ಲೇಖನ

ದೇವರಂಥವರಿವರು: ಪ್ರೇಮಾ ಟಿ ಎಮ್ ಆರ್

prema

"ನೀನು ದೇವರನ್ನು ನೋಡಿದ್ದೀಯಾ?" ಮುಸ್ಸಂಜೆ ಜಗುಲಿ ಕಟ್ಟೆಮೇಲೆ  ಕೂತು ಹರಟುವಾಗೆಲ್ಲ ಈ ಥರ ತರ್ಲೆ ಪ್ರಶ್ನೆಗಳನ್ನು ಎಸೆದು ನನ್ನೊಳಗಿನ ಗಡಿಬಿಡಿಯನ್ನ ನೋಡುತ್ತ ಕೂಡ್ರುವದು  ಗೆಳತಿ ವೀಣಾಳ ಅಭ್ಯಾಸ.  ನಾನು ತಡಮಾಡದೇ ಹೂಂ ಎಂದೆ.  ನನ್ನ ಹೂಂ ಎಂಬ ಉತ್ತರಕ್ಕೆ ನಾನೇ ಗಲಿಬಿಲಗೊಂಡಿದ್ದೆ. ನನ್ನ ಹೂಂ ಗೆ ಉತ್ತರ ಹುಡುಕುತ್ತ ನನ್ನೊಳಗೆ ನಾನೇ ಹಿಮ್ಮುಖವಾದೆ.

ಈಗ ನಾನೋಡಿದ ದೇವರನ್ನು ಹುಡುಕಬೇಕಿತ್ತು ನನ್ನೊಳಗೆ.  ಕೆಲ ತಿಂಗಳುಗಳ ಹಿಂದೆ ಒಂದು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಹೋಗಿದ್ದೆ. ಪ್ರತಿಷ್ಠಿತ ಶಿಕ್ಷಣಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ. ನೂರಾರು ಜನ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಂದ ಅಲ್ಲಿ ಕಾರ್ಯಕ್ರಮದ ಮೊದಲಿಗೆ ಪೂಜಿಸಲ್ಪಟ್ಟ ದೇವರಿಗೆ ಪುಷ್ಪಾರ್ಚನೆಯ ಹೊತ್ತು. ದೊಡ್ಡ ತಟ್ಟೆಗಳ ತುಂಬಾ ಬಿಚ್ಚಿಟ್ಟ ಹೂವಿನ ಪಕಳೆಗಳು. ಪ್ರತಿಷ್ಠಿತರೆಲ್ಲ ಮೊದಲಿಗೆ ಒಟ್ಟಾಗಿ ಬಂದು ಪುಷ್ಪಾರ್ಚನೆಗೈದು ಆಚೆಹೋದಮೇಲೆ ಮಕ್ಕಳ ಸರದಿ. ಸರದಿಯಲ್ಲಿನ್ನೂ ಹದಿನೈದಿಪ್ಪತ್ತು ಮಕ್ಕಳು ಕಾದಿರುವಾಗಲೇ ಬಿಡಿಸಿಟ್ಟ ಪಕಳೆಗಳ ತಟ್ಟೆ ಕಾಲಿ. ಪುಷ್ಪಾರ್ಚನೆಗೆಂದು ಎದುರುನಿಂತ ಮಕ್ಕಳು ಮುಖಮುಖ ನೋಡಿಕೊಂಡರು. ಅವರ ಮುಖ ಬಾಡಿತು. ಯಾರೋ ಹೇಳಿದರು. ಹಾಗೇ ಕೈಮುಗಿದುಬಿಡಿ.  ಉದುರುದುರಾಗಿ ಬೊಗಸೆ ತುಂಬುವ ಹೂವಿನ ದಳಗಳನ್ನು ದೇವರಿಗೆ ಸುರಿಯುವ ಆ ಅನುಭೂತಿ ಸುಮ್ನೆ ಕೈಮುಗಿಯುವದರಲ್ಲಿ ಸಿಗೋಕೆ ಸಾಧ್ಯವೇ?. ಮಕ್ಕಳು ಪೆಚ್ಚಾಗಿ ನಿಂತರು.  ನಿರೂಪಣೆಯ ಕೊನೆಯ ಮಾತುಗಳನ್ನೂ ಮುಗಿಸಿ ಮೈಕ್ ಕೆಳಗಿಟ್ಟು  ನಾನು ಅದೇ ಸಾಲಿನಕೊನೆಯಲ್ಲಿ ನಿಂತಿದ್ದೆ. ತೀರಾ ಸಾಮಾನ್ಯ ಉಡುಪು ಧರಿಸಿದ ಕಾರ್ಯಕ್ರಮ ವೀಕ್ಷಕರಾಗಿ ಕೂತಿದ್ದವರೊಬ್ಬರು  ತಟ್ಟನೆ ಎದ್ದು ಬಂದು ದೇವರ ಕಾಲಿನ ಬುಡದಲ್ಲಿ ರಾಶಿಬಿದ್ದ ಪಕಳೆಗಳನ್ನು ಬಾಚಿ ಖಾಲಿ ಬಟ್ಟಲಿಗೆ ತುಂಬಿದರು . ಖುಷಿಯಿಂದ ಮಕ್ಕಳು ತಮ್ಮ ಬೊಗಸೆಗಳಲ್ಲಿ ದಳಗಳನ್ನು ತುಂಬಿಕೊಂಡರು.  ಶಾಸ್ತ್ರ ಬಲ್ಲವರ್ಯಾರೋ ಓಡಿ ಬಂದರು. ಏ ಬಿಡ್ರಿ ಸಮರ್ಪಣೆಯಾದ ಹೂಗಳನ್ನು ಮತ್ತೆ ಹಾಕ್ಬಾರ್ದೂರೀ ಎನ್ನುತ್ತ ಮಕ್ಕಳನ್ನು ತಡೆದರು. ಆ ಪುಣ್ಯಾತ್ಮ , "ಬಿಟ್ಬಿಡಿ ಸರ್, ಮಕ್ಕಳಿಗಿಂತ ಹೆಚ್ಚಿನ ದೇವರಿದ್ದಾನಾ? ಮಕ್ಕಳ ಮನಸ್ಸು ನೊಂದ್ರೆ ದೇವ್ರು ನೊಂದ್ಕೋತಾನೆ. ಮಕ್ಳು  ಹೂ ಹಾಕ್ಲಿ ಬಿಡಿ ಸರ್" ಅನುನಯಿಸಿದರು. ಅಷ್ಟರಲ್ಲಿ ಯಾರೋ ಕರೆದ್ರು ಅಂತ ತಡೆದವರು ಆಚೆ ನಡೆದರು. ಇವರಿಲ್ಲಿ ಮಕ್ಕಳೆಲ್ಲರಿಂದ ಅದೇ ಅರ್ಚನೆಗೊಂಡ ಪುಷ್ಪ ದಳಗಳನ್ನೇ ಅರ್ಚನೆ ಮಾಡಿಸಿ ನನ್ನ ಬೊಗಸೆಗೂ ಒಂದಷ್ಟು ದಳಗಳನ್ನು ಹಾಕಿದರು. ನೋಡೋಕೆ ತೀರಾ ಸಾಮಾನ್ಯರಂತಿದ್ದ ಅವರ ವಿಚಾರ ಎಷ್ಟೊಂದು ಉದಾತ್ತ. ಅವರ ಒಳ್ಳೆಯತನವನ್ನು ಕಂಡೂ ಒಂದಷ್ಟು ಹೊಗಳದೇ ಇರೋಕಾಗಲಿಲ್ಲ ನನಗೆ. ಅವರು ನಕ್ಕರಷ್ಟೇ. ಯಾರೋ ಅವರನ್ನು ತೆಗಳಿದರು. ಇನ್ನ್ಯಾರೋ  ಹೊಗಳಿದ್ರು. ಅವರಿಗದು ಗಣನೆಗಿಲ್ಲ. ಅವರು ಹೊಗಳಿಕೆ ತೆಗಳಿಕೆಗಳು ನಿನ್ನ ಪಾದಕ್ಕೆ ತಂದೆ. ನನಗೆ ಸರಿಯೆನ್ನಿಸಿದ್ದನ್ನು ನಾ ಮಾಡಿದೆನೆಂಬಂತೆ ನಡೆದುಹೋಗಿ ತನ್ನ ಜಾಗದಲ್ಲಿ ಕೂತಿದ್ದರು.
         
ಯಾವುದೋ ಲೆಟರ್ ಪೋಸ್ಡ ಮಾಡ್ಬೇಕಿತ್ತು. ಮನೆಬಾಗಿಲಿಗೆ ಬರುವ ಅಂಚೆಯ ತಮ್ಮ (ಅವನು ತೀರಾ ಚಿಕ್ಕ ವಯಸ್ಸಿನ ಹುಡುಗ ಅದಕ್ಕೆ ನಾವು ಅವನಿಗೆ ಅಂಚೆಯ ತಮ್ಮ ಎಂದು ಕರೆಯುತ್ತೇವೆ)ನನ್ನು  "ಪೋಸ್ಟ್ ಎಷ್ಟು ಗಂಟೆಗೆ ಕಟ್ತಾರೆ ಮಗಾ?" ಕೇಳಿದ್ದೆ. "ನಾಲ್ಕು ಗಂಟೆಗೆ ಕಟ್ತಾರೆ. ಆದ್ರೆ ಒಮೊಮ್ಮೆ ನಾಲ್ಕುವರೆ ಆಗ್ಬಿಡ್ತದೆ ಮೇಡಮ್" ಅಂದ. ನಾನು ಲೆಟರ್ ರೆಡಿಮಾಡ್ಕೊಂಡು ಓಡಿದೆ. ನಾಲ್ಕರ ಮೇಲೆ ಒಂದಷ್ಟು ನಿಮಿಷಗಳು ಮುಂದಕ್ಕ ಓಡಿದ್ದವು. ಒಳಹೊಕ್ಕುವ ಮೊದಲೇ  ಅದೇ ಒಫೀಸಿನ ಸಿಬ್ಬಂದಿಯೋರ್ವರು ಸೈಕಲ್ಲು ತಳ್ಳಿಕೊಂಡು ಹೊರಬರುತ್ತಿದ್ದರು. "ಸರ್, ಪೋಸ್ಟ ಕಟ್ಟಿ ಆಯ್ತಾ? ಒಂಚೂರು ಅರ್ಜಂಟ್ ಲೆಟರ್ ಇತ್ತು. ಎಂದು ಇಳಿಬಿಸಿಲಿನ ಚುರುಕಿಗೆ  ಬೆವರಿ ಒದ್ದೆಮುದ್ದೆಯಾದ ಮುಖವನ್ನು ಒರೆಸುತ್ತ ಓಡಿದೆ.  "ಈಗ ಕಟ್ತಾ ಇದ್ದಾರೆ ಹೋಗಿ" ಎಂದು ಹಿಂದಿನಿಂದ ಅವರದನಿ. ಕತ್ತು ತಿರುಗಿಸದೇ 'ಥೆಂಕ್ ಯು ಸರ್' ಎಂದು ಒಳಹೊಕ್ಕೆ. ಕೌಂಟರ್ ನ ಹೊರಗೆ ಇಬ್ಬರು ಹೆಂಗಸರು ನಿಂತು ತಂತಮ್ಮ ಪಾರ್ಸೆಲ್ಗಳಿಗೆ ಸ್ಟೆಂಪ್ ಅಂಟಿಸ್ತಾ ಇದ್ದರು. ಕೌಂಟರಿನ ಒಳಗೆ ಸಣ್ಣ ವಯಸ್ಸಿನ ಹುಡುಗಿ ಮೇಡಮ್ ಕೂತಿದ್ದರು. ನನ್ನ ಲೆಟರ್ ಕೊಟ್ಟೆ. ತೂಗಿಸಿನೋಡಿ ಸ್ಟೆಂಪ್ ಕೊಟ್ಟರು. ತಟ್ಟಂತ ಅಂಟಿಸಿ ಮೇಡಮ್ ಕೈಗೆ ಕೊಟ್ಟು "ಅರ್ಜಂಟ್ ಲೆಟರ್ ಮೆಮ್ ಪ್ಲೀಸ್ ಇವತ್ತೇ ಕಳಿಸ್ಬೇಕಿತ್ತು" ಎಂದು ಹಲ್ಲುಗಿಂಜಿದೆ. "ಈಗಾಗೋದಿಲ್ಲಾರೀ ಪೋಸ್ಟ ಕಟ್ಟಾಯ್ತು. ಹೊರಗಿನ ಡಬ್ಬಿಗೆ ಹಾಕ್ಬಿಡಿ" ಅಂದ್ರು.  ನಾನು ಪೆಚ್ಚಾಗಿದ್ದೆ. ನನ್ನ ಮುಂದಿದ್ದವರ ಲೆಟರ್ ಪಾರ್ಸೆಲಗಳನ್ನ ಒಳಗಿರುವ ಸಹಾಯಕರನ್ನು ಕರೆದು ಒಳಗೆ ಕಳಿಸಿದ್ದನ್ನ ನೋಡಿದ್ದೆ. ಬಹುಶಃ ಅದು ರಜಿಸ್ಟರ್ಡ ಅಥವಾ ಸ್ಪೀಡ್ ಪೋಸ್ಟ ಇರಬಹುದು. ಒಂದೇ ಕ್ಷಣ ತಡವಾದ ನನ್ನ ಸಾದಾ ಪೋಸ್ಟಗೆ ಅವತ್ತು ರವಾನೆಯಾಗುವ ಯೋಗವಿರ್ಲಿಲ್ಲ. ಗಡಿಬಿಡಿಯಲ್ಲೂ  ಗಮನಿಸಿದ್ದೆ.  ಅಬ್ಬಾ ಎಷ್ಟು ಚಂದ ಇದ್ದಾಳೆ ಹುಡುಗಿ. ಕೆಂಪಡರಿದ ಶುಭ್ರ ಬಿಳುಪಿನ ಬಣ್ಣ ದುಂಡಗಿನ ಮುಖ ಅದಕ್ಕೊಪ್ಪುವ ನೇರಗೂದಲು. ಅವಳನ್ನು ಕೌಂಟರ್ನಲ್ಲಿ ಕಂಡ ತಕ್ಷಣ ಅಂದ್ಕೊಂಡಿದ್ದೆ ನನ್ನ ಕೆಲ್ಸ ಆಗೇ ಹೋಯ್ತು ಅಂತ . ಇಂಥ ಮುದ್ದಾದ ಹುಡುಗಿಯೊಳಗೆ ಇರುವದು ತೀರಾ ಸೊಫ್ಡಿಸೊಫ್ಟಿ ಮನಸ್ಸು. ಇವಳನ್ನು ಹೇಗಾದ್ರೂ ಮಳ್ಳಮಾಡಿ ಒಂದು ಲೆಟರ್ ಕಟ್ಟುತ್ತಿರುವ ಚೀಲದೊಳಗೆ ಸೇರಿಸಿಬಿಡೋದು ನನಗ್ಯಾವ ಮಹಾ?  ಅಂದ್ಕೊಂಡ ನನ್ನ ಅಹಂಗೆ ಒಂದು ತಪರಾಕಿ ಕೊಟ್ಟಿದ್ಲು ಹುಡುಗಿ. ಪ್ಲೀಸ್ ಮೆಮ್ ಒಂಚೂರು ಅರ್ಜಂಟ್… ನಾನು ಚೌಕಾಸಿಗಿಳಿದೆ. 'ಆಗೋದಿಲ್ರಿ'  ಕಡ್ಡಿ ತುಂಡು ಮಾಡಿದಳು  ಹುಡುಗಿ. ನಾನು ದುಡ್ಡಿಲ್ಲದ ಪಾಕೀಟಿನಂತಾದ ನನ್ನ ಮುಖ ಹೊತ್ತುಕೊಂಡು ಹೊರಬಂದೆ.  ಆವರಣಕ್ಕೆ ಎಂಟರ್ ಆಗುವಾಗ ಎದುರಾದ ಅದೇ ಕರ್ಮಚಾರಿ ಗೇಟಿನಲ್ಲೇ ನಿಂತಿದ್ದರು ಸೈಕಲ್ಲ್ ಹಿಡಿದು. ನನ್ನ ಕೈಯ್ಯಲ್ಲಿನ ಲೆಟರ್ ನೋಡಿ 'ಏನಾಯ್ತು' ಅಂದ್ರು. "ಆಗ್ಲಿಲ್ಲ ಸರ್ ಕಟ್ಟಾಯ್ತು ಅಂದ್ರು" ಅಂದೆ. ಅವ್ರು ನನ್ನ ಕೈಯಿಂದ ಲೆಟರ್ ತಕ್ಕೊಂಡು ಒಂದ್ನಿಮಿಷ ಇರಿ ಈಗ್ಬಂದೆ ಎಂದು ಪಕ್ಕದ ಸಣ್ಣ ಬಾಗಿಲಿನಲ್ಲಿ ಒಳಹೊಕ್ಕರು. ಒಳಕೋಣೆ ಹೊಕ್ಕು ಚಕ್ಕನೆ ಸೀಲು ಹೊಡೆದು ಒಳಗೊಯ್ದು ಕೊಟ್ಟು ಹೊರಬಂದರು. "ನಿಮ್ಮ ಲೆಟರ್ ಕಟ್ಟಾಯ್ತು ನೀವನ್ನು ಹೋಗಿ ಮೇಡಮ್" ಎಂದು ನನ್ನ ಥೆಂಕ್ಸ ಕಿವಿಮುಟ್ಟುವ ಮೊದಲೇ ಸೈಕಲ್ ಏರಿ ಹೊರಟುಹೋಗಿದ್ದರು. ಅರೆ, ಅಷ್ಟೊತ್ತು ಅವರು ನನಗಾಗಿ ಕಾದು ನಿಂತಿದ್ದರು.
         
ಅವತ್ತೊಂದಿನ ಮಬ್ಬು ಕತ್ತಲು ಹರಿಯದ ಚುಮುಚುಮು ಬೆಳಗು. ಅರಬ್ಬಿಯ ದಂಡೆಯಮೇಲೆ ಕೈಬೀಸಿಕೊಂಡು ನಡೆದಿದ್ದೆವು ನಾವು ಗೆಳತಿಯರು. ಯಾರೋ ಬಿಕ್ಕಳಿಸಿ ಅಳುವ ಸದ್ದು.  ಕಲ್ಲು ಬೆಂಚಿನ ಮೇಲೆ  ವೃದ್ಧರೊಬ್ಬರು ಕೂತಿದ್ದರು. ನೂರಕ್ಕೆ ನೂರು ಸತ್ಯ ಅವ್ರು ಅಳ್ತಿದ್ದರು.  ನಾವು ಓಡಿದೆವು. ಅವರ ಸುತ್ತ ನಿಂತು ಏನಾಯ್ತು ಸರ್ ಏನಾದ್ರು ತೊಂದ್ರೆನಾ ಅಂತ ವಿಚಾರಿಸಿದೆವು. ಅಷ್ಟರಲ್ಲಾಗಲೇ ಅವರು ಕಣ್ಣುಗಳನ್ನು ಒರೆಸಿಕೊಂಡು ಅತ್ತ ಗುರುತನ್ನು ಮರೆಮಾಚುವ ಎಲ್ಲ ಕಸರತ್ತು ನಡೆಸಿದ್ದರು. ಏ…. ಏನಿಲ್ರಿ ನಾನ್ಯಾಕೆ ಅಳ್ತೇನೆ?  ಕಣ್ಣೊಳಗೆ ಮರಳಿನ ಕಣ ಬಿತ್ತೂರಿ ಒರಸ್ಕೊಂಡೆ ಅಂದ್ರು. ನಾವು ಮುಖಮುಖ ನೋಡಿಕೊಂಡೆವು. 

ಶುಭ್ರವಾದ ಬಿಳಿ ಪಾಜಾಮ ಜುಬ್ಬಾ ಧರಿಸಿದ ಹಿರಿಯರ ಕಾಲಲ್ಲಿ ಸ್ಟೆಂಡರ್ಡ ಕ್ವಾಲಿಟಿಯ ಶೂಸ್,ಮುಂಗೈಗೆ ತುಟ್ಟಿ ಗಡಿಯಾರ, ಬೆಲೆಬಾಳುವ ಕಣ್ಣಿನ ಕನ್ನಡಕ.  ಸೊಂಪಾದ ಶರೀರದ ಹಿರಿಯರನ್ನು ನೋಡಿದರೆ ಒಂದೊಳ್ಳೆ ಉಳ್ಳವರ ಮನೆಯ ಕೋಳ್ಗಂಬ ಆಗಿದ್ದರೆನ್ನುವದರಲ್ಲಿ  ಸಂಶಯವೇ ಇಲ್ಲ. ಇಲ್ಲಿಗೆ ದೂರಾಗಿ ಅಲ್ಲಿಗೆ ಹತ್ತಿರವಿರುವ ವಯಸ್ಸು . ನನ್ನಂಥ ಮಗಳೋ ಮಗನೋ ಮೊಮ್ಮಕ್ಕಳೋ  ಒಟ್ಟಿನಲ್ಲಿ ಎದೆಗೆ ತೀರ ಹತ್ತಿರವೆಂದುಕೊಂಡವರು ನೋವು ಕೊಟ್ಟಿರಬಹುದುದು. ಅವರಿವರಲ್ಲಿ ಆಡಿಕೊಂಡು ತನ್ನವರನ್ನು ಲೋಕದೆದುರು ಹರಾಜಿಗೆ ಇಡಲಾರರು. ಎಷ್ಟು ನುಂಗಲು ಸಾಧ್ಯವೋ ಅಷ್ಟನ್ನೂ ನುಂಗಿಕೊಂಡ ಜೀವ ನುಂಗಲಾರದ್ದನ್ನು ಹನಿಗಳಾಗಿಸಿ ಕಡಲಿಗೆಸೆದು ಹೋಗಲು ಬಂದಿರಬಹುದು. ಬದುಕಿನ ಸೂತ್ರವನ್ನು ಅರಿತವರು.
    
ನಾನು ಹೇಳ್ತಾನೆ ಹೋಗ್ತಿದ್ದೆ ನಾ ನಡೆದುಬಂದ ಭೂತಕಾಲವ ಅಗೆಯುತ್ತ ಹೋದರೆ ಅದೆಷ್ಟು ದೇವರುಗಳು. ಹೇ…..ಸ್ಟಾಪ್  ಸ್ಟಾಪ್  ಸ್ಟಾಪ್  ಎದುರು ಕೂತ ಗೆಳತಿ ತಡೆದಳು, " ನಾನ್ ಕೇಳಿದ್ದು ದೇವರನ್ನು ನೋಡಿದ್ಯಾ ಎಂದು ಮನುಷ್ಯರನ್ನಲ್ಲ."  ಟೈಟೈ ಫಿಶ್ ಎಂದು ನಕ್ಕಳು.  "ನೋಡು ಹುಡುಗಿ, ಇದು ಕಲಿಯುಗ. ಇಲ್ಲಿ ದೇವರನ್ನು ಇಡಿಯಾಗಿ ನೋಡೋಕಾಗಲ್ಲ. ಅದೇ ಸರ್ವಜ್ಞನೆಂಬವನು ಗರ್ವದಿಂದಾದವನೇ? ಅಲ್ಲೊಂದು ಇಲ್ಲೊಂದು ನುಡಿಗಲಿತು…….. ಅಂತಾರಲ್ಲ, ಹಾಗೆಯೇ ಈ ದೇವರೆಂಬವನನ್ನು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ನೋಡಿಯೇ   ತೃಪ್ತಿ  ಪಟ್ಕೋಬೇಕು‌." ಎಂದು ಅವಳ ಚೂಪು ಮೂಗು ಹಿಂಡಿದೆ. "ಅಬ್ಬಾ….ಉರಿಗೈ ಪಾಪಿ. ನೀನಂತೂ ದೇವರ ಇಷ್ಟೇ ಇಷ್ಟು ಭಾಗವೂ ಅಲ್ಲ ಬಿಡು" ಎಂದು ಮೂಗು ತಿಕ್ಕಿಕೊಂಡಳು. "ಆ ಹಂಬಲವೂ ನನಗಿಲ್ಲ ಬಿಡೆ" ಎನ್ನುತ್ತ ಮತ್ತೆ ಕೈ ಮುಂದೆ ಮಾಡಿದೆ .


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.