ಪ್ರೀತಿ ಪ್ರೇಮ

ದೇವರೆ ಇಲ್ಲ ಎಂದವನ ಬದುಕಿನಲ್ಲಿ ದೇವತೆಯಾಗಿ ಬಂದೆ ನೀ…!: ಸಿದ್ದುಯಾದವ್ ಚಿರಿಬಿ…,

ಪ್ರೀತಿಯ ಪ್ರಿಯಲತೆಯೇ ಯಾಕೋ ಏನೂ ಬರೆಯಲಾಗಿರಲಿಲ್ಲ ತುಂಬಾ ದಿನ. ಇವತ್ತು ಮನಸ್ಸು ಯಾಕೋ ತಂತಾನೆ ಪ್ರಪುಲ್ಲ. ಮಂಜು ಬಿದ್ದ ಗೂಡಿನಲ್ಲಿ ಮುದುರಿ ಮಲಗಿದ ಗುಬ್ಬಿ ಮರಿಯನ್ನು ಸೂರ್ಯ ತಾಕಿ ಎಚ್ಚರಿಸಿದಂತೆ ನನ್ನ ಮುಂಗೈ ಮೇಲೆ ನಿನ್ನ ಬಿಸಿಯುಸಿರು. ನಿನ್ನ ನೆನಪುಗಳನ್ನು ಎದೆಯಂತರಾಳದಿಂದ ಎಕ್ಕಿ ಮನದ ಪುಟದ ಮೇಲೆ ತಂದು ತೋರಿಸುತ್ತಲೆ ಇತ್ತು. ಎರಡು ವಿರಹದ ಕವಿತೆಗಳನ್ನು ಬರೆದರು ಸಮಧಾನವೆನ್ನಿಸಲಿಲ್ಲ. ಈ ಸಂಜೆಯ ಶ್ರಾವಣದ ಝಡಿ ಮಳೆಯು ನಿನ್ನ ನೆನಪುಗಳ ತಂದು ಮನೆಯಂಗಳದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಯಾಕೊ ಬೇಸರ ಅನೇಕ ತಿಂಗಳುಗಳೆ ಗತಿಸಿದವು ನಿನ್ನ ನೋಡದೆ. ಮನದಲ್ಲಿರುವ ನಿನ್ನ ನಗುವಿನ ಚಿತ್ರ ಮಾಸುತ್ತಿದೆ ಎನ್ನಿಸುತ್ತಿದೆ. ಫೇಸ್ ಬುಕ್ ನಲ್ಲು ನೀ ಬಂದು ಹೋದ ಕುರುಗಳನ್ನು ಹುಡುಕುತ್ತ ಸೋತಿರುವೆ. ಅಲ್ಲೆಲ್ಲೂ ನಿನ್ನ ಹೆಜ್ಜೆ ಗುರುತುಗಳು ಕಾಣಿಸುತ್ತಿಲ್ಲ. ನಿನ್ನ ಸಂದೇಶಗಳು ಬಂದು ಅನೇಕ ದಿನಗಳೆ ಕಳೆದವು. ಮನಸ್ಸಿಗೆ ಎಂತದೋ ದೀಗಿಲು, ಭಯ, ಎಂದು ಇಲ್ಲದ ಏಕಾಂತ, ಬರಿಸಲಾಗದ ಬೇಸರ, ನೆನಪುಗಳು ಹಿಂಡು ಹಿಂಡಾಗಿ ದಾಳಿಗಿಟ್ಟಿದ್ದವು. ಮೊನ್ನೆ ಸಂಜೆ ಸುಮ್ಮನೆ ಹೊರಟು ನಿಂತವನಿಗೆ ಅಮ್ಮ ಎಲ್ಲಿಗೆಂದು ಕೇಳಲೆ ಇಲ್ಲ. ಅಪ್ಪ ಬೇಗ ಬಂದುಬಿಡು ಮಳೆ ವರಪಾದರೆ ಶೇಂಗಾಕ್ಕೆ ಎಡೆ ಹಾಕಬೇಕೆಂದು ಕೈಗೆ ಹಣವಿಟ್ಟ. ಅವರಿಗೂ ಗೊತ್ತು ತುಂಬಾ ದಿನಗಳಾದವು ನಿನ್ನ ನೋಡದೆ ಅಲ್ಲಿಗೆ ಹೊರಟಿದ್ದಾನೆ ಎಂದು. ಈ ಪ್ರೀತಿಯೇ ಹೀಗೆ ಅದೆಂತದೊ ಮಾಯೆ ಬಂದು ಆಕ್ರಮಿಸಿಕೊಂಡು ದಿಗಿಲು ಹುಟ್ಟಿಸಿ ಇಲ್ಲದ ಕನಸುಗಳನ್ನು ತಂದು ನಿಡಿಸುಯ್ಯುತ್ತದೆ ಮನದ ಪರದೆಯ ಮೇಲೆ. ನಿನ್ನ ಒಲವಿನ ಅಕ್ಷಯ ಪಾತ್ರೆಗೆ ಹಂಬಲಿಸಿ ಹೊರಟು ನಿಂತವನಿಗೆ ಜೊತೆಯಾಗಿದ್ದು ಈ ಶ್ರಾವಣದ ಮಳೆ. ಬಿಡದೆ ಸುರಿಯುತ್ತಿತ್ತು. ಬೆಚ್ಚನೆಯ ಅಪ್ಪುಗೆಯ ಹಂಬಲಿಸಿ ನಿನ್ನೂರಿನ ಆ ಮಲೆನಾಡಿನ ಮಡಿಲಿಗೆ ಕಡಲನ್ನು ಕಾಣುವ ಆಸೆಗೆ ತೊರೆಯು ನದಿಯಾಗಿ ಧುಮ್ಮಿಕ್ಕಿ, ಅಲೆಯಾಗಿ ನರ್ತಿಸಿ ಓಡುವಂತೆ ನಾನು ನಿನ್ನ ಒಲವಿನ ಊರಿಗೆ ಬರಲು ಸಿದ್ದನಾಗಿ ನಿಂತುಬಿಟ್ಟೆ.

ಮೋಡ ಚದುರಿ ಮಳೆಯು ಹನಿಹನಿಯಾಗಿ

ಧುಮಿಕಿದೆ ವಸುಂಧರೆಯ ಮಡಿಲಿಗೆ

ಹನಿಹನಿಯು ಝರಿಯಾಗಿ, ತೊರೆಯಾಗಿ,

ಹೊರಟಿತೋ ಕಡಲ ಒಲವಿನ ಆ ತೆಕ್ಕೆಗೆ

ತನ್ನ ತಾ ಮರೆತು ನೀಲಿಯಲಿ ಲೀನವಾಗಲು…,

ಒಲವಿನ ಪ್ರೇಮ ಪಲ್ಲವಿಯೇ ನನ್ನೆದೆಯ ಬೀದಿಯಲಿ ನಿನ್ನೆದೆ ತುಂತುರು. ಕೊಟ್ಟೂರಿನ ಬೀದಿ ಬೀಕೊ ಎನ್ನಿಸುತ್ತಿತ್ತು. ಬಸ್ ಹತ್ತಿ ಕುಳಿತವನಿಗೆ ಹರಪನಹಳ್ಳಿ ಬಂದಿದ್ದು ತಿಳಿಯಲೆ ಇಲ್ಲ, ಬಸ್ ನಿಲ್ಲಿಸಿದಾಗ ಹಾಯ್ ಬೆಂಗಳೂರು ಎಂಬ ಕಪ್ಪು ಬಿಳುಪಿನ ಸುಂದರಿ ಕೈಗೆ ಸಿಕ್ಕಳು. ಅಲ್ಲಿಯು ನಾ ಬರೆದ ನಿನ್ನದೆ ಕವಿತೆಯ ಚುಂಬನ. ನಿನ್ನ ನಗುವಿನ ಆಲಿಂಗನ. ನಿದ್ದೆಗೆ ಜಾರಿದವನಿಗೆ ಹರಿಹರ ತಲುಪುವಲ್ಲಿಗೆ ನೆಮ್ಮದಿ ಹೊಸ ಕನಸುಗಳು, ಹೊಸ ನಗು, ನವ ಚೇತನ, ಎಲ್ಲಿಂದಲೋ ಬಂದು ನನ್ನ ಆಕ್ರಮಿಸಿಕೊಂಡಿದ್ದವು. ಇಷ್ಟು ದಿನ ನನ್ನ ನಿನ್ನ ಮಧ್ಯೆ ಗ್ರಹಣದಂತೆ ಆಕ್ರಮಿಸಿಕೊಂಡಿದ್ದ ವಿರಹದ ಜ್ವಾಲೆ ತಣ್ಣಗೆ ನನ್ನನ್ನೊ ತೊರೆದು ದೂರವೆ ನಿಂತು ನೋಡುತ್ತಿತ್ತು. ಎದೆಯಲ್ಲಿ ನಿನ್ನ ನಗುವಿನ ರುದ್ರವೀಣೆ ಒಲವಿನ ಪಲ್ಲವಿಯನ್ನು ಫಲುಕಿಸಿ ಶೃಂಗಾರ ಕಾವ್ಯವನ್ನು ಬರೆಯುತ್ತಲೆ ಕುಳಿತಿತ್ತು.

ನಾವಿಬ್ಬರು ಜೊತೆಯಾಗಿ ಅದೇಷ್ಟೊ ದಿನಗಳನ್ನು ಕಳೆದಿದ್ದೇವೆ. ಕೈ ಕೈ ಹಿಡಿದು ಅದೇಷ್ಟೊ ದೂರು ಕತ್ತಲು ರಾತ್ರಿಯ ದಾರಿಯಲ್ಲಿ ತೋಳಬಂದಿಯ ಬೆಸೆದು, ನನ್ನ ಭುಜದ ಮೇಲೆ ನಿನ್ನ ತಲೆಯಾನಿಸಿಕೊಂಡು ಮೆಲ್ಲನೆ ಪಿಸು ಮಾತುಗಳನ್ನಾಡುತ್ತಾ ಅದೆಷ್ಟು ದೂರ ಸಾಗಿ ಮರಳಿ ಬಂದಿದ್ದೇವೂ! ನೋಡು ಈಗ ಈ ಮಳೆಯಲ್ಲಿ ನನ್ನ ಬಿಟ್ಟು ಎಲ್ಲಿಗೆ ಹೊರಟು ಹೋದೆ? ಒಂದೇ ಸಮನೆ ಸುರಿಯುತ್ತಿದೆ ಮಳೆ, ಪ್ರತಿಬಾರಿ ಮಳೆಯಾದಾಗ ಜೊತೆಯಲ್ಲಿ ನೀನಿರುತ್ತಿದ್ದೆ. ಸುಮ್ಮೆನೆ ನಿನ್ನೆದೆಯ ಮೆದುವಿಗೆ ತಲೆಯಾನಿಸಿ ಮಲಗಿದಾಗ ಲಹರಿಗೆ ಬಿದ್ದವಳಂತೆ ನೀನು ಹಾಡುತ್ತಿದ್ದೆ “ತೂಗು ಮಂಚದಲ್ಲಿ ಕೂತು, ಮೇಘ ಶ್ಯಾಮ ರಾಧೆಗಾತು, ಆಡುತಿಹನು ಏನೋ ಮಾತು, ರಾಧೆ ನಾಚುತಿದ್ದಳು”. ನಿನ್ನ ಮಧುರ ಸ್ವರದ ಇಂಪು, ವೀಣೇ ಫಲುಕಿದಂತ ಕಂಪು, ಕೇಳುವ ನನ್ನಂತ ಪ್ರೇಮ ಫಕೀರನ ಮನಸ್ಸು ಸಂಭ್ರಮಿಸಿ ನಿನ್ನ ನೀನಾದಕ್ಕೆ ನಾ ಜೊತೆಯಾಗಿ ಇಬ್ಬರು ಹಾಡಿಕೊಳ್ಳುತ್ತಿದ್ದೆವು. ಆಗೆಲ್ಲ ಈ ಮಳೆ ಎಷ್ಟೊಂದು ಹಿತವೆನಿಸುತ್ತಿತ್ತು. ನಿನ್ನೊರಿನ ಹೊರಗೆ ತುಂಗೆಯ ದಡದಿ ಇಬ್ಬರ ಕೂತು ಅದೆಷ್ಟು ಹಾಡುಗಳನ್ನು ಹಾಡಿಕೊಂಡು ನಮ್ಮನ್ನು ನಾವೇ ಅರಿತುಕೊಳ್ಳಲು ಹಂಬಲಿಸಿ ಸೋತಿದ್ದೇವೆ. ಮತ್ತೆ ಪ್ರಯತ್ನಿಸುತ್ತಲೆ ಇದ್ದೇವೆ ಇಂದಿಗೂ, ಆದರೆ ಅರಿತುಕೊಳ್ಳಲಾಗಲಿಲ್ಲ ಇನ್ನು, ಅದಕ್ಕೆ ಇರಬೇಕು ಸಾವಿರಾರು ಕವಿತಗಳು ಜನ್ಮತಳೆದದ್ದು! ಈ ಕವಿ ಹೃದಯಕ್ಕೆ ಕವಿತೆಯಾಗಿ ನೀನು ದಕ್ಕುತ್ತಿದ್ದೆ. ನನ್ನಂತ ಪ್ರೇಮಿಯ ಅಮಲುಗಣ್ಣಿಗೆ ಸುಂದರ ಗಾಂಧಾರಿಯಾಗುತ್ತಿದವಳು ನೀನು. ಸಂಜೆ ಕಳೆದು ಇರುಳು ಆರಂಭವಾಗುವ ಹೊತ್ತಿಗೆ ಮೋಡದೂರಿನಲಿ ಕೆಂಬಣ್ಣದ ಚಿತ್ತಾರ ಗತ್ತು, ಮೋಡಗಳ ಚದುರಿಸಿ ಚಿಮ್ಮುವ ಕಿರಣದ ರಂಗು ಭೂವಿಯನ್ನೆ ಹೊನ್ನಾಗಿಸುವ ಹೊತ್ತು. ಎಲ್ಲೋ ಇಣುಕಿ ನೋಡುವ ಬೆಳ್ಳಿ ಚುಕ್ಕಿ. ಮೋಡದ ಮರೆಯಿಂದ ಸಣ್ಣಗೆ ಸರಿದು ಗಸ್ತಿಗೆ ಸಿದ್ದನಾಗುತ್ತಿದ್ದ ಚಂದಿರ. ಅಂತಹ ನೆನಪುಗಳ ಗಂಟು ಬಿಚ್ಚುತ್ತಾ ನಿನ್ನೂರಿಗೆ ಪಯಣ ಸಾಗುತ್ತಲೆ ಇತ್ತು.

ಜೋಗದ ಧುಮುಕಿನಲಿ

ಜಲದ ನೊರೆಯ ಧಾರೆ

ಮನದ ಕಣಿವೆಯಲ್ಲಿ ಹರಿಯುತಿರಲಿ

ನಿನ್ನೊಲವಿನ ಪ್ರೇಮದ ಸೇಲೆ

ಮಲೆನಾಡಿನ ಮುಗುಳು ನಗೆ

ಚಿಮ್ಮುತಿತ್ತು ಚಲುವಿನಲ್ಲಿ

ಬಯಲುಸೀಮೆ ಬೆನ್ನಿನಲ್ಲಿ

ಮುಡಿಗೇರಿ ನಲಿಯುತ್ತಿತ್ತು ಮಲ್ಲಿಗೆ

ಶ್ರಾವಣದ ಮಳೆಯ ಹನಿಯು

ಅವಳ ಕಣ್ಣ ಮಿಂಚಿನೊಳೆಯೋ

ಮೇಘಮಾಲೆ ತರುತ ಬಾರೋ

ಶ್ಯಾಮ ನೀನು ರಾಧೆ ಎದೆಗೆ

ಹರಿಹರ ಬಿಟ್ಟು ಮಲೆಬೆನ್ನೂರು ಪ್ರವೇಶಿಸುತ್ತಲೆ ಮಲೆನಾಡು ಆರಂಭವಾಗುತ್ತದೆ, ನಿನ್ನ ಸ್ವಾಗತದಂತೆ. ನಿನ್ನೂರಿಗೆ ಬಂದು ತಲುಪಿದಾಗ, ನಿನ್ನ ಚುರುಕು ಕಣ್ಣು, ದೂರದಲ್ಲಿದ್ದವನನ್ನ ಗುರುತಿಸಿ ಗಟ್ಟಿ ಧ್ವನಿಯಲ್ಲಿ ಕೂಗಿ ಸಂಭ್ರಮಿಸಿದ್ದಕ್ಕೆ ಮಳೆಯು ಜೋರಾಗಿ ಸುರಿಯುತ್ತಿತ್ತು. ನಿನ್ನ ಹತ್ತಿರ ಬರುತ್ತಿದ್ದಂತೆಯೇ ನಿನ್ನೂರಿನ ಮಣ್ಣಿನ ವಾಸನೆಯು, ನಿನ್ನ ಮೈ ಘಮ ಎಲ್ಲವೂ ಸಂಭ್ರಮವೇ ಆ ಕ್ಷಣ. ನಿನ್ನ ಕಾಲ್ಗೆಜ್ಜೆಯ ನಿನಾದಕೆ ಎದೆಯ ಬಡಿತ ಏರುಪೇರಾಗುತ್ತಲೆ ಇತ್ತು. ನಿನ್ನ ಕಂಡಾಕ್ಷಣ ಕಣ್ಣ ಹನಿಗಳು ಜಾರಿದ್ದು, ಮಳೆಯು ಅದನ್ನು ಮರೆಸಿ ನಗುವನ್ನುಕ್ಕುವಂತೆ ಮಾಡುವ ನಿನ್ನ ನಗುವಿನ ಮೋಡಿಗೆ ನಾ ಶರಣಾಗಿ ನಿನ್ನ ಮನೆಯ ಅಂಗಳದಲ್ಲಿ ನಿಂತುಬೀಟ್ಟೆ. ರಂಗೂಲಿ ಮಾಸಿಯಾಗಿತ್ತು, ನಿನ್ನ ಮೊಗದಲ್ಲಿ ನಗುವಿನ ಚಿತ್ತಾರ ಕೆತ್ತುತ್ತಿತ್ತು. ವಿರಹದ ಕದವನ್ನು ತಟ್ಟಿ ಬದುಕಿನಲ್ಲಿ ವಸಂತವನ್ನು ಹೊತ್ತು ಬರುವಂತೆ ನೀ ಓಡಿ ಬಂದು ಬಾಚಿ ತಬ್ಬಿ ಅಳುತ್ತಲೆ ನಗುತ್ತಿದ್ದು ಹೃದಕ್ಕೆ ಗೊತ್ತಾಗದೆ ಇರುತ್ತದೆಯಾ ಸಖಿ? ದುಃಖ ಹೃದಯ ದಡಕ್ಕೆ ಬಂದಪ್ಪಳಿಸಿ ಮರಳಿ ಹೋಗುತ್ತಿದ್ದವು. ಮಳೆಯು ಸುತಿಯುತ್ತಿದ್ದರೆ ನಿನ್ನ ಅಪ್ಪುಗೆಯಲಿ ಲೀನವಾಗಿ ಮುಳುಗಿ ಹೋದವನಿಗೆ ಬಂದು ಎಚ್ಚರಿಸಿದ್ದು ಪಕ್ಕದ ಮನೆಯ ಆ ಪುಟ್ಟ ಹುಡುಗಿ.

ಒಂದು ಪುಟ್ಟ ಮುತ್ತು ನಿನ್ನಣಗೆ ಒತ್ತುವ ಹೊತ್ತಿಗೆ ಅದೇಷ್ಟು ಮುತ್ತಿನ ಮಳೆಗರಿದುಬಿಟ್ಟೆ ನೀನು! ನಿನ್ನ ಮೈ ಮುಟ್ಟಿದ ಘಳಿಗೆ, ಮೋಡ ಮುಟ್ಟಿದ ಹಾಗಾಗುತ್ತದೆ. ನಿನ್ನ ಮೃದು ಮೈ ಬಂಧನದಲ್ಲಿ ಸಾವನ್ನೆ ಸ್ವಾಗತಿಸಿದರು ಬೇಸರವಾಗದು ಸಖಿ. ಬೇಸಗೆಯಲ್ಲಿ ತಪ್ಪಿ ಹೋದವಳಿಗಾಗಿ ಶುದ್ಧ ಮಳೆಗಾಲದುದ್ದಕ್ಕೂ ಬೇಟೆಯಾಡುವ ಚಿರತೆಯಂತಾಗಿಬಿಟ್ಟೆ. ನನ್ನದು ಕೇವಲ ಮೈಯ ಅವಸರದ ಪ್ರೀತಿ ಅಲ್ಲ ಕಣೆ, ಹೆಜ್ಜೇನಿಗಾಗಿ ಶತಪಥ ಮಾಡಿ ನಿನ್ನೊಲವಿನ ಕಾಡಿನುದ್ದಕ್ಕೂ ತಿರುಗಾಡಿದ ಕರಡಿಯಂತಾಗಿಬಿಟ್ಟೆ. ದೇವರನ್ನು ನಾನು ಎಂದು ಹುಡುಕಲಿಲ್ಲ ಅವನಿಲ್ಲ ಎಂದು ನನಗೆ ಚನ್ನಾಗಿ ಗೊತ್ತು. ಅದಕ್ಕೆ ನಿನ್ನ ಹುಡುಕಿ ನಿನ್ನ ಪ್ರೀತಿಗಾಗಿ ಹಂಬಲಿಸಿದೆ. ನಾನು ಬರುವೆನೆಂದು ಯಾರು ಸುಳಿವು ನೀಡಿದ್ದರು ನೀನಗೆ? ನೀನು ಮಾಡಿಕೊಂಡ ಸಿಂಗಾರ, ನೀನು ನಡೆದಾಡುವ ವೈಯ್ಯಾರ, ಪಟಪಟನೆ ರುದ್ರವೀಣೆಯಂತೆ ಫಲುಕುವ ಮಾತುಗಳು, ಆ ಕಣ್ ರೆಪ್ಪೆಯಲೆ ಸ್ವರ್ಗವನ್ನೆ ಧರೆಗಿಳಿಸುವ ಶಕ್ತಿ, ನಾಚಿಕೆಯಲಿ ನಡುಗುವ ಆ ಕೆಂದುಟಿಗೆ ಚುಂಚಿಸುವಾಗ, ಮೈ ನಡುಗಿಸುತ್ತ ಬೀಗಿದಪ್ಪಿ ಬಾಚಿ, ಚುಂಭನದ ಮಳೆಯನ್ನೆ ಸುರಿಸುತ್ತಿದ್ದರೆ, ಹೊರಗೆ ಶ್ರಾವಣದ ಮಳೆ.

ರಾತ್ರಿ ತುಂಬಾ ಹೊತ್ತು ಕುಳಿತು ಮಾತನಾಡಿ, ಬದುಕನ್ನೆ ಮುಂದೆ ಕುಳ್ಳಿರಿಸಿ ಅದೆಷ್ಟು ಪ್ರಶ್ನೆಗಳನ್ನು ಕೇಳಿಬಿಟ್ಟೆ ನೀನು?  ಮುಂದಿನ ಬಾಳಿಗೆ ನೀನು ಕಟ್ಟಿಕೊಂಡ ಕನಸುಗಳನ್ನು ನಾನೆಷ್ಟು ನನಸಾಗಿಸುತ್ತೇನೋ ತಿಳಿಯದು ನಲ್ಲೆ. ಆದರೆ ಈ ಬಡವನ ಪ್ರೀತಿ ಎಂದು ಮೂಸವಾಗುವುದಿಲ್ಲ. ನಾನು ಇಷ್ಟು ವರ್ಷಗಳ ಕಾಲ ನನ್ನನ್ನು ಯಾಗೆ ಜೋಪಾನ ಮಾಡಿಕೊಂಡೆನೋ ಅದರ ಸಾವಿರ ಪಾಲು ನೀನ್ನ ಜೋಪಾನ ಮಾಡಿಕೊಳ್ಳುವೆ. ನಿನ್ನ ನುಣುಪು ಪಾದಗಳಿಗೆ ಮುತ್ತಿಕ್ಕಿ ಬಾಚಿ ತಬ್ಬಿದವನನ್ನು ಅದೆಷ್ಟು ನಾಜೂಕಿನಿಂದ ಬಿಡಿಸಿಕೊಂಡು ದೂರವಾದೆ, ಮೊದಲೆಲ್ಲ “ನನ್ನಿಂದ ನಿನ್ನ ನೀನೇ ಕಾಪಾಡು” ಎನ್ನುತ್ತಿದ್ದವಳು ಈಗ ನನ್ನಿಂದ ನಿನ್ನ ನೀನೇ ಕಾಪಾಡಿಕೊಳ್ಳೂತ್ತಿದ್ದಿಯಾ. ಇದು ಪ್ರತಿಯೊಬ್ಬ ಪ್ರೇಮಿಯಲ್ಲಿ ಇರಬೇಕಾದ ಎಚ್ಚರಿಕೆ. ಯಾಕೆಂದರೆ ಪ್ರೇಮದಲ್ಲಿ ಕಾಮಕ್ಕೆ ಜಾಗ ಕೊಟ್ಟರೆ ಅದು ಪ್ರೇಮಿಗಳನ್ನು ಯಾತನಮಯವಾಗಿ ಹಿಂಸಿಸಿ ಪ್ರೀತಿಯನ್ನು, ಅದನ್ನು ನಂಬಿಕೊಂಡ ಪ್ರೇಮಿಗಳನ್ನು ನಿರ್ದಯವಾಗಿ ಕೊಂದುಬಿಡುತ್ತದೆ. ಮೊದಲಿಗಿಂತ ಪ್ರಭುದ್ಧತೆಯ ಪ್ರದರ್ಶನ ತೋರುವ ನಿನ್ನ ಪ್ರೀತಿಗೆ ನಾನು ಚಿರರುಣಿ ಕಣೆ. ರಾತ್ರಿ ಈಗೆ ಕಳೆದು ಬೆಳಗಾಗುವುದರೋಳಗೆ ಹೊರಟು ನಿಂತವನಿಗೆ ಕಣ್ಣೀರಿನಿಂದ ಬೀಳ್ಕೊಡಲು ಸಿದ್ಧವಾಗುವ ನಿನ್ನ ನೋವು ಅರ್ಥವಾಗುತ್ತದೆ ಪ್ರೀಯೇ. ಮತ್ತೆ ಮರಳುವ ಹೊತ್ತಿಗೆ ನಮ್ಮಿಬ್ಬರ ಮದುವೆಯ ನಿಚ್ಛಯವಾಗಿರುತ್ತೆ ಚಿಂತಿಸದರು.

ನಾನು ನನ್ನೂರು ತಲುಪಿಯಾಗಿದೆ. ಮಳೆಯು ಕೊಂಚ ತಗ್ಗಿದೆ. ರೈತನಾಗಿ ನನ್ನ ಕರ್ತವ್ಯದ ಪಾಲನೆ ಎಚ್ಚರಿಸುತ್ತಿದೆ ಸಖಿ. ಈ ರೈತನ ಬದುಕನ್ನು ಶ್ರಮಜೀವಿಯನ್ನು ಕವಿಹೃದಯವನ್ನಾಗಿಸಿದ ನಿನ್ನೊಲವಿನ ಪ್ರೀತಿಗೆ ನನ್ನ ಬದುಕನ್ನೆ ಮೀಸಲಿರಿಸಿ ನಿನ್ನ ಕನಸುಗಳಿಗೆ ನನ್ನನ್ನೆ ಸಮರ್ಪಿಸಿ ಬದುಕನ್ನು ಹಸನಾಗಿಸುವೆ ಸಖಿ. ದೇವರೆ ಇಲ್ಲ ಎಂದು ಬದುಕಿದವನಿಗೆ ದೇವತೆಯಾಗಿ ಬಂದವಳು ನೀನು. ನಿನ್ನ ಒಲವಿನ ಪನ್ನೀರಿನ ಮಳೆ ಸುರಿಯುತಿರಲಿ ಈಗೆ ಸದಾ ನಮ್ಮಿಬ್ಬರ ಬದುಕಿನ ಹೂ ತೋಟದಲ್ಲಿ. ಅದರಲ್ಲಿ ನಿನ್ನ ನಗೆಯ ಮಲ್ಲಿಗೆ ನಳನಳಿಸುತಿರಲಿ ಕೊನೆಯುಸಿರು ನಿನ್ನೆಸರನ್ನೆ ಜಪಿಸುತ್ತಿರಲಿ ಸಖಿ. ಅಂತ ಪ್ರೀತಿ ಕೊಟ್ಟ ನಿನ್ನೂರಿಗೂ ನಿನ್ನ ಪ್ರೀತಿಗೆ ನಾ ಸದಾ ದಾಸ.

ಸಿದ್ದುಯಾದವ್ ಚಿರಿಬಿ…,


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *