ಕಾವ್ಯಧಾರೆ

ದೇವರಿದ್ದಾನೆ: ರಾಶೇಕ್ರ



 

ಹಳೇ ಪಿಕ್ಚರಿನ ಕ್ಲೈಮ್ಯಾಕ್ಸು ಸೀನಿನಲಿ
ಹೀರೋಯಿನ್ನು ಕಟ್ಟಿದ ಬೇವಿಗೆ ಬೆದರಿ
ಅಲ್ಲಾಡುವ ಅದೆಷ್ಟೋ ಗಂಟೆಗಳು
ಒಮ್ಮೆಲೇ ಢಣ್ಣೆನ್ನುವಾಗ ದೇವರಿದ್ದಾನೆ..

ಪೂಜಾರಿಯ ಆರತಿ ತಟ್ಟೆಗೆ ಬಿದ್ದ
ಒಂದೆರಡು ರೂಪಾಯಿ ಕಾಸು ಠಣ್ಣೆನ್ನುವಾಗ
ಕಂಪಿಸಿದ ಕಂಪನದಲಿ
ಪೂಜಾರಿಯ ತಮುಲದಲಿ ದೇವರಿದ್ದಾನೆ..

ಬಿಳಿ ಟೊಪ್ಪಿಗೆ ಏರಿಸಿ
ಬರಿಗೋಡೆಯ ಎದುರು ಭಕ್ತಿಭಾವದಿಂದ
ಇಡೀ ಕಾಯವ ಉಲ್ಟಾ ಮಾಡುವ
ಸತತ ಪ್ರಯತ್ನಗಳಲಿ ದೇವರಿದ್ದಾನೆ..

ಧನಾತ್ಮಕ ಚಿಹ್ನೆಯನು ಬರೆಯಲು ಬಾರದವರು
ಶಿಲುಬೆಯೆಂದುಕೊಂಡು ದೇವಧೂತನ ಅದಕೆ
ಆನಿಸಿ ಮೊಳೆಯೊಡೆವ
ಮೂರ್ಖತನದಲಿ ದೇವರಿದ್ದಾನೆ..

ಊರ ನಡುವಿನ ಅರಳೀಕಟ್ಟೆಯ
ಅತಿರೇಕದ ಚರ್ಚೆಯ ನಡುವಲಿ
ನೆತ್ತಿ ಮೇಲೆ ಬಿದ್ದ ಹಣ್ಣು ಸಿಗಿದು ಕಂಡ
ಹದಿನಾರುಸಾವಿರ ಬೀಜಗಳ ದ್ವಂದ್ವದಲಿ ದೇವರಿದ್ದಾನೆ..

ಗಾಳಿಯಲದೇನನ್ನೋ ಎಳೆದುಕೊಳುವ
ಶ್ವಾಸದ ಚೀಲ, ಅದೆಲ್ಲಿಗೋ ಕಳಿಸಿ
ಶುಧ್ದೀಕರಿಸಿ ಮತ್ತದೇ ಮಾರ್ಗದಲಿ ಹೊರಗೆಡವಿ
ನಮ್ಮನ್ನು ಗಾಂಧಿ, ಬುದ್ಧನ ಮಾಡಿದುದರಲ್ಲಿ ದೇವರಿದ್ದಾನೆ..

ವಾರಕ್ಕೆರಡು ಮೂರು ಬಾರಿ ಸ್ಖಲಿಸಿದ
ಸ್ಖಲನದ ಅಂಟಿನಲಿ ಕೋಟಿ ಜೀವರಾಶಿ
ಜೀವ ತಳೆದು ರೆಕ್ಕೆ ಪುಕ್ಕ ಕಟ್ಟಿಕೊಂಡು
ಅಂತರಿಕ್ಷಕೆ ಹಾರುವ ಅಧಮ್ಯ ಕನಸು ಕಂಡಲ್ಲಿ ದೇವರಿದ್ದಾನೆ..

ನನ್ನ ಕಾಯ ಹೊತ್ತೊಯ್ಯುವ ಆತ್ಮ
ನನ್ನದದು ನನ್ನ ಸ್ವಂತದ್ದು,
ಅದು ನಿನ್ನದು ನಿಮ್ಮಪ್ಪ ಬಳುವಳಿ ಕೊಟ್ಟದ್ದು
ಹಾಗಾಗಿ ನೀನು ದೇವರು, ನಾನೂ ದೇವರು
ಹೌದು ದೇವರಿದ್ದಾನೆ…..

ಕನ್ನಡದ ಬರಹಗಳನ್ನು ಹಂಚಿ ಹರಡಿ

12 thoughts on “ದೇವರಿದ್ದಾನೆ: ರಾಶೇಕ್ರ

  1. ಸೊಗಸಾದ , ಮೊನುಚಾದ ಕವಿತೆ….ಎಲ್ಲವನ್ನು ಆಕ್ರೋಶವಿಲ್ಲದೇ ಹೇಳಿ ತಿವಿಯುವ ಚೆಲುವು ಕವಿತೆಯ ಗುಟ್ಟು.

  2. ಅಬ್ಬಾ…ಕಾವ್ಯಕ್ಕೆ ಎಷ್ಟೋಂದು ಆಯಾಮಗಳು….ಯೋಚಿಸಿದರೆ….ಚಿಮತಿಸುವಂತೆ ಮಾಡಿದ ಕವನ ! ಚೆನ್ನಾಗಿದೆ !

  3. ಪ್ರತಿಬಾರಿ ಓದಿದಾಗಲೂ ಹೊಸ ಹೊಸ ಹೊಳಹುಗಳು ಮೂಡುತ್ತವೆ. 
    ಇಷ್ಟವಾಯಿತು . ಧನ್ವಾದಗಳು, ಅಂದದ ಹೊಂದುವ ಚಿತ್ರ ಬರೆದ 
    ಚಿತ್ರಕಾರರಿಗೂ ಸಹಾ. 

     

Leave a Reply

Your email address will not be published. Required fields are marked *