ದೇವಮಾನವ: ಡಾ. ದೋ. ನಾ. ಲೋಕೇಶ್

ಮಾಸಿದ ಬಟ್ಟೆ, ತಲೆಗೆ ಸುತ್ತಿದ ಕೊಳಕು ಟವೆಲ್, ಎಣ್ಣೆ, ನೀರು ಕಾಣದೆ ಧೂಳು ತುಂಬಿದ, ಕನಿಷ್ಟ ದಿನಕೊಮ್ಮೆ ಬಾಚಣಿಗೆಯೂ ಕಾಣದೆ ಗುಂಗುರು ಗುಂಗುರಾದ ಕೇಶರಾಶಿಯನ್ನು ಹೊಂದಿದ್ದ, ತನ್ನ ಶಿಳ್ಳೆಯೊಂದರಿಂದಲೇ ಹಯವೇಗದಲ್ಲಿ ಓಡುತ್ತಿದ್ದ ಬಸ್ಸನ್ನು ನಿಲ್ಲಿಸುತ್ತಿದ್ದ, ಹಾಗೂ ನಿಂತಿದ್ದ ಬಸ್ಸನ್ನು ಅದೇ ಶಿಳ್ಳೆಯಿಂದ ಚಲಿಸುವಂತೆ ಮಾಡುತಿದ್ದ ಎಲ್ಲರ ನಡುವೆ ಇದ್ದೂ ಇಲ್ಲದಂತಿದ್ದ ಅವನೊಬ್ಬನಿದ್ದ. ಅವನ ಹೆಸರೇ ಕ್ಲೀನರ್.

ಹಿಂದೆ ನಮ್ಮ ಬಾಲ್ಯದಲ್ಲಿ ಹಳ್ಳಿಗಾಡಿನ ಸಾರಿಗೆ ಸಂಪರ್ಕ ಸಾಧನಗಳೆಂದರೆ ಖಾಸಗಿ ಬಸ್ಸುಗಳೇ. ಈಗಿನಂತೆ ಸಾರಿಗೆ ಸಂಸ್ಥೆಯ ಬಸ್ಸುಗಳಾಗಲಿ, ಜನಗಳನ್ನು ಸರಕು ತುಂಬಿದಂತೆ ಒಬ್ಬರ ಮೇಲೊಬ್ಬರನ್ನು ಕೂರಿಸಿಕೊಂಡು ನಿಮಿಷಕ್ಕೊಂದರಂತೆ ಓಡಾಡುವ ಆಟೋಗಳ ಅಬ್ಬರವಾಗಲಿ ಇರಲಿಲ್ಲ. ಆಗ ಇದ್ದ ಚಿಕ್ಕ ಪೆಟ್ರೋಲ್ ಆಟೋಗಳಲ್ಲಿ ಓಡಾಡುವುದು ದುಭಾರಿಯ ಬಾಪ್ತಾಗಿತ್ತು. ಆದುದ್ದರಿಂದ ನಾವು ಓಡಾಡಲಾಗಲಿ, ಬೆಳೆದ ತರಕಾರಿ, ದವಸ ಧಾನ್ಯಗಳನ್ನು ಪೇಟೆಗೆ ಸಾಗಿಸುವುದಕ್ಕಾಗಲಿ ಖಾಸಗಿ ಬಸ್ಸುಗಳನ್ನೇ ಅವಲಂಭಿಸಿದ್ದೆವು.

ಈ ಖಾಸಗಿ ಬಸ್ಸುಗಳಲ್ಲಿ ಒಬ್ಬ ಚಾಲಕ, ಒಬ್ಬ ನಿರ್ವಾಹಕ, ಕೆಲವು ಬಸ್ಸುಗಳಲ್ಲಿ ಒಬ್ಬರು, ಕೆಲವುಗಳಲ್ಲಿ ಇಬ್ಬರು ಕ್ಲೀನರ್ ಸೇರಿ ಮೂರು ಅಥವಾ ನಾಲ್ಕು ಜನ ಸಿಬ್ಬಂದಿಗಳು ಇರುತ್ತಿದ್ದರು.

ಬಸ್ಸನ್ನು ತೊಳೆಯುವುದು, ಒಳಗಡೆ ಕಸ ಗುಡಿಸುವುದು, ಪಂಚರ್ ಆದರೆ ಬಸ್ಸಿನ ಚಕ್ರ ಬಿಚ್ಚಿ ಬೇರೆ ಚಕ್ರ ಅಳವಡಿಸುವುದು, ಬಸ್ಸಿನ ಮೆಟ್ಟಿಲಿನ ಎತ್ತರಕ್ಕಷ್ಟೇ ಇದ್ದ ಸಣ್ಣ ಮಕ್ಕಳ ತೋಳು ಹಿಡಿದು ಎತ್ತಿ ಬಸ್ಸಿಗೆ ಹತ್ತಿಸುವುದು ಹಾಗೂ ಇಳಿಸುವುದು, ಮಣಭಾರದ ಕೈ ಚೀಲಗಳನ್ನು ಹಿಡಿದು ಬಸ್ಸು ಹತ್ತಲು ಹೆಣಗಾಡುತ್ತಿದ್ದ ಹೆಂಗಸರ ಕೈಚೀಲಗಳನ್ನು ಬಸ್ಸಿನೊಳಗಿಟ್ಟು ಅವರು ಸರಾಗವಾಗಿ ಬಸ್ಸತ್ತಲು ಸಹಾಯ ಮಾಡುವುದು, ರೈತರ ತರಕಾರಿ ಚೀಲಗಳಿದ್ದರೆ ಅವುಗಳನ್ನು ತನ್ನ ತಲೆಯ ಮೇಲೆ ಹೊಯ್ದು ಬಸ್ಸಿನ ಟಾಪಿಗೆ ಹಾಕುವುದು ಇಂತವೇ ಶ್ರಮದಾಯಕ ಕೆಲಸಗಳು ಕ್ಲೀನರ್ ಪಾಲಿಗಿದ್ದವು. ಯಜಮಾನ ಕುಳಿತಿದ್ರೆ ನಾವು ಮಲಗಿ ಕೆಲಸ ಮಾಡುತ್ತೇವೆ ಅನ್ನುವ ಸುಲಭದ ಕೆಲಸವಲ್ಲ ಅವನದು.

ಈ ರೀತಿಯ ಕೊಳಕು ಮೇಲ್ನೋಟವಿದ್ದರೂ ಆ ಕಾಲದ ಚಿಕ್ಕ ವಯಸ್ಸಿನ ನನ್ನಂತ ಬಹುಪಾಲು ಮಕ್ಕಳಿಗೆ ಅವನೊಬ್ಬ ದೇವಮಾನವನಾಗಿದ್ದ, ಯಾವ ಚಿತ್ರದ ನಾಯಕ ನಟಿನಿಗಿಂತಲೂ ಅಚ್ಚುಮೆಚ್ಚಾಗಿದ್ದ. ಬಹುಸಂಖ್ಯಾತ ಗಂಡು ಮಕ್ಕಳಿಗೆ ದೊಡ್ಡವರಾದ ಮೇಲೆ ಕ್ಲೀನರ್ ಆಗುವುದು ಕನಸಾಗಿತ್ತು ಎಂದರೆ ಬಹುಶಃ ಯಾರೂ ನಂಬುವುದಿಲ್ಲ. ಯಾರು ಯಾಕೆ ಅದನ್ನು ನೆನೆದರೆ ನನಗೇ ನಗು ಬರುತ್ತದೆ.

ಕ್ಲೀನರ್ ಒಬ್ಬ ಈ ಪರಿ ಚಿಟ್ಟೆ ಹುಡುಗರ ಚಿತ್ತಚೋರನಾಗಲು ಒಂದೇ ಕಾರಣವಿತ್ತು. ಕ್ಲೀನರ್ ನಿಂತ ಬಸ್ಸನ್ನು ಹತ್ತಿದ್ದನ್ನು ನಾವು ಯಾವತ್ತೂ ನೋಡಲೇ ಇಲ್ಲ. ಬಸ್ಸಿಗೆ ರೈಟ್ ಹೇಳಿ ಅದು ಓಡಲು ಶುರುವಾದ ನಂತರ ಅವನೂ ಅದರ ಜೊತೆ ಓಡಿ, ಓಡಿ, ಚಲಿಸುತ್ತಿರುವ ಬಸ್ಸಿಗೆ ಚಂಗನೆ ನೆಗೆಯುವ ಅದೊಂದೇ ಭಂಗಿಯಿಂದ ನಮ್ಮೆಲ್ಲರ ಹೃದಯಗಳನ್ನು ಕದ್ದಿದ್ದ ಎಂದರೆ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ಬೇರೆ ಬೇರೆ ಬಸ್ಸಿನ ಕ್ಲೀನರ್ಗಳು ಬಸ್ಸು ನಿಲ್ಲಿಸಲು ಹೊಡೆಯುತ್ತಿದ್ದ ವಿವಿಧ ರೀತಿಯ ಶಿಳ್ಳೆಗಳೂ ಸ್ವಲ್ಪ ಮಟ್ಟಿಗೆ ನಮ್ಮ ಗಮನವನ್ನು ಸೆಳೆದಿದ್ದವು. ಒಬ್ಬ ಎರಡೂ ಬೆರಳುಗಳನ್ನು ಬಾಯಲ್ಲಿಟ್ಟು ಶಿಳ್ಳೆ ಹೊಡೆದರೆ ಮತ್ತೊಬ್ಬ ಕಿರುಬೆರಳೊಂದರಿಂದಲೇ ಜೋರಾಗಿ ಶಿಳ್ಳೆ ಹೊಡಿಯುತ್ತಿದ್ದ, ಮಗದೊಬ್ಬ ಬಾಯಲ್ಲಿ ಬೆರಳನ್ನೇ ಇಡದೆ ತುಟಿಗಳನ್ನು ವಿವಿಧ ಆಕಾರಗಳಿಗೆ ತಿರುಗಿಸಿ ಜೋರಾಗಿ ಶಿಳ್ಳೆ ಹೊಡೆಯುತ್ತಿದ್ದದ್ದು ನಮ್ಮನ್ನು ಆಕರ್ಷಿಸುತ್ತಿತ್ತು. ತರಕಾರಿ ಮೂಟೆಗಳನ್ನು ತಲೆಯ ಮೇಲಿರಿಸಿ ಕೈಯಿಂದ ಹಿಡಿಯದೆ ಬ್ಯಾಲೆನ್ಸ್ ಮಾಡಿ ಮೂಟೆಗಳನ್ನು ಟಾಪಿಗೆರಿಸುತ್ತಿದ್ದ ಅವನ ಚಾಕಚಕ್ಯತೆ ಆಶ್ಚರ್ಯವನ್ನು ಉಂಟುಮಾಡುತ್ತಿತ್ತು.

ಆಟವಾಡಲು ಮೊಬೈಲ್ಗಳು ಇಲ್ಲದ ಆ ಕಾಲದಲ್ಲಿ, ಯಾವುದಾದರೂ ಕೆಟ್ಟು ನಿಂತ ಆಟೋಗಳೋ, ಬೇರೆ ಯಾವುದಾದರೂ ವಾಹನಗಳೋ ಸಿಕ್ಕಿದರೆ ಅದರಲ್ಲೇ ಬಸ್ಸಾಟ ಆಡುತ್ತಿದ್ದೆವು. ಇರುವ ಮಕ್ಕಳೆಲ್ಲ ಚಾಲಕ, ನಿರ್ವಾಹಕ, ಪ್ರಯಾಣಿಕ ಹೀಗೆ ವಿವಿಧ ಪಾತ್ರಗಳನ್ನು ಹಂಚಿಕೊಂಡು ಆಟವಾಡುವುದು ನಮ್ಮ ಬಾಲ್ಯದ ಆಟಗಳಲ್ಲೊಂದು. ಈ ರೀತಿ ಆಟವಾಡುವಾಗ ಕ್ಲೀನರ್ನ ಪ್ರಭಾವ ಎಷ್ಟಿತ್ತೆಂದರೆ, ಅವನ ಪಾತ್ರಕ್ಕಾಗಿ ಮಕ್ಕಳ ನಡುವೆ ಮಹಾಯುದ್ಧ ನಡೆದು ಕೊನೆಗೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಹುದ್ದೆ ಹಂಚುವಂತೆ ಪ್ರತೀ ಮಕ್ಕಳು ಹತ್ತತ್ತು ನಿಮಿಷ ಕ್ಲೀನರ್ ಹುದ್ದೆಯನ್ನು ಹಂಚಿಕ್ಕೊಳ್ಳುತ್ತಿದ್ದೆವು. ಹುದ್ದೆ ಪಡೆದವನ ಆನಂದ ಹೇಳತೀರದು, ಅವನ ದೇಹ ಭೂಮಿಯ ಮೇಲೇ ಇದ್ದರೂ ಅವನ ಮನಸ್ಸು ಮಾತ್ರ ಅಂತರಿಕ್ಷದಲ್ಲೇ ಹಾರಾಡುತಿತ್ತು. ಎಲ್ಲರನ್ನೂ ಗಾಡಿಗೆ ಹತ್ತಿಸಿ ನಿಂತ ಗಾಡಿಗೆ ರೈಟ್ ರೈಟ್ ಅಂತ ಹೇಳಿ ನಿಂತಲ್ಲೇ ಹತ್ತು ಹೆಜ್ಜೆ ಓಡಿ ಗಾಡಿಗೆ ಜಿಗಿಯುತ್ತಿದ್ದದ್ದನ್ನು ನೆನೆದರೆ ಮನಸ್ಸಿಗೆ ಈಗಲೂ ಮುದವೆನಿಸುತ್ತದೆ.

ಈಗ ಕಾಲ ಸರಿದಿದೆ ಖಾಸಗೀ ಬಸ್ಸುಗಳು ಕಡಿಮೆಯಾಗಿವೆ, ಸಂಬಳ ಕೊಡಲು ಕಷ್ಟ ಎಂದು ಕೆಲವು ಬಸ್ಸುಗಳಲ್ಲಿ ಕ್ಲೀನರ್ ಮಾಯವಾಗಿದ್ದಾನೆ. ನಮ್ಮ ಆದ್ಯತೆಗಳೂ ತೀರ ಬದಲಾಗಿವೆ. ಮಾಸಿದ ಬಟ್ಟೆ, ಕೊಳಕು ತಲೆಗೂದಲು ಇವೆಲ್ಲವುಗಳನ್ನು ನಿರ್ಲಕ್ಷಿಸಿ ಕ್ಲೀನರ್ನ ಧನಾತ್ಮಕ ಅಂಶಗಳನ್ನು ಮಾತ್ರ ಗುರುತಿಸುತ್ತಿದ್ದ ನಮ್ಮ ಬಾಲ್ಯದ ಮುಗ್ದತೆ ಇಂದು ಮಾಯವಾಗಿದೆ. ಎಲ್ಲರಲ್ಲೂ ಋಣಾತ್ಮಕ ಅಂಶಗಳನ್ನು ಹುಡುಕುವ ಚಾಳಿ ಕರತಲಾಮಲಕವಾಗಿದೆ. ಕ್ಲೀನರ್ ಆಗಬೇಕೆಂದುಕೊಂಡವನು ಬರು ಬರುತ್ತಾ, ಪೊಲೀಸ್, ಡಾಕ್ಟರ್, ವಕೀಲ, ಶಿಕ್ಷಕ ಹೀಗೆ ಏನೇನೋ ಕನಸುಗಳನ್ನು ಬದಲಿಸಿಕೊಂಡು ಕೊನೆಗೆ ಇಲ್ಲಿಗೆ ಬಂದು ನಿಂತಿದ್ದೇನೆ. ಈಗ ಮಣ್ಣು ಮರಳಿ ಬಾ ಎನ್ನುತ್ತಿದೆ. ನಮ್ಮ ಸುತ್ತ ನಾವೇ ಕಟ್ಟಿಕೊಂಡ, ಹಣ, ಅಂತಸ್ತು, ಗೌರವ, ಹೆಸರು, ಅಧಿಕಾರ ಎಂಬ ಅಭೇದ್ಯ ಕೋಟೆಗಳನ್ನು ಭೇದಿಸಿ ಮರಳಿ ಮಣ್ಣನ್ನು ಸೇರುವೆನೇ ಎಂಬುದೇ ಬದುಕಿನಲ್ಲಿ ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಡಾ. ದೋ. ನಾ. ಲೋಕೇಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x