ಕಥಾಲೋಕ

ದ್ವಂದ್ವ:ಸಂಯುಕ್ತಾ ಪುಲಿಗಲ್ ಬರೆದ ಸಣ್ಣಕತೆ


“ವಾಟ್ ಅಬೌಟ್ ಯುವರ್ ಪ್ರೋಪೋಸಲ್ಸ್ ಯಾ?”, ಡಬ್ಬಿಯಲ್ಲಿನ ಚಿತ್ರಾನ್ನದ ಸಾಸಿವೆ ಕಾಳನ್ನು ಸ್ಪೂನಿಂದ ಕೆದಕುತ್ತಾ ಕುಳಿತಿದ್ದ ಪೂರ್ಣಿಗೆ ತನ್ನ ಸಹೋದ್ಯೋಗಿ ನಿರ್ಮಲ ಕೇಳಿದ ಪ್ರಶ್ನೆ. ನಿರ್ಮಲ ತನ್ನ ಬಾಳಿನ ಸಾಕಷ್ಟು ಸಿಕ್ಕುಗಳನ್ನು ಈಗಾಗಲೇ ಬಿಡಿಸಿಕೊಂಡು ತಕ್ಕಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸುತ್ತಿರುವವಳು. ತಮಿಳುನಾಡಿನಿಂದ ಬಂದ ಈಕೆಯದು ಒಟ್ಟು ಕುಟುಂಬ, ಶಾಲೆ ಕಲಿಯುವ ಮಗ, ಈಗೊಮ್ಮೆ ಆಗೊಮ್ಮೆ ಕರೆಮಾಡುವ ಯಜಮಾನ. ಇದು ನಿರ್ಮಲಳ ಪ್ರಪಂಚ. ಸ್ವಲ್ಪ ಮುಂಗೊಪಿಯಾಗಿದ್ದರೂ ಪೂರ್ಣಿಗಿವಳು ಒಳ್ಳೆಯ ಸಹೋದ್ಯೋಗಿ.

ನಿರ್ಮಲಳ ಪ್ರಶ್ನೆಗೆ ಪೂರ್ಣಿ ಉತ್ತರಿಸುವಷ್ಟರಲ್ಲೇ ತನ್ನ ಹೊಳಪಿನ ಕಂಗಳನ್ನು ಅವಳತ್ತ ಹರಿಸಿದ್ದಳು ಸಂಗೀತ. ಅಚ್ಚ ಕನ್ನಡದ ನೀಳ ಜಡೆಯ ಈ ಬೆಡಗಿ ಉತ್ತಮ ಗಾಯಕಿ, ತಾನೂ ಮದುವೆಯಾದವಳು. ಈ ಮಾತು ಪ್ರಾರಂಭವಾಗುವಷ್ಟರಲ್ಲೇ ಮುಜುಗರದಿಂದ ‘ಮೇಡಂ ನಾನು ಕೈ ತೊಳೆದು ಬರ್ತೀನಿ’ ಎಂದು ಹೊರಟ ವಿನಾಯಕ. ಅವನದು ಬಿಂದಾಸ್ ಲೈಫ್. ಪ್ರಪಂಚದಲ್ಲಿ ತಾನೇ ಅತ್ಯುತ್ತಮ ಗಂಡು, ಸಾರಾಸಗಟಾಗಿ ಯಾವುದೇ ಹುಡುಗಿ ತನಗೊಲಿವಳು ಎಂದು ಬೀಗುವ, ಯಾವ ಮಹತ್ತರವಾದ ಯೋಚನೆಗಳೂ ಇಲ್ಲದ ಸಾಮಾನ್ಯ ಮನುಷ್ಯ. ಒಳ್ಳೆಯವ. ಇವರೆಲ್ಲರ ಪ್ರಶ್ನೆ ವರ್ತನೆಗಳಿಂದ ಮೊದಲೇ ಚಿಂತೆಗೀಡಾಗಿದ್ದ ಪೂರ್ಣಿ ಮತ್ತಷ್ಟು ಕಸಿವಿಸಿಗೊಂಡಳು. ಇವರಿಗೆಲ್ಲ ಮದುವೆ ಅನ್ನುವುದು ಅಷ್ಟು ಸುಲಭದ ಮಾತೆ? ನಿಜಕ್ಕೂ ಇವರು ಸಂತೋಷದಿಂದಿದ್ದಾರೆಯೇ ಎಂಬುದು ಪೂರ್ಣಿಯ ಅನಿಸಿಕೆ.

ಪೂರ್ಣಿಯೊಬ್ಬಳು ಸಾಧಾರಣ ಹುಡುಗಿ. ಮೆಚ್ಚುವಂತ ರೂಪವತಿಯಲ್ಲ. ಹೆಚ್ಚಾಗಿ ಅಂತರ್ಮುಖಿಯಾದರೂ ಎಲ್ಲರೊಡನೆಯೂ ಬೆರೆಯುವ, ಹೊಂದಿಕೊಳ್ಳುವ ಮನಸ್ಸುಳ್ಳವಳು. ತನ್ನ ಆತಂಕ ಪ್ರಶ್ನೆಗಳನ್ನೆಲ್ಲ ಮರೆ ಮಾಚುತ್ತ ಒಂದು ಕಿರುನಗೆ ನಕ್ಕು ‘ಇ ಆಮ್ ಸ್ಟಿಲ್ ಪೀಸ್ಫುಲ್” ಎಂದು ನಗುತ್ತಾ, ಚಿತ್ತ್ರಾನ್ನವನ್ನು ಬಾಯಿಗಿಟ್ಟಳು. ಬೇಗನೆ ಊಟ ಮುಗಿಸಿ ಡಬ್ಬಿ ಮುಚ್ಚಿಟ್ಟು ತನ್ನ ವರ್ಕ್ ಸ್ಟೇಷನ್ ಕಡೆಗೆ ತಿರುಗಿದಳು.

ಕಂಪ್ಯೂಟರ್ ಗೆ ಮುಖಮಾಡಿದಾಕ್ಷಣ ತೆರೆದುಕೊಳ್ಳುತ್ತದೆ ಪೂರ್ಣಿಯ ಜಗತ್ತು. ಒಂದೇ ಪರದೆಯನ್ನು ಸುಮ್ಮನೆ ನೋಡುತ್ತಲೇ ದಿನಕಳೆಯಬಹುದಾದಂತಹ ಮನಸ್ಸು ಅವಳದು. ಚಿಕ್ಕಂದಿನಿಂದಲೇ ಇತರ ಹೆಣ್ಣು ಮಕ್ಕಳ ಕೆಲವು ಸಾಧಾರಣ ಗುಣಗಳನ್ನು ಸ್ವಪ್ರಯತ್ನದಿಂದಲೇ ಕಾಣದೆ ಬೆಳೆದವಳು. ತಾನೊಬ್ಬ ಗಂಡಿನಂತೆ ಸ್ವತಂತ್ರವಾಗಿ ಬೆಳೆಯಬೇಕು ಎಂಬ ಹಂಬಲ. ಅದು ತನ್ನ ಹುಟ್ಟು ಗುಣವೋ ಅಥವಾ ಒಂದು ಇನ್ಫಾಚುಯೇಶನ್ನೋ ಅನ್ನೋದು ಅನುಮಾನಕರ ಸಂಗತಿ. ತನ್ನ ಜೀವನದಿ ನಡೆಯುವ  ಪ್ರತಿಯೊಂದು ವಿಷಯವನ್ನೂ ಮೆಲುಕು ಹಾಕಿ ಅದರ ಆಶೆ – ನಿರಾಶೆಗಳನ್ನು ಸರಿತೂಗಿಸುವುದು ಅವಳ ಆಗಾಗಿನ ಟೈಮ್ ಪಾಸ್.

ನಿರ್ಮಲಳ ಮಾತನ್ನು ಮತ್ತೆ ನೆನಪಿಸಿಕೊಂಡು ಅದನ್ನೇ ಅವಲೋಕಿಸುತ್ತಿದ್ದ ಪೂರ್ಣಿಗೆ ತನ್ನ ಮ್ಯಾನೇಜರ್ ನಿಂದ ಬುಲಾವ್! ಟೇಪನ್ನು ರಿವೈಂಡ್ ಮಾಡುವಂತೆ ತಕ್ಷಣ ಮರಳಿ ತನ್ನ ಮ್ಯಾನೇಜರ್ ಗಾಯತ್ರಿಯ ಬಳಿಗೆ ತೆರಳುತ್ತಾಳೆ. ಪೂರ್ಣಿಯ ಕೆಲಸದ ವಿಶೇಷ ಗುಣಗಳನ್ನು ಮೆಚ್ಚುತ್ತಾ ಹೊಗಳುತ್ತಾ ಮತ್ತಷ್ಟು ಕೆಲಸ ವಹಿಸುತ್ತ ಕೊನೆಯಲ್ಲಿ, “ಲುಕಿಂಗ್ ಸೋ ಫ್ರೆಶ್ ಟುಡೇ, ವಾಟ್ಸ್ ದಿ ಮ್ಯಾಟರ್! ” ಎಂದು ಛೇಡಿಸುತ್ತಾಳೆ . ಆಕೆಯ ನಿಲುವನ್ನು ಅರಿತ  ಪೂರ್ಣಿ ಒಂದು ಮಂದಹಾಸವನ್ನು ಬೀರಿ ಮರಳುತ್ತಾಳೆ. ತನ್ನ ಮದುವೆಯ ವಿಷಯ ತನಗಿಂತಲೂ ಮಿಗಿಲಾಗಿ ಇತರರನ್ನು ಕಾಡುತ್ತಿರುವುದು ಪೂರ್ಣಿಗೆ ನಗು ಬರಿಸುವಂತಾಗಿತ್ತು.

ತನ್ನ ಟೀನ್ ಏಜ್ ನಲ್ಲಿ ಎಲ್ಲ ಸಿಟಿ ಹುಡುಗೀರಂತೆ, ಒಬ್ಬ ವೀರ, ಚೆಲುವ, ಧನಿಕ ಅಥವಾ ‘ಮಿಲ್ಲ್ಸ್ ಅಂಡ್ ಬೂನ್ಸ್’ ನ ಒಬ್ಬ ಟಾಲ್, ಡಾರ್ಕ್, ಹ್ಯಾಂಡ್ಸಮ್ ನ ಕೈ ಹಿಡಿಯುವ ಕನಸನ್ನು ಕಂಡಿದ್ದಳು. ಆ ತನ್ನ ಕನಸು ನನಸಾಗುವ ವಯಸ್ಸಿನ ಕ್ಷಣ ಗಣನೆ ಮಾಡಿದ್ದಳು. ಈಗ! ಆ ಕ್ಷಣ ಬಂದಾಗಿದೆ, ತನ್ನನ್ನು ಉಳಿದಂತೆ ಮತ್ತೆಲ್ಲರ ಬಾಯಲ್ಲೂ ಆ ಸುಮಹೋತ್ಸವದ ಪ್ರಸ್ತಾಪವಾಗಿದೆ. ಆದರೆ, ಪೂರ್ಣಿಗೀಗದು ಅಷ್ಟು ಸುಲಭದ ಮಾತಾಗಿ ಉಳಿದಿಲ್ಲ. ಎಲ್ಲರ ಮಾತೂ ಹಿಂಸೆ ತರುವಂತಿದೆ. ತನಗೆ ಇದಾವುದೂ ಬೇಡವಾಗಿದೆ.

ಪುನಃ ತನ್ನ ಕ್ಯಾಬಿನ್ನಲ್ಲಿ ಬಂದು ಕುಳಿತ ಪೂರ್ಣಿಗೆ ಕೆಲಸದ ಮೇಲೆ ಲೋಕವಿರಲಿಲ್ಲ. ಇಂದೇ ಮುಗಿಸಬೇಕೆಂಬ ತನ್ನ ಮ್ಯಾನೇಜರ್ ಮಾತುಗಳು ನೆನಪಾಗಿ ಪ್ರಜ್ಞಾಪೂರ್ವಕವಾಗಿ ಮನಸ್ಸನ್ನು ಹರಿಯ ಬಿಡದೆ ಕೆಲಸ ಮುಗಿಸಿ ತಡವಾಗಿ ಮನೆಗೆ ಬಂದಳು. ಬಂದೊಡನೆಯೇ ಪೂರ್ಣಿಗೆ ಕಂಡದ್ದು ‘ನಿನಗೆ ರಾಣಿ ಹಾಗೆ ಮದ್ವೆ ಮಾಡಿ ಕಳ್ಸೋದು ಬಿಟ್ಟು ಇನ್ನು ಹೀಗೇ ಇದ್ದೀವಿ’ ಅಂತ ಹೇಳೋ ಅಮ್ಮನ ದೀನ ಕಂಗಳು, ಮ್ಯಾಟ್ರಿಮೋನಿಯಲ್ ಕಾಲಂನಲ್ಲಿ ಮಗ್ನರಾಗಿದ್ದ ಅಪ್ಪ! ಪೂರ್ಣಿಗೆ ತಡೆಯಲಾರದಷ್ಟು ಸಿಟ್ಟು ಬಂತು. “ನಾನೇನಾದರು ನಿಮಗೆ ಭಾರವಾಗಿದ್ದರೆ ಹೇಳಿ ” ಎಂದು ಅರಚುತ್ತ ಕೈಕಾಲು ತೊಳೆಯ ಹೊರಟಳು. ಅಷ್ಟಕ್ಕೇ ಅವರ ಮುಖ ಪೆಚ್ಚಾಗಿತ್ತು.

“ಹೋಗಲಿ ಬಾರೆ ನಿನಗಿಷ್ಟದ ಅಕ್ಕಿ ರೊಟ್ಟಿ ಮಾಡಿದ್ದೀನಿ” ಅಂತ ಅವಳ ಅಮ್ಮ ರಮಿಸತೊಡಗಿದಳು. ಅಷ್ಟು ಒರಟಾಗಿ  ನಡೆದಾಡಿದ್ದಕ್ಕೆ ತನ್ನ ಮೇಲೆಯೇ ಬೇಸರಾದ ಪೂರ್ಣಿ ಸಮಾಧಾನವಾಗಿ ಟೀವಿ ರಿಮೋಟು ಹಿಡಿದು ಚಾನೆಲ್  ತಿರುವುತ್ತಾ ರೊಟ್ಟಿಯನ್ನು ರುಚಿಸುತ್ತಿದ್ದಳು.

“ಮಾಧವ್ ಅಂಕಲ್ ಫೋನ್ ಮಾಡಿದ್ರು, ಯಾರೋ ಸಾಫ್ಟ್ ವೇರ್ ಹುಡುಗನಂತೆ, ಒಳ್ಳೆ ಫ್ಯಾಮಿಲಿ, ಒಬ್ಳೇ ತಂಗಿ ಅಂತೆ ಮದ್ವೆ ಆಗೋಗಿದೆ, ಇಲ್ಲೇ ಬೆಂಗ್ಳೂರಂತೆ”

“(ಅಯ್ಯೋ) ಅಮ್ಮಾ……”

“ಅಲ್ಲ ಕಣೇ….”

“ನನ್ಗೀಗ್ಲೆ ಮದ್ವೆ ಬೇಡಮ್ಮಾ”

“ಈಗಲ್ದೆ ಇನ್ನೇನ್ ಮುದುಕಿ ಆದ್ಮೇಲೆ ಮಾಡ್ಕೊತೀಯಾ?”

“————-“

“ಸುಮ್ನೆ ಒಂದು ಸಲ ನೋಡೋಣ, ಆಮೇಲೆ ಬೇಡ ಅಂದ್ರೆ ಬೇಡ”

“————-“

“ನಿಂಗೇ ಹೇಳ್ತಿರೋದು, ಅಂಕಲ್ ಬರ್ತಾರೆ, ನಿನ್ನ ಜಾತಕ, ಫೋಟೋ ಕಳಿಸ್ತೀನಿ”

“ಅಮ್ಮ ಪ್ಲೀಸ್, ಜಾತಕ ಗೀತಕ ಅಂದ್ರೆ ನೋಡು..”

—–ಪರಿಣಾಮ, ರೊಟ್ಟಿ ಅರ್ಧಕ್ಕೇ ನಿಲ್ಲಿಸಿ ಹೊರಟೇ ಬಿಟ್ಟಿದ್ದಳು ಪೂರ್ಣಿ. ಕಟ್ಟಾ ಬ್ರಾಹ್ಮಣಿಕೆಯ ಕುಟುಂಬದಲ್ಲಿ ಹುಟ್ಟಿದ್ದರೂ, ಅಪ್ಪನ ಭಾವುಕ ಮನಸ್ಸು, ವೈಚಾರಿಕ ಪ್ರಜ್ಞೆಯ ಅಮಲು ಪೂರ್ಣಿಗೂ ತಟ್ಟಿತ್ತು. ಅವಳ ನಂಬಿಕೆ ಪ್ರಕಾರ ಮದುವೆ ಒಂದು ಸಮಾನ ಮನಸ್ಕರ ನಡುವೆ ಬೆಳೆವ ಆರ್ದ್ರತೆ, ಆಪ್ಯಾಯತೆ ಹೊರತು ಜಾತಕ ನಕ್ಷತ್ರವಾಗಿರಲಿಲ್ಲ. ಅವಳೊಬ್ಬ ಭಾವನಾ ಜೀವಿ, ವಾಸ್ತವ್ಯದಿಂದ ದೂರವೇ ಆಗಿದ್ದಿರಬಹುದು.

ಪೂರ್ಣಿಯ ಬದುಕು ಬೆಳೆದಂತೆ ಅವಳ ಪ್ರಯಾರಿಟೀಸ್ ಬದಲಾಗಿತ್ತು. ತನ್ನ ಜೀವನದ ಅನೇಕ ಗುರಿಗಳನ್ನು ಸಾಕಾರಗೊಳಿಸಲು ಅಂತೆಯೇ ತನ್ನ ಜೀವನ ಸಂಗಾತಿಯ ಸಾಧನೆಗಳನ್ನು ಸಫಲಗೊಳಿಸಲು ತನ್ನಂತೆಯೇ ಸಮಾನಭಿರುಚಿಯ ಓರ್ವ ಸಾಥಿಯ ಕನವರಿಕೆಯಿತ್ತು. ಒಬ್ಬರಿಗೊಬ್ಬರ ನಡುವಣ ಸ್ನೇಹ  ಪ್ರೀತಿ ಬೆಳೆಯುವುದೇ  ಮೆಂಟಲ್ ಮ್ಯಚುರಿಟಿಯ ಮಿಲನದಿಂದ. ತನ್ನ ಟೀನ್ ಏಜ್ ಕನಸಿನ ರಾಜ  ಈಗ ಬರೀ ಒಂದು ನೆನಪಿನ ಫೋಟೋ ಫ್ರೇಮ್ ಸಾಕಿತ್ತು. ಮಾನಸಿಕ ಪ್ರಚೋದನೆಗಳು, ಸಮತೆಗಳು ಈಗ ಮುಖ್ಯವಾಗಿ ಕಾಣತೊಡಗಿದ್ದವು. “ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತ ಉಂಡು, ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ”, ಎಂಬ ಕೆ.ಎಸ್.ನ ರವರ ಸಾಲುಗಳು ಪೂರ್ಣಿಯನ್ನು ಮಂತ್ರಮುಗ್ಧಳನ್ನಾಗಿಸಿ, ಸಂಪೂರ್ಣ ಆವರಿಸಿ, ಒಂದು ಆದರ್ಶವಾದ ತಾತ್ವಿಕ ನೆಲೆಗಟ್ಟನ್ನು ಮದುವೆಯೆಂಬ ಕಲ್ಪನೆ ಕಟ್ಟಿಕೊಟ್ಟಿತ್ತು.

“ಪೂರ್ಣಿ, ನೋಡಮ್ಮ  ನೀನು ರಿಯಾಲಿಟೀಸ್ ನ ಅರ್ಥ ಮಾಡ್ಕೋಬೇಕು. ಪರ್ಫೆಕ್ಟ್ ಮ್ಯಾಚ್ ಯಾರಿಗೂ ಸಿಗಲ್ಲ, ಜೀವನದಲ್ಲಿ ಕಾಂಪ್ರಮೈಸ್ ಮಾಡ್ಕೋಬೇಕು”

ತನ್ನ ಸುತ್ತಲಿನ ಭಾವನೆಗಳೇ ಇಲ್ಲದ ಒಣ ಕ್ಯಾಪಿಟಲಿಸ್ಟ್ ‘ಪ್ರ್ಯಾಕ್ಟಿಕಲ್’ ಹುಡುಗರನ್ನ ಕಂಡು ಅವಳು ಬೇಸತ್ತಿದ್ದಳು. ಬಾಹ್ಯ ಸೌಂದರ್ಯಕ್ಕಷ್ಟೇ ಪ್ರಾಮುಖ್ಯತೆ ಕೊಡುವ, ಮತ್ತಾವ ಆದರ್ಶಗಳೂ ಹೊಂದಿರದ ಅನೇಕರನ್ನು ಕಂಡು ಆಶ್ಚರ್ಯ ಪಟ್ಟಿದ್ದಳು.

“ಇಲ್ಲಪ್ಪ, ನಾನು ಹಾಗೆ ಹೇಳ್ತಿಲ್ಲ ಆದರೆ ನನ್ನ ವ್ಯಾಲ್ಯೂ ಬೇಸ್ಡ್ ಬದುಕಿಗೆ ಇಂಪಾರ್ಟೆನ್ಸ್ ಕೊಡಬೇಕು ಅಂತ ಇದೀನಿ”

“ಸರಿ ನಮಗೆ ಅಂಥಹವರು ಸಿಗದೇ ಹೋದರೆ… “

“ಹೋದರಷ್ಟೇ ಹೋಯ್ತು, ಯಾರೂ ಬೇಡ”

ಪೂರ್ಣಿ ಹಾಗು ಅಪ್ಪನ ಈ ಮಾತನ್ನು ಅಡುಗೆ ಮನೆಯಿಂದ ಕೇಳುತ್ತಿದ್ದ ಅಮ್ಮ ಗಾಬರಿಗೊಂಡು ಪಾತ್ರೆಗಳನ್ನು ಕುಕ್ಕಿ ಬಂದು, “ನೀನು ಹಾಗೆಲ್ಲ ಸಿಲ್ಲಿ ಆಗಿ ಮಾತಾಡಬೇಡ. ಜೀವನ ಅಂದ್ರೆ ತಮಾಷೆ ಅಲ್ಲ. ಯಾರೂ ಬೇಡ್ದೇ ಗೀಡ್ದೇ ಇರೋದೆಲ್ಲ ಸುಲಭ ಅಲ್ಲ” ಎನ್ನುತ್ತಾಳೆ.

“——–“

” ನೀವೇನ್ರಿ, ಅವಳ ಮಾತು ಕೇಳ್ಕೊಂಡು, ಸರಿಹೋಯ್ತು, ನಿಮ್ಮ ಸಲಿಗೇನೆ ಅವಳ್ನ ಈವತ್ತು ಹೀಗೆ ಮಾಡಿದೆ”

“ಅಮ್ಮ ಪ್ಲೀಸ್, ನಾನು ಅಪ್ಪನ ಜೊತೆ ಮಾತಾಡ್ತಾ ಇದೀನಿ”

“ಅಪ್ಪಾನೂ ಅದನ್ನೇ ಹೇಳೋದು…..”

“ಶಾಂತಾ ನೀನ್ ಸುಮ್ನಿರು, ನಾನ್ ಮಾತಾಡ್ತೀನಿ” (ಹೀಗೆ ಅವರ ಮಾತುಕತೆ ಸಾಗಿತ್ತು.)

ಪೂರ್ಣಿಯ ಕಳವಳಕ್ಕೆ ಇದೆ ಕಾರಣವಾಗಿತ್ತು. ಹೇಳಲಾರದ ಭಯ, ಆತಂಕ. ಅವಳ ತಾಯಿ ಹೇಳೋ ಸಾಫ್ಟ್ ವೇರ್ ಹುಡುಗನ ಬಗ್ಗೆ ಪೂರ್ಣಿಗೆ ತಿಳಿದಿತ್ತು. ಆತ ಧನಿಕ, ಸುಂದರ ಆದರೆ ಜೀವನದಲ್ಲಿ ರಸವನ್ನೇ ಕಳೆದುಕೊಂಡು ತಾನು ‘ಪ್ರ್ಯಾಕ್ಟಿಕಲ್’ ಎಂದು ಕರೆಸಿಕೊಳ್ಳುವ ಮೆಟೀರಿಯಲಿಸ್ಟಿಕ್ ಹುಡುಗ. ಪೂರ್ಣಿಯ ಕನಸಿಗೆ ತದ್ವಿರುದ್ಧ! ತನ್ನ ಜೀವನವನ್ನು ತನಗೆ ಬೇಕಾದಂತೆ ಸುಂದರವಾಗಿ  ರಚಿಸಿಕೊಳ್ಳುವ ಧೈರ್ಯ,  ಸಾಮರ್ಥ್ಯ  ಹೊಂದಿರುವ ಪೂರ್ಣಿಗೆ ಈ ರಿಯಾಲಿಟಿ, ಕಾಂಪ್ರಮೈಸ್ ಶಬ್ದಗಳು ಮೈ ನಡುಗಿಸಿದ್ದವು.

“ನೀನ್ಯಾರನ್ನಾದ್ರೂ ಇಷ್ಟ ಪಟ್ಟಿದ್ಯೇನಮ್ಮಾ”

“ಹಾಗಲ್ಲಪ್ಪಾ…….”

“ಮತ್ತೇನು? ಹಾಗೇನಾದ್ರೂ ಇದ್ರೆ ಹೇಳು, ಇಂಟರ್ಕಾಸ್ಟ್ ಆದ್ರೂ ಪರವಾಗಿಲ್ಲ, ಸಂತೋಷಾನೆ”

“ರೀ, ನೀವ್ಯಾಕೋ ಏನೇನೋ ಹೇಳ್ತಿದೀರಿ. ಅವೆಲ್ಲ ನಮಗಾಗಲ್ಲ ವಿ ಆರ್ ಮಿಡೆಲ್ ಕ್ಲಾಸ್ ಪೀಪಲ್, ಇಂಟರ್ಕಾಸ್ಟ್  ಎಲ್ಲ ತುಂಬಾ  ತೊಂದರೆ ಶುರುವಾಗತ್ತೆ, ಹೇಳೋಷ್ಟು ಸುಲಭ ಅಲ್ಲ”

ಪೂರ್ಣಿಗೂ ಹಾಗೆ ಅನಿಸಿತ್ತು, ತನ್ನ ಅನುಭವಕ್ಕೂ ಅದೀಗಾಗಲೇ ಗೋಚರಿಸಿತ್ತು. ತನ್ನಂತೆಯೇ ಒಬ್ಬ ಭಾವಜೀವಿ, ಸುಗುಣ ಆಕೆಯನ್ನು ಪ್ರೀತಿಸಿದ್ದ. ಆದರೆ ಅವನ ವಾತಾವರಣ, ಕಲ್ಚರ್ ಡಿಫೆರೆನ್ಸ್ ಇದಕ್ಕೆಲ್ಲ ಒಗ್ಗುವುದು ಪೂರ್ಣಿಗೂ ಸುಲಭದ ಮಾತಾಗಿರಲಿಲ್ಲ. ತನ್ನನ್ನು ‘ಸಂಸ್ಕಾರ’ದ ಪ್ರಾಣೇಶಾಚಾರ್ಯರಿಗೆ  ಹೋಲಿಕೆ ಮಾಡಬಹುದೇನೋ ಎಂಬ ಅನುಮಾನ ಅವಳಿಗೇ ಬಂತು. ಒಮ್ಮೆಲೇ ಅವಳಿಗೇ ಎರಡೂ ಬೇಕಾಗಿತ್ತು, ಬೇಡವೂ ಆಗಿತ್ತು.

ತಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ಳುವುದು, ಕನಸು ಸಾರ್ಥಕ್ಯ ಗೊಳಿಸುವುದು, ಕಾಂಪ್ರಮೈಸ್ ಮಾಡಿಕೊಳ್ಳುವುದು, ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವುದು, ಯಾವುದು ಜೀವನ? ಹೀಗೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುತ್ತಾ  ನಿಜವಾದ ಜೀವನವನ್ನು ಅರ್ಥೈಸಿಕೊಳ್ಳುವುದು ಈ ಮೂಲಕ ಸಾಧ್ಯವಾಗುತ್ತಿದೆ ಎಂದು ಪೂರ್ಣಿಗೆ ಅನಿಸತೊಡಗಿತ್ತು.

ಇದೇ ಆಲೋಚನೆಗಳಲ್ಲಿ ಮನಸು ರಾಡಿಯಾಗಿದ್ದಾಗ, ತನಗಿಷ್ಟವಾಗುವ ಸುಶ್ರಾವ್ಯ ಹಾಡಿನ ರಿಂಗ್ ಟೋನ್ ನೊಂದಿಗೆ ಪೂರ್ಣಿಗೆ ಸ್ನೇಹಿತಳ ಫೋನ್ ಬಂತು. ಆಕೆಯದು ಪ್ರೇಮ ವಿವಾಹ, ತನ್ನ ಮತ್ತು ತನ್ನ ಗಂಡನ ನಡುವೆ ಸಾಕಷ್ಟು ವ್ಯತ್ಯಾಸ.

“ಪೂರ್ಣಿ, ನಂಗ್ಯಾಕೋ ತುಂಬಾ ಬೇಸರ. ಅವನು ನಂಗೆ ಟೈಮೆ ಕೊಡ್ತಿಲ್ಲ, ತಾನ್ ಆಯ್ತು, ತನ್ ವರ್ಕ್ ಆಯ್ತು”

“ಹೇಯ್! ಅವನು ದುಡೀತಿರೋದು ನಿನಗೋಸ್ಕರ ತಾನೇ”….ತನ್ನ ಆತಂಕಗಳನ್ನೆಲ್ಲಾ ಮರೆತು, ಎಲ್ಲವೂ ತಿಳಿದಂತೆ  ಹೇಳಿದಳು ಗೆಳತಿಗೆ.

“ಐ ನೋ! ಅವನು ನನ್ನ ತುಂಬಾ ಇಷ್ಟ ಪಡ್ತಾನೆ, ಆದ್ರೂ……”

ಪೂರ್ಣಿಗೆ ಅವಳಿಂದಲೇ ಬಂದ ಈ ಎರಡೂ ಉತ್ತರ ಕೇಳಿ, ಏನು ಹೇಳಬೇಕೋ ತೋಚಲಿಲ್ಲ. ಪ್ರೇಮ ವಿವಾಹ ಹೀಗೆ ಇರಬೇಕೇನೋ ಎಂದು ಮಾತು ಮುಗಿಸಿ ಟಿವಿ ನೋಡ ಹತ್ತಿದಳು. ಅಷ್ಟು ಹೊತ್ತಿಗಾಗಲೇ ಇಂದಿಗೆ ಮಾತು ಸಾಕೆಂದು ಬಗೆದ ಆಕೆಯ ತಂದೆ ತಾಯಿ ತಮ್ಮ ತಮ್ಮ ಕೆಲಸದಲ್ಲಿ ಮುಳುಗಿದ್ದರು.

“ಈಸ್ ಮ್ಯಾರೇಜ್ ಓನ್ಲಿ ಅಬೌಟ್ ಫಿಸಿಕಲ್ ನೀಡ್ಸ್ ಅಂಡ್ ಸೋಶಿಯಲ್ ಸ್ಟೇಟಸ್? ಖಂಡಿತ ಇಲ್ಲ, ಅದಕ್ಕಿಂತ ಮಿಗಿಲಾಗಿ ಮೆಂಟಲ್ ಕಂಪಾಟಿಬಿಲಿಟಿ ಇಂಪಾರ್‍ ಟೆಂಟ್. ಆಗಲೇ ಪ್ರೀತಿ ಹುಟ್ಟುವುದು, ಜೀವನ ಸುಂದರವಾಗುವುದು…” ಟಿವಿ ನೋಡುತ್ತಿದ್ದ ಪೂರ್ಣಿಯ ಮಾನಸಿಕ ತುಮುಲ. ಇಬ್ಬರ ಮನಸುಗಳ ಸಂವೇದನೆಗಳು, ಭಾವನೆಗಳು, ಅಭಿವ್ಯಕ್ತಿಗಳು ಬೆಸುಗೆಯಾಗಿ ಒಂದು ಹೊಸ ಜೀವನ ಸಾಕಾರಗೊಳ್ಳುವುದು, ಇವೆಲ್ಲ ಒಂದು ಜಾತಕದಿಂದ ಅಥವಾ ಒಂದು ಒಳ್ಳೆಯ ಹುದ್ದೆಯಿಂದ ಸಾಧ್ಯವೇ? ಸರಳತೆ, ಪ್ರೀತಿ, ಸ್ನೇಹ ಇದ್ದರೆ ಬಾಳಿಗೆ ಸಾಕಲ್ಲವೇ? ಹೀಗೆಯೇ ಎಂದಿನಂತೆ ಪೂರ್ಣಿ ಅಂತರ್ ಮಗ್ನೆಯಾಗಿದ್ದಾಗ ತನ್ನ ಕನಸನ್ನು ಭಗ್ನಗೊಳಿಸುವಂತೆ ಟೆಲಿಫೋನ್ ರಿಂಗಾಯಿತು, ಕ್ಷಣ ವಿಚಲಿತಗೊಂಡ ಪೂರ್ಣಿ, ಟಿವಿ ನೋಡುತ್ತಿದ್ದರೂ ಕಿವಿ ದೂರವಾಣಿಯತ್ತ ನೆಟ್ಟಳು.

“ಮೂರ್ತಿಗಳೇ, ನಾನು ವಾಮನ ಅಂತ ನಿಮ್ಮ ಮನೇಲಿ ಹುಡುಗಿ ಇದೇ ಅಂತ ಗೊತ್ತಾಯ್ತು. ನಕ್ಷತ್ರ ಏನು?…..” ಪೂರ್ಣಿಯ ಅಪ್ಪನಿಗೆ ಬಂದ ಕರೆ! ಅವಳ ತಂದೆಯೂ ಪೂರ್ಣಿಯಂತೆಯೇ ಆಗಿದ್ದರೂ, ಅವರು ಅಸಹಾಯಕರಾಗಿದ್ದರು. ಅವರು ಪ್ರಯತ್ನಿಸುತ್ತಿದ್ದ ಎಲ್ಲರೂ ಇಂತೆಯೇ ಹೇಳುತ್ತಿದ್ದರು, ಕೇಳುತ್ತಿದ್ದರು. ತಾನು ವರಿಸುವ ಹುಡುಗ ಭಾವನಾತ್ಮಕವಾಗಿ, ತಾತ್ವಿಕವಾಗಿ, ಬೌದ್ಧಿಕವಾಗಿ ಒಂದೇ ರೀತಿಯ ಚಿಂತನೆ ಇದ್ದರೆ ಮತ್ಯಾವ  ಜಾತಕ  ಬಾಧೆಗಳಿಗೂ  ತಯಾರಿದ್ದ ಪೂರ್ಣಿಗೆ ಅಂಥವರ್ಯಾರೂ ಕಂಡಿಲ್ಲ.

ಟಿವಿಯತ್ತ ಸುಮ್ಮನೆ ಮುಖ ಮಾಡಿದ್ದ ಪೂರ್ಣಿಯ ಪಕ್ಕದಲ್ಲಿ ಆಕೆಯ ತಾಯಿ ಬಂದು ಕೂತು ಕೂದಲು ಸವರುತ್ತಾ…  “ನೋಡು ಪೂರ್ಣಿ ಲೈಫ್ ನಲ್ಲಿ ನೀನು ಕಲಿಯೋದು ಇನ್ನೂ ತುಂಬಾ ಇದೆ. ಸುಮ್ಮನೆ ಹುಚ್ಚು ಆದರ್ಶಗಳು, ಕಲ್ಪನೆಗಳಲ್ಲಿ ಬದುಕಲು ಹಂಬಲಿಸಬೇಡ. ರಿಯಾಲಿಟೀಸ್ ಅರ್ಥ ಮಾಡ್ಕೊಬೇಕು, ನಂಗೊತ್ತು ನೀನು ಚೆನ್ನಾಗಿ ಅಡ್ಜಸ್ಟ್ ಕೂಡಾ ಆಗ್ತಿಯಾ, ಯು ಹ್ಯಾವ್ ದಟ್ ಕೆಪಾಸಿಟಿ, ಮೊದಲಿಗೆ ನೀನು ಮನಸ್ಸು ಮಾಡಬೇಕು ಅಷ್ಟೇ!” ಎಂದರು.

ಅಮ್ಮನ ಮಾತು, ಅನುಭವದ್ದಾದ್ದರಿಂದ ಸತ್ಯವಿರಬಹುದೇನೋ ಅನಿಸಿರೂ, ಪೂರ್ಣಿಗೆ ನಿರಾಶೆ. ನಂಬಿಕೆಗಳಿಗೂ, ಸತ್ಯಗಳಿಗೂ ವಾಸ್ತವ್ಯಕ್ಕೂ ಸಂಬಂಧವಿಲ್ಲದೇ ಹೋದಲ್ಲಿ, ಅದನ್ನು ತನಗೆ ಕಲಿಸಿದ್ದು ಏತಕ್ಕಾಗಿ? ತಾನು ವೈಯಕ್ತಿಕ ಸ್ವಾತಂತ್ರ್ಯ, ಸ್ವಂತಿಕೆ ಬೆಳೆಸಿಕೊಬೇಕು ಅಂತ ತನ್ನ ತಂದೆ ಪ್ರಯತ್ನಿಸಿದ್ದು ಇದೆ ‘ರಿಯಾಲಿಟೀಸ್’ ಅನ್ನೋ ಹೆಸರಿನಲ್ಲಿ ಬಂದದ್ದನ್ನು ಅನುಭವಿಸಲಿಕ್ಕೇ? ಜೀವನದ ಮುಖ್ಯವಾದ ತಿರುವಾದ ಈ ಮದುವೆ ಎಂಬ ವಿಷಯದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಲಿಕ್ಕೇ? ತನ್ನ ತನವನ್ನು ಕಳೆದುಕೊಳ್ಳಲಿಕ್ಕೇ? ತನಗೆ ಬೇಕಾದ ಪ್ರೀತಿ ಸಿಗದೇ ಹೋದರೆ? ತನ್ನ ಕನಸ ಜೀವನ ನಶಿಸಿ ಹೋದರೆ? ತಾನು ಬೇರೆಯವರಂತೆ, ತನ್ನದಲ್ಲದ ಜೀವನಕ್ಕೆ ಹೊಂದಿಕೊಳ್ಳ ಬೇಕಾದರೆ? ಇವೆಲ್ಲ ಸಾಧ್ಯವಿಲ್ಲವೆಂದಲ್ಲ ಆದರೆ, ಇದರಿಂದ ಆಗುವ ಪ್ರಯೋಜನವಾದರೂ ಏನು? ಸೋಶಿಯಲ್ ಸೆಕ್ಯೂರಿಟಿ? ಅಮ್ಮನೇ ಸರಿಯೇ? ಅಲ್ಲಿಗೆ ಹೆಣ್ಣಿನ ಸ್ಥಾನ ಏನು? ಇದೇ ವಾಸ್ತವಿಕತೆಯೇ? ತನ್ನಂತೆಯೇ ಎಲ್ಲರಿಗೂ ಹೀಗೆಯೇ ಹುಚ್ಚು ಆಲೋಚನೆಗಳು ಬರುತ್ತವೆಯೇ…? ಹೀಗೆ ಹಲವಾರು ಪ್ರಶ್ನೆಗಳಿಂದ ಮನಸು ರಾಡಿಯಾದ ಪೂರ್ಣಿಗೆ ತಡವಾಗಿ ನಿದ್ದೆ ಹತ್ತಿತ್ತು.

ತನ್ನ ಮುಂಜಾನೆಯ ಕನಸು ಅರ್ಧಕ್ಕೆ ಭಂಗವಾಗಿ ಎಚ್ಚರವಾದಾಗ ಆಕೆಯ ತಾಯಿ ಯಾರೊಟ್ಟಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದರು. “ಓಹೋಹೋ ಸಂತೋಷ ಮಾಧವ. ಅಂತೂ ಜಾತಕ ಕೂಡಿದೆ ಅಂತಾಯ್ತು. ನಮ್ಮ ಮಗಳು ಇನ್ನು ಒಳ್ಳೆ ಮನೆ ಸೇರಿದ ಹಾಗೆ. ನೆಮ್ಮದಿ ನೋಡು. ಪೂರ್ಣೀನ ನಾನೊಪ್ಪಿಸ್ತೀನಿ. ಅಂತಾ ಒಳ್ಳೆ ಹುಡುಗ ಸಿಗೋದು ಅವಳ ಅದೃಷ್ಟ…!”

ತಾನು ರಾತ್ರಿ ಹಿಡಿದಿದ್ದ ಬೇಂದ್ರೆಯವರ ಪುಸ್ತಕ, ಮಡಿಕೆಯಾದ್ದನ್ನು ಕಂಡು ಪೂರ್ಣಿ ಸರಿಪಡಿಸುತ್ತಾ ಪುಟಗಳನ್ನು ನೀವಹತ್ತಿದಳು.


ಕನ್ನಡದ ಬರಹಗಳನ್ನು ಹಂಚಿ ಹರಡಿ

12 thoughts on “ದ್ವಂದ್ವ:ಸಂಯುಕ್ತಾ ಪುಲಿಗಲ್ ಬರೆದ ಸಣ್ಣಕತೆ

 1. nice story akka…poornige kaadida prashegalu maduvege baruva ella henmakkaligoo kadutte…
  ondu hennina olage dhumuki avala manasina atanka dugudu dummanagalannu arithu baredantide…
   
  tumbane Hidisthu…. 

 2. ನಿಜ ಹೇಳ್ಬೇಕು ಅಂದ್ರೆ ಇದು ನನ್ನದೇ ಕತೆಯೇನು ಅನ್ನುವಸ್ಟು ಮಟ್ಟಿಗೆ ಇದೆ.  ಒಂದೆರೆಡು ವ್ಯತ್ಯಾಸ ಅಸ್ಟೆ.  ಅಪ್ಪ ಯಾವುದೇ ಹುಡುಗನ್ನ ನೋಡಿಲ್ಲ..  ನಾನು ನೋಡಲು ತೆಳ್ಳಗೆ ಬೆಳ್ಳಗೆ ಸುಮರಗೆ ಇದೀನಿ.  ನನ್ನ ದೇಹ ಬೇಕೇ ಹೊರತು ನನ್ನ ಭಾವನೆಗೆಳು, ಕಷ್ಟಗಳು, ಸಮಸ್ಯೆಗಳು , ಅವರಿಗೆ ಬೇಡ.  ಅಸಹ್ಯ ಅಗುವಂತ ನಡವಳಿಕೆ.  
  ಮದುವೆನೇ ಬೇಡ ಅಂತ ತೀರ್ಮಾನ ಮಾಡಿ,  ಈಗ ಆರಾಮಾಗಿ ಇದೀನಿ.  ………….
  ಕತೆ ತುಂಬಾ ಚೆನ್ನಾಗಿದೆ.  ತುಂಬಾ ಜನ ಯುವತಿಯರು ಅನುಭವಿಸು ದ್ವಂದ್ವ ನ ಚೆನ್ನಾಗಿ ಅನಾವರಣಗೊಳಿಸಿದ್ದೀರಾ.

 3. ಚೆಂದದ ಕಥೆ.. ಮದುವೆಯ ವಯಸ್ಸಿನ ಮನಸ್ಸಿನ ತುಮುಲಗಳ ಬಗ್ಗೆ ಅಚ್ಚುಕಟ್ಟಾಗಿ ನಿರೂಪಿಸಿದ್ದೀರಿ..

 4. ಕಥೆ ಚೆನ್ನಾಗಿದೆ.
  ಪೂರ್ಣಿಯ ಮಾತು, ಅವರಪ್ಪನ ಮಾತುಗಳು ಆ ಪಾತ್ರದೊಳಗೆ ಹೊಕ್ಕಂತೆ ಚೆನ್ನಾಗಿಯೇ ಮೂಡಿಬಂದಿದೆ. ಆದರೆ ಅವರಮ್ಮನ ಮಾತುಗಳು ಯಾಕೋ ಕಸಿವಿಸಿ ಉಂಟು ಮಾಡಿತು . ಪಕ್ಕಾ ಬ್ರಾಹ್ಮಣ ಕುಟುಂಬ ಅಂದು, ಅವರಮ್ಮನು ಸಂಪ್ರದಾಯಸ್ಥೆ ಎಂದು ಅವರ ಬಾಯಲ್ಲಿ ಇಂಗ್ಲೀಷಿನಲ್ಲಿ ಮಾತನಾಡಿಸಿದ್ದು ಯಾಕೋ ಸರಿ ಕಾಣಲಿಲ್ಲ. ಹಳೆಯ ಕಾಲದ ಹೆಂಗಸರೆಂದರೆ ಇಂಗ್ಲೀಷು ಬರಬಾರದೆಂದಲ್ಲ. ಆದರೆ ಅವರ ಇಂಗ್ಲೀಷಿನ ಶೈಲಿ ಅವರಮ್ಮನ ಶೈಲಿಯಂತೆ ಕಾಣದೇ ಪೂರ್ಣಿಯದೇ ಶೈಲಿಯಂತೆ ಕಂಡಿತು. ನನಗನಿಸಿದ್ದು ಹೇಳಿದ್ದೇನಕ್ಕ. ತಪ್ಪಾದರೆ ಕ್ಷಮಿಸಿ.

   

 5. ಸಂಯುಕ್ತಾ…
  ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಚರಣೆಗಳ ಆಚೆಗೆ ಸಾಗಿ ಸ್ವಂತಿಕೆಯನ್ನು ಬೆಳೆಸಿಕೊಳ್ಳುವ ಪೂರ್ಣಿಯ ಭಾವನಾತ್ಮಕ ತೊಳಲಾಟ ಅತ್ಯಂತ ಮನನೀಯವಾಗಿ ಮೂಡಿ ಬಂದಿದೆ.
  ಅಭಿನಂದನೆಗಳು…

 6. ಚೆನ್ನಾಗಿದೆ..
  ಪೂರ್ಣಿಯ ಪಾತ್ರ ,ತುಮುಲ  ಇಷ್ಟವಾಯ್ತು..

 7. ಸುಂದರವಾದ ಕಥೆ ಸಂಯುಕ್ತಾ , ಜೀವನದಲ್ಲಿ ಬಹುತೇಕ ಎಲ್ಲರಿಗೂ ಕಾಡುವ ಪ್ರಶ್ನೆಗಳ ಜಾಡ ಹಿಡುದು ಕಟ್ಟಿದ ಸುಂದರವಾದ ಕಥೆ. ನಿಜಕ್ಕೂ ಜೀವನದಲ್ಲಿ ನಮ್ಮ ನಂಬಿಕೆಗಳು, ಸತ್ಯ ಹಾಗೂ ವಾಸ್ತವ್ಯಕ್ಕೆ ತುಂಬಾನೆ ವ್ಯತ್ಯಾಸವಿದೆ. ನನಗೆ ತಿಳಿದ ಮಟ್ಟಿಗೆ ಅವೆಲ್ಲವುಗಳೋಡನೆ ಸಮನ್ವಯ ಸಾಧಿಸಿ ಬದುಕುವುದೆ 'ಜೀವನ'ವೆಂದೆನಿಸುತ್ತದೆ.  

 8. ತಾನು ರಾತ್ರಿ ಹಿಡಿದಿದ್ದ ಬೇಂದ್ರೆಯವರ ಪುಸ್ತಕ, ಮಡಿಕೆಯಾದ್ದನ್ನು ಕಂಡು ಪೂರ್ಣಿ ಸರಿಪಡಿಸುತ್ತಾ ಪುಟಗಳನ್ನು ನೀವಹತ್ತಿದಳು………..
   
  ಎಲ್ಲ ದ್ವಂದ್ವವು ಕೊನೆಯಾಯಿತ್ತಲ್ಲ. ಎಲ್ಲರ ಜೀವನದಲ್ಲಿ ಬರುವ ಪ್ರಮುಖ ಘಟ್ಟ. ನಿರ್ದಾರ ತೆಗೆದುಕೊಳ್ಳುವಾಗ ಸ್ವಲ್ಪ ಹಿಂಜರಿತ ಇರುತ್ತೆ ನಂತರ ಸರಿಯಾಗುತ್ತೆ ಅನಿಸುತ್ತೆ

Leave a Reply

Your email address will not be published. Required fields are marked *