ಅಮರ್ ದೀಪ್ ಅಂಕಣ

ದೇಹವೆಂದರೆ………..: ಅಮರ್ ದೀಪ್ ಪಿ.ಎಸ್.

ಸಮಾಧಿ
****** 
ಮಾಂಸ ಮಣ್ಣಲ್ಲಿ ಕರಗಿ 
ಬಳಿಕ ಬಿಕರಿಯಾಗದೇ
ಉಳಿವ ಸವೆಯದ
ಬಿಡಿ ಮೂಳೆಗಳ
ಮುಚ್ಚಿದ ದುಖಾನು ….

ಒಂದೆರಡು ವರ್ಷಗಳ ಹಿಂದೆ ಈ ಸಾಲುಗಳನ್ನು ಬರೆದಿದ್ದೆ. ಈ ಸಾವು, ಸಮಾಧಿ ಮತ್ತು ಸುಡುಗಾಡು ಅನ್ನುವಾಗೆಲ್ಲಾ ಒಂದು ಬಗೆಯ ಮನಸ್ಥಿತಿಗೆ ಒಳಗಾಗುತ್ತಲೇ ಇರುತ್ತೇನೆ. ನಾವು ಕೆಲವು ಮಾತಿಗೆ ಕೆಟ್ಟ ಬೇಸರ ಮಾಡಿಕೊಂಡು “ಇದೇನ್ ಸುಡುಗಾಡಲೇ” ಅನ್ನುತ್ತಿರುತ್ತೇವೆ.   ಯಾರಾದರೂ ಸತ್ತರೆ ಮಾತ್ರ ಮಣ್ಣು ಮಾಡಲು ನೆನಪಾಗುವ ಸ್ಥಳ.  ಅದು ಬಿಟ್ಟು ಇಷ್ಟ ಪಟ್ಟು ಖುಷಿಯಲ್ಲಿ ಹೋದಂತೆ ಪಾರ್ಕು, ಸಿನೆಮಾ, ಪಬ್ಬಿನಂತಲ್ಲ.  ಇಲ್ಲಾದರೆ, ಒಂದಷ್ಟು ತಾಸುಗಳು ಕಳೆದು ಸಂತೋಷದಿಂದ ಹಿಂತಿರುಗಿ ಬರುವ ನಿರೀಕ್ಷೆ ಇರುತ್ತದೆ.  ಸುಡುಗಾಡು?  ಉಹ್ಞೂಂ… ಚಾನ್ಸೇ ಇಲ್ಲ.. ಮೃತರನ್ನು ಮಣ್ಣು ಮಾಡಿದ ಮೂರನೇ ಮತ್ತು ಹನ್ನೊಂದನೇ ದಿನಕ್ಕೆ ಹೂತಿಟ್ಟ ಜಾಗಕ್ಕೆ ಹೋಗಿ ಬರುತ್ತೇವೆಯೇ ಹೊರತು ಮತ್ತೆ ತಿರುಗಿ ನೋಡುವುದು ಇನ್ಯಾರದೋ ಜೀವ ಹೋದಾಗ ಮಾತ್ರ.  ಅಪ್ಪಿತಪ್ಪಿ ಒಂದೆರಡು ತಿಂಗಳ ನಂತರ ಹೋಗಿ ಈ ಜಾಗದಲ್ಲಿ ನಮ್ಮವರನ್ನು ಹೂತಿಟ್ಟ ಜಾಗ ಅಂದುಕೊಂಡು ನೋಡಿದರೆ, ಅಲ್ಲಾಗಲೇ ಇನ್ಯಾರದೋ ಹೆಣವನ್ನು ನಿನ್ನೆ ಮೊನ್ನೆ ಹೂತಿಟ್ಟ ಗುರುತಿಗೆ ಹೂವು, ಊದುಬತ್ತಿ ಕಾಣುತ್ತವೆ.    ಈಗ ಸಿಟಿಗಳಲ್ಲಿ ವಿದ್ಯುತ್ ಚಿತಾಗಾರಗಳು ಅನಿವಾರ್ಯವಾಗಿವೆ.   ಆದರೆ, ಹಳ್ಳಿಗಳಲ್ಲಿನ್ನು ಅದು ಹತ್ತಿರವಾಗಲು ಕೆಲ ವರ್ಷಗಳೇ ಹಿಡಿಯಬಹುದು.    

ಬದುಕಿದ್ದಾಗ ನಾವು  ಮಂದಿರ, ಮಸೀದಿ, ಚರ್ಚು, ಸಮಾರಂಭಗಳಿಗೆ ಸಮುದಾಯ ಭವನ, ಪಾರ್ಕು, ಥಿಯೇಟರ್, ರಂಗಮಂದಿರ ಮನೆ, ಮಳಿಗೆ ಎಲ್ಲವನ್ನು ಸಾಲವಾದರೂ ಸರಿ, ದೇಣಿಗೆ ಪಡೆದಾದರೂ ಸರಿ ಉತ್ಸುಕವಾಗಿ ಕಟ್ಟಿಸಿ “ದೊಡ್ಡವರಿಂದ” ಉದ್ಘಾಟನೆಯನ್ನೂ ಮಾಡಿಸುತ್ತೇವೆ.  ಚೆಂದವಾಗಿ ಹೆಚ್ಚೆಚ್ಚು ಅಭಿವೃದ್ಧಿಗಳ ಕುರಿತು ಮಾತನಾಡುತ್ತೇವೆ. ವಾರ್ಷಿಕೋತ್ಸವಗಳನ್ನು ಆಚರಿಸಿಕೊಳ್ಳುತ್ತೇವೆ.  ಸಂಭ್ರಮ ಪಡುತ್ತೇವೆ. ಎಲ್ಲಾ ಸರಿ.   ಆದರೆ, ಈ ಸಾವು ಬಂದರೆ ಮಾತ್ರ ಸಹಿಸಿಕೊಳ್ಳು ಸ್ವಲ್ಪ ಕಷ್ಟವಾಗುತ್ತದೆ.  ಈಗಿದ್ದ, ಆಗಲೇ ಎದ್ದು ಹೋದ ಎನ್ನುವಂತೆ ಸಾವು ಬಂದರೆ ಆಘಾತವಾಗುವುದೂ ಸಹಜವೇ.  ಸಾವಿನ ನಂತರ ಉಳಿದವರು ಟೆನ್ಸ್ ಆಗಿ ಜಾತಿಗನುಗುಣವಾಗಿ, ಧರ್ಮಕ್ಕನುಗುಣವಾಗಿ, ಮೌಲ್ವಿ, ಪಾದ್ರಿ, ಜಂಗಮರನ್ನು ಕರೆಸಿ ಸಂಪ್ರದಾಯವೆನ್ನುವಂತೆ ಪ್ರಾರ್ಥನೆ ಇತ್ಯಾದಿ ಎಲ್ಲಾ ಮುಗಿದ ನಂತರ ಮಣ್ಣು ಮಾಡುವುದು, ಸುಡುವುದು  ನಡೆಯುತ್ತೆ.  ಈ ಮಧ್ಯೆ ದು:ಖದ ಕಣ್ಣೀರು ಎಲ್ಲರ ಮುಖವನ್ನು ತೇವಗೊಳಿಸಿರುತ್ತದೆ. 

ವರ್ಷಗಳಿಂದ  ಸ್ಮಶಾನಗಳಲ್ಲಿ ಮೃತರನ್ನು ಹೂತ ಸ್ಥಳದಲ್ಲಿ ಅವರವರ  ಸಂಭಂಧಿಕರು ಸಮಾಧಿ ಕಟ್ಟಿಸಿ ಮೇಲೆ ಹೆಸರು ಕೆತ್ತಿಸಿರುವುದನ್ನು ಕಾಣುತ್ತೇವೆ.  ಆ ಜಾಗದಲ್ಲಿ ಮತ್ತೊಬ್ಬರ ಕಳೇಬರ ಹೂಳಲೂ ಆಗುವುದಿಲ್ಲ.  ಮನೆಗೊಂದರಂತೆ ಈ ರೀತಿ ಮಾಡಿದರೆ ಹೂಳಲು ಜಾಗವೂ ಸಿಗುವುದಿಲ್ಲ.  ಮೊದಲಾದರೆ, ಸ್ಮಶಾನ ತಲುಪಲು ಊರ ಹೊರಗೆ ಕಿಲೋಮೀಟರ್ ಗಳುದ್ದ ದಾಟಬೇಕಿತ್ತು.   ಆಧುನಿಕ ಬದುಕಿನ  ಮನುಷ್ಯನ ಜರೂರತ್ತುಗಳಿಗೆ ಊರು ಸಾಲದಾಗಿ, ಹೊಲ ಗದ್ದೆ ದಾಟಿ ಸುಡುಗಾಡೂ ಕೂಡ ದೂರವಿಲ್ಲ.  ಸುತ್ತಲೂ ಮನೆಗಳು, ಪಕ್ಕದಲ್ಲೇ ದುಡಿದು ತಿನ್ನುವ ಕೂಲಿಗಳು, ರೈತರು, ಸ್ಮಶಾನಕ್ಕೆ ಅಂಟಿಕೊಂಡಂತಿರುವ ಮನೆಗಳ ಹಿತ್ತಲಲ್ಲಿ ಮುಸುರೆ ತಿಕ್ಕುವ ಹೆಂಗಸರು ಕಾಣಿಸುತ್ತಾರೆ. ಬಹಳಷ್ಟು ಊರುಗಳಲ್ಲಿ ಈ ಸ್ಮಶಾನಗಳನ್ನು ನೋಡಬೇಕು. ಮಣ್ಣು ಮಾಡಲು ಬಂದ ಸಮಯದಲ್ಲಷ್ಟೇ  “ಈ ಸಲ, ಎಮ್ಮೆಲ್ಲೆ, ಎಂಪಿ ಸಾಹೇಬರ ಮುಂದೆ ಈ ರುದ್ರಭೂಮಿಯ ಜಾಗ, ಸುತ್ತಲ ಭಾಗದ ಗೋಡೆ ಮತ್ತು ನಡುವೆ ನೀರಿನ ವ್ಯವಸ್ಥೆ, ಆಸರೆಗೆ ಗಿಡಮರಗಳ ನೆಡಲು ಇತ್ಯಾದಿಗೆ ಫಂಡು ಬಿಡುಗಡೆಗೆ ಕೇಳಬೇಕು” ಹೀಗಂತ ಮಾತುಕತೆಗಳೇನೋ ಆಗುತ್ತವೆ. ಕೆಲ ಕಡೆ ಮಾತ್ರ ರುದ್ರಭೂಮಿಗಳು ಈ ಸವಲತ್ತುಗಳನ್ನು ಕಂಡಿರುತ್ತವೆ. ಜನಸಾಮಾನ್ಯರಾದ ನಾವು ಈ ಸ್ಮಶಾನ ಮತ್ತು ಶೌಚಾಲಯಗಳ ಉದ್ಘಾಟನೆ ಮತ್ತು ಅಭಿವೃದ್ಧಿಗೆ ಉಳಿದವುಗಳಂತೆ ದುಂಬಾಲು ಬಿದ್ದು ಕೇಳಲು ಹೋಗುವುದಿಲ್ಲ. 

ಅದು ಬಿಡಿ, ನಾವು ಬದುಕಿದ್ದಾಗ  ನೇತ್ರದಾನ, ಅನ್ನದಾನ, ವಿದ್ಯಾದಾನದ ಮಹತ್ವದ ಬಗ್ಗೆ ಸಾಕಷ್ಟು ಬಡಬಡಿಸಿರುತ್ತೇವೆ.   ರಕ್ತ ದಾನವನ್ನೂ ಮಾಡಿರುತ್ತೇವೆ.  ಈಗಲೂ ಕೆಲವು ಮಂದಿ ರಕ್ತ ದಾನ ಮಾಡಿದರೆ, ದಾನ ಮಾಡಿ ಹೊರಬರುವ ಹೊತ್ತಿಗೆ ಎಲ್ಲಿ ತೂಕ ಕಡಿಮೆಯಾಗುತ್ತೋ ಅನ್ನುವಷ್ಟರ ಮಟ್ಟಿಗಿದ್ದಾರೆ. ಅಂಥಾದ್ದರಲ್ಲಿ ಸತ್ತ ಮೇಲೆ ಅಥವಾ ಮಾರಣಾಂತಿಕವಾಗಿ ಪೆಟ್ಟಾಗಿ ಉಳಿಯುವ ಚಾನ್ಸ್ ತೀರ ಕಡಿಮೆ ಎಂದು ವೈದ್ಯರೇ ಹೇಳಿದ ಮೇಲೂ ಅಂಥ ವ್ಯಕ್ತಿಯ ದೇಹದ ಸಕ್ರೀಯ ಅಂಗಾಂಗಗಳನ್ನು ದಾನ ಮಾಡಿದಲ್ಲಿ ಬದುಕಿದ್ದೂ ಅಂಗಾಂಗಗಳ ಕೊರತೆಯಿದ್ದ ರೋಗಿಗಳಿಗೆ ಉಪಯೋಗವಾದರೂ ಆಗುತ್ತೆ.  ಆದರೆ, ಅಂಗಾಂಗಗಳ ದಾನ ಕುರಿತು ಯೋಚಿಸುವ ಮಂದಿ ನಮ್ಮ ನಡುವೆ ಎಷ್ಟು ಜನರಿದ್ದಾರೆ ಹೇಳಿ?  ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿರುವಂತೆ ಕೆಲ ಪೋಷಕರು ಇಂಥ ದೃಢ ನಿರ್ಧಾರಗಳನ್ನು ತೆಗೆದುಕೊಂಡದ್ದಿದೆ.   ಯಾರಾದರೂ ನಮ್ಮ ಸುತ್ತ ಸಾವಿಗೀಡಾದರೆ ಮನೆ ಮುಂದೆ ನಿಂತು  “ಎಂಭತ್ತು ವಯಸ್ಸಾಗಿದ್ರೂ, ಏನ್ ಗಟ್ಟಿಯಿದ್ರು ಗೊತ್ತಾ?,  ಸಾಯೋ ಹಿಂದಿನ ದಿನದವರೆಗೂ ಯೋಗ ಮಾಡ್ತಾ ಇದ್ರು.  ಮಾತು, ನೋಟ, ಜ್ಞಾಪಕ ಶಕ್ತಿ ಪಕ್ಕ, ಎಷ್ಟೊಂದು ಸಕ್ರೀಯರಾಗಿದ್ರು, ಪಾಪ.” ಅಂತೆಲ್ಲಾ ಮಾತಾಡಿರುತ್ತೇವೆ.  ಯಾರೋ ಅಂಗಾಂಗ ದಾನ ಮಾಡಿದವರನ್ನು ದೃಶ್ಯ ಮಾಧ್ಯಮದಲ್ಲಿ ನೋಡಿ “ಗ್ರೇಟ್” ಅನ್ನುವ ನಾವು ನಮ್ಮ ಮಟ್ಟಿಗೆ ಈ ಸಾಧ್ಯತೆ ಕಡೆ ಯೋಚಿಸುವುದಿಲ್ಲ.  ಸಂಬಂಧಿಕರ, ಪರಿಚಯಸ್ಥರ ಮಧ್ಯೆ ತೀರ ವಯಸ್ಸಾಗಿ, ಅನಾರೋಗ್ಯವಾಗಿ, ಸಾವಿಗೀಡಾದ ಪ್ರಕರಣಗಳಲ್ಲಿ ಅಷ್ಟಾಗಿ ದು:ಖಿಸದ ನಾವು ಚಿಕ್ಕ ಮಕ್ಕಳು, ಹರೆಯಕ್ಕೆ ಬಂದ ಯುವಕ, ಯುವತಿ, ಯಶಸ್ಸಿನ ಹಾದಿಯಲ್ಲಿರುವ ಮಧ್ಯ ವಯಸ್ಕರ  ಅಕಾಲಿಕ ಸಾವಾದರೆ, ಶಾಕ್ ಗೆ ಒಳಗಾಗುತ್ತೇವೆ.

 ನಮಗೆ ಸಾವು ಬರುವುದು ಗೊತ್ತಿರುವುದಿಲ್ಲ, ನಿಜ.  ಆದ್ರೆ,  ಹೆಂಡ್ತಿ ,ಮಕ್ಳು, ಮೊಮ್ಮಕ್ಕಳಿಗೆ ಆಸ್ತಿಯಲ್ಲಿ ಯಾರ್ಯಾರಿಗೆ ಎಷ್ಟು ಪಾಲು ಅಂತ ವಿಲ್ ಬರೆದಿಡುತ್ತೇವಲ್ಲವಾ? ಅದು ಹಕ್ಕು ಎಂಬಂತೆ ಉಳಿದವರು ಬರೆಸಿಕೊಳ್ಳುವುದಿಲ್ಲವಾ? ಅದೇ ರೀತಿ ನಮ್ಮ ಅವನತಿಯ ನಂತರ ನಮ್ಮ ದೇಹದ ಸಕ್ರೀಯ ಅಂಗಾಂಗಗಳನ್ನು ದಾನ ಮಾಡುವ  ಹಕ್ಕೂ ನಮ್ಮದೇ ಆಗಿರುತ್ತದೆ.  ಇರಲಿ,  ಈ ರೀತಿ ಬಹಳ ವಿರಳವಾಗಿಯೇ ಜನ ನಿರ್ಧರಿಸುತ್ತಾರೆಂತಲೂ ಭಾವಿಸೋಣ.  ಆದರೆ, ಅವರವರ ಕುಟುಂಬದವರಿಗೆ ಮೃತ ವ್ಯಕ್ತಿಗೆ ಶುಗರ್ ಇತ್ತಾ? ಬಿ.ಪಿ. ಇತ್ತಾ? ಅವರ ಆರೋಗ್ಯದ ಸ್ಥಿತಿ, ದೇಹದ ಲಕ್ಷಣವಂತೂ ಗೊತ್ತೇ ಇರುತ್ತದೆ.  ಒಂದು ವೇಳೆ  ಮೃತರು ಬದುಕಿದ್ದ ದಿನಗಳಲ್ಲಿ ಈ ರೀತಿ ಯಾವುದೇ ಪೂರ್ವಾಲೋಚನೆ ಮಾಡದಿದ್ದಲ್ಲಿ ಅವರ ವಾರಸುದಾರರು ಮರಣದ ಆಘಾತದ ನಡುವೆಯೂ ಇವೆಲ್ಲವನ್ನು ಯೋಚಿಸಿ ಸಂಭಂಧಪಟ್ಟರಲ್ಲಿ ವಿಚಾರಿಸಿ ವೈದ್ಯರ ಸಲಹೆ ಪಡೆದು ಸಕ್ರೀಯ ಅಂಗಾಂಗಗಳ  ದಾನಕ್ಕೆ ಮುಂದಾದರೆ, ಬದುಕುಳಿದೂ ನಿಷ್ಕ್ರಿಯವಾಗಿರುವ ಜೀವಿಗಳಿಗೆ ವರದಾನದಂತಾಗುತ್ತದೆ.   

ಈಗ್ಗೆ ನಾಲ್ಕು ತಿಂಗಳ ಹಿಂದೆ ನನ್ನೂರಿನ ಪಕ್ಕದ ತಂಬ್ರಹಳ್ಳಿ ಗ್ರಾಮದ, ನಮ್ಮ ಕುಟುಂಬದೊಂದಿಗೆ ಉತ್ತಮ ಒಡನಾಟವಿರುವ ಬ್ರಾಹ್ಮಣ ಕುಟುಂಬದಲ್ಲಿ ಎಂಭತ್ತಕ್ಕೂ ಹೆಚ್ಚು ವಯಸ್ಸಿನ ಹಿರಿಯ ಅಜ್ಜ ಹವಲ್ದಾರ್ ಕೃಷ್ಣಮೂರ್ತಿ ರಾವ್ ಎನ್ನುವವರು ಸಾಯುವ ಮುನ್ನ ಅವರ ನೇತ್ರದಾನ ಮಾಡುವುದಾಗಿ ಕುಟುಂಬದ ಸದಸ್ಯರಿಗೆ ಹೇಳಿದ್ದರಂತೆ. ನಂತರ ಮೃತರಾದಲ್ಲಿ ಶಾಸ್ತ್ರ, ಸಂಪ್ರದಾಯ, ಪದ್ಧತಿಗಳಂತೆ ಸುಡುವುದಾಗಲಿ, ತಿಥಿಯನ್ನಾಗಲಿ ಮಾಡದಂತೆ ತಾಕೀತು ಮಾಡಿದ್ದಲ್ಲದೇ ಮೃತ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನವಾಗಿ ನೀಡಲು ಮುಂದಾಗಿದ್ದರಂತೆ.   ಅದರಂತೆಯೇ ಕುಟುಂಬದ ಸದಸ್ಯರು ನೆರವೇರಿಸಿದರು.  ಮೃತರ ತಿಥಿ ಮತ್ತೊಂದು ಮಾಡದೇ ಒಂದು ದಿನ ನಿಗದಿಪಡಿಸಿ “ಅವರ ಹೆಸರಿನಲ್ಲಿ ನುಡಿನಮನ” ಸಲ್ಲಿಸಿದರು. ಮೂಲತ: ಮೃತರಾದ ಅಜ್ಜ ದಿ: ಹವಲ್ದಾರ್ ಕೃಷ್ಣಮೂರ್ತಿ ರಾವ್ ಅವರು ಒಬ್ಬ ಸಾಹಿತಿಯಾಗಿದ್ದವರು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೌರವಿಸಲ್ಪಟ್ಟವರು.  “ಅಕ್ಷರಧಾರೆಯಂತೆ ವಿಚಾರಧಾರೆಯನ್ನೂ ಕಾರ್ಯರೂಪಕ್ಕಿಳಿಸಿ ವಿದಾಯ ಹೇಳಿದ ಆ ಅಜ್ಜನ ನಿರ್ಧಾರ ನಮ್ಮ ಜಿಡ್ಡುಗಟ್ಟಿದ ಸಂಪ್ರದಾಯ, “ಹೇಳುವುದೊಂದು ಮಾಡುವುದು ಇನ್ನೊಂದು”   ಅನ್ನುವಂಥ ವಾತಾವರಣದಲ್ಲಿರುವ ನಮಗೆ ಸೂಕ್ತ  ಮಾರ್ಗದರ್ಶನವಾದಂತಾಗಿದೆ.               

ನಾವೇ ಮಾಡಿಕೊಂಡ ಕಟ್ಟುಪಾಡುಗಳು, ಸಂಪ್ರದಾಯಗಳು, ಪದ್ಧತಿಗಳೆಲ್ಲವೂ ನಮ್ಮನ್ನೂ ಮೀರಿ ವ್ಯಾವಹಾರಿಕ ಮತ್ತು ನಾಟಕೀಯವೆನಿಸಿವೆ. ಆದರೆ, ನಮ್ಮಲ್ಲೇ ಬೆಳೆಸಿಕೊಳ್ಳುವ, ಗೌರವಿಸುವ, ಇನ್ನೊಬ್ಬರಿಗೆ ಉಪದೇಶ ನೀಡಲು ಮಾತ್ರ ಇರುವಂತೆ ಸಾರುವ ಮೌಲ್ಯಗಳನ್ನು ನಾವೇ ಪಾಲಿಸಲಾಗುತ್ತಿಲ್ಲವೆಂಬುದೇ ವಿಪರ್ಯಾಸ.  ನಮ್ಮ ಈ ಡಬಲ್ ಸ್ಟ್ಯಾಂಡರ್ಡ್ ನಡವಳಿಕೆಯಿಂದ ಆಚೆ ಬರದ ಹೊರತು ನಾವು ಉದ್ಧಾರವಾಗುವುದಿಲ್ಲ…… ಏನಂತೀರಿ?

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ದೇಹವೆಂದರೆ………..: ಅಮರ್ ದೀಪ್ ಪಿ.ಎಸ್.

  1. ಅದ್ಭುತವಾದ ಲೇಖನ.ಸಾವಿನ ಅರ್ಥ ಹೇಳುತ್ತಾ, ನಮ್ಮ ತಾತನ ಬಗ್ಗೆ ಹೇಳಿದ್ದಿರಿ .ತಾತ ಸಮಾಜಕ್ಕೆ ಒಂದು ಮಾದರಿ. ಅವರ ಮಕ್ಕಳು ಮೊಮ್ಮಕ್ಕಳಾದ ನಾವು ನಮ್ ಕಣ್ಣನ್ನು ಮತ್ತು ದೇಹವನ್ನು ಆಸ್ಪತ್ರೆಗೆ ಬರೆದು ಕೊಟ್ಟಿದ್ದೇವೆ .

  2. ನಿಜ ಅಮರ್ ದೀಪ್ ಸರ್, ವಿಚಾರಪೂರ್ಣ ಲೇಖನ

  3. ಸಾಹಿತಿ ಹೆಚ್.ಕೆ.ರಾವ್ ರವರಿಗೆ ನಮ್ಮ ನಮನಗಳು, ಅಮರದೀಪ  ಅವರೇ, ನಿಮ್ಮ ಲೇಖನ ಅನೇಕರಿಗೆ ದಾರಿದೀಪವಾಗಬಹುದು.  ಸಾವಿನ ಬಗ್ಗೆ ಹಾಗೂ ನಂತರ ಅನೇಕ ಬಗೆಯಲ್ಲಿ ಯೋಚನೆಮಾಡಿದ ನಾನು ನನ್ನ ತಂದೆಯವರ ಮರಣ ನಂತರ   ಅವರ ಕಣ್ಣುಗಳನ್ನು ದಾನ ಮಾಡದೇ ಮಹಾಪರಾದ ಮಾಡಿದೆ ಎಂದು ಅನಿಸುತಿದೆ.  ನನ್ನ ತಂದೆಯವರು ಆ ಬಗ್ಗೆ ನನಗೆ ಸ್ಪಷ್ಟವಾಗಿ ಹೇಳದೆ ಗೊಂದಲಕ್ಕೀಡಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ.  ಆದರೆ ಈಗ್ಗೆ 3 ತಿಂಗಳ ಹಿಂದೆ ನಾನು ನನ್ನ ಹೆಂಡತಿ ಈ ಬಗ್ಗೆ ಅನೇಕ ಆಯಾಮಗಳಲ್ಲಿ ಯೋಚಿಸಿ ಬದುಕಿದ್ದಾಗ ಉಪಯೋಗಕ್ಕೆ ಬಾರದ ಈ ದೇಹ ಸತ್ತ ಮೇಲೆ ಉಪಯೋಗಕ್ಕೆ ಬರುತ್ತದೆ ಎಂದು ತಿಳಿದು ಬಹಳ ಸಂತೋಷವಾಯಿತು, ಹಾಗೂ ಬದುಕ್ಕಿದ್ದಾಗ ನಾನು ಸಂತೃಪ್ತ ಜೀವನ ನಡೆಸಿ  ಆತ್ಮ ತೃಪ್ತಿ ಹೊಂದಿರುವುದರಿಂದ, ಸಾಹಿತಿ ಹೆಚ್.ಕೆ.ರಾವ್ ರವರ ರೀತಿಯಲ್ಲೆ 3 ತಿಂಗಳ ಹಿಂದೆ ವಿಲ್ ಬರೆದು ನನ್ನ ಮರಣದ ನಂತರ ತಿಥಿ ಕರ್ಮಗಳು ಮಾಡಬಾರದು ಎಂದು ನನ್ನ ಕುಟುಂಬದ ಸದಸ್ಯರಿಗೆ ಸೂಚಿಸಿ ಅವರ ಒಪ್ಪಿಗೆ ಪಡೆದು ನನ್ನ ಮತ್ತು ನನ್ನ ಪತ್ನಿಯ ಸಂಪೂರ್ಣ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಿರುತ್ತೇವೆ.

  4. Ittheechege angaanga hagoo mrutha dehada daanada bagge nidhaanavaagiyaadaroo arivu moodutthide. Nammade bhaagada mahaan aathmavondu ee bageya nirdhaara thegedukondu, avara maranaananthara avara kutumba sadasyaru avara iccheyannu pooraisiddu nimma lekhanadinda thilidu apaara abhimaana moodithu Amar. Thanks for an useful article.  

Leave a Reply

Your email address will not be published. Required fields are marked *