ದೆವ್ವಗಳ ಬಗ್ಗೆ ಚರ್ಚಿಸುವುದೇ ವೇಳೆ ಹಾಳುಮಾಡಿಕೊಳ್ಳುವ ಕೆಲಸ. ಆ ವಿಷಯದ ಬಗ್ಗೆ ಚರ್ಚಿಸುವವರು ಅಪಾರ ಅನುಭವಿಗಳಂತೆಯೂ, ಅದ್ಭುತವಾಗಿ ಕಥೆ ಕಟ್ಟುವವರಂತೆಯೂ, ಅಪ್ಪಟ ಮೂಢರಂತೆಯೂ ಕಾಣುತ್ತಾರೆ. ದೆವ್ವಗಳ ಅಸ್ತಿತ್ವ ಕುರಿತು ವಾದಿಸುವುದಕಿಂತಲೂ ಅವುಗಳ ಇಲ್ಲದಿರುವಿಕೆಯನ್ನೇ ಪ್ರಬಲವಾಗಿ ವಾದಿಸಬಹುದು; ದೆವ್ವಗಳಿವೆ ಎಂದು ನಂಬಿರುವವರು ಈ ಪ್ರಪಂಚದಲ್ಲಿರುವ ಅಥವಾ ಎಂದೋ ಸವೆದುಹೋದ ಕಟ್ಟುಕತೆ, ಕಪೋಲಕಲ್ಪಿತ ಘಟನೆಗಳನ್ನು, ಅವನ್ನು ನಂಬಿದ್ದವರನ್ನು ಚರ್ಚೆಯ ಮಧ್ಯೆ ಎಳೆದು ತಂದು ತಾವೇ ಮತ್ತೊಮ್ಮೆ ಬೆಚ್ಚಿ, ಬೆವರು ಒರೆಸಿಕೊಳ್ಳಬಹುದು. ಅದೆಲ್ಲವನ್ನು ನೋಡಿ ಸುಮ್ಮನಾಗಬೇಕಷ್ಟೇ. ನಮ್ಮ ನಡುವೆಯೇ ಇರುವ ಕೆಲವರನ್ನು ತೆಗೆದುಕೊಳ್ಳೋಣ. ಮಂತ್ರವಾದಿಗಳು ನಿಮಗೆ ಗೊತ್ತು. ಹಣೆಯ ತುಂಬ ಕುಂಕುಮ, ಕೊರಳಲ್ಲಿ ಮಣಿಮಾಲೆ, ಉದ್ದವಾದ ಕೂದಲು. ಅಂತಹ ವಿಚಿತ್ರ ವ್ಯಕ್ತಿಗಳಿಗೆ ದೆವ್ವಗಳಲ್ಲಿ ನಂಬಿಕೆ ಇರುತ್ತದೆ. ಮನುಷ್ಯ ಸತ್ತಾಗ ಆತನ ದೇಹದಿಂದ ಹೊರಬರುವ ಆತ್ಮಗಳಲ್ಲಿ ಕೆಲವೊಂದು ಅತೃಪ್ತಆತ್ಮಗಳಿದ್ದು ಅವು ಕೆಲವರ ಶರೀರದಲ್ಲಿ ಸೇರಿಕೊಳ್ಳುತ್ತವೆ ಎಂದು ನಂಬಿರುವವರು. ತಮ್ಮ ಸಿದ್ಧಿಯಿಂದ, ಶಕ್ತಿಯಿಂದ ಅವುಗಳೊಂದಿಗೆ ಮಾತಾಡಬಹುದು, ಅವುಗಳೊಂದಿಗೆ ಚರ್ಚಿಸಬಹುದು ಎಂದು ತಿಳಿದುಕೊಂಡವರು. ಹಾಗೆಯೇ ಕೆಲವೊಂದು ಆತ್ಮಗಳೊಂದಿಗೆ ಮಾತಾಡಿರುವುದಾಗಿಯೂ, ಅವು ಹೊಕ್ಕಿದ ಶರೀರದಿಂದ ಅವನ್ನು ಉಚ್ಚಾಟಿಸಿರುವುದಾಗಿಯೂ ವಾದಿಸುವವರು; ಅಂತಹ ಮಂತ್ರವಾದಿಗಳ ಹತ್ತಿರ ಹೋಗಿ ಬಂದಂಥ ಕೆಲವರು ಈ ಮಾತಿಗೆ ಪುಷ್ಟಿ ನೀಡಿದ್ದೂ ಉಂಟು. ಇದು ಸುಳ್ಳು ಎಂದು ಸಾಬೀತು ಮಾಡಲು ಅಂತಹ ಮಹಾನ್ ಪ್ರತಿಭೆಯಾಗಲೀ, ಜ್ಞಾನವಾಗಲೀ ಬೇಡ; ಮನಶಾಸ್ತ್ರದ ಅರಿವಿದ್ದರೆ ಸಾಕು. ಹಿಪ್ನಾಟಿಸಮ್ ಎಂದು ಕರೆಯುವ ಸಮ್ಮೋಹನ ಶಾಸ್ತ್ರದ ಮೂಲಕವೂ ವ್ಯಕ್ತಿಯೊಬ್ಬನ ಮನಸ್ಸನ್ನು ಅಥವಾ ಗುಂಪೊಂದರ ಮನಸ್ಸನ್ನು ಒಂದೆಡೆ ಕೇಂದ್ರೀಕೃತ ಸ್ಥಿತಿಗೆ ತರಬಹುದು.
ಹಾಗೆಯೇ ನಮ್ಮ ಜೊತೆಜೊತೆಗೆ ಒಂದು ಮನಸ್ಥಿತಿಯೂ ಬೆಳೆದುಕೊಂಡು ಬಂದಿರುತ್ತದೆ. ದೆವ್ವ ಕುರಿತಾದ ಸಿನಿಮಾಗಳು, ಪುಸ್ತಕಗಳು, ಕಥೆಗಳು ನಾವು ಅದರ ಬಗ್ಗೆ ಭಯದಿಂದ, ಬೆರಗಿನಿಂದ ಯೋಚಿಸುವಂತೆ ಮಾಡುತ್ತವೆ. ರಾಮಗೋಪಾಲ್ ವರ್ಮರ 'ಭೂತ್' ಸಿನಿಮಾವನ್ನು ನೋಡಿ ಅನಂದಿಸಬೇಕಾದರೆ ನಮಗೆ ದೆವ್ವದ ಬಗ್ಗೆ ನಂಬಿಕೆ ಬೇಕು; ಆ ಸಿನಿಮಾ ಪೂರ್ತಿ ಅರ್ಥವಾಗಬೇಕಾದರೆ, ಥಿಯೇಟರಿನಾಚೆಗೂ ಕಾಡಬೇಕಾದರೆ ದೆವ್ವದ ಬಗೆಗಿನ ಊಹೆ, ನಂಬಿಕೆ, ಭಯ ಎಲ್ಲವೂ ನಮ್ಮಲ್ಲಿರಬೇಕು. ಕೌಂಡಿನ್ಯರ ಕೆಲವು ಕಾದಂಬರಿಗಳ ಆತ್ಮ ಹೊಕ್ಕುವ ಸಲುವಾಗಿಯಾದರೂ ಇವು ಅಗತ್ಯ. ಇದು ದಡ್ಡತನವೆಂಬುದು ಬೇರೆ ಮಾತು. ಈ ಪ್ರಪಂಚದ ಏಳು, ಬೀಳು ಎರಡರಲ್ಲೂ ಮಾನವ ತನ್ನ ಊಹೆ, ನಂಬಿಕೆಗಳಿಂದಲೇ ಎಲ್ಲವನ್ನೂ ಪ್ರಶ್ನೆಗೊಡ್ಡಿಕೊಳ್ಳುತ್ತಲೇ, ಆ ಕ್ಷಣಕ್ಕೆ ಅನಿಸಿದ್ದನ್ನೇ ಸತ್ಯವೆಂದು ಭಾವಿಸುತ್ತಲೇ, ಋಜುವಾತುಪಡಿಸುತ್ತಲೇ ಸಾಗಿ ತನ್ನ ಅರಿವನ್ನು ವ್ಯಾಖ್ಯಾನಿಸಿದ, ದೆವ್ವಗಳಿವೆ ಎಂದು ನಂಬಿದ್ದವನು ಆಮೇಲೆ ಇಲ್ಲ ಎಂದು ವಾದಿಸತೊಡಗಿದ. ದೆವ್ವಗಳನ್ನು ನಂಬುವವನ ಆಂತರಿಕ, ಬಾಹ್ಯ ಜಗತ್ತು ಹೇಗೆ ರೂಪಿತಗೊಂಡಿರುತ್ತದೋ ಹಾಗೆಯೇ ದೆವ್ವಗಳೇ ಇಲ್ಲ ಎಂದು ನಂಬಿಕೊಂಡವನ ಪ್ರಪಂಚವೇ ಅದಕ್ಕಿಂತ ಭಿನ್ನವಾದುದು. ಈ ಬಗ್ಗೆ ಇಲ್ಲಿ ಹೆಚ್ಚು ಚರ್ಚಿಸದಿರುವುದೇ ಒಳ್ಳೆಯದು.
ಮಂತ್ರವಾದಿಗಳ ವಾದವನ್ನು ನೋಡಿದರೆ 'ದೆವ್ವಗಳಿವೆ' ಎಂಬುದು ಅವರಿಗೆ ಒಂದು ಬಿಸಿನೆಸ್ ಟ್ರಿಕ್ಕಾಗುತ್ತದೆ; ವಿಜ್ಞಾನ ಎಷ್ಟು ಮುಂದುವರಿದಿದೆ ಎಂಬುದು ಅವರಿಗೆ ಗೊತ್ತಿರಲಿಕ್ಕಿಲ್ಲ; 1813ರಲ್ಲೇ ಸ್ಕಾಟ್ಲೆಂಡಿನ ಜಾನ್ ಫೆರಿಯರ್ ಎಂಬಾತ An essay towards a theory of apparitions ಎಂಬುದೊಂದು ಪ್ರಬಂಧವನ್ನೂ, 1845ರಲ್ಲಿ ಫ್ರಾನ್ಸಿನ ಅಲೆಕ್ಸಾಂಡರ್ ಜಾಕ್ವೆಸ್ ಫ್ರಾನ್ಸಿಸ್ ಬ್ರಿಯರ್ ದ ಬಾಯಿಸ್ ಮೊಂಟ್ ಎಂಬ ಮನೋವಿಜ್ಞಾನಿ Hallucinations: Or, the Rational History of Apparitions, Dreams, Ecstasy, Magnetism, and Somnambulism ಎಂಬ ಐನೂರೈವತ್ಮೂರು ಪುಟಗಳ ಬೃಹತ್ ಪುಸ್ತಕವನ್ನೂ ಬರೆದಿದ್ದರು; ಅದಕಿಂತ ಮೊದಲೇ ಬೈಬಲ್ಲಿನಲ್ಲಿಯೂ, All Souls' Day ಆಚರಣೆಯಲ್ಲಿಯೂ, ಆನಂತರ ಇಸ್ಲಾಂನ jinn ನಂಬಿಕೆಯಲ್ಲಿಯೂ ಈ ಕುರಿತು ಉಲ್ಲೇಖವಿದೆ. ಯೂರೋಪಿನ ಜಾನಪದದಲ್ಲಿ ದೆವ್ವಗಳಿಗೆ ವಿಶೇಷ ಸ್ಥಾನಮಾನವಿದ್ದು ಅದನ್ನು revenant ಅಥವಾ ಮರಣದ ನಂತರದ ಮರಳುವಿಕೆ ಎಂದು ಕರೆಯುವ ಪರಿಪಾಠ ಅವರದು. ಹಾಗೆಯೇ ಚೀನೀಯರು ದೆವ್ವಗಳ ಹಬ್ಬವನ್ನೇ (ಉಲ್ಲಂಬನ: ಬೌದ್ಧಧರ್ಮದ ಪದ) ಆಚರಿಸಿದರೆ, ಅಥರ್ವವೇದದಲ್ಲಿನ 'ಆತ್ಮಶಾಂತಿ' ಅಥವಾ 'ಶ್ರಾದ್ಧ' ಪದಗಳು ಭಾರತದ ಮಟ್ಟಿಗೆ ಗಮನಸೆಳೆಯುತ್ತವೆ. ಈ ಪದಗಳು ಆತ್ಮದ ಬಗ್ಗೆ ಇದ್ದರೂ ಅತೃಪ್ತಆತ್ಮ (ದೆವ್ವ, ಭೂತ)ದ ಬಗ್ಗೆಯೂ ಚಿಂತಿಸಲು ದಾರಿಮಾಡಿಕೊಡುವುದು ಸುಳ್ಳಲ್ಲ. ಹಾಗೆಯೇ ಪಿತೃಪಕ್ಷ ಅಥವಾ ಮಾಳಪಕ್ಷದಂದು ಸತ್ತವರಿಗೆ ಎಡೆ ಇಡುವುದು, ದೆವ್ವ ಮೆಟ್ಟಿಕೊಂಡಿತೆಂದು ದೇವಸ್ಥಾನಗಳಿಗೆ ಹೋಗುವದು, ಕಲ್ಲು ಹುಯ್ಯಿಸುವುದು, ಗೋರಿಗಳ ಮೇಲೆ ಹೊಸಬಟ್ಟೆ ಇಟ್ಟು ಭಯಭಕ್ತಿಯಿಂದ ಪೂಜೆ ಮಾಡುವುದು, ದಕ್ಷಿಣಕನ್ನಡ ಜಿಲ್ಲೆಯ ಭೂತಾರಾಧನೆ- ಇತ್ಯಾದಿಗಳನ್ನು ಭಾರತೀಯರಾದ ನಾವು ಗಮನಿಸಬಹುದು. ಇದರಿಂದ ನಾವು ಕಂಡುಕೊಳ್ಳಬೇಕಾದ ಸತ್ಯವೆಂದರೆ ಮನುಷ್ಯನು ನಂಬಿಕೆಗೆ ಜೋತು ಬಿದ್ದಾಗ ಆಗುವಂತಹ ಬೆಳವಣಿಗೆಗಳು ಮತ್ತು ಆ ನಂಬಿಕೆಯ ಸುತ್ತ ಮೊದಲಿನಿಂದಲೂ ನಡೆದುಕೊಂಡ ಬಂದ ಅರ್ಥಾತ್ ರೂಪಿಸಿಕೊಂಡು, ನಡೆಸಿಕೊಂಡು ಬಂದ ಪರಂಪರಾನುಗತ ಸಂಗತಿಗಳ ಪ್ರಭಾವ ಇವತ್ತಿನ ಜನರ ಮನಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು.
ಮಾನವ ತಾನು ಕಂಡುಕೊಂಡ ದೇವರ ಜೊತೆಗೆ ಕಂಡುಕೊಂಡ ಇನ್ನೊಂದು ವಸ್ತು ಅಥವಾ ಪರಿಕಲ್ಪನೆಯೇ ದೆವ್ವ ಎನ್ನಬಹುದು. ಮಾನವನನ್ನು ಮತ್ತು ಮಾನವ ಕಲ್ಪಿಸಿಕೊಂಡ ಈ ದೆವ್ವದ ಪರಿಕಲ್ಪನೆಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ: ಕೆದರಿದ ಜುಟ್ಟು; ದೆವ್ವದ ಕೂದಲು ಯಾವಾಗಲೂ ಕೆಟ್ಟಕೆಟ್ಟದಾಗಿ ಕೆದರಿಕೊಂಡಿರಬೇಕು. ಕೂದಲು ಅಚ್ಚುಕಟ್ಟಾಗಿ ಕತ್ತರಿಸಿದ್ದರೆ ಅಥವಾ ನೀಟಾಗಿ ಬಾಚಿ ಜಡೆ ಹಾಕಿದ್ದಂತಿದ್ದರೆ ದೆವ್ವ ಸಭ್ಯ ಮನುಷ್ಯನಂತೆ ಕಾಣುವ ಅಪಾಯವುಂಟು. ಅದರ ಉಗುರುಗಳು ಚೂಪಾಗಿ, ಉದ್ದವಾಗಿ ಇರಬೇಕು; ಕತ್ತರಿಸಿದರೆ ದೆವ್ವ ಅನ್ನಿಸಿಕೊಳ್ಳದು. ಅದು ಬಿಳಿ ಬಟ್ಟೆಯನ್ನೇ ಧರಿಸಬೇಕು; ಚಟ್ಟದ ಮೇಲೆ ಹೊತ್ತೊಯ್ಯುವಾಗ ಬಿಳಿಬಟ್ಟೆ ತಾನೇ ಹೊದಿಸಿದ್ದು; ಸಿನಿಮಾಗಳಲ್ಲಿಯೂ ಮೋಹಿನಿ ಬಿಳಿಸೀರೆಯನ್ನೇ ಧರಿಸೋದು. ಮುಖ ಆದಷ್ಟು ಕೆಟ್ಟದಾಗಿರಬೇಕು; ಸುಂದರವಾಗಿದ್ದರೆ ದೇವರಂತೆ ಕಾಣುವ ಅವಕಾಶವುಂಟು. ಅದರ ಕತ್ತು, ಕಾಲುಗಳು ಉಲ್ಟಾ ಇರಬೇಕು; ಮಾಮೂಲಿಯಂತಿದ್ದರೆ ದೆವ್ವದ ವಿಶೇಷತೆಯೇನು? ಅದರ ನೆರಳು ಗೋಡೆಯ ಮೇಲೆ ಸುಳಿಯಬೇಕು, ಅದು ಕಿಟಕಿಯ ಪರದೆಗಳನ್ನು ಗಾಳಿಯ ಮೂಲಕ ಅಲುಗಾಡಿಸಬೇಕು; ಇದನ್ನೂ ಕೂಡ ಸಿನಿಮಾಗಳಲ್ಲಿ ತೋರಿಸಿರುವುದರಿಂದ ನಿಯಮ ಮೀರಬಾರದು. ದೆವ್ವದ ಧ್ವನಿ ಭಯಾನಕವಾಗಿರಬೇಕು; ಭಯ ಹುಟ್ಟಿಸದ ದೆವ್ವದ ದ್ವನಿ ಎಂಥದ್ದು ಸ್ವಾಮೀ?
ಮನುಷ್ಯನ ಕಣ್ಣಿಗೆ, ಮನಸಿಗೆ ಗೋಚರಿಸುವ ಈ ಬಗೆಯ ದೆವ್ವಗಳು ಪ್ರಾಣಿಗಳ ಕಣ್ಣಿಗೆ ಕಾಣದಿರುವುದು ನಿಜಕ್ಕೂ ಆಶ್ಚರ್ಯ. ನಾಯಿಗಳ ಕಣ್ಣಿಗೆ ದೆವ್ವ ಕಾಣುತ್ತದೆಂದು ಮನುಷ್ಯ ಹೇಳುತ್ತಾನಷ್ಟೇ, ನಾಯಿಗಳು ಹೇಳಿದ್ದು ನಾನಂತೂ ಕೇಳಿಲ್ಲ. ಪ್ರಾಣಿಗಳ ಸಹಜ ಬದುಕು, ಆಹಾರ, ನಿದ್ದೆ, ವಿಶ್ರಾಂತಿ, ಲವಲವಿಕೆಯಿಂದಾಗಿ ಅವುಗಳಿಗೆ ಎಂದೂ ದೆವ್ವದ ಬಗ್ಗೆ ಯೋಚನೆಯಾಗಲೀ, ಭಯವಾಗಲೀ ಆಗಿದ್ದಿಲ್ಲ. ಮನುಷ್ಯ ಎಷ್ಟು ಎಡವಟ್ಟು ಆಸಾಮಿ ಎಂದರೆ ಕೂತಲ್ಲೇ ಢಂ ಅಂತ ಒಮ್ಮೆಲೇ ಹೃದಯಾಘಾತಕ್ಕೀಡಾಗಿ ಸತ್ತೇ ಹೋಗಬಹುದು. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳ ಚಟುವಟಿಕೆಯನ್ನೇ ಕಡೆಗೆ ಇಲ್ಲವಾಗಿಸಿಕೊಳ್ಳುವ ಮನುಷ್ಯನ ಗರ್ವ, ದರ್ಪಕ್ಕೇನೂ ಕೊರತೆಯಿಲ್ಲ. ಉಡುಗೆ, ಸೂರು, ಗ್ರಂಥಾಲಯ, ಚಿತ್ರಮಂದಿರ, ವಿಶ್ವವಿದ್ಯಾಲಯ, ದೇವಸ್ಥಾನ, ನ್ಯಾಯಾಲಯ, ಕಾರು, ವಿಮಾನಗಳನ್ನು ಕಂಡುಕೊಂಡ ಈತ ದೆವ್ವವನ್ನೂ ಕಂಡುಕೊಂಡಿದ್ದಾನೆ. ಇವ್ಯಾವೂ ಇಲ್ಲದೆ ನೆಮ್ಮದಿಯಿಂದಿರುವ ಪ್ರಾಣಿಪಕ್ಷಿಗಳಿಗೆ ದೆವ್ವಗಳ ಭಯ ಮಾತ್ರವಲ್ಲ ಕಲ್ಪನೆಯೂ ಇಲ್ಲ.
ಇದಿಷ್ಟು ನೋಡಿದಾಗ ಮಾನವನ ಕಾಮಾದಿ ಮದ, ಮಾತ್ಸರ್ಯಗಳು ನಮ್ಮನ್ನು ಧ್ಯಾನಕ್ಕೆ ಹಚ್ಚಬೇಕು. ಈತನ ಸೋಲುಗಳಲ್ಲಿ ಗ್ರಹಿಸಬೇಕಾದುದು ಆತ ತನ್ನ ದೌರ್ಬಲ್ಯಗಳಿಂದಾಗಿಯೇ ತನ್ನ ಹತಾಶೆ, ಅಸಹಾಯಕತೆ ಮುಚ್ಚಿಕೊಳ್ಳಲು ಕಂಡುಕೊಂಡ ಮಾರ್ಗಗಳು. ಕರುಣೆ, ನಿಷ್ಠೆ, ಅಂತಃಕರಣ, ದಯೆ, ಪ್ರಾಮಾಣಿಕತೆ ಯಾವುವೂ ಬಾಳಿಕೆ ಬಾರದಿದ್ದಾಗ ದೇವರುಗಳನ್ನು ಸೃಷ್ಟಿಸಿಕೊಂಡು ತನ್ನೆಲ್ಲ ಅಸೂಯೆ, ದ್ವೇಷ, ರಾಕ್ಷಸತ್ವ, ಕುಯುಕ್ತಿ ಬುದ್ಧಿಗಳನ್ನೆಲ್ಲಾ ದೇವರ ಮೇಲೆ ಹಾಕಿ 'ಕ್ಷಮಿಸು' ಎನ್ನತೊಡಗಿದ. ತನ್ನವೇ ದುರ್ಗುಣ, ದುಷ್ಟ ಮನೋಭೂಮಿಕೆಯ ಸಂಕೇತವಾಗಿ ದೆವ್ವವನ್ನು ರೂಪಿಸಿಕೊಂಡ. ದೆವ್ವ ಸದಾ ಮನುಷ್ಯನನ್ನು ಕಾಡುತ್ತಿರಬೇಕು; ದೇವರು ಬಂದು ಕಾಪಾಡಬೇಕು- ಇದು ಇವನೇ ದೇವರು, ದೆವ್ವಗಳಿಗೆ ಮಾಡಿರುವ ತಾಕೀತು ಅಂತ ಕಾಣಿಸುತ್ತದೆ.
ಇದಕ್ಕೆ ಪೂರಕವಾಗಿ ಒಂದು ಘಟನೆ ನೆನಪಿಸಿಕೊಳ್ಳುತ್ತೇನೆ: ಮೊನ್ನೆ ನಾನು ಬಲ್ಲ ಕನಕಪುರ ಕಡೆಯ ವ್ಯಕ್ತಿಯೊಬ್ಬ ನನಗೆ ಮಳವಳ್ಳಿಯಲ್ಲಿ ಸಿಕ್ಕಿದ್ದ. ಕೇವಲ ನಲವತ್ತರ ಸುಮಾರಿನ ಆ ವ್ಯಕ್ತಿಗೆ ತನ್ನ ತಾತ ಕಟ್ಟಿಸಿದ ಮನೆ, ಎರಡೆಕರೆ ಹೊಲ, ಹೆಂಡತಿ, ಒಬ್ಬ ಮಗನಿದ್ದಾನೆ. ಆ ಮಗ ಕೆಲತಿಂಗಳ ಹಿಂದೆ ಮಧ್ಯರಾತ್ರಿ ಎದ್ದು ಕೂತು ಒಬ್ಬನೇ ಮಾತಾಡುವುದು, ಬೆಚ್ಚಿ ಬೀಳುವುದು ಇತ್ಯಾದಿಗಳನ್ನು ಮಾಡುತ್ತಿದ್ದನಂತೆ. ಆಗ ತಕ್ಷಣ ಯಾರೋ ಹೇಳಿದರೆಂದು ಆ ವ್ಯಕ್ತಿ ಒಂದೆರಡು ಬಾರಿ ಕೊಳ್ಳೆಗಾಲದ ಮಂತ್ರವಾದಿಯೊಬ್ಬನ ಹತ್ತಿರ ಹೋಗಿ ಬಂದಿದ್ದಾನೆ. ಹೋಗುವ ಮೊದಲು ಆ ಮಂತ್ರವಾದಿಯ ಆಣತಿಯಂತೆ ನದಿಯೊಂದರ ಎರಡು ದಡಗಳ ಮಣ್ಣು, ಎರಡು ಬದಿಯ ನೀರು, ಎಕ್ಕದ ಹೂವು ಸೇರಿದಂತೆ ಮೂರು ಜಾತಿಯ ಹೂವು, ಒಂದು ಕೋಳಿ ಇತ್ಯಾದಿಗಳೊಂದಿಗೆ ಮಂತ್ರವಾದಿ ಹೇಳಿದ್ದ ಸಮಯಕ್ಕೆ ಸರಿಯಾಗಿ ಅವನಲ್ಲಿಗೆ ಹೋಗಿದ್ದಾನೆ. ಆ ವ್ಯಕ್ತಿಯ ಹತ್ತುವರ್ಷದ ಮಗನಿಗೆ ದೆವ್ವ ಮೆಟ್ಟಿಕೊಂಡಿದೆಯೆಂದು ಆ ಮೊದಲೇ ತೀರ್ಮಾನಿಸಿದ್ದ ಮಂತ್ರವಾದಿ ಆ ಹುಡುಗನನ್ನು ತನ್ನ ಎದುರಿಗೆ ಕೂರಿಸಿಕೊಂಡು ಒಂದು ಹಸೆ ಸಿದ್ಧಪಡಿಸಿ ಕುಡಿಕೆಗಳಿಗೆ ನೂಲು ಸುತ್ತಿ, ಮನಸಿನಲ್ಲೇ ಏನೇನೋ ಮಂತ್ರಗಳನ್ನು ಹೇಳಿಕೊಂಡು ತಡೆ ಹೊಡೆದಿದ್ದಾನೆ. ಕೋಳಿ ಕುಯ್ದು, ಮೊಟ್ಟೆ ಹೊಡೆದು, ನಿಂಬೆ ಹಣ್ಣು ಮಂತ್ರಿಸಿ ಏನೇನೋ ಮಾಡಿದ್ದಾನೆ. ಅಷ್ಟು ಮಾಡಿ ಅಪ್ಪಮಗನಿಗೆ ಏನೋ ಒಂದಿಷ್ಟು ಹೇಳಿ ಇಬ್ಬರನ್ನೂ ಅಲ್ಲಿಂದ ಕಳಿಸಿದ್ದಾನೆ.
ಆನಂತರ ಆ ಮಂತ್ರವಾದಿಯ ಬಗ್ಗೆ ಕುತೂಹಲ ಮೂಡಿ ಅಲ್ಲಿ ಇಲ್ಲಿ ವಿಚಾರಿಸಿದೆ. ಆತ ನಮ್ಮನಿಮ್ಮಂತೆಯೇ ಮಾಮೂಲಿ ಮನುಷ್ಯ; ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾನೆ, ದನಕರುಗಳಿವೆ. ಆಗಾಗ ಕಾಡಿಗೆ ಹೋಗಿ ಏನೇನೋ ಬೇರುಗಳನ್ನು ತರುತ್ತಾನೆ. ಆತ ಊಟ ಮಾಡುವಾಗ ಯಾರಾದರೂ ಅಪ್ಪಿತಪ್ಪಿ 'ಹಾವು' ಅಂದುಬಿಟ್ಟರೆ ಅಥವಾ ಅಕಸ್ಮಾತ್ ದೀಪ ಆರಿಬಿಟ್ಟರೆ ತಟ್ಟೆಗೆ ಕೈ ತೊಳೆದುಕೊಂಡುಬಿಡುತ್ತಾನೆ. ಸಾಕಷ್ಟು ಭಂಗಿ ಸೇದುತ್ತಾನೆ. ಹೆಚ್ಚು ಮಾತಾಡದ ಆತ ತನ್ನ ಕಣ್ಣಿನಲ್ಲೇ ಏನು ಬೇಕಾದರೂ ಗ್ರಹಿಸಬಲ್ಲ, ಒಳಗೊಳಗೇ ಲೆಕ್ಕಹಾಕಬಲ್ಲ ಸಾಮರ್ಥ್ಯ ಹೊಂದಿರುವವನು. ತನ್ನನ್ನು ಪರೀಕ್ಷಿಸಲೆಂದು ಬಂದಿದ್ದ ವಿಚಾರವಾದಿಯೊಬ್ಬನನ್ನು ಅತ್ತಿತ್ತ ಅಲುಗಾಡದ ಹಾಗೆ ಮಾಡಿದ್ದಲ್ಲದೆ, ನಿಮಿಷಗಳ ಕಾಲ ಬಾಯಿಕಟ್ಟು ಮಾಡಿದ್ದನಂತೆ. ಬಾಯಿಕಟ್ಟು ಅಂದರೆ ಮಾತು ಹೊರಡದ ಹಾಗೆ, ನಾಲಿಗೆ ಹೊರಳದ ಹಾಗೆ ಮಾಡುವುದು. ಆ ಮಂತ್ರವಾದಿಯ ಹತ್ತಿರ ಒಂದು ವಿಚಿತ್ರವಾದ ಚರ್ಮದ ಚೀಲವಿದೆಯಂತೆ. ಅದರಲ್ಲಿ ಏನಿದೆ ಅಂತ ಈವರೆಗೆ ಯಾರಿಗೂ ತಿಳಿದಿಲ್ಲವಂತೆ. ಅಮಾವಾಸ್ಯೆ, ಹುಣ್ಣಿಮೆ ರಾತ್ರಿಗಳಂದು ಆತ ಅದ್ಭುತವಾಗಿ, ವಿಚಿತ್ರವಾಗಿ ಪರಿಣಮಿಸಲ್ಪಡುತ್ತಾನಂತೆ. ಹಾಗೆಯೇ ದೆವ್ವ ಮೆಟ್ಟಿಕೊಂಡಿದೆ ಅಂತ ಬಂದವರನ್ನು ಬುಗುರಿ ಆಡಿಸಿದಂತೆ ಆಡಿಸುತ್ತಾನಂತೆ. ಹೀಗೇ ಒಮ್ಮೆ ಹೆಂಗಸೊಬ್ಬಳ ಮೈಯಲ್ಲಿ ದೆವ್ವ ಸೇರಿಕೊಂಡಿದ್ದು, ಆಕೆಯನ್ನು ಈ ಮಂತ್ರವಾದಿಯ ಹತ್ತಿರ ಕರೆದುಕೊಂಡು ಬಂದರಂತೆ. ಆಗ ಈತ ತನ್ನ ಶಕ್ತಿಯಿಂದ ಆಕೆಯನ್ನು ಹುಣಸೆಮರದ ಮೇಲಕ್ಕೆ ಹತ್ತಿಸಿಬಿಟ್ಟಿದ್ದನೆಂದೂ, ಆಕೆ ಮರ ಹತ್ತಿದ ಮೇಲೆ ಆಕೆಯ ಶರೀರದಿಂದ ದೆವ್ವವನ್ನು ಹೊರತೆಗೆದಾಗ ಆಕೆ ಮರದಿಂದ ಇಳಿಯಲು ಪ್ರಾಯಾಸ ಪಡುತ್ತಿದ್ದಾಗ ಈತ ಮತ್ತೆ ಅವಳ ಶರೀರಕ್ಕೆ ದೆವ್ವ ಹೊಕ್ಕುವಂತೆ ಮಾಡಿ ಮರದಿಂದ ಇಳಿಸಿದನೆಂದೂ ಕೇಳಿಪಟ್ಟೆ- ಇಂತಹ ಕುತೂಹಲಕರ ಸಂಗತಿಗಳೇ ಈ ಬಗೆಯ ಮಂತ್ರವಾದಿಗಳ ಬಗ್ಗೆ ಮತ್ತಷ್ಟು ಆಸಕ್ತಿ, ಭಯ, ಬೆರಗು ಹುಟ್ಟಿಕೊಳ್ಳಲು ದಾರಿಮಾಡಿಕೊಡುತ್ತವೆ… ಇಷ್ಟೆಲ್ಲಾ ಚರ್ಚಿಸಿದ ಮೇಲೆ ಈ ಯುಗದ ಮನುಷ್ಯ ತಾನು ಬಚಾವಾಗಲು ಒಂದು ದಾರಿಯುಂಟು. ಅದು ವೈಜ್ಞಾನಿಕ, ವೈಚಾರಿಕ ಚಿಂತನೆ.
ದೆವ್ವಗಳು ಇರಲಿ ಅಥವಾ ಇರದಿರಲಿ ಅದರ ಬಗ್ಗೆ ಮೊದಮೊದಲು ತಲೆಕೆಡಿಸಿಕೊಂಡವರು ಜಾನ್ ಫೆರಿಯರ್ ಥರದವರು. ಅಂಥವರ ಜೊತೆ ಎಚ್.ನರಸಿಂಹಯ್ಯ ಮುಂತಾದವರನ್ನು ತಾಳೆ ಮಾಡಿ.
-ಹೃದಯಶಿವ
*****
ಮಾನವ ತಾನು ಕಂಡುಕೊಂಡ ದೇವರ ಜೊತೆಗೆ ಕಂಡುಕೊಂಡ ಇನ್ನೊಂದು ವಸ್ತು ಅಥವಾ ಪರಿಕಲ್ಪನೆಯೇ ದೆವ್ವ ಎನ್ನಬಹುದು. ಚಿಂತನೆಗೆ ಹಚ್ಚುವ, ಕುತೂಹಲ ಕಾಯ್ದುಕೊಳ್ಳುವ ಬರಹ. ಕೆಲಸದೊತ್ತಡದಿಂದ ಇಷ್ಟು ದಿನ ನಿಮ್ಮ ಬರಹಗಳನ್ನು ಆಸಗವಾದಿಸದೇ ಇದ್ದುದ್ದಕ್ಕೆ ಕ್ಷಮಿಸಿ. ಇನ್ನು ಮುಂದೆ ಫಾಲೋವ್ ಮಾಡುವೆ. ದೆವ್ವವೆಂಬುದು ದೇವರ ಹಿರಿಮೆಯನ್ನು ಹೆಚ್ಚಿಸಲು ಉತ್ಪತ್ತಿ ಮಾಡಿದ ಕಪೋಲ ಕಲ್ಪಿತ ವಸ್ತುವಷ್ಟೇ. ವಿರುದ್ಧ ಪದಗಳು ಎಂದಿಗೂ ಒಂದಕ್ಕೊಂದು ಪೂರಕವಾಗಿರುತ್ತವೆ. ಗೆಲುವಿಗೆ ಬೆಲೆ ಬಂದದ್ದು ಸೋಲಿನಿಂದ
ದೆವ್ವಗಳು ಇವೆ ಎಂದು, ಅವು ಹೊಕ್ಕ ದೇಹದಿಂದ ಬಿಡಿಸುವುದನ್ನು, ಹಲವು ಬಾರಿ ಬೈಬಲ್ ನ್ನು ಪಠಿಸಿ ಮಾತನಾಡಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ಆದರೂ ನಂಬದಿರುವ ಸ್ಥಿತಿ ಮತ್ತು ನಂಬಲೇ ಎಂಬ ಗೋಜಲು ನನ್ನನ್ನು ಹಲವು ಬಾರಿ ಕಾಡಿದೆ ಶಿವು… ಇಷ್ಟವಾಯ್ತು ಬರಹ…
ಒಳ್ಳೆಯ ಬರಹ. ದೆವ್ವಗಳ ಬಗ್ಗೆ ಹಿಂದಿನಿಂದಲೂ ಹಲವಾರು ರೀತಿಯ ಕತೆಗನ್ನು ನಾವು ಓದಿದ್ದೇವೆ. ಈ ಕತೆಗಳಿಗೆ ದೆವ್ವ ಎಂಬುದೇ ಮೂಲ ವಸ್ತು. ರೋಚಕವಾದ ಕತೆಗಳು ಬೇಕಾದರೆ ಅದರಲ್ಲಿ ಒಂದು ದೆವ್ವ ಬೇಕೇ ಬೇಕು. ದೆವ್ವಗಳು ನಮ್ಮ ಸಮಾಜಕ್ಕೆ ಭಯ ಭೀತಿ ಕೊಟ್ಟವು. ಭಯವಿಲ್ಲದೆ ಜ್ಞಾನ ಹುಟ್ಟದು. ಅದಕ್ಕೆಂದೆ ಹಿರಿಯರು ದೇವರ ಭಯವೇ ಜ್ಞಾನದ ಆರಂಭ ಅಂದರು. ಹಾಗಾಗಿ ಹಳ್ಳಿಯಲ್ಲಿ ಹೆಚ್ಚಾಗಿ ದೆವ್ವಗಳ ಬಗ್ಗೆ ಜನ ಹೆದರುತ್ತಾರೆ. ರಾತ್ರಿ ಹೆಚ್ಚಾಗಿ ಹೊರಗೆ ಹೋಗುವುದಿಲ್ಲ. ಇದರಿಂದ ಸಮಾಜದ ಹಿತವೂ ಅಡಗಿತ್ತು. ಒಟ್ಟಿನಲ್ಲಿ ನಿಮ್ಮ ಬರಹ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ನಿರೂಪಣೆ ಕೊಟ್ಟಿದ್ದಿರಿ.
ದೆವ್ವಗಳು ಇವೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನನ್ನ ತಾಯಿ ಕಂಡಿದ್ದು ಹೇಳಿದ್ದಾರೆ. ಸತ್ತವರನ್ನು ಅವರು ಕಂಡಿದ್ದ ಉದಾಹರಣೆ ನನ್ನ ನೆನಪಿನಲ್ಲಿದೆ. (೧೯೬೪).
ನನಗೆ ಅವುಗಳ ಭಯವಿಲ್ಲ. ಮೊನ್ನೆ ಆಗಸ್ಟ್ ೩೦ರ ರಾತ್ರಿ, ಊರಲ್ಲಿ ಮನೆಯಲ್ಲಿ, ನಾನು ಮತ್ತು ಅಣ್ಣ ಇಬ್ಬರೇ ಇದ್ದದ್ದು. ಯಾವುದೋ ವಿಷಯ ಮಾತನಾಡುತ್ತಿದ್ದೆವು. (ದೆವ್ವಗಳ ಬಗ್ಗೆ ಅಲ್ಲ). ಯಾರೋ ಉಸ್ಸ್..ಎಂದ ಸದ್ದು ಇಬ್ಬರಿಗೂ ಕೇಳಿಸಿತು. ನಾಯಿಗಳು ವಿಪರೀತವಾಗಿ ಬೊಗಳುತ್ತಿದ್ದವು. ಹೊರಗೆ ಯಾರೂ ಇರಲಿಲ್ಲ.
ಇಂತಹ ಕೆಲವು ಅನುಭವಗಳಿಗೆ ನಮ್ಮಲ್ಲಿ ಉತ್ತರವಿಲ್ಲ. ಅದಕ್ಕೆ ಸುಲಭ ಉತ್ತರ – ದೆವ್ವಗಳು.
ಲೇಖನ ಚೆನ್ನಾಗಿದೆ.
ದೇವರು ಇದಾನೆ ಅನ್ನೊ ನಂಬಿಕೆ ಹೇಗೊ ಹಾಗೆನೆ ದೆವ್ವಗಳು ಆದರೆ ಹೆಚ್ಚಾಗಿ ದುರ್ಬಲ ಮನಸ್ಸಿನವರು ಇಂತಹ ಭಯ-ಭೀತಿಗಳಿಗೆ ಒಳಗಾಗುತ್ತಾರೆ. ಉತ್ತಮ ಬರಹ ಸರ್.
ದೆವ್ವದ ಕುರಿತು ನಂಬಿಕೆ ಇಲ್ಲ ಆದರೆ ಭಯವಿದೆ.ಏನೇ ಇರಲಿ ಒಳ್ಳೆಯ ಲೇಖನ.
ದೆವ್ವದ ಬಗ್ಗೆ ಮಾತಾಡೋದೆ ವೇಸ್ಟ್ ಅಂತ ಹೇಳುತ್ತಲೇ ಇಷ್ಟು ಒಳ್ಳೆ ಲೇಖನ ಬರೆದಿದ್ದೀರಲ್ಲ ಶಿವಾ! :). ಅಂದ ಹಾಗೆ ನೀವು ಬರೆದದ್ದು ದೆವ್ವ ದ ಬಗ್ಗೆಗಿಂತ ಮೂಢನಂಬಿಕೆಯ ಬಗ್ಗೆ ಆಂತ ನನ್ನ ನಂಬಿಕೆ. ಮೂಢನಂಬಿಕೆಯ ಅಧಾರವಾಗಿಟ್ಟುಕೊಂಡು ಮೊಸ ಮಾಡುವವರು ಸಾಕಷ್ತು ಜನ ಇದ್ದಾರೆ. ಯಾಕಂದರೆ ಹಾಗೆ ಮೋಸ ಹೋಗುವ ಮುಗ್ಧರು ಇನ್ನೂ ಜಾಸ್ತಿ ಇದ್ದಾರೆ! ಇದು ನನ್ನ ಅನಿಸಿಕೆ.
ಸರ್ ಈ ಎಲ್ಲಾ ವಾದ ವಿವಾದ ನೋಡಿದೆ ಆದರೆ ದೆವ್ವ ಇದೆಯೊ ಇಲ್ಲವೊ ಗೊತ್ತಾಗಲೆ ಇಲ್ಲ.. ಆದರೆ ಭಯವಂತು ಇದೆ. ನಾನು ಈ ಲೇಖನ ಓದುತ್ತಿರುವ ಸಮಯ ೧೨:೪೩ ರಾತ್ರಿ, ಆಗಿದೆ ಕಂಬಳಿ ತೆಗೆಯಲು ಭಯ… ಆದರೆ ಒಂದು ದೆವ್ವದ ಅನುಭವ ಆಗುವವರೆಗು ಯಾರಿಗು ನಂಬಿಕೆ ಬಾರದು ಎಲ್ಲಾ ಕಲ್ಪನೆ ಗೆ ಹೆದರುತ್ತಾ ನಂಬಿಕೆ ಬೆಳೆಸಿಕೊಳ್ಳುತ್ತಾರೆ. ನಿಮ್ಮ ಲೇಖನ ಚೆನ್ನಾಗಿದೆ.