ಏಳು ಹಳ್ಳಿಗಳಿಂದ ಆವೃತ್ತಗೊಂಡು ಏಳು ಸುತ್ತಿನ ಕೋಟೆಯಂತಿರುವ ಊರು ಯಾದವಾರ! ನಾನು ಅಲ್ಲಿನ ಪಶು ಆಸ್ಪತ್ರೆಗೆ ಪಶು ಪರೀಕ್ಷಕನಾಗಿ ಹಾಜರಾದ ಹೊಸದರಲ್ಲಿ ಒಬ್ಬಳು ಅಂದರೆ ವಯಸ್ಸು ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರ ನಡುವೆ ಇರಬಹುದು. ಕಣ್ಣು ಕೊರೈಸುವಂತಿರಬೇಕಾದ ಈ ಹರೆಯದಲ್ಲಿ ಅದ್ಯಾವುದೋ ಬಿರುಗಾಳಿಗೆ ಸಿಕ್ಕು ತತ್ತರಿಸಿದಂತಿದ್ದಳು. ಆಳಕ್ಕಿಳಿದ ನಿಸ್ತೇಜ ಕಣ್ಣುಗಳೇ
ಜೀವನದಲ್ಲಿ ಅವಳು ಸಾಕಷ್ಟು ನೊಂದಿರುವ ಬಗ್ಗೆ ಸಂಕೇತ ನೀಡುತ್ತಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸೃಷ್ಟಿಯ ಯಾವುದೋ ವಿಕೋಪಕ್ಕೆ ಸಿಲುಕಿ ಭಗ್ನಾವಶೇಷವಾಗಿ ಇತಿಹಾಸ ಸೇರಿದಂತಿದ್ದಳು. ನಮಸ್ಕರಿಸುತ್ತ ಒಳಬಂದ ಅವಳನ್ನು ಕುಳಿತುಕೊಳ್ಳಲು ಹೇಳುತ್ತ “ಏನಾಗಬೇಕಿತ್ತು” ಎಂದು ಪ್ರಶ್ನಿಸಿದಕ್ಕೆ-
“ನಮ್ಮ ಗೌರಿನ ಪರೀಕ್ಷೆಗೆ ತಂದಿದ್ದೆ” ಎಂದಳು.
“ಗೌರೀ…!” ಎಂದು ನಾನು ಆಶ್ಚರ್ಯ ವ್ಯಕ್ತ ಪಡಿಸಿದಕ್ಕೆ-
“ನಮ್ಮ ಆಕಳು ಪ್ರೀತಿಯಿಂದ ನಾವು ಹಾಗೇ ಕರೆಯುವುದು”
ಎನ್ನುತ್ತ ಬಾಡಿದ ತುಟಿಗಳ ಮೇಲೆ ನಗುವರಳಿಸುವ ವ್ಯರ್ಥ ಪ್ರಯತ್ನ ಮಾಡಿದ್ದಳು.
“ಅದಿರಲಿ, ನಿಮ್ಮ ಹೆಸರೇನು” ಎಂದು ಕೇಳಿದ್ದಕ್ಕೆ-
“ಗಂಗಾ” ಎಂದಾಗ –
“ಗಂಗೆ-ಗೌರಿ” ಎಂದು ಮನಸ್ಸಿನಲ್ಲಿ ಅಂದು ಕೊಂಡು ಮಂದಹಾಸ ಚೆಲ್ಲಿದೆ.
ಕೇಸ ರಜಿಸ್ಟರನಲ್ಲಿ ಅವಳ ಹೆಸರು, ಊರು, ದಾಖಲಿಸಿಕೊಂಡು ಗೌರಿ ನಿಂತಿದ್ದ ಟ್ರೇವ್ಹಿಸನತ್ತ ನಡೆದೆ. ಗೌರಿ! ಗಂಗೆಗೆ ತಕ್ಕ ಗೌರಿ, ಗಂಗೆಯ ಹಾಗೆಯೇ ಗೌರಿಯು ಸಣ್ಣಗಾಗಿದ್ದಳು. ಇಂದೋ ನಾಳೆಯೋ
ಇಹಲೋಕ ತ್ಯಜಿಸಬಹುದೆನ್ನುವಂತಿದ್ದ ಗೌರಿ, ದೇಹದಲ್ಲಿ ಮಾಂಸ ರಕ್ತವಿಲ್ಲದೇ ಬರೀ ಅಸ್ತಿಪಂಜರವಾಗಿ ಗೋಚರಿಸುತ್ತಿದ್ದಳು. ಗೌರಿಯನ್ನು ಸಂಪೂರ್ಣವಾಗಿ ಪರೀಕ್ಷಿಸಿದನಂತರ ಗಂಗೆ ಕುಳಿತಲ್ಲಿಗೆ ಬಂದು
ಹುಸಿಕೋಪ ತೋರಿಸುತ್ತ –
“ಏನಮ್ಮ ಆ ಆಕಳಿಗೂ ನಿನ್ನ ಹಾಗೆ ಮಾಡಿಬಿಟ್ಟೆಯಲ್ಲ, ನೀನಂತೂ ಹೊಟ್ಟಿಗೆ ತಿಂದಂತಿಲ್ಲ. ಅದಕ್ಕಾದರೂ ತಿನಿಸಬಾರದೇ? ಕೈಲಾಗದಿದ್ದರೆ ಯಾಕೆ ಸಾಕಬೇಕು.?” ಇತ್ಯಾದಿ ರೇಗಿದೆ.
ನಮ್ಮ ಆತ್ಮೀಯ ಕೋಪಕ್ಕೆ ಅವಳ ಕಣ್ಣೀರು ಕಟ್ಟೆಯೊಡಿಯಿತು. ಬಹುಶಃ ಮರಭೂಮಿಯಲ್ಲಿ ಕಾರಂಜಿ ಚಿಮ್ಮಿದ ಹಾಗೆ! ಇದರಿಂದ ನನ್ನ ಮನಸ್ಸಿಗೆ ಬೇಸರವೆನಿಸಿದರೂ ಅವಳ ಹೃದಯದಲ್ಲಿ ಹೆಪ್ಪುಗಟ್ಟಿದ
ಅದ್ಯಾವುದೋ ನೋವು ಕರಗಿ ಹರಿದು ಹೋಗಬಹುದು ಅನಿಸಿತು. ಒಳಗೊಳಗೆ ಇಷ್ಟೊಂದು ಕೊರಗುತ್ತಿರುವ ಈ ಹೆಣ್ಣಿನ ಎದೆಯಾಳ ನೋವಾದರೂ ಏನು? ಅರಿಯುವ ತವಕ ಬಲವಾಯಿತು. ಅವಳು
ಬಿಕ್ಕಳಿಸುತ್ತಲೇ ಇದ್ದಳು. ಅವಳ ನೋವು, ಸಂಕಟ, ತಳಮಳ, ನನ್ನಿಂದ ನೋಡಲು ಸಾಧ್ಯವಿರಲಿಲ್ಲ. ಅವಳು ತನ್ನ ಗತ ಜೀವನದ ಬಗ್ಗೆ ಹೇಳಿಕೊಂಡರೆ ಅವಳೆದೆಯಲ್ಲಿ ಕುದಿಯುತ್ತಿರುವ ಜ್ವಾಲಾಮುಖಿಯಾದರೂ ಹೊರ ಪ್ರವಹಿಸದಂತಾಗಿ ಅವಳ ಮನಸ್ಸು ಸ್ವಲ್ಪ ಹಗುರಾಗಿ ಅವಳಿಗೆ ಸಮಾಧಾನ ದೊರೆಯಬಹುದೆಂದು. ಭಾವಿಸಿ.
“ಗಂಗಾ ಯಾಕೆ ಅಳು ? ನೀನೇನೋ ಬಚ್ಚಿಡಲು ಪ್ರಯತ್ನಿಸುತ್ತಿರುವೆ. ದಯವಿಟ್ಟು ಹೇಳು, ಏನೂ ಮುಚ್ಚಿಡಬೇಡ. ನನ್ನನ್ನು ನಿನ್ನ ಸ್ವಂತ ಅಣ್ಣನೆಂದು ತಿಳಿದು ಎಲ್ಲ ಹೇಳಿಬೀಡು ತಂಗಿಗೆ
ಸುಡುತ್ತಿರುವ ಚಿಂತೆ ಅರಿಯುವ ಹಕ್ಕು ಈ ಅಣ್ಣನಿಗಿಲ್ಲವೇ”
ಉದ್ದೇಶಪೂರ್ವಕವಾಗಿಯೇ ಸಂಬಂಧ ಸಂಕೋಲೆ ತೊಡಸಿದೆ. ಪ್ರೀತಿಯ ಈ ಸಂಕೋಲೆ, ಅವಳು ಮುರಿಯುವಂತಿರಲಿಲ್ಲ. ಕೆಲವೇ ನಿಮಿಷಗಳ ಮೌನದ ನಂತರದ ಅವಳು ಹೇಳಲಾರಂಭಿಸಿದಳು.
…ಗಂಗಾ ದೇವಪ್ಪನ ಒಬ್ಬಳೇ ಮಗಳು. ತನ್ನ ಹದಿಹರೆಯದ ದಿನಗಳಲ್ಲಿ ಹಳ್ಳಿಯ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹುಡುಗಿ. ತನ್ನ ತಂದೆತಾಯಿಯ ಪ್ರೀತಿ ವಾತ್ಸಲ್ಯದ ಆರೈಕೆಯಲ್ಲಿ ಬೆಳೆದಿದ್ದಳು. ಯಾವುದೋ ಕೆಲಸದ ನಿಮಿತ್ತ್ಯ ಹಳ್ಳಿಗೆ ಬಂದಿದ್ದ ಪಕ್ಕದ ಊರಿನ ರಾಯನಗೌಡನ ಕಣ್ಣಿಗೆ ಈ ಚಂದುಳ್ಳಿ ಚೆಲುವಿ ಬಿದ್ದಳು. ಗಂಗಾಳ ಸುಂದರ ರೂಪ ಯೌವನಕ್ಕೆ ಸೋತ ರಾಯನಗೌಡ ದೇವಪ್ಪನ ಮನೆಗೆ
ಮದುವೆ ಪ್ರಸ್ತಾಪ ಕಳಿಸಿಯೇ ಬಿಟ್ಟ. ವಯಸ್ಸಿನಲ್ಲಿ ರಾಯನಗೌಡ ಗಂಗಾಳಗಿಂತ ತುಸು ದೊಡ್ಡವನೆನಿಸಿದರೂ ಅನುಕೂಲಸ್ಥ, ಮರ್ಯಾದಸ್ಥ, ದೊಡ್ಡ ಮನೆತನ ಎನ್ನುವ ದೃಷ್ಟಿಯಿಂದ ದೇವಪ್ಪ, ಹಿಂದೆ ಮುಂದೆ
ನೋಡದೆ ಮಗಳನ್ನು ರಾಯನಗೌಡನಿಗೆ ಕೊಡಲು ಸಮ್ಮತಿಸಿದ್ದ. ಗಂಗಾ ಮದುವಣಗಿತ್ತಿಯಾಗಿ ಹಸಿಮಣೆ ಏರಿದಳು. ಆಗಲೇ ಚಿಗುರೊಡೆಯುತ್ತಿದ್ದ ಹದಿಹರಿಯದ ಹಸಿಹಸಿ ಆಸೆಗಳು, ಕನಸುಗಳು ಹೊತ್ತು ರಾಯನಗೌಡನ ಅರಮನೆಯಂತಹ ಮನೆಗೆ ಕಾಲಿರಿಸಿದ್ದಳು. ಇವಳ ಜೊತೆಯಾಗಿಯೇ ಗೌರಿಯೂ ರಾಯನಗೌಡನ ಮನೆ ಪ್ರವೇಶ ಮಾಡಿದ್ದಳು.
ಮದುವೆಯಾದ ಹೆಣ್ಣಿನ ಜೊತೆ ಎಮ್ಮೆಯೋ, ಆಕಳೋ ಬಳುವಳಿಯಾಗಿ ನೀಡುವುದು ಹಳೆ ಸಂಪ್ರದಾಯವಾಗಿದ್ದರಿಂದ ತನ್ನ ಮನೆಯಲ್ಲಿ ಹುಟ್ಟಿಬೆಳೆದ ಗೌರಿಯನ್ನು ಗಂಗೆಯ ಜೊತೆಯಾಗಿ ಕಳುಹಿಸಿಕೊಟ್ಟಿದ್ದರು. ಗಂಗೆ – ಗೌರಿ ಇಬ್ಬರೂ ಒಡಹುಟ್ಟಿದ ಸಹೋದರಿಯರಂತೆ, ಒಟ್ಟೊಟ್ಟಿಗೆ ಬೆಳೆದು ದೊಡ್ಡವರಾದರು, ಗಂಗಾ ಗೌರಿಯನ್ನು ತುಂಬಾ ಹಚ್ಚಿಕೊಂಡಿದ್ದಳು. ಅವಳಿಂದ ಅಗಲುವುದು ಕಷ್ಟವಾಗಿ, ಅವಳನ್ನು ಎದೆಗವಚಿಕೊಂಡು ತಳಮಳಿಸುವ ಮಗಳ ವೇದನೆಯನ್ನು ನೋಡಲಾಗದೇ ದೇವಪ್ಪ ಗೌರಿಗೂ ಗಂಗೆಯೊಂದಿಗೆ ರಾಯನಗೌಡರ ಮನೆಗೆ ಕಳುಹಿಸುವ ಏರ್ಪಾಡ ಮಾಡಿದ್ದ. ಆಗ ಗಂಗಾ ತುಂಬ
ಸಂಭ್ರಮಿಸಿದ್ದಳು. ಗೌರಿ ತನ್ನ ಜೊತೆ ಬರುವಳೆಂದಾಗ ಯಾವ ಅಂಜಿಕೆ ಅಳುಕಿಲ್ಲದೇ ಗಂಡನ ಮನೆಗೆ ನಡೆದಳು. ಭವ್ಯ ಸ್ವಾಗತವೇನೋ ದೊರೆಯಿತು. ಆದರೆ ಅದೇ ಹರ್ಷದ ವಾತಾವರಣ ಬಹಳ ದಿನ ಉಳಿಯಲಿಲ್ಲ. ರಾಯನಗೌಡ ಅದೇಕೋ ತನ್ನ ಬಗ್ಗೆ ನಿರುತ್ಸಾಹ ತೋರುತ್ತಿದ್ದದು ಗಂಗೆಯ ಅರಿವಿಗೆ ಬರುವದಕ್ಕೆ ಬಹಳ ಸಮಯ ಹತ್ತಲಿಲ್ಲ. ಪ್ರೀತಿಪ್ರೇಮದ ಮಧುರ ಭಾವನೆಗಳಿಂದ ಓತ ಪ್ರೋತವಾಗಿದ್ದ
ಗಂಗಾಳ ಹೃದಯ ವೀಣೆ ಮೀಟುವ ಮೃದುತ್ವ ರಾಯನಗೌಡನಿಗಿರಲಿಲ್ಲ.
ಮದುವೆಯಾಗಿ ಒಂದು ವರ್ಷ ಸಂದಿದರೂ ತನ್ನ ಧರ್ಮ ಪತ್ನಿಯ ಆಸೆ ಆಕಾಂಕ್ಷೆಗಳೇನು? ಎಂಬ ಅರಿಯುವ ಮಾತಿರಲಿ, ಎಷ್ಟೋ ಸಲ ಜಡ್ಡು ಬಂದು ಮಲಗಿದರೂ ಕೂಡ ಹೇಗಿದ್ದಿ ಎಂದು ಕೂಡ
ವಿಚಾರಿಸುವ ಗೋಜಿಗೆ ಹೋಗಿರಲಿಲ್ಲ. ತನ್ನದೇ ದರ್ಪದಲ್ಲಿರುತ್ತಿದ್ದ ರಾಯನಗೌಡ ತನ್ನ ಜೀವನ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಬೆರೆಯಲಾರದಷ್ಟು ಅಹಂಕಾರಿಯಾಗಿದ್ದ. ಗಂಗೆಯಂತೆಯೇ ಗೌರಿಯೂ ತನ್ನ ನೋವು ಮೂಕಾಗಿಯೇ ನುಂಗಿಕೊಳ್ಳುತ್ತಿದ್ದಳು. ಗೌರಿಯಂತೂ ಮೊದಲೇ ಗರ್ಭ ಧರಿಸಿರಲಿಲ್ಲ. ಈಗ ಗಂಗೆಯ ಸರದಿ. ಬರಬರುತ್ತ ಇಬ್ಬರೂ ಬರಡು ಬಂಜೆಯನ್ನುವ ಕಡುಮಾತುಗಳಿಗೆ ಬಲಿಯಾಗಹತ್ತಿದರು. ರಾಯನಗೌಡನ ತಾಯಿ ಮಾತು ಮಾತಿಗೂ ಗೌರಿಯ ಮೇಲೆ ಹಾಯಿಸಿ ಬರಡ ಬಸವಿ ಬಂಜೆ ಎಂದು ಗಂಗೆಯನ್ನು ನಿಂದಿಸುತ್ತಿದ್ದಳು. ದಿನಗಳು ಕಳೆದಂತೆ ಗಂಗೆಗೆ ಕಣ್ಣೀರೆ
ಕೂಳಾಯಿತು. ರಾಯನಗೌಡನಂತೂ ಗಂಗೆಯನ್ನು ಕಂಡರೆ ಕರಿನಾಗರದಂತೆ ಭುಸುಗುಡುತ್ತಿದ್ದ. ಕುಡಿದ ಬಂದು ಆಗಾಗ ಸಿಕ್ಕಾಪಟ್ಟೆ ಥಳಿಸಿಯೂ ಬಿಡುತ್ತಿದ್ದ.
“ಬಿಟ್ಟಿಗೆ ನೀನೊಬ್ಬಳು ಇದ್ದೀಯಾ ಅಂದರೆ ಹಾಗೇ ಅದೊಂದು…” ಎಂದು ಈ ಮೂಕ ಪ್ರಾಣಿಯನ್ನು ಹೀಯಾಳಿಸಿ ಮಾತನಾಡುತ್ತಿದ್ದ. ಅವನು ಅಷ್ಟು ಅನ್ನುವುದೇ ತಡ “ಕಟುಕರಿಗಾದರೂ ಮಾರಿ ಬಾರೋ… ಒಂದು ಕೂಸಿಲ್ಲ ಕುನ್ನಿಲ್ಲ, ಒಂದು ತೊಟ್ಟು ಹಾಲಿಲ್ಲ, ಹೈನಿಲ್ಲ…ಬಿಟ್ಟಿ ಅನ್ನಾ ತಿನ್ಕೋತ ಬಿದ್ದಾವ ಇಲ್ಲಿ..” ಎಂದು ಬಾಯಿಗೆ ಬಂದದ್ದೆಲ್ಲ ಹಲುಬಲು ಪ್ರಾರಂಭಿಸುತ್ತಿದ್ದಳು ರಾಯನಗೌಡನ ತಾಯಿ. ರಾಯನಗೌಡ ಗಂಗೆಯ ಕೆನ್ನೆಗೆ ಇನ್ನೊಂದು ಏಟು ಬಾರಿಸಿ-
“ನೀನೇ ಇಬ್ಬರನ್ನೂ ಏನಾದರೂ ಮಾಡು ಕೊನೆಗೆ ಸೀಮೆ ಎಣ್ಣಿ ಹಾಕಿ ಸುಟ್ಟುಬಿಡು” ಎಂದು ಅರ್ಭಟಿಸುತ್ತ ಹೊರನಡೆಯುತ್ತಿದ್ದ.
ಗಂಗೆಯ ಕಣ್ಣಿಂದ ಗಂಗಾ ಬಳ ಬಳ ಸುರಿಯುತ್ತಿದ್ದಳು. ಗಂಗಾ ಕಣ್ಣೀರು ತಡೆಯುವ ವ್ಯರ್ಥ, ಪ್ರಯತ್ನ ಮಾಡಿದಷ್ಟು ಅಳು ಹೆಚ್ಚಾಗುತ್ತಿತ್ತು. ತನ್ನ ಸಖಿ. ಸಹೋದರಿ ಅಳುವುದನ್ನು ಓರೆ ನೋಟದಿಂದಲೇ
ನೋಡುತ್ತಿದ್ದ ಗೌರಿಯ ಕಣ್ಣಲ್ಲೂ ನೀರು ಕಾಣಿಸಿಕೊಳ್ಳುತ್ತಿತ್ತು. ಗಂಗಾ ಒಮ್ಮೊಮ್ಮೆ ಗೌರಿಯ ಹತ್ತಿರಕ್ಕೆ ಹೋಗಿ ಪ್ರೀತಿಯಿಂದ ನವಿರಾಗಿ ಮೈ ತೀಡಿ-
“ಅಯ್ಯೋ ಸಖೀ ನನ್ನಂತೆಯೇ ನಿನ್ನ ಗತಿ ಆಯಿತಲ್ಲೇ, ನನ್ನದೇ ತಪ್ಪು, ನಾ ಬರುವುದಲ್ಲದೇ ನಿನ್ನನ್ನೂ ಕೂಡ ಈ ನರಕ ಕೂಪಕ್ಕೆ ಏಳೆದು ತಂದೆನಲ್ಲೇ…” ಎಂದು ರೋಧಿಸುತ್ತಿದ್ದಳು. ಗಂಗೆಯ
ಮಮತೆ ತುಂಬಿದ ಸ್ಪರ್ಶಕ್ಕೆ ಗೌರಿ ತನ್ನ ಮುಖ ಅವಳೆದೆಗೆ ಹಚ್ಚಿ ಅವಳದೆಯ ನೋವು ಗ್ರಹಿಸುತ್ತಿದ್ದಳು. ಒಂದು ದಿನ ಪಕ್ಕದ ಮನೆ ಪಾರು ಬಂದು- “ ನಿನ್ನ ಗಂಡ ನಾಟಕದ ಹುಡುಗಿಯ ಬೆನ್ನು
ಬಿದ್ದಾನಂತ, ಇಷ್ಟರಲ್ಲೇ ಮದುವೆನೂ ಆಗತೈತಂತಾ ನನ್ನ ಹಿರ್ಯಾ ಹೇಳತ್ತಿದ್ದ” ಎಂದು ಹೇಳಿದಾಗ, ಮುಗಿಲೇ ಪುಡಿ ಪುಡಿಯಾಗಿ ಮೈಮೇಲೆ ಸುರಿದಂತೆ ಭಾಸವಾಗಿತ್ತು. ಪಾರಿ ಹೇಳುವುದು
ನಿಜವಿರಬಹುದೇ? ಹೌದು! ಆದರೂ ಆಗಿರಬಹುದು, ಅಂದಾಗಲೇ ಅವನಿಗೆ ನನ್ನಲ್ಲಿ ಆಸಕ್ತಿಯಿಲ್ಲ, ಪ್ರೀತಿಯಿಲ್ಲ, ಅಕಸ್ಮಾತ ಅವಳ ಮಾತು ನಿಜವಾದರೆ? ಸಿದ್ದೇಶ್ವರನ ದಯೆಯಿಂದ ಪಾರಿ ಹೇಳಿದ್ದು ಸುಳ್ಳಾಗಲಿ
ಎಂದು ತನ್ನ ಮನೆ ದೇವರಲ್ಲಿ ಪರಿ ಪರಿಯಾಗಿ ಬೇಡಿಕೊಂಡಳು. ಇದಾದ ಮಾರನೇ ದಿನವೇ ರಾಯನಗೌಡ ವಿದೇಶಿ ತಳಿ, ಕೆಂಪು ವರ್ಣದ ‘ಜರ್ಸಿ’ ಆಕಳು ಹಿಡಿದುಕೊಂಡು ಮನೆಗೆ ಬಂದಿದ್ದ.
“ಅವ್ವ… ಅವ್ವ… ಏನ್ ತಂದೀನಿ ನೋಡ ಇಲ್ಲಿ..”
ತಾಯಿಯನ್ನು ಕರೆದು ತಂದ ಕೆಂಪ ವರ್ಣದ ಜರ್ಸಿ ಆಕಳನ್ನು ಆನಂದದಿಂದ ಮುತ್ತಿಕ್ಕಿದ.
‘ಮಗಾ ಬಹಳ ಚೆಂದಾಗಿದೆ. ಎಷ್ಟೊಂದು ಮುದ್ದಾಗಿದೆ. ಇನ್ಮೇಲೆ ಆ ಗೊಡ್ಡು ಆಕಳ ಸಹವಾಸ ಬೇಡ. ಕಟುಕರಿಗೆ ಮಾರಿ ಬಿಡು’ ಎಂದಾಗ ತಾಯಿ ಮಾತಿಗೆ ಒಪ್ಪಿಗೆ ಸಮ್ಮತ್ತಿಸುತ್ತ- ‘ನೀ ಹೇಳಿದಂಗನ ಅಗಲಿ ನಾಳೆನೇ ಆ ಗೊಡ್ಡ ಆಕಳನ್ನು ಮಾರಿ ಬಿಡುತ್ತೇನೆ.’ ಎಂದು ರಾಯನಗೌಡ ಹೇಳುವಾಗ ಮೂಕ ಪ್ರೇಕ್ಷಕಳಂತೆ ಮೌನವಾಗಿಯೇ ನಿಂತು ತಾಯಿ ಮಗನ ಸಂಭಾಷಣೆಯನ್ನು ಕೇಳುತ್ತಿದ್ದ ಗಂಗಾಳ ಹೃದಯಕ್ಕೆ ಬರೆಕೊಟ್ಟಂತಾಗಿತ್ತು. ಬಿಕ್ಕಳಿಸುತ್ತಲೇ ಅಡಿಗೆಯ ಮನೆಗೆ ಓಡಿದಳು. ಒಲೆ ಹೊತ್ತಿ ಉರಿಯುತ್ತಿತ್ತು. ಅವಳ ಮನಸ್ಸು ಉರಿಯುತ್ತಿರುವಂತೆ. ಇನ್ನು ಮೇಲೆ ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂದು-
ಕೊಂಡಳು. ಈ ಹೊತ್ತು ‘ಜರ್ಸಿ’ ಬಂತು, ನಾಳೆ ಸವತಿಯೂ ಬರಬಹುದು. ಪಾರಿ ಹೇಳಿದ್ದು ಸತ್ಯ! ರಾಯನಗೌಡನ ಮನದಲ್ಲಿ ತನ್ನ ಭಾವನೆಗಳಿಗೆ ಎಳ್ಳಷ್ಟೂ ಬೆಲೆ ಇಲ್ಲ. ಹಾಗೇನಾದರೂ ಇದ್ದರೆ ಈ
ವಿದೇಶಿ ಹಸು ಮನೆಗೆ ಸೇರುತ್ತಲೇ ಇರಲಿಲ್ಲ. ಇವತ್ತೋ ನಾಳೆಯೋ ಗೌರಿ ಕಟುಕರ ಪಾಲಾಗಬಹುದು. ಅವಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕು ಎಂದು ತೀರ್ಮಾನಿಸಿದಳು. ಇಲ್ಲವಾದರೆ ಒಂದು ದಿನ ಗೌರಿಗಾದ ಗತಿ ತನಗೂ ಬರಬಹುದು. ಗೌರಿಯ ಉಳುವಿಗಾಗಿ ತನಗೆ ಈ ಮನೆ ಬಿಡುವ ಪ್ರಸಂಗ ಬಂದರೂ ಪರವಾಗಿಲ್ಲ. ಬಿಡುತ್ತೇನೆ. ಆದರೆ ಗೌರಿಯನ್ನು ಕಾಪಾಡಲೇಬೇಕು ಎಂದು
ನಿರ್ಧರಿಸಿದಳು. ರಾಯನಗೌಡ ಮತ್ತವನ ತಾಯಿಯ ಅನ್ಯಾಯವನ್ನು ಸಹಿಸಿಕೊಂಡು ಬದುಕುವದಕ್ಕಿಂತ ಈ ನರಕದಿಂದ ಮುಕ್ತಿ ಹೊಂದುವುದೇ ಲೇಸು…. ಈ ಮನೆಯಲ್ಲಿ ನಾವಿರಬೇಕು, ಇಲ್ಲಾ ಆ
ಜರ್ಸಿ ಇರಬೇಕು…. ಎರಡರಲ್ಲಿ ಒಂದು ತೀರ್ಮಾನ ಆಗಲೇಬೇಕು ಎಂದು ಯೋಚಿಸುತ್ತಿರುವಾಗಲೇ ಗೌಡ ಒಳಗೆ ಬಂದ. ಗಂಗಾ ತಾಟದ ತಟ್ಟೆಯನ್ನು ಸಿಟ್ಟಿನಿಂದಲೇ ಅವನ ಮುಂದೆ ಸರಿಸಿದಳು. ಆದರೆ
ರಾಯನಗೌಡನಿಗೆ ಅವಳ ಸಿಟ್ಟು, ನೋವು, ನಿರಾಸೆ, ನಿಟ್ಟುಸಿರುಗಳನ್ನು ಗಮನಿಸುವಷ್ಟು ವ್ಯವಧಾನವಿರಲಿಲ್ಲ. ಊಟ ಮಾಡಿ ರಾಯನಗೌಡ ಮೀಸೆ ತೀಡುತ್ತ ಮೇಲೇಕ್ಕೇಳುತ್ತಿದ್ದಾಗಲೇ ಗಂಗಾ ಸಾವಕಾಶವಾಗಿ-
‘ಏನ್ರೀ….’ ಅಂದಾಗ ರಾಯನಗೌಡ ಪ್ರತಿಯಾಗಿ-
‘ಏನೇ…’ ಎಂದು ಒರಟಾಗಿ ಪ್ರಶ್ನಿಸಿದ.
‘ಏನ್ರಿ… ನೀವು ಮಾತಡೋದು ಖರೇಯೇನ್ರಿ?..’ ಎಂಬ ಪ್ರಶ್ನೆಗೆ-
‘ಯಾವುದು?’ ಗಡುಸಾಗಿ ಕೇಳಿದ.
‘ಅದೇ ನಮ್ಮ ಗೌರೀನ ಕಟುಕರಿಗೆ ಮಾರುದು’
‘ಹೌದು ಅಂತಹ ಗೊಡ್ಡು ದನ ಇಟ್ಟುಕೊಂಡು ಏನು ಲಾಭ, ಮಾರೇ ಬಿಡೂದ. ನೀನು ಅದರಂತೆ ದನಾನೋ ಕುರಿಯೋ ಆಗಿದ್ದರೆ ಇಷ್ಟೊತ್ತಿಗೆ ಮಾರಿ ಬಿಡ್ತಾ ಇದ್ದೆ. ಏನೋ ಪಾಪ ಬಿದ್ದುಕೊಂಡಿರಲಿ
ಅಂತಾ ಬಿಟ್ಟರೆ ನಿನ್ನದು ಹೆಚ್ಚಾಯಿತು. ನಿನ್ನ ಜೊತೆ ಅದೊಂದು ದರಿದ್ರ ಪ್ರಾಣಿ’ ಎಂದು ಬಾಯಿಗೆ ಬಂದ ಹಾಗೆ ಬಯ್ಯುತ್ತ ಮೇಲೆದ್ದ. ನೀನೂ …. ದನಾನೋ ಕುರಿನೋ ಎನ್ನುವ ಮಾತುಗಳು
ಕಿವಿಯಲ್ಲಿ ಮತ್ತೇ ಮತ್ತೇ ಪ್ರತಿಧ್ವನಿಸಿದಂತಾಗಿ ಗಂಗಾಳ ಮುಗ್ಧ ಮನಸ್ಸಿಗೆ ಆಘಾತ ತಂದಿದ್ದವು. ರಾಯನಗೌಡ ಹೀಗೆ ಏನೋನೋ ಅರಚುತ್ತ ಸಾಗುತ್ತಿದ್ದ. ಗಂಗಾಗೆ ತಡೆಯಲಾಗಲಿಲ್ಲ. ಓಡಿ ಹೋಗಿ ಅವನ ಕಾಲಿಗೆ ಬಿದ್ದಳು.
“ಬೇಡ ದಯವಿಟ್ಟು ಹಾಗೆ ಮಾಡಬೇಡಿ ನನಗೆ ಬೇಕಾದ್ದು ಮಾಡಿ….. ಆದರೆ ಪಾಪ ಆ ಮೂಕ ಪ್ರಾಣಿಯನ್ನು ನಿಮ್ಮ ಸ್ವಾರ್ಥಕ್ಕೆ ಬಲಿ ಕೊಡಬೇಡಿ….” ಕೈ ಮುಗಿದು ಕೇಳಿಕೊಂಡರೂ ಏನೂ
ಪ್ರಯೋಜನವಾಗಲಿಲ್ಲ. ರಾಯನಗೌಡ ಕಲ್ಲು ಮನಸ್ಸು ಕರಗಲೇ ಇಲ್ಲ.
ಬದಲಾಗಿ-
“ನಾಳೆ ನಿಂಗೂ ಇದೆ ಗತಿ, ನಾಳೆನೇ ನಾನು ಬೇರೆ ಮದುವೆಯಾಗ್ತಾ ಇದ್ದೀನಿ” ಎನ್ನುವುದಷ್ಟೇ ತಡ ಗಂಗೆಯ ಹೃದಯಕ್ಕೆ ಕೊಲೆಗಾರನೊಬ್ಬ ಚಾಕುವಿನಿಂದ ಇರಿದಂತಾಗಿತ್ತು. ಬಂದ ಕೋಪದಲ್ಲಿ-
“ಯಾರನ್ನಾ ಆ ನಾಟಕದವಳನ್ನಾ” ಎಂದು ಕೇಳಿಯೇ ಬಿಟ್ಟಳು.
“ಎಲ್ಲಾ ಗೊತ್ತಿದ್ದು ಹ್ಯಾಗಿದ್ದಿಯಾ ನೋಡು ಮಳ್ಳಿ ಹಾಂಗೆ. ನಿಷ್ಪ್ರಯೋಜಕರಿಗೆ ನಮ್ಮಲ್ಲಿ ಜಾಗವಿಲ್ಲ. ನಾಳೆ ಬೆಳಗಾಗುವದರಲ್ಲಿ ಆ ಗೊಡ್ಡು ಆಕಳು ತಕ್ಕೊಂಡು ಇಲ್ಲಿಂದ ತೊಲಗು. ಇನ್ಮೇಲೆ ನಿನ್ನ ದರಿದ್ರ
ಮುಖ ತೋರ್ಸೊಕೆ ಹೋಗಬೇಡ” ಎನ್ನುತ್ತ ಗಂಗೆಯನ್ನು ಕಾಲಿಂದಲೇ ತಳ್ಳಿ ನಡೆದ. ಅವಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಹೊರಗೆ ಮಗನ ಗಂಡಸುತನಕ್ಕೆ ಮೆಚ್ಚಿ ತಾಯಿ ನಗುತ್ತಿದ್ದಳು. ಇನ್ನು ಈ ಮನೆಯಲ್ಲಿ ತಮಗೆ ಸ್ಥಳವಿಲ್ಲವೆಂದು ಅರಿತ ಗಂಗೆ ಗೌರಿಯನ್ನು ಕರೆದುಕೊಂಡು ರಾತ್ರೋ ರಾತ್ರಿ ತನ್ನ ಹಳ್ಳಿಗೆ ಬಂದು ಸೇರಿದ್ದಳು.
ಅವಳ ಕತೆ ಕೇಳಿದ ನಂತರ ದೀರ್ಘವಾದ ನಿಟ್ಟುಸಿರು ಬಿಟ್ಟು-
“ಕ್ಷಮಿಸಿ.. ನಿಮಗೆ ತುಂಬಾ ನೋಯಿಸಿ ಬಿಟ್ಟೆ” ಎಂದೆ. ತುಂಬ ದುಃಖಿತಳಾಗಿದ್ದ ಗಂಗಾ ಮೌನವಾಗಿಯೇ ನನ್ನ ಕ್ಷಮಿಸಿದಳು. ‘ಆಯ್ತು…..
ಗೌರಿಯನ್ನು ಸಂಪೂರ್ಣ ಪರೀಕ್ಷಿಸಿದ ನಂತರ ಏನೆಂಬುವುದು ಹೇಳುತ್ತೇನೆ. ಎಂದು ಗೌರಿಯ ಗರ್ಭ ಪರೀಕ್ಷೆಗೆ ಮುಂದಾದೆ. ಗೌರಿಯ ಗರ್ಭ ಪರೀಕ್ಷೆ ಮುಗಿಸಿ ಒಳ ಬಂದು ಗಂಗೆಗೆ ಹೇಳಿದೆ-
“ ನೀವು ಕಟ್ಟಿಸಲಿಕ್ಕಂತ ಗೌರಿಯ ಮೇಲೆ ಬಿಟ್ಟ ಹೋರಿಗೆ ಲೈಂಗಿಕ ರೋಗ ಹೊಂದಿದ ಆಕಳುಗಳ ಸಂಪರ್ಕದಿಂದ ಆ ರೋಗ ಬಂದಿರುತ್ತೆ, ಅದೇ ರೋಗ ನಿಮ್ಮ ಗೌರಿಗೂ ತಗಲಿ ಗರ್ಭ
ದೋಷಯುಕ್ತವಾಗಿದೆ. ಔಷೋಧೋಪಚಾರ ಮಾಡಿ, ಗರ್ಭ ಸರಿಪಡಿಸಿದ ನಂತರ, ರೋಗರಹಿತ ಉತ್ತಮ ಹೋರಿಯ ಸಂಪರ್ಕದಿಂದ ಅಥವಾ ಕೃತಕ ಗರ್ಭಧಾರಣೆ ಮಾಡುವ ಮೂಲಕ ಖಂಡಿತವಾಗಿಯೂ ಕರು ಪಡೆಯಬಹುದು. ಇದರಲ್ಲಿ ಯಾವ ಸಂದೇಹವೂ ಇಲ್ಲ. ಎಂದು ಹೇಳುತ್ತಿದ್ದಾಗಲೇ-
“ದೋಷ! ನನ್ನದಲ್ಲ….ಛೇ!” ನಾಲಿಗೆ ಕಚ್ಚಿಕೊಂಡು ಹೇಳಿದಳು.
“ದೋಷ ನಮ್ಮ ಗೌರಿಯದಲ್ಲ, ಆ ಹೋರಿಯದು ಅಂದ ಹಾಗಾಯಿತು?” ಎಂದಳು, ನಾ “ಖಂಡಿತಾ” ಎಂದು ಅವಳ ಮಾತಿಗೆ ಸಮ್ಮತಿಸಿದಾಗ ಅವಳ ಕಣ್ಮುಂದೆ ರಾಯನಗೌಡನ ಚಿತ್ರ ರೋಗಗ್ರಸ್ಥ
ಹೋರಿಯ ರೂಪ ಪಡೆದು ಮಿಂಚಿ ಮಾಯವಾಯ್ತು. ಆ ಕ್ಷಣ ಅವಳಿಗೆ ಗೊತ್ತಿಲ್ಲದಂತೆ ಅವಳ ತುಟಿಯಿಂದ ಒಂದು ಕಿರುನಗೆ ಜಾರಿ ಹೋಯಿತು. ನಾನು ಅವಳನ್ನ ಎಚ್ಚರಿಸಿದ್ದೆ ‘ಗಂಗಾ’ ಎಂದು.
“ ಸಾಕು ಸಾಹೇಬರೇ….. ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ಗೆ ಬೇಕಾಗಿದ್ದು ಇಷ್ಟೇ. ದೋಷ ನನ್ನ….ನನ್ನ ಗಂಗೆಯದಲ್ಲ ಎಂದು ಗೊತ್ತಾಯಿತು, ನನಗಷ್ಟೆ ಸಾಕು” ಎನ್ನುತ್ತ
ಮೇಲೆದ್ದಳು.
“ಇನ್ನೂ ಇದೆ ಕೂತುಕೊಳ್ಳಿ ಈಗಲೂ ನೀವು ಮನಸ್ಸು ಮಾಡಿದರೆ ಗೌರಿ ಗರ್ಭ ಧರಿಸಬಹುದು” ಎಂದಿದ್ದಕ್ಕೆ ಅವಳು ಮೇಲೆದ್ದು ಮುಗುಳ್ನಗೆ ಬೀರುತ್ತ ಹೇಳಿದಳು
“ಸಧ್ಯಗಿಷ್ಟು ಸಾಕು ಚಿಕಿತ್ಸಗೆ ಇನ್ನೊಂದು ದಿನ ಬರುತ್ತೇನೆ” ಎನ್ನುತ್ತ ಮೇಲೆದ್ದಳು. ನಾನು ಏನು ಹೇಳಿದರು ಅವಳು ಕೇಳುವುದಿಲ್ಲ ಎಂದು ಗೊತ್ತಾಗಿ ಅವಳಿಗೆ ಬಲವಂತ ಮಾಡಲು ಹೋಗಲಿಲ್ಲ. ಗಂಗೆ ಗೌರಿ ಇಬ್ಬರು ಒಟ್ಟಿಗೆ ಹೋಗುತ್ತಿರುವುದನ್ನು ದೂರದಿಂದಲೇ ನೋಡುತ್ತ…. ಅವರಿಬ್ಬರೂ ಯಾವ ಜನ್ಮದಲ್ಲಿ ಒಡಹುಟ್ಟಿದವರಾಗಿದ್ದರು ಎಂದು ಯೋಚಿಸತ್ತಾ ಕುಳಿತು ಬಿಟ್ಟೆ.
– ಅಶ್ಫಾಕ್ ಪೀರಜಾದೆ
ದೋಷ super sir ಸರ್ ನಿಮ್ಮ ದೋಷ ಬರವಣಿಗೆ ಕಣ್ಣಿಗೆ ಕಟುವೆಂತೆ ಬರೆದಿದಿರಿ ಒಂದು ಉತ್ತಮವಾದ ಸಾಹಿತ್ಯ
ಒಳ್ಳೆಯ ಕಥೆ. ಗಂಗಾ ಮತ್ತು ಗೌರಿಯ ಜೀವನದ ಸಾಮ್ಯತೆ ಚೆನ್ನಾಗಿ ಬರೆದಿದ್ದೀರಿ
johnson,Rajendra ಅವರ ಆತ್ಮೀಯ ಓದಿಗೆ ನನ್ನ ಅನಂತ ಅನಂತ ಧನ್ಯವಾದಗಳು. ಥ್ಯಾಂಕ್ಸ್.
ಬಹಳ ಹೃದಯಸ್ಪರ್ಶಿ!