್ದಾರೆ.  ಅವರ ಜಗಳವನ್ನು ಬಿಡಿಸಲು ಪೊಲೀಸರು ಹರಸಾಹಸ ಮಾಡಿ ವಿಫಲರಾಗುತ್ತಿದ್ದಾರೆ.  ಸಮೀಪದ ಕುರ್ಚಿಯಲ್ಲಿ ಗಾಂಧೀಜಿಯ ಫೋಟೋ ಏನೂ ಮಾಡಲಾಗದ ಹತಾಶೆಯಲ್ಲಿ ಕುಳಿತಿದೆ.  ಪೂಜೆ ಮಾಡಿದ ಆರತಿ ತಟ್ಟೆಯಲ್ಲಿ ಎರಡು ದೀಪಗಳು ಯಾರ ಕಣ್ಣಿಗೂ ಬೀಳದೇ ತಮ್ಮಷ್ಟಕ್ಕೇ ಉರಿಯುತ್ತಿವೆ.  ಧ್ವಜಸ್ತಂಭದ ಮೇಲೆ ಹಗ್ಗ ಅತ್ತಿಂದಿತ್ತ ವರ್ಗಾವಣೆಯಾಗುತ್ತಿದ್ದರೆ ಇತ್ತ ಜನವೆಲ್ಲ ಒಬ್ಬರನ್ನೊಬ್ಬರೂ ನೂಕಿ ಅಲ್ಲಿ ನಡೆಯುತ್ತಿರುವ ತಮಾಷೆಯನ್ನು ನೋಡಲು ಮುನ್ನುಗ್ಗುತ್ತಿದ್ದಾರೆ.  ಆ ಜಗ್ಗಾಟವನ್ನು ಸೈರಿಸಲಾಗದ ಹೆಂಗಳೆಯರು ಮಕ್ಕಳು ಆ ಜಂಗುಳಿಯಿಂದ ಹೊರಬರಲಾಗದೇ ಅಯ್ಯೋ… ಯಪ್ಪಾ… ಎಂದು ಚೀರಾಡುತ್ತಿರುವುದೂ ಯಾವ ಕಿವುಡು ಕಿವಿಗಳಿಗೂ ತಲುಪುತ್ತಿಲ್ಲ.  

ತಾನೇ ನೇಯ್ದ ಧ್ವಜ ಸ್ವಾರ್ಥಿಗಳಿಬ್ಬರ ಜಗಳದಲ್ಲಿ ಹಾರದೇ ಮುದುಡಿಯಾಗಿ ಕೂತಿದ್ದನ್ನು ನೋಡಿ ತಲೆಕೆಟ್ಟ ಜಾಲಪ್ಪ ತಾನು ಬಂದ ಕಾರಣವನ್ನೇ ಮರೆತು ಓಡಿ ಹೋಗಿ ಗಟಾರಿನಲ್ಲಿ ಬಿದ್ದು ಉರುಳಾಡಿದ.  ಮೈಗೆಲ್ಲ ಕೊಳಚೆಯನ್ನು ಮೆತ್ತಿಕೊಂಡು ನೆರೆದ ಜನಸ್ತೋಮದ ಒಳಗೆ ರಭಸದಿಂದ ಓಡತೊಡಗಿದ.  ಅವನು ಮೆತ್ತಿಕೊಂಡ ಕೊಳಚೆ ತಮಗೂ ತಗುಲೀತೆಂದು ಹೋ ಎಂದು ಜನ ನೂಕಾಡಿ ಅವನಿಗೆ ದಾರಿ ಮಾಡಕೊಡಲು ದೂರ ಸರಿಯುತ್ತಿದ್ದಾರೆ.  ಹೀಗೇಕೆ ಜನ ನೂಕಾಡುತ್ತಿದೆ ಚೀರಾಡುತ್ತಿದೆ ಎಂದು ಕುತೂಹಲಿಗಳಾದ ಪುಢಾರಿಗಳಿಬ್ಬರು ಅವನನ್ನು ನೋಡಿ ಸ್ತಂಭೀಭೂತರಾಗಿದ್ದಾರೆ. ಇಬ್ಬರ ಕೈಯಲ್ಲೂ ಹಗ್ಗ ಸುಮ್ಮನೆ ನೇತಾಡುತ್ತಿದೆ.  ನೋಡುನೋಡುವುದರೊಳಗೆ ಜಾಲಪ್ಪ ರಾಡಿ ಸಿಡಿಸುತ್ತ ಓಡೋಡಿ ಧ್ವಜಸ್ತಂಭಕ್ಕೆ ಬಂದು ತಲುಪಿದ್ದಾನೆ.  ಅಲ್ಲೇ ಇದ್ದ ಕೊಡ ಬಾಗಿಸಿಕೊಂಡು ಕೈತೊಳೆದುಕೊಂಡು ಧ್ವಜಸ್ತಂಭ ಏರಿದ್ದಾನೆ.  ಅವನು ಏರಿದ ರಭಸಕ್ಕೆ ಬೆಚ್ಚಿ ಇಬ್ಬರೂ ಪುಢಾರಿಗಳೂ ಅವರ ಹಿಂದೆ ನೆರೆತ ಜನವೂ, ಪೊಲೀಸರೂ ಒಮ್ಮೆಲೆ ದೂರ ನೆಗೆದಿದ್ದಾರೆ.  ಹಾಗೆ ನೆಗೆದ ರಭಸಕ್ಕೆ ಅತ್ತಿತ್ತಿಲಿನ ಜನವೆಲ್ಲ ಒಬ್ಬರೊಬ್ಬರ ಮೇಲೆ ಧೊಪಧೊಪನೆ ಬಿದ್ದಿದ್ದಾರೆ.  ಸಮೀಪ ನಿಂತಿದ್ದ ಹೆಣ್ಣುಮಗಳೊಬ್ಬಳು ಹೆದರಿ ಹಿಂದೆ ಜಿಗಿದಿದ್ದಕ್ಕೆ ಉರಿಯುತ್ತಿದ್ದ ದೀಪದ ಬೆಂಕಿ ಅವಳ ಸೆರಗಿಗೆ ತಾಗಿದೆ.  ಇದ್ಯಾವುದನ್ನೂ ಗಮನಿಸದ ಜಾಲಪ್ಪ ಹಗ್ಗ ಹಿಡಿದು ಎಳೆದುಬಿಟ್ಟಿದ್ದಾನೆ.  ತುಂಬಿಕೊಂಡಿದ್ದ ಹೂವಿನ ಪಕಳೆಗಳೆಲ್ಲ ನೆಲಕೆ ಬಿದ್ದ ಜನರ ಮೇಲೆ ಉದುರಿ ಧ್ವಜ ಆಕಾಶದಲ್ಲಿ ಹಾರುತ್ತಿದೆ.  ಒಂದಿಷ್ಟು ಹೂಪಕಳೆಗಳು ಜಾಲಪ್ಪನ ಕೊಳಚೆ ಮೈಮೇಲೂ ಅಂಟಿಕೊಂಡಿವೆ.

ಸೆರಗಿಗೆ ಹತ್ತಿದ ಬೆಂಕಿಯಾರಿಸಲು ಒದ್ದಾಡಿದ ಹೆಂಗಸು ಸರಸರನೆ ಸೀರೆಯನ್ನು ಕಿತ್ತೆಸೆದು ಎರಡೂ ಕೈಗಳಿಂದ ಎದೆ ಮುಚ್ಚಿಕೊಂಡು ಓಡತೊಡಗಿದ್ದಾಳೆ.  ಜಾಲಪ್ಪ ಮುಖ ಮೇಲೆತ್ತಿ ಬಲಗೈಯನ್ನು ಹಣೆಯ ತುದಿಗೆ ಅಂಟಿಸಿ ಅಭಿಮಾನದಿಂದ ಹಾರುತ್ತಿರುವ ಧ್ವಜವನ್ನು ನೋಡಿ ರಾಷ್ಟ್ರ ಗೀತೆ ಹಾಡುತ್ತಿದ್ದಾನೆ.  ಜನ ಗಣ ಮನ ಅಧಿನಾಯಕ ಜಯಹೇ…

ಕಕ್ಕಾಬಿಕ್ಕಿಯಾಗಿದ್ದ ಪೊಲೀಸರು ಎಚ್ಚರಗೊಂಡು ಬಿದ್ದಲ್ಲಿಂದ ಎದ್ದು ಜಾಲಪ್ಪನತ್ತ ಧಾವಿಸಿ ಬಂದಿದ್ದಾರೆ.  ಅವರನ್ನು ಕಂಡು ಇನ್ಸಪೆಕ್ಟರ ಜಾಲಪ್ಪನನ್ನು ಅರೆಸ್ಟ ಮಾಡಲು ಒದರಿ ಆದೇಶ ನೀಡಿದ್ದಾನೆ.  ತಮ್ಮ ಯೂನಿಫಾರ್ಮನ್ನು ಝಾಡಿಸಿಕೊಂಡು ಜಾಲಪ್ಪನ ಎದುರು ಜಿಗಿದು ನಿಂತು ಅವನ ಎತ್ತಿದ ಕೈಯನ್ನು ಕೆಳಗಿಳಿಸಿ ಕೈಕೋಳ ತೊಡಿಸಿದ್ದಾರೆ.  ಕೈ ಇಳಿಯಿತಾದರೂ ಅವನ ಮುಖ ಮಾತ್ರ ಧ್ವಜವನ್ನೇ ದಿಟ್ಟಿಸುತ್ತಿದೆ.  ಬಾಯಲ್ಲಿ ಜನಗಣಮಂಗಲದಾಯಕ ಮುಂದುವರೆದಿದೆ.  ಅವನನ್ನು ಪೊಲೀಸರು ಎಳೆದೊಯ್ಯುತ್ತಿದ್ದರೂ ಅವನು ಧ್ವಜದತ್ತ ಗೋಣು ತಿರುಗಿಸಿ ಗೀತೆಯನ್ನು ಪೂರ್ಣಗೊಳಿಸಿದ್ದಾನೆ.  ಅವನ ಹಾಡು ಮುಗಿದ ಕೂಡಲೇ ಧ್ವಜ ಹಗ್ಗದಿಂದ ಬಿಡಿಸಿಕೊಂಡು ಹಾರಲು ಪ್ರಾರಂಭಿಸಿದೆ.  ಹಾರುತ್ತ ಹಾರುತ್ತ ಬೆಳ್ಳನೆಯ ಪಾರಿವಾಳವಾಗಿ ರೂಪಾಂತರಗೊಂಡು ಆಗಸದತ್ತ ಹಾರಿ ಹೋಗುತ್ತಲಿದೆ.  ಅದನ್ನು ಕಂಡು ಜಾಲಪ್ಪನ ಮುಖದಲ್ಲಿ ಅನಿರ್ವಚನೀಯ ಮಂದಹಾಸ ಮೂಡುತ್ತಿದೆ. ಯಾವ ಜಯಕಾರವೂ ಈಗ ಅವನ ಕಿವಿ ತಲುಪುತ್ತಿಲ್ಲ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಅತ್ಯುತ್ತಮ ಬರಹ.
ಪ್ರತೀ ಹಂತವನ್ನೂ
ಕಣ್ಣಿಗೆ ಕಟ್ಟುವಂತೆ
ವಿವರಿಸಿದ್ದೀರಿ.
ಧನ್ಯವಾದಗಳು ಪ್ರವೀಣ್.

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ವಾಹ್… ತುಂಬಾ ಚೆನ್ನಾಗಿದೆ ಪ್ರವೀಣ್.. ಬರಹ..

bahubali
bahubali
9 years ago

Tumba Channagide

 

prashasti.p
9 years ago

ಸಖತ್ತಾದ ಬರಹ ಪ್ರವೀಣರೇ.. ಜಾಲಪ್ಪ ಕಣ್ಣೆದ್ರು ಬಂದಗಾಯ್ತು..

ಜೆ.ವಿ.ಕಾರ್ಲೊ
ಜೆ.ವಿ.ಕಾರ್ಲೊ
9 years ago

ಮನ ಮುಟ್ಟುವಂತ ಕತೆ.

5
0
Would love your thoughts, please comment.x
()
x