ಪ್ರಸಾದ್ ಕೆ ಅಂಕಣ

ದ ಪ್ಲೇನ್-ಫೀಲ್ಡ್ ಕಿಲ್ಲರ್”: ಪ್ರಸಾದ್ ಕೆ.

೧೯೫೭ ರ ನವೆಂಬರ್ ೧೭ ರ ಒಂದು ಕರಾಳ ದಿನ. ಅಮೇರಿಕಾದ ವಿಲ್ಕಿನ್ಸನ್ ಸ್ಟೇಟ್ ನ ಪ್ಲೇನ್ ಫೀಲ್ಡ್ ಎಂಬ ಪುಟ್ಟ ಹಳ್ಳಿಯತ್ತ ಇಡೀ ಜಗತ್ತೇ ತಿರುಗಿ ನೋಡಿತು. ಮನೆಯೊಂದರ ಮೇಲೆ ನಡೆದ ಪೋಲೀಸರ ದಾಳಿಯಿಂದ ಪ್ಲೇನ್ ಫೀಲ್ಡ್ ಎಂಬ ಹೆಸರೇ ಗೊತ್ತಿರದ ಪುಟ್ಟ ಸ್ಥಳವೊಂದು ಏಕಾಏಕಿ ಕುಖ್ಯಾತಿಯನ್ನು ಪಡೆದು ಸುದ್ದಿ ಮಾಡಿತು. ಮನುಷ್ಯನ ಮೂಳೆಗಳು, ಮಾನವ ಚರ್ಮದಿಂದ ಮಾಡಲಾದ ಕಸದ ಬುಟ್ಟಿ, ಲ್ಯಾಂಪ್ ಶೇಡ್‌ಗಳು, ತಲೆಬುರುಡೆಯನ್ನು ಉಪಯೋಗಿಸಿ ಮಾಡಲಾದ ಬೌಲ್ ಗಳು, ಉಗುರುಗಳು, ನಾಲ್ಕು ಮೂಗುಗಳು, ಮುಖದ ಚರ್ಮವನ್ನು ಬಲು ನೈಪುಣ್ಯತೆಯಿಂದ ಸುಲಿದು ರಚಿಸಲಾದ ಹಸಿ ಚರ್ಮದ ಮಾಸ್ಕ್ ಗಳು, ಕಾಲಿನ ಚರ್ಮವನ್ನು ಸುಲಿದು ಮಾಡಲಾದ ಲೆಗ್ಗಿಂಗುಗಳು, ಶೂ ಪೆಟ್ಟಿಯೊಂದರಲ್ಲಿ ಬಚ್ಚಿಡಲಾಗಿದ್ದ ಮಹಿಳಾ ಗುಪ್ತಾಂಗಗಳ ಕತ್ತರಿಸಿದ ಭಾಗಗಳು, ಮೊಲೆ ತೊಟ್ಟುಗಳನ್ನೇ ಹೊಲಿದು ಸಿಂಗರಿಸಿ ಮಾನವ ಚರ್ಮದಿಂದ ಮಾಡಲಾದ ಒಂದು ಸೊಂಟಪಟ್ಟಿ (ಬೆಲ್ಟ್), ಮಹಿಳೆಯರದೆಂದು ಗುರುತಿಸಲಾದ ಮೇಲಿನ ಚರ್ಮವನ್ನಷ್ಟೇ ಸುಲಿದು ಇಟ್ಟಿರುವ ಹಸಿ ತಲೆಬುರುಡೆಗಳು, ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಿ ತಲೆಕೆಳಗಾಗಿಸಿ ಹಂದಿಮಾಂಸದಂತೆ ನೇತಾಡಿಸಲಾದ ತಲೆಯೇ ಇಲ್ಲದ ಅರ್ಧಂಬರ್ಧ ಕೊಳೆತು ನಾರುತ್ತಿರುವ ಒಂದು ಶವ, ಚಿಕ್ಕದೊಂದು ಗೋಣಿ ಚೀಲದಲ್ಲಿ ತಲೆ, ಪೇಪರ್ ಬ್ಯಾಗೊಂದರಲ್ಲಿ ಈಗ ತಾನೇ ಕುಯ್ದಿಟ್ಟಂತಿರುವ ಮಾನವ ಮುಖದ ಚರ್ಮದಿಂದಲೇ ಸುಲಿದು ಮಾಡಿಟ್ಟಿರುವ ಮುಖವಾಡ ಹೀಗೆ ಹತ್ತು ಹಲವು ಅಸಹಜ, ಭೀಕರ ವಸ್ತುಗಳು ಈ ಮನೆಯೊಂದರಿಂದ ಬರಾಮತ್ತಾದವು. ಕೆಲವೇ ಘಂಟೆಗಳೊಳಗಾಗಿ ಒಬ್ಬಂಟಿಯಾಗಿ ವಾಸಿಸುತ್ತಿರುವ ಮನೆ ಮಾಲೀಕನನ್ನು ಸ್ಥಳೀಯ ಕೌಂಟಿ ಪೋಲೀಸರು ವಶಕ್ಕೆ ತೆಗೆದುಕೊಂಡರು. ೫೧ ರ ಪ್ರಾಯದ ಈ ವಿಲಕ್ಷಣ ವ್ಯಕ್ತಿಯ ಹೆಸರು ಎಡ್ ಗೀನ್. 

*****

ಸರಣಿ ಹಂತಕರ ಕಥೆ ಬಂದಾಗಲೆಲ್ಲಾ ಅಮೇರಿಕಾದ ಮತ್ತೊಬ್ಬ ಕಿಲ್ಲರ್ ಟೆಡ್ ಬಂಡಿಯಷ್ಟೇ ವಿಭಿನ್ನವಾಗಿ ಮತ್ತು ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಎಡ್ ಗೀನ್. ಅಧಿಕೃತವಾಗಿ ಈತ ಎರಡೇ ಕೊಲೆಗಳನ್ನು ಮಾಡಿದರೂ, ಇತರೇ ಶವಗಳೊಂದಿಗೆ ಮಾಡುತ್ತಿದ್ದ ಬರ್ಬರ, ವಿಲಕ್ಷಣ ಚಟುವಟಿಕೆಗಳು ಇವನನ್ನು "ದ ಪ್ಲೇನ್ ಫೀಲ್ಡ್ ರಾಕ್ಷಸ" ಎಂಬ ಹಣೆಪಟ್ಟಿಕಟ್ಟುಕೊಳ್ಳುವಂತೆ ಮಾಡಿದವು. ಸರಣಿಹಂತಕರ ಜೀವನಗಾಥೆಗಳನ್ನು ಕೆದಕುತ್ತಾ ಹೋದರೆ ಸುಮಾರು ಎಂಭತ್ತರಿಂದ ತೊಂಭತ್ತು ಪ್ರತಿಶತ ಅಪರಾಧಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಅಂಶವೆಂದರೆ ಹದಗೆಟ್ಟ ಬಾಲ್ಯ. ಎಡ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಜಾರ್ಜ್ ಗೀನ್ ಮತ್ತು ಅಗಸ್ಟಾ ದಂಪತಿಗಳ ಎರಡು ಗಂಡು ಮಕ್ಕಳಲ್ಲಿ ಸಣ್ಣವನು ಈ ಎಡ್. ಕಿರಾಣಿ ಅಂಗಡಿಯಿಟ್ಟು ಮನೆಯ ದೈನಂದಿನ ಖರ್ಚುಗಳನ್ನು ನಿಭಾಯಿಸುತ್ತಿದ್ದ ತಾಯಿಯೇ ಮನೆಯ ಅನಧಿಕೃತ ಒಡತಿ. ನಾಲ್ಕಾರು ವೃತ್ತಿಗಳನ್ನು ಪ್ರಯತ್ನಿಸಿ ಬಹುತೇಕ ಎಲ್ಲದರಲ್ಲೂ ಕೈ ಸುಟ್ಟುಕೊಂಡ, ಕುಡುಕ ಗಂಡ ಜಾರ್ಜ್ ಎಂದರೆ ಇವಳಿಗೆ ತಾತ್ಸಾರ, ವೈಫಲ್ಯದ ಪ್ರತಿರೂಪ. ೧೯೧೪ ರಲ್ಲಿ ಅಗಸ್ಟಾ ತನ್ನ ಅಂಗಡಿಯನ್ನು ಮಾರಿ ದೂರದ ಪ್ಲೇನ್ ಫೀಲ್ಡ್ ಹಳ್ಳಿಯ ನಿರ್ಜನ ಪ್ರದೇಶವೆಂದೇ ಹೇಳಬಹುದಾದ ಜಾಗವೊಂದರಲ್ಲಿ ಕುಟುಂಬದೊಂದಿಗೆ ಮನೆ ಮಾಡಿಕೊಂಡಿರುತ್ತಾಳೆ. ಕಟ್ಟರ್ ಕ್ರೈಸ್ತಳಾಗಿದ್ದ ಅಗಸ್ಟಾ ಬೈಬಲ್ ನಲ್ಲಿ ಸಾವು, ಹತ್ಯೆ, ಹಿಂಸೆ ಎಂಬಿತ್ಯಾದಿ ವಿಷಯಗಳನ್ನೇ ಏನೂ ಅರಿಯದ ತನ್ನ ಮುಗ್ಧ ಮಕ್ಕಳಿಬ್ಬರಿಗೆ ಪುಂಖಾನುಪುಂಖವಾಗಿ ದಿನವೂ ಪ್ರವಚಿಸುತ್ತಿದ್ದಳು. ಮೊದಲೇ ನಾಚಿಕೆಯ ಸ್ವಭಾವದವನಾಗಿದ್ದ ಎಡ್ ಗೆ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಎಂಬಂತಹ ದಿನಚರಿಯನ್ನು ಈ ತಾಯಿ ರೂಪಿಸಿದ್ದೇ ಅಲ್ಲದೆ ಯಾವುದೇ ಸ್ನೇಹಿತರ ಒಡನಾಟ, ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ನಿಷೇಧ ಹೇರಿದ್ದಳು. ಹೀಗಾಗಿ ಮನೆ ಸದಸ್ಯರನ್ನು ಹೊರತುಪಡಿಸಿ ಎಡ್ ಗೆ ಇನ್ಯಾರ ಒಡನಾಟವೂ ಇರಲಿಲ್ಲ. ಹೆಣ್ಣೊಂಬುದು ಜಗತ್ತಿನಲ್ಲಿರುವ ಒಂದು ದುಷ್ಟಶಕ್ತಿಯಂದೂ, ತನ್ನನ್ನು ಹೊರತು ಪಡಿಸಿ ಈ ಜಗತ್ತಿನ ಇನ್ನೆಲ್ಲಾ ಹೊರಗಿನ ಹೆಂಗಸರು ವೇಶ್ಯೆಯರೆಂದೂ ದಿನವೂ ಈಕೆ ಬೋಧಿಸುತ್ತಿದ್ದಳು. ಕೂಪಮಂಡೂಕರಾದ ಮಕ್ಕಳಿಬ್ಬರೂ ಜೀವನವಿಡೀ ತನ್ನ ಸೇವೆ ಮಾಡಿಕೊಂಡೇ ಮನೆಯ ನಾಲ್ಕು ಗೋಡೆಗಳ ಮಧ್ಯೆ ಜೀವಿಸಿ ಕೊನೆಗೊಳ್ಳುತ್ತಾರೆ ಎಂದಂಡುಕೊಂಡಿದ್ದಳೇನೋ ಮಹಾತಾಯಿ. ಆದರೆ ಅಲ್ಲೊಬ್ಬ ಮನೋರೋಗಿ, ಸೈಕೋಪಾತ್, ಕೊಲೆಗಾರ ನಿಧಾನಕ್ಕೆ ತನಗರಿವಿಲ್ಲದಂತೆಯೇ ರೂಪುಗೊಳ್ಳುತ್ತಿದ್ದ. 

ಎಡ್ ಗೀನ್ ಬಂಧನ

ಎಡ್ ಗೀನ್ ನ ಫಾರ್ಮ್ ಹೌಸ್

ಎಡ್ ಗೀನ್ ನ ವಿಲಕ್ಷಣ ರೂಮು

ಮುಂದೆ ೧೯೪೦ ರ ಸುಮಾರಿಗೆ ತಂದೆ ಜಾರ್ಜ್ ನ ನಿಧನವಾಗುತ್ತದೆ. ಮಕ್ಕಳಿಬ್ಬರೂ ಅದೇ ಹಳ್ಳಿಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಾ ತಾಯಿಯೊಂದಿಗೆ ದಿನ ತಳ್ಳುತ್ತಿರುತ್ತಾರೆ. ಹಿರಿ ಮಗ, ಎಡ್ ನ ಅಣ್ಣ ಹೆನ್ರಿ ವಿಚ್ಛೇದಿತೆಯೊಬ್ಬಳನ್ನು ಮದುವೆಯಾಗಿ ಮನೆ ಸೇರಿಸಿಕೊಂಡಾಗ ರಾದ್ಧಾಂತಗಳಾಗುತ್ತವೆ. ನಿಧಾನವಾಗಿ ಜಗತ್ತನ್ನು ಅರಿಯಲಾರಂಭಿಸಿದ ಹೆನ್ರಿ ತಾಯಿಯ ವಿರುದ್ಧ ತಿರುಗಿ ಬೀಳುತ್ತಾನೆ. ಮನೆಯೆಂಬುದು ದಿನನಿತ್ಯದ ರಣರಂಗವಾಗುತ್ತದೆ. ತಾಯಿಯೇ ಸರ್ವಸ್ವ, ಅವಳೇ ನನ್ನ ಜಗತ್ತು ಎಂದು ಬಲವಾಗಿ ನಂಬಿಕೊಂಡಿದ್ದ ಎಡ್ ಗೆ ಇದು ನುಂಗಲಾರದ ತುತ್ತಾಗುತ್ತದೆ. ಹೊರಜಗತ್ತಿನ ಯಾರ ಜೊತೆಯೂ ಅಷ್ಟಾಗಿ ಒಡನಾಟವಿಟ್ಟುಕೊಂಡಿಲ್ಲದ ಎಡ್ ಗೆ ತನ್ನ ತಾಯಿ ಇಂಥವಳು ಎಂದು ಏಕಾಏಕಿ ನಂಬಿಕೊಳ್ಳಲು ಅಸಾಧ್ಯವಾಗುತ್ತದೆ. ಇಂಥಾ ಸನ್ನಿವೇಶದಲ್ಲಿ ಮನೆಯ ಆಸುಪಾಸಿನಲ್ಲೇ ನಡೆದ ಅಗ್ನಿ ಅನಾಹುತವೊಂದರಲ್ಲಿ ಹೆನ್ರಿ ಸಾವಿಗೀಡಾಗುತ್ತಾನೆ. ಹಣೆಯಲ್ಲಿ ಗಾಯದ ಒಂದೆರಡು ಗುರುತುಗಳಿದ್ದರೂ ಆಕ್ಸಿಜನ್ ಕೊರತೆಯಿಂದಾದ ಸಾವು ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರೆದು ಫೈಲು ಮುಚ್ಚಿಕೊಳ್ಳುತ್ತದೆ. ಹೆನ್ರಿಯ ಸಾವಿನ ನೈಜ ಕಥೆ ಇಂದಿಗೂ ಒಂದು ಬಿಡಿಸಲಾರದ ಒಗಟು. ಮುಂದೆ ೧೯೪೫ ರಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಅಗಸ್ಟಾಳ ಕೊನೆಯಾಗುತ್ತದೆ. ಅವಳ ಕೊನೆಯ ದಿನದವರೆಗೂ ಕಾಯಾ ವಾಚಾ ಮನಸಾ ಸೇವೆ ಮಾಡಿಕೊಂಡು ಎಡ್ ಬದುಕುತ್ತಿರುತ್ತಾನೆ. ಅವಳ ಸಾವಿನ ನಂತರ ಎಡ್ ನ ಜಗತ್ತಿನ ಬಹು ಮುಖ್ಯವಾದ ಮತ್ತು ಮೊದಲನೇ ಭಾಗ ಅಂತ್ಯವಾಗುತ್ತದೆ. ತೀವ್ರ ಆಘಾತಕ್ಕೊಳಗಾಗುವ ಈತ, ಈ ಸಾವಿನ ನಂತರ ಅವನೇ ಸ್ವತಃ ಹೇಳಿದಂತೆ ಅವನು ಸಂಪೂರ್ಣವಾಗಿ ಒಬ್ಬಂಟಿಯಾಗುತ್ತಾನೆ.    

ತಾಯಿಯಿಲ್ಲದ ಜಗತ್ತನ್ನೇ ಊಹಿಸಿರದಿದ್ದ ಎಡ್ ಗೆ ದೈನಂದಿನ ಜೀವನ ಕಬ್ಬಿಣದ ಕಡಲೆಯಾಗುತ್ತದೆ. ತಾಯಿ ಹೆಚ್ಚಾಗಿ ಉಪಯೋಗಿಸುತ್ತಿದ್ದ ಮನೆಯ ಒಂದೆರಡು ಕೋಣೆಗಳನ್ನು ಅವಳ ನೆನಪಿಗೆಂದೇ, ಇದ್ದ ಸ್ಥಿತಿಯಲ್ಲೇ ಜೀವನ ಪೂರ್ತಿ ಇಡಲು ತೀರ್ಮಾನಿಸುತ್ತಾನೆ. ಈ ಕೋಣೆಗಳು ತನಗೆ ಪವಿತ್ರ ಪೂಜಾ ಸ್ಥಳಗಳಂತೆ ಎಂದು ತನಗೆ ತಾನೇ ಸಂತೈಸಿ ಅಡುಗೆ ಮನೆಯ ಪಕ್ಕದಲ್ಲೇ ಇದ್ದ ಒಂದು ಚಿಕ್ಕ ಕೋಣೆಯನ್ನು ತನ್ನ ಕೋಣೆಯಾಗಿ ಪರಿವರ್ತಿಸುತ್ತಾನೆ. ತನ್ನ ಭೂಮಿಯ ಕೆಲಭಾಗವನ್ನು ಮಾರಿ ಬಂದ ಹಣದಿಂದಲೂ, ತನ್ನ ಹಳ್ಳಿಯಲ್ಲೇ ಬಹುಕಷ್ಟದಿಂದ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿ ತನ್ನ ಹೊಟ್ಟೆಹೊರೆದುಕೊಳ್ಳುವ ಸ್ಥಿತಿ ಈಗ ಎಡ್ ನದ್ದಾಗುತ್ತದೆ. ಇಂಥಾ ಏಕಾಂತದ ಸಮಯದಲ್ಲೇ ಅನಾಟಮಿ ಪುಸ್ತಕಗಳು, ನರಭಕ್ಷಕರ ಕುರಿತಾದ ಲೇಖನಗಳು, ಕ್ರೈಂ ಸಂಬಂಧಿ ಬಿ-ಗ್ರೇಡ್ ಮ್ಯಾಗಝಿನ್ ಗಳು ಎಡ್ ನ ಕೈ ಸೇರುತ್ತವೆ. ವರ್ಷಗಳಷ್ಟು ಸಂಕುಚಿತ, ಅಪಕ್ವ ಮನಸ್ಸಿನಲ್ಲೇ ಮಲಗಿದ್ದ ಲೆಕ್ಕವಿಲ್ಲದಷ್ಟು ಪ್ರಶ್ನೆಗಳು, ಅಸಂಖ್ಯಾತ ಫ್ಯಾಂಟಸಿಗಳು ಈಗ ನಿಧಾನವಾಗಿ ತನ್ನ ಪೊರೆ ಕಳಚಿ ಹೊರಬರಲಾರಂಭಿಸುತ್ತವೆ. 

ಎಡ್ ನಿಶಾಚರಿಯಂತೆ ಪ್ಲೇನ್ ಫೀಲ್ಡ್ ಹಳ್ಳಿಯೆಲ್ಲಾ ರಾತ್ರಿಯಿಡೀ ಗಸ್ತು ಹೊಡೆಯುವವರಂತೆ ತಿರುಗಲಾರಂಭಿಸುತ್ತಾನೆ. ಪ್ರತೀಸಲವೂ ಸ್ಮಶಾನಗಳಿಗೆ ಹೋದಾಗ ಆಗುವ ಒಂದು ವಿಚಿತ್ರ ಮಾನಸಿಕ ಅನುಭೂತಿ, ನಿರಾಳತೆ ಅವನನ್ನು ಅಚ್ಚರಿಗೊಳಿಸುವಂತೆ ಮಾಡುತ್ತದೆ. ಇದಾದ ನಂತರ ಪ್ರತಿದಿನವೂ ದಿನಪತ್ರಿಕೆಗಳಲ್ಲಿ "ಶ್ರದ್ಧಾಂಜಲಿ"ಗೆಂದೇ ಮೀಸಲಾಗಿಟ್ಟಿರುವ ಪುಟ ಇವನ ಫೇವರಿಟ್ ಆಗಿಬಿಡುತ್ತದೆ. ಯಾವ್ಯಾವ ದಿನ ಯಾರ್‍ಯಾರ ಅಂತ್ಯಸಂಸ್ಕಾರಗಳು ನಡೆಯಲಿವೆ ಎಂಬುದನ್ನೇ ಶ್ರದ್ಧೆಯಿಂದ ಓದಿ, ಕ್ಯಾಲೆಂಡರಿನಲ್ಲಿ ಗುರುತು ಮಾಡಿ ಶವವನ್ನು ಹೂತ ಒಂದೆರಡು ದಿನಗಳ ಅಂತರದಲ್ಲೇ ಸಮಾಧಿಗೆ ಭೇಟಿ ನೀಡಲಾರಂಭಿಸುತ್ತಾನೆ. ಸ್ಥಳೀಯ ಗಸ್ ಎಂಬಾತನ ನೆರವಿನಿಂದ ಹೂತ ಮಹಿಳೆಯರ ಶವಗಳನ್ನು ಹೊರತೆಗೆದು ಮನೆಗೆ ತರಲಾರಂಭಿಸುತ್ತಾನೆ. ಅಗೆದ ಮಣ್ಣನ್ನು ಹಾಗೆಯೇ ತುಂಬಿಸಿ ಸಮತಟ್ಟು ಮಾಡಿ ಯಾರಿಗೂ ಸುಳಿವೇ ಹಚ್ಚದಂತೆ ಎಚ್ಚರಿಕೆಯಿಂದ ಕೆಲಸ ಮಾಡಿಕೊಂಡಿರುತ್ತಾನೆ ಈ ಎಡ್. ಅವನೇ ಹೇಳಿದಂತೆ ತನ್ನ ತಾಯಿಯನ್ನು ಹೋಲುತ್ತಿದ್ದ, ಸ್ವಲ್ಪ ದಪ್ಪಗಿದ್ದು ದೃಢಕಾಯಿ ಮಧ್ಯವಯಸ್ಕ ಹೆಂಗಸರ ಶವಗಳನ್ನೇ ಆತ ಹೊತ್ತು ತರುತ್ತಿದ್ದನಂತೆ. ಇದಕ್ಕಾಗಿ ಹಲವು ಬಾರಿ ದಟ್ಟರಾತ್ರಿಗಳಲ್ಲಿ ಹೋಗಿ ಪ್ರಯತ್ನಿಸಿ, ಸಿಗಲಿಲ್ಲವೆಂದಾದರೆ ಖಾಲಿ ಕೈಯಲ್ಲಿ ಹತಾಶನಾಗಿ ಹಿಂತಿರುತ್ತಿದ್ದನಂತೆ. ಮನೆಗೆ ತಂದಿರಿಸಿದ ನಂತರ ಎಡ್ ನ ಕೈಚಳಕ ಆರಂಭವಾಗುತ್ತದೆ. ದೇಹದ ಚರ್ಮವನ್ನು ನಿಧಾನಕ್ಕೆ ಸುಲಿದು ಮನೆಯ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾನೆ. ಇಂಥದ್ದೇ ಚರ್ಮಗಳಿಂದ ಅಂಗಿ, ಲ್ಯಾಂಪ್ ಶೇಡ್, ಲೆಗ್ಗಿಂಗುಗಳು ಹೀಗೇ ಏನೇನೋ ತಯಾರಾಗುತ್ತವೆ. ತಲೆಬುರುಡೆಗಳು ಸೂಪ್ ಕುಡಿಯುವ ಬೌಲ್ ಗಳಾಗಿ ಮಾರ್ಪಡುತ್ತವೆ. ಅನಾಟಮಿ ಪುಸ್ತಕವನ್ನು ಎದುರಿಗಿಟ್ಟುಕೊಂಡು ಕತ್ತರಿಸಿಟ್ಟ ತಲೆಗಳಿಂದ ಮುಖದ ಚರ್ಮವನ್ನು ನೈಪುಣ್ಯತೆಯಿಂದ ತೆಗೆದು ಮಾಸ್ಕ್ ಗಳನ್ನು ಮಾಡಿ ಕೆಲಹೊತ್ತು ಧರಿಸಿ, ಮನೆಯಲ್ಲಿರಿಸುತ್ತಾನೆ. ಕತ್ತರಿಸಿಟ್ಟ ಬೆರಳು, ತುಟಿ, ಮೂಗು, ಗುಪ್ತಾಂಗಗಳಂಥಾ ದೇಹದ ಭಾಗಗಳು ಇವನ ಸೋ ಕಾಲ್ಡ್ "ಬಾಡಿ ಮಾಸ್ಟರ್ ಪೀಸ್"ಗೆ ಫಿಸಿಷಿಂಗ್ ಕೊಡೋ ವಸ್ತುಗಳಾಗುತ್ತವೆ. ಎಲ್ಲಾ ಮುಗಿದ ನಂತರ ಉಳಿದ ತಲೆಗಳನ್ನು ಟ್ರೋಫಿಯಂತೆ ಗೋಡೆಗೆ ನೇತುಹಾಕಿಡುತ್ತಾನೆ. ಪ್ಲೇನ್ ಫೀಲ್ಡ್ ಹಳ್ಳಿಯ ನಿರ್ಜನ ಪ್ರದೇಶವೊಂದರ ಮನೆಯೊಂದರಲ್ಲಿ ಒಬ್ಬಂಟಿಯಾಗಿ ನೆಲೆಸಿರುವ, ಯಾರೊಂದಿಗೂ ಹೆಚ್ಚು ಮಾತೇ ಆಡದ, ಹೆಚ್ಚು ಬೆರೆಯದ ವಿಲಕ್ಷಣ ವ್ಯಕ್ತಿಯೊಬ್ಬ ಎಂಥೆಂಥಾ ರಹಸ್ಯಗಳನ್ನು, ವಸ್ತುಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿರಬಹುದು ಎಂಬುದು ಬಹುಕಾಲ ಯಾರಿಗೂ ತಿಳಿಯಲಿಲ್ಲ. ಶವಗಳು ಒಂದರ ಮೇಲೊಂದರಂದಂತೆ ಸದ್ದಿಲ್ಲದೆ ಹೊರಬರುತ್ತಲೇ ಸಾಗಿದವು. ಸತ್ಯಗಳು ಸಮಾಧಿಯಾಗುತ್ತಲೇ ಹೋದವು. 

ಐದಾರು ವರ್ಷಗಳ ನಂತರ ಎಡ್ ನ ಸಹಚರ ಗಸ್ ಹಳ್ಳಿಯಿಂದ ಮರೆಯಾಗುತ್ತಾನೆ. ಈಗ ಒಬ್ಬನೇ ಹೋಗಿ ಶವಗಳನ್ನು ತರುವುದು ಪ್ರಯಾಸದ ಮಾತಾಗುತ್ತದೆ. ಹೀಗಾಗಿ ಕೊಲೆ ಅನಿವಾರ್ಯವಾಗುತ್ತದೆ. ೦. ೨೨ ಕ್ಯಾಲಿಬರ್ ರೈಫಲ್ ನೊಂದಿಗೆ ಎಡ್ ನ ಮಾನವಬೇಟೆ ಶುರುವಾಗುತ್ತದೆ. ಹಳ್ಳಿಯಲ್ಲಿ ನಾಪತ್ತೆಯ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಸ್ಥಳೀಯ ಕೌಂಟಿ ಪೋಲೀಸರು ಜಾಗೃತರಾಗುತ್ತಾರೆ. ಎಡ್ ಗೆ ಪರಿಚಯವಿದ್ದ ೧೬ ರ ಹರೆಯದ ಬಾಲಕನೊಬ್ಬನು ಅದೇನೋ ತುರ್ತಾಗಿ ಇವನ ಮನೆಗೆ ಬರಬೇಕಾಗಿ ಬಂದಾಗ ಮನೆಯಲ್ಲಿರಿಸಿದ ಇಂಥಾ ವಿಚಿತ್ರ ವಸ್ತುಗಳನ್ನು ನೋಡಿ ದಂಗಾದನಂತೆ. ಅವನು ತನ್ನ ಪೋಷಕರಲ್ಲಿ ಈ ವಿಷಯವನ್ನು ಹೇಳಿದಾಗ ಅವರು ಇದನ್ನೊಂದು ಬಾಲ್ಯಸಹಜ ಕಲ್ಪನೆಯಷ್ಟೇ ಎಂದು ಯೋಚಿಸಿ ಸುಮ್ಮನಾದರೇ ಹೊರತು ಅದನ್ನು ಗಂಭೀರವಾಗಿಯೇನೂ ತೆಗೆದುಕೊಳ್ಳಲಿಲ್ಲ. ಆದರೆ ಬಾಲಕನ ಮಾತನ್ನು ಕೇಳಿದ ಒಂದೆರಡು ಮಂದಿ ಕುತೂಹಲಕ್ಕೆಂದು ಎಡ್ ನ ಮನೆಯ ಆಸುಪಾಸು ತಿರುಗಾಡಲಾರಂಭಿಸಿದರು. ಒಂದೊಮ್ಮೆ ಯಾರೋ ಕೇಳಿದಾಗ ಈ ತಲೆಗಳು ಫಿಲಿಪ್ಪೀನಿನಿಂದ ಸಂಬಂಧಿಯೊಬ್ಬ ಕಳಿಸಿಕೊಟ್ಟ ದ್ವಿತೀಯ ಮಹಾಯುದ್ಧದ ನೆನಪಿನ ಕುರುಹುಗಳೆಂದು ಪೆದ್ದನಗು ನಗುತ್ತಲೇ ತಳ್ಳಿಹಾಕಿದ್ದ. ಅದ್ಯಾವನೋ ಎಡ್ ಅನ್ನೋ ಮನೆಯಲ್ಲಿ ಏನೇನೋ ವಿಚಿತ್ರ ವಸ್ತುಗಳಿವೆಯಂತೆ ಎಂದು ಗಾಸಿಪ್ಪಾಗಿ, ಜೋಕಾಗಿ, ಜನರ ಬಾಯಿಮಾತಲ್ಲಿ ಹರಡಿ ಹೋದ ಮಾತುಗಳು ಕ್ರಮೇಣ ಪೋಲೀಸರ ತೀಕ್ಷ್ಣ ಕಿವಿಗಳಿಗೂ ಬೀಳುತ್ತವೆ. ಇದೇ ದಿನಗಳಲ್ಲಿ ಪ್ಲೇನ್ ಫೀಲ್ಡ್ ಹಳ್ಳಿಯ ಹಾರ್ಡ್‌ವೇರ್ ಅಂಗಡಿಯ ಮಾಲಕಿ ಬರ್ನೀಸ್ ವೋರ್ಡನ್ ಳ ನಾಪತ್ತೆಯ ಕುರಿತ ಖಚಿತ ಜಾಡನ್ನು ಹಿಡಿದು ಹೊರಟ ಕೌಂಟಿಪೋಲೀಸರು ವಾರಂಟ್ ಸಮೇತ ಎಡ್ ನ ಮನೆಗೆ ದಾಳಿಯಿಕ್ಕುತ್ತಾರೆ. ನೆಟ್ಟಗೆ ವಿದ್ಯುತ್ ಸೌಲಭ್ಯವೂ ಇಲ್ಲದಿದ್ದ ಆ ಮನೆಯ ಕತ್ತಲೆ ಕೋಣೆಗಳಲ್ಲಿ, ಸ್ವಚ್ಛಮಾಡದೆ ತಿಂಗಳುಗಳೇ ಆಗಿದ್ದ, ಕೊಳಚೆ ಗುಂಡಿಯಂತಿದ್ದ ಮನೆಯ ಮೂಲೆ ಮೂಲೆಗಳಲ್ಲಿ ಟಾರ್ಚ್ ಲೈಟು ಹಿಡಿದುಕೊಂಡು ಪೋಲಿಸರು ಕಂಡ ಭೀಭತ್ಸ ದೃಶ್ಯಗಳು ಈಗ ಇತಿಹಾಸ. ಘಂಟೆಗಟ್ಟಲೆ ಮುಂದುವರಿದ ಈ ಪೋಲೀಸ್ ದಾಳಿಯಲ್ಲಿ ಮೇಲೆ ಹೇಳಿದ ವಸ್ತುಗಳೇ ಅಲ್ಲದೆ ರೆಫ್ರಿಜರೇಟರಿನಲ್ಲಿ ಹಾಳಾಗದಂತೆ ಸುರಕ್ಷಿತವಾಗಿಟ್ಟಿದ್ದ ದೇಹದ ಕೆಲ ಭಾಗಗಳೂ, ಒಂದು ಹೃದಯವೂ ದೊರಕಿತು. ಎಲ್ಲದಕ್ಕಿಂತಲೂ ಹೆಚ್ಚಾಗಿ ಪೋಲೀಸರಿಗೆ ಸಿಕ್ಕ ಸುಳಿವು ಈ ಬಾರಿ ತಪ್ಪಾಗಲಿಲ್ಲ. ಆದರೆ ದುರಾದೃಷ್ಟೆ ಬರ್ನೀಸ್ ವೋರ್ಡನ್ ಶವವಾಗಿದ್ದಳು. ಕೈ, ಕಾಲುಗಳು ಮತ್ತು ತಲೆಯಿಂದ ಹೊರತಾಗಿದ್ದ ಆ ದೇಹ ಕಸಾಯಿ ಖಾನೆಯಲ್ಲಿ ನೇತುಹಾಕಿದ್ದ ಹಂದಿಮಾಂಸದಂತೆ ತಲೆಕೆಳಗಾಗಿ ನೇತುಕೊಂಡಿತ್ತು. ಬರ್ನೀಸ್ ಳ ಕತ್ತರಿಸಿಟ್ಟ ತಲೆ ಅಲ್ಲೇ ಪಕ್ಕದ ಮೂಲೆಯಲ್ಲಿರಿಸಿದ್ದ ಚಿಕ್ಕ ಗೋಣಿಚೀಲವೊಂದರಲ್ಲಿ ತಣ್ಣಗೆ ಮಲಗಿತ್ತು.                

ವಿಷಯ ತಿಳಿದು ಪರಾರಿಯಾಗುವುದನ್ನು ಯೋಚಿಸುವ ಮೊದಲೇ ಎಡ್ ಕೌಂಟಿ ಪೋಲೀಸರ ಅತಿಥಿಯಾಗಿದ್ದ. ನಾಪತ್ತೆ ಪ್ರಕರಣಗಳಿಗೂ, ಕೊಲೆಗಳಿಗೂ, ಅಮಾಯಕನಂತೆ ಕಾಣುವ ಎಡ್ ಗೂ ಎತ್ತಣಿಂದೆತ್ತಣ ಸಂಬಂಧ ಎಂದು ತಲೆಕೆರೆದುಕೊಳ್ಳುವ ಕೆಲಸ ಈಗ ಪ್ಲೇನ್ ಫೀಲ್ಡ್ ಹಳ್ಳಿಯ ಜನರದ್ದಾಯಿತು. ಹಳ್ಳಿಯ ಜನರೊಂದಿಗೆ ನೆಟ್ಟಗೆ ಜಿಂಕೆ ಬೇಟೆಯನ್ನು ಮಾಡಲೇ ಹಿಂಜರಿಯುತ್ತಿದ್ದ ಎಡ್ ಮನುಷ್ಯರನ್ನೂ ಜಿಂಕೆ ಮಾಂಸದಂತೆ ಶೇಖರಿಸಿಟ್ಟ ಕಥೆ ಹಳ್ಳಿಯನ್ನೇ ನಡುಗಿಸಿಬಿಟ್ಟಿತು. ಎಲ್ಲಾ ಅಪರಾಧಗಳ ಬಗ್ಗೆ ಈತ ಒಂದೇ ಬಾರಿ ಹೇಳದೇ ಇದ್ದರೂ ತನಿಖೆಯಲ್ಲಿ ಪೂರ್ಣ ಸಹಕಾರವನ್ನು ಕೊಟ್ಟ. ಪೋಲೀಸರೊಂದಿಗೆ ತಾನೇ ಖುದ್ದಾಗಿ ಹೋಗಿ ಯಾವ್ಯಾವ ಗೋರಿಯಿಂದ ಎಷ್ಟೆಷ್ಟು ದೇಹಗಳನ್ನು ಹೊರತೆಗೆದೆನೆಂದು ಬಾಯಿಬಿಡತೊಡಗಿದ. ಹಲವು ಸಮಾಧಿಗಳಲ್ಲಿ ಖಾಲಿ ಶವಪೆಟ್ಟಿಗೆಗಳೂ, ಇನ್ನೂ ಕೆಲವು ಸಮಾಧಿಗಳಲ್ಲಿ ಇವನು ಮೈಮರೆವಿನಿಂದ ಬಿಟ್ಟುಬಂದಿರುವ ಒಂದೆರಡು ವಸ್ತುಗಳೂ ಸಿಕ್ಕವು. ಅಧಿಕೃತವಾಗಿ ಎರಡೇ ಕೊಲೆಗಳನ್ನು ಮಾಡಿರುವುದಾಗಿಯೂ, ಉಳಿದೆಲ್ಲಾ ದೇಹಗಳು ಸ್ಮಶಾನಗಳಿಂದ ಕದ್ದು ತಂದಿದ್ದವೆಂದೂ ಒಪ್ಪಿಕೊಂಡ. ಲೈಂಗಿಕವಾಗಿ ಶವಗಳನ್ನು ಬಳಸಿದ್ದಿಯೇನೋ (ಸೈಕಾಲಜಿಯಲ್ಲಿ ಈ ಮನೋಸ್ಥಿತಿಯನ್ನು ನೆಕ್ರೋಫೀಲಿಯಾ ಎನ್ನುತ್ತಾರೆ) ಎಂದು ಕೇಳಿದಾಗ, "ಇಲ್ಲ, ಅವು ತುಂಬಾನೆ ಕೆಟ್ಟವಾಸನೆಯಿಂದಿದ್ದವು" ಅಂದಿದ್ದನಂತೆ. ಬಂಧನಕ್ಕೊಳಗಾಗಿ ಕೆಲದಿನಗಳಲ್ಲೇ ಕೋರ್ಟಿಗೆ ಹಾಜರುಗೊಳಿಸಿದ ಎಡ್ ನನ್ನು ನ್ಯಾಯಾಲಯ ಈತ ಮನೋರೋಗಿಯಾಗಿರುವುದರಿಂದ ವಿಚಾರಣೆಗೆ ನಾಲಾಯಕ್ಕೆಂದೂ, ಈತನನ್ನು ಚಿಕಿತ್ಸೆಗೊಳಪಡಿಸಬೇಕೆಂದೂ ಆದೇಶವನ್ನು ನೀಡಿತು. ಬರೋಬ್ಬರಿ ೧೦ ವರ್ಷಗಳವರೆಗೆ ನಡೆದ ಚಿಕಿತ್ಸೆಯಲ್ಲಿ ಎಡ್ ಸ್ಕೀಝೋಫ್ರೀನಿಯಾದಿಂದ ಬಳಲುತ್ತಿದ್ದ ಎಂದು ಸಾಬೀತಾಗಿ, ಸಂಬಂಧಿ ಚಿಕಿತ್ಸೆಯನ್ನೂ ನೀಡಲಾಯಿತು. ಕೆಲ ಅಪವಾದಗಳನ್ನು ಬಿಟ್ಟರೆ ಅವನೊಬ್ಬ ಉತ್ತಮ, ವಿಧೇಯ ರೋಗಿ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹಲವೆಡೆ ದಾಖಲಿಸಿದ್ದಾರೆ. ೧೯೬೮ ರಲ್ಲಿ ಚಿಕಿತ್ಸಾ ತರುವಾಯ ನಡೆದ ಮರುವಿಚಾರಣೆಯಲ್ಲಿ ನ್ಯಾಯಾಲಯ ಎಡ್ ಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತು. ಎಡ್ ತನ್ನ ಜೈಲುವಾಸ ಅನುಭವಿಸುತ್ತಿರುವ ದಿನಗಳಲ್ಲೇ ನಡೆದ ನಿಗೂಢ ಅಗ್ನಿ ಅನಾಹುತವೊಂದರಲ್ಲಿ ಅವನ ಮನೆ ನಾಶವಾಗುತ್ತದೆ. ಶವಗಳನ್ನು ಹೊತ್ತೊಯ್ಯಲು ಬಳಸುತ್ತಿದ್ದ ಅವನ ಕಾರು ಹರಾಜಾಗಿ ಹೋಯಿತು. ೧೯೮೪ ರ ಜೂನ್ ೨೬ ರಂದು ೭೭ ನೇ ವಯಸ್ಸಿನಲ್ಲಿ ಶ್ವಾಸಕೋಶದ ಕ್ಯಾನ್ಸರಿನಿಂದ ಎಡ್ ಕೊನೆಯುಸಿರೆಳೆಯುತ್ತಾನೆ.     

ಎಡ್ ಗೀನ್ ನ ರಕ್ತಸಿಕ್ತ ಚರಿತ್ರೆ ಹಾಲಿವುಡ್ ಟೆಲಿವಿಷನ್ ಸೀರೀಸ್ ಗಳು, ಮೋಷನ್ ಪಿಕ್ಚರ್‍ಸ್, ಮ್ಯೂಸಿಕ್ ಆಲ್ಬಮ್ಸ್ ಗಳೆಂಬ ಭೇದವಿಲ್ಲದೆ ಲೆಕ್ಕವಿಲ್ಲದಷ್ಟು ಬಾರಿ ಹಾಲಿವುಡ್ ನಲ್ಲಿ ಪ್ರಯೋಗವಾಗಿದೆ. ೧೯೬೦ ರಲ್ಲಿ ತೆರೆಕಂಡ ಆಲ್ಫ್ರೆಡ್ ಹಿಚ್ ಕಾಕ್ ನಿರ್ದೇಶನದ ಹಾರರ್ ದಂತಕಥೆ "ಸೈಕೋ" ಚಲನಚಿತ್ರಕ್ಕೆ ಎಡ್ ನ ಕಥೆಯೇ ಸ್ಫೂರ್ತಿ. ಈ ಚಿತ್ರದ ಕಥಾನಾಯಕ ಪಾತ್ರ ನಾರ್ಮನ್ ಬೇಟ್ಸ್ ತನ್ನ ಮೃತ ತಾಯಿಯೊಡನೆ ಹೊಂದಿರುವ ವಿಚಿತ್ರವಾದ ಸಂಬಂಧದ ಚಿತ್ರಣದಲ್ಲಿ ಎಡ್ ನ ದಟ್ಟ ಛಾಯೆಯಿದೆ. ಮುಂದೆ ಬಂದ "ದ ಸೈಲೆನ್ಸ್ ಆಫ್ ದ ಲ್ಯಾಂಬ್ಸ್" (ಕಾಲ್ಪನಿಕ ಪಾತ್ರ: ಬಫಲೋ ಬಿಲ್), "ದ ಟೆಕ್ಸಾಸ್ ಚೈನ್ ಸಾ ಮಸಾಕರ್" (ಕಾಲ್ಪನಿಕ ಪಾತ್ರ: ಲೆದರ್ ಫೇಸ್) ಮುಂತಾದ ಮನೋವೈಜ್ಞಾನಿಕ / ಸ್ಲ್ಯಾಶರ್ ವಿಭಾಗದ ಚಲನಚಿತ್ರಗಳೂ ಇವನ ಕಥೆಯಿಟ್ಟುಕೊಂಡೇ ಬಂದ ಚಿತ್ರಗಳು. ತೀವ್ರ ಭದ್ರತಾ ವ್ಯವಸ್ಥೆಯ ಜೈಲಿನ ಸೆಲ್ ಗಳಲ್ಲಿ, ಅಸೈಲಂಗಳಲ್ಲಿ ಅಲೆದಾಡಿ ಹಂತಕರನ್ನು, ಸೈಕೋಪಾತ್ ಗಳನ್ನು ಸಂದರ್ಶಿಸುವ ಸಾಹಸಿ ಕ್ರೈಂ ವರದಿಗಾರರ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಗ್ರಂಥವಾಗುತ್ತದೆ. ಮಹಾ ಮ್ಯಾನಿಪ್ಯುಲೇಟರ್ ಗಳಾಗಿರುವ ಈ ಅಪರಾಧಿಗಳು ಪೋಲೀಸರನ್ನು, ಮನೋವೈದ್ಯರನ್ನು ಯಾಮಾರಿಸುತ್ತಾ ಸತ್ಯವನ್ನು ಬಚ್ಚಿಟ್ಟುಕೊಂಡು ಹಲವು ವರ್ಷಗಳವರೆಗೆ ಕೇಸುಗಳನ್ನು ತ್ರಿಶಂಕು ಸ್ಥಿತಿಯಲ್ಲಿಟ್ಟ ನಿದರ್ಶನಗಳೂ ಅನೇಕ.   

ಇಂತಹಾ ನೈಜ ದುರಂತ ಕಥೆಗಳನ್ನು ಓದುಗರ ಮುಂದಿಡುವಾಗ ಹಿಂಸೆಯನ್ನು ವೈಭವೀಕರಿಸದೆ, ನಡೆದ ಕಟುಸತ್ಯಗಳನ್ನೂ ಮರೆಮಾಚದೆ ಪ್ರಸ್ತುತ ಪಡಿಸುವುದು ಎಂತಹಾ ಚಾಲೆಂಜ್ ಎಂಬುದನ್ನು ಖ್ಯಾತ ಪತ್ರಕರ್ತೆ, ಲೇಖಕಿ ಆನ್ ರೂಲ್ ಕುಖ್ಯಾತ ಸರಣಿ ಹಂತಕ ಟೆಡ್ ಬಂಡಿ ಕುರಿತಾದ ತಮ್ಮ "ದ ಸ್ಟ್ರೇಂಜರ್ ಬಿಸೈಡ್ ಮಿ" ಎಂಬ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ಈ ಲೇಖನವನ್ನು ಬರೆದು ಮುಗಿಸಿದಾಗ ಲೇಖಕಿಯ ಮಾತು ಅದೆಷ್ಟು ಸತ್ಯ ಅನ್ನಿಸಿತು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ದ ಪ್ಲೇನ್-ಫೀಲ್ಡ್ ಕಿಲ್ಲರ್”: ಪ್ರಸಾದ್ ಕೆ.

  1. ಪ್ರಸಾದ್ ಅವರೇ,ಭಾರತಿಪುರ ಅಂಕಣದ ಹುಡುಕಾಟದಲ್ಲಿದ್ದವಳಿಗೆ ನಿಮ್ಮ ಅಂಕಣ ಕಣ್ಣಿಗೆ ಬಿತ್ತು…ಒಂದು ಕ್ಷಣ English movie ‘Perfume’ ದ ತುಣುಕುಗಳು ಕಣ್ಣ ಮುಂದೆ ಹಾಯ್ದು ಹೋಯಿತು …ಮನುಷ್ಯನ ಆಗಾಧ ಲೋಕದಲ್ಲಿ ಒಳ್ಳೆಯ ತನ ಮತ್ತು ಪಾತಕ ತನಕ್ಕೆ ಸೀಮೆಯೇ ಇಲ್ಲವೇನೋ ……ಒಂದು ಕ್ಷಣ ಮನ ವಿಕ್ಷಿಪ್ತವಾಯಿತು……..

    1. Somewhere I read that a killer called Henry Lucas was telling his jailors not to release him from jail, since he couldn't resist and overcome his bizarre fantasies. He didn't want to go out; If he did, he had to kill. I hope the article is successful to introduce Ed Gein in this stage! Keep reading 🙂

  2. Strange…. Really Human Mind has no limitation on either side……

    ಕಥೆ ಎಷ್ಟು ಭಯಂಕರ ವಾಗಿದೆ ಎಂದರೆ ಕಥಾ ನಿರೂಪಕನ ನಿರೂಪಣೆ ತಲೆಯೊಳಗೆ ಹೂಗಲೇ ಇಲ್ಲ…
    ಮನುಷ್ಯನ ಮನಸ್ಸು ಹಲವು ಮಾಯೆ ಗಳ ಸಂಗಮ…ಚೆನ್ನಾಗಿ ಬಾಳ ಬಹುದಾಗಿದ್ದ ಬದುಕು ಕೆಟ್ಟ ಬಾಲ್ಯ ಇದಿಂದ ಮುರುಟಿ ಹೂಯಿತೇನೋ….ಕುಖ್ಯಾತವಾಯಿತೆನೋ…

Leave a Reply

Your email address will not be published. Required fields are marked *