ದೇಹವೆ ದೇವಾಲಯ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ದೇವಾಲಯ ಎಂಬುದು ನೆಮ್ಮದಿಯ ತಾಣ. ದೇವರು ಎಂಬುದು ಒಳ್ಳೆಯದರ ಸಂಕೇತ! ಮಾನವರು ದೇವರನ್ನು ಪೂಜಿಸುವುದು ಆರಾಧಿಸುವುದು ಎಂದರೆ ಒಳ್ಳೆಯತನದ ಆರಾಧನೆ ಎಂದು ಅರ್ಥ ! ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಂದರೆ ಒಳ್ಳೆಯದನ್ನು ಬಯಸುತ್ತಿದ್ದಾರೆಂದು ಅರ್ಥ. ಒಳ್ಳೆಯತನ ಸದಾ ಮಾನವರಿಗೆ ನೆಮ್ಮದಿ ನೀಡುತ್ತದೆ! ಅದಕ್ಕಾಗಿ ಅನೇಕರು ಅದನ್ನು ಅರಸಿ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಅದನ್ನು ಕೆಲವರು ಅರ್ಥೈಸುವಲ್ಲಿ ಆಚರಿಸುವಲ್ಲಿ ಪ್ರಮಾದಗಳಾಗಲು ಕಾರಣರಾಗಿರುವುದರಿಂದ ರೌದ್ರ ಭೀಭತ್ಸ ವಾತಾವರಣ ಉಂಟಾಗುತ್ತಿದೆ. ನೆಮ್ಮದಿಯ ತಾಣವಾಗಬೇಕಾದವು ನೆಮ್ಮದಿಯ ಕದಡಲು ಕಾರಣವಾಗುತ್ತಿವೆ. ಕೆಲವು ಮಹನಿಯರು ದೇಹವೆ ದೇವಾಲಯವಾಗಬೇಕೆಂದಿರುವರು. ಅದು ಇಡೀ ದೇಹವೇ ಶುದ್ಧ, ಪವಿತ್ರವಾಗುವ ಸಂಕೇತ.

ಹರಿಗೆ ಎಂದು ಗುಡಿಯನೊಂದ
ಕಟ್ಟುತಿರವೆನು
ದೀನಗಿಂತ ದೇವ ಬಡವ–
ನೆಂದು ಬಗೆವೆನು
…………..
………
……….
ದೇವಗೆದೆಯ ಗುಡಿಲೆ ಸಾಕು ನಲಿದು ನೆಲೆಸಲು.

ಪು ತಿ ನರಸಿಂಹಾಚಾರ್ ಹೀಗೆ ಸರಳವಾಗಿ ನಗುತ್ತಾ ನಲಿಯುತ್ತಾ ಗುಡಿ ಕಟ್ಟುವುದರ ಬಗ್ಗೆ ಬರೆಯುತ್ತಾರೆ. ವಿಶ್ವವೇ ವಿಷ್ಣುವಿನ ಸದನವಾಗಿದೆ. ಅದರೆ ಮಾನವ ಮಾತ್ರ ಬಡವನಿಗಿಂತ ಹರಿಯೇ ಬಡವನೆಂಬ ಭಾವನೆಯಲಿ ಅವನಿಗೆ ಇರಲು ನೆಲೆಯಿಲ್ಲವೆಂದು ಭಾವಿಸಿ ನೆಲದಮೇಲೊಂದು ಗುಡಿಯನ್ನು ಕಟ್ಟಿಕೊಡುತ್ತಿದ್ದಾನೆ. ನಮಗೆಲ್ಲ ಆಶ್ರಯನೀಡಿದ ವಿಶ್ವವನ್ನು ಸೃಜಿಸಿದ ವಿಷ್ಣುವನ್ನೇ ಬಡವನೆನ್ನುವ ನಾವು ದಡ್ಡರಲ್ಲವೆ? ದೇವರಿಗೆ ಚೇತನರಹಿತ ಕಲ್ಲು ಮಣ್ಣುಗಳಿಂದ ನೆಲದಮೇಲೆ ಗುಡಿಕಟ್ಟಿಸುವವರ ಕಂಡು ಹೊರಗೆ ಎಲ್ಲೋ ಗುಡಿ ಕಟ್ಟಿಸುವುದಕ್ಕಿಂತ ಎದೆಯಗುಡಿ ಸಾಕಲ್ಲವೆ? ಎನ್ನವರು ಕವಿ. ಎದೆಯ ಗುಡಿ ವಿಶ್ವವ್ಯಾಪಿಯಾದ ಬೃಹದ್ ಗಾತ್ರನಾದ ಭಗವಂತ ನೆಲೆಸಲು ಸಾಕಾಗದು ಎಂದು ನೆಲದಮೇಲೆ ಬೃಹತ್ ಗುಡಿಗಳ ಕಟ್ಟಿಸುತ್ತಿರಬಹುದು. ಅದಕ್ಕಿಂತ ಸಚೇತನವಾದ ತನ್ನ ದೇಹವನ್ನು ಗುಡಿಯಾಗಿಸುವುದರಿಂದ ವಿಷ್ಣು ತನ್ನ ಹತ್ತಿರವೇ ಇದ್ದಂತೆ ಆಗುತ್ತದೆ. ಇದರಿಂದ ಮಾನವ ಒಳ್ಳೆಯ ಗುಣಗಳ ಗಣಿ ಆಗುವನು! ಆದ್ದರಿಂದ ಎದೆಯ ಗುಡಿಯಲ್ಲೇ ಅವನು ನಲಿಯಲು, ನೆಲೆಸಲು ಸಾಕು ಎಂದಿರುವರು. ದೇವರು ನೆಲೆಸಲು ಎದೆಯೆ ಉತ್ತಮ ಎಂಬ ಭಾವನೆ ಒಳ್ಳೆಯ ಗುಣಗಳಿಗೆ ಎದೆಯ ನೆಲೆ ಉತ್ತಮ ಎಂಬ ಭಾವ! ಏಕೆಂದರೆ ಎದೆಯೆ ಪವಿತ್ರ ಮತ್ತು ಉತ್ತಮಾಂಗ ಎಂದು ಭಾವವಿಸಲಾಗಿದೆ. ಹೃದಯ ಸಹ ಎದೆಯಲ್ಲೇ ಇದೆ. ಎದೆ ಎಂಬುದನ್ನು ಹೃದಯ ಎಂಬ ಅರ್ಥದಲ್ಲೇ ಹೇಳಿರುವುದು. ಆಂಜನೇಯ ಎದೆ ಸೀಳಿ ತನ್ನ ಆರಾಧ್ಯ ದೈವವ ತೋರಿಸುವುದು ಈ ದೃಷ್ಟಿಯಿಂದ ಎದೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಜತೆಗೆ ದೇವರು ನೆಲೆಸಲು ಎದೆಯಲ್ಲಿ ಸ್ಥಾನ ಕಲ್ಪಿಸುವುದರಿಂದ ಎದೆಯನ್ನು ಹಿಂದಿಗಿಂತ ಶುದ್ಧವಾಗಿಟ್ಟುಕೊಳ್ಳುವ ಅವಶ್ಯಕತೆ ಬೀಳುತ್ತದೆ. ಮಾನವ ಕಾಯಾ ವಾಚಾ ಮನಸಾ ಶುದ್ಧನಾಗುತ್ತಾನೆ! ಪ್ರಯುಕ್ತ ಎದೆಯಲ್ಲಿಯೇ ದೇವರಿಗೆ ಸ್ಥಾನ ನೀಡಿರಿ ಎಂದಿರುವುದು ಅರ್ಥಪೂರ್ಣವಾಗಿದೆ. .. ಚಿಕ್ಕದೆನ್ನ ಹೃದಯ; ಏನು ಹೊಲಸದು! ಅಲ್ಲೆ ನೆಲೆಯ ಬೇಡುವವನ ದೈನವೆಂಥದು? ಎಂದು ಹೃದಯ ಹೊಲಸಾದರೂ ಭಗವಂತ ತಾನು ನೆಲೆಸಲು ಅದನ್ನೇ ಬೇಡುವನು ಎಂದಿರುವರು!

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡುವೆ ಬಡವನಯ್ಯ!
ಎನ್ನ ಕಾಲೇ ಕಂಭ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮ ದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ!

‘ಉಳ್ಳವರು’ ಶಿವಾಲಯವ ಮಾಡುವರು ಎಂದರೆ ಭಕ್ತಿ, ಶಕ್ತಿ, ಸಂಪತ್ತು, ಮನಸ್ಸು ಇರುವವರು ದೇವಾಲಯ ಕಟ್ಟಿಸುತ್ತಾರೆ ಎಂಬುದು ಅದರ ಅರ್ಥ. ಕಲ್ಲು ಮಣ್ಣು ಮರಳು ಇಟ್ಟಿಗೆ, ಮರ ಮುಂತಾದವು ಗುಡಿ ಕಟ್ಟಲು ಅವಶ್ಯ. ಅದಕ್ಕೆ ಹಣ ಅಗತ್ಯ. ನಾನು ಬಡವನಾದ ಕಾರಣ ಅವುಗಳನ್ನು ಕೊಂಡು ತಂದು ಗುಡಿ ಕಟ್ಟಲಾಗದು ಏನು ಮಾಡಲಿ? ಅದಕ್ಕೆ ನನ್ನ ದೇಹವೇ ದೇವಾಲಯ … ಎಂದು ಬಸವಣ್ಣ ಹೇಳುತ್ತಾ … ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದಿರುವರು. ಅಂದರೆ ಉಳ್ಳವರು ಕಟ್ಟಿಸುವ ದೇವಾಲಯಗಳು ಸ್ಥಾವರ. ಇದ್ದಲ್ಲೇ ಇರುವಂತಹವು. ಅವು ಚಲನಶೀಲವಲ್ಲದ ಪ್ರಯುಕ್ತ ಇಂದಲ್ಲ ನಾಳೆ ಹಾಳಾಗುತ್ತವೆ! ಜಂಗಮ ಎಂದರೆ ಸದಾ ಚಲಿಸುವ ವಸ್ತು! ನನ್ನದು ದೇಹವೆಂಬ ದೇವಾಲಯ. ಅದು ಸದಾ ಚಲನಶೀಲ. ಆದ್ದರಿಂದ ಅದು ನಾಶವಾಗದು! ಒಂದು ಕಬ್ಬಿಣದ ಯಂತ್ರ ಬಳಸದಿದ್ದರೆ ತುಕ್ಕ ಹಿಡಿದು ಬೇಗ ಹಾಳಾಗುವುದು! ಬಳಸಿದರೆ ಬಹಳ ವರುಷ ಬಾಳಿಕೆ ಬರುವುದಲ್ಲದೆ ಬದುಕಿಗೆ ಅಸರೆಯೂ ಅಗುವುದು. ಬಳಸದಿರುವುದು ಜಡ. ಬಳಸುತ್ತಿರುವುದು ಚಲನಶೀಲ! ಈ ದೃ‌‌ಷ್ಟಿಯಿಂದ ಅಳಿವಿಲ್ಲ! ಪ್ರಯುಕ್ತ ದೇಹವೆಂಬ ದೇವಾಲಯವೇ ಉಳ್ಳವರು ಕಲ್ಲು ಮಣ್ಣಿನಿಂದ ಕಟ್ಟಿಸುವ ದೇವಾಲಯಕ್ಕಿಂತ ಮಿಗಿಲೆನಿಸುತ್ತದೆಯಲ್ಲವೆ? ಇಲ್ಲಿ ತನ್ನನ್ನು ತಾನು ಬಡವ ಎಂದುಕೊಂಡ ವಾಚ್ಯಾರ್ಥ ನನ್ನಂತಹ ಸಿರಿವಂತ ಯಾರೂ ಇಲ್ಲ ಎಂಬ ಧ್ವನಿಯನ್ನು ಉಂಟುಮಾಡುವುದರಿಂದ ದೇಹವೆಂಬ ದೇವಾಲಯವೇ ಶ್ರೇಷ್ಠ ಎಂಬ ಅರ್ಥ ಬರುತ್ತದೆ. ಇವರೂ ಸಹ ದೇಹವೇ ದೇವಾಲಯವಾಗುವುದು ಶ್ರೇಷ್ಠ ಎಂದಂತಾಯಿತಲ್ಲವೆ?

ಕಾಲೇ ಕಂಭಗಳಾದವೆನ್ನ!
ದೇಹವೆ ದೇಗುಲವಾಯಿತ್ತಯ್ಯ!
ಎನ್ನ ನಾಲಗೆಯೇ ಗಂಟೆ, ಶಿರ ಸುವರ್ಣದ ಕಳಸ ಇದೇನಯ್ಯ? ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯ
ಗುಹೇಶ್ವರ ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ
ಪಲ್ಲಟವಾಗದಂತಿದ್ದೆನಯ್ಯ.

ಈ ಮೇಲಿನ ವಚನದಲ್ಲಿ ಅಲ್ಲಮಪ್ರಭು ಭೂಮಿಯ ಮೇಲೆ ಕಲ್ಲು ಮಣ್ಣುಗಳಿಂದ ಕಟ್ಟಿದ ದೇವಾಲಯದ ಬಗ್ಗೆ ಮಾತನಾಡದೆ ದೇಹವನ್ನು ದೇವಾಲಯಕ್ಕೆ ಹೊಲಿಸುತ್ತಾ ದೇಹವೆಂಬ ದೇವಾಲಯದ ಬಗ್ಗೆ ಮಾತನಾಡಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆ ಬಸವಣ್ಣನವರ ಹೋಲಿಕೆಯನ್ನೇ ಅವರ ದೇವಾಲಯದ ಕಲ್ಪನೆ ಹೋಲುತ್ತದೆ. ಅನೇಕ ವಚನಕಾರರ ವಿವೇಕಿಯಾಗಿಸಿ ಮುಕ್ತಿಯ ಮಾರ್ಗ ತೋರಿಸಿ ಶೂನ್ಯ ಸಿಂಹಾಸನ ಪೀಠವನ್ನು ಅಲಂಕರಿಸಿದ ಗೌರವಕ್ಕೆ ಪಾತ್ರನಾದವನೂ ಜ್ಞಾನಿಯೂ ಆನುಭಾವಿಯೂ ವೈರಾಗ್ಯನಿಧಿಯೂ ಆದ ಅಲ್ಲಮ ಪ್ರಭುದೇವ ಸಹ ದೇಹದ ದೇವಾಲಯ ಮಾಡಿಕೊಂಡಿರುವುದರಿಂದ ಕಲ್ಲು ಮಣ್ಣಿನ ದೇಗುಲಕ್ಕಿಂತಾ ದೇಹದ ದೇವಾಲಯವೇ ಉತ್ತಮ ಎಂದಂತಾಯಿತಲ್ಲವೆ?

ದೇಹದೊಳಗೆ ದೇವಾಲಯವಿದ್ದು
ಮತ್ತೆ ಬೇರೆ ದೇವಾಲಯವೇಕೆ? ಎರಡಕ್ಕೆ ಹೇಳಲಿಲ್ಲಯ್ಯ ಗುಹೇಶ್ವರಾ, ನೀನು ಕಲ್ಲಾದರೆ ನಾನೇನಪ್ಪೆನಯ್ಯ?

ಮತ್ತೊಂದು ವಚನದಲ್ಲಿ ಸಹ ದೇಹದ ಒಳಗೇ ದೇವಾಲಯವಿರಲು ಬೇರೆ ಅಂದರೆ ಕಲ್ಲು ಮಣ್ಣುಗಳಿಂದ ಕಟ್ಟಿದ ದೇವಾಲಯವು ಏಕೆ? ಎಂದು ಪ್ರಶ್ನಿಸುತ್ತಾನೆ. ಕಲ್ಲಿನ ದೇವಾಲಯ ಬೇಕು ಎನ್ನುವುದಾದರೆ ನೀನು ಕಲ್ಲಾಗಿರವೆ. ನೀನು ಕಲ್ಲಾದರೆ ನಾನೇನಾಗಬೇಕಾಗುತ್ತದೆ? ಕಲ್ಲಾಗುವುದೆಂದರೆ ನಿಷ್ಕರುಣನಾಗುವುದು, ಕಠಿಣ ಹೃದಯಿಯಾಗುವುದು ನಿರ್ಜೀವಿಯಾಗುವುದು. ನೀನೇ ಹಾಗೆ ಆದಾಗ ನಾನೇನಾಗಲಿ? ಎಂದು ಪ್ರಶ್ನಿಸುತ್ತಾನೆ. ಇವರ ವಚನಗಳನ್ನು ಹೀಗೇ ಎಂದು ಅರ್ಥೈಸುವುದು ಸುಲಬವಲ್ಲ! ಇಲ್ಲೂ ದೇಹದ ದೇವಾಲಯವೆ ಮೇಲೆಂಬ ಭಾವ ಮೆರೆದಿದ್ದಾನೆ.

ಕಲ್ಲ ಮನೆಯಮಾಡಿ, ಕಲ್ಲದೇವರ ಮಾಡಿ
ಕಲ್ಲು ಕಲ್ಲ ಮೇಲೆ ಕೆಡೆದರೆ, ದೇವರೆತ್ತ ಹೋದರೋ?
ಲಿಂಗ ಪ್ರತಿಷ್ಟೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರ!

ಮೇಲಿನ ಮತ್ತೊಂದು ವಚನದಲ್ಲಿ ಕಲ್ಲಿನ ಗುಡಿ ಕಟ್ಟಿ ಕಲ್ಲಿನ ದೇವರ ಮಾಡಿದವರು ಅತ್ಯಂತ ಕೆಟ್ಟ ನರಕ ಹೊಂದುವರು ಎಂದಿದ್ದಾರೆ. ಇವರೆಲ್ಲರೂ ದೇವರ ಅಸ್ಥಿತ್ವದ ಬಗ್ಗೆ ತಮಗೆ ತಿಳಿದಂತೆ ವರ್ಣಿಸಿದ್ದರೂ ದೇಹದ ಹೊರತು ಬೇರೆ ಆಲಯ ಭಗವಂತನಿಗೆ ಅವಶ್ಯವಿಲ್ಲ ಎಂದಿದ್ದಾರೆ. ಭಗವಂತ ಎಲ್ಲೋ ಇದ್ದಾನೆ ಎಂಬುದಕ್ಕಿಂತ , ಸರ್ವಾಂತರ್ಯಾಮಿಯಾಗಿರುವ ಭಗವಂತನನ್ನು ನಾಲ್ಕು ಗೋಡೆಯ ಮಧ್ಯ ಕಟ್ಟಿ ದಿಗ್ಬಂಧನ ಮಾಡುವುದಕ್ಕಿಂತಾ ಭಗವಂತ ತನ್ನ ದೇಹದಲ್ಲೇ ನೆಲೆಸಿದ್ದಾನೆನ್ನುವುದರಿಂದ ಭಗವಂತ ನೆಲೆಸಿರುವ ದೇಹವನ್ನು, ಮನಸ್ಸನ್ನು ಶುಚಿಯಾಗಿಟ್ಟುಕೊಂಡು ಪಾಪಕರ್ಮಗಳಿಗೆ ಎಡೆ ಮಾಡಿಕೊಡದೆ ಉತ್ತಮವಾದುದನೇ ನುಡಿಯಲು ನಡೆಯಲು ಮಾಡಲು ಮಾನವರು ಮುಂದಾಗುವರು ಎಂಬ ಸದುದ್ಧೇಶವೂ ಇದರಲ್ಲಿ ಇದ್ದಿರಬಹುದು.

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣ!! ಪಲ್ಲ !!

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಅಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣ !! ಅನು ಪಲ್ಲವಿ !!

ಈ ಮೇಲಿನದು ಸಂತ ಶಿಶುನಾಳ ಷರಿಫರ ಪ್ರಸಿದ್ದ ತತ್ವಪದ. ಇವರೂ ಸಹ ದೇಹವೇ ಗುಡಿ ಎಂದಿರುವುದು ಪಲ್ಲವಿಯಿಂದ ತಿಳಿಯಬಹುದು. ಜತೆಗೆ ಭಗವಂತ ದೇಹ ಎಂಬ ಗುಡಿಯೊಳಗೆ ಹೇಗೆದ್ದಾನೆಂದು ವರ್ಣಿಸುವುದು ತುಂಬ ಸೊಗಸು! ” … ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ … ” ಎಂದಿರುವುದು ಅರ್ಥಗರ್ಭಿತ. ಈ ಭೂಮಿಗೇ ಒಡೆಯನಾದವ ಭೂಮಿಗಿಂತಾ ಶಕ್ತಿವಂತನೂ, ಅದ್ಬುತ ಕಾಯನೂ ಆಗಿರಲೇಬೇಕಲ್ಲವೆ? ಅಂತಹ ಭಗವಂತ ಈ ಮಾನವನ ಪುಟ್ಟ ದೇಹದೊಳಗೆ ಅಡಗಿ ಸಂತೋಷವಾಗಿರಲು ಹೇಗೆ ಸಾಧ್ಯ? ಆದರೂ ತುಂಬಾ ಸಂತಸದಿಂದಿರುವ ಅಚ್ಚರಿಯನ್ನು ನೋಡಿ ಎಂದು ವರ್ಣಿಸುವರು.

ದೇವಾಲಯ, ಚರ್ಚುಗಳನ್ನು ದೇವರ ಪ್ರತಿಷ್ಠಾಪಿಸಲು, ಭಕ್ತಿಯಿಂದ ಪೂಜಿಸಲು, ಆರಾಧಿಸಲು ಪ್ರಾರ್ಥಿಸಲು ಕಟ್ಟುತ್ತಾರೆ. ಮಸೀದಿಗಳ ಭಗವಂತನ ಪ್ರಾರ್ಥಿಸಲು ನಿರ್ಮಿಸುವರು. ‘ ದೇವರು ‘ ಎಂಬುದೇ ಒಳ್ಳೆಯತನದ ಸಂಕೇತ. ಸದಾ ಒಳ್ಳೆಯ ನಡೆ – ನುಡಿ ತೋರಿ ಸತ್ಕರ್ಮಗಳ ಮಾಡುವುದೇ ಪೂಜೆ, ಅಭಿಷೇಕ, ಆರಾಧನೆ! ಸತ್ಕರ್ಮಗಳಿಂದ ಸತ್ಫಲಗಳು, ಸಮಾಜಕ್ಕೆ ಶಾಂತಿ, ಆತ್ಮೋದ್ಧಾರ! ಏನಾಗದಿದ್ದರೂ ಆತ್ಮಕ್ಕೆ ಶಾಂತಿ. ಅದರಿಂದ ಆರೋಗ್ಯ!

ದೇವಾಲಯ, ಮಸೀದಿ, ಚರ್ಚುಗಳೆಂದರೆ ದೇವರು ನೆಲೆಸಿರುವ ಪವಿತ್ರ ಸ್ಥಳಗಳು. ಸದ್ಭಕ್ತಿಯ ಆಗರಗಳು! ಒಳ್ಳೆಯದರ, ಪವಿತ್ರತೆಯ ಸಂಕೇತಗಳು! ಜನ ಭಕ್ತಿ ಭಾವದಿಂದ ಭಗವಂತನಿಗೆ ಪ್ರೀತಿಯ ವಸ್ತುಗಳ ಅರ್ಪಿಸಿ ಭಕ್ತಿ ತೋರಲು ಸದಾ ಬಂದು ಹೋಗುವುದರಿಂದ ಅಲ್ಲಿ ನಿತ್ಯವೂ ಕಸ ಬೀಳುತ್ತಿರತ್ತದೆ! ಭಕ್ತರು ಮಾಡಿದ ಕಸವ ಗುಡಿಯ ಕೆಲಸಗಾರರು ಗುಡಿಸಬೇಕಾಗುವುದು. ಅಂದರೆ ಅಲ್ಲಿ ಕಸ ಮಾಡುವವರೇ ಬೇರೆ, ಗುಡಿಸುವವರೇ ಬೇರೆ! ಅಪವಿತ್ರವಾದವರೂ, ಕೊಲೆಗಡುಕರು, ಮೋಸ, ಭ್ರಷ್ಟಾಚಾರದಲ್ಲಿ ಮಿಂದವರೂ ಬಂದೂ ಬಂದೂ ಗುಡಿಯ ತುಂಬ ನಿತ್ಯ ಅಪವಿತ್ರವಾದ ಕಸ ಹರಡುತ್ತಿರುತ್ತಾರೆ. ಮತ್ತಾರೋ ಗುಡಿಸಬೇಕಾಗಿರುತ್ತದೆ! ಇದು ಎಷ್ಟು ಸರಿ? ದೇವಾಲಯವಾದರೂ ಕೆಲವರು ಕಸ ಹರಡುವುದ ಬಿಡುವುದಿಲ್ಲ! ಏಕೆಂದರೆ ತಾವೇನೂ ಗುಡಿಸುವುದಿಲ್ಲ ಎಂಬ ಭಾವನೆಯೋ ಇದೇನು ತನ್ನದಷ್ಟೇ ಅಲ್ಲ ಎಂಬ ಭಾವನೆಯೋ ಇದಕ್ಕೆ ಕಾರಣ ಇರಬಹುದೇನೋ? ದೇಹವೇ ದೇವಾಲಯವಾದಾಗ ಪ್ರತಿಯೊಬ್ಬರೂ ದೇವರಿಗೆ ದೇಹದಲ್ಲಿ ಸ್ಥಾನ ಕೊಡಬೇಕಾಗಿರುತ್ತದೆ. ದೇವರನ್ನು ಪವಿತ್ರವಾದ ಜಾಗದಲ್ಲಿ ಪ್ರತಿಷ್ಠಾಪಿಸಬೇಕಾಗಿರುವುದರಿಂದ ದೇಹಧಾರಿ ದೇಹವನ್ನಷ್ಟೇ ಅಲ್ಲ ಮನಸ್ಸನ್ನೂ ಶುದ್ದವಾಗಿಟ್ಟುಕೊಳ್ಳಬೇಕಾಗುತ್ತದೆ! ದೇಹ ಮತ್ತು ಮನಸ್ಸಿನಲ್ಲಿ ಕಸ ಹರಡಿದರೆ ತಾನೇ ಗುಡಿಸಬೇಕಾಗುತ್ತದೆಂದು ಕಸ ಹರಡಲಾರ! ಕಸ ಮಾಡಿದರೆ ಭಗವಂತ ನೆಲೆಸಲಾರನೆಂದು, ಭಗವಂತ ತನ್ನನ್ನು ಮೆಚ್ಚಲಾರನೆಂದು ಕಸ ಮಾಡಿಕೊಳ್ಳಲಾರ! ದೇಹವನ್ನು ನೀರು ಸುರಿದು ಸೋಪು ಹಚ್ಚಿ ತೊಳೆದು ಶುಚಿಗೊಳಿಸಬಹುದು. ಮನಸ್ಸನ್ನು ಮೃದು ಮಾತೆಂಬ ನೀರಿನಿಂದ, ಸನ್ನಡೆಯೆಂಬ ಸೋಪಿನಿಂದ ನೀತಿಯ ಪೊರಕೆಯಿಂದ ಶುಚಿಗೊಳಿಸಬೇಕಾಗುತ್ತದೆ. ಯಾರೋ ಮಾಡಿದ ಕಸ ಗುಡಿಸಲು ಬೇಸರವಾಗಬಹುದು. ತಾನೆ ಮಾಡಿದ ಕಸ ಗುಡಿಸಲು ಬೇಸರ ಮಾಡಿಕೊಳ್ಳಲಾರ! ತಾನೇ ಗುಡಿಸಬೇಕಾಗುವುದೆಂದು, ಭಗವಂತ ತನ್ನನ್ನು ಮೆಚ್ಚನೆಂದು ಕಸವನ್ನೆ ಮಾಡಲಾರ! ಅಂದರೆ ಕಾಯಾ ವಾಚಾ ಮನಸಾ ಪರಿಶುದ್ಧನಾಗಿರಲು ಬಯಸಬೇಕಾಗುತ್ತದೆ! ಇದರಿಂದ ಮನಸ್ಸಿಗೆ ನೆಮ್ಮದಿ ಆರೋಗ್ಯ! ದೇವರು ನನ್ನಲ್ಲಿಲ್ಲ ಎಲ್ಲೋ ಗುಡಿಯಲ್ಲಿ ಇದ್ದಾನೆಂದರೆ ಅನೀತಿಯುತ ಕೆಲಸ ಮಾಡಿಯಾನು. ತನ್ನಲ್ಲೇ ನೆಲೆಸಿದ್ದಾನೆಂದರೆ ಅದಾಗದು! ಆದ್ದರಿಂದ ದೇಹವೆ ದೇವಾಲಯವಾಗುವುದು ಉತ್ತಮವಲ್ಲವೆ? ಕಿಡಿಗೇಡಿಗಳು ದೇವರುಗಳು ಮಸೀದಿ ಚರ್ಚುಗಳಿಗೆ ಅವಮಾನ ಮಾಡಿದರೆಂದು ಧರ್ಮ ಮತ ಕಲಹಗಳು ವಿವಾದಗಳು ಹಿಂಸೆ ಗಲಬೆ ಯುದ್ದಗಳಾಗುತ್ತಿರುವುದು ವಿಪರ್ಯಾಸ! ಅಯ್ಯೋಧ್ಯೆ, ಇಸ್ರೇಲ್ ಸಂಕೇತಗಳು ಮಾತ್ರ! ಭಗವಂತ ತನ್ನ ದೇಹದಲ್ಲೇ ಅಡಗಿರುವ, ದೇವನೊಬ್ಬ ನಾಮ ಹಲವು ಎಂದುಕೊಂಡಾಗ ಇವು ಕಡಿಮೆಯಾದಾವು! ಮಾನವನ ಸಂಖ್ಯೆ ಇದೇ ಗತಿಯಲ್ಲಿ ಏರುತ್ತಿದ್ದರೆ ಎಲ್ಲರಿಗೂ ಸೂರು, ಅವಶ್ಯಕಗಳ ಒದಗಿಸುವುದೇ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಬಹುದು! ಅಗ ಇವೆಲ್ಲಾ ಅವಶ್ಯಕತೆಗೆ ತಕ್ಕಂತೆ ಪರಿವರ್ತಿಸುವ ಕಾಲ ಬಂದರೂ ಅಚ್ಚರಿಯಿಲ್ಲ! ಆಗ ಈ ಯಾವ ಕಲಹಗಳೂ ಎದ್ದು ಸದ್ದು ಮಾಡಲು ಸಾಧ್ಯವಿಲ್ಲ! ನಾವು ಬೇಡವೆಂದರೂ ದೇಹವೇ ದೇವಾಲಯವಾಗುವುದು! ಆದರೆ ಆತ್ಮ ಪರಿಶುದ್ದವಾಗಬೇಕಷ್ಟೆ. ಮನಸ್ಸು ಸದಾ ಒಳ್ಳೆಯತನಕ್ಕೆ ಮಿಡಿಯಬೇಕು! ಎಲ್ಲರ ಮನಸ್ಸೂ ಒಳ್ಳೆಯತನಕ್ಕೆ ಮಿಡಿಯಲಿ. ಅದೇ ದೈವ!

-ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x