ಶ್ರೀ ದೇವನೂರ ಮಹಾದೇವ ಅವರಿಗೆ,
ಆ ದಿನ ನಿಮ್ಮ ಸಂಪಾದಕತ್ವದಲ್ಲಿ ಪ್ರಜಾವಾಣಿ ವಿಶೇಷ ಸಂಚಿಕೆ ತಂದಿದೆ ಅಂತ ಮೈಸೂರಿಂದ ಫೋನ್ ಮಾಡಿದ ಪ್ರಸಾದ್‌ಕುಂದೂರಿಯು ಹೇಳಿದನು. ಆಗ ನಾನು ಊರಿನಲ್ಲಿದ್ದೆ. ಕಳೆದ ೧೫ ವರ್ಷಗಳಿಂದ ಊರಿಗೆ ಪರಕೀಯನಾಗಿದ್ದು, ಈಗ ೬ ತಿಂಗಳಿನಿಂದ ಊರಿನವನಾಗಲು ಕಷ್ಟಪಡುತ್ತಿರುವ ಕಾಲದಲ್ಲಿ ನೀವೊಂದು ಸಂಚಿಕೆ ಮಾಡಿದ್ದೀರ ಅನ್ನೋದೆ ಉತ್ಸಾಹವಾಯಿತು. ಇಲ್ಲಿ ಊರಲ್ಲಿದ್ದಾಗ ಕಾಲ, ದಿನಾಂಕಗಳು ಪರಿವೆಗೇ ಬರುವುದಿಲ್ಲ. ಆವತ್ತು ಅಂಬೇಡ್ಕರ್ ಜಯಂತಿ ಅಂತ ಕೂಡ ಮರ್‍ತುಹೋಗಿತ್ತು. ಅಂಬೇಡ್ಕರ್ ಜಯಂತಿ ಅಂದಾಗೆಲ್ಲ ’ಯಾವ ಕುಲವಯ್ಯ ಯಾವ ಮತವಯ್ಯ’ ಅಂತ ಜನ್ನಿ ಜತೆ ಹಾಡಿಕೊಂಡು ರೂಪಕ ಮಾಡ್ತಿದ್ದುದು ನೆನಪಾಯಿತು. ಆ ರೂಪಕಾನ ಎಷ್ಟು ಕಡೆ ಎಲ್ಲೆಲ್ಲಿ ಮಾಡಿದ್ದೇವೋ ನೆನಪಿಲ್ಲ. ನಮಗೇ ವಯಸಾಯ್ತೋ, ಹಾಡಿಗೆ ಸುಸ್ತಾಯ್ತೊ? ಜಾತಿವ್ಯವಸ್ಥೆಗೆ ಮಾತ್ರ ವಯಸ್ಸು, ಸುಸ್ತು ಏನೂ ಆಗದಿಲ್ಲವೆ? ಇರಲಿ.
ನಾನು ಊರಿಂದ ತುರುವೇಕೆರೆಗೆ ಹೋಗಿ ಪ್ರಜಾವಾಣಿ ಕೊಂಡಾಗ ಸಂಜೆ ೪ ಗಂಟೆ. ತುರುವೇಕೆರೆಯಲ್ಲೂ ಅಂಬೇಡ್ಕರ್ ಜಯಂತಿ ಮುಗಿದು ಪೆಂಡಾಲ್ ಬಿಚ್ಚುತ್ತಿದ್ದರು. ಅಲ್ಲಿ ಯಾರು ಬಂದು ಏನು ಮಾತಾಡಿದರೋ ಗೊತ್ತಾಗಲಿಲ್ಲ. ಆಗ ಅಲ್ಲೆ ಇದ್ದ ಜಗದೀಶನು ’ಬನ್ನಿಸಾ ಟೀ ಕುಡಿಯನ’ ಎಂದನು. ’ಎಂಗಾಯ್ತು ಜಯಂತಿ’ ಎಂದು ಕೇಳಲು ’ಅಯ್ ಬಿಡಿಸಾ. ಈಕಡೆ ಒಳ್ಳೆ ಸ್ಪೀಕರ್‌ಗಳೇ ಇಲ್ಲ. ನೀವು ಮೈಸೂರಲ್ಲಿದ್ದೀರಲ್ಲ. ನಮ್ಗೆ ಒಳ್ಳೊಳೆ ಸ್ಪೀಕರ್‍ಗಳ ಕರ್‍ಸಿಕೊಡಿ ಸಾ’ ಎಂದನು. ನಾನು ’ಕರ್‍ಸನ, ಕರ್‍ಸನ’ ಅಂದೆ. ’ಸಾ ನಿಮ್ಗೆ ಸಿದ್ಲಿಂಗಯ್ಯೋರು, ಮಾದೇವ್ನೋರು ಗೊತ್ತಲ್ವುರಾ. ಅವರ್‍ನೆ ಯಾಕೆ ಪಿಕ್ಸ್ ಮಾಡಬಾರದು’ ಎಂದು ನೇರ ಬಾಂಬನ್ನೆ ಹಾಕಿದನು. ಸಿದ್ಲಿಂಗಯ್ಯೋರು, ಮಾದೇವ್ನೋರ್‍ನ ನಾನು ಪಿಕ್ಸ್ ಮಾಡೋದೆ? ನನ್ನ ಬದುಕಿನ ಅತ್ಯಂತ ದೊಡ್ಡ ಹಲ್ಲೆ ಇದೇ ಎಂದು ಖಚಿತವಾಯಿತು. ಹಾಗೂ ಯೋಚಿಸಿದೆ; ನಾನೆಂದದಾರೂ ಮಬ್ಬುಗತ್ತಲಲ್ಲಿ ಮಾತಾಡುವಾಗ ’ಆ ಮಾದೇವೋರು ನಮ್ಮಾಫೀಸಿಗೆ ಬತ್ತಿರ್ತರೆ. ಆಗ ನಂ ಕೆಂಪ್ರಾಜು ತಂದ್ಕೊಟ್ಟ ಟೀ ಕುಡ್ಕಂಡು, ಸಿಕರೋಟ್ ಸೇದ್ಕಂಡು ನಿಂತಿರ್‍ತರೆ’ ಎಂದು ಹೇಳಿಬಿಟ್ಟಿರುವೆನೆ? ಎಷ್ಟು ನೆನಪಿಸಿಕೊಂಡರೂ ಅಂತಾದೇನೂ ನೆನಪಾಗಲಿಲ್ಲ. ಕೊನೆಗೆ ಜಗದೀಶನಿಗೆ ’ಮುಂದಿನ ಜಯಂತಿ ಕಾಲಕ್ಕಲ್ಲವೆ ಈ ವಿಚಾರ. ಟೈಮಿದೆ ಬುಡು’ ಅಂತೇಳಿ ತಪ್ಪಿಸಿಕೊಂಡು ಬರುವಷ್ಟರಲ್ಲಿ ನೀಲಿಗಾಂಧಿಯ ಎರಡು ನೋಟುಗಳು ಗಾಂಧಿಗೆ ಇಷ್ಟವಾಗದ ಜಾಗದಲ್ಲಿ ಖರ್ಚಾಗಿದ್ದವು.
ಬಂದು ಪತ್ರಿಕೆಯನ್ನು ತಿರುವಿಹಾಕಿದೆನು. ಆಮೇಲೆ ನಿಧಾನವಾಗಿ ಓದಿದೆನು. ಇದೊಂದು ಐತಿಹಾಸಿಕ ಪ್ರಯೋಗವೆಂದೇ ನನ್ನ ಅಭಿಪ್ರಾಯ. ನನಗೆ ಅಲ್ಲಿ ತುಂಬ ಇಷ್ಟವಾದದ್ದು ಸುದೇಶ್‌ದೊಡ್ಡಪಾಳ್ಯ ಲೇಖನ. ಕಳೆದ ಆರು ತಿಂಗಳಿಂದ ಊರಿನಲ್ಲೇ ಇರುವುದರಿಂದ ಇಂತಾದೊಂದು ಲೇಖನ ನಾನೇ ಬರೆದಿದ್ದರೆ ಅನಿಸಿತು. ಬೇರೆ ಊರಿನಲ್ಲಿ ದಲಿತ ಗೆಳೆಯನ ಮನೆಯಲ್ಲಿರುವುದಕ್ಕೂ, ಸ್ವಂತ ಊರಲ್ಲಿ ದಲಿತರ ಕೇರಿಗೂ ಹೋಗುವುದಕ್ಕೂ ಇರುವ ವ್ಯತ್ಯಾಸ ಪರಿಣಾಮಗಳನ್ನು ಅಂದಾಜಿಸತೊಡಗಿದೆ. ಅದೋ ಅಂದಾಜಿಗೆ ಬರುವುದಿಲ್ಲ. ಹೀಗಾಗಿ ಇಷ್ಟು ದಿನದ ಅನುಭವವನ್ನೇ ಬರೆದರೆ ಹೇಗೆ ಅನಿಸಿತು. ಪೀಠಿಕೆಯೇ ಉದ್ದ ಅನಿಸಿದರೆ ಕ್ಷಮೆ ಇರಲಿ.
ಅನಿರೀಕ್ಷಿತವಾಗಿ ಊರಿಗೆ ಬಂದ ನಾನು ವ್ಯವಸಾಯದ ಕೆಲಸ ಮಾಡಬೇಕಾಗಿತ್ತು. ’ಏ ಆಗಲ್ಲ ಬಿಡಿ. ಕಷ್ಟ ಬಿಡಿ. ಮುಂಚಿನಂಗಲ್ಲ ಊರು. ಕೆಲಸಕ್ಕೆ ಆಳೇ ಸಿಗಲ್ಲ ಬಿಡಿ.. ’ ಇಂಥ ಮಾತುಗಳ ತೋರಣವೇ ಎಲ್ಲ. ನಮ್ಮೂರಲ್ಲಿ ಹೊಲಗದ್ದೆ ಕೆಲಸಕ್ಕೆ ಜಯಮ್ಮನ ಗುಂಪು, ಲೋಲಮ್ಮನ ಗುಂಪು, ಗೌರಮ್ಮನ ಗುಂಪುಗಳು ಭಾಳಾ ಪ್ರಮುಖವಾದವು. ಈ ಗುಂಪುಗಳನ್ನು ಚೆನ್ನಾಗಿ ನೋಡ್ಕಂಡರೆ ಕೆಲ್ಸ ಆಯ್ತದೆ ಅಂತ ಗುಪ್ತಚಾರರು ವರ್ತಮಾನ ಕೊಟ್ಟರು. ಈ ಗುಂಪುಗಳು ಸ್ರೀಸಕ್ತಿ ಗುಂಪುಗಳಾಗಿ ಲೋಕಲ್ ರಾಜಕೀಯ ಮಾಡುವಷ್ಟು ಪ್ರಭಾವಶಾಲಿಗಳಿವೆ. ’ಇವರ ಬಗ್ಗೆ ಉಷಾರು. ಓಗಿ, ಬನ್ನಿ ಅಂತ ಟೌನ್ ಟೈಪ್‌ನಲ್ಲಿ ಮಾತಾಡುಸ್‌ಬ್ಯಾಡ. ಅಂಗೆ ಮಾತಾಡಿಸಿದ್ರೆ ತಲೆಮ್ಯಾಲೆ ಕೂತ್ಕತಾರೆ ಈ ಎಂಗುಸ್ರುಗಳು. ದುಡ್ ಕೇಳಿದೇಟ್ಗೆಯ ಕೊಡೋಕೆ ಓಗ್‌ಬ್ಯಾಡ. ನಾಲ್ಕೈದು ಸಲ ತಿರುಗ್ಸಿ ಕೊಟ್ರೆಯ ಇವ್ರು ದಾರಿಗೆ ಬರದು’ ಮುಂತಾಗಿ ಸಲಹೆಗಳು ಬಂದವು.
ಈ ಹೋಗಿಬನ್ನಿ ಅಂತ ಕರಿಬೇಡ ಅಂತಿದ್ದವರೆ ಈ ಗುಂಪಿನ ದಂಡನಾಯಕಿಯರನ್ನ ಮಾತಾಡಿಸುವಾಗ ’ಲೋಲಕ್ಕ ಡಾರ್ಲಿಂಗ್ ಈವತ್ತು ಬರಕುಲವೆ, ಲೇಡಿರ್‍ಯಾಂಬೊ ಗೌರಿ ಈವತ್ತು ನಮ್ ಗದ್ದೆಗೆ ಬಂದುಬುಡು’ ಅಂತ ಮಾತಾಡಿಸೋರು. ಹಾಗೆ ಕರೆಸಿಕೊಂಡ ಅವರ ಮುಖದಲ್ಲಿ ಏನೋ ಧನ್ಯತೆ,ಏನೋ ಮಾನ್ಯತೆ. ಇದ ನೋಡಿ ಈ ನನ್ಮಗನ ಇಂಗ್ಲಿಸು ಏನು ಪ್ರಭಾವಿ ಭಾಷೆಯಪ್ಪ ಅಂತ ಆಶ್ಚರ್ಯವೇ ಆಗದು. ಏಕ್‌ದಂ ಈ ಥರಾ ಪ್ರಯೋಗ ಮಾಡುವಷ್ಟು ಸಲಿಗೆಯ ಮನಸ್ಥಿತಿಲಿ ನಾನು ಇರ್‍ಲಿಲ್ಲ. ಹೀಗಾಗಿ ನನ್ನ ಕೆಲಸಗಳು ಕುಂಟತೊಡಗಿದವು. ನಾನು ದಿನಾ ಸಂಜೆ ’ಗೌರಿ ಬಾರೆ, ಲೋಲಿ ಬಾರೆ, ಜಯ ನೀನು ಬಾರೆ’ ಎಂದು ಧರಣಿಮಂಡಲದ ಗೊಲ್ಲನ ರೀತಿ ಕರೆಯೋದೂ, ಅವರು ’ನಾಳಿಕೆ ನಿಮ್ದುಕ್ಕೆ ಅಲ್ವುರಾ’ ಅಂತ ಆಶ್ವಾಸನೆ ಕೊಡದು… ಮಾರನೇಗೆ ಚಕ್ಕರ್ ಹಾಕೋದು…ಇದೇ ಆಗೋಯ್ತು.
ಇದರ ಮಧ್ಯೆ ಇನ್ನೊಂದು ಅಂಶ ಕಾಣತೊಡಗಿತು. ನಾನು ಈ ದಂಡನಾಯಕಿಯರನ್ನ ಕರೆಯಲು ಹೋದಾಗೆಲ್ಲ ನಂಮೋನೊಬ್ಬನು ಜತೆಗೆ ಬರುತ್ತಿದ್ದನು. ಸುಮಾರು ಐವತ್ತರ ವಯಸಿನೋನು. ಕೂಗಿದೊಡನೆ ಯಾರೂ ಓಗೊಡದಿದ್ದರೆ ಅವನಿಗೆ ಕೋಪವೋ ಕೋಪ. ಕೆಲಸಕ್ಕೆ ಬರದೇ ಇದ್ದುದರ ಬಗ್ಗೆ ಇರುವ ಆಕ್ಷೇಪಕ್ಕಿಂತ, ಕೂಗಿದೊಡನೆ ಓಗೊಡದಿರುವುದರ ಬಗ್ಗೆಯೇ ಕೋಪ. ’ಕರುದ್ರೆ ಆ ಅನ್ನಕ್ಕೇನು ಮಲ್ಲಾಗರವೆ ಇವ್ಕೆ. ಇವರ ಮನೆ ಬಾಗಿಲಿಗೇ ಹೋಗಿ ಕೂಗಿದ್ರೂ ಎಷ್ಟು ನೆಣ ನೋಡು’ ಅನ್ನೋನು. ಇದೇ ಮೂಲದ ಅಸಹನೆಯ ಬೇರೆ ಮಾತುಗಳನ್ನು ಸಿದ್ದರಾಮಯ್ಯನವರ ಅಹಿಂದ ಚಳುವಳಿ ಸಮಯದಲ್ಲಿ ಮೈಸೂರುಪಟ್ಟಣದ ಟೀಅಂಗಡಿ, ಮಧುಬಾಂಡ ಶಾಲೆಗಳಲ್ಲಿ ಕೇಳಿದ್ದು ಕೂಡ ನೆನಪಿಗೆ ಬಂತು.
ಆದರೂ ನನ್ನ ಕೆಲಸ ಆಗುವ ಲಕ್ಷಣಗಳು ಕಾಣಲಿಲ್ಲ. ಈಗ ಎಲ್ಲ ಊರುಗಳಲ್ಲೂ ಕೆಲಸಕ್ಕೆ ಆಳು ಸಿಗಲ್ಲ ಅನ್ನೋದು ವಿಶೇಷವೇನಲ್ಲ. ಇದು ವ್ಯವಸಾಯಭೂಮಿ ಕ್ಷೇತ್ರದ ವ್ಯಾಪ್ತಿ ವರ್ಸಸ್ ಕೃಷಿಕಾರ್ಮಿಕರ ಪ್ರಮಾಣವನ್ನು ಅವಲಂಬಿಸಿದ ಸಮಸ್ಯೆ ಎಂದರೆ ಸರಳವಾಗುತ್ತದೆ. ಮಿಗಿಲಾಗಿ ಇಂದಿಗೂ ಹಳಬರೇ ಹೆಚ್ಚು. ಈ ಕೆಲಸಗಳನ್ನು ಮಾಡುತ್ತಿರುವವರು. ಹೀಗಿರುವಾಗ ಸುಗ್ಗಿ ಕಾಲದಲ್ಲಿ ಈ ಚಿಕ್ಕ ಗುಂಪಿನ ಮೇಲೆ ಇರುವ ದೊಡ್ಡ ಒತ್ತಡ. ಇದು ಊರಲ್ಲಿರೋರಿಗೆ ಕಾಣೋದೆ ಬೇರೆ. ಸರ್ಕಾರ ರೇಷನ್ ಕೊಟ್ಟಿದ್ದೆ ಇಷ್ಟಕ್ಕೆಲ್ಲ ಕಾರಣ, ಸ್ರೀಸಕ್ತಿ ಗುಂಪುಗಳಿಂದಲೂ ಊರು ಹಾಳಾಯ್ತು ಅನ್ನೋದು ಜನಪ್ರಿಯ ಮಾತು.
ಈವತ್ತು, ನಾಳೆಗಳ ಮಧ್ಯದಲ್ಲಿ ಬೆಳೆದಿದ್ದ ಪೈರಿನಿಂದ ಕಾಳು ಉದುರತೊಡಗಿತ್ತು. ಅಂತೂ ಒಂದಿನ ಕುಯಿಲು ಮಾಡಿದೆ. ಆಮೇಲೊಂದಿಷ್ಟು ದಿನದ ಮೇಲೆ ಫಸಲು ಮನೆಗೆ ತಂದೆ. ಈಗ ಭತ್ತ ಬಡಿಯೋಕೆ ಎಲ್ಲ ಕಡೆ ಇರುವಂತೆ ನಮ್ಮೂರಲ್ಲೂ ಮಿಶೀನು ಬಂದದೆ. ಆದ್ರೆ ಈ ಮಿಶೀನಿನ ಜತೆ ಕೆಲ್ಸ ಮಾಡೋಕು ಎಂಟತ್ತು ಜನ ಬೇಕೆಬೇಕು. ಒಂದು ರೀತಿಯ ಕೋಆರ್‍ಡಿನೇಷನ್ ಬೇಕು ಇಲ್ಲಿ. ರಂಗಭೂಮೀಲಿ ನಾವು ಕಲಿತಿದ್ದು ಅದನ್ನೇ ಆದ್ರಿಂದ ನನ್ನ ಪ್ರಕಾರ ಇದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ಬದಲಾಗಿರುವ ಹಳ್ಳಿಯ ಪರಿಸ್ಥಿತಿಯಲ್ಲಿ ಯಂತ್ರ ಮತ್ತು ಮಾನವ ಜತೆಯಾಗಿ ಹೋಗೋದನ್ನ ಅರ್ಥ ಮಾಡಿಕೊಳ್ಳಬೇಕಿದೆ ಎಂದೇ ಅನಿಸುತ್ತದೆ.
ಇದಾಯ್ತ. ಇನ್ನು ತೋಟದ ಕಾಯಿ ಕೀಳಿಸೋ ಕಾಲ ಬಂತು. ನಮ್ಮ ಕಡೆ ಬಿದಿರು ಗಳಕ್ಕೆ ಕೊನಗತ್ತಿ ಕಟ್ಕೊಂಡು ಕಾಯಿ ಕೀಳೋದು ಪರಂಪರೆ. ನಾವು ಚಿಕ್ಕವರಿದ್ದಾಗ ಕಾಯಿಕೀಳೋ ನಂಜಯ್ಯ ಇದ್ದನು. ಈಗ ಅವನಿಗೆ ವಯಸಾಗಿದೆ. ಅವನ ಮಗನಾದ ಚಂದ್ರುವು ಬಿಎಗಾಗಿ ತುಮಕೂರಿಗೆ ಹೋಗಿ ಬಂದನು. ಆಮೇಲೆ ನವಸಾಕ್ಷರ ಕೇಂದ್ರದಲ್ಲಿ ಪ್ರೇರಕನಾಗಿದ್ದನು. ಈಗ ಸಾಕ್ಷರತೆಯೇ ದಿಕ್ಕೆಟ್ಟಿರುವಾಗ ಅದರ ಫಲವಾಗಿ ಇವನೂ ಅಂತೆಯೇ ಇರುವನು. ಕಾಯಿ ಕೆಡವಲು ಬೇರೆ ಯಾರವರೆ ಅಂತ ನಾನು ಗುಪ್ತಚರರಿಗೆ ಕೇಳಿದೆ. ರಂಗ ಒಳ್ಳೆ ಹಣ್ಣುಗಾಯಿನೇ ನೋಡಿ ಕೀಳ್ತಾನೆ. ಆದ್ರೆ ಹೇಳಿದ ಟೈಮಿಗೆ ಬರಕುಲ್ಲ, ಅಲುಸ್ತಾನೆ. ಕತ್ತೆಮಂಜನೂ ಪರವಾಗಿಲ್ಲ. ಆದ್ರೆ ಕಳ್ಳಗೈ, ಉಷಾರು. ಇವ್ರಿಬ್ರು ಬಿಟ್ರೆ ನಂಜಾಮರಿ ಮಗ ಕರ್ನಲ್ ಓಕೆ. ಆದ್ರೆ ಎಳೆಕಾಯಿ ಜಾಸ್ತಿ ಕಿತ್‌ಬುಡ್ತಾನೆ. ನಿಂತ್ಕಂಡು ಕೀಳುಸ್ಬೇಕು. ಆಮೇಲೆ ಸಂಜೆಗೆ ನೋಡ್ಕಬೇಕು-ಗುಪ್ತಚರರು ವರದಿ ಕೊಟ್ಟರು.
ನನಗೆ ಈ ಕರ್ನಲ್ ಎಂಬ ಹೆಸರೇ ಬಹಳ ವಿಶೇಷವಾಗಿ ಕಂಡಿತು. ನಾನು ಕರ್ನಲ್ ಸಾಹೇಬರನ್ನು ಕೇಳಿಕೊಂಡೆನು. ನಡ್ರಿ, ನಿಮ್ಗಿಲ್ಲ ಅಂತೀನಾ ಅಂತ ಮಾರನೇಗೆ ಬಂದು ಬಿಟ್ಟನು. ಬಂದವನೇ ಮೊಬಯಲಿನಲ್ಲಿ ’ಕೊಲವರಿ ಕೊಲವರಿ’ ಹಾಡು ಹಾಕ್ಕೊಂಡು ಕಾಯಿ ಕೆಡವಲು ಆರಂಭಿಸಿದನು. ನಾನು ಅದು ಇದೂ ಮಾತಾಡ್ತಾ ನಿಂಗೆ ಮದುವೆ ಆಗೈತಾ? ಎಂದು ಕೇಳಿದೆ. ಅಯ್ ನನ್ ಮದ್ವೆ ಕತೆ ಯಾಕ್ ಕೇಳ್ತೀರಿ. ನಮ್ದು ಲವ್ವು ಅಂದು ನಾಚಿಕೊಂಡನು. ಯಾವೂರು ಹುಡ್ಗಿ, ಏನ್ ಕತೆ ಎಂದರೆ ಏಯ್ ನಂ ಮಾವನ ಮಗಳೇಯ, ಆದ್ರೆ ಲವ್ವು ಕಂಡ್ರಿ ಅಂತ ಇನ್ನೂ ನಾಚಿಕೊಂಡನು. ಮಕ್ಕಳೆಷ್ಟು ಅಂದರೆ ಎರಡು ಇನ್‌ಕಮಿಂಗ್ ಕಂಡ್ರಿ ಅಂದನು. ನನಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ. ಆಮೇಲೆ ಅವನೇ ನೀವೇನು ಒಂದು ಔಟ್‌ಗೋಯಿಂಗ್ ಮಾಡ್ಬುಟ್ಟು ಸುಮ್ನೆ ಇದ್ದೀರಲ್ಲ. ನಿಮ್ಗೇನು ತ್ವಾಟ ಮನೆ ಐತೆ. ಒಂದಾದರೂ ಇನ್‌ಕಮಿಂಗ್ ಬ್ಯಾಡ್ವೆ ಅಂದನು. ನಾನು ನೋಡನ ಅಂದೆ. ಏ ನೋಡದೇನು ಇನ್ನೊಂದ್ಸಲ ಟ್ರೈ ಮಾಡಿದ್ರೆ ಆಯ್ತದೆ ಬುಡಿ ಎಂದು ನನ್ನ ಪರವಾಗಿ ಅವನೇ ಗ್ಯಾರಂಟಿ ಕೊಟ್ಟುಬಿಟ್ಟನು. ನಮ್‌ಕೈಲಿ ಏನೈತೆ ಕರ್ನಲ್, ಆ ದೇವ್ರು ಕಣ್ ಬುಡಬೇಕಲ್ವೆ ಎಂದೆ. ನೀವು ಸಾಯಂಕಾಲಕ್ಕೆ ನಮ್ ಕಡಿಕೆ ಕಣ್‌ಬುಟ್ ನೋಡಿ. ಆಮ್ಯಾಲೆ ದೇವ್ರು ನಿಂ ಕಡೀಕೂ ಕಣ್ ಬಿಡ್ತಾನೆ ಎಂದು ಪೀಠಿಕೆಯನ್ನು ಚೆನ್ನಾಗಿಯೇ ಹಾಕಿದನು.
ಇವನ ಮೂಲ ಹೆಸರೇನು ಎಂದು ನಾನು ಈವರೆಗೂ ತಿಳಿಯಲು ಹೋಗಿಲ್ಲ. ಇವನು ನಮ್ಮೂರ ಬಹುಮುಖ ಪ್ರತಿಭೆ. ಎಲೆಕ್ಟ್ರಿಕ್ ಕೆಲಸ ಗೊತ್ತು. ಮಿಕ್ಸಿ ರಿಪೇರಿ ಗೊತ್ತು. ಜೆಸಿಬಿ, ಟ್ರಾಕ್ಟರ್, ಕಾರುಗಳನ್ನ ಸೈಕಲ್ ಓಡಿಸ್ದಂಗೆ ಓಡಿಸ್ತಾನೆ. ಯಾವ ಕೆಲಸ ಅಂದ್ರೂ ಆಗಲ್ಲ ಅನ್ನಲ್ಲ. ಏ ಮಾಡನ ಬಿಡ್ರಿ. ನೀವ್ ಚೆನ್ನಾಗಿ ನೋಡ್ಕಬೇಕು ಅಷ್ಟೆಯ. ಮೈಸೂರಿಂದ ಬರ್‍ವಾಗ ಒಂದು ಆಂಟಿಕುಟಿ ತಗಂಬನ್ನಿ ಅಂತನೆ. ಅದನ್ನಾಕೆ ಮೈಸೂರಿಂದ ತರಬೇಕೋ? ಇಲ್ಲೆಯ ತುರುವೆಕೆರೆಲಿ ಸಿಗುತ್ತೆ ಅಂದ್ರೆ, ಏ ನೀವೊಳ್ಳೆ ಇವ್ರು ಕಂಡ್ರಿ. ನೀವೇನು ಓದಿದಿರೋ, ಏನು ಕತೇನೋ ಎಂದು ಹಂಗಿಸಿ ನೀವು ಇಲ್ಲಿಂದಲೇ ತನ್ನಿ. ಈ ಆಂಟಿಕುಟಿ ಮೈಸೂರಿಂದು ಅಂದ್ರೆ ನಿಂ ಗಂಟೇನು ಓಗದು. ನಮಗೂ ಸಂತೋಷ ಆಕ್ಕುಲವೆ? ಅಂತಾನೆ. ನೀವು ಮೈಸೂರು ಅರಮನೆ ನೋಡಿದೀರಾ ಅಂತ ಒಂದುಸಲ ಕೇಳಿದ. ನೋಡಿದ್ದೀನಿ ಯಾಕೆ ಮೈಸೂರಿಗೆ ಬತ್ತೀಯ ಅಂದೆ. ಏ ಮೈಸೂರೇನು, ಅದರಾಚೆಗೆ ಇರೋ ಹುಣಸೂರು ಕಂಡಿದೀನಿ. ನಂಗೆ ಒಂದು ಆಸೆ ಕಂಡ್ರಿ. ಅರಮನೇಲಿ ರಾಜರು ಅವ್ರಂತಲ್ಲ. ಅವ್ರತಾವ ಡೈವಾರ್ ಕೆಲ್ಸ ಕೊಡಿಸ್ತೀರಾ ಅಂತ ಕೇಳೋದೆ?
ಎಲ್ಲಿಲ್ಲಿಗೋ ಬಂದೆ.
ಇನ್ನು ನಾವು ಚಿಕ್ಕವರಿದ್ದಾಗ ಕಂಡದ್ದಕ್ಕಿಂತ ಪರಿಸ್ಥಿತಿ ಈಗ ಬೇರೆಯಾಗಿದೆ. ನೆರಕೆಗಳು ಹೋಗಿ ಗುಡಿಸಲುಗಳಾಗಿವೆ. ಗುಡಿಸಲುಗಳು ಹೋಗಿ ತಕ್ಕಮಟ್ಟಿಗೆ ಮನೆಗಳೆಂದು ಕರೆಯಬಹುದಾದ ಮನೆಗಳಾಗಿವೆ. ಸುಮಾರು ಮನೆಗಳಿಗೆ ಕರೆಂಟು ಇದೆ. ಮನೆಗೆ ಎರಡಾದರೂ ಮೊಬೈಲುಗಳಿವೆ. ಮನೆ ಮುಂದಲ ಚರಂಡಿ ಗಬ್ಬು ನಾರುತ್ತಿವೆ. ಪಂಚಾಯ್ತಿ ಯೋಜನೆಯ ಟಾಯ್ಲೆಟ್‌ಗಳು ಯಾರ ಪಾಲಾಗಿವೆಯೋ? ಗೊತ್ತಿಲ್ಲ. ಓದಿರೋರ ಮನೇಲಿ ಟಾಯ್ಲೆಟ್ ಬಂದಿದೆ. ಇದು ನೋಡಿದರೆ ಮೈಸೂರಲ್ಲಿ ಮೇಯರ್ ಆದೋರು ತಮ್ಮ ಬೀದಿಗೆ ಟಾರು ಹಾಕಿಸ್ಕತಾರಲ್ಲ ಆ ಥರ ಕಾಣುತ್ತೆ. ಇಡೀ ಮೈಸೂರಿನ ರಸ್ತೆಗುಳೆಲ್ಲ ಸರಿಯಾಗದೂ ಯಾವಾಗ್ಲೋ ಆವಾಗ್ಲೇ ಈ ಸಮಸ್ಯೇನೋ ರಿಪೇರಿಯಾಗದು ಅನುಸುತ್ತೆ.
ಗ್ರಾಮ ಪಂಚಾಯ್ತಿ ಮೆಂಬರಾಗಿರುವ ಹೆಣ್ಣೊಬ್ಬಳು ಹೆಣ್ಣಾಳಾಗಿರುವಳು. ಅವಳ ಗಂಡನು ಹಟ್ಟಿಯಲ್ಲಿ ಕಣ್ಣುರಿಯುವಷ್ಟು ಪವರ್‌ಫುಲ್ ಎನಿಸಿಕೊಂಡು ಊರಗುಡಿಗೌಡನ ಮಂದೆ ಗೌಡ್ರೆ… ಎಂದುಕೊಂಡು ಮುಂಬರಿಯುತ್ತಿರುವನು. ಗುಡಿಗೌಡನನ್ನು ಮಾತಾಡಿಸಿದರೆ ಅವನೂ ’ಊರು ಮುಂಚಿನಂಗಿಲ್ಲ. ಈಗ ಜನ ಮೇಂಟನ್ ಮಾಡಬೇಕು, ಇಲ್ದಿದ್ರೆ ಬದ್ಕಕ್ಕೆ ಆಕ್ಕುಲ. ಅಳ್ಳೀಲಿ ಬದ್ಕದು ಕಷ್ಟ.’ ಅಂತಾನೆ. ಈ ಮೇಂಟನ್ ಅನ್ನೋದರ ಅರ್ಥವೇ ಬೇರೆ ಇದ್ದಂತಿದೆ… ಊರೊಳಗೆ, ಕೆಲಸ ಕಾರ್‍ಯದಲ್ಲಿ ಜತೆಯಾಗಿ ತಿರುಗುವುದು ಬದಲಾವಣೆ ಅನ್ನಲೆ? ಇನ್ನು ಹೋಟೆಲುಗಳಲ್ಲಿ ಕಾಫಿ,ಟೀ ಕುಡಿಯೋಕೆ ಪ್ಲಾಸ್ಟಿಕ್ ಲೋಟ ಬಂದು ಹೊಸದೊಂದು ಒಡಂಬಡಿಕೆ ಬಂದಂತಿದೆ. ಅರಳಿಕಟ್ಟೆ ಬಳಿ ಪಾನಿಪುರಿ, ಚುರುಮುರಿ, ಕೇಕ್ ತಿನ್ನುವ ಮಟ್ಟಿಗೆ ಸಹಭೋಜನ ಬಂದಿದೆ. ಆದರೆ ಸಹಭೋಜನಕ್ಕಿಂತ ಸಹಪಾನದಲ್ಲಿ ಒಂದು ಕೈ ಮೇಲಾಗಿದೆ. ಆದರೆ ಈ ಸಹಪಾನವೇ ಎಲ್ಲಕ್ಕೂ ಮೂಲವಾಗಿದೆ. ಯಾವ ಕೆಲಸಕ್ಕೂ ಇದು ಇರಲೇಬೇಕು ಎಂಬಂತಾಗಿ ತೀರಾ ೩೦-೪೦ ವಯಸ್ಸಿನವರು ಕೂಡ ತ್ರಾಣವಿಲ್ಲದವರಂತೆ ಕಾಣಿಸುತ್ತಾರೆ.
ಇನ್ನು ಈಗ ಎಲ್ಲರೂ ಓದುಸ್ತಾರೆ ಅಂತಾರಲ್ಲ. ಹಾಗೆ ಓದಲು ಹೋದವರಲ್ಲಿ ಅರ್ಧಜನ, ಚಕ್ರವ್ಯೂಹದಲ್ಲಿ ಹತರಾಗುವ ಅಭಿಮನ್ಯುಗಳೇ ಹೆಚ್ಚು. ಈ ಅಭಿಮನ್ಯುಗಳಿಗೆ ಜೆಸಿಬಿ, ಟ್ರಾಕ್ಟರ್, ವ್ಯಾನ್, ಲಗೇಜು ಆಟೊ, ಬೇಕರಿ, ವೈನುಶಾಪು, ಹಾಲಿನಡೈರಿ ಇವೇ ಉದ್ಯೋಗತಾಣಗಳು. ಈ ಉದ್ಯೋಗಗಳಲ್ಲಿರುವ ಅನಿಶ್ಚಿತತೆ ಇವರ ಬದುಕನ್ನು ಅನಿಶ್ಚಿತವಾಗಿಯೇ ಇಡುತ್ತದೆ. ಎಸ್ಸೆಲ್ಸಿ, ಪಿಯುಸಿ ಡುಂಕಿ ಹೊಡೆದ ಕೆಲವರು ಆಚೆಗೆ ಅಂದರೆ ಬಾಂಬೆ, ಬೆಂಗಳೂರು ಕಂಡವರು ಊರಿಗೆ ಸುಂಕಿನಮಾರಿ ಹಬ್ಬಕ್ಕೆ ಬಂದಾಗ ಕೊಂಚ ಕಿಚ್ಚಿಗೆ ಕಾರಣವಾಗಿದ್ದಾರೆ. ಇದು ಬಿಟ್ಟರೆ ಮೊದಲ ತಲೆಮಾರಿನ ಏಳೆಂಟು ಜನರ ಪೈಕಿ ಕೆಲವರು ಮೇಷ್ಟ್ರಾಗಿಯೂ, ಕೆಲವರು ಕಾನ್ಸ್ಟೇಬಲ್ ಆಗಿರುವರು. ಒಬ್ಬ ಹುಡುಗಿ ಟೀಚರ್ ಆಗವಳೆ. ನನ್ನ ಆಸಕ್ತಿ ಇವರಿಗಿಂತ ಪಿಯುಸಿಗೇ ಬಿಟ್ಟ ಜಗದೀಶ, ಮುಖ್ಯವಾಗಿ ನಾಕನೇ ಕ್ಲಾಸ್ ಫೇಲಾದ ಕರ್ನಲ್ ಬಗ್ಗೆ ಜಾಸ್ತಿ. ಒಂದು ಕಡೆ ಸರ್ಕಾರ ಶಾಲೆಗಳನ್ನು ಮುಚ್ಚೋಕೆ ಹೊಂಚು ಹಾಕುತ್ತಿದೆ. ಇಂಥಾ ಸಮಯದಲ್ಲಿ ಇವರಿಬ್ಬರು ತಮ್ಮ ಬಿಡುಗಡೆಗಾಗಿ ನಾನಾ ಮಾರ್ಗಗಳನ್ನು ಹುಡುಕುವವರಾಗಿ ಕಾಣುತ್ತಿದ್ದಾರೆ. ಈ ಲೇಖನದ ಆರಂಭದಲ್ಲಿ ಬಂದಿರುವ ಜಗದೀಶನು ಪಿಯುಸಿಗೆ ಓದಲು ಹೋದವನು ಎಲೆಕ್ಷನ್ ಕ್ಯಾನ್ವಾಸ್ ರುಚಿ ಹತ್ತಿಸಿಕೊಂಡು, ಆ ರುಚಿಯಿಂದಲೇ ತನ್ನ ಬದುಕನ್ನು ಶುರು ಮಾಡಿ ತಾಲೂಕನ್ನೇ ಸುತ್ತಿರುವನು. ಈಗ ಒಂದು ಪಕ್ಷದ ಕಾರ್‍ಯಕರ್ತನಾಗಿ ಗುರುತಿಸಿಕೊಂಡಿರುವ ಇವನು ಸದಾಶಿವ ಆಯೋಗದ ವರದಿ ಜಾರಿಯಾಗಲಿ, ಆಮೇಲೆ ನೋಡಿ ಸಾ ಎನ್ನುವನು. ಸದ್ಯಕ್ಕೆ, ತಾಲೂಕ್ ಆಫೀಸಿನ ಖಾತೆ-ಕಂದಾಯ, ಸರ್ಕಾರಿ ಯೋಜನೆಗಳ ಬಗ್ಗೆ ಅರಿತವನಾಗಿ ಯಾರೆ ಕಂಡರೂ ’ಬನ್ನಿ ಸಾ ಟೀ ಕುಡಿಯನ’ ಎಂದು ಕರೆದು ಅವರ ಕಾಸಲ್ಲೇ ಟೀ ಕುಡಿಸಿ ಕಳಿಸುವನು. ಹೇಳ್ತಾ ಹೋದರೆ ಏನೇನೋ ಇದೆ ಬಿಡಿ ಸಾ, ಒಟ್ಟಾರೆ ನಮ್ಮೂರು ನೋಡಿದಾಗ ಒಂದು ವಿಷಯ ಎದ್ದು ಕಾಣುತ್ತದೆ: ಅದು ದಲಿತರಲ್ಲಿ ಮೂಡಿರುವ ಅರಿವೂ, ದಲಿತೇತರರಲ್ಲಿ ಮೂಡಿರುವ ಸಹನೆಯೂ ಏತಬಾತದಂತಿವೆ. ಇದು ಹೀಗಿರುವಾಗ, ಇವು ಸಂಧಿಸುವ ಸಾಮಾನ್ಯಬಿಂದುವಾದರೂ ಹೇಗೆ, ಎತ್ತ ಎಂದು ಯೋಚಿಸುತ್ತಾ, ಈ ಯೋಚನೆಯನ್ನು ವರ್ಗಾಯಿಸುತ್ತಾ ಮುಗಿಸುತ್ತೇನೆ.
ಇಂತಿ ನಮಸ್ಕಾರಗಳು.
ಹರಿ ಪ್ರಸಾದ್
೧೮-೫-೧೨ ಬಾರೆಸೊಸಿ
ಅದು ದಲಿತರಲ್ಲಿ ಮೂಡಿರುವ ಅರಿವೂ, ದಲಿತೇತರರಲ್ಲಿ ಮೂಡಿರುವ ಸಹನೆಯೂ ಏತಬಾತದಂತಿವೆ. ಇದು ಹೀಗಿರುವಾಗ, ಇವು ಸಂಧಿಸುವ ಸಾಮಾನ್ಯಬಿಂದುವಾದರೂ ಹೇಗೆ,
ಎಂತಹ ವಾಕ್ಯ ರಚನೆ! , ಅದು ಸರಿ ಸಾಮಾನ್ಯ ಬಿಂದು ಹೇಗೆ ? ಎಲ್ಲಿ ?
ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ರಾಜಕೀಯ ನಾಯಕರ ಓಟಿನ ಬೇಟೆಯಲ್ಲಿ ಅದು ಎಂದು ಹೇಗೆ ಸಾದ್ಯ ತಿಳಿಯುತ್ತಿಲ್ಲ
ಯೋಚನೆಗೆ ಹಚ್ಚಬಹುದಾದ ಲೇಖನ. ಸಾಮಾಜಿಕ ಸಮಾನತೆಗೆ ತುಡಿಯುವ ಪ್ರಜ್ಞೆ ಜಾಗೃತವಾದಂತಿದೆ ಹರಿಯವರ ಬರಹದಲ್ಲಿ. ಸಾಮಾಜಿಕ ಸಮಸ್ಯೆಗಳನ್ನು ಸಾಂದರ್ಭಿಕವಾಗಿ ವಿವರಿಸಲು ಪ್ರಯತ್ನಿಸಿದ್ದಾರೆ. ಅಸಮಾನತೆಗೆ ಕಾರಣಗಳು ಸಾಕಷ್ಟಿರಬಹುದು, ಆದರೆ ಪರಿಹಾರಗಳನ್ನು ಹುಡುಕುವ ಗಟ್ಟಿ ಪ್ರಯತ್ನಗಳಾಗಬೇಕು. ಪರಿಹಾರಗಳ ಬಗ್ಗೆ ಯೋಚಿಸದೆ ಸಮಸ್ಯೆಯೆಡೆ ಕೈತೋರಿ ನಿಂತುಬಿಡುವುದು ಬದಲಾಗಬೇಕು. ಎಲ್ಲರಲ್ಲೂ ಸಮಾನತೆಯ ಪ್ರಜ್ಞೆ ಜಾಗೃತವಾಗಬೇಕು. ಯಾವುದೇ ರೀತಿಯಲ್ಲೂ ಹಿಂದುಳಿದ ಯಾವುದೇ ಜಾತಿ ಅಥವಾ ಧರ್ಮದವನೂ ಸಮಾಜದ ಮುಖ್ಯವಾಹಿನಿಯ ಭಾಗವಾಗಬೇಕು. ಅಭಿನಂದನೆಗಳು ಹರಿಯವರೇ, ಒಳ್ಳೆಯ ಲೇಖನಕ್ಕೆ.
– ಪ್ರಸಾದ್.ಡಿ.ವಿ.
ಭಾರತದಲ್ಲಿ ಕೆಲ ಸಂಗತಿಗಳೇಕೊ ಬದಲಾಗುತ್ತಿಲ್ಲ
ಆದರೂ ಪ್ರಯತ್ನ ಬಿಡಲು ಸಲ್ಲ
ninna Lekanada Sogasu Irodu Adu Hutti beleyuva Riti…Vyaktika Nele inda Aramba vaguva lekana Beleyuta Hodantella Sarvatrika Vagodu Lekanada Vysistya……Ninna Orna Kathe Adru Adu idi Bharatada Smakalina Stiti yannu Pratipalisutade…. Nimma Urina Kooli yalu gala Samase Heluta Feminism Embudu Aprajnaporvaka vagi Namma Gramina Mhila Lokavannu Avrisi kondiruvdu lekana Anaarana Golisuthe…….Adunika Jagatina Vidyamana galige Gramya Baduku Spndisuvdannu Odugarige neravagi Helade iddru Avara Arivige baruthe…
olleya lekhana, nammoorinalli saha ide paristiti, nanna vayassina hudugaru maduvege kardru kooda "nodkolodaadre matra" ennuvantagiddare. election canvasgalu ganeshana koorsodu oorina habbagalalli mai muridu duditare "vyavaste madodadre matra" anno condition mele. duranta andre hotte thumba kudsodadre yaranna bekadru hodedu baruvanta kettachaligalu ivranna jail kambigalna torsidave. adre jailge hogi bandavnge ond vishesha ganathe anno tarahad vatavarana nam hallili ide. e manastiti iroru matrane e hallili ulkondidare, ulidavra jotege urina badalavane sadyakke sadyavilla anstide.
ಚಿಂತನೆಗೆ ಹಚ್ಚುವಂತಹ ಬರಹ. ..
Olleya lekana sir
Samanathe anodu bhvya bharthada dodda kanasu adhu nanasagalu ennu adhestu varshagallu beko yeno
ಹಲವಾರು ಅತೀ ಸೂಕ್ಷ್ಮ ಅಚಾರ ವಿಚಾರಗಳನ್ನು ವಿಭಿನ್ನ ನಿರೂಪನೆಯ ಮೂಲಖ ನೀಡಿದ್ದೀರಿ. ಹಳ್ಳಿಗ (ದಲಿತ)ಸಮುದಾಯದ ಒಳ ತಿರುಳುಗಳ ಮತ್ತು ಅವುಗಳ ಮಾರ್ಪಾಡುಗಳ ಬಗ್ಗೆ ಚಿಂತಿಸುವಂತೆ ಮಾಡಿದ್ದೀರಿ. ಚೆಂದದ ಬರಹ ಶುಭವಾಗಲಿ ಸರ್………………
ಲಂಕೇಶರು ಹೇಳಿದ ಒಂದು ಮಾತು :
ಲೇಖಕನಿಗೆ ಟೀಕೆ ಮನ್ನಣೆ .
ನಿರ್ಲಕ್ಷ್ಯ ಸಾವು ..
ಪ್ರತಿಕ್ರಿಯಿಸಿದ ಗೆಳೆಯರಿಗೆ ವಂದನೆಗಳು
nanna taragatigalalilna jagadeesha………kernal….evarannu kandanthayithu…. badalaguttide, adare badalagabekkaddu haage uliyutidde….edu badalaguvudendu? aaadatu….. aga(le)beku.