ನಮ್ಮ ಭಾರತದ ಸಂಸ್ಕೃತಿಯು ಬಹಳಷ್ಟು ಪುರಾಣ, ಪುಣ್ಯ ಕಥೆಗಳ ನೆಲೆಗಟ್ಟಿನ ಮ್ಯಾಲೆ ನಿಂತದ. ಪ್ರಾಚೀನ ಪೌರಾಣಿಕ ಕಾಲದೊಳಗಿನ ವಿಚಾರಗಳನ್ನ ಸೂಷ್ಮವಾಗಿ ಪರಿಶೀಲಿಸಿದಾಗ ಎಲ್ಲ ಘಟನೆ, ಅವತಾರಗಳ ಹಿಂದೆನು ಒಂದೊಂದು ಉದ್ದೇಶದ ನಿಮಿತ್ತ ಕಾಣಿಸ್ತದ. ಒಂದೊಂದ ಘಟನೆನು ಮುಂದ ದೊಡ್ಡದೊಂದು ಇತಿಹಾಸನ ಸೃಷ್ಠಿ ಮಾಡೇದ. ಒಂದೊಂದು ಮಹಾ ಇತಿಹಾಸದ ಹಿಂದ ಕಥೆ, ಉಪಕಥೆಗಳ ಜೋಡಣೆಯ ಹಂದರನ ಅದ. ಮೂಲಪೂರುಷನ ಅವತಾರದ ಹಿಂದನು ಒಂದೊಂದು ನಿಮಿತ್ತನ ಅದ ಅನ್ನೊದು ಜಗಪ್ರಸಿದ್ಧ.
ಒಂದ ದಿನಾ ಹಿಂಗ ಕೂತಾಗ ಯೋಚನೆ ಬಂತು ಅದೇನಂದ್ರ , ರಾಮಾವತಾರ, ಕೃಷ್ಣಾವತಾರಗಳ ಉದ್ದೇಶಗಳ ಬಗ್ಗೆ ರಾಮಾಯಣ, ಮಹಾಭಾರತ ಗ್ರಂಥಗಳೊಳಗ ಓದಿ ತಿಳ್ಕೊಂಡೇವಿ. ರಾವಣ-ಕುಂಭಕರ್ಣ, ಹಿರಣ್ಯಕಶ್ಯಪ-ಹಿರಣ್ಯಾಕ್ಷ, ಶುಂಭ-ನಿಶುಂಭಾದಿ ಅಸುರರ ಹಿನ್ನೆಲೆ, ಜನ್ಮ ರಹಸ್ಯ, ಉದ್ದೇಶ ಎಲ್ಲವು ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಶಾಪಗ್ರಸ್ತರಾಗಿ ಅಸುರ ಜನ್ಮವೆತ್ತಿದ್ದು ಅನ್ನೊದು ಗೊತ್ತಿರುವ ಸಂಗತಿ. ದೇವ ದೇವಿಯರ ಅವತಾರಗಳ ಉದ್ದೇಶ, ಮಹಿಮೆಗಳನ್ನ ನಾವು ಅನೇಕ ಕಥೆ ಉಪಕಥೆಗಳಿಂದ ತಿಳ್ಕೊಂಡೇವಿ. ಆದ್ರ ದ್ರೌಪದಿಗ್ಯಾಕ ಪತಿಗಳೈವರು? ಮಹಾತಾಯಿ ಕುಂತಿಯಿಂದ ಅಂಥಾ ಮಹತ್ತರ ಮಾತುಗೊಳು ಬರಲಿಕ್ಕೆ ಯಾವದೊಂದು ಭವಿಷ್ಯದ ನಿಮಿತ್ತ ಒಳಗೊಂಡಿತ್ತು. ಈ ಒಂದು ಯೋಚನೆಯಿಂದ, ಕಥಾ, ಪುರಾಣಗಳ ಆಳಕ್ಕ ಹೋಗಿ ಶೋಧಿಸಿದಾಗ ಈ ಒಂದು ಘಟನಾವಳಿಯ ಹಿಂದೆನು ಒಂದು ಕಥೆ ಅದ ಅಂತ ಗೊತ್ತಾತು. ಮಹಾಭಾರತದ ಸೃಷ್ಠಿಯಾಗಲಿಕ್ಕೆ ಇರುವ ಪೂರ್ವ ನಿಮಿತ್ತಗಳೊಳಗ ಇದೂ ಒಂದು ಅಂತ ಗೊತ್ತಾತು.
ಮೂರು ವರ್ಷಕ್ಕೊಮ್ಮೆ ಬರೊ ಈ ಅಧಿಕಮಾಸದ ಮಹತ್ವ ಭಾಳ ಅದ. ದ್ರೌಪದಿಗೆ ಐದು ಮಂದಿ ಪತಿಗಳಿರೊದರ ಹಿಂದೆನು ಈ ಅಧಿಕಮಾಸದ ಮಹಿಮಾನ ಅದ. ಅದೇನಂದ್ರ ಹಿಂದಕ ವೇದ ಪುರಾಣಗಳ ಕಾಲದಾಗ ಒಬ್ಬ ಋಷಿ ಪುತ್ರಿ ಇದ್ಲು. ಎಷ್ಟೊ ವರ್ಷಗಳಾದ್ರು ಆಕಿಗೆ ಕಂಕಣ ಬಲನ ಕೂಡಿಬರಲಿಲ್ಲ. ಹಿಂಗ ಆ ಋಷಿ ಕನ್ಯೆ ಭಾಳ ಚಿಂತಿಯೊಳಗ ಇದ್ದಾಗ ಬ್ರಹ್ಮರ್ಷಿ ನಾರದರು ಬಂದು ಆ ಋಷಿ ಕನ್ಯೆಗೆ ಹೇಳತಾರ, ಹೇ ಕುಮಾರಿ, ನೀನು ಹಿಂದಿನ ಜನ್ಮದೊಳಗ ಪುರುಷೊತ್ತಮ ಮಾಸವಾದ ಅಧಿಕಮಾಸದ ಅವಹೇಳನಾ ಮಾಡಿ ನಿಂದನೆಯನ್ನ ಮಾಡಿರುತ್ತಿ. ಆದ್ದರಿಂದ ನಿನಗ ಈ ಜನ್ಮದೊಳಗ ಕಂಕಣಭಾಗ್ಯದ ಬಲವಿಲ್ಲ, ವೈವಾಹಿಕ ಯೋಗದಿಂದ ವಂಚಿತಳಾಗಿರುತ್ತಿ. ನೀನು ಮಾಂಗಲ್ಯ ಭಾಗ್ಯ ಪಡಿಬೇಕಾದ್ರ ಕೈಲಾಸಪತಿ ಶ್ರೀ ಶಂಕರನ ಕುರಿತು ತಪಸ್ಸು ಮಾಡು ಅಂತ ಹೇಳಿದ್ರಂತ. ನಾರದರು ಹೇಳಿದ ಪ್ರಕಾರ ಆ ಋಷಿ ಕನ್ಯೆ ಯುಗಾಂತ್ಯದ ತನಕಾ ತಪಸ್ಸು ಮಾಡಿದ್ಲಂತ. ಆಕಿಯ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷ ಆಗಿ ನಿನಗ ಯಾವ ವರಾ ಬೇಕು ಕೇಳಿಕೊ ಅಂದಾಗ, ಶಿವನನ್ನ ಪ್ರತ್ಯಕ್ಷ ನೋಡಿದ ಸಂತೋಷದೊಳಗ, ಪತಿಂ ದೇಹಿ, ಪತಿಂ ದೇಹಿ, ಪತಿಂ ದೇಹಿ, ಪತಿಂ ದೇಹಿ, ಪತಿಂ ದೇಹಿ, ಅಂತ ಐದು ಸಲ ಬೇಡ್ಕೊಂಡಳಂತ. ಅದಕ್ಕ ಆ ಕೈಲಾಸಪತಿ ಶಿವಶಂಕರ ಐದು ಸಲ ತಥಾಸ್ತು ಅಂದ್ನಂತ. ಆ ಋಷಿ ಕುಮಾರಿ ಮುಂದ ದ್ವಾಪರಯುಗದಾಗ ದ್ರುಪದರಾಜನ ಮಗಳಾಗಿ ಹುಟ್ಟಿದ ದ್ರೌಪದಿ ಪಂಚ ಪಾಂಡವರನ್ನ ಮದುವಿ ಮಾಡಿಕೊಂಡಳು ಅನ್ನೊ ಉಲ್ಲೇಖ ಅದ.
ಅಧಿಕಮಾಸದಾಗ ನಾವು ಮಾಡಿದ ಎಳ್ಳ ಕಾಳಿನಷ್ಟು ಪುಣ್ಯಾಕ್ಕ, ಅಡಿಕೆಬೆಟ್ಟದಷ್ಟು ಛೊಲೊ ಪ್ರತಿಫಲಾ ಸಿಗ್ತದಂತ. ದೀಪದಾನ ಗೋದಾನದಂತಹ ಪುಣ್ಯ ಕಾರ್ಯಗಳಿಂದ ಜೀವನದಾಗಿನ ಅವಿದ್ಯಾ, ಅಜ್ಞನ, ದಾರಿದ್ರ್ಯ, ಅನ್ನೊ ಕತ್ತಲು ಹೋಗಿ ಜೀವನ ಸುಖಮಯವಾಗ್ತದ. ಈ ಅಧಿಕಮಾಸದ ಅಧಿಪತಿ ಆ ಪುರುಷೊತ್ತಮನಾದ ಶ್ರೀಹರಿ ಜಗತ್ತಿನ ಸಕಲ ಜೀವರಾಶಿಗಳಿಗೆ ಆಯುರಾರೋಗ್ಯ ಭಾಗ್ಯ ಕೊಟ್ಟು, ಎಲ್ಲಾರಿಗೂ ಕಲ್ಯಾಣ ಮಾಡಲಿ.
*****
ಈ ವಿಚಾರ ತಿಳಿದಿರ್ಲಿಲ್ಲ. ತಿಳಿದಕ್ಕ ಧನ್ಯವಾದಗಳು.
ನೀವು ತಿಳಿಸಿದ ಈ ಸಂಗತಿ ನಮಗೆ ನಿಜವಾಗಲೂ ತಿಳಿದಿರ್ಲಿಲ್ಲ ಈ ವಿಚರ್‍ವನ್ನು ನಾವು ಸ್ವಲ್ಪ ಮಂದಿಗೆ ತಿಳಿಸತೀವೆ.ವಂದನೆಗಳು