ರಜಾ ದಿನ ಭಾನುವಾರ ಅಂದ್ರೆ ಎಚ್ಚರಾಗೋದು ಹೊಟ್ಟೆಯಿಂದ್ಲೇ. ಮುಖಕ್ಕೆ ಬಿಸಿಲು ಬಿದ್ರೂ ಎಚ್ಚರಾಗದ ದೇಹವನ್ನ ಹುಟ್ಟೋ ಹೊಟ್ಟೆ ಹಸಿವು ಎಬ್ಬಿಸಿಬಿಡುತ್ತೆ. ಹಂಗೇ ಎದ್ದು ಹೊರಗಿಣುಕಿದ್ರೆ ಎದುರಿನ ತೆಂಗಿನ ಮರದ ಮೇಲಿನ ಕಾಗೆ ಗುಡ್ಮಾರ್ನಿಂಗ್ ಅಂತ ಕೂಗ್ತಾ ಇದ್ದುದು ನಂಗೇನಾ ಅನಿಸುತ್ತೆ. ತಿರುಗೋ ಭೂಮಿಗಿಲ್ಲದ ರಜೆ, ಸುತ್ತೋ ಬಸ್ಸಿಗಿಲ್ಲದ ರಜೆ , ಅಹಮಿಗಿಲ್ಲದ , ಹಸಿವಿಗಿಲ್ಲದ ರಜೆ ನಿಂಗೇಕೋ ಬೆಪ್ಪೇ ? ಜಗವೆಲ್ಲ ಎದ್ದಿರಲು ಮಲಗಿರುವೆ ಸಿದ್ದ ಅಂತ ನಂಗೆ ಬಯ್ಯೋಕೆ ಶುರು ಮಾಡಿತ್ತಾ ಗೊತ್ತಿಲ್ಲ. ಎಲ್ಲಾ ಜಗಳಗಳ ತಾರಕದಲ್ಲಿ ಅರ್ಥವಾಗದ ಕೂಗುಗಳಂತೆ ಕಾಗೆಯ ಕಾಕಧ್ವನಿಯೀಗ ಭಾಸವಾಗುತ್ತಿತ್ತು. ಸ್ವಲ್ಪ ಹೊತ್ತು ಅಲ್ಲೇ ಇದ್ದಿದ್ರೆ ಕಾಗೆಯ ಕೂಗಿಗೂ ಒಂದು ಕತೆಯನ್ನೋ ಕವನವನ್ನು ಕಟ್ಟಿಬಿಡುತ್ತಿದ್ದನೇನೋ ಕವಿರಾಯ. ಆದ್ರೆ ಹಸಿದ ಹೊಟ್ಟೆಮಹಾಶಯ ಅಷ್ಟೊತ್ತು ತಡೆದಾನೇ ? ತಕ್ಷಣವೇ ತಿಂಡಿ ಪ್ಲೇಟು ಹಿಡಿಸಿ ಹೊರನಡೆಸಿದ್ದ.
ಮೂರು ಮಹಡಿ ಇಳಿದು ಪೀಜಿಯೊಡೆಯನ ಬಾಗಿಲಲಿ ನಿಂದು ತಿಂಡಿ ಕೊಡು ದೊರೆಯೇ ಅನ್ನಬೇಕೆನ್ನುವಷ್ಟರಲ್ಲಿ ಅಲ್ಲೊಂದು ದೊಡ್ಡ ಕ್ಯೂ. ಇಂದು ತಯಾರಾಗುತ್ತಿದ್ದ ಮಹಾರಾಜರ ಸ್ವಾಗತಕ್ಕೆ ತಟ್ಟೆಗಳ ಕ್ಯೂ. ಭಾನುವಾರ ಬೆಳಬೆಳಗ್ಗೆ ಪೀಜಿಯಲ್ಯಾವ ಮಹಾರಾಜರಪ್ಪಾ , ಅವರ ನೋಡಲೇನು ಕ್ಯೂ ಅಂದುಕೊಂಡಿರಾ ? ಹೆ.ಹೆ ನಾ ಹೇಳಹೊರಟಿದ್ದು ದೋಸಾಮಹರಾಜ್ ಬಗ್ಗೆ. ಮಸಾಲ್ ದೋಸೆ, ಸಾದಾ ದೋಸೆ, ಸೆಟ್ ದೋಸೆ, ಪ್ಲೇನ್ ದೋಸೆ ಹೀಗೆ ತರಾವರಿ ಹೆಸರುಗಳಿಂದ ಪ್ರಖ್ಯಾತ ದೋಸೆಮಹಾರಾಜರಿಗೆ ನಮ್ಮ ಪೀಜಿಯಲ್ಲೊಂದು ವಿಶೇಷ ಸ್ಥಾನ. ಭಾನುವಾರದಂತಹ ಶುಭದಿನದಂದು ಪಕ್ಕದ ಮೂರು ಪೀಜಿಗಳಲ್ಲೂ ದೋಸೆತವಾಗಳು ಏಕಕಾಲದಲ್ಲಿ ಚುಯ್ಗುಟ್ಟುತ್ತಾ ಮಹಾರಾಜರಿಗೆ ಬಹುಪರಾಕ್ ಹೇಳುತ್ವೆ ಅಂದ್ರೆ ಅದಕ್ಕೆ ಸಿಕ್ಕಿರೋ ಮನ್ನಣೆ ಕಮ್ಮಿಯೇನು ? ಯಾವ ತಿಂಡಿಗೂ ಇಲ್ಲದ ಈ ಪರಿ ಕ್ಯೂ ದೋಸೆ ಮಾಡುತ್ತಾರೆ ಅಂದಾಗ ಯಾಕೆ ಶುರುವಾಗುತ್ತೆ ? ಭಾನುವಾರದ ಯಾವ ತಿಂಡಿಗೂ ಇಲ್ಲದ ಕ್ಯೂ ಈ ದೋಸೆಗೆ ಮಾತ್ರ ಯಾಕೋ ಅಂತ ಪೀಜಿಗೆ ಬಂದ ಹೊಸದರಲ್ಲಿ ನನ್ನ ಡೌಟು. ಭಾನುವಾರ ಪೂರಿಯಿದ್ದಾಗ್ಲೂ, ಬೇರೆ ದಿನ ದೋಸೆಯಿದ್ದಾಗ್ಲೂ ದೋಸೆಗೆ ಕ್ಯೂ ಶುರುವಾಗೋದನ್ನ ಕ್ರಮೇಣ ನೋಡಿ ನೋಡಿ ದೋಸೆಗೂ ಕ್ಯೂಗೂ ಇರೋ ಲಿಂಕು ಅತಿ ಸಹಜವೆನಿಸಿಬಿಡ್ತು. ಒಳ್ಳೆ ಚಟ್ನಿಯಿದ್ದುಬಿಟ್ರೆ ಆಗಷ್ಟೇ ತವಾದಿಂದ ತೆಗೆದ ಬಿಸಿಬಿಸಿ, ಗರಿ ಗರಿ ದೋಸೆ ಸಿಕ್ಕಿದ್ರೆ…ವಾ.. ಅದೇ ಒಂದು ಸ್ವರ್ಗ.
ಇಡ್ಲಿ, ಚಿತ್ರಾನ್ನ, ಉಪ್ಪಿಟ್ಟು, ತಾಳೀಪಟ್ಟು, ಪಡ್ಡು ಹೀಗೆ ಯಾವ ತಿಂಡಿಯೊಂದಿಗೆ ನನ್ನ ದ್ವೇಷವಿಲ್ಲದಿದ್ದರೂ ದೋಸೆ ಅಂದ್ರೆ, ಅದ್ರಲ್ಲಿರೋ ವೈವಿಧ್ಯತೆ ಕಂಡ್ರೆ ಏನೋ ಕುತೂಹಲ ಬಾಲ್ಯದಿಂದ್ಲೂ. ಸಣ್ಣವರಿದ್ದಾಗ ಏನೇ ತಿಂಡಿ ಮಾಡಿದ್ರೂ ಮೊದ್ಲು ತಿಂಡಿ ಕೊಡ್ತಿರಲಿಲ್ಲ. ಸ್ವಲ್ಪ ಗಂಜಿಯುಂಡು ಆಮೇಲೆ ತಿಂಡಿ. ಬೆಳಗ್ಗೆ ಬೇಗ ಮಾಡೋಕೆ ಆಗುತ್ತೆ ಅನ್ನೋದಲ್ದೇ ಮಧ್ಯಾಹ್ನ ಶಾಲೆಗೆ ಕೊಟ್ಟು ಕಳಿಸೋಕೂ ಸುಲಭವಾಗುತ್ತೆ ಅಂತ್ಲೋ ಏನೋ ವಾರದಲ್ಲೆರೆಡು ದಿನವಾದ್ರೂ ದೋಸೆಯಿರುತ್ತಿತ್ತು ಮನೇಲಿ. ಮತ್ತೆ ಈ ದೋಸೆಯಂದ್ರೆ ಅದಕ್ಕೆ ಚಟ್ನಿಯಿರಲೇಬೇಕೆಂಬ ನಿಯಮವೇನಿರಲಿಲ್ಲ ಆಗ. ಮಕ್ಕಳಿಗಾದ್ರೆ ಮೊಸರು, ಬೆಲ್ಲ, ಮನೇಲೇನಾದ್ರೂ ಬಾಳೆಹಣ್ಣಿದ್ರೆ ಅದ್ರ ರಸಾಯನ, ಚಟ್ನಿಪುಡಿ , ಬೆಳಗ್ಗೆಯೇ ಮಾಡಿದ್ರೆ ಆ ಸಾಂಬಾರು .. ಹೀಗೆ ಹಲತರದ ಆಯ್ಕೆಗಳು. ಕೊನೆಗೆ ಏನೂ ಇಲ್ಲದಿದ್ರೆ ಉಪ್ಪಿನಕಾಯಾದ್ರೂ ನಡೆದೀತು. ದೋಸೆಗೇನು ಬೇಜಾರಿಲ್ಲ. ಮಕ್ಕಳದ್ದೂ ಯಾವ ಕಂಪ್ಲೇಂಟಿಲ್ಲ. ಆ ದೋಸೆಯಲ್ಲೂ ಒಂದು ಮೆತ್ತಗಿನದು, ಮತ್ತೊಂದು ರೋಸ್ಟು, ಒಂದು ಗೋಪುರಾಕೃತಿದು, ಮತ್ತೊಂದು ಸುರಳಿ ಸುತ್ತಿದ್ದು .. ಹಿಂಗೆ ತರಾವರಿ ಮಾಡಿ ಮಕ್ಕಳ ಮನತಣಿಸೋ ಅಮ್ಮಂದಿರು. ಒಮ್ಮೆ ಗೋಧಿದೋಸೆ, ಮತ್ತೊಮ್ಮೆ ಈರುಳ್ಳಿ ದೋಸೆ, ಮತ್ತೊಂದು ದಿನ ಕಾಯಿ, ಕ್ಯಾರೇಟು ಎಲ್ಲಾ ಹಾಕಿದ ಹೊಸರುಚಿ ದೋಸೆ ಅಂತೆಲ್ಲಾ ನಮ್ಮನೇಲಿ ದೋಸೆ ಹೆಂಗೆ ಮಾಡಿದ್ವಿ, ಯಾವ ದೋಸೆ ಅಂತ್ಲೇ ಮಾತುಕತೆ ನಡೆಯೋ ದಿನಗಳವು. ರಜೆ ಬಂತಂದ್ರೆ ಮಸಾಲೆದೋಸೆ ಮಸಾಲೆದೋಸೆ ಅಂತ ಅಮ್ಮನ ಬೆನ್ನಹಿಂದೆ ಬಿದ್ದು ಆ ಸುರುಳಿ ದೋಸೆಯ ನಡುವೆ ಮಸಾಲೆ, ಮೇಲೆ ಬಿಸಿಬಿಸಿ ಬೆಣ್ಣೆ, ಪಕ್ಕ ಚಟ್ನಿ ಹಾಕಿಕೊಂಡು ತಿನ್ನೋವರೆಗೂ ಸಮಾಧಾನವಿಲ್ಲ. ನಮ್ಮ ದೋಸೆ ತಿನ್ನೋ ಸೊಬಗನ್ನ ನೋಡಿ ಅಮ್ಮನಿಗೂ ಅವಳ ಬಾಲ್ಯ ಎಷ್ಟೊ ಸಲ ನೆನಪಾಗಿರಬಹುದಾ ಅಂತ ಈಗೀಗ ಅನಿಸುತ್ತೆ. ಮನೆಯ ದೋಸೆಯ ಕತೆ ಒತ್ತಟ್ಟಿಗಿರಲಿ. ಹೊರಗೆ ಹೋದರೂ ಅದೇ ಕತೆ. ಏನು ತಿಂತೀಯೋ ಅಂದ್ರೆ ದೋಸೆ !ಹೊರಹೋದಾಗ ಬೆಳಗ್ಗಿನ ತಿಂಡಿ ಅಂದ್ರೆ ಆ ಸ್ಥಾನವನ್ನ ಇಡ್ಲಿ-ವಡೆಗೆ ಅಂತ ಸಂಧಾನ ಮಾಡಿ ಬಿಟ್ಟುಕೊಟ್ಟಿದ್ರಿಂದ ಬೇರೆ ಹೊತ್ತಿನ ತಿಂಡಿ ಅಂದ್ರೆ ಅದು ದೋಸೆನೇ. ದೋಸೆಯ ಮೇಲೆ ಖಾರದ ಪುಡಿ ಸವರಿ ಹಲತರದ ಚಟ್ನಿ, ಸಾಂಬಾರುಗಳೊಡನೆ ತಂದುಕೊಡುತ್ತಿದ್ದ ಅ ದೃಶ್ಯವೇ ಇನ್ನೂ ಬಾಯಲ್ಲಿ ನೀರೂರಿಸತ್ತೆ. ದಾವಣಗೆರೆ ಅಂದ್ರೆ ಅಲ್ಲಿನ ಬೆಣ್ಣೆ ದೋಸೆ, ಶಿವಮೊಗ್ಗದ ಮೀನಾಕ್ಷಿ ಭವನದ ದೋಸೆ, ಸಿರಸಿ, ಜೋಗದ ನೀರು ದೋಸೆ..ವಾವ್.. ಆಯಾ ಮಣ್ಣಿನ ಗುಣ ಆ ದೋಸೆಯಲ್ಲಿ ಬೆರೆತಿದ್ಯಾ ಅನ್ನೋ ಭಾವ ಅನೇಕ ಸಲ.
ಹುಡುಗರಿಗೆ ಯಾವ ತಿಂಡಿ ಮಾಡೋಕೆ ಬರುತ್ತಪ್ಪ ಅನ್ನೋ ಪ್ರಶ್ನೆಯೇನಾದ್ರೂ ಕೇಳಿದ್ರೆ ಉಪ್ಪಿಟ್ಟು, ಚಿತ್ರಾನ್ನ, ಚಪಾತಿ, ಪಲಾವು.. ಹೀಗೆ ಲಿಸ್ಟು ಮುಂದುವರಿಯಬಹುದಾದ್ರೂ ಆ ಲಿಸ್ಟಲ್ಲಿ ದೋಸೆಯಂತೂ ಇದ್ದೇ ಇರತ್ತೆ. ಕೆಲೋ ಸಲ ನಾನೂ ದೋಸೆ ಮಾಡ್ತೀನಿ ಅಂತ ಅಮ್ಮನಿಗೆ ಸಹಕರಿಸೋಕೆ ಹೋದಾಗೆಲ್ಲಾ ಆ ದೋಸೆ ತನ್ನ ಮಾಮೂಲಿ ಆಕಾರ ಬಿಟ್ಟು ಆಫ್ರಿಕಾ, ಅಂಟಾರ್ಟಿಕಾ, ಆಸ್ಟ್ರೇಲಿಯಾ ಹೀಗೆ ಹಲತರದ ಖಂಡಗಳ ಆಕಾರ ತಾಳಿ ಮನೆಯಲ್ಲಿ ಎಲ್ಲರೆದುರು ನಾನು ನಗೆಪಾಟಲು. ಆಮೇಲೆ, ಹೇ, ಪರವಾಗಿಲ್ಲ. ಹಿಂದಿನ ಸಲದ ಆಕಾರಕ್ಕಿಂತ ಇದು ಪರವಾಗಿಲ್ಲ. ಶುರುನಲ್ಲಿ ಹಿಂಗೇ ಆಗೋದು ಎಲ್ಲರಿಗೂ, ನಿಧಾನ ಸರಿಯಾಗುತ್ತೆ ಅಂತ ಬೆನ್ನುತಟ್ಟುತ್ತಿದ್ರು ಎಲ್ರೂ. ಹಿಟ್ಟು ವಿಪರೀತ ದಪ್ಪವಾಗಿಸಿ, ಹೆಚ್ಚು ನೀರು ಹಾಕಿ ದೋಸೇನೇ ಎತ್ತೋಕೆ ಬರದಂತಾಗಿದ್ದು, ಕಾವಲಿ ಕಾಯೋಕೆ ಮೊದ್ಲೇ ಹಿಟ್ಟು ಹಾಕಿ ಆಮೇಲೆ ವಿಪರೀತ ಕಾದಿದ್ದು , ಬೆಂಕಿ ಜಾಸ್ತಿಯಾಗಿದ್ದು ಗಮನಿಸದೇ ಕೆಂಪು ದೋಸೆ ಕಪ್ಪಾಗಿದ್ದು ಹೀಗೆ ಹತ್ತು ಹಲವು ಪ್ರಸಂಗಗಳಾದ ಮೇಲೇ ರೌಂಡಾದ, ತೋರಿಸೋಕೆ, ತಿನ್ನೋಕೆ ಮುಜುಗರವಾಗದಂತಹ ದೋಸೆ ಮಾಡೋ ವರ ನನಗೆ ಸಿದ್ದಿಸಿದ್ದು ! 🙂 ಆದ್ರೆ ಬಾಲ್ಯದ ಆ ದಿನಗಳು ನನಗೆ ನೆರವಾಗಿದ್ದು ಪದವಿ ಕಾಲದಲ್ಲಿ.
ಪದವಿಯ ಅದೆಷ್ಟೋ ಗಡಿಬಿಡಿಯ ಮುಂಜಾವೆಗಳಲ್ಲಿ ನನ್ನ ಹಸಿವು ತಣಿಸಿದ್ದು ಇದೇ ದೋಸೆ. ಬೆಳಗ್ಗೆ ಏಳೂವರೆಗೆ ಶುರುವಾಗುತ್ತಿದ್ದ ಕಾಲೇಜಿಗೆ ಏಳೂ ಐದಕ್ಕೆ ಮನೆ ಹತ್ರ ಬಸ್ಸು ಬರುತ್ತಿತ್ತು. ಆ ಬಸ್ಸು ಕಾಲೇಜಿಗೆ ಹೋಗೋ ಹೊತ್ತಿಗೇ ಏಳೂ ಇಪ್ಪತ್ತೈದು. ಏಳೂವರೆಯಿಂದ ಕ್ಲಾಸುಗಳು. ಹಂಗಾಗಿ ಬೆಳಗ್ಗೆ ಮನೆಯಲ್ಲಿ ಏನೂ ತಿಂದಿಲ್ಲವೆಂದ್ರೆ ಹತ್ತೂಕಾಲಿನ ಬ್ರೇಕಿನವರೆಗೆ ಕಾಯಬೇಕು ! ಕಾಲೇಜಿಗೆ ಹೋಗಿ ತಿಂಡಿ ತಿಂದು ಕ್ಲಾಸಿಗೆ ಹೋಗಬೇಕೆಂದ್ರೆ ಒಂದೋ ಕ್ಯಾಂಟೀನಲ್ಲಿ ಐದಾರು ನಿಮಿಷದಲ್ಲಿ ಗಬಗಬ ಮುಕ್ಕಿ ಕ್ಲಾಸಿಗೆ ಓಡಬೇಕು. ಇಲ್ಲಾಂದ್ರೆ ಮತ್ತೆ ಲೇಟಾಗಿ ಕ್ಲಾಸಲ್ಲಿ ಉಗಿಸಿಕೊಳ್ಳಬೇಕು. ಈ ಉಸಾಬರಿಗಳಿಗಿಂತ ಮನೆಯ ತಿಂಡಿನೇ ಉತ್ತಮ ಅನಿಸಿಬಿಡುತ್ತಿತ್ತು. ಆದ್ರೆ ರಾತ್ರೆಯೆಲ್ಲಾ ಗೆಳೆಯರೊಂದಿಗೆ ಏನಾರೂ ಹರಟ್ತಾ, ಅದೂ ಇದೂ ಮಾಡ್ತಾ ಲೇಟಾಗಿ ಮಲಗ್ತಿದ್ದ ನಮಗೆ ಬೆಳ ಬೆಳಗ್ಗೆ ಏಳೋದೇ ಕಷ್ಟ. ಎದ್ದು ಪ್ರಾತವಿಧಿಗಳನ್ನ ಮುಗಿಸೋ ಹೊತ್ತಿಗೇ ಆರೂ ಐವತ್ತಾಗಿಬಿಡುತ್ತಿತ್ತು. ಇನ್ನು ಹತ್ತರಿಂದ ಹದಿನೈದು ನಿಮಿಷದಲ್ಲಿ ತಿಂಡಿ ? ಇದ್ದಿದ್ದು ಅಜ್ಜನ ಮನೆಯಲ್ಲಿ. ದಿನಾ ಒಂಭತ್ತು ಒಂಭತ್ತೂವರೆ ಹೊತ್ತಿಗೆ ತಿಂಡಿ ತಿನ್ನುತ್ತಿದ್ದ ಅವರನ್ನ ಬೆಳಬೆಳಗ್ಗೆ ಎದ್ದು ತಿಂಡಿ ಮಾಡಿಕೊಡಿ ಅಂತ ಎಬ್ಬಿಸೋಕೆ ಯಾರಿಗೆ ತಾನೇ ಮನಸ್ಸು ಬರತ್ತೆ ಹೇಳಿ ? ಆದರೂ ನನ್ನ ಮೇಲಿನ ಪ್ರೀತಿಯಿಂದ ಹಿಂದಿನ ದಿನ ರಾತ್ರಿ ಅನ್ನವನ್ನೋ , ಚಪಾತಿಯನ್ನೋ ಹೆಚ್ಚು ಮಾಡಿ ಬೆಳಗ್ಗೆ ತಿನ್ನು ಅಂತ ಕುಕ್ಕರಿನಲ್ಲೋ, ಡಬ್ಬಿಯಲ್ಲೋ ಇಟ್ಟಿರುತ್ತಿದ್ರು. ಆದರೆ ಆ ಬೆಳಗ್ಗಿನ ಚಳಿಗೆ ಪ್ರಿಜ್ಜಿಂದ ಹೊರಗಿಟ್ಟು ಅರ್ಧ ಗಂಟೆಯಾದ್ರೂ ಅನ್ನಕ್ಕೆ ಹಾಕಿಕೊಳ್ಳಬೇಕಾದ ಮಜ್ಜಿಗೆ ಕರಗುತ್ತಿರಲಿಲ್ಲ. ಉಪ್ಪಿನಕಾಯಿಯ ಘನರೂಪ ಮಾಮೂಲಾಗುತ್ತಿರಲಿಲ್ಲ. ಹೇಳೋ ಹಂಗಿಲ್ಲ ಬಿಡೋ ಹಂಗಿಲ್ಲ . ಐಸು ಮಜ್ಜಿಗೆ, ಉಪ್ಪಿನಕಾಯಿ ಬೇಸರವಾದಾಗ ಇವತ್ತು ಏನೂ ಇಡಬೇಡಿ, ನಾನೇ ದೋಸೆ ಮಾಡಿಕೊಳ್ತೀನಿ ಅಂದುಬಿಡುತ್ತಿದ್ದೆ. ಏನೂ ತಿಂದಿಲ್ಲ ಅಂದ್ರೆ ಅವರೇ ಬೆಳಗ್ಗೆ ಎದ್ದು ಏನಾರೂ ಮಾಡಿಕೊಡೋ ಸಾಹಸ ಮಾಡಿಯಾರೆಂಬ ಭಯಕ್ಕೆ, ನನ್ನ ಮೇಲಿಟ್ಟ ಅವರ ಪ್ರೀತಿಗೆ, ಗೌರವಕ್ಕೆ ನಾನೇ ದೋಸೆ ಮಾಡಿಕೊಳ್ತೇನೆಂಬ ನನ್ನ ಕಾರಣ. ಆದ್ರೆ ಮಜಾ ಇರ್ತಿದ್ದಿದು ಅಲ್ಲೇ. ದೋಸೆ ಕಾವಲಿ ಇಟ್ಟು ಅದು ಬಿಸಿಯಾಗೋಕೇ ಐದು ನಿಮಿಷ ಬೇಕು. ಪ್ರತೀ ದೋಸೆ ಮಾಡೋಕೆ ಮೂರು ನಿಮಿಷ ಅಂತಾದ್ರೂ ಅದ್ನ ತಿನ್ನೋಕೆ ? ದೋಸೆ ಕಾವ್ಲಿ ಇಟ್ಟು ಎಲ್ಲೋ ಹೋಗೋ ಹಾಗಿಲ್ಲ. ಕಾವ್ಲಿ ಬಿಸಿಯಾಗೋ ಐದು ನಿಮಿಷದಲ್ಲಿ ಇನ್ಯಾವ್ದಾದ್ರೂ ಚುರುಕಿನ ಕಾರ್ಯ ಮುಗಿಸಿ ನಂತರದ ಮಾಡೊ, ತಿನ್ನೋ ಕಾರ್ಯ ಶುರುವಾಗುತ್ತಿದ್ದು. ಪುಣ್ಯಾತ್ಮ ದೇವ್ರು ಎರಡು ಕೈ ಕೊಟ್ಟಿದ್ದು ನಮ್ಮಂತ ಸಮಯವಿಲ್ಲದೋರ(?) ನೆರವಿಗೇನಾ ಅನಿಸಿ ಅವನಿಗೊಂದು ಧನ್ಯವಾದ ಹೇಳುತ್ತಾ ದೋಸೆ ಎರೆಯಲು ಶುರು ಮಾಡುತ್ತಿದ್ದೆ. ಎಡಗೈ ದೋಸೆ ಎರೆಯೋಕಾದ್ರೆ ನೆಲದ ಮೇಲಿಟ್ಟ ತಟ್ಟೆಯಿಂದ ಮುಂಚೆ ಎರೆದ ದೋಸೆ ತಿನ್ನೋಕೆ ಬಲಗೈ ನೆರವಾಗ್ತಿತ್ತು ! ಎಂಜಲು ಕೈನ ಅಡುಗೆ/ದೋಸೆ ಮಾಡಲು ಬಳಸಬಾರದೆಂಬ ನಿಯಮವಿದ್ದರೂ ಒಂದು ಕೈಯಿಂದ ದೋಸೆ ಮಾಡ್ತಾ , ಮತ್ತೊಂದು ಕೈಯಿಂದ ತಿನ್ನಬಾರದೆಂಬ ನಿಯಮವೇನಿಲ್ಲವಲ್ಲ !! ಅಂತೂ ಹದಿನೈದು ನಿಮಿಷಕ್ಕೆ ನಮ್ಮೀ ದೋಸೆ ಪುರಾಣ ಮುಗಿದು ತಟ್ಟೆ ತೊಳೆದು ಕಾಲೇಜು ಬಸ್ಸಿಗೆ ಓಡೋ ಸಮಯವಾಗಿರ್ತಿತ್ತು. ತೀರಾ ಲೇಟಾದ ದಿನ ಕೊನೆಯ ದೋಸೆಯನ್ನ ಪೂರಾ ತಿನ್ನೋಕೆ ಸಮಯವೂ ಇಲ್ಲದೆ ಅದನ್ನ ಹಂಗೇ ಬಾಯಿಗೆ ತುರುಕಿ ಜಗಿಜಗಿಯುತ್ತಾ ಸ್ಟಾಪಿಗೆ ಓಡಿ ಬಸ್ಸು ಬರೋ ಹೊತ್ತಿಗೆ ಆ ದೋಸೆ ಹೊಟ್ಟೆ ಸೇರಿದ್ದೂ ಇದೆ. !
ಅಂದು ದೋಸೆಯ ಬದ್ಲು ನಾನು ಉಪ್ಪಿಟ್ಟೋ, ಚಿತ್ರಾನ್ನವನ್ನೋ , ಇಡ್ಲಿಯನ್ನೋ ಮಾಡೋಕೆ ಹೊರಟಿದ್ರೆ ಗ್ಯಾರಂಟಿ ಹದಿನೈದು ನಿಮಿಷಗಳಲ್ಲಿ ಆಗುತ್ತಿರಲಿಲ್ಲ. ಈಗಿನ ನ್ಯೂಡಲ್ಸು, ಮ್ಯಾಗಿಗಳ ಭರಾಟೆ ಆಗ ಅಷ್ಟಿರಲಿಲ್ಲ. ಒಂದೊಮ್ಮೆ ಇದ್ದಿದ್ರೂ ಈ ಮ್ಯಾಗಿ, ನ್ಯೂಡಲ್ಸುಗಳ ಮಸಾಲೆಯನ್ನ ಬೆಳಬೆಳಗ್ಗೆ ಎಷ್ಟು ದಿನವಂತ ತಿನ್ನೋದು ? ಬ್ರೆಡ್ಡು ಜ್ಯಾಮಾಗಿದ್ರೆ ಇನ್ನೂ ಬೇಗ ಆಗುತ್ತಿತ್ತಲ್ಲ ಅನ್ನೋ ಐಡಿಯಾ ಕೊಡೋರಿಗೊಂದು ದೊಡ್ಡ ನಮಸ್ಕಾರ. ಈಗ ಪಿಜ್ಜಾ, ಬರ್ಗರು, ಪಾಸ್ತಾ, ಮತ್ತೊಂದು ಮೊದಲೊಂದು ಅಂತ ಕಾಲಿಟ್ಟು ನಮ್ಮ ದೇಶೀ ಆಹಾರಗಳ ಮೇಲೆ ದಾಳಿಯಿಟ್ತಿದ್ರೂ ? ನಮ್ಮ ಯುವಜನರ ಆರೋಗ್ಯ, ಜೇಬು ಎಲ್ಲಾ ಹಾಳುಮಾಡ್ತಿದ್ರೂ ನಂಗ್ಯಾಕೋ ಅವುಗಳಿಗಿಂತ ನಮ್ಮ ಮಣ್ಣಿನ ಗುಣ ನೆನಪಿಸೋ ದೋಸೆಯಂತವುಗಳು ಕಾಡುತ್ವೆ. ಕೆ.ಎಫ್.ಸಿ, ಮೆಕ್ ಡಿ, ಆರ್ ಎಂಡ್ ಬಿ, ಪಿಜ್ಜಾ ಹಟ್ಟು ಮತ್ತೆಂತದೋ ತಟ್ಟುಗಳು ಬಂದಿದ್ರೂ ಅವುಗಳಿಂದ ಆಸೆ ತೀರಿಲ್ಲ. ಹೊಟ್ಟೆ ತುಂಬಿಲ್ಲ. ಮೈಸೂರ್ ದೋಸೆ, ಪನೀರ್ ದೋಸೆ, ತಿರಂಗಾ ದೋಸೆ ಹೀಗೆ ಏನಿಲ್ಲವೆಂದ್ರೂ ಇಪ್ಪತೈದು ಹೆಸರ ದೋಸೆಗಳ ಬೋರ್ಡು ಹಾಕಿರೋ ನಮ್ಮ ಆಫೀಸಿನ ಹಿಂದಿನ ದೋಸೆಗಾಡಿಯವನ , ಮಾರತ್ತಳ್ಳಿ ಇನ್ನೋವೇಟಿವಿನ ಮುಂದಿನ ದೋಸೆಗಾಡಿಯವನ ದೋಸೆ ರುಚಿಯ ಮುಂದೆ ಇವರನ್ನೆಲ್ಲಾ ನಿವಾಳಿಸಿ ಎಸೆಯಬೇಕು ಅನಿಸತ್ತೆ. ಇನ್ನು ಸರವಣನ್ ದೋಸೆ, ವಿದ್ಯಾರ್ಥಿಭವನದ ದೋಸೆ, ಎಂಟಿ ಆರ್ ದೋಸೆಗಳಂತ ರುಚಿಗೆ ಇವರನ್ನ ಹೋಲಿಸುವಂತೇ ಇಲ್ಲ ಬಿಡಿ ಅಂತ ತಿಂದೋರ ಅನುಭವ ! ನಾನಿನ್ನೂ ತಿಂದಿಲ್ಲ. ಆ ಶುಭಗಳಿಗೆ ಎಂದು ಬರುತ್ತೋ ಎನ್ನೋ ಕಾತರದಲ್ಲಿ..ಸದ್ಯಕ್ಕೆ ನಮ್ಮ ಪೀಜಿಯ ದೋಸೆ ಕ್ಯೂನಲ್ಲಿ ಕೊನೆಗೂ ನನ್ನ ತಟ್ಟೆಗೆ ದೋಸೆ ಗಿಟ್ಟಿದೆ. ಬಿಸಿಬಿಸಿ ದೋಸೆಯ ಮುಂದೆ ಇನ್ನೇನು ಪುರಾಣ.. ತಿಂದು ಬರುವೆ.ಆಮೇಲಿಂದಾಮೇಲೆ 🙂
*****
ನನ್ನ ಹೆಂಡತಿ ಸಕ್ಕರೆ ದೋಸೆ
(ಕಾವಲಿಗೆ ಹಿಟ್ಟು ಹಾಕಿದ ಮೇಲೆ
ಸಕ್ಕರೆ ಉದುರಿಸೋದು) ಮಾಡಿ
ಪಕ್ಕದ ಮನೆಯ ಮಲೆಯಾಳಿ ಪಾಪುಗೆ
ಕೊಟ್ಟು ತಿನ್ನಲು ಹೇಳಿದಳು. ದೋಸೆ
ಖಾಲಿ ಆಯಿತು. ಇನ್ನೊಂದು ಬೇಕಾ
ಕೇಳಿದ್ದಕ್ಕೆ ನಿಮ್ಮಿಷ್ಟ ಎಂದ್ದಿದ್ದ ಆ
ಸಂಕೋಚದ ಹುಡುಗ. ನಿಮ್ಮ
ದೋಸೆ ಪುರಾಣ ಓದ್ತಾ ಇದು
ನೆನಪಾಯಿತು. ಚೆನ್ನಾಗಿದೆ ಪ್ರಶಸ್ತಿ.
Oha..nice. Thanks Akhilesh bhai 🙂