ಬಸವಣ್ಣನವರ ವಚನವೊಂದರ ಸಾಲುಗಳು ಹೀಗಿವೆ: ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು…… ನೀರೊಳಗೆ ಬೆಂಕಿಯಿದೆ, ಅದರಿಂದಲೇ ವಿದ್ಯುತ್ತು ಹೊರಬರುವುದು. ಆಮೇಲೂ ಆ ನೀರು ನೀರಾಗಿಯೇ ಉಳಿವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು.
ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಅಡಗಿರುತ್ತದೆ. ತಾಯಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದಲ್ಲೇ ಅದರೆಲ್ಲ ಬೆಳವಣಿಗೆಗೆ ಬೇಕಾದ ಅವಯವಗಳು ಹುದುಗಿರುವಂತೆ, ನವಿಲಿನ ಮೊಟ್ಟೆಯೊಳಗೆ ಮುಂದೆ ಜಾಗರವಾಡುವ ನೂರೆಂಟು ಗರಿಗಳು ಹೇಗೆ ಸುಪ್ತಾವಸ್ಥೆಯಲ್ಲಿರುತ್ತವೋ ಹಾಗೆ!
ಎಲ್ಲ ಬೀಜವೂ ಕಿರಿದಾಗಿಸಿದ ವೃಕ್ಷವೇ ಆಗಿದೆ; ಏಕೆಂದರೆ ಅದು ಯಾವಾಗ ಬೇಕಿದ್ದರೂ ವೃಕ್ಷವನ್ನು ನಿರ್ಮಿಸಬಲ್ಲುದು ಎನ್ನುತ್ತಾರೆ ಆಚಾರ್ಯ ಓಶೋ ರಜನೀಶ್. ಪರಮಾತ್ಮನ ವಿಶೇಷವೆಂದರೆ ಅದು ಅಂತರ್ಗತಗೊಂಡ ಅನುಸಂಧಾನ. ಆ ಅನುಭಾವವನ್ನು ಅರ್ಥ ಮಾಡಿಸುವ ಗೊಡವೆಗೆ ಬಿದ್ದರೆ ಶಬ್ದವೇ ಲಜ್ಜೆಗೊಂಡು ಗೋಜಲಾಗುತ್ತದೆ.
ದೈವವು ನಂಬುಗೆಯ ಸಂಗತಿ; ಬದುಕಿನ ಊರುಗೋಲು, ಜೀವಭಾವಗಳ ದೃಢವಿಶ್ವಾಸ. ಧರ್ಮವು ನಮ್ಮ ಆಚಾರ-ವಿಚಾರಗಳ ಸಮೂಹ, ಜೀವನವಿಧಾನ. ಅಧ್ಯಾತ್ಮವು ವಿಶ್ವವನ್ನರಿಯುವ ಹಾದಿ. ನಾನು ಬರುವ ಮುನ್ನವೇ ಇದ್ದ ಮತ್ತು ನನ್ನ ನಂತರವೂ ಇರುವ, ಯಾವಾಗಲೂ ಇದ್ದೇ ಇರುವ ಬೆಳಕು ಮತ್ತದರ ಕಂಪನಗಳ ಶಕ್ತಿಸಂಚಯ. ಸಕಲ ಚರಾಚರಗಳ ಭಾಗವಾಗಿ ನನ್ನ ಶರೀರ ಮತ್ತು ಚೈತನ್ಯವಿದೆ ಎಂಬ ಸತ್ಯಸಾಕ್ಷಾತ್ಕಾರ.
ಅಮಾನವೀಯವಾಗಿ ಬದುಕು ಎಂದು ಯಾವ ಮತಗ್ರಂಥಗಳೂ ಮತಾಚರ್ಯರರೂ ಹೇಳಿಲ್ಲ. ಹಾಗೊಂದು ವೇಳೆ ಹೇಳಿದ್ದರೆ ಅದು ಧರ್ಮವಲ್ಲ. ನಾವು ಕಾಲಕ್ರಮೇಣ ಆಚರಿಸಿಕೊಂಡು ಬಂದ ಅನಿಷ್ಟ ಪದ್ಧತಿಗಳಿಗೆ ದೈವವನ್ನೂ ಧರ್ಮವನ್ನೂ ತೆಗಳುವುದು ತಿಳಿಗೇಡಿತನ.
ಯಾವುದನ್ನು ವಿಜ್ಞಾನಿಗಳು COSMIC POWER ಎನ್ನುತ್ತಾರೋ ಅದೇ ಸಾಮಾನ್ಯರ ಪಾಲಿಗೆ ದೈವ. ಬುದ್ಧಿಯಿಂದಲೋ ತರ್ಕದಿಂದಲೋ ದೇವರು ಅರ್ಥವಾಗುವುದಿಲ್ಲ. ಕಾರಣ, ಇದು ಹೃದಯಕ್ಕೆ ಮತ್ತು ಭಾವನೆಗೆ ಸಂಬಂಧಪಟ್ಟದ್ದು. ಭಕ್ತಿ ಎಂಬುದೊಂದು ಸದ್ಭಾವನೆ. ಇದರ ಸಲುವಾಗಿ ಪ್ರವೇಶಿಸಿ, ಬ್ರಹ್ಮಾನಂದ ಹೊಂದುವ ಮಾರ್ಗವನ್ನು ಅಧ್ಯಾತ್ಮವು ಸುಲಭವಾಗಿ ಕಲಿಸಿ ಕೊಡುತ್ತದೆ.
ದೇವರನ್ನು ಪ್ರಶ್ನೆಯಾಗಿಸಿಕೊಂಡರೆ ಬದುಕು ನರಕ; ಉತ್ತರವಾಗಿಸಿಕೊಂಡರೆ ಸ್ವರ್ಗ. ದೇವರಿದ್ದಾನೋ ಇಲ್ಲವೋ ಎಂಬುದು ಚರ್ಚಾಸ್ಪರ್ಧೆಯಾಗಬಾರದು. ನಾನೊಬ್ಬ ಇಲ್ಲ ಎಂದರೆ ಜಗತ್ ನಿಯಮ ಬದಲಾಗದು. ಸತ್ಯವೂ ಶಿವವೂ ಸುಂದರವೂ ಆದದ್ದು ಆ ಭಗವಂತ ಎಂಬುದನ್ನು ಜಗತ್ತಿನ ಸಾಹಿತ್ಯವೆಲ್ಲ ಸಾರಿದೆ.
ನಮ್ಮಂತೆಯೇ ಆ ಭಗವಂತ ಎಂದು ಅದನ್ನು ವ್ಯಕ್ತಿಯನ್ನಾಗಿ ಅದಕ್ಕೊಂದು ವ್ಯಕ್ತಿತ್ವವನ್ನು ಆರೋಪಿಸಿರುವ ಹಿಂದೆ ಅಪರಿಮಿತ ಭಕ್ತಿ ಮತ್ತು ಶ್ರದ್ಧೆಗಳಿವೆಯೇ ಹೊರತು ನಾವೇ ದೇವರು ಎಂಬ ಅಪಾರ್ಥ ಮಾಡಿಕೊಳ್ಳಲು ಅಲ್ಲ. ಏಕೆಂದರೆ ದೇವರು ಎಂದರೆ ಅಸ್ತಿತ್ವ; ವ್ಯಕ್ತಿತ್ವವಲ್ಲ!
ವಾಸ್ತವವಾಗಿ ದೈವತ್ವವನ್ನು ಕುರಿತು ಆಲೋಚಿಸಬೇಕು; ದೇವರನ್ನಲ್ಲ. ಕಾರಣ ಮನುಷ್ಯನ ಇತಿಹಾಸ ಮತ್ತು ಪುರಾಣಗಳು ದೇವರನ್ನು ಒಂದೋ ನಮ್ಮ ಮಟ್ಟಕ್ಕಿಳಿಸಿ ಮಲಿನ ಮಾಡಿವೆ; ಮತ್ತೊಂದೋ ಹಾಡಿ, ಹೊಗಳಿ ಮುಜುಗರ ತರಿಸಿವೆ. ದೇವರನ್ನು ವ್ಯಕ್ತಿ ಅಂತಲೋ ಶಕ್ತಿ ಅಂತಲೋ ನಡೆಸಿದ ವಾದ-ವಾಗ್ವಾದಗಳು ಹಳಿ ತಪ್ಪುತ್ತವೆ. ಮಾನವತ್ವವು ದೈವತ್ವವಾಗುವತ್ತ ಹೊರಟ ಪಯಣವೇ ಈ ಪ್ರಪಂಚದ ಪಡಿಪಾಟಲು.
ಹಾಗೆ ನೋಡಿದರೆ ಆಸ್ತಿಕ ಮತ್ತು ನಾಸ್ತಿಕರಿಬ್ಬರೂ ದೇವರನ್ನು ಧೇನಿಸುತ್ತಾರೆ: ಒಬ್ಬರು ಇದೆಯೆಂದೂ ಇನ್ನೊಬ್ಬರು ಇಲ್ಲವೆಂದೂ! ಎರಡರ ಪರಿಣಾಮವೂ ಒಂದೇ. ದೇವರು ಇಲ್ಲ ಎನ್ನುವಾಗಲೇ ಇರುವುದನ್ನು ಇಲ್ಲ ಎಂದು ವಾದಿಸಿದಂತೆ ಆಗುತ್ತದೆ. ಯಾವುದು ಯಾವಾಗಲೂ ಇರುತ್ತದೋ ಅದನ್ನು ಇಲ್ಲ ಎನ್ನುವುದು ಹೇಗೆ? ಚೀನಾದ ತತ್ತ್ವಜ್ಞಾನಿ ಲಾವೋತ್ಸೆ ಇದನ್ನೇ ಹೀಗೆ ಹೇಳುವರು: ‘ಸತ್ಯ ಎಂದರೆ ಹೇಳಲಾಗದ್ದು; ಹೇಳಿದರೆ ಅದು ಸತ್ಯವಾಗುವುದಿಲ್ಲ!’ ಎಂಥಾ ಮಾತು!! ದೈವತ್ವವೆಂಬುದೊಂದು ಯಾರೂ ಹತ್ತಬಹುದಾದ ಚಾಚಿಟ್ಟ ಏಣಿ. ದೇವರು ಎಂಬುದಾದರೋ ಏಣಿಯನ್ನು ಹತ್ತಿಳಿಯಲು ಹೊರಟ ಸ್ಪರ್ಧಾಕಣ.
-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ಬರೆಹ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು.
ಪಂಜು ತಲೆಬರಹ ಹೊಂದಿರುವ ಈ ಈ ಅಂತರ್ಜಾಲ ತಾಣ ತುಂಬಾ ಇಷ್ಟ ಆಯಿತು ಹೀಗೆ ಕನ್ನಡದ ಎಲ್ಲಾ ರೀತಿಯ ಬರವಣಿಗೆ ಇಲ್ಲಿ ಹೊರಬರಲಿ ಅಂತ ಕೇಳಿ ಕೊಳ್ಳುತ್ತೇನೆ
“ದೈವತ್ವವನ್ನು ಕುರಿತು ಆಲೋಚಿಸಬೇಕು; ದೇವರನ್ನಲ್ಲ” ಮಂಜುರಾಜ್ ಅವರ ಬರಹ ಶ್ರೇಷ್ಠಮಟ್ಟದಲ್ಲಿದೆ. ಬಹಳ ಇಷ್ಟವಾಯಿತು.
ಧನ್ಯವಾದಗಳು ಸರ್