ದೇವರ ಮೇಲೆ ಭಕ್ತಿಗಿಂತ ಭಯ ಜಾಸ್ತಿ ಇರುತ್ತೇ ಮಕ್ಕಳಿಗೆ. ದೊಡ್ಡವರೂ ಅಷ್ಟೇ. ಮಕ್ಕಳ ಶ್ರದ್ಧೆ, ಶಿಸ್ತು, ಒಳ್ಳೆಯ ನಡತೆ, ಕಲಿಕೆ ಎಲ್ಲದರ ನಿಯಂತ್ರಣಕ್ಕಾಗಿ ಮತ್ತು ಬೆಳವಣಿಗೆಗಾಗಿ ಪ್ರಸ್ತಾವನೆಗಳನ್ನು “ದೇವರು” ಅನ್ನುವ ಅಗೋಚರನ ಮುಂದಿಟ್ಟೇ ಜೀವನ ನಡೆಸುತ್ತಿರುತ್ತಾರೆ. ನಾವೂ ಅಷ್ಟೇ, ತಿಳುವಳಿಕೆ ಬರುವವರೆಗೂ ಅಥವಾ ಬಂದ ಮೇಲೂ “ದೇವ”ರೆನ್ನುವ ಫೋಟೋ ಮತ್ತು ಆತನ ಕೋಣೆಗೆ ಒಮ್ಮೆ ಭೇಟಿಯಾಗಿಯೇ ಮುಂದಿನ ಹೆಜ್ಜೆ ಇಡುತ್ತೇವೆ. ತಪ್ಪು ಮಾಡಿದಾಗ, ಬರೆದ ಉತ್ತರ ತಪ್ಪಾಗಿ ಒದೆ ಬೀಳುವಾಗ, ರಿಜಲ್ಟು ಶೀಟ್ ನೋಡುವಾಗ, ಹುಡುಗಿಗೆ ಪ್ರಪೋಜ್ ಮಾಡುವಾಗ, ಹೀಗೆ ಎಟ್ಸೆಟ್ರಾ…ಎಟ್ಸೆಟ್ರಾ.
ನಮ್ಮಜ್ಜಿ ಕೊಟ್ರಬಸವ್ವ ಮನೆಯಲ್ಲಿ ಗುಡುಗಿದರೆ ಸಾಕು ಎಲ್ಲರೂ ಕುಂತಲ್ಲಿಯೇ ಥಂಡಾ. ಅಂಥಾ ಗಟ್ಟಿಗಿತ್ತಿ ನಮ್ಮಜ್ಜಿ. ನಂಗೂ ಸಣ್ಣವನಿದ್ದಾಗಿನಿಂದ್ಲೂ ದೇವರು, ಅಮವಾಸ್ಯೆ, ಪೂಜೆ, ನೈವೇದ್ಯ, ದೇವಸ್ಥಾನಕ್ಕೆ ತಿರುಗುವುದು ರೂಢಿ ಮಾಡಿಸಿಬಿಟ್ಟಿದ್ದಳು. ದಿನಚರಿಯಂತೆ ಪ್ರತಿ ದಿನಾ ಎದ್ದು ಬೆಳಿಗ್ಗೆ ಸ್ನಾನ, ಪೂಜೆ, ಮಂತ್ರ. ನಂತರ ಬೀದಿ ನಲ್ಲಿಯಲ್ಲಿ ನೀರು ಹಿಡಿದು, ಸಗಣಿ ತಂದು ಕುಳ್ಳು ತಟ್ಟುವುದು ಎಲ್ಲವೂ ರೂಢಿಯಾಗಿದ್ದವು. ಹತ್ತನೇ ಕ್ಲಾಸಿಗೆ ಬರುವ ಹೊತ್ತಿಗೆ ಪೂಜೆ ಮಾಡುವುದು, ನೀರು, ಸಗಣಿ ತರುವುಕ್ಕೆಲ್ಲಾ ಬ್ರೇಕ್ ಬಿತ್ತು. ಆದರೂ ದೇವರಿಗೆ ಕೈ ಮುಗಿಯುವುದು ಮಾತ್ರ ತಪ್ಪಿದ್ದಿಲ್ಲ.
ಊರು ಬಿಟ್ಟು ಓದಲು ಹೋಗಿದ್ದೇ ಬಂತು. ದೇವರ ಕಡೆ ಲಕ್ಷ್ಯ, ಪೂಜೆ, ಕಡಿಮೆಯಾಯಿತು. ಆದರೆ, ವಾರ ದೇವರುಗಳ ಗುಡಿಗೆ ಹೋಗುವ ನೆಪದಲ್ಲಿ ಊರು, ಓಣಿ ತಿರುಗುತ್ತಿದ್ದೆವು. ಅಲ್ಲಲ್ಲಿ ಗಾಳಿಗೆ ಹಾರಾಡುವ ವೇಲ್ ಗಳನ್ನೂ, ಗುತ್ತಾಗಿ ಕಟ್ಟದೇ ಬಿಡಿಸಿಟ್ಟ ದಟ್ಟ ಕೂದಲ ಸೋಕುವಿಕೆಯನ್ನೂ ಸವಿಯುತ್ತಿದ್ದೆವು. ಏನ್ ಹಂಗೆ ದೇವರ ಮೇಲೆ ಭಕ್ತಿ ಉಕ್ಕಿ ಹರಿದು ಅಡ್ಡ ಬಿದ್ದು, ಸಾಷ್ಟಾಂಗ ಹಾಕಿ, ಗಲ್ಲ ಗಲ್ಲ ಬಡಿದುಕೊಂಡು, ಕಿವಿ ಹಿಡಿದು ಉಟ್ ಬೈಟ್ ಮಾಡುವುದು, ಹಣೆಗೆ ಒಂದು ಸಣ್ಣ ಕುಂಕುಮ ಬೊಟ್ಟು ಇಟ್ಕೊಂಡು…. ಇವೆಲ್ಲಾ ವಯಸ್ಸಿನ ಕೆಲ ಹುಡುಗರಿಗೆ ಹುಡುಗಿಯರನ್ನು ಇಂಪ್ರೆಸ್ ಮಾಡುವ ತರಾವರಿ ಕಸರತ್ತುಗಳು. ಕೆಲವರಿಗೆ ಗುಡಿಯೊಳಗಿನ ದೇವರ ಮುಂದೆ ನಿಂತು ಕೈ ಮುಗಿದು ಕಣ್ಣು ಮುಚ್ಚಿ ಏನೋ ಧ್ಯಾನದಂತೆ, ಭಕ್ತಿಯಂತೆ ಬೇಡಿಕೊಳ್ಳುವವರಂತೆ ನಿಂತಿರುತ್ತಾರೆ. ಚಿತ್ತವೆಲ್ಲಾ ಹೊರಗಡೆ ಬಿಟ್ಟುಬಂದ ದುಬಾರಿ ಚಪ್ಪಲಿ ಮೇಲೇ ಇರುತ್ತೇ. ನನಗೆ ಅದ್ಯಾವುದರ ದರ್ದು ಇದ್ದಿಲ್ಲ. ದುಬಾರಿಯಲ್ಲದ ಬೆಲೆಯವು, ನಮ್ಮ ಚಪ್ಪಲಿಗಳು.
ದೇವರ ಪೂಜೆ ಬಗ್ಗೆ ಬಿಟ್ಟು ಚಪ್ಪಲಿ ಬಿಡುವ ಜಾಗಕ್ಕೆ ಮನಸ್ಸು ಬದಲಾಯಿತು ನೋಡಿ. ಇರಿ, ಮತ್ತೆ ದೇವರ ಹತ್ತಿರ ಬರುತ್ತೇನೆ. ಮನೆಯಲ್ಲಿ ದೇವರ ಪೂಜೆ ಮಾಮೂಲು. ಪೂಜೆಗೆ ಓಣಿಯಲ್ಲಿ ಮನೆಗಳಲ್ಲಿನ ಕಾಂಪೌಂಡ್ ಗಳಲ್ಲಿ ಹಾಕಿದ ತರೇವಾರಿ ಹೂವಿನ ಗಿಡಗಳಿಂದ ಅಜ್ಜಿ, ಅಕ್ಕ, ಚಿಕ್ಕಮ್ಮ, ತಾತ, ಯಾರಾದರೊಬ್ಬರು ಕಣಗಿಲೆ, ದಾಸವಾಳ, ಮಲ್ಲಿಗೆ, ಜಾಜಿ ಹೀಗೆ ಹೂವುಗಳನ್ನು ಬಿಡಿಸಿ ತಂದು ತುಂಬಿದ ಕೊಡದಲ್ಲಿ ಅದ್ದಿ ಪೂಜೆಯಲ್ಲಿ ದೇವರಿಗೆ ಏರಿಸುವುದೂ ಮಾಮೂಲು. ದಿನಂಪ್ರತಿ ಏರಿಸಿ ಬಾಡಿದ ಹೂವುಗಳನ್ನು ತೆಗೆದು ಒಂದು ಚೀಲದಲ್ಲಿ ತುಂಬಿ ಪೂಜೆ ನಂತರ ಫ್ರೆಶ್ಶಾದ ಹೂವುಗಳನ್ನು ಮುಡಿಸ್ತೇವೆ. ಈ ಬಾಡಿದ ಹೂವುಗಳನ್ನು ತುಂಬಿದ ಚೀಲಯಿರುತ್ತಲ್ಲಾ? ಅದನ್ನು ನದಿ ನೀರಿಗೆ, ಹೊಳೆ ನೀರಿಗೆ, ಕೆರೆ, ಕಾಲುವೆಗೆ ಹಾಕಬೇಕೆಂಬುದು ಅಲಿಖಿತ ಕರಾರು. ದೇವರಿಗೆ ಮುಡಿಸಿದ ಹೂಗಳವು. ಯಾರೂ ಅವನ್ನು ತುಳೀಬಾರದೆಂಬುದು ನಮ್ಮ ತಿಳುವಳಿಕೆಗೆ ತಂದಿದ್ದ ವಿಷ್ಯ.
ನಾನು ಬಿಡಿ, ದೇವರ ಪೂಜೆ ಮಾಡುವುದನ್ನು ಬಿಟ್ಟು ಹೆಚ್ಚು ಕಡಿಮೆ ಹದಿನೆಂಟು ಇಪ್ಪತ್ತು ವರ್ಷಗಳಾದವು. ಆದರೆ, ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನಾ? ಆ ಬಗ್ಗೆ ನಾನು ಹೇಳಲಾರೆ. ಇಲ್ಲ, ಹೌದು ಎಂಬ ವಾದಗಳಲ್ಲಿ ಪರ ವಿರೋಧಗಳನ್ನೂ ಸೇರಿಸಬೇಕಾಗುತ್ತೆ. ನಾನು ದೇವರಿಗೆ ಕೈ ಮುಗಿಯುತ್ತೇನೆ, ನಿಜ. ಆದರೆ, ಪೂಜೆ, ವಾರದಲ್ಲಿ ಒಂದೊಪ್ಪತ್ತು ಉಪವಾಸ, ಒಂದಿನ ಉಪವಾಸ, ವ್ರತ, ಪಾದಯಾತ್ರೆ ಮಾಡುವವರ ಕುರಿತು ಜರಿಯುವುದಿಲ್ಲ. ಅದು ಅವರವರ ನಂಬಿಕೆ. ಇನ್ನೊಬ್ಬರ ನಂಬಿಕೆಯನ್ನು ಸುಳ್ಳು ಮಾಡಲು ಯತ್ನಿಸುವುದು ಮೂರ್ಖತನ, ಅಟ್ಲೀಸ್ಟ್ ಅದು ದೇವರ ವಿಚಾರದಲ್ಲಿ. ಆದರೆ, ಮೌಢ್ಯತನವನ್ನು ಎತ್ತಿ ತೋರಿಸುವುದು ತಪ್ಪಲ್ಲ. ದೇವರ ಹೆಸರಲ್ಲಿ ನಡೆಸುವ ಕೆಲ ಆಚರಣೆಗಳಲ್ಲಿ ಮಾತ್ರ ನಾನು ನಿರಾಸಕ್ತಿ ಹೊಂದಿದ್ದೇನೆ.
ಇರಲಿ, ಅಜ್ಜಿ ತೀರಿ ಹೋದ ನಂತರ, ಅವ್ವ, ಚಿಕ್ಕಮ್ಮಂದಿರು, ಅಕ್ಕ ಎಲ್ಲರೂ ಮದುವೆಯಾಗಿ ಗಂಡನ ಮನೆಯಲ್ಲೂ ದೇವರಿಗೆ ಮುಡಿಸಿದ ಹಳೆಯ ಹೂಗಳನ್ನು ನೀರಿಗೆ ಹಾಕುವುದನ್ನು ಮುಂದುವರೆಸಿದರು. ನಾವು ಊರಿಂದ ಊರಿಗೆ, ಬಾಡಿಗೆ ಮನೆಯಿಂದ ಬಾಡಿಗೆ ಮನೆಗೆ ಹೋದಲ್ಲೆಲ್ಲಾ ದೇವರಿಗೇರಿಸಿದ ಹಳೆಯ ಹೂಗಳ ಚೀಲವೂ ಉಳಿದ ಸಾಮಾನುಗಳೊಂದಿಗೆ ಸಾಗುತ್ತಿತ್ತು. ಇದ್ದ ಊರಲ್ಲೇ ಆದರೆ, ಗೊತ್ತಿದ್ದ ಕೆರೆಗೋ, ಕಾಲುವೆಗೋ ಅವ್ವ ಹಾಕಿ ಬರುತ್ತಿದ್ದಳು. ಗೊತ್ತಿರದ ಊರುಗಳು ಅಥವಾ ಕೆರೆ ಕಾಲುವೆಗಳು ಹತ್ತಿರದಲ್ಲಿ ಸಿಗದಂಥ ಸ್ಥಳದಲ್ಲಿ ಬಾಡಿಗೆಗೆ ಹೋಗುತ್ತಿದ್ದೆವಲ್ಲಾ? ಅಲ್ಲಿ ಈ ಹೂಗಳು ತುಂಬಿದ ಚೀಲವೂ ತುಳುಕುತ್ತಿತ್ತು.
ಆಗ, ನಮ್ಮ ಕೈಯಲ್ಲಿ ಸೈಕಲ್ಲೂ ಇರದಿದ್ದ ಸಮಯ. ನಂತರ ಸೈಕಲ್, ಬೈಕ್ ಎಲ್ಲವೂ ಹತ್ತಿರಾದವು. ಆದರೆ, ಈ ಹೂಗಳ ಚೀಲದ ವಿಲೇ ಮಾತ್ರ ನಾನು ಮಾಡುತ್ತಿದ್ದಿಲ್ಲ. ಈ ಬಗ್ಗೆ ಏನಾದರೂ ಅವ್ವ ಹೇಳಿದರೆ ನಾನು ಸಿಡುಕುತ್ತೇನೆಂಬುದು ಆಕೆಗೆ ಗೊತ್ತಿತ್ತು. ಆದ್ದರಿಂದಲೇ ನನ್ನ ಗಮನಕ್ಕೇ ಬಾರದೇ ಆ ಚೀಲದ ವಿಲೇಯನ್ನು ಯಾವಾಗಲೋ ಮಾಡಿಬಿಟ್ಟಿರುತ್ತಿದ್ದಳು. ಬಸ್ಸಲ್ಲಿ ಊರಿಗೆ ಹೋಗುವಾಗ ಕಿಟಕಿ ಪಕ್ಕದಲ್ಲೇ ಕುಳಿತು ಕಾದು ಕಾಲುವೆ ಸಮೀಪಿಸಿದಂತೆಯೇ ಎಸೆದುಬಿಡುವುದು, ಇಲ್ಲವೇ ತಾನೇ ಕಾಲುವೆ ಹತ್ತಿರದಲ್ಲೇ ಯಾರದಾದರೂ ಪರಿಚಿತರ ಮನೆಗೆ ಹೋದಾಗ ಹಾಕಿ ಬರುವುದು. ಒಟ್ಟಿನಲ್ಲಿ ಏನಾದರೊಂದು ಮಾಡಿ ಹೂಗಳನ್ನು ನೀರಿಗೆ ಹಾಕುತ್ತಿದ್ದಳು. ನಾನು ಸುಮ್ಮನಿರುತ್ತಿದ್ದೆ. ಒಮ್ಮೊಮ್ಮೆ ತಲೆಕೆಟ್ಟು ಅವ್ವನೊಂದಿಗೆ ಜಗಳವನ್ನೂ ಮಾಡಿಬಿಡುತ್ತಿದ್ದೆ. “ಈ ದೇವರುಗಳ ದೊಡ್ಡ ದೊಡ್ಡ ಮೂರ್ತಿಗಳನ್ನು ಮಾಡಿ ಪೂಜೆ, ಮೆರವಣಿಗೆಯೊಂದಿಗೆ ಜನರ ಉರವಣಿಗೆಯೂ ನಡೆದು ಕೊನೆಗೆ ಮೂರ್ತಿಗಳನ್ನು ಕೆರೆ, ಕಾಲುವೆ, ನದಿ, ಸರೋವರ ಎಲ್ಲದರಲ್ಲೂ ವಿಸರ್ಜಿಸಿ ಬರುತ್ತಾರಲ್ಲಾ? ಆ ಮಣ್ಣಿನ ಮೂರ್ತಿಗಳ ಆಕಾರ, ಬಣ್ಣ, ಕೆಮಿಕಲ್ ನೀರನ್ನು ಯಾವ ಮಟ್ಟಿಗೆ ಕಲುಷಿತಗೊಳಿಸಿರುತ್ತದೆ? ಅದನ್ನೂ ಸ್ವಚ್ಚಗೊಳಿಸಲಿಕ್ಕಾಗುತ್ತಾ? ಆ ನೀರು ಬಳಕೆಗೆ ಯೋಗ್ಯವಾಗಿರುತ್ತಾ? ಜನ, ಜಾನುವಾರು ಯಾರೂ ಆ ನೀರನ್ನು ಕುಡಿಯಲು ಯೋಗ್ಯವಿರುವುದಿಲ್ಲ ನಿಮ್ಗೆ ಗೊತ್ತಾ?” ಅಂತ. ಆ ಸಂಧರ್ಭದಲ್ಲಿ ನೀರಿಗೆ ಬಿದ್ದ ದೇವರ ಮೂರ್ತಿಗಳೇ ತಮ್ಮ ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ಇನ್ನೊಬ್ಬರ ಕೈಯಾಸರೆಯಲ್ಲಿ ಎತ್ತಿ ಬಿಸಾಡಲ್ಪಡುತ್ತವೆ. ಇದನ್ನೆಲ್ಲಾ ಅವ್ವನೊಂದಿಗೆ ವಾದ ಮಾಡಿದರೆ, ಆಕೆ ಇಲ್ಲವೆಂತೇನೂ ಹೇಳುವುದಿಲ್ಲ. ಆದರೆ, ಆಕೆಗೆ ದೇವರಿಗೆ ಮುಡಿಸಿದ ಹೂಗಳನ್ನು ಹಾಕೋದಿಕ್ಕೆ ಒಂದು ನೀರಿನ ಕೊಳ ಕಂಡರೆ ಸಾಕು….ಅಷ್ಟೇ.
ಒಮ್ಮೆ ಬಳ್ಳಾರಿಯಿಂದ ನಾನು, ಅವ್ವ, ನನ್ನ ತಮ್ಮ ವಿಜಿ ಒಟ್ಟಿಗೆ ಹಗರಿಬೊಮ್ಮನಹಳ್ಳಿಗೆ ಬಸ್ಸಲ್ಲಿ ಬರುತ್ತಿದ್ದೆವು. ನನಗಿನ್ನೂ ಆಗ ಮಾಡುವೆ ಆಗಿದ್ದಿಲ್ಲ. ಅವ್ವನಿಗೆ ಬಸ್ಸಲ್ಲಿ ಕಿಟಕಿ ಪಕ್ಕದ ಸೀಟೇ ಬೇಕು. ಹಂಗಾಗಿ ಬಸ್ಟ್ಯಾಂಡ್ ನಲ್ಲೇ ಕಿಟಕಿ ಪಕ್ಕದ ಖಾಲಿ ಸೀಟು ಹುಡುಕಿ ಬಸ್ಸು ಹತ್ತಿಸಿ ಕರೆದುಕೊಂಡು ಬರುವುದು ಅಥವಾ ಕಿಟಕಿ ಪಕ್ಕ ಖಾಲಿ ಇದ್ದ ಸೀಟು ನೋಡಿ ಬಸ್ಸಿಗೆ ಹತ್ತಿಸುವುದು ನಮ್ಮ ಅಭ್ಯಾಸ. ಕಾರಣ, ಆಕೆಗೆ ಬಸ್ ಪ್ರಯಾಣವೆಂದರೇನೇ ಉಬ್ಬಳಿಕೆ ಬಂದು ಬಿಡುತ್ತದೆ. ಇತ್ತೀಚೆಗೆ ಕಡಿಮೆ ಆಗಿದೆ. ಮೊದಲೆಲ್ಲಾ “ಊರಿಗೆ ಹೋಗಬೇಕು” ಅಂತ ಇನ್ನೂ ಮನೆಯಲ್ಲಿ ಕುಂತು ಮಾತಾಡುತ್ತಿದ್ದರೆ, ಆಕೆಗಾಗಲೇ ಉಬ್ಬಳಿಕೆ ಬರುತ್ತಿತ್ತು. ಅಂದು ಬಳ್ಳಾರಿ ಹಳೇ ಬಸ್ ನಿಲ್ದಾಣ ಬಿಟ್ಟು ಕಂಟೋನ್ಮೆಂಟ್, ಅಲ್ಲೀಪುರ ದಾಟಿತು. ನಮಗೆ ತೋರಿಸದಂತೆ ದೇವರಿಗೆ ಮುಡಿಸಿ ತೆಗದ ಬಾಡಿದ ಹೂಗಳ ಪ್ಲಾಸ್ಟಿಕ್ ಚೀಲವನ್ನು ತಂದಿದ್ದಳು. ಬಸ್ಸಲ್ಲಿ ಕುಳಿತು ಅಲ್ಲೀಪುರ ದಾಟಿ ಕಾಲುವೆ ಹತ್ತಿರಾಗುತ್ತಿದ್ದಂತೆಯೇ, ಅವ್ವ ಆ ಚೀಲ ತೆಗೆಯುತ್ತಿದ್ದಾಗಲೇ ಗೊತ್ತಾಗಿದ್ದು; ಅದು ನನ್ನ ತಮ್ಮ ವಿಜಿಗೆ. ವಿಜಿ, ಅವ್ವ ಹಿಂದೆ ಕುಳಿತಿದ್ದರು. ನಾನು ಸೀಟು ಸಿಗದ ಕಾರಣ ಮುಂದೆ ಕುಳಿತಿದ್ದೆ. ಬಸ್ಸಲ್ಲಿ ಕುಳಿತಾಗ ವಾಂತಿಯಾಗುವ, ಉಬ್ಬಳಿಕೆಯಿಂದ ಬಳಲುವ ಅವ್ವಂಗೆ ಆ ಚೀಲವನ್ನು ಆವತ್ತು ಎತ್ತಿ ಕಿಟಕಿ ಮೂಲಕ ಕಾಲುವೆಗೆ ಹಾಕುತ್ತಿದ್ದಳೇನೋ. ಪಕ್ಕದಲ್ಲಿ ನನ್ನ ತಮ್ಮ ವಿಜಿ ಕುಳಿತಿದ್ದನಲ್ಲಾ? ಅವನಿಗೆ ಹೇಳಿ ಆ ಚೀಲವನ್ನು ಕಾಲುವೆಗೆ ಹಾಕಲು ಹೇಳಿದ್ದಾಳೆ. ಅವನಿಗೆ ಹೊರಡುವ ಬಸ್ಸಿಂದ “ದೇವರಿಗೆ ಮುಡಿಸಿ ಬಾಡಿದ ಹೂಗಳ ಚೀಲ” ವನ್ನು ಕಿಟಕಿ ಮೂಲಕ ಕಾಲುವೆಗೆ ಎತ್ತಿ ಬಿಸಾಡಲು ಆಗಲಿಲ್ಲವೋ ಏನೋ. ಅದು ಕೈತಪ್ಪಿ ರಸ್ತೆಯಲ್ಲೇ, ಅದೂ ಹೊರಡುವ ಬಸ್ಸಿನ ಗಾಲಿಗೆ ಬಿತ್ತು. ಹಾಗೆ ಬೀಳುವಾಗಲೇ ಗಾಳಿಗೆ ಬಾಡಿದ ಹೂಗಳೆಲ್ಲಾ ರಸ್ತೆಗುಂಟ ಚೆಲ್ಲಾಪಿಲ್ಲಿ ಹರಡಿವೆ. ಅವ್ವಂಗೆ “ದೇವರಿಗೆ ಮುಡಿಸಿ ಬಾಡಿದ ಹೂಗಳು” ನೀರಿಗೆ ಬೀಳಲಿಲ್ಲವಲ್ಲಾ? ಮತ್ತು ಆ ಹೂಗಳೆಲ್ಲಾ ತುಳಿವ ಕಾಲುದಾರಿಯಲ್ಲಿ ಚೆಲ್ಲಿದವಲ್ಲಾ? ಅದು ಸಿಟ್ಟು. ಬಸ್ಸಲ್ಲಿ ಧಕ್ಕಡಿಗೆ ವಾಂತಿಯಾಗುತ್ತೆಂದು ಮುಚ್ಚಿಕೊಂಡಿದ್ದ ಬಾಯಿ ತೆರೆದು ನನ್ನ ತಮ್ಮನಿಗೆ ಇಡೀ ಬಸ್ಸಿನ ಜನ ತಿರುಗಿ ನೋಡುವಂತೆ “ಲೋ ಸನ್ಯಾಸಿ…… ಹೆಂಗಲೋ ಹಾಕೋದು ಹೂವ್ನಾ…..?” ಅಂದಳು. ನಾನು ಸೇರಿದಂತೆ ಎಲ್ಲರೂ ತಿರುಗಿ ನೋಡುತ್ತಿದ್ದರೆ, ಆ ಸಿಟ್ಟು, ಆ ಜೋರು, “ಲೋ ಸನ್ಯಾಸಿ…..” ಅನ್ನುವ ಬೈಗುಳವೋ ಮದುವೆಯಾಗದ ನನ್ನ ತಮ್ಮನ ವಸ್ತುಸ್ಥಿತಿಯೋ ಯಾರಿಗೂ ಅರ್ಥವೇ ಆಗಿದ್ದಿಲ್ಲ. ನಾನು ವಿಜ್ಜಿ ಮುಖ ನೋಡಿ ಸುಮ್ಮನೇ ತಿರುಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಅಕ್ಕನ ಮನೆಗೆ ಬಂದ ನಂತರ “ಲೋ ಸನ್ಯಾಸಿ ……” ಎಂದು ಅವ್ವ ಬೈದದ್ದನ್ನು ನೆನೆಸಿಕೊಂಡು ನಕ್ಕಿದ್ದೇ ನಕ್ಕಿದ್ದು…
ವರ್ಷಗಳ ಕಾಲ ಆ ಪ್ರಸಂಗ ಮರೆತೇ ಹೋಗಿತ್ತು; ಮೊನ್ನೆ ಮೊನ್ನೆ ಪ್ರಧಾನ ಮಂತ್ರಿಯವರ “ಸ್ವಚ್ಛ ಭಾರತ ಅಭಿಯಾನ” ಶುರುವಾಗುವವರೆಗೆ. ಪದೇ ಪದೇ ಚಾನಲ್ ಗಳಲ್ಲಿ ಕಸ ಎತ್ತಿ ಎಲ್ಲೆಂದರಲ್ಲಿ ಹಾಕುವವರಿಗೆ ಟೋಪಿ ತೊಡಿಸಿ ಚಪ್ಪಾಳೆ ತಟ್ಟುವ ಸೀನು ನೋಡುತ್ತಿದ್ದಾಗ ಮತ್ತೊಮ್ಮೆ ನೆನೆಸಿಕೊಂಡೆ. ನನ್ನ ತಮ್ಮ (ವಿಜಯ್) ವಿಜಿಗೆ ಇನ್ನೂ ಹೇಳಿಲ್ಲ. ಈ ಬರಹ ಓದಿದ ಮೇಲೆ ಬಹುಶ: ಹೇಗೆ ಪ್ರತಿಕ್ರಿಯೆ ನೀಡುತ್ತಾನೋ…..ಅವ್ವ ಇದನ್ನು ನೋಡಿ ಏನನ್ನುತ್ತಾಳೋ.
*****
ಚೆನ್ನಾಗಿತ್ತು. ನಗೆಗಡಲಲಿ ಒಮ್ಮೆ ಈಜಿಸಿ ಹೂ ನಗೆ ಬೀರಿದಂತೆ ಆಯಿತು. ನಿಮ್ಮ ಬರಹಕ್ಕೆ ಹೆಚ್ಚು ಹೆಚ್ಚು ಮೆಚ್ಚುಗೆಗಳು ಬರಲಿ. ನಮ್ಮ ಕಡೆಯಿಂದ ಈ ಹೂಗುಚ್ಚ ಕಳುಹಿಸಿದ್ದೀನಿ ತಗೋಳಿ. ದೇವರಿಗೆ ಮುಡಿಸಿ.
: )
supar
ಅಮರ್. ನಿಜಕ್ಕೂ ನನ್ನ ಹೆಣಿಕೆ ತಪ್ಪಿಲ್ಲ ನಿನ್ನಲ್ಲಿ ಹಾಸ್ಯಬರಹಕ್ಕೆ ವಿಪುಲ ಅವಕಾಶವಿದೆ. ಬರೆಯಣ್ಣ