ಧೃತರಾಷ್ಟ್ರಾಲಿಂಗನ !: ಕೆ ಟಿ ಸೋಮಶೇಖರ. ಹೊಳಲ್ಕೆರೆ

‘ ಆಲಿಂಗನ ‘ ಎಂಬ ಪದವೇ ಆಪ್ಯಾಯಮಾನ ಅನಿಸುವಂತಹದ್ದು! ಹಿತಕರ ಅನುಭವ ಉಂಟು ಮಾಡುವಂತಹದ್ದು. ಆಲಿಂಗನವೆಂಬ ಕ್ರೀಯೆ ಎರಡು ದೇಹಗಳ ಬೆಸುಗೆ! ಮಧುರ ಅನುಭವ! ಗಾಢ ಪ್ರೀತಿ, ಸ್ನೇಹ, ಮಮತೆ ಆಲಿಂಗನದ ಸಂಕೇತಗಳು! ಆಲಿಂಗನದಲ್ಲಿ ದೇಹಗಳಷ್ಟೇ ಬೆಸೆದಿರುವಂತೆ ಕಂಡರೂ ಮನಸ್ಸುಗಳು ಮೊದಲೇ ಸೂಜಿಗಲ್ಲಿನಂತೆ ಸೆಳೆದು ಆಲಂಗಿಸಿಕೊಂಡಿರುತ್ತವೆ. ಮನಸ್ಸುಗಳು ಆಕರ್ಷಿಸದೆ ದೇಹಗಳು ಆಲಿಂಗನಗೊಳ್ಳುವುದಿಲ್ಲ! ದೇಹಗಳ ಆಲಿಂಗನದಿಂದ ಮನಸ್ಸುಗಳು ಸ್ಪರ್ಷಾನಂದದ ಅನುಭವ ಹೊಂದುತ್ತಿರುತ್ತವೆ! ಸ್ಪರ್ಷಾನುಭವ ವ್ಯಕ್ತಿಗಳು ಹೊಂದಿರುವ ಅನ್ಯೋನ್ಯತೆಯ ಆಧಾರದ ಮೇಲೆ ಸಂತಸ ಉಂಟು ಮಾಡುತ್ತಿರುತ್ತದೆ. ಹಾಗೇ ಗಾಢಾಲಿಂಗನ ಅವರ ನಡುವಿನ ಪ್ರೀತಿ, ಮಮತೆ, ಸ್ನೇಹದ ಪರಾಕಾಷ್ಟೆಯ ಸಂಕೇತವಾಗಿರುತ್ತದೆ. ಆಲಂಗಿಸಲು ಬಾಹುಗಳನ್ನು ವಿಸ್ತರಿಸುತ್ತಿದ್ದಾರೆಂದರೆ ಅವರ ಮಧ್ಯ ಯಾವುದೋ ಒಂದು ಅನ್ಯೋನ್ಯತೆ ಇರುತ್ತದೆ ಎಂದು ತಿಳಿಯಬೇಕು. ಅವರು ನಿಜವಾಗಿಯೂ ಆ ಅನ್ಯೋನ್ಯತೆಯನ್ನು, ಮಮತೆಯನ್ನು, ಸ್ನೇಹವನ್ನು, ಪ್ರೀತಿಯನ್ನು ಆಲಂಗಿಸುತ್ತಾರೆ ವಿನಃ ದೇಹವನ್ನಲ್ಲ! ದೇಹದ ಆಲಿಂಗನ ಅವುಗಳ ಸಂಕೇತ ಮಾತ್ರ! ಕೆಲವೊಮ್ಮೆ ಆದ ಸಂತೋಷವನ್ನು ಮಾತುಗಳಿಂದ, ಭಾವಾಭಿನಯದಿಂದ ಅಭಿವ್ಯಕ್ತಿಸಲು ಸಾಧ್ಯವಾಗದಿದ್ದಾಗ, ಮಾತುಗಳು ಸಾಲದಾದಾಗ, ಸಮರ್ಥವಾಗದಿದ್ದಾಗ,‌ ತನ್ನ ನುಡಿಯ ಅಭಿವ್ಯಕ್ತಿಯಿಂದ ತೃಪ್ತಿಯಾಗದಿದ್ದಾಗ ಆಲಿಂಗನದ ಮೂಲಕ ಅಭಿವ್ಯಕ್ತಿಸಿ ತೃಪ್ತಿಪಡುತ್ತಾರೆ. ಆಲಿಂಗನವನ್ನು ಮಾತುಗಳಲ್ಲಿ ಹಿಡಿದಿಡಲಾಗದು, ವರ್ಣಿಸಲಸದಳ! ಅದು ಅನುಭವಿಸಿಯೇತೀರಬೇಕು!

ಧೃತರಾಷ್ಟ್ರಾಲಿಂಗನವೆಂದರೆ ದ್ವೇಷಾಲಿಂಗನ. ‘ ದ್ವೇಷಾಲಿಂಗನ ‘ ಎನ್ನುವ ಪದವೇ ವಿರೋದಾಭಾಸಗಳಿಂದ ಕೂಡಿರುವಂತಹದ್ದು! ದ್ವೇಷವಿರುವವರಲ್ಲಿ ಆಲಿಂಗಿಸುವ ಪ್ರೀತಿ, ಮಮತೆ, ಸ್ನೇಹ ಭಾವಗಳಿರಲು ಸಾದ್ಯವಿಲ್ಲ. ಹಾಗೆ ಆಲಿಂಗಿಸುತ್ತಿರುವವರಲ್ಲಿ ದ್ವೇಷ ಭಾವವಿರಲು ಸಾಧ್ಯವಿಲ್ಲ! ದ್ವೇಷವಿದ್ದ ಕಡೆ ಪ್ರೀತಿಗಾಗಲಿ ಪ್ರೀತಿ ಇದ್ದ ಕಡೆ ದ್ವೇಷಕ್ಕಾಗಲಿ ನೆಲೆ ಇರುವುದಿಲ್ಲ. ಆದರೂ ಕೆಲವು ಕತೆ, ಪುರಾಣ, ಇತಿಹಾಸವನ್ನು ಓದುವಾಗ ಇದಕ್ಕೆ ಸಂಬಂಧಿಸಿದ ಕೆಲವು ಘಟನೆಗಳು ನೆನಪಾಗುತ್ತವೆ. ಛತ್ರಪತಿ ಶಿವಾಜಿಯ ಇತಿಹಾಸ ಓದುವಾಗ ಬಿಜಾಪುರದ ಸುಲ್ತಾನರ ವಶದಲ್ಲಿದ್ದ ರಾಯಘಡ, ಸಿಂಹಗಡ, ಪುರಂದರಗಡ ಮುಂತಾದವನ್ನು ಶಿವಾಜಿ ವಶಪಡಿಸಿಕೊಳ್ಳುತ್ತಾನೆ. ಅವನನ್ನು ತಡೆಯಲು ಯಾರಿಂದಲೂ ಆಗುವುದಿಲ್ಲ! ಬಿಜಾಪುರದ ಸುಲ್ತಾನ ತನ್ನ ಕಡೆ ಅನೇಕ ವೀರಾದಿವೀರರಿದ್ದು ಅವನನ್ನು ನಿಯಂತ್ರಿಸಲಾಗದ್ದಕ್ಕೆ ಕೋಪಗೊಂಡಿರುತ್ತಾನೆ. ಶಿವಾಜಿಯನ್ನು ನಿಯಂತ್ರಿಸಲಾಗಲಿ ಮುಗಿಸಲಾಗಲಿ ಸುಲ್ತಾನನ ಕಡೆಯ ವೀರರು ಯಾರೂ ಮುಂದಾಗದಿದ್ದಾಗ ನಾನು ಮುಗಿಸುತ್ತೇನೆಂದು ಬಿಜಾಪುರದ ಸುಲ್ತಾನನಿಂದ ವೀಳ್ಯಪಡೆದವನೆ ವೀರ ಅಜಾನುಬಾಹು ಅಫಜಲಖಾನ್. ಶಿವಾಜಿಯನ್ನು ಮೋಸದಿಂದ ಮಾತ್ರ ಮುಗಿಸಲು ಸಾಧ್ಯ! ನೀನೂ ಹಾಗೆ ಮಾಡು ಎಂಬ ಸೂಚನೆಯೊಂದಿಗೆ ಬಂದಿರುತ್ತಾನೆ. ಶಿವಾಜಿಯನ್ನು ಮುಗಿಸಲು ಪರಿಪರಿಯಾಗಿ ಪ್ರಯತ್ತಿಸಿ ಬಸವಳಿದುದೇ ಸಾಧನೆಯೆಂಬಂತಾಗುತ್ತದೆ. ಅವನನ್ನು ಸೋಲಿಸಲಾಗದೆ ಹಿಡಿಯಲಾಗದೆ ಬಿಜಾಪುರದ ಸುಲ್ತಾನನಿಗೆ ತನ್ನ ಅಸಹಾಯಕತೆಯನ್ನು ತೆರೆದಿಡಲಾರದೆ ಶಿವಾಜಿಯೊಂದಿಗೆ ರಾಜಿ ಮಾಡಿಕೊಳ್ಳುವ ನಾಟಕವಾಡಿ ಅವನ ಭೇಟಿಗೆ ಆಹ್ವಾನಿಸಿ ಅವನನ್ನು ಆಲಂಗಿಸುವ ನೆಪದಲ್ಲಿ ಅವನನ್ನು ಮುಗಿಸಬಯಸಿರುತ್ತಾನೆ. ಅಫಜಲಖಾನ್ ಶಿವಾಜಿಯನ್ನು ಆಲಂಗಿಸುತ್ತಾ ಕತ್ತಿನ ಭಾಗವನ್ನು ಉಸಿರುಗಟ್ಟಿಸಲು ಬಿಗಿಗೊಳಿಸಿ ಗುಪ್ತವಾಗಿ ಅಡಗಿಸಿದ ಚೂರಿಯಿಂದ ಬೆನ್ನಿಗೆ ಇರಿಯುತ್ತಾನೆ. ನಿಲುವಂಗಿಯ ಒಳಗಿನ ಲೋಹದ ರಕ್ಷಾ ಕವಚ ಸೀಳುತ್ತದೆ. ತಕ್ಷಣ ತಾನು ಧರಿಸಿದ್ದ ವ್ಯಾಘ್ರನಖದಿಂದ ಅಫಜಲಖಾನನನ್ನು ಮುಗಿಸುತ್ತಾನೆ. ಖಾನನ ಮಂತ್ರ ಅವನಿಗೇ ತಿರುಮಂತ್ರವಾಗುವುದು ವೈರುಧ್ಯ! ಇದು ದ್ವೇಷದ ಆಲಿಂಗನವಲ್ಲವೆ? ಆಲಿಂಗನ ಅನ್ಯೋನ್ಯತೆಯನ್ನು ಹೆಚ್ಚಿಸಿದರೆ ದ್ವೇಷಾಲಿಂಗನ ಅನಾಹುತವನ್ನೇ ಮಾಡುತ್ತದೆ. ಆಲಿಂಗನದ ಮಾರುವೇಷದಲ್ಲಿ ದ್ವೇಷವನ್ನು ಸಾಧಿಸುವ ಉದ್ದೇಶ ಇಲ್ಲಿ ಎದ್ದು ಕಾಣುತ್ತದೆ. ಆಲಿಂಗನವನ್ನು ದ್ವೇಷ ಸಾಧಿಸಲು ಬಳಸಿಕೊಂಡಿದ್ದು ಸರಿಯಲ್ಲ. ಇಲ್ಲಿ ಶಿವಾಜಿಯನ್ನು ಆಲಂಗಿಸಿಕೊಂಡು ಕೊಲ್ಲ ಬಯಸಿದ ಉಪಾಯಗಾರ ಅಫಜಲಖಾನ್! ಅವನಲ್ಲೇ ಸ್ನೇಹದ ಸೋಗಿನಲ್ಲಿ ದ್ವೇಷ ಹುಟ್ಟಿದ್ದು! ಕೊನೆಗೆ ಅವನನ್ನೇ ಆಹುತಿ ಪಡೆದದ್ದು! ಹೀಗೆ ಕೆಟ್ಟ ಚಿಂತನೆಗಳು ಕೆಟ್ಟ ಪ್ರತಿಫಲವನ್ನು ಕೊಡದೆ ಒಳ್ಳೆಯ ಪ್ರತಿಫಲಗಳನ್ನು ಕೊಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಹಾಕುತ್ತವೆ.

ಕುರುಕ್ಷೇತ್ರ ಯುದ್ದ ಮುಗಿದಿರುತ್ತದೆ. ದೃತರಾಷ್ಟ್ರ ಮಕ್ಕಳ ಮರಣದಿಂದ ಜರ್ಝರಿತನಾಗಿರುತ್ತಾನೆ. ಅದರಲ್ಲೂ ದುರ್ಯೋಧನನ ಸಾವು ಧೃತರಾಷ್ಟ್ರನನ್ನು ಶೋಕಸಾಗರದಲ್ಲಿ ಮುಳುಗಿಸಿರುತ್ತದೆ. ದೊಡ್ಡ ಮರದ ಅಸಂಖ್ಯಾತ ರೆಂಬೆ ಕೊಂಬೆಗಳನ್ನೆಲ್ಲಾ ಕಡಿದಾಗ ಕಾಣುವ ಮೋಟು ಮರದಂತೆ ಕಾಣುತ್ತಿರುವುದು ಅವನ ದುಸ್ಥಿತಿಯ ಸಂಕೇತವಾಗಿರುತ್ತದೆ. ದುರ್ಯೋಧನನ ನಿಧನ ವಾರ್ತೆಯನ್ನು ಕೇಳಿ ಮೂರ್ಚೆ ಹೋಗುತ್ತಾನೆ. ಸಂಜಯ ವೇದಾಂತ ತತ್ವಗಳ ಮೊರೆ ಹೋಗಿ ಸಮಾಧಾನ ಮಾಡುತ್ತಾನೆ. ಕೆಲವು ಹೆಂಗಳೆಯರು ಮಗನನ್ನು ಮತ್ತೆ ಕೆಲವರು ಗಂಡನ್ನು ಕಳೆದುಕೊಂಡು ದುಃಖದಲ್ಲೇ ಮುಳುಗಿ ಕೂದಲು ಕೆದರಿಕೊಂಡು ಹೊರಳಾಡುತ್ತಿರುತ್ತಾರೆ. ಆ ಹೆಂಗಳೆಯರ ದುಃಖ ಮುಗಿಲು ಮುಟ್ಟಿರುತ್ತದೆ. ಎಲ್ಲರೂ ಹೀಗೆ ದುಃಖ ಸಾಗರದಲ್ಲಿ ಮುಳುಗಿದ್ದುದರಿಂದ ವೀರ ಸ್ವರ್ಗ ಹೊಂದಿದವರಿಗೆ ಉತ್ತರ ಕ್ರೀಯೆಗಳನ್ನು ಮಾಡಲು ಯಾರೊಬ್ಬರಿಗೂ ನೆನಪಾಗುವುದಿಲ್ಲ! ನೆನಪಾದರೂ ಮನಸ್ಸು ಬರುವುದಿಲ್ಲ. ಧೃತರಾಷ್ಟ್ರನು ಹಾಗೆ ದುಃಖದ ಮಡುವಿನಲ್ಲಿ ಮುಳುಗಿರುತ್ತಾನೆ. ಸಂತೈಸುವವರೇ ದುಃಖದಲ್ಲಿ ಮುಳುಗಿದರೆ ಜನ ಸಾಮಾನ್ಯರನ್ನು ಸಂತೈಸುವವರು ಯಾರು ಎಂದು ಸಂಜಯ ಧೃತರಾಷ್ಟ್ರನಿಗೆ ಕೇಳುತ್ತಾ ನೀನು ವೇದಶಾಸ್ತ್ರ ಬಲ್ಲವನಾಗಿ ಹೀಗೆ ಶೋಕದಲ್ಲಿ ಮುಳುಗಿದರೆ ಉತ್ತರ ಕ್ರೀಯೆಗಳನ್ನು ಮಾಡುವವರಾರು? ವೀರ ಮರಣಹೊಂದಿದವರಿಗೆ ಸ್ವರ್ಗ ಸಿಗುವುದು ಯಾವಾಗ? ಬಂಧು ಬಳಗ ಪ್ರಜೆಗಳಿಗೆ ದೈರ್ಯ ತುಂಬುವವರು ಯಾರು ಎಂದು ಸಮಾಧಾನ ಪಡಿಸಿ ಉತ್ತರ ಕ್ರೀಯೆ ನೆರವೇರಿಸಲು ದೃತರಾಷ್ಟ್ರನನ್ನು ಸಿದ್ದಗೊಳಿಸುತ್ತಾನೆ. ದೃತರಾಷ್ಟ್ರ ದಾರಿಯಲ್ಲಿ ಸಾಗಿ ಬರುವಾಗ ಗಂಡನನ್ನು ಕಳೆದುಕೊಂಡವರು, ಮಕ್ಕಳನ್ನು ಕಳೆದುಕೊಂಡವರು, ಗಾಯಗೊಂಡವರು, ನೋವುಂಡವರು ಧೃತರಾಷ್ಟ್ರನ ರಥವನ್ನು ಮುತ್ತಿ ಶೋಕವನ್ನು ಹೊತ್ತಿ ಉರಿಸುತ್ತಾರೆ. ಇದನ್ನು ತಿಳಿದ ಧರ್ಮರಾಯ ಪರಿವಾರ ಸಮೇತ ಮಾತನಾಡಿಸಿ ದುಃಖ ಕಡಿಮೆ ಮಾಡಿ ಬರೋಣವೆಂದು ಆಗಮಿಸುತ್ತಾನೆ. ಪ್ರತಿಯೊಬ್ಬರೂ ಧೃತರಾಷ್ಟ್ರನ ಮುಂದೆ ಹೋಗಿ ತಮ್ಮ ತಮ್ಮ ಹೆಸರು ಹೇಳಿ ನಮಸ್ಕರಿಸಿ ಬರುತ್ತಿರುತ್ತಾರೆ. ಮೊದಲು ಧರ್ಮರಾಯ ಹೋಗಿ ನಮಸ್ಕರಿಸುತ್ತಾನೆ. ಅವನನ್ನು ಸುಮ್ಮನೆ ಪ್ರೀತಿಯಿಲ್ಲದೆ ಆಲಂಗಿಸಿಕೊಂಡು ಆಲಿಂಗನದ ತೋರಿಕೆಯ ಶಾಸ್ತ್ರ ಮುಗಿಸುತ್ತಾನೆ. ದೇಹ ಆಲಿಂಗನದಲ್ಲಿ ಭಾಗಿಯಾಗಿದ್ದರೂ ಮನಸ್ಸು ಮಾತ್ರ ಈ ಅಲಿಂಗನದಲ್ಲಿ ಭಾಗಿಯಾಗಿರುವುದಿಲ್ಲ! ಆಪ್ತತೆಯೇ ಇಲ್ಲದ ಆಲಿಂಗನ! ಆಲಿಂಗನದಲ್ಲಿ ದೇಹವಷ್ಟೇ ಭಾಗಿಯಾಗುವುದಕ್ಕೆ ಅರ್ಥವಿರುವುದಿಲ್ಲ! ಅದು ಶಿಷ್ಟಾಚಾರವಾಗಿ ಔಪಚಾರಿಕತೆಯಾಗಿ ಕಾಣುತ್ತದೆ. ಈ ಸಂದರ್ಭ ಅಂತಹದ್ದು. ನೂರು ಜನ ಮಕ್ಕಳನ್ನು ಕೊಂದ ವೈರಿ ಪಕ್ಷದವರನ್ನು ಹೇಗೆ ಪ್ರೀತಿಯಿಂದ ಆಲಂಗಿಸಲು ಸಾಧ್ಯ?

ಧರ್ಮರಾಯನ ಆಲಿಂಗನದ ಶಾಸ್ತ್ರ ಮುಗಿಸಿದ ನಂತರ ಧೃತರಾಷ್ಟ್ರ, ಭೀಮ ಎಲ್ಲಿ? ಎಂದು ಕೇಳುತ್ತಾನೆ. ಅವನ ಮುಖದಲ್ಲಿ ಕೋಪಾಗ್ನಿ, ದುಃಖವಾಯು ಧಗಧಗಿಸುತ್ತಾ ದ್ವೇಷಾಗ್ನಿ ಭೀಮನನ್ನು ಸುಟ್ಟು ಬೂದಿಮಾಡುವಂತೆ ತೋರುತ್ತಿರುತ್ತದೆ! ಇದನ್ನು ಮೊದಲೇ ಊಹಿಸಿದ್ದ ಶ್ರೀಕೃಷ್ಣ ಭೀಮನನ್ನು ಹಿಂದಕ್ಕೆ ಕರೆದುಕೊಂಡು ಭೀಮನ ಕಬ್ಬಿಣದ ವಿಗ್ರಹವನ್ನು ಧೃತರಾಷ್ಟ್ರನ ಮುಂದಕ್ಕೆ ತಳ್ಳಿದನು. ಅದನ್ನೇ ಭೀಮನೆಂದು ಭಾವಿಸಿಕೊಂಡು ತನ್ನ ಎರಡೂ ತೋಳುಗಳಲ್ಲಿಯೂ ಬಿಗಿಯಾಗಿ ಹಿಡಿದು ಮಿಸುಕಾಡದಂತೆ ತಬ್ಬಿಕೊಂಡ ಅನ್ನುವುದಕ್ಕಿಂತಾ ಬಾಹುಬಲವೆಲ್ಲಾ ಒಟ್ಟುಗೂಡಿಸಿ ಹಿಚುಕಿದ. ಆ ತಬ್ಬವಿಕೆಯ ಬಿಗಿಯಾದ ಹಿಡಿತಕ್ಕೆ ವಿಗ್ರಹ ನಜ್ಜುಗುಜ್ಜಾಗಿ ಹೋಯಿತು! ಕಬ್ಬಿಣದ ಭೀಮನ ವಿಗ್ರಹ ನಜ್ಜುಗುಜ್ಜಾಗಿರಬೇಕಾದರೆ ಇನ್ನು ಹೇಗೆ ಬಿಗಿಯಾಗಿ ಹಿಚುಕಿರಬಹುದು? ತನ್ನ ಕ್ರೋದಾಗ್ನಿಯನ್ನೆಲ್ಲಾ ಒಟ್ಟುಗೂಡಿಸಿ ಆಲಂಗಿಸಿಕೊಂಡಿರಬೇಕು ಅದಕ್ಕೆ ದೃತರಾಷ್ಟ್ರನ ಎದೆಯು ತಗ್ಗಾಗಿ ರಕ್ತಕಾರಿ ನೆಲದಮೇಲೆ ಬೀಳುವಂತಾಯಿತು. ಸಂಜಯ ಅವನನ್ನು ಹಿಡಿದುಕೊಂಡುನು. ಧೃತರಾಷ್ಟ್ರ ಭೀಮ ಸತ್ತನೆಂದು ಭಾವಿಸಿ ಅಯ್ಯೋ ಭೀಮ! ಅಯ್ಯೊ ಭೀಮ! ಎಂದು ಕೂಗಿಕೊಂಡನು. ಹೀಗೆ ದ್ವೇಷಾಗ್ನಿ ಭೀಮನ ಕಬ್ಬಿಣದ ವಿಗ್ರಹದಮೇಲೆ ಧಾಳಿ ಮಾಡಿ ನಜ್ಜುಗುಜ್ಜಾಗಿಸಿತು! ನಂತರ ಅವನ ಕ್ರೋದಾಗ್ನಿ ತಣ್ಣಗಾಗುತ್ತಾ ಬಂತು. ಅವನು ತಿಳಿಯಾದ ಮೇಲೆ ನೀನು ಕೊಂದೆ ಎಂದು ಭಾವಿಸಿದ್ದು ಭೀಮನನ್ನಲ್ಲ! ಭೀಮ ಸಾಯಲೂ ಇಲ್ಲ! ನಿನ್ನ ಮಗ ಮಾಡಸಿಟ್ಟಿದ್ದ ಭೀಮನ ಕಬ್ಬಿಣದ ಪ್ರತಿಮೆಯನ್ನು ನಜ್ಜುಗುಜ್ಜಾಗಿಸಿದೆ ಹೊರತು ಭೀಮನನ್ನಲ್ಲ! ನಿನ್ನ ಸಿಟ್ಟನ್ನು ನೋಡಿ ಎಲ್ಲಿ ಅನಾಹುತವಾಗಿಬಿಡುವುದೋ ಎಂದು ನಾನೆ ಕಬ್ಬಿಣದ ಪ್ರತಿಮೆಯನ್ನು ನಿನ್ನ ಬಳಿ ತಳ್ಳಿದೆ. ನಿನ್ನ ತೋಳ ಹಿಡಿತಕ್ಕೆ ಸಿಕ್ಕಿದರೆ ಯಮನ ಪಾಶಕ್ಕೆ ಸಿಕ್ಕಂತೆಯೇ. ಮಕ್ಕಳನ್ನು ಕಳೆದುಕೊಂಡ ಸಂಕಟದಲ್ಲಿ ಅಧರ್ಮದಿಂದ ಭೀಮನನ್ನು ಕೊಂದುಬಿಡುತ್ತಿದ್ದೆ. ಭೀಮನನ್ನು ಕೊಂದರೆ ಸತ್ತ ನಿನ್ನ ಮಕ್ಕಳು ತಿರುಗಿ ಬರುವರೇ? ನಿನ್ನ ಮಕ್ಕಳು ಅಧರ್ಮದ ದಾರಿಯಲ್ಲಿ ನಡೆಯುತ್ತಿದ್ದರೂ ಪುತ್ರ ವ್ಯಾಮೋಹದಿಂದ ತಡೆಯದೆ ಈ ಎಲ್ಲಾ ಅನಾಹುತ ನೋವುಗಳಿಗೆ ಕಾರಣನಾದೆ. ಈಗ ಮತ್ತೊಂದು ಅಧರ್ಮ ಮಾಡುತ್ತಿದ್ದೆ. ಹೇಗೋ ನಾನು ತಪ್ಪಿಸಿದೆ. ಸರಿಯಾಗಿ ತಿಳಿದುಕೊಂಡು ದುಃಖವನ್ನು ತಡೆದುಕೋ ಎಂದು ಮುಂತಾಗಿ ಕೃಷ್ಣ ಸಂತೈಸಿದ.

ಹೀಗೆ ಅಧರ್ಮದ ಮೂಲಕ ಉಪಾಯವಾಗಿ ಭೀಮನನ್ನು ಆಲಂಗಿಸಿ ಕೊಲ್ಲಬೇಕೆಂಬ ಧೃತರಾಷ್ಟ್ರನ ಸಂಕಟ, ಅಧರ್ಮ, ದ್ವೇಷ ಅವನ ಎದೆಯ ತಗ್ಗಾಗಿಸಿ ರಕ್ತಕಾರುವಂತೆ ಮಾಡುವುದು ಕಾಣುತ್ತೇವೆ. ಹೀಗೆ ಅದರ್ಮ, ದ್ವೇಷಗಳನ್ನು ಯಾರು ಪೋಷಿಸುವರೋ ಅವರಿಗೇ ಅವು ತೊಂದರೆ ಕೊಡುತ್ತವೆ. ಅಪ್ಯಾಯಮಾನತೆಯನ್ನು ಉಂಟುಮಾಡುವ ಆಲಿಂಗನವನ್ನು ಕೊಲ್ಲುವ ತಂತ್ರವಾಗಿಸಿದ್ದು ಸರಿಯಲ್ಲ! ಜತೆಗೆ ” ನಿನ್ನ ತೋಳಹಿಡಿತಕ್ಕೆ ಸಿಲುಕಿದರೆ ಯಮನ ಪಾಶಕ್ಕೆ ಸಿಕ್ಕಂತೆಯೇ ” ಎಂಬ ಕೃಷ್ಣನ ಮಾತು ಭೀಮನ ದೈಹಿಕ ಬಲವನ್ನು ಮೀರಿದ ದೈಹಿಕ ಬಲ ಧೃತರಾಷ್ಟ್ರನದು ಎಂದು ಹೇಳುತ್ತದೆ! ಹೀಗೆ ಮಕ್ಕಳ ಮೇಲಿನ ಕುರುಡು ಮಮಕಾರದಿಂದ, ಅಧರ್ಮದಿಂದ, ದ್ವೇಷದಿಂದ ಭೀಮನನ್ನು ಆಲಂಗಿಸಿ ಕೊಲ್ಲಹೋದ ಈ ಧೃತರಾಷ್ಟ್ರಾಲಿಂಗನವನ್ನು ದ್ವೇಷಾಲಿಂಗನ ಎನ್ನಬಹುದಲ್ಲವೇ? ದ್ವೇಷ ಬೆಂಕಿಯಿದ್ದಂತೆ. ಅದು ತಾನಿರುವ ಜಾಗವನ್ನು ಸುಟ್ಟಲ್ಲದೆ ಬೇರೆ ಜಾಗವನ್ನು ಸುಡದು ಎಂಬುದನ್ನು ಮರೆಯಬಾರದು! ದ್ವೇಷ ಇದ್ದದ್ದು ಧೃತರಾಷ್ಟ್ರನಲ್ಲಿ! ಆದ್ದರಿಂದ ದ್ವೇಷಾಲಿಂಗನದಿಂದಾಗಿಯೇ ಧೃತರಾಷ್ಟ್ರನ ಎದೆ ನಗ್ಗಿ ರಕ್ತಕಾರಿ ಬಿದ್ದದ್ದು! ಆದ ಪ್ರಯುಕ್ತ ದ್ವೇಷವನ್ನು ಯಾರೂ ಪೋಷಿಸಬಾರದು. ಪೋಷಿಸಿದವರಿಗೆ ದ್ವೇಷಕ್ಕೆ ತಕ್ಕಂತಹ ದುಃಖ ಕಟ್ಟಿಟ್ಟ ಬುತ್ತಿ! ದ್ವೇಷ ಮಾನಸಿಕ ಒತ್ತಡವನ್ನು ತಂದು ಅನಾರೋಗ್ಯಕ್ಕೆ ಕಾರಣವಾಗುತ್ತದೆ!

ಇದೆಲ್ಲವನ್ನು ಓದಿ ತಿಳಿದಿದ್ದರೂ ಸಮಾಜದಲ್ಲಿ ಇಂದು ಸಹ ವಿಪರೀತ ಪುತ್ರ ವ್ಯಾಮೋಹ, ಅಪಾರ ಅಧಿಕಾರ ದಾಹ, ಸಂಪತ್ತಿನ ಮೋಹ, ಬಿಗಿ ಪಟ್ಟು ಹಾಕಿ ಹಿಡಿದ ಧೃತರಾಷ್ಟ್ರಾಲಿಂಗನಗಳು ನಿತ್ಯ ಕುರುಕ್ಷೇತ್ರಗಳಿಗೆ ದಾರಿ ಮಾಡುತ್ತಿರುವುದು ದುರದೃಷ್ಟಕರ!

-ಕೆ ಟಿ ಸೋಮಶೇಖರ. ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x