ಹೃದಯಶಿವ ಅಂಕಣ

ಧರೆಗೆ ದೊಡ್ಡವರು: ಹೃದಯಶಿವ


ಮಹಾಕಾವ್ಯಗಳೆಂದರೆ ಕೇವಲ ರಾಮಾಯಣ, ಮಹಾಭಾರತಗಳಷ್ಟೇ ಅಲ್ಲ. ಭಾರತದ ಮಟ್ಟಿಗೆ ನೋಡುವುದಾದರೆ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸಂಸ್ಕೃತಿ ಇದೆ. ತನ್ನದೇ ಆದ ನೆಲದ ಗುಣವಿದೆ. ಹಾಗೆಯೇ, ತನ್ನ ಪರಂಪರೆಯಿಂದ ರೂಪುತಳೆದದೈವ ಪುರುಷರ, ಸಾಂಸ್ಕೃತಿಕ ನಾಯಕರ ಕುರಿತಾದ ಮೌಖಿಕ ಕಾವ್ಯಗಳಿವೆ. ಅಂಥವುಗಳಲ್ಲಿ 'ಮಂಟೇಸ್ವಾಮಿ ಕಾವ್ಯ'ವೂ ಪ್ರಮುಖವಾದುದು. ಕರ್ನಾಟಕದ ದಕ್ಷಿಣ ಭಾಗದ ಸೋಲಿಗರು, ಕುರುಬರು, ಬೇಡರು, ಪರಿವಾರದವರು, ಉಪ್ಪಾರರು ಹಾಗೂ ಆದಿ ಕರ್ನಾಟಕ ಆದಿ ದ್ರಾವಿಡರೂ ಆದ ಹೊಲೆಯರು, ಮಾದಿಗರು ಈ ಕಥನವನ್ನು ಹಾಡುವವರಾಗಿದ್ದಾರೆ. ಇವರನ್ನೇ ನೀಲಗಾರರೆಂದು ಕರೆಯಲ್ಪಡುವುದು.

ನೀಲಗಾರರೆಂದರೆ 'ಲೀಲೆ'ಗಾರರೆಂಬುದು ಕೆಲವರ ಅಭಿಪ್ರಾಯ. ತಂಬೂರಿ, ತಾಳ, ಗಗ್ಗರ, ದಮ್ಮಡಿ ಇವರ ಬಿರುದುಗಳು. ಅಂದರೆ ವಾದ್ಯಗಳು. ಪ್ರಮುಖಗಾಯಕ ಮೈದುಂಬಿ ಹಾಡುತ್ತಿರುತ್ತಾನೆ. ಆತನ ಸೊಲ್ಲಿಗೆ ಸಹಗಾಯಕರು ಸ್ವರ ಕೊಡುವುದು, ಹೂಗುಟ್ಟುವುದು ಇತ್ಯಾದಿ ರೀತಿಯ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಜೊತೆಜೊತೆಗೇ ತಾಳಗಳನ್ನು ಬಳಸಬೇಕಾಗುತ್ತದೆ. ಅಷ್ಟೇನೂ ಓದಿರದ ಈ ನೀಲಗಾರರ ಹಾಡುಗಾರಿಕೆಯನ್ನು ಆಸ್ವಾದಿಸುವುದೇ ಚಂದ. ರಕ್ತಗತವಾಗಿ ಬಂದಿರಬುಹುದಾದ ಆ ಸೊಗಸಾದ ಶಾರೀರ ಯಾವ ಹಿಂದೂಸ್ಥಾನಿ ಗಾಯಕನಿಗೂ ಕಡಿಮೆಯೇನಲ್ಲ.

ಇವರು ಹಾಡುವ 'ಮಂಟೇಸ್ವಾಮಿ ಕಾವ್ಯ'ದಲ್ಲಿ ಜಗತ್ತು ಸೃಷ್ಟಿಯ ಸಾಲು, ಕಲ್ಯಾಣ ಪಟ್ಟಣದ ಸಾಲು, ರಾಚಪ್ಪಾಜಿ ಸಾಲು, ಬೊಪ್ಪಗೌಡನಪುರದ ಸಾಲು, ಕೆಂಪಾಚಾರಿ ಸಾಲು, ಫಲಾರದಯ್ಯನ ಸಾಲು, ಕಲಿಪುರುಷನ ಸಾಲು, ಸಿದ್ಧಪ್ಪಾಜಿ ಸಾಲುಗಳು ಪ್ರಮುಖವಾಗಿ ಬರುತ್ತವೆ. ಮಂಟೇಸ್ವಾಮಿಯನ್ನು 'ಧರೆಗೆ ದೊಡ್ಡವರು' ಎಂದು ಕರೆಯಲ್ಪಡಲಾಗುತ್ತದೆ. ಮಂಟೇಸ್ವಾಮಿ ಜಗತ್ತಿನ ಸೃಷ್ಟಿಕರ್ತನಾಗಿ ಕಾಣುತ್ತಾನೆ. ಸೂರ್ಯ, ಚಂದ್ರ, ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದು ಬ್ರಹ್ಮಾಂಡವನ್ನೇ ಸೃಷ್ಟಿಸಬಲ್ಲ ಮಾಯಕಾರನಾಗುತ್ತಾನೆ.

ಮಂಟೇಸ್ವಾಮಿಗೂ, ಅಲ್ಲಮ ಪ್ರಭುವಿಗೂ ನಿಕಟ ನಂಟಿರುವ ಈ ಕಾವ್ಯದಲ್ಲಿ ಹಲವು ಕಡೆ 'ಅಲ್ಲಮಾ ಪ್ರಭು, ಜಗಂಜ್ಯೋತಿ, ಪರಂಜ್ಯೋತಿ' ಎಂಬ ಪದಗಳು ಅಧ್ಯಯನಕಾರರ ಕುತೂಹಲ ಕೆರಳಿಸುತ್ತವೆ. ಅಲ್ಲಮನಂತೆಯೇ ಮಂಟೇಸ್ವಾಮಿಯೂ ಕಟ್ಟಿದ ಲಿಂಗಕ್ಕಿಂತ ಆತ್ಮಲಿಂಗಕ್ಕೆ ಮಹತ್ವ ನೀಡುವ ಹಿನ್ನೆಲೆಯಲ್ಲಿ ಅಲ್ಲಮ ಪ್ರಭುವಿನ ವಿಚಾರಧಾರೆಯ ಮುಂದುವರಿದ ಭಾಗದಂತೆ ಮಂಟೇಸ್ವಾಮಿಯ ವಿಚಾರಗಳು ಗಚರಿಸುತ್ತವೆ. ಅಷ್ಟು ಮಾತ್ರವಲ್ಲದೇ, ರೋಗಿಯ ವೇಷದಲ್ಲಿ ಕಲ್ಯಾಣ ಪ್ರವೇಶಿಸುವ ಮಂಟೇಸ್ವಾಮಿ, 'ರುಂಡಪುಂಡ ಜಂಗಮ'ರು ಕಟ್ಟಿದ ಲಿಂಗಗಳನ್ನು ಮಾಯ ಮಾಡುವುದರ ಜೊತೆಗೆ ಶರಣರನ್ನು ಸತ್ವಪರೀಕ್ಷೆಗೆ ಒಳಪಡಿಸುತ್ತಾನೆ. ಅವರಲ್ಲಿ, ಹೊಲೆಯರ ಹೊನ್ನಪ್ಪ, ಮಾದಿಗರ ಚನ್ನಯ್ಯ, ಮಡಿವಾಳ ಮಾಚಯ್ಯ, ಗಾಣುಗರ ದಾಸಪ್ಪ, ಅಂಬುಗರ ಚೌಡಯ್ಯ, ಈಡಿಗರ ಕ್ಯಾತಪ್ಪ, ಕುರುಬರ ಬೀರಯ್ಯ ಸೇರಿದಂತೆ ಕೆಲವೇ ಶೂದ್ರರು ಮಾತ್ರ ಪರೀಕ್ಷೆ ಎದುರಿಸಿ ಮಂಟೇಸ್ವಾಮಿಯ ಮೆಚ್ಚುಗೆ ಗಳಿಸುತ್ತಾರೆ. ವೀರಶೈವ ಪುರಾಣ ಅಥವ ಶೂನ್ಯಸಂಪಾದನೆಯಲ್ಲಿ ಕಾಣಸಿಗದ ಇಂತಹ ಆತ್ಮಶುದ್ದಿಯ ವಿಚಾರ 'ಮಂಟೇಸ್ವಾಮಿ ಕಾವ್ಯ'ದಲ್ಲಿ ಮಾತ್ರ ಲಭ್ಯವೆಂಬುದು ಸಂಶೋಧಕರ ಅಭಿಪ್ರಾಯ.ಚಳುವಳಿಯ ನಂತರದ ಕಲ್ಯಾಣ ಪಟ್ಟಣದ ಚಿತ್ರಣವನ್ನು ಎತ್ತಿ ಹಿಡಿಯುವಲ್ಲಿ ಈ ಕಾವ್ಯದಲ್ಲಿ ಬರುವ 'ಕಲ್ಯಾಣ ಪಟ್ಟಣದ ಸಾಲು' ಆಧಾರವಾಗಿ ನಿಲ್ಲುತ್ತದೆ.

ರಾಚಪ್ಪಾಜಿ, ತೋಪಿನ ದೊಡ್ಡಮ್ಮ, ಚನ್ನಾಜಮ್ಮ, ಮಡಿವಾಳ ಮಾಚಯ್ಯ, ಫಲಾರದ್ಯ, ಸಿದ್ಧಪ್ಪಾಜಿ- ಇವರೇ ಮಂಟೇಸ್ವಾಮಿಯ ಪ್ರಮುಖ ಶಿಷ್ಯರು. ಒಬ್ಬೊಬ್ಬರಿಗೂ ಒಂದೊಂದು ಹಿನ್ನೆಲೆ, ಒಂದೊಂದು ಕಥೆಯಿದೆ. ಅಂತೆಯೇ, ಮಂಟೇಸ್ವಾಮಿ ಕಲ್ಯಾಣದಿಂದ ತನ್ನೊಡನೆ ಕರೆತಂದ ಶರಣರ ಪಾತ್ರವೂ ಇಲ್ಲಿ ದೊಡ್ಡದೇ. ರಾಚಪ್ಪಾಜಿ ಸಾಲಿನಲ್ಲಿ ಬರುವ ತಂತ್ರಗಳು, ದೊಡ್ಡಮ್ಮ ತಾಯಿಯೆದುರು ಹೇಳುವ ಕಾಲಜ್ಞಾನ, ಸಿದ್ಧಪ್ಪಾಜಿಯ ಪವಾಡಗಳು, ಸಿರಿಯಾಳನ ಕಥೆ ನೆನಪಿಸುವ ಫಲಾರದಯ್ಯನ ಬಲಿ, ಕುಂತೂರು ಬೆಟ್ಟದ ಮೇಲೆ ಕುಳಿತು ಭಂಗಿ ಸೇದುತ್ತಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆ-ಇಂತಹ ಹತ್ತು ಹಲವು ವೈಶಿಷ್ಟ್ಯತೆಗಳಿಂದ 'ಮಂಟೇಸ್ವಾಮಿ ಕಾವ್ಯ'ವೂ ಒಂದು ಪರಿಪೂರ್ಣ ಮಹಾಕಾವ್ಯ. 

ಅಂದಹಾಗೆ ಸಿನಿಮಾ, ಶಾಸ್ತ್ರೀಯ, ಸುಗಮ ಸಂಗೀತದಲ್ಲಿ ಹೆಸರು ಮಾಡಿದ ಗಾಯನ ಪ್ರತಿಭೆಗಳಿಗೆ ಹಣ, ಕೀರ್ತಿ, ಪ್ರಶಸ್ತಿ ಎಲ್ಲವೂ ಸಿಗುತ್ತಿರುವ ಭಾರತದಂಥ ದೇಶದಲ್ಲಿ ತಲತಲಾಂತರದಿಂದ ಮೂಲಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ನೀಲಗಾರರಂಥ ಹುಟ್ಟು ಪ್ರತಿಭೆಗಳಿಗೆ ಸಿಗುತ್ತಿರುವುದಾದರೂ ಏನು? ಬಾಲ್ಯದಲ್ಲಿಯೇ ದೀಕ್ಷೆ ಪಡೆದು ತಮ್ಮ ಗುರು(ತಂದೆ)ಗಳಿಂದ ಶ್ರದ್ಧೆಯಿಂದ ವಿದ್ಯೆ ಕಲಿತು, ಸದಾ ಹಾಡುತ್ತ ಆ ಅಮೂಲ್ಯ ಮೌಖಿಕ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಇಂಥವರ ಜೀವನದ ಕಥೆ ಹೇಳತೀರದು.

ಬಹಳಷ್ಟು ನೀಲಗಾರರಿಗೆ ಅಂಗೈಯಗಲ ಹೊಲ ಇರುವುದಿಲ್ಲ. ವಾಸಿಸಲು ಗುಡಿಸಲೋ, ಜೋಪಡಿಯೋ ಇರುತ್ತದೆ. ಕಲೆಯನ್ನೇ ನಂಬಿಕೊಂಡು ಹೆಂಡತಿ-ಮಕ್ಕಳನ್ನು ಸಾಕಬೇಕು. ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕು.ಯಾರಾದರೂ ಹರಕೆ ಹೊತ್ತವರು ತಮ್ಮ ಮನೆಗಳಲ್ಲಿ ಕಥೆ ಮಾಡಿಸಿದರೆ ಅಷ್ಟೋ ಇಷ್ಟೋ ಕೊಡುತ್ತಾರೆ. ಟಿವಿ, ಆರ್ಕೆಷ್ಟ್ರಾಗಳು ಬರುತ್ತಿದ್ದಂತೆಯೇ, ಮೂಲಸೆಲೆ ಬತ್ತುತ್ತಾ ಹೋದಂತೆಯೇ ನೀಲಗಾರರ ಕಾವ್ಯಗಾಯನಕ್ಕೆ ಬೇಡಿಕೆ ಕಡಿಮೆಯಾಗುತ್ತ ಬಂದಿದೆ. ಯಾರಾದರೂ ಕರೆದರೆ ಹೋಗಿ ಹಾಡಬೇಕು. ಇಲ್ಲದಿದ್ದರೆ ಊರೂರು ತಿರುಗಿ, ಮನೆಗಳ ಮುಂದೆ ಹೋಗಿ ಹಾಡಿ ಭಿಕ್ಷೆಯನ್ನೇ ಎತ್ತಬೇಕು. ಮೊದಲೆಲ್ಲಾ ಮನೆಗಳ ಹತ್ತಿರ ಹೋದರೆ 'ದೇವರ ಗುಡ್ಡರು' ಬಂದರು ಅಂತ ಬಿರುದು(ವಾದ್ಯ)ಗಳಿಗೆಲ್ಲ ಪೂಜೆ ಮಾಡಿ ಭಕ್ತಿಯಿಂದ ಭಿಕ್ಷೆ ಕೊಡುತ್ತಿದ್ದರು. ಈಗ ಆ ಸಂಸ್ಕೃತಿ ಮರೆಯಾಗಿದೆ. ಇನ್ನುಳಿದಂತೆ ಚಿಕ್ಕಲ್ಲೂರು, ಕಪ್ಪಡಿ, ಬೊಪ್ಪಗೌಡನಪುರಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಇವರು ಹಾಡುತ್ತಾರೆ.

ಕಲೆಗಾಗಿ ಜೀವನವನ್ನೇ ಮುಡುಪಾಗಿಡುವ ಈ ನೀಲಗಾರರ ಬದುಕು ಭದ್ರವಾಗಬೇಕು ಅಲ್ಲವೇ? ಏಕೆಂದರೆ ಇಂಥವರಿಂದಲೇ ದೇಶವೊಂದರ ಸಂಸ್ಕೃತಿಯ ಬುನಾದಿ ಗಟ್ಟಿಯಾಗುಳಿಯುವುದು. ತನ್ಮೂಲಕ ನೆಲದ ಗಮಲನ್ನು ದೇಶದೆಲ್ಲೆಡೆ ಪಸರಿಸುವುದು. ಸ್ವಂತಿಕೆಯ ಬೆಳಕಿನಲ್ಲಿ ಪ್ರಜ್ವಲಿಸುವುದು. ತನ್ನ ತನದ ಸ್ವ-ಪ್ರಭೆಯ ಮೂಲಕ ನಾಳಿನ ಪೀಳಿಗೆಗೆ ತಮ್ಮ ತಮ್ಮ ಬೇರುಗಳ ಮೂಲಸೆಲೆಯನ್ನು ಮನದಟ್ಟು ಮಾಡಿಕೊಡುವುದು. ಆದ್ಧರಿಂದ ಜಾನಪದ ಕಲೆಗಳೇ, ಜಾನಪದ ಕಾವ್ಯಗಳೇ ದೇಶವೊಂದರ ಸಂಸ್ಕೃತಿಯ ಬುನಾದಿ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಷ್ಟಕ್ಕೂ ಯಾವ ದೇಶಕ್ಕೆ ಬುಡಕಟ್ಟು ಸಂಸ್ಕೃತಿ, ಬುಡಕಟ್ಟು ಕಾವ್ಯಪರಂಪರೆ ಇರುವುದಿಲ್ಲವೋ ಅಂತಹ ದೇಶಕ್ಕೆ ಭವಿಷ್ಯವೂ ಇರುವುದಿಲ್ಲ. ಇಂತಹ ಸಮಸ್ಯೆಯಿಂದ ನರಳುತ್ತಿರುವ ಅಮೇರಿಕಾ ಬೇರಿಲ್ಲದ ವೃಕ್ಷದಂತಾಗಿದೆ ಎಂಬುದನನ್ನು ಆಧುನಿಕ ಕೃತಕ ಜಗತ್ತಿನ ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಪ್ರತಿಯೊಬ್ಬರೂ ಗಮನಿಸಬೇಕು. ಅಮೇರಿಕಾದಂತೆಯೇ  ಅದೆಷ್ಟೋ ದೇಶಗಳು ಜೀವಂತಿಕೆ ಇಲ್ಲದೆ ಷೋಕೇಸಿನ ವಸ್ತುವಿನಂತೆ ಕಾಣುತ್ತಿವೆ. 

ಮಂಟೇಸ್ವಾಮಿ ಕಾವ್ಯ, ಮಲೆಮಾದೇಶ್ವರ ಕಾವ್ಯ, ಮೈಲಾರಲಿಂಗ ಕಾವ್ಯ, ಜುಂಜಪ್ಪ ಕಾವ್ಯದಂಥ ಬುಡಕಟ್ಟು ಕಾವ್ಯಗಳನ್ನು ನಾವು ಉಳಿಸಿಕೊಳ್ಳದೆ ಹೋದರೆ ಮುಂದೊಮ್ಮೆ ಅಮೆರಿಕಾಗಾದ ಗತಿ ನಮಗೂ ಎದುರಾಗಬಹುದು. ಇಷ್ಟಕ್ಕೂ ಇಂತಹ ಸತ್ವಪೂರ್ಣ ಕಾವ್ಯಗಳಲ್ಲಿ ಬರುವ ನಾಯಕರಾದರೂ ಯಾರು? ಎಲ್ಲರೂ ತಳಸಮುದಾಯಕ್ಕೆ ಸೇರಿದ ಮಹಾನುಭಾವರು. ಹೊಲೆಯನೆಂದು ಕರೆಯಲಾಗುವ ಮಂಟೇಸ್ವಾಮಿ, ಮಾದಿಗನೆಂದು ಹೇಳಲಾಗುವ ಮಾದಪ್ಪ, ಹಸುಗಳ ಪೋಷಣೆ ಮಾಡುವ ಜುಂಜಪ್ಪ, ಕುರಿಗಳನ್ನು ಕಾಯುವ ಮೈಲಾರಪ್ಪ ಸೇರಿದಂತೆ ಇಂತಹ ಕಾವ್ಯಗಳಲ್ಲಿ ಬರುವ ಪವಾಡ ಪುರುಷರು, ಬೈರಾಗಿಗಳು ಒಂದು ಮೂಲ ಸಂಸ್ಕೃತಿಯ ಪ್ರತೀಕದಂತಿರುವ  ನಾಯಕರು. ಜನಸಾಮಾನ್ಯರ ಬದುಕಿನ ಭಾಗವಾಗಿರುವ ಅಸಮಾನ್ಯರು.

ಇನ್ನಾದರೂ ಮಂಟೇಸ್ವಾಮಿ ಕಾವ್ಯದಂಥ ನೆಲದ ಸಂಸ್ಕೃತಿ ಉಳಿಸಲು ಹೊರಟಿರುವ ನೀಲಗಾರರ ಬದುಕು ಸುಧಾರಿಸಬೇಕು. ಆ ಮೂಲಕ ನಮ್ಮ ನಮ್ಮ ಬೇರುಗಳು ಜೀವಂತಿಕೆ ಕಾಯ್ದುಕೊಳ್ಳಬೇಕು. ನಾವು ಉಸಿರಾಡುತ್ತಿರುವ ಗಾಳಿ, ಕುಡಿಯುತ್ತಿರುವ ನೀರು, ನಡೆದಾಡುತ್ತಿರುವ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬುಡಕಟ್ಟು ಕಾವ್ಯ, ನೀಲಗಾರರ ಬದುಕಿನ ಭದ್ರತೆ ಕುರಿತು ಯೋಜನೆಗಳನ್ನು ರೂಪಿಸಬೇಕು ಅಲ್ಲವೇ?
-ಹೃದಯಶಿವ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಧರೆಗೆ ದೊಡ್ಡವರು: ಹೃದಯಶಿವ

 1. ವಿದೇಶಿ ಸಂಸ್ಕ್ರತಿ ಅದೆ‍‍ಷ್ಟು ಬಡಜನರ ಬದುಕನ್ನು
  ಕಸಿದುಕೊಂಡಿದೆಯೋ? "ಧರೆಗೆ ದೊಡ್ಡವರು"
  ಶಿರ್ಷೀಕೆಯೇ ಮನಮುಟ್ಟುವಂತೆ ಇದೆ.
  ಲೇಖನಕ್ಕೆ ಧನ್ಯವಾದಗಳು.

 2. ಈ ತರದ್ದೊಂದು ಕಾವ್ಯ ಇದೆ ಅಂತನೇ ಗೊತ್ತಿರಲಿಲ್ಲ !!!
  ಒಳ್ಳೇ ಮಾಹಿತಿಪೂರ್ಣ ಲೇಖನ ಶಿವಣ್ಣ..

 3. ಆತ್ಮೀಯ ನನ್ನೂರಿನ ಮಿತ್ರ ಹೃದಯಶಿವ ಅವರೆ,

  ನಮಸ್ಕಾರ.

  " ನಾಗರಿಕರೆನಿಸಕೊಂಡ ನಗರವಾಸಿಗಳಿಗಿಂತಲೂ ಅನಾಗರಿಕರೆನಿಸಿಕೊಂಡ ಹಳ್ಳಿಗರು ನಿಜವಾದ ಮಾನವೀಯ, ಸತ್ಯ, ಕರುಣೆ, ನ್ಯಾಯಪರ ಗುಣವುಳ್ಳವರೇ" ಆಗಿದ್ದಾರೆ. ಇಂತಹ ಎಲ್ಲ ಗುಣಗಳ ಸಾಕಾರಮೂರ್ತಿಗಳಾದ ನೀಲಗಾರರ ಬದುಕು ನಾನು ಕಂಡಂತೆ ದುಸ್ಥಿತಿಯಲ್ಲಿದೆ. ಇದನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಿರುವ ತಮಗೆ ಧನ್ಯವಾದಗಳು.

  ಇನ್ನು ಬುಡಕಟ್ಟು ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮೈವತ್ತಂತೆ ಚಿತ್ರಿತಗೊಂಡಿರುವ ಜಾನಪದ ಮಹಾಕಾವ್ಯಗಳಾದ ಮಲೆಮಾದಪ್ಪ(ಮಾದೇಶ್ವರ ಎಂದು ಕರೆಯಲಾಗುವ)  ಕಾವ್ಯ, ವಿಶ್ವದ ಎರಡನೇ ಮಹಾಕಾವ್ಯ ಎನಿಸಿರುವ ಮಂಟೇಸ್ವಾಮಿ ಕಾವ್ಯ ಹಾಗೂ ಬಿಳಿಗಿರಿ ರಂಗನ ಕಾವ್ಯಗಳಲ್ಲಿ ದೇಸಿಪ್ರಜ್ಞೆ, ಪ್ರಾಮಾಣಿಕತೆ ಮನೆಮಾಡಿರುವುದು ಸತ್ಯಸ್ಯ. 

  ಇಂತಹ ಕಾವ್ಯ ಗಾಯಕರ ಬದುಕು ಅಧೋಗತಿಗಿಳಿದಿರುವುದು ನಿಜ. ಅವರ ಬದುಕು ಹಸನಾಗಲು ಎಲ್ಲ ಸಹೃದಯರು ಚಿಂತನೆ ನಡೆಸಿ, ಆಂದೋಲನ ನಡೆಸುವ ತುರ್ತಿದೆ.

  -ಡಾ. ಹನಿಯೂರು ಚಂದ್ರೇಗೌಡ

  ಜಾನಪದ ಸಂಶೋಧಕ-ತಜ್ಞ,

  ಲೇಖಕ-ಪ್ರಾಧ್ಯಾಪಕ-ರೇಡಿಯೋ ಜಾಕಿ,

  ನಟ, ವಿಷಯತಜ್ಞ, ಸಾಮಾಜಿಕ ಕಾರ್ಯಕರ್ತ.

  (ಸೋಲಿಗರ ಕುರಿತು ತಳಸ್ಪರ್ಶಿ ಕ್ಷೇತ್ರಾಧ್ಯಯನ ಕೈಗೊಂಡಿರುವವರು)

  99016 09723

Leave a Reply

Your email address will not be published. Required fields are marked *