(ಪಶ್ಚಿಮಘಟ್ಟಗಳ ಸ್ಥಿತಿ-ಗತಿ-೩ನೇ ಭಾಗದ ಪ್ರಕಟಣೆ ೧ ವಾರ ಮುಂದೆ ಹೋಗಿದೆ. ಅಡಚಣೆಗಾಗಿ ಕ್ಷಮಿಸಿ ಎಂದು ಮೊದಲಿಗೆ ಕೇಳಿಕೊಳ್ಳುತ್ತಾ. . . ಸಹೃದಯಿ ಓದುಗರು ದಯಮಾಡಿ ಸಹಕರಿಸಬೇಕು).
ಸರಣಿ ಲೇಖನಗಳನ್ನೂ ಅದರಲ್ಲೂ ಗಾಡ್ಗಿಳ್ ಮತ್ತು ರಂಗನ್ ವರದಿಯನ್ನು ಭಾವಾನುವಾದ ಮಾಡುವಾಗ ನಮ್ಮ ಸ್ವಂತ ಯೋಚನೆಗಳಿಗೆ ಹೆಚ್ಚಿನ ಅವಕಾಶವಿರುವುದಿಲ್ಲ. ಈ ಸರಣಿ ಇನ್ನೂ ನಾಲ್ಕಾರು ವಾರ ಮುಂದುವರೆಯುವ ಸಂಭವ ಇರುವುದರಿಂದ, ಸ್ಥಳೀಯ ಕೆಲವು ಘಟನೆಗಳು ಅಕ್ಷರ ರೂಪ ಪಡೆಯದೇ ಹೋಗಬಹುದು ಎಂಬ ಆತಂಕದಿಂದ ಈ ಕೆಳಕಂಡ ಘಟನೆಗಳನ್ನು ದಾಖಲಿಸುವ ಪ್ರಯತ್ನವಾಗಿದೆ.
ಸಾಗರದಿಂದ-ಸಿಗಂದೂರಿಗೆ ಹೋಗುವ ಮಾರ್ಗದಲ್ಲಿ ಕಾಗೆಹಳ್ಳ ಎಂಬು ಊರು ಸಿಗುತ್ತದೆ. ಈ ಪುಟ್ಟ ಊರಿನಲ್ಲಿ ಎಲ್ಲಾ ಜಾತಿ-ಜನಾಂಗದವರೂ ಸೌಹಾರ್ಧಯುತವಾಗಿ ಬಾಳುತ್ತಿದ್ದಾರೆ. ಇಲ್ಲೊಬ್ಬರ ಹೆಸರು ರಶೀದ್ ಸಾಬ್. ಇವರು ಚಿಕ್ಕ-ಪುಟ್ಟ ವ್ಯಾಪರ ಮಾಡಿಕೊಂಡು ಇರುವವರು. ಅಡಕೆ, ಕಾಳುಮೆಣಸು, ಏಲಕ್ಕಿ ಖರೀದಿ ಮಾಡಿ ಸಾಗರದ ದೊಡ್ಡ ವ್ಯಾಪಾರಸ್ಥರಿಗೆ ಮಾರಿ ಜೀವನ ನಿರ್ವಹಣೆ. ಕಳೆದ ಆಗಸ್ಟ್ ತಿಂಗಳಲ್ಲಿ ರಾತ್ರಿ ಮನೆಗೆ ಹೋಗುವಾಗ ರಸ್ತೆಯ ಪಕ್ಕದಲ್ಲೇನೋ ಚಿಕ್ಕ ಪ್ರಾಣಿ ಅನಾಥವಾಗಿ ಬಿದ್ದಂತೆ ತೋರಿತು. ಇವರು ಓಡಿಸುವ ಬಜಾಜ್ ಎಂ-೮೦ಯ ಬೆಳಕಿನಲ್ಲಿ ಸರಿಯಾಗಿ ಕಾಣಲಿಲ್ಲ. ಮತ್ತೆ ಹಿಂದೆ ಬಂದು ನೋಡಿದರು. ದಿಕ್ಕಿಲ್ಲದೇ ಬಿದ್ದ ಮೊಲದ ಮರಿ ಸಾವಿನಂಚಿನಲ್ಲಿತ್ತು. ತಾಯಿ ಮೊಲ ಅದ್ಯಾರೋ ಹಾಕಿದ ಬಲೆಗೆ ಬಿದ್ದಿರಬೇಕು, ಮರಿ ಅನಾಥವಾಗಿತ್ತು. ಸರಿ ನಿಧಾನವಾಗಿ ಎತ್ತಿಕೊಂಡು ಮನೆಗೆ ತಂದರು. ವ್ಯಾಪಾರಕ್ಕಾಗಿ ಊರೂರು ತಿರುಗುವ ಕಾಯಕದಲ್ಲಿರುವ ರಶೀದ್‌ಗೆ ಲೋಕಜ್ಞಾನವೂ ಚೆನ್ನಾಗಿಯೇ ಇತ್ತು. ಪಕ್ಕದ ಮನೆಯಿಂದ ಒಂದು ಪುಟಿಕೆ ಆಕಳ ಹಾಲು ತಂದು ಕುಡಿಸಿ, ಬೆಚ್ಚಗೆ ಹೊದಿಕೆ ಮಾಡಿ ಮಲಗಿಸಿದರು. ಅವರ ಚಿಕ್ಕ ಮಕ್ಕಳಿಗೂ ಕುತೂಹಲ. ಚಿಕ್ಕ ಮರಿಯನ್ನು ಮುಟ್ಟಬೇಡಿರೆಂದು ಗದರಿದರು. ಹಾಲು ಕುಡಿದ ಮರಿ, ಮನುಷ್ಯ ನಿರ್ಮಿತ ವಾತಾವರಣಕ್ಕೆ ಹೊಂದಿಕೊಂಡಿತು. ಜಿಗಿ-ಜಿಗಿದಾಡಿತು. ಮನೆಯವರ, ಮಕ್ಕಳ, ಅಕ್ಕ-ಪಕ್ಕದವರ ಮನ ಗೆದ್ದಿತು. ಸ್ವಲ್ಪ ದೊಡ್ಡದಾದ ಮೇಲೆ ಖುದ್ದು ರಶೀದ್‌ರೇ ಗರಿಕೆ ಹುಲ್ಲನ್ನು ಕಿತ್ತು ತಂದು ತಿನ್ನಿಸುವ ಅಭ್ಯಾಸ ಮಾಡಿದರು. ಬೇರೆ ಹೊತ್ತಿನಲ್ಲಿ ಬೆಕ್ಕು-ನಾಯಿಗಳಿಂದ ರಕ್ಷಿಸಲು ಪುಟ್ಟದಾದ ಬೋನ್ ತಯಾರು ಮಾಡಿಟ್ಟರು.
ಸಾಗರಕ್ಕೆ ಮೂಲತ: ಸದಾಶಿವ ಸಾಗರ ಎಂಬ ಹೆಸರಿತ್ತು. ಜಂಬಗಾರು ಎಂದೂ ಕರೆಯಲಾಗುತ್ತಿತ್ತು. ಸಾಗರ ತಾಲ್ಲೂಕಿನಲ್ಲಿ ಇತಿಹಾಸ ಪ್ರಸಿದ್ಧ ಅನೇಕ ಸ್ಥಳಗಳಿವೆ. ಇಕ್ಕೇರಿ-ಕೆಳದಿ-ಕಲಸಿ ದೇವಸ್ಥಾನಗಳು ಶಿಲ್ಪಕಲೆಯ ಮೇರು ಶಿಖರಗಳು. ಹಾಗೆಯೇ ಅವಳಿಯೆಂದರೆ ತಪ್ಪಾದೀತು, ಸಯಾಮಿ ಎನ್ನೋಣ, ಗಣಪತಿ ದೇವಸ್ಥಾನಕ್ಕೆ ಅಂಟಿಕೊಂಡೇ ಇರುವ ಮಸೀದಿಯಿರುವುದು ಸಾಗರ ತಾಲ್ಲೂಕಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. ಮೇಲೆ ಹೇಳಿದ ಗಣಪತಿ ದೇವಸ್ಥಾನದ ಎದುರು ಭಾಗದಲ್ಲಿ ದೇವಸ್ಥಾನಕ್ಕೇ ಸೇರಿದ ಜಾಗ ಸಹಿತ ಹಳೇ ಹೆಂಚಿನ ಕಟ್ಟಡಗಳಿವೆ. ಬಹಳ ಹಳೆಯದಾದ ಈ ಕಟ್ಟಡಗಳಲ್ಲಿ ಸರ್ಕಾರಿ ಆಫೀಸುಗಳು ಬಾಡಿಗೆ ನೀಡಿ ಕಾರ್ಯ ನಿರ್ವಹಿಸುತ್ತಿದ್ದವು. ಕಂದಾಯ ಇಲಾಖೆ ಇಲ್ಲಿತ್ತು. ಕಂದಾಯ ಇಲಾಖೆಗೆ ಬೇರೆ ಹೊಸ ಕಟ್ಟಡ ನಿರ್ಮಾಣವಾದ ಮೇಲೆ, ಈ ಹಳೇ ಹೆಂಚಿನ ಕಟ್ಟಡಗಳು ಉಪಯೋಗ ಮಾಡದೇ ಹಾಳು ಬಿದ್ದವು. ಇಲ್ಲಿ ಹಾಳು ಬಿದ್ದವು ಎಂದರೂ ತಪ್ಪಾದೀತು. ಜನ ಸಂಚಾರ-ಓಡಾಟವಿಲ್ಲದೇ ನಿರ್ಜನವಾಯಿತು. ನೆಲವಾಸಿಗಳಾದ ಹೆಗ್ಗಣಗಳು, ಇಲಿಗಳು ಬಿಲ ಕೊರೆದವು. ಇವುಗಳನ್ನು ಹುಡುಕಿಕೊಂಡು ಹಾವು ಬಂದವು. ಡೈನೋಸಾರ್ ಸಂತತಿಯ ಹಾರುವಾಸಿಗಳಾದ ಪಕ್ಷಿಗಳು ಈ ನಿರ್ಜನ ಕಟ್ಟಡಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸತೊಡಗಿದವು, ಪಕ್ಕದಲ್ಲೇ ಸದಾ ತುಂಬಿರುವ ಗಣಪತಿ ಕೆರೆ, ಹೆಚ್ಚಿನ ಮಾಲಿನ್ಯವಿಲ್ಲದ ಪ್ರದೇಶದಲ್ಲಿ ನಿರಾತಂಕವಾಗಿ ಸಂತತಿ ಬೆಳೆಸಿಕೊಂಡವು. ೫೦-೬೦ರ ದಶಕದಲ್ಲಿ ಈ ಪ್ರದೇಶದಲ್ಲಿ ಹುಲಿಗಳು ವಾಸಿಸುತ್ತಿದ್ದವು ಎಂಬುದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ.
೨೦೧೪ರ ಅಂತ್ಯದಲ್ಲಿ ಸಾಗರದಲ್ಲಿ ಒಂದು ಧರಣಿ ನಡೆಯಿತು. ಯಾರೂ ಕಂಡು-ಕೇಳರಿಯದ ಧರಣಿಯಿದು. ಆದರೂ ಹೆಚ್ಚಿನವರ ಗಮನಕ್ಕೆ ಬರಲಿಲ್ಲ. ಧರಣಿಗೆ ಕುಳಿತವರು ಧಿಕ್ಕಾರ ಕೂಗಲಿಲ್ಲ. ಬ್ಯಾನರ್ ಹಿಡಿದು ಪ್ರತಿಭಟಿಸಲಿಲ್ಲ. ಮನವಿ ಪತ್ರವಂತೂ ಇರಲೇ ಇಲ್ಲ. ಸ್ಥಳೀಯ ಆಡಳಿತದ ವಿರುದ್ಧವಾಗಲಿ, ಸರ್ಕಾರದ ವಿರುದ್ಧವಾಗಲಿ ನಡೆಸಿದ ಧರಣಿ ಇದಾಗಿರಲಿಲ್ಲ. ಇಡೀ ಮನುಕುಲದ ಅಭಿವೃದ್ಧಿಯ ವಿರುದ್ಧ ನೆಲೆ ಕಳೆದುಕೊಂಡು ಅನಾಥವಾದ ಪುಟ್ಟ ಪಕ್ಷಿಗಳ ಧರಣಿಯಾಗಿತ್ತು. ನೆಲೆ ಕಳೆದುಕೊಂಡು ದಿಕ್ಕು ತೋಚದೇ ಬರೀ ಚೀಂವ್-ಚೀಂವ್ ಎನ್ನುತ್ತಾ ತಂತಿಯ ಮೇಲೆ ಕುಳಿತಿದ್ದವು. ಮೂಲತ: ಮನುಷ್ಯ ನಿರ್ಮಿತ ಹೆಂಚಿನ ಸಂದುಗಳಲ್ಲಿ ಪಾಪದ (ಕೆಂಪು ಕತ್ತಿನ ಆಕಾಶ ಗುಬ್ಬಿ) ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದವು. ಕೆಲವು ಗೂಡುಗಳಲ್ಲಿ ಮೊಟ್ಟೆಗಳಿದ್ದವು. ಇನ್ನು ಕೆಲವು ಗೂಡುಗಳಲ್ಲಿ ಮೊಟ್ಟೆಯಿಂದ ಹೊರಬಂದ ಮರಿಗಳಿದ್ದವು. ಹೆಂಚಿನ ಕಟ್ಟಡವನ್ನು ಕೆಡವಿ ಹಾಕುವ, ಹಳೇ ಹಂಚು ನಾಟಗಳನ್ನು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ಪುಟ್ಟ ಪಕ್ಷಿಗಳ ಗೂಡು-ಸಂಸಾರ ದ್ವಂಸ ಆಗುತ್ತದೆ ಎಂಬ ಸೂಕ್ಷ್ಮ ಹರಾಜು ಹಾಕಿದ ಎಂಜಿನಯರ್‌ಗಳಿಗೆ ಇರಲಿಲ್ಲ. ಹರಾಜು ಹಿಡಿದ ಗುತ್ತಿಗೆದಾರನಿಗೆ ಕೆಲಸ ಮುಗಿಸುವುದಷ್ಟೆ ಮುಖ್ಯ. ದುರ್ಭಲ ಹಕ್ಕಿಗಳ ಕೂಗು ಕೇಳುತ್ತಾ ಕೂರಲು ಸಮಯವೆಲ್ಲಿ?. ಜೆ.ಸಿ.ಬಿ. ಯಂತ್ರ ನಡೆಸುವ ಡ್ರೈವರನಿಗೆ ಪಕ್ಷಿಗಳ ಕೂಗು-ಆರ್ತನಾದ ಕೇಳುವ ಸಂಭವವೇ ಇಲ್ಲ, ಇಂಜಿನ್ ಶಬ್ಧದ ಜೊತೆಗೆ, ದೊಡ್ಡದಾಗಿ ಹಾಡು ಹಾಕಿಕೊಂಡಿರುತ್ತಾನಲ್ಲ!!
ಭಾವೈಕ್ಯತೆಗೆ ಹೆಸರಾದ ಮಸೀದಿ-ಗಣಪತಿ ದೇವಸ್ಥಾನದ ಹತ್ತಡಿ ದೂರದಲ್ಲೇ ಇಂತದೊಂದು ದಾರುಣ ಘಟನೆ ನಡೆದು ಹೋಯಿತು. ಅಭಿವೃದ್ಧಿ ಪ್ರತಿಪಾದಕರಿಗೆ ಇದೊಂದು ಘಟನೆ ಅಥವಾ ಘಟನೆಯನ್ನು ದಾಖಲು ಮಾಡುವ ಕ್ರಮ ಬಾಲಿಶವಾಗಿ ತೋರಬಹುದು. ಇಂತದೊಂದು ಸರ್ಕಾರಿ ಪ್ರಾಯೋಜಿತ ಮಾರಣಹೋಮವನ್ನು ತಪ್ಪಿಸಬಹುದಿತ್ತು. ಹತ್ತಾರು ವರ್ಷಗಳಿಂದ ವಾಸವಾದ ಪಕ್ಷಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ವನ್ಯಜೀವಿ ತಜ್ಞರೊಂದಿಗೆ, ಅರಣ್ಯ ಇಲಾಖೆಯೊಂದಿಗೆ ಚರ್ಚಿಸಬಹುದಿತ್ತು. ಅದೆಲ್ಲಾ ಬಿಡಿ, ಕಟ್ಟಡ ನಿರ್ಮಿಸುವ ಎಂಜಿನಿಯರ್‌ಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಗತಿಯಾದೀತು. ಆದರೂ ಹಕ್ಕಿಗಳಿಗೆ ತಮ್ಮಷ್ಟಕ್ಕೆ ತಾವೆ ತಮ್ಮ ತಾವು ಬದಲಿಸುವಷ್ಟು ಸಮಯವನ್ನಾದರೂ ನೀಡಬಹುದಿತ್ತು. ತಿಂಗಳು ಮುಂಚಿತವಾಗಿ ಗೂಡು ಇಲ್ಲದ ಜಾಗಗಳ ಹೆಂಚನ್ನು ತೆಗೆದಿಟ್ಟಿದ್ದರೂ ಸಾಕಿತ್ತು. ಮರಿಗಳನ್ನು ಹಾರಿಸಿಕೊಂಡು ಅವು ಬೇರೆ ನೆಲೆ ಕಂಡುಕೊಳ್ಳುತ್ತಿದ್ದವು. ಈ ಸಂಧರ್ಭದಲ್ಲಿ ತೇಜಸ್ವಿಯವರು ಬರೆದ ಹಾಗೂ ಮೊನ್ನೆ ನಾಗೇಶ ಹೆಗಡೆಯವರು ಕೋಟ್ ಮಾಡಿದ ವಾಕ್ಯ ನೆನಪಿಗೆ ಬರುತ್ತಿದೆ ಆನೆ-ಹುಲಿ-ಕರಡಿ ಇತ್ಯಾದಿಗಳಿಗೆ ಮತ ಹಾಕುವ ಹಕ್ಕು ಇದ್ದಿದ್ದರೆ – ನಮ್ಮ ರಾಜಕಾರಣಿಗಳು ಅವುಗಳನ್ನು ರಕ್ಷಿಸುತ್ತಿದ್ದರೇನೋ? ಇಲ್ಲಿ ಈ ಪುಟ್ಟ ಹಕ್ಕಿಗಳನ್ನೂ ಸೇರಿಸಿಕೊಳ್ಳಬಹುದು.
ರಶೀದ್ ಸಾಬ್‌ರ ಮೊಲ ಆರು ತಿಂಗಳಲ್ಲೇ ದೊಡ್ಡದಾಯಿತು. ಬೋನಿನಲ್ಲಿ ಸಾಕುವುದು ಕಷ್ಟ. ನಿಗಾ ನೋಡುವುದು ಇನ್ನೂ ಕಷ್ಟ. ಕಾಡಿಗೆ ಬಿಡೋಣವೆಂದು ಕೊಂಡರೆ, ನೈಸರ್ಗಿಕ ಪಾಠಗಳನ್ನು ನಿಸರ್ಗದತ್ತವಾಗಿ ಕಲಿಯದ ಮೊಲ ಸುಲಭವಾಗಿ ಮನುಷ್ಯರಿಗೋ, ನಾಯಿಗೋ ಬಲಿಯಾಗಬಹುದು ಎಂಬ ಆತಂಕ ಒಂದು ಕಡೆ. ಹೀಗೆಲ್ಲಾ ಕಡೆದು-ಕಡೆದು ವಿಚಾರ ಮಾಡಿ ಬನಜಾಲಯ ಖ್ಯಾತಿಯ ಕೊಡ್ಲುತೋಟ ರಮೇಶರಿಗೆ ತಿಳಿಸಿದರು. ಡಿಸೆಂಬರ್ ತಿಂಗಳ ಅಂತ್ಯದ ವಾರದಲ್ಲಿ ಕೊಡ್ಲುತೋಟ ಫೋನ್ ಮಾಡಿ ವಿಚಾರ ತಿಳಿಸಿದರು. ಅವರ ಮನೆಯ ಹಿಂದೆ ಕಾಯ್ದಿಟ್ಟ ಕಾಡಿದೆ. ತೀರಾ ಬೇಟೆಗಾರರು ಅಲ್ಲಿಗೆ ಬಂದು ಬಲೆ ಹಾಕುವುದಿಲ್ಲವಾದ್ದರಿಂದ, ಮನುಷ ಸಾಕಿದ ಮೊಲಕ್ಕೆ ಸುರಕ್ಷಿತ ಪ್ರದೇಶ. ಸರಿ ಮದ್ಯಾಹ್ನ ಮೂರು ಗಂಟೆಗೆ ರಶೀದ್ ಬೋನು ಸಮೇತ ಬಂದರು. ಒಂದೆರೆಡು ಫೋಟೋವನ್ನು ರಮೇಶರ ಮಗ ಕೌಂಡಿನ್ಯ ತೆಗೆದ. ಬೋನಿನ ಬಾಗಿಲನ್ನು ತೆಗೆದೆವು. ಗಾಬರಿಯಿಲ್ಲದೇ ಮೆಲ್ಲಗೆ ಜಿಗಿ-ಜಿಗಿದು ಕಾಡಿನಲ್ಲಿ ಕಣ್ಮರೆಯಾಯಿತು. ಮರುದಿನ ನೋಡಿದರೆ ರಮೇಶರ ಮನೆಯ ಹಿತ್ತಿಲಿನಲ್ಲೆ ಹುಲ್ಲು ಮೇಯುತ್ತಿತ್ತು.
*****