ನಮ್ಮನ್ನಗಲಿದ ತುಳು-ಕನ್ನಡಿಗರ ಹೆಮ್ಮೆಯ ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ
ದುಡಿತವೇ ನನ್ನ ದೇವರು, ಲೋಕ ದೇವಕುಲ
ಬೆವರೆ ಹೂ ಹಣ್ಣು ಕಾಯ್, ಕಣ್ಣೀರ ತೀರ್ಥಂ
ಎಮ್ಮೊಂದಿಗರ ಬಾಳ ಸಾವು ನೋವಿನ ಗೋಳ
ಉಂದಿಹೆನು ಸಮಪಾಲ-ನನಗದುವೆ ಮೋಕ್ಷಂ
ದುಡಿತಕ್ಕೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ ಕಾಯಕವೇ ಕೈಲಾಸಂ ಎಂ¨ ಬಸವಣ್ಣನವರ ಸತ್ಪಥದಲ್ಲಿ ಸಾಗಿ ಅದರಂತೆ ಬಾಳಿದವರು ಹಿರಿಯ ಧೀಮಂತ ಚೇತನ, ಕನ್ನಡಾಂಬೆಯ ಪುತ್ರರತ್ನ ಹಿರಿಯ ಚೇತನ ಕೈಯ್ಯಾರ ಕಿಞ್ಞಣ್ಣ ರೈ. ಕಾಸರಗೋಡಿನ ಕನ್ನಡ ಪರ ಹೋರಾಟದಲ್ಲಿ ಕೇಳಿ ಬರುವ ಮೊದಲ ಹೆಸರು ಕಯ್ಯಾರ ಕಿಞ್ಞಣ್ಣ ರೈ ಅವರದ್ದು. ಕಾಸರಗೋಡು ಜಿಲ್ಲೆಯು ಕರ್ನಾಟಕದ ಭಾಗವಾಗಿದ್ದ ಕಾಲದಿಂದಲೂ ತಮ್ಮ ಸಾಹಿತ್ಯ, ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡವರು. ಇವರಿಗೆ ತುಳು ಭಾಷೆ ಹೆತ್ತ ತಾಯಿಯಾದರೆ, ಕನ್ನಡ ಭಾಷೆ ಸಾಕುತಾಯಿ. ತಮ್ಮನ್ನು ಬೆಳೆಸಿದ ಕನ್ನಡ ತುಳು ಭಾಷೆಯ ಮೇಲೆ ಇವರಿಗೆ ಅಪಾರ ಒಲವು.
ಜುಲೈ8, 1915ರಂದು ದುಗ್ಗಪ್ಪ ರೈ ಮತ್ತು ದೇಯಕ್ಕ ರೈ ದಂಪತಿಗಳ ಪುತ್ರನಾಗಿ ಜನಿಸಿದ ಇವರಿಗೆ ಕಯ್ಯಾರ ಕಿಞ್ಞಣ್ಣ ರೈ ವಿಶಿಷ್ಟವಾದ ನಾಮಕರಣ ಮಾಡಲಾಯಿತು. ಇವರ ಹೆಸರು ವಿಶಿಷ್ಟವಾಗಿದ್ದು ಕನ್ನಡದಲ್ಲಿ ಬರೆಯುವಾಗ ಬಹಳ ಅಪರೂಪವಾಗಿ ಬಳಸುವ ಅನುನಾಸಿಕ' ಞ' ಪದವನ್ನೆ ಸೇರಿಸಿ ಬರೆಯುವುದು. ಇವರು ಕೇವಲ ತನ್ನ ಕಾರ್ಯಗಳಿಂದ ಮಾತ್ರವಲ್ಲ ಹೆಸರಿನಲ್ಲಿಯೂ ವಿಶೇಷತೆ ಪಡೆಯುತ್ತಾರೆ. ಕಿಞ್ಞಣ್ಣ ಎಂದರೆ ತುಳುವಿನಲ್ಲಿ ಕಿರಿಯವನು ಎಂದರ್ಥ. ಅದರಂತೆ ಅವರ ಪತ್ನಿಯ ಹೆಸರೂ ಕೂಡಾ ವಿಶಿಷ್ಟ ಉಚ್ಚಾರದಿಂದ ಕೂಡಿದೆ. ಅವರ ಧರ್ಮಪತ್ನಿ ಉಞ್ಞಕ್ಕೆ. ಬದಿಯಡ್ಕ ಸಮೀಪದ ಪೆರಡಾಲ ಎಂಬ ಗ್ರಾಮದಲ್ಲಿರುವ ಕವಿತಾ ಕುಟೀರದಲ್ಲಿ ರೈ ಅವರ ವಾಸ. ತಮ್ಮ ಪಾರಂಪರಿಕ ಮೌಲ್ಯಗಳ ಆರ್ಷೇಯ ಚಿಂತನೆಗಳಿಂದ ಬಾಳಿ ಬದುಕಿ ತನ್ನ ಬದುಕಿನ ಸಾರ್ಥಕ ಶತಮಾನೋತ್ಸವವನ್ನು ಆಚರಿಸಿದವರು ಕಯ್ಯಾರರು. ಕನ್ನಡ ಸಾಹಿತ್ಯ ಲೋಕದ ಹಿರಿಯಣ್ಣನೆಂಬ ಪ್ರೀತಿ, ಗೌರವಕ್ಕೆ ಪಾತ್ರರಾದ ಹಿರಿಯ ಚೇತನ ಇಂದು ನಮ್ಮೊಂದಿಗಿಲ್ಲ ಎನ್ನುವುದು ಅತ್ಯಂತ ವಿಷಾದನೀಯ, ದು:ಖಕರ ವಿಷಯ.
ಕೃಷಿಕ ಮನೆತನದಲ್ಲಿ ಜನಿಸಿದ ಕೈಯ್ಯಾರ ಕಿಞ್ಞಣ್ಣ ರೈ ಅವರು ಒಬ್ಬ ಆದರ್ಶ ಶಿಕ್ಷಕರಾಗಿ, ಧೀಮಂತ ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕವಿಯಾಗಿ, ಸಾಹಿತಿಯಾಗಿ ಹೆಸರುವಾಸಿಯಾದವರು.
ಕೈಯ್ಯಾರ ಕಿಞ್ಞಣ್ಣ ರೈ
‘ಶ್ರೀಮುಖ' ಕವಿ ಕಯ್ಯಾರರ ಚೊಚ್ಚಲ ಕವನ ಸಂಕಲನ. ತನ್ನ 12ನೇ ವಯಸ್ಸಿನಲ್ಲಿ ‘ಸುಶೀಲಾ' ಎಂಬ ಹಸ್ತ ಪ್ರತಿಯನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದ್ದು. " ಬೆಂಕಿ ಬಿದ್ದಿದೆ ಮನೆಗೆ ಓ ಬಾ ಬೇಗ ಬನ್ನಿ" ಎಂಬ ಕಯ್ಯಾರರ ಕವನ ಜನರ ನರನಾಡಿಗಳಲ್ಲಿ ಮಿಂಚು ಹರಿಸಿದ್ದು ಮರೆಯುವಂತಿಲ್ಲ. ಕರ್ನಾಟಕದ ಏಕೀಕರಣಕ್ಕೆ , ಕಾಸರಗೋಡು ಕನ್ನಡಿಗರನ್ನು ಮುಖವಾಹಿನಿಗೆ ಸೇರಿಸಲು ಮಾಡಿದ ಹೋರಾಟ ಅವರೊಬ್ಬ ಧೀಮಂತ ಕವಿ ಎನ್ನುವುದಕ್ಕೆ ನಿದರ್ಶನ. ಆದರೆ ಅವರ ಶ್ರಮಕ್ಕೆ ಫಲ ದೊರೆಯದೇ ಇದ್ದದ್ದು ಮಾತ್ರ ವಿಷಾದನೀಯ ಅಂಶ.
ಕೃಷಿಯಾಗಲಿ, ಹೋರಾಟವಾಗಲಿ, ಸಾಹಿತ್ಯ ಕೃಷಿಯಾಗಲಿ, ಯಾವ ಕ್ಷೇತ್ರದಲ್ಲಿಯೂ ದುಡಿದು ದಣಿವರಿಯದ ದೈತ್ಯ ಚೇತನ ಕೈಯ್ಯಾರರದ್ದು. ತಮ್ಮ ಜೀವನದಲ್ಲಿ ಶಿಸ್ತು, ಸೇವೆ, ಕರ್ತವ್ಯಕ್ಕೆ ಪ್ರಾಮುಖ್ಯತೆ ನೀಡಿದ ಅವರದ್ದು ಆದರ್ಶಪ್ರಾಯ ಜೀವನ.
ಕಯ್ಯಾರ ಕಿಞ್ಞಣ್ಣ ರೈ ಅವರು ಶಾಲಾ ಶಿಕ್ಷಕರಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಬಿ.ಎ ಹಾಗೂ ಎಂ.ಎ ಪದವಿಯನ್ನು ಉಚ್ಚ ಶ್ರೇಣಿಯಲ್ಲಿ ಗಳಿಸಿದ ಕಯ್ಯಾರರು ಅಧ್ಯಾಪಕ ತರಬೇತಿ ಪಡೆದು ಶಿಕ್ಷಕರಾದರು. ಪತ್ರಿಕೋದ್ಯಮಗಳಲ್ಲಿಯೂ ಸ್ವಾಭಿಮಾನ, ಮದ್ರಾಸ್ ಮೈಲ್,, ಹಿಂದೂ ಪತ್ರಿಕೆಗಳಲ್ಲಿ ತಮ್ಮ ಹರಿತವಾದ ಬರವಣಿಗೆಯ ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. 1969ರಲ್ಲಿ 'ಅತ್ತ್ಯುತ್ತಮ ಶಿಕ್ಷಕ' ಪ್ರಶಸ್ತಿ ದೊರೆಯಿತು. ವ್ಯಾಕರಣ ಮತ್ತು ಮಕ್ಕಳ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. ಶ್ರೀಮುಖ, ಐಕ್ಯಗಾನ, ಪುನರ್‍ನವ, ಚೇತನ, ಕೊರಗ ಮತ್ತು ಇತರ ಕವನಗಳು, ಗಂಧವತೀ, ಶತಮಾನದ ಗಾನ, ಪ್ರತಿಭಾ ಪಯಸ್ವಿನೀ, ಎನ್ನಪ್ಪೆ ತುಳುವಪ್ಪೆನ್(ತುಳು ಕವನ ಸಂಕಲನ), ಮಕ್ಕಳ ಪದ್ಯ ಮಂಜರಿ (2 ಸಂಪುಟ), ಪಂಚಮೀ (ಉಪನಿಷತ್ತುಗಳ ಅನುವಾದ), ಆಶಾನರ ಖಂಡ ಕಾವ್ಯಗಳು ಮೊದಲಾದ ಕೃತಿಗಳಲ್ಲಿ ಕೈಯ್ಯಾರರ ಪ್ರತಿಭೆ ಮೆರೆದಿದೆ.
ಸ್ವಾತಂತ್ರ್ಯ ಹೋರಾಟಗಾರರಾಗಿ, ಕನ್ನಡದ ದೊಡ್ಡ ಸಾಹಿತಿಗಳಾಗಿ, ಆದರ್ಶ ಶಿಕ್ಷಕರಾಗಿ ಸಮಾಜ ಸುಧಾರಕರಾಗಿ, ಮಾನವೀಯತೆಯ ಹರಿಕಾರರಾಗಿ, ದೀರ್ಘವಾದ ಬದುಕಿನಲ್ಲಿ ಹೋರಾಟಗಾರರಾಗಿಯೂ ಮುನ್ನಡೆದವರು ಕೈಯ್ಯಾರ ಅವರು. ಅವರ ಬದುಕೊಂದು ಅನುಭವದ ಗಣಿ; ತೆರೆದಿಟ್ಟ ಬುತ್ತಿ.ಕೇರಳದಲ್ಲಿದ್ದುಕೊಂಡೇ ಕನ್ನಡವನ್ನು ಉಸಿರಾಡುತ್ತಿರುವ ಕನ್ನಡ ಕಣ್ವರು ಕೈಯ್ಯಾರ ಕಿಞ್ಞಣ್ಣ ರೈ ಅವರು. ಸಾಂ ಸ್ಕೃತಿಕ ರಂಗದಲ್ಲಿ ಕೈಯ್ಯಾರ ಅವರದು ದೊಡ್ಡ ಹೆಸರು. ಕನ್ನಡದ ಜೀವವಾಗಿ ಉಸಿರಾಗಿ ಇಂದು ಗಡಿನಾಡಿನಲ್ಲಿ ಪ್ರವಹಿಸುತ್ತಿರುವ ದೊಡ್ಡ ಚೇತನ ರೈ ಅವರದ್ದು. ನಿಜದ ನೇರಕೆ ನಡೆಯುವ ನಿಶ್ಚಲತೆ, ಹಿಡಿದಿದ್ದನ್ನು ಕೊನೆಯತ್ನಕ ಸಾಧಿಸುವ ಸಂಕಲ್ಪ ಇವರ ನೈಜ ಹಿರಿಯ ಗುಣ. ‘ಬದುಕಬೇಕೆನ್ನುವ ಬಯಕೆಯೊಂದಿಲ್ಲದಿರೆ ಬಾಳ್ಗೆ ಪೌರುಷವಿಲ್ಲ, ಪಂಥವಿಲ್ಲ ಎಂಬ ನಂಬಿ ನಡೆದವರು ಕೈಯ್ಯಾರ ಕಿಞಣ್ಣ ರೈ. ಇವರು ಭೂಷಣಪ್ರಾಯರಾಗಿರುವ ಪ್ರತಿಭಾವಂತ ಧೀಮಂತ ಕವಿ ಎಂದರೆ ಅತಿಶಯೋಕ್ತಿಯಾಗಲಾರದು. ನಾವು ಮನಸ್ಸಿನ ಬಾಗಿಲನ್ನು ಎತ್ತರಿಸಿಕೊಂಡರೆ ರೈ ಅವರ ಗುಣವನ್ನು ಕಾಣಲಿಕ್ಕೆ ಸಾಧ್ಯವಾಗಬಹುದು.
ಅವರಲ್ಲಿ ಪ್ರಧಾನವಾದ ಎರಡು ಎಳೆಗಳನ್ನು ನಾವು ಗುರುತಿಸಬಹುದು, ಒಂದು ಅದ್ಭುತವಾದ, ಅದಮ್ಯವಾದ ಚೈತನ್ಯದಿಂದ ಕೂಡಿರತಕ್ಕ , ತೆಲುವ ಗಾಳಿಯಲ್ಲಿ ಚಿಂತನೆಗಳನ್ನು ಬಿತ್ತರಿಸತಕ್ಕ ಸ್ಪೂರ್ರ್ತಿದಾಯಕವಾದ, ನಿಸರ್ಗಜನ್ಯವಾದ ಕಾವ್ಯ ಪ್ರತಿಭೆಯ ಅಂಶ; ಇನ್ನೊಂದು ಅದ್ಭುತವಾದ ಗುಣ ಅವರ ಅಧ್ಯಾಪಕತ್ವದ ಹಿರಿಮೆ.
ಕಯ್ಯಾರ ಕಿಞ್ಞಣ್ಣ ರೈ ಅವರು ತಮ್ಮ ಕವನಗಳ ಮೂಲಕ ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸಿದ ಧೀರ ಕವಿ. ‘ಶೋಷಣೆಗೆ ಕನಲಿ ಘೋಷಣೆ' ಗೈಯ್ಯುತ್ತಾ ಕ್ರಾಂತಿಗೆ ಕರೆಕೊಡುವ, ಜನರನ್ನು ಬಡಿದೆಬ್ಬಿಸುವ ಕವಿತೆಗಳನ್ನು ಕಟ್ಟಿದರು. ದೀನ ದಲಿತರ ಬಗ್ಗೆ ಅಪಾರ ಕಾಳಜಿ ವಹಿಸಿದ್ದು ಮಾತ್ರವಲ್ಲ ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿದರು. ಪ್ರಕೃತಿ, ದೇಶ, ಧರ್ಮ ಇಂತಹ ಉದಾತ್ತ ಹಾಗೂ ಮಾನವತಾವಾದದ ವಿಷಯಗಳನ್ನು ರೈಯವರ ಕವನಗಳಲ್ಲಿ ಕಾಣಬಹುದು. ಭಾವನೆಯ ತೀಕ್ಷ್ಣತೆ, ಕಲ್ಪನೆಯ ವೈಭವ, ಭಾಷೆಯ ಸಿರಿ ಕೈಯ್ಯಾರರಿಗೆ ದೈವದತ್ತವಾಗಿ ಒಲಿದಿತ್ತು ಎನ್ನಬಹುದು. ಆದ್ದರಿಂದಲೇ ಅವರ ಕಾವ್ಯಗಳಲ್ಲಿ ವಿಶಿಷ್ಟ ಶಕ್ತಿ ಇದೆ. ಹೃದಯವನ್ನು ಹೊಡೆದೆಬ್ಬಿಸುವ, ಆಲೋಚನೆಯನ್ನು ಪ್ರಚೋದಿಸುವ ಸತ್ವವಿದೆ.
ಕವಿಯಾಗುವ ಮುನ್ನ ತಾನೊಬ್ಬ ತಾನೊಬ್ಬ ಕೃಷಿಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕವಿ ತನ್ನ ಕವನದಲ್ಲಿ ಅದನ್ನು ಬಹಳ ಸುಂದರವಾಗಿ ಪರಿಮೂಡಿಸಿದ್ದಾರೆ. "ತಾನು ಜನ್ಮತ: ಕೃಷಿಕ; 'ನೊಗ ನೇಗಿಲುಗಳನ್ನು ಮಂದಾರಮಾಲೆಯನೆ' ಹೊತ್ತು ತಿರುಗುವ ಸಂತೋಷವುಳ್ಳವನು.' ತಾಯ್ನೆಲದ ಕೆಸರ್ನೀರ್ ಮಂದಾಕಿನೀ ತೀರ್ಥ, ಹುಲ್ಲೆ ರೋಮಾಂಚನ, ಬದುಕೆಲ್ಲ ಬಂಗಾರಂ' ಎಂದು ಅವರು ಹೆಮ್ಮೆಯಿಂದ ಹಾಡಿಕೊಂಡಿರುವುದು ಪ್ರತಿಯೊಬ್ಬ ಕೃಷಿಕನೂ ಹೆಮ್ಮೆಯಿಂದ ಬೀಗುವಂತೆ ಮಾಡುತ್ತದೆ.
ಕಯ್ಯಾರರು ಕನ್ನಡ ಸಂಸ್ಕೃತ ವಿದ್ವಾಂಸರು. 'ಎನ್ನ ಹೃದಯದ ಸ್ಪೂರ್ತಿ ಎನ್ನ ಜನತೆಯ ಶಕ್ತಿ ಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆ, ಲೇಖನಿಯೇ ಮುಖ್ಯ ಎಂದು ಭಾವಿಸಿದವರು ಅವರು. ನಾಡು ನುಡಿಗಳೇ ಅವರ ಕಾವ್ಯಕ್ಕೆ ಪ್ರೇರಣೆ. ದುಡಿತವೇ ನಮ್ಮ ದೇವರೆಂದು ನಂಬಿ, ಲೋಕ ದೇವಕುಲ, ಬೆವರೆ ಹೂ ಹಣ್ಣು ಕಾಯಿ, ಕಣ್ಣೀರೆ ತೀರ್ಥ ಎಂದು ಆ ತಿಳಿದು ನಿಟ್ಟಿನಲ್ಲಿ ನಡೆದರು.ನೈಜತೆಗೆ ಕನ್ನಡಿ ಹಿಡಿಯುವ ಅವರ ಕವನಗಳು ಓದುಗನಿಗೆ ಇಷ್ಟವಾಗುತ್ತವೆ, " ರೈ ಅವರನ್ನು ಅರಿಯದ ಕಾವ್ಯರಸಿಕರು ಯಾರಿದ್ದಾರೆ. ಆಧುನಿಕ ಕನ್ನಡ ರಸಪ್ರಪಂಚದಲ್ಲಿ ರಾಜಕೀಯ, ಪ್ರಾಂತೀಕರಣ, ಶಿಕ್ಷಣ, ರಾಷ್ಟೀಯತೆ, ವಾದ, ವಿವಾದ, ಜನಜಾಗೃತಿ ಈ ಷಡಂಗಗಳನ್ನು ಸಮನ್ವಯಿಸಿಕೊಂಡ ಸಾಹಿತ್ಯ ಸಾಧನೆ ಕವಿವರ್ಯ ರೈ ಅವರದು. ಕ್‍ರಾವಳಿಯ ಆಧುನಿಕ ಮಹಾಕವಿಯೆನ್ನಬಹುದು ಕಯ್ಯಾರರನ್ನು" ಎಂದು ಗೌರೀಶ ಕಾಯ್ಕಿಣಿ ಅವರು ಅಭಿಪ್ರಾಯ ಪಟ್ಟಿರುವುದರಲ್ಲಿ ತಥ್ಯವಿದೆ. ಕೈಯ್ಯಾರರ ಕವಿತೆಗಳು ದಾರ್ಶನಿಕ, ಉದಾತ, ನಿತ್ಯನೂತನ. ಅನುಭವಾಮೃತದ ಸೋನೆ ಸೂಸುವ ಅವರ ಕವನಗಳು ಜನಮನ ಗೆದ್ದಿವೆ.
ಕಯ್ಯಾರರು ಕೇವಲ ಕವಿಯಲ್ಲ. ಕಾವ್ಯ, ಸಾಹಿತ್ಯ ವಿಮರ್ಶೆ, ವ್ಯಾಕರಣ, ಶಿಶುಸಾಹಿತ್ಯ, ನಾಟಕ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಯ್ಯಾಡಿಸಿದ್ದರೂ ಅವರನ್ನು ಜನರು ಗುರುತಿಸುವುದು ಕವಿ ಕಯ್ಯಾರ ಕಿಞ್ಞಣ್ಣ ರೈ ಎಂದೇ. ಇದಕ್ಕೆ ಮುಖ್ಯ ಕಾರಣ Œಅವರ ಕಾವ್ಯದ ಅಂತ:ಸತ್ವ. ಅವರ ಕಾವ್ಯಕ್ಕೆ ಅಂತಹ ಶಕ್ತಿ ಇದೆ. ಸೊಗಸು ಇದೆ. ಅತ್ಯಂತ ಸಮರ್ಥವಾದ ಧ್ವನಿ ಇದೆ. ಸಮರ್ಥರಾದ ಕವಿಗಳು ಕಾವ್ಯ ಶಕ್ತಿಗೆ ಬೇಕಾದ ಪರಿಕರಗಳನ್ನು ಒದಗಿಸಿಕೊಂಡೇ ಕಲ್ಪನಾಶಕ್ತಿಯನ್ನೇ ಧಾರೆ ಎರೆದು ಅಭಿವ್ಯಕ್ತ ಮಾಧ್ಯಮದಲ್ಲಿ ಅದನ್ನು ಕೆಟೆದು ನಿಲ್ಲಿಸಬಲ್ಲರು. ಅಂತಹ ಒಂದು ಶಕ್ತಿ, ಪ್ರತಿಮಾ ಶಕ್ತಿ, ಕಲ್ಪನಾ ಶಕ್ತಿ ಎಲ್ಲವೂ ಕೈಯ್ಯಾರರಲ್ಲಿದೆ ಎಂದೇ ಬದುಕಿನ ನೂರೆಂಟು ಜಂಜಾಟಗಳಿಗೆ ಹೆದರದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮಾಜದೊಡನೆ ಪರಿಸರದೊಡನೆ ಭಾವನಾತ್ಮಕ ಸಂಬಂಧವನ್ನಿಟ್ಟುಕೊಂಡು ಕಾವ್ಯ ಸೃಷ್ಟಿಗೈದರೆಂದೇ ಕೈಯ್ಯಾರರು ಜನತೆಯ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಎಂಬ ಪ್ರೇಮಾ ಭಟ್ ಅವರ ಮಾತು ನಿಜವೇ ಆಗಿದೆ.
ಕೈಯ್ಯಾರರು ಭಾಷಾಭಿಮಾನಿ. ತುಳು, ಕನ್ನಡ, ಸಂಸ್ಕೃತ, ಮಲೆಯಾಳ, ಆಂಗ್ಲ ಹೀಗೆ ಪಂಚ ಭಾಷೆಯನ್ನು ಅರಿತಿದ್ದ ಅವರು ಒಬ್ಬ ಉತ್ತಮ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರು ಉತ್ತಮ ವಾಗ್ಮಿಯೂ ಹೌದು. ಎಲ್ಲಿಯೂ ಕೃತಕತೆಯ ಸೋಂಕಿಲ್ಲದ ಅವರ ಮಾತುಗಳಿಗೆ ಮರುಳಾಗದವರಿಲ್ಲ ಎನ್ನುವುದೂ ಅಷ್ಟೇ ಸತ್ಯ. ಇವರು ಆದರ್ಶ ಶಿಕ್ಷಕರು. ರಾಷ್ಟ್ರ ಪ್ರಶಸ್ತಿ ಪಡೆದ ಅತ್ತ್ಯುತ್ತಮ ಶಿಕ್ಷಕ. ಕಾಲು ಶತಮಾನಕ್ಕೂ ಅವರ ಅಧ್ಯಾಪನ ಅನುಭವ ಬಹಳ ವಿಶಿಷ್ಟವಾದದ್ದು.ಅವರ ಅಧ್ಯಾಪನಾ ಶೈಲಿ ಇತರರಿಗೆ ಮಾದರಿ.
ಕೈಯ್ಯಾರರ ಸಾಧನೆಯನ್ನು ಗುರುತಿಸಿ ಅವರನ್ನು ಅರಸಿ ಬಂದ ಪ್ರಶಸ್ತಿಗಳು ಹಲವಾರು ಅದರಲ್ಲಿ ಮುಖ್ಯವಾದವುಗಳು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ(1969), ರಾಷ್ಟ್ರ ಮಟ್ಟದ ಅತ್ತ್ಯುತ್ತಮ ಶಿಕ್ಷಕ(1969), ರಾಜ್ಯಮಟ್ಟದ ಅತ್ತ್ಯುತ್ತಮ ಶಿಕ್ಷಕ ನಾಡೋಜ ಪ್ರಶಸ್ತಿ, ಆದರ್ಶ ರತ್ನ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ಏಕೀಕರಣ ಪ್ರಶಸ್ತಿ, ಪ್ರಥಮ ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಪ್ರಶಸ್ತಿ ಮೊದಲಾದವುಗಳು.
ಸಾಹಿತ್ಯದ ಸಫಲತೆ ಅದರ ಮಾರ್ಮಿಕತೆಯಲ್ಲಿದೆ; ಅನುಭಾವಿ ಕವಿಯ ಕವಿತೆ ಆನಂದದ ಹಿಗ್ಗಿನ ಸಗ್ಗದತ್ತ ಒಯ್ಯಬಲ್ಲ ಚೇತನವಾಗಿದೆ. ಸ್ವಯಂ ಚೈತನ್ಯದಿಂದ ಕೂಡಿದ ಕೈಯ್ಯಾರರು ಜಡ ವಸ್ತುಗಳಲ್ಲೂ ಚೇತನವನ್ನು ಹರಿಯಿಸಿ ನವಚೈತನ್ಯವನ್ನು ತುಂಬಬಲ್ಲವರು ಕಯ್ಯಾರ ಕಿಞ್ಞಣ್ಣ ರೈ ಅವರು. ಇಂತಹ ತುಳು-ಕನ್ನಡಿಗರ ಹೆಮ್ಮೆಯ, ಧೀಮಂತ ಕವಿ, ಸಾಹಿತಿ ಕೈಯ್ಯಾರ ಕಿಞ್ಞಣ್ಣ ರೈ ಅವರಿಗೆ ನಮೋ ನಮ:. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರೆಯಲಿ ಎಂಬ ಪ್ರಾರ್ಥನೆ.
ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ, ಮುಂಬೈ
lekhana chennaagi moodi bandide kavivara kayyaarara baduku baraha kuritu bareda maahiti poorna lekhana divangatarige needida nudinamana
ೀಖನ ಛೆನ್ನಾಗಿ ಮೂದಿ ಬನ್ದಿದೆ ಪೂರ್ನಿಮಾ ಅವರಿಗೆ ಅಭಿನನ್ದನೆಗಲು
uttama upayukta adhyana dinda koodida lekhana dr poornima avarige abhinandanegalu
ಅಗಲಿದ ಚೇತನ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಭಾವಪೂರ್ಣ ಶೃದ್ದಾಂಜಲಿ.. ಅವರಂತಹ ಮಹಾನ್ ಚೇತನಗಳು ಇನ್ನಷ್ಟು ಹುಟ್ಟಿಬರಲೆಂಬುದೇ ಆ ದೇವರಲ್ಲಿ ನಮ್ಮಗಳ ಪ್ರಾರ್ಥನೆ 🙁 ಅವರ ಬಗ್ಗೆ ಒಂದು ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದಗಳು