ದೇಹವೆಂಬೋ ಮೋಟುಗೋಡೆಯ ಮೀರಿ..: ಮೌಲ್ಯ ಎಂ.

                                                      

ಕವಿತೆ ಆತ್ಮದ ನಾದ. ಅದ್ಯಾಕೆ ದೇಹದ ಮೇಲೆಯೇ ಉರುಳಿಸುತ್ತಾರೋ.? ಅಂಗಾಂಗಕ್ಕೂ, ಅಂತರಂಗಕ್ಕೂ ಪರದೆ ತೀರ ಕಲಸಿ ಹೋಗುವಷ್ಟು ತೆಳುವಾ..? ಯಾಕೆ ಈವತ್ತಿನ ಪದ್ಯಗಳು ಕೇವಲ Anotomical description ಗಳಾಗುತ್ತಿವೆ? ಲಜ್ಜೆ ಈವತ್ತಿನ ದಿನಮಾನಕೆ ಒಂದು ಅನಗತ್ಯ ಸಂಗತಿಯೇ? ಅಥವಾ ಅದೊಂದು ‘ಸಂಗತಿ’ಯೇ ಅಲ್ಲವೇ.? ಇದನ್ನು ನಾನು ‘sensuous rupture’ ಎಂದು ಹೆಸರಿಸುತ್ತೇನೆ. ಹೊಸತನ್ನು ಆವಿಷ್ಕರಿಸಬೇಕು, ಭಿನ್ನ ನೆಲೆಯಲ್ಲಿ, ಸ್ಥರದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುಬೇಕೆನ್ನುವ  ಅಧಮ್ಯ ತುಡಿತವೇ ಇದೆಲ್ಲ ಸರ್ಕಸ್ಸುಗಳಿಗೆ  ನಾಂದಿ ಹಾಡುತ್ತಿದೆಯೇ..? what actually is bothering us..? ಹಸೀ ಹಸೀ ಖಾಸಗೀ ಬದುಕನ್ನು ಮುಕ್ತವಾಗಿ, ಎಳೆ ಎಳೆಯಾಗಿ ಬರೆದಾಕ್ಷಣಕ್ಕೆ ನಾವು ಪ್ರಾಮಾಣಿಕ ಬರಹಗಾರರಾ?. ಇರಬಹುದು, ಅಂಥ ಕವಿತೆಗಳೋ, ಕಥೆಗಳೊ ಅವರವರ ಬದುಕಿನ ಮಟ್ಟಕ್ಕೆ, ಅವರು ಕಂಡುಂಡ ವಾಸ್ಥವದ ಮಟ್ಟಕ್ಕೆ. ಆದರೆ ಆ ಮೂಲಕ  ಅದೇ ಘಳಿಗೆ ಬರಹಗಾರನಾದವನು ಒಂದು ಆರೋಗ್ಯಕರ ಸಮಾಜ ಕಟ್ಟುವ ದೊಡ್ಡ ಜವಾಬ್ದಾರಿಯಿಂದ ಪ್ರಾಮಾಣಿಕತೆಯ ಹೆಸರಿನಲ್ಲಿ ನುಣುಚಿಕೊಳುತ್ತಾನೆ. ಇದು ಯಾವ ಘನೋದ್ದೇಶಕ್ಕಾಗಿ ಎಂಬುದು ನನಗಿನ್ನೂ ಸ್ಪಷ್ಟವಿಲ್ಲ.  ಬಹುಶಃ  ಅದು ಹೀಗಿರಬಹುದು: ನಮಗೆ ನಮ್ಮ ಕಾವ್ಯದ ಮೂಲಕ  ಏನನ್ನು ಅಭಿವ್ಯಕ್ತಿಸಲು ಹೊರಟಿದ್ದೇವೆ ಎಂಬುದೇ ಖಚಿತವಿಲ್ಲ. ನಮ್ಮ ಹವಣಿಕೆಗಳು ನಮಗೇ ಸ್ಪಷ್ಟವಿಲ್ಲ. ತೀರಾ ಎಲ್ಲೆಂದರಲ್ಲಿ ಏನೆಂದರೇನನ್ನೋ ‘ಪ್ರಾಮಾಣಿಕವಾಗಿ’ ಅರಹಿಬಿಡುವ ಈ ಟೆಂಡೆನ್ಸಿ ಬಹಳ ಕಾಲ ನಿಲ್ಲುವಂಥದ್ದಲ್ಲದಿದ್ದರೂ ಅದು ತಂದೊಡ್ಡಬಹುದಾದ ಅಪಾಯಗಳು ಸುಲಭದಲಿ ನೀಗಿಸಿಕೊಳ್ಳಬಹುದಾದಂಥದ್ದಲ್ಲವೇನೋ ಎನ್ನುವ ಕಾಳಜಿಯುತ  ಆತಂಕ ಕಾಡುತ್ತದೆ. 

ಯಾಕೆ ನಾವು ದೇಹದ ಬಗ್ಗೆ ಇಷ್ಟು obsess ಆಗ್ತಿದೀವಿ? ಇರಬಹುದು, ಅದು ಬರೆದವನ ವಾಸ್ಥವವೇ ಆಗಿದ್ದರೂ ಅದನ್ನು ಆ ಮಟ್ಟಕ್ಕೆ ವೈಭವೀಕರಿಸಬೇಕಾ..? ಈ ವಿಚಾರದಲ್ಲಿ,  ಹಿರಿಯ ಕವಿ, ಕಿರಿಯ ಕವಿ ಎಂದು ಗೆರೆ ಎಳೆಯುವುದು ಕ್ಲಿಷ್ಟಕರ.  ನೂರಿನ್ನೂರು ಲೈಕ್, ಕಮೆಂಟುಗಳಿಗೆ ಮಾತ್ರವೇ ತೃಪ್ತರಾಗುತ್ತಿದ್ದಾರಾ ಕವಿಗಳು? ಅದೂ ಕೂಡ ಕಡಿಮೇ ಸಮಯದಲ್ಲಿ ದಕ್ಕುವ ಪ್ರಸಿದ್ಧಿಗೋ, ಹೆಚ್ಚು ಓದುಗರನ್ನು ತಲುಪುವ ವೇಗಕ್ಕೋ ಅಂಟಿಕೊಳ್ಳುತ್ತಿರುವ ಜಾಗತೀಕರಣದ ಮನಸ್ಥಿತಿಯೇ? ಯಾವುದೂ ನಿರ್ಣಯಿಸುವಷ್ಟು ಸರಳವಿಲ್ಲ. Sex metaphorಗಳು ಹಿಂದೆಯೂ ಇದ್ದವು. ಆದರೆ ಇಂದು ಕಾವ್ಯದಲ್ಲಿ ಆ metaphoric ಭಾಷೆ ಇಲ್ಲವೇ ಆಗುತ್ತಿವೆಯೇನೋ ಎನ್ನುವಷ್ಟರ ಮಟ್ಟಿಗೆ ಎಲ್ಲವು ವಿವರೀತ ಹಸೀತನಗಳು. ಒಂದು ಕಾಲದಲ್ಲಿ ಅವಾಚ್ಯವೆಂಬುವುದು ಸಿನಿಮಾಗಳಿಗೆ ಮಾತ್ರವೇ ಮೀಸಲಾಗಿದ್ದದ್ದು, ಇಂದು ತೀರ ಸಭ್ಯರು ನೆರೆಯುವಂಥ ಕವಿಘೋಷ್ಠಿ, ಸಮ್ಮೇಳನಗಳವರೆಗೂ ಬಂದು ಕೇಳುಗರಿಗೆ ಇರುಸು ಮುರುಸುಂಟಾಗಿಸಿರುವ ಉಧಾಹರಣೆಗಳು ಕಡಿಮೆ ಸಂಖ್ಯೆಯೇನಿಲ್ಲ. ಕವಿತೆಯ “body” ಯನ್ನು “Human body” ಯಿಂದ ವ್ಯಾಪಿಸುವುದರ ಮುಕೇನ ನಾವು ಏನನ್ನು ಪ್ರತಿಪಾಧಿಸಲು ಸನ್ನಹತರಾಗುತ್ತಿದ್ದೇವೆ? ಕವಿತೆಗಳನ್ನು ಅಂಗಾಂಗಳಿಂದಲೇ ತುಂಬಿಬಿಟ್ಟರೆ, ಅಥವಾ ದೇಹವನ್ನೇ ಹೊದಿಸಿಬಿಟ್ಟರೆ ಕವಿತೆ ಮತ್ತೊಂದು ಮಜ್ಜೆ ಮಾಂಸಗಳ ದೇಹವಾಗುತ್ತದೆಯೇ ವಿನಃ ಕವಿತೆ ತನ್ನ ‘ಪವಿತ್ರ’ ಸ್ಥಿತಿಯಲ್ಲಿ ಉಳಿಯಲಾರದು.  

“Writing is an Existential Function” ಅನ್ನೋ ಮಾತೊಂದಿದೆ. ಅಸ್ತಿತ್ವ ಇಲ್ಲಿ ದೇಹದ್ದೇ ಆಗಬೇಕಿಲ್ಲ. ಕವಿ ದೇಹದಾಚೆಗಿನ ಎಲ್ಲದರ  ಒಳಗಿನ ಅನ್ಯತೆ (ಪರ) ಗಳ ತಳದ  ಸಂಕಟಗಳನ್ನು ಸ್ವಂತದ್ದಾಗಿಸಿಕೊಂಡ  ತುರ್ತಿನ ಸ್ಪುರಿತ ವ್ಯಕ್ತಗಳಾಗಬೇಕಿದೆಯೇ ಹೊರತು ದೇಹಗಳ meticulous ಆದ  ಉದ್ರಿಕ್ತ ವಿವರಣೆಗಳು ಮಾತ್ರವೇ ಅಲ್ಲವವೇನೋ. ದೇಹವೆಂಬೋ ಮೋಟು ಗೋಡೆಯ ಮೀರಲು ಏನೆಲ್ಲವನೂ ಮೀರುವ ವಿವೇಕ ಬೇಕು. ಮತ್ತು ಆ ವಿವೇಕ ಸಾತ್ವಿಕವೂ, ಸಮೂಹಕ್ಕೆ ಘನತೆಯಿಂದಲೇ ಹಿಡಿದ ಕೈಗನ್ನಡಿಯೂ ಆಗಬೇಕಾದ  ಅಗತ್ಯ ಹಿಂದೆಂದಿಗಿಂತಲೂ ಇಂದು ಢಾಳಾಗಿದೆ. ಏಕೆಂದರೆ ನಾವೀಗ ಅಸಂಗತಗಳ ಕಾಲಮಾನದಲ್ಲಿ ಬದುಕುತಿದ್ದೇವೆ. Absurdity ಮಾಡರ್ನ್ ಯುಗದ ಶಾಪ, ಅಥವಾ ನಮ್ಮನ್ನು ನಾವು ಇನ್ನಿಲ್ಲದಷ್ಟು ಹೊಸತನದ ಪ್ರಯೋಗಗಳಿಗೆ ಪ್ರಜ್ಞಾಪೂರಕವಾಗಿ ಒಡ್ಡಿಕೊಳ್ಳುತ್ತಾ, ನಮ್ಮ ನಿಜಗಳಿಗೆ ಯಾವ ಪೂರ್ವ ಸಿದ್ಧತೆ ಇಲ್ಲದೆ ಮುಖಾಮುಖಿಯಾಗುವ, ಬೆದರಿ, ಸೋತು ಎಲ್ಲದರಿಂದ ವಿಮುಖರಾದೆವು ಎಂದು ಉಸಿರು ಬಿಡುವಾಗಲೇ  ವಿಮುಖತೆಗೂ ಬಳಲುವ  ಒಂದು ಬಗೆಯ ನಿಯಮಗಳೇ ಇಲ್ಲದ ಆಟ. ಕೌತುಕಗಳೂ  ಹೆಚ್ಚು ಕಾಲ ಉಳಿಯಲು ಅವಕಾಶವೇ ಇಲ್ಲದಿರುವ ಕಾಲಘಟ್ಟದಲಿ ಅಸಂಗತೆ ಮಾರಣಾಂತಿಕವೇ ಸರಿ. ಹೀಗಿರಲು ಕವಿತೆ, ಕಥೆ ಎಂಬಿತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಒಳಹು ಎಂಬುದು ಕೇವಲ ದೇಹದ ರಸಾಯನಿಕ ಕ್ರಿಯೆ ಮತ್ತು ಅದರ  ಅನುಭವಗಳೇ ಆದಾಗ  ಅಂಥಾ ಬರವಣಿಗೆಗಳು ನಿಜಕ್ಕು ಎಂಥ ಸಮಾಜವನ್ನು ಬಿಂಬಿಸಲು ಇಚ್ಛಿಸುತ್ತಿವೆ ? ತಮ್ಮ ಯಾವ ಅನುಭವಗಳನ್ನು ದಾಟಿಸಲು ತುಡಿಯುತ್ತಿವೆ? ಎನ್ನುವ ಸಂಗತಿಗಳನ್ನು ವಿಮರ್ಶಿಸುವ ಅಗತ್ಯ ಬೀಳುತ್ತದೆ. ಅಲ್ಲದೇ  ಈ ಸಮಾಜದ ಹೊಸ ತಲೆಮಾರಿನ focus ಎತ್ತ  ಇದೆ ಮತ್ತು ಅದರ ನಿಲುವು, ನಂಬಿಕೆಗಳನ್ನು ಒರೆಗೆ ಹಚ್ಚಿ ಒಳ್ಳೆ ಸಾಹಿತ್ಯ, ಗಟ್ಟಿ ಸಾಹಿತ್ಯ ಎಂಬೆಲ್ಲಾ ಶ್ಲಾಘನೆಗಳನ್ನು re-define ಮಾಡುವ ದಿಟ್ಟ ಮಾರ್ಗದ  ಆಯ್ಕೆಯ  ಅನಿವಾರ್ತೆಯನ್ನು  ಕಕ್ಕುಲತೆಯಿಂದಲೇ ಆರಿಸಿಕೊಂಡರೆ ನಾಳೆ ನಮ್ಮ ಮಕ್ಕಳನ್ನು ನಿರಾತಂಕವಾಗಿ ಪುಸ್ತಕ ಪ್ರೀತಿಗೆ ಒಡ್ಡಬಹುದು. ಆ ಮೂಲಕ ಮತ್ತಷ್ಟು ಸುಧಾರಿತ ನಾಳೆಗಳನ್ನು ಕಾಣಬಹುದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Bharathesha
Bharathesha
9 years ago

Sogasagide

prashasti.p
9 years ago

ಮೌಲ್ಯಯುತ ಲೇಖನ ಮೌಲ್ಯ ಅವರೇ !
ಬೆಳಗ್ಗೆ ಎದ್ದಿದ್ದು, ಬ್ರಷ್ ಮಾಡಿದ್ದರಿಂದ ಇನ್ನೆಲ್ಲೋ ಕಂಡ ಹಸಿಬಿಸಿ ದೃಶ್ಯಗಳನ್ನೋ ಖಾಸಗೀ ಭಾವಗಳನ್ನೋ ಕವಿತೆಯಾಗಿ ಕಂಡಾಗ , ಅವಕ್ಕೆ ದಕ್ಕಿದ ನೂರಿನ್ನೂರು ಲೈಕುಗಳ ಕಂಡಾಗ ಕವಿತೆಯಲ್ಲಿರುತ್ತಿದ್ದ ಕಾವ್ಯಗುಣ, ಸೂಚ್ಯತನ ಎಲ್ಲ ಮಾಯವಾಗಿ ಹಸಿಬಿಸಿಗಳ ತೋರಿಕೆಯೇ ಕವಿತೆಯಾಗುತ್ತಿದೆಯೇ ಅನ್ನೋ ಭಾವ ಕಾಡುತ್ತಿತ್ತು.. ವಾಸ್ತವಿಕತೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರ.

 

2
0
Would love your thoughts, please comment.x
()
x