ಹೆಂಗಿದ್ರೂ ರಜೆಯಿದ್ಯಲ್ಲ ಬಾರೋ, ಉತ್ತರ ಭಾರತ ಸುತ್ತಬಹುದು ಅಂತ ಮೀರತ್ತಿನಲ್ಲಿದ್ದ ಮಾವ ಕರೆದಾಗ ದೇಶ ಸುತ್ತಬೇಕೆಂಬ ಬಯಕೆ ಗರಿಗೆದರಿ ನಿಂತಿತ್ತು. ದೇಶ ಸುತ್ತಬೇಕೆಂಬ ಮನ ಚಲೋ ದಿಲ್ಲಿ ಎಂದು ಹೊರಟು ನಿಂತಿತ್ತು. ದೆಲ್ಲಿಗೆಂದು ಹೊರಟಿದ್ದೆಂತು ಹೌದು. ಆದರೆ ಬೆಂಗಳೂರಿಂದ ದಿಲ್ಲಿಗೆ 2,153 ಕಿ.ಮೀಗಳ ಪಯಣ ಸುಲಭದ್ದೇನಲ್ಲ. ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನಗೆ ಮುಂದೊಮ್ಮೆ ಅದೇ ರೈಲಿನಲ್ಲಿ ದಿನಗಟ್ಟಲೇ ಪಯಣಿಸುವ ಭಾಗ್ಯ ಸಿಗುತ್ತೆ ಅಂತ ಕನಸಲ್ಲೂ ಅನಿಸಿರಲಿಲ್ಲ. ಯಾಕೆಂದರೆ ದೆಲ್ಲಿಗೆ ಸಂಪರ್ಕ ಕ್ರಾಂತಿ ರೈಲಲ್ಲಾದರೆ ೩೨ ಮತ್ತು ರಾಜಧಾನಿ ಎಕ್ಸಪ್ರೆಸ್ಸಲ್ಲಾದರೆ ೩೫ ಘಂಟೆ!. ಉತ್ತರ ಭಾರತ ಸುತ್ತೋ ಕನಸುಗಳ ಮೂಟೆ ಹೊತ್ತ ನಾನು ಮತ್ತು ನನ್ನಣ್ಣನ ಈ ರೈಲ ಪಯಣ ರಾತ್ರೆ ೧೦:೩೦ ಕ್ಕೆ ಯಶವಂತಪುರದ ಸಂಪರ್ಕ ಕ್ರಾಂತಿ ರೈಲಿಂದ ಶುರುವಾಗಿತ್ತು.
ಮೊದಲಾ ದಿನ ಅಲ್ಲಲ್ಲ ಮೊದಲ ರಾತ್ರಿ!!..
ಭಾರತ ಸ್ವಾತಂತ್ರಸಂಗ್ರಾಮದ ಸಿಪಾಯಿದಂಗೆಯ ಉಗಮಸ್ಥಾನ ಮೀರತ್ ಬಗ್ಗೆ ನೀವೆಲ್ಲ ಓದಿರಬಹುದು. ನಂ ಕರ್ನಾಟಕದ ಹೆಮ್ಮೆಯ ನಗರಿ ಬೆಂಗಳೂರಿನಿಂದ ನಮ್ಮ ದೇಶದ ರಾಜಧಾನಿ ನವದೆಹಲಿಗೆ ಮತ್ತು ಅಲ್ಲಿಂದ ೭೫ ಕಿಮೀ ತೆರಳಬೇಕಿತ್ತು ಮೀರತ್ತಿಗೆ . ನನ್ನಿಲ್ಲಿವರೆಗಿನ ಜೀವನದಲ್ಲಿ ಎಂದೂ ಅಷ್ಟು ದೂರದ ಪ್ರಯಾಣ ಮಾಡಿರಲಿಲ್ಲ. ಆದರೆ ನಾನು ಅಲ್ಲಿಗೆ ಈ ಬಾರಿ ಬರಲೇಬೇಕು ಅಂತ ಅತ್ತೆ- ಮಾವನ ಅತೀವ ಒತ್ತಾಯ. ಸರಿ, ಆದದ್ದಾಯಿತು ಎಂದು ರೈಲು ಹತ್ತಾಯಿತು.ರೈಲಲ್ಲಿ ಸಾಮಾನೆಲ್ಲಾ ಬಿಟ್ಟು ಎಲ್ಲಿಗೂ ಹೋಗ್ಬೇಡಿ, ಯಾರು ಏನು ಕೊಟ್ಟರೂ ತಿನ್ನಬೇಡಿ, ರೈಲಲ್ಲಿ ಸರಗಳ್ಳರು, ಸಾಮಾನು ಕಳ್ಳರು, ಜೇಬುಗಳ್ಳರು ಹೀಗೆ ಅಸಂಖ್ಯಾತ ತರದ ಕಳ್ಳರಿರುತ್ತಾರೆ ಎಂಬ ಎಚ್ಚರಿಕೆಗಳೂ ನಮ್ಮ ಜೊತೆಗೇ ಬರುತ್ತಿದ್ದವು ಅನ್ನಿ. ಎದುರಿಗೆ ಕಾಣೋ ಪ್ರತೀ ಮನುಷ್ಯನೂ ಕಳ್ಳನಾ, ಯಾವಾಗ ನಮ್ಮನ್ನು ದೋಚುತ್ತಾನೋ ಎಂಬ ಭೀತಿ ನಮಗೆ ಕಾಡುವ ಮೊದಲೇ ನಮ್ಮ ರೈಲಿನ ಹೊರಡೋ ಸಮಯ ಆಯಿತು. ಕಾಣದ ದೇವರ ಕಾಯೋ ಭರವಸೆ ಮೇಲೆ ಮಕ್ಕಳನ್ನು ಕಳಿಸಿದ್ದ ಹಲವಾರು ಹೆತ್ತವರ ಹಾರೈಕೆಯನ್ನು, ತಿರುಗೋ ಬಯಕೆಯ ಯುವಕ-ಯುವತಿಯರನ್ನು, ತಮ್ಮೂರಿಗೆ ಮರಳುತ್ತಿದ್ದ ಹಲವರನ್ನು, ಇನ್ನೂ ಅರಿಯದ ಹತ್ತು ಹಲವನ್ನು ಹೊತ್ತು ನಮ್ಮ ರೈಲು ರಾತ್ರೆ ನಿಲ್ದಾಣಕ್ಕೆ ಸೀಟಿಯ ಟಾಟಾ ಹೇಳಿತು.
ನಾವು ಮುಂಚೆಯೇ ಸ್ಲೀಪರ್ ಕ್ಲಾಸಲ್ಲಿ ಬುಕ್ ಮಾಡಿಸಿದ್ದೆವು.ಅದರಲ್ಲಿ ಎದುರು ಬದುರು ೬ ಸೀಟು ಮತ್ತೆ ಕಿಟಕಿ ಬದಿ ೨ ಸೀಟು. ಮೇಲ್ಗಡೆ ಬರ್ತ್ ಸಿಕ್ಕವರಿಗೆ ಅದು ನಿಜ ಅರ್ಥದಲ್ಲಿ ಸ್ಲೀಪರ್. ಮಧ್ಯ ಅಥವಾ ಕೆಳಗಡೆಯ ಬರ್ತ್ ಸಿಕ್ಕವರು ಮಲಗೋಕೆ ರಾತ್ರೆವರೆಗೆ ಕಾಯಬೇಕು. ಅಲ್ಲೀವರಗೂ ಎಲ್ಲ ಕೆಳಗಡೆ ಬರ್ತಲ್ಲೇ ಕೂತಿರುತ್ತಾರಲ್ಲಾ.. ಅದಕ್ಕೆ. ಅಂದು ನಾವಿದ್ದ ರೈಲಲ್ಲಿ ಆ ೮ರಲ್ಲಿ ಬರೀ ನಾಲ್ಕರಲ್ಲಿ ಮಾತ್ರ ಬುಕ್ ಮಾಡಿಸಿದವರು ಬಂದಿದ್ದರು. ನಾವು ಮತ್ತು ಒಂದು ದಂಪತಿ.ನಿಧಾನಕ್ಕೆ ರೈಲು ಹೊರಡತೊಡಗಿದಂತೆ ಅವರ ಪರಿಚಯ ಆಯಿತು. ಅವರು ದೆಲ್ಲಿಯವರಂತೆ. ಅವರ ಮಗನಿಗೆ ಬೆಂಗಳೂರಿನ DRDO ನಲ್ಲಿ ಕೆಲಸ ಸಿಕ್ಕಿತ್ತಂತೆ. ಅವನನ್ನು ನೋಡಲು ಬಂದಿದ್ದ ಅವರು ಸ್ವಗ್ರಾಮಕ್ಕೆ ಮರಳುತ್ತಿದ್ದರು. ನೋಡಿದರೆ ನಾವು ಕೇಳಿದ ಯಾವುದೇ ಕಳ್ಳರ ಹೋಲಿಕೆ ಕಾಣುತ್ತಿರಲಿಲ್ಲ. ಆದರೆ ಹೇಗೆ ಹೇಳುವುದು.ಯಾವ ಹುತ್ತದಲ್ಲಿ ಯಾವ ಹಾವಿದೆಯೋ?.. ಆದರೂ ಅವರ ಮಾತುಗಳನ್ನು ನಂಬಬಹುದು ಅಂತ ನಮ್ಮಿಬ್ಬರಿಗೂ ಅನ್ನಿಸಿದ್ದರಿಂದ ಅವರೊಂದಿಗೆ ಮಾತನಾಡಲಾರಂಭಿಸಿದೆವು. ಹೀಗೆ ಎಲ್ಲಿಂದ , ಎಲ್ಲಿಗೆ ಎಲ್ಲ ಆದ ಮೇಲೆ ಸ್ವಲ್ಪ ವಿಶ್ವಾಸ ಬೆಳೆಯಲಾರಂಭಿಸಿತು. ೨ ದಿನದ ಮಟ್ಟಿಗಾದರೂ ಇವರೇ ನಮ್ಮ ಬಂಧು ಬಳಗ. ಹಾಗಾಗಿ ಇವರೊಂದಿಗೆ ಸ್ವಲ್ಪವಾದರೂ ಮಾತನಾಡೋದ್ರಲ್ಲಿ ತಪ್ಪಿಲ್ಲ ಅಂತ ಅನ್ನಿಸ್ತು. ಹಾಗಾಗಿ ನಾವೂ ಅವರ ಹರಟೆಯಲ್ಲಿ ಸೇರಿಕೊಂಡೆವು. ಖಾಲಿ ಇದ್ದ ಸೀಟಿನಲ್ಲಿ ಹಿಂದಿನ ದಿನದ ರೈಲು ತಪ್ಪಿಸಿಕೊಂಡು ಈ ರೈಲಿಗೆ ಬಂದಿದ್ದ ರಿಸವ್ರೇಷನ್ ಕನ್ಫರ್ಮ್ ಆಗದಿದ್ದ ಇಬ್ಬರು ನೋಯ್ಡಾದ ಹುಡುಗರು ಕುಳಿತಿದ್ದರು. ಸೀಟಂತೂ ಸಿಕ್ಕಿಲ್ಲ, ಹೇಗಿದ್ದರೂ ಈ ಸೀಟು ಖಾಲಿ ಇದ್ಯಲ್ಲಾ, ಇಲೇ ಮಲಗೋಣ. ರಾತ್ರಿ ಟಿ.ಟಿ ಹರ್ತ ಈ ಸೀಟನ್ನು ತಮಗೆ ಮಾಡಿಸಿಕೊಳ್ಳೋಣ ಅಥವಾ ಅವನು ಬರೋವರೆಗಾದ್ರೂ ಮಲಗೋಣ ಅನ್ನೋ ಉದ್ದೇಶ ಅವರದ್ದು.
ದೂರದೂರಿಗೆ ಹೋಗೋ ರೈಲುಗಳಲ್ಲಿ ಅದರದ್ದೇ ಆದ ಅಡುಗೆ ಭೋಗಿ (PANTRY) ಇರುತ್ತದೆ ಅಂತ ಕೇಳಿದ್ದೆ. ಆದರೆ ಅದನ್ನು ನೋಡೋ ಯೋಗ ಈ ಸಲ ಸಿಕ್ಕಿತ್ತು. ನಾನು ರೈಲತ್ತೋ ಮೊದಲೇ ಊಟ ಮಾಡಿದ್ದರಿಂದ ಅಂದು ರಾತ್ರಿ pantry ಇಂದ ಏನೂ ತಿನ್ನಲಿಲ್ಲ. ಬೆಂಗಳೂರಿನ ತಂಪು ಹವೆ, ದಿಲ್ಲಿಯ ಬೇಯೋ ಸೆಖೆಯ ಬಗ್ಗೆ, ಅವರ DRDO ಮಗನ ಕೆಲಸದ ಬಗ್ಗೆ ಹರಟಿದ ನಮಗೆ ನಮ್ಮ ಬೆಂದಕಾಳೂರ ಬಗ್ಗೆ ದೆಲ್ಲಿಗರಲ್ಲಿನ ಒಳ್ಳೆಯ ಅಭಿಪ್ರಾಯ ತಿಳಿದು ಸಂತೋಷವಾಯಿತು. ನೋಯ್ಡಾವಾಸಿಗಳೂ ಇದನ್ನು ಮೆಚ್ಚಿದರು. ಆದರೆ ಇಲ್ಲಿನ ಟ್ರಾಪಿಕ್ ಜಾಂ, ಮಾಲಿನ್ಯಗಳು ಅತೀ ಅನ್ನೋ ಅವರ ಮಾತಿಗೆ ನಾವು ತಲೆದೂಗಲೇಬೇಕಾಯಿತು..ರಾತ್ರೆ ಹನ್ನೊಂದರವರೆಗೆ ಹರಟಿದ ನಾವು ಕೊನೆಗೆ ನಮ್ಮ ಬರ್ತ್ ಹತ್ತಿ ಮಲಗಿದೆವು. ನಿಧಾನವಾಗಿ ರೈಲಿನ ಕುಲುಕಾಟದಲ್ಲಿ ನಿದ್ರಾದೇವಿ ನಮ್ಮನ್ನಾವರಿಸಲಾರಂಭಿಸಿದಳು.
ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.ಮನೆಯಲ್ಲಿ ಎಂದೂ ಬೇಗ ಏಳದ ನಂಗೆ ಏನು ಕಾದಿದೆಯೋ ಅಂತ ಗಡಿಯಾರ ನೋಡಿದರೆ ನಾಲ್ಕೂವರೆ. ಗಡಿಯಾರದ ಮುಳ್ಳು ನಿಂತಿದೆಯೋ ನಡೀತಿದ್ಯೋ ಅಂತ ಆ ಮಬ್ಬುಗತ್ತಲಲ್ಲಿ ನಂಗೆ ಸಂಶಯ ಬರೋದ್ರೊಳಗೆ ಪ್ರಕೃತಿ ಕರೆಗಾಗಿ ಹಾಸಿಗೆಯಿಂದೆದ್ದೆ. ಕರಾಗ್ರೆ ವಸತೇ, ಸಮುದ್ರವಸನೇ.. ಯಂತ ಪ್ರಾತಃಸ್ಮರಣೆಗಳು ಎಂದಿನಂತೆ ತಮ್ಮ ಕೆಲಸ ಮಾಡಿದವು. "ನಾವೂ ಬರ್ತೀವಿ, ನಿನ್ನ ಬ್ಯಾಗ ಬಂಧನದಿಂದ ಬಿಡಿಸು" ಅಂತ ಬ್ರಷ್ಷು, ಸೋಪುಗಳೂ ಹೇಳಿದಂತಾಯ್ತು. ಸರಿಯೆಂದು ಆ ಸಹಚರರೊಂದಿಗೆ ಮುಖಮಾರ್ಜನೆಗೆ ತೆರಳಿದೆ. ಭೋಗಿಯಲ್ಲಿ ಹೆಚ್ಚಿನವರೆಲ್ಲಾ ನಿದ್ರಾದೇವಿಯ ಸವಿಯಪ್ಪುಗೆಯಲ್ಲಿ ಸುಖವಾಗಿದ್ದರಿಂದ ಪ್ರಕೃತಿಯ ಕರೆಗಾಗಿ ಕ್ಯೂನಲ್ಲಿ ನಿಲ್ಲೋ ಪ್ರಮೇಯ ಬರಲಿಲ್ಲ. ದಿನಾ ಸ್ನಾನವಾಗೋವರೆಗೆ ಹನಿ ನೀರೂ ಕುಡಿಯದಂತ ಸಂಪ್ರದಾಯ ಪಾಲಿಸದಿದ್ರೂ, ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾದ್ರೂ ಅಲ್ಲಿ ಸ್ನಾನದ ಸಾಹಸ ಮಾಡಲಿಲ್ಲ. "ಸಂಚಾರೀ ಶೂದ್ರವದಾಚರೇತ್" ಎಂಬ ಮಾತು ನೆನಪಾಯ್ತು.
ಗಂಟೆ ಐದಾಗ್ತಾ ಬಂತು. ಇನ್ನೂ ಪೂತ್ರಿ ಬೆಳಕು ಹರಿದಿಲ್ಲ. ಆಗ್ಲೇ ಮುಂಚೆ ಹೇಳಿದಂತೆ ಕ್ಯೂ ಬೆಳೆಯೋಕೆ ಶುರು ಆಯ್ತು. ಬೇಗ ಎದ್ದು ತಯಾರಾದ ನಂಗೆ ಇನ್ನೇನು ಕೆಲಸ? ಮತ್ತೆ ಮಲಗುವುದು. ನಿದ್ರಾದೇವಿ ಮತ್ತೆ ಬರಲಾ, ಬಿಡಲಾ ಅಂತ ಆಡುತ್ತಾಳೆ. ನಿದ್ದೆ ಬಂದಾಗ ಹೊಟ್ಟೆ ಹಸಿಯೋದಿಲ್ಲ ಅನ್ನೋ ಸತ್ಯದ ಅರಿವಾದದ್ದು ಆಗಲೇ. ನಿದ್ದೆ ಬರ್ದಿದ್ರೂ ಎದ್ದೇನು ಮಾಡೋದು ಅಂತ ಅಲ್ಲೇ ಹೊರಳಾಟ. ಕಿಟಕಿಯಾಚೆಯ ರಮಣೀಯ ಪ್ರಕೃತೀನ ನೋಡೋದು, ಮಗ್ಗುಲು ಬದಲಾಯಿಸುತ್ತಾ ಕಣ್ಣು ಮುಚ್ಚೋದ್ರಲ್ಲಿ ಸಮಯ ಕಳೀತು.
ಮನೇಲಿ ನಾವೆಲ್ಲಾ ಏಳೋ ಏಳು ಘಂಟೆ ಹೊತ್ತಿಗೆ ಭೋಗಿಲಿರೋ ಜನರೆಲ್ಲಾ ತಯಾರಾಗಿ ಈ ಕ್ಯೂ ಮುಗೀತು.
ಕಾಫಿ, ಟೀ ಅವರು, ಇಡ್ಲಿ, ವಡೆ, ಉಪಮ, ಬ್ರೆಡ್ ಆಮ್ಲೇಟ್ ನವರು ಪ್ಯಾಂಟ್ರಿಯಿಂದ ಬರೋಕೆ ಶುರು ಮಾಡಿದ್ರು.( ಕಾಫಿ, ಟೀ, ನೀರು, ಕೂಲ್ ಡ್ರಿಂಕ್ ನವರು ಇಡೀ ದಿನ ಬರ್ತಾರೆ ಅನ್ನೋದು ಆಮೇಲೆ ತಿಳೀತು ಬಿಡಿ).ನಾವು ವಡೆ, ಉಪಮ ತಂಗೊಂಡ್ವಿ.ಕೋಡು ಬಳೆಯಂತಿದ್ದ ೨ ವಡೆ, ಸೌಟು ಉಪಮಾ ನೋಡಿ ಅಳಬೇಕೋ ನಗಬೇಕೋ ಗೊತ್ತಾಗ್ಲಿಲ್ಲ.ಇದನ್ನು ತಗಂಡ್ರೆ ನಾನೂ ಉಚಿತ ಅಂತ ಜೊತೆಗಿದ್ದ ಸಾಸು ಸ್ಯಾಚೆ ಆಣಕಿಸಿದಂತಾಯ್ತು. ತಿಂದ ಶಾಸ್ತ್ರ ಮುಗಿಸಿದ ನಾವು ಮತ್ತೆ ಹಿಂದಿನ ರಾತ್ರೆಯಂತೆ ಹರಟತೋಡಗಿದೆವು. ಹಗಲೆಲ್ಲಾ ಕೆಳಗಿನ ಬರ್ತ್ನಲ್ಲಿ ಕೂತು ಹರಟೋದು, ಮಲಗಬೇಕು ಅನ್ನಿಸಿದ್ರೆ ಮಧ್ಯದ ಬರ್ತ್ ಬಿಚ್ಚಿ ಅಥವಾ ಮೇಲಿಂದಕ್ಕೆ ಹತ್ತಿ ಮಲಗೋದು.. ಇದೇ ರೈಲಿನ ಬಹುತೇಕರಂತೆ ನಮ್ಮ ಘನಂದಾರಿ ಕೆಲಸ ಆಯ್ತು. ಇಸ್ಪೀಟಾಡೋರು, ಬರ್ತಲ್ಲಿ ಕೂತೋ , ಮಲಗಿಯೋ ತರಹೇವಾರಿ ಪುಸ್ತಕ ಓದೋರು, ಕಾಲಕಾಲಕ್ಕೆ ಭಜನೆ ಮಾಡೋ ಅಜ್ಜಿಯರು, ಕುಣಿದಾಡುತ್ತಿದ್ದ ಮಕ್ಕಳು ಹೀಗೆ ಹಲವಾರು ತರದವರು ನಂ ಭೋಗಿಲಿದ್ರಿಂದ ಭಾರತದ ಸಣ್ಣ ತುಣುಕೊಂದು ಒಂದು ಕಾಲದಿಂದ ಇನ್ನೊಂದಕ್ಕೆ, ಒಂದು ಪ್ರದೇಶದಿಂದ ಇನ್ನೊಂದಕ್ಕೆ ರೈಲೆನ್ನೋ ಚುಕುಬುಕು ವಾಹಕದಲ್ಲಿ ಹೋಗ್ತಿದೆಯೇನೋ ಅನ್ನಿಸ್ತಿತ್ತು.
ಹಿಂದಿನ ದಿನ ರಾತ್ರಿಯೇ ಕರ್ನಾಟಕ ದಾಟಿ ಆಗಿದ್ದರಿಂದ ಆಂರ್ಧದ ತರಾವರಿ ಬೋರ್ಡುಗಳು ಕಾಣುತ್ತಿದ್ದವು. ಸೆಖೆಯೂ ಏರತೊಡಗಿತ್ತು. ದೆಲ್ಲಿ ದಂಪತಿ ತಾವು ತಂದಿದ್ದ ರೊಟ್ಟಿ ತಿಂದರು. ಬೆಂಗಳೂರಿನ ಅಣ್ಣನ ಜೊತೆ ಮಜಾ ಮಾಡಲು ಬಂದಿದ್ದ ನೋಯ್ಡಾ ಹುಡುಗ ಹಿಂದಿನ ದಿನದ ರೈಲು ತಪ್ಪಿಸಿಕೊಂಡು ನಮ್ಮ ರೈಲಿಗೆ ಬಂದಿದ್ದ. waiting list ಅಲ್ಲಿ ಇದ್ದಿದ್ದರಿಂದ ಅವನ ಸ್ಥಿತಿ ಅತಂತ್ರವಾಗಿತ್ತು. ನಮ್ಮ ಭೋಗಿಯಲ್ಲಿ ನಮ್ಮೆದುರ ಸೀಟು ಖಾಲಿ ಇದ್ದುದರಿಂದ, ರಾತ್ರಿಯಿಡೀ ಟಿ.ಟಿ ಚೆಕಿಂಗ್ ಗೆ ಬರದಿದ್ದರಿಂದ ಅವರೂ ನಮ್ಮೊಡನೆ ಖುಷಿಯಾಗಿ ಕೂತಿದ್ದರು. ಲೌಡು ಸ್ಪೀಕರು ಅಳವಡಿಸಿದ ಅವನ ಮೊಬೈಲಲ್ಲಿ ಪಂಜಾಬಿ ಹಾಡು ಕೇಳುತ್ತಾ, ಹರಟುತ್ತಾ, ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ ಕಾಲ ಕಳೆಯೋ ಹೊತ್ತಿಗೆ ಮಧ್ಯಾಹ್ನ ಆಯ್ತು. ಹೊಟ್ಟೆ ಚುರುಗುಟ್ಟೋಕೆ ಶುರು ಆಯ್ತು.ಸರಿ ಅಂತ ಪ್ಯಾಂಟ್ರಿಯವರು ತಂದ ರೈಲಿನ ವೆಜ್ ಬಿರಿಯಾನಿಯನ್ನು ತಿಂದೆ. ಅದು ಎಷ್ಟು ಚೆನ್ನಾಗಿತ್ತು ಅಂದ್ರೆ ರಾತ್ರೆ ರೈಲಲ್ಲಿ ಏನೂ ತಿನ್ನಬಾರದು ಅನ್ಸೋಕೆ ಶುರುವಾಯ್ತು ಅದರ ರುಚಿಯಿಂದ. ಬೆಲೆಗೆ ಅಷ್ಟೆಲ್ಲಾ ಹೆದರುತ್ತಿರಲಿಲ್ಲ ನಾನು. ಅದರ ಅನುಭವವೂ ಆಯಿತು.
ಆಂದ್ರದಲ್ಲಿ ಆಡು ಸಾಕುತ್ತಾರೆ. ನಮ್ಮಲ್ಲಿ ದನ ಎಮ್ಮೆಗಳಂತೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ದನ, ಪಂಜಾಬಿನಲ್ಲಿ ಎಮ್ಮೆ. ಹೀಗೆ ರೈಲಲ್ಲಿ ಕೂತಂಗೇನೆ ಬೇರೆ ಬೇರೆ ಸಂಸ್ಕೃತಿಗಳ ದರ್ಶನ ಆಯ್ತು.ರೈಲಿನುದ್ದಕ್ಕೂ ಬತ್ತಿದ ವಿಶಾಲ ನದಿಗಳು, ಅವುಗಳ ಅಗಾಧ ಮರಳುಹಾಸುಗಳು, ಖಾಲಿಯಾದ ತೊರೆಗಳನ್ನು ನೋಡಿದಾಗ ವರುಣನಿಗೆ ಹಿಡಿಶಾಪ ಹಾಕುವಂತೆ ಅನಿಸುತ್ತಿತ್ತು. ಶಿಥಿಲಾವಸ್ಥೆಯಲ್ಲಿದ್ದ ಜನರಿಲ್ಲದ ಹಳೇ ಮನೆಗಳು ಹಂಚಿಲ್ಲದೇ , ಕಿಟಕಿ ಬಾಗಿಲಿಲ್ಲದಿದ್ದರೂ ತಮ್ಮ ಅಸ್ತಿತ್ವ ಕಾಯ್ದುಕೊಂಡು ಅರಿಯದ ಯಾವುದೋ ಪುರಾತನ ಕಾಲಕ್ಕೆ, ನೋವು ನಲಿವುಗಳಿಗೆ ಸಾಕ್ಷಿಯಾದಂತಿದ್ದವು.ಸಂಜೆಯಾಗುತ್ತಿದ್ದಂತೆ ಕವಿದ ದಟ್ಟ ಮೋಡಗಳು ಎಲ್ಲೋ ಭಾರಿ ಮಳೆಯಾಗುತ್ತಿರೋ ಸೂಚನೆ ನೀಡುತ್ತಿದ್ದವು. ಆ ಮಳೆ ಇಲ್ಲಾದ್ರೂ ಬರಬಾರದೇ, ಬತ್ತಿರೋ ಈ ತೊರೆಗಳನ್ನ ತುಂಬಿಸಬಾರದೇ ಅನಿಸುತಿತ್ತು. ಸುಮಾರು ಸಮಯದ ನಂತರ ರೈಲ ಮೇಲೂ ಬಿದ್ದ ಕೆಲ ಮಳೆ ಹನಿಗಳಿಂದ ಸ್ವಲ್ಪ ತಂಪೆನಿಸಿದ್ರೂ ಆಮೇಲೆ ಅದರ ಸುಳಿವೂ ಇಲ್ಲ.ಸೆಖೆಯೂ ವಿಪರೀತ ಏರತೊಡಗಿತ್ತು. ಇದರ ಮಧ್ಯೆ ಬರುತ್ತಿದ್ದ ಕಾಫಿ, ಟೀ ಯವರು, ಕೀ ಚೈನು, ಪುಸ್ತಕ ಮಾರುವವರು ಆ ಸೆಖೆಗೇ ಹೊಂದಿಕೊಂಡು ಇದುವೇ ಇಲ್ಲಿನ ಜೀವನ ಎಂದತಾಗುತ್ತಿತ್ತು..
ಫ್ಯಾನುಗಳು ತಿರುಗುತ್ತಿವೆ. ಆದರೂ ಸ್ವಲ್ಪ ತಂಪಿಲ್ಲ. ನಮ್ಮ ರೈಲು ಸೂಪರ್ ಫಾಸ್ಟ ಆದ್ದರಿಂದ ಬರೀ ೭ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವುದಾಗಿತ್ತು. ನಿರಂತರ ಸಂಚಾರದಿಂದ ಭೋಗಿಯೂ ಬಿಸಿಯೇರತೊಡಗಿತ್ತು. ಬಾಣಲೆಯ ಹತ್ತಿರ ನಿಂತಂತಹ ಅನುಭವ. ದೆಲ್ಲಿಯಲ್ಲಿ ಇನ್ನೂ ಸೆಖೆ ಅನ್ನೋ ದೆಲ್ಲಿ ದಂಪತಿಗಳ ಎಚ್ಚರಿಕೆ ಮಾತಿಂದ ನಮಗೆ ಗಾಯದ ಮೇಲೆ ಉಪ್ಪು ಸುರಿದಂತಾಯ್ತು.
ಆಂದ್ರಕ್ಕೆ ಹೋಲಿಸಿದರೆ ಮಹಾರಾಷ್ಟ್ರ ಕಾಡುಗಳು ಸ್ವಲ್ಪ ತಂಪು. ಅಂದು ಸಂಜೆ ರೈಲು ಹತ್ತಿದ ಮಹಾರಾಷ್ಟ್ರದ ಕುಟುಂಬ ಇಡೀ ರೈಲು ತಮ್ಮದೇ ಅನ್ನುವಂತೆ ವರ್ತಿಸತೊಡಗಿದರು.ಕಾಡಿನ ಶಾಂತ ಸ್ವಭಾವ ಅವರಲ್ಲಿ ಸ್ವಲ್ಪವೂ ಇದ್ದಂತೆ ಕಾಣಲಿಲ್ಲ. ಅವರ ೧೬ ಸೀಟು waiting ನಲ್ಲಿ ಇತ್ತು. ಇದ್ದವರು ೨೭ ಮಂದಿ. ಆದರೂ ಪೂರ್ತಿ ಗಲಾಟೆ. ನಮ್ಮನ್ನೂ, ದೆಲ್ಲಿ ದಂಪತಿಗಳನ್ನೂ ಬೇರೆ ಸೀಟಿಗೆ ಹೋಗಿ ಅಂತ ಎಬ್ಬಿಸಲು ನೋಡುತ್ತಿದ್ದರು. ನಾವು ಅದಕ್ಕೆ ಸೊಪ್ಪು ಹಾಕದಿದ್ದರೂ, ನೋಯ್ಡಾ ಹುಡುಗರು ಮಾತ್ರ ಬೇರೆ ಭೋಗಿಗೆ ಹೋಗುವಂತಾಯಿತು. ಎಲ್ಲಾ ಝಣ ಝಣ ಕಾಂಚಾಣ.. ಟಿ.ಟಿ ಕೃಪೆ. ಅವರು ಎಲ್ಲೆಡೆ ಸಾಮಾನು ಎಳೆಯುವುದು, ಜೋರು ಮಾತು, ಕೆಳಗಿನ ಬರ್ತ್ನಲ್ಲಿ ಆರಾಮಾಗಿ ಕೂರಲಾಗದಷ್ಟು ತಾವೇ ಕೂತು ನಮ್ಮೆಲ್ಲರ ನೆಮ್ಮದಿ ಕೆಡಿಸಿದ್ದರು. ಅದುವರೆಗೆ ಆರಾಮಾಗಿದ್ದ ನಮಗೆ ಆಗ ಬಿಸಿ ತುಪ್ಪ ಬಾಯಿಗೆ ಹಾಕಿಕೊಂಡಂತ ಅನುಭವ. ಎದ್ದು ಹೋಗಿ ಅನ್ನೋಕಾಗುತ್ತಾ ? ನೆಲದಲ್ಲೇ ಹಾಸಿ ಮಲಗಿದ ಅವರು ರಿಸರ್ವೇಷನ್ ಇಲ್ಲದ ಪ್ರಯಾಣ ಎಷ್ಟು ಕಷ್ಟ ಅಂತ ನೆನಪಿಸಿದ್ರು.
ಹೇಗೋ ಮಾರನೇ ದಿನ ಬೆಳಗಾಯಿತು. ಕೆಳಗೆ ನೋಡಿದರೆ ನಮ್ಮ ಕಾಲಿಡಲೂ ಆಗದಂತೆ ಮಲಗಿದ್ದಾರೆ. ಹೇಗೋ ಮೂಲೆಯಲ್ಲಿದ್ದ ಚಪ್ಪಲಿ ಹುಡುಕಿ ನಿನ್ನೆಯಂತೆ ನಿತ್ಯಕರ್ಮ. ಮಥುರ, ಆಗ್ರಾಗಳನ್ನು ನಿನ್ನೆಯೇ ನೋಡಿದ್ದರಿಂದ ದೆಲ್ಲಿ ಬರುವುದರ ನಿರೀಕ್ಷೆಯಲ್ಲೇ ಬೆಳಗಾಗಿತ್ತು. ಪರಿಚಯವಾಗಿದ್ದ ದೆಹಲಿ ದಂಪತಿ ಚೂಡಾ(ಒಣ ಅವಲಕ್ಕಿಗೆ ಹಸಿಗಡಲೆ ಮೆಣಸು ಹೆಚ್ಚಿ ಹಾಕಿ ತಯಾರಿಸಿದ್ದು) ತಿನ್ನುತ್ತಿದ್ದರು. ನಮಗೂ ಸ್ವಲ್ಪ ನೀಡಿದರು. ನಾವೂ ನಾವು ತಗೊಂಡ ವೇಫರ್ಸ್ ನೀಡಿದೆವು. ಎರಡೂ ರುಚಿಯಾಗಿತ್ತು. ಅಂತೂ ಬೆಳಗ್ಗೆ ೯:೩೦ ಕ್ಕೆ ದೆಲ್ಲಿ ಬಂತು. ಮುಖ, ಕೈಗಳಿಂದ ಇಳಿಯುತ್ತಿದ್ದ ಬೆವರ ಧಾರೆ ಒರೆಸುತ್ತಾ ಸೆಖೆಯ ನಗರಿ ದೆಲ್ಲಿಯಲ್ಲಿಳಿದೆವು. ದೇಶದ ರಾಜಧಾನಿ ದಿನನಿತ್ಯ ಬರುವ ಸಾವಿರಾರು ಪ್ರವಾಸಿಗರಂತೆ , ಕೋಟ್ಯಾಂತರ ನಿವಾಸಿಗರಂತೆ ಬೇಸರವಿಲ್ಲದೆ ಬರಮಾಡಿಕೊಂಡಿತು.
*****
" ಬ್ಯಾಗ ಬಂಧನದಿಂದ ಬಿಡಿಸು" ಆಹಾ…ಛಂದದ ಬರಹ ಪ್ರಶಸ್ತಿ…ಛಲೋ ದಿಲ್ಲಿ,ನೋಡನಾ ಮುಂದೇನು ಬರತ್ತೆ ಅಂತಾ ಈ ಲೇಖನ ಮಾಲೆಯಲ್ಲಿ 😉
chandada baraha…….. 🙂
THank You Chinmay. Thanks Padma 🙂
ಪ್ರವಾಸ ಕಥನ ಆಸಕ್ತಿದಾಯಕವಾಗಿದೆ 🙂