ಜಮೀಲ್ ಅಹ್ಮದ್… ನನಗಿಂತಲೂ ಕನಿಷ್ಠ ಎಂಟು ಹತ್ತು ವರ್ಷವಾದರೂ ಹಿರಿಯ.. 1992ರಿಂದ 1996ರವರೆಗೆ ನಾನು ನೋಡಿದಂತೆ ಕೇವಲ ನಾಲ್ಕು ನೂರು ರೂಪಾಯಿಗಳ ಸಂಬಳದ ಕೆಲಸವನ್ನು ಮಾಡುತ್ತಿದ್ದ. ಅದು ಬಿ. ಕಾಂ. ಪದವಿ ಕೈಯಲ್ಲಿಟ್ಟುಕೊಂಡು. ನಾನು ನನ್ನ ಓದು ಮುಗಿಸಿ ಯಾವುದೋ ಎನ್. ಜಿ. ಓ ಒಂದರಲ್ಲಿ ಮಾರ್ಚ್ 1996 ರಲ್ಲಿ ಸಾವಿರ ರೂಪಾಯಿಯ ಸಂಬಳದ ಕೆಲಸಕ್ಕೆ ಸೇರಿಕೊಂಡಿದ್ದೆ. ಅದೇ ಕಚೇರಿಯಲ್ಲಿ ಖಾಲಿ ಇದ್ದ ಆಫೀಸ್ ಬಾಯ್ ಕೆಲಸಕ್ಕೆ ರೂ. ೬೦೦ ಗಳ ಸಂಬಳ ಕೊಡುತ್ತೇವೆಂದಿದ್ದರು. ದಿನ ಸಂಜೆ ಓಣಿಯಲ್ಲಿ ಕುಳಿತು ಹರಟುವಾಗ "ಅಣ್ಣ ಹೀಗೀಗೆ" ಅಂದಾಗ.. ಬಹುಶಃ ಯಾರೂ ನಂಬಲಿಕ್ಕಿಲ್ಲ. "ದೀಪು, ಬೇರೆ ಯಾರಿಗೋ ಹೇಳಬೇಡ.. ಅಟ್ಲೀಸ್ಟ್ ೨೦೦ ರೂಪಾಯಿಗಳ ಹೆಚ್ಚು ಸಂಬಳ ಸಿಕ್ಕುತ್ತಲ್ಲಾ ? ನಾನೇ ಬರುತ್ತೇನೆ…. ಅಂದುಬಿಟ್ಟ..
ನಿಜವಾಗ್ಲೂ ನಂಗೆ ಆತನಿಗೆ ದುಡಿಮೆ ಬಗ್ಗೆ ಇದ್ದ ಗೌರವ ನೋಡಿ ಖುಷಿಯಾಗಿತ್ತು. ನಾನೇ under-graduate. ನನ್ನ ಕೈ ಕೆಳಗೆ ಪದವೀಧರ ಅಟೆಂಡರ್. ನನಗೆ ಹೇಳಿಕೊಳ್ಳಲಾಗದ ಮುಜುಗರ. ನಿರ್ಭಂದಿತ ಬದುಕಿನ ತಲ್ಲಣ ಆತನನ್ನು ಅಷ್ಟು ಮಾಗಿಸಿತ್ತೋ ಗೊತ್ತಿಲ್ಲ. ಮುಂದೆ ನನಗೆ ಸರ್ಕಾರಿ ನೌಕರಿ ಸಿಕ್ಕ ನಂತರ ಆತ ಆ ಕಚೇರಿಯಲ್ಲಿ ಅಕೌಂಟೆಂಟಾಗಿ ಬಡ್ತಿ ಪಡೆದು ಜೀವನ ರೂಪಿಸಿಕೊಳ್ಳುತ್ತಿದ್ದ. 1995,1996 ಈ ಎರಡು ವರ್ಷಗಳಲ್ಲಿ ಹುಚ್ಚು ಬಿಡುವಷ್ಟು ಹೆಚ್ಚಾಗಿ ನಾನು ಜಮೀಲ್ ವಾರಕ್ಕೆ ಕನಿಷ್ಠ ಎರಡು ಮೂರು ಸಿನೆಮಾ ನೋಡಿದ್ದೆವು. DDLJ.ಆಗಿನ ನಮ್ಮ ಫೇವರಿಟ್ ಸಿನೆಮಾ. ಕಾಜಲ್, ಮಾಧುರಿ ದೀಕ್ಷಿತ್ ನಮ್ಮ ಫ್ಲೈಯಿಂಗ್ ಕಿಸ್ ಕನ್ಯೆಯರು. ಯಾರಾದರೂ "ಲೇ ಬಡ್ಡಿಮಕ್ಳ ನಿಮ್ಗಿಂತ ವಯಸ್ಸಲ್ಲಿ ದೊಡ್ದೋವ್ಳಲೇ ಮಾಧುರಿ" ಅನ್ನೋರು. "ಇರ್ಲಿ ಬಿಡಲೇ, ನಾನ್ ಆಕಿ ವಯಸ್ಸೆಷ್ಟು ಅಂತೇನಾದ್ರೂ ಕೇಳಿದ್ನಾ? " ಅಂದು ಬಾಯಿ ಮುಚ್ಚಿಸುತ್ತಿದ್ದೆವು.
ಜಮೀಲನ ಮದುವೆಗೆ ಹೋಗಿ ಲಿಂಗಾಯಿತರಾದ ನಾವು ಕೆಲವು ಗೆಳೆಯರು ಬಿರಿಯಾನಿಯಲ್ಲಿನ ಚಿಕನ್ ಪೀಸ್ಗಳನ್ನು ಕೈಯಲ್ಲಿಡಿದು ಫೋಟೋ ತೆಗೆಸಿಕೊಂಡು ನಮ್ಮ ನಮ್ಮ ಮನೆಯವರ ಕೆಂಗಣ್ಣಿಗೆ ಗುರಿಯೂ ಆಗಿದ್ದೆವು. ಗೆಳೆಯರೆಲ್ಲ ಸೇರಿ ಜಮೀಲನ ಮನೆಯಿಂದ ರುಚಿಯಾದ ಚಿಕನ್ ಬಿರಿಯಾನಿ ಕಟ್ಟಿಸಿಕೊಂಡು ನಮ್ಮೂರು ಹಗರಿಬೊಮ್ಮನಹಳ್ಳಿ ಪಕ್ಕದ ಮಾಲವಿ ಜಲಾಶಯದ ದಂಡೆಯಲ್ಲಿ ಉಂಡು ಸಂಜೆವರೆಗೆ ಕಾಲ ಕಳೆಯುತ್ತಿದ್ದೆವು. ಒಮ್ಮೆ ಕುತೂಹಲಕ್ಕೆ ಪೇಪರ್ ನಲ್ಲಿ ಬಂದಿದ್ದ ಜಾಹಿರಾತು ನೋಡಿ ಕೇವಲ ಮೂರು ನೂರು ರೂಪಾಯಿಗಳಿಗೆ ಒಂದು ಕಲರ್ ಫೋಟೋ ತೆಗೆಯುವ ಕ್ಯಾಮರಾ ಪಡೆಯಲು ದುಡ್ಡು ಕಳುಹಿಸಿದ್ದ ಜಮೀಲ್. ಡೆಲ್ಲಿಯಿಂದ ಬಂದ ಡಬ್ಬಾ ಕ್ಯಾಮರಾ ಕಪ್ಪು ಬಿಳುಪು ಫೋಟೋ ತೆಗೆಯುವಂತಾದ್ದಾಗಿತ್ತು. ಗುಜರಿಗೆ ಹಾಕಿದರೂ ಚಿಂತೆಯಿಲ್ಲ, ಒಂದು ಕಪ್ಪು ಬಿಳುಪು ರೀಲ್ ಹಾಕಿಸಿ ಫೋಟೋ ತೆಗೆಸಿಕೊಂಡೇ ಬಿಸಾಕಿದರಾಯಿತು ಅಂದುಕೊಂಡು ಅದನ್ನೂ ಮಾಡಿ ಮುನ್ನೂರು ರುಪಾಯಿಯ ನಷ್ಟಕ್ಕೆ ಅನಿವಾರ್ಯ ನಗೆ ನಕ್ಕು ಸೇಡು ತೀರಿಸಿಕೊಂಡಿದ್ದೆವು.
ಎಲ್ಲ ನೆನೆಸಿ ಕೊಂಡರೆ ಈಗಲೂ ಒಮ್ಮೆ ಖುಷಿಯಾಗುತ್ತೆ. ಆದರೆ ಕಾಲಕ್ರಮೇಣ ನೌಕರಿ, ದುಡಿಮೆ, ಸಂಸಾರ ಮಕ್ಕಳ ಒತ್ತಡದ ಮಧ್ಯೆ ಆಗೀಗ ಒಮ್ಮೊಮ್ಮೆ ಭೇಟಿ ಮಾಡುವುದು, ತಮಾಷೆ ಮಾಡಿ ಎದೆಯೊಳಗಿನ ಕಫ ಕಿತ್ತೊಗೆಯುವಂತೆ ನಕ್ಕು ಬಿಡುತ್ತಿದ್ದೆವು. ಮುಸ್ಲಿಂ ಆದ ಜಮೀಲ್ ಹಿಂದೂ ಹಬ್ಬಗಳಾದ ಗಣೇಶ ಚತುರ್ಥಿಗೆ ಪಟ್ಟಿ ಕೇಳಲು, ಗಣೇಶ ವಿಸರ್ಜನೆಗೆ ನಮ್ಮೊಂದಿಗೆ ಬರುತ್ತಿದ್ದ, ಕಾಮನ ಹಬ್ಬದ ದಿನ "ದಹನ "ದ ನಂತರ ಮಂಡಾಳು ಒಗ್ಗರಣೆ ತಿಂದು ಮಲಗಲು ಮನೆಗೆ ಹೋಗುತ್ತಿದ್ದ. ಯಾವುದೇ ದುಷ್ಚಟವನ್ನು ಹೊಂದಿರದ ಜಮೀಲನಿಗೆ ಆಗಿನಿಂದಲೂ ಅವನಿಗೊಂದು ಖಾಯಿಲೆ ಅಲ್ಲವೆಂದೇ ವೈದ್ಯರು ಹೇಳುತ್ತಿದ್ದ, ಆದರೆ ಒಳ ಗೊಳಗೇ ಕಮರುವಂಥಹ ಜಾಂಡೀಸ್ ಅವನನ್ನು ಬಾದಿಸುತ್ತಿದ್ದುದು ನಮಗ್ಯಾರಿಗೂ ಗೊತ್ತೇ ಇರಲಿಲ್ಲ. ಜನವರಿ ಮಾಹೆ, ೨೦೦೮ರಲ್ಲಿ ಒಂದು ದಿನ ಜಮೀಲ್ "ಹೋದ" ಎಂಬ ಸುದ್ದಿಗೆ ಗೆಳೆಯರೆಲ್ಲರೂ ಬೇಸರ ಗೊಂಡು ಅವನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟು ಬಂದದ್ದಾಗಿತ್ತು.
ಅದೇ ರೀತಿ ಇನ್ನೊಬ್ಬ ಗೆಳೆಯ ಬದುಕಿನ ಚಿಕ್ಕ ವಯಸ್ಸಿನಲ್ಲೇ ಅಂತ್ಯ ಕಂಡದ್ದು . ಬಹುಶಃ ೨೦೦೩ ಅನ್ನಿಸುತ್ತೆ. ನಾನಾಗಲೇ ನೇಮಕಗೊಂಡು ಆರು ವರ್ಷಗಳಾಗಿದ್ದವು. ಅಷ್ಟರಲ್ಲೇ ಸುಮಾರು ಇಲಾಖೆಯ ನೌಕರ ಬಾಂಧವರು ಸ್ನೇಹಿತರಾಗಿದ್ದರು. ಮದುವೆ ಆಗಿರದ ಹುಡುಗರ ಗುಂಪು ಒಂದಾದರೆ ಮದುವೆ ಆದವರ ಗುಂಪು ಇನ್ನೊಂದು. ಆದರೂ ಒಟ್ಟೊಟ್ಟಿಗೆ ಕಲೆತು ಕಾಡು ಹರಟೆ, ಚೇಷ್ಟೆ, ಗೇಲಿ, ಕಾಲೆಳೆಯುವುದು, ಏಕ ಪಾತ್ರಾಭಿನಯ, ಆಂಗಿಕ ಅಭಿನಯ, ಕುಡುಕರ ಸನ್ನಿವೇಶ ಸೃಷ್ಟಿಸುವುದು ಹೀಗೆ ಎಲ್ಲಾ ನಡೆಯುತ್ತಿತ್ತು.. ಕಚೇರಿ ಸಮಯ ಮುಗಿಯುತ್ತಿದ್ದಂತೆಯೇ ಬಳ್ಳಾರಿಯ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ನಾನು ಸೀನ, ರಾಜು, ಗಡ್ಡ ಯುವರಾಜು, ಶ್ರೀನಿವಾಸ , ರವಿ ಇತರ ಹತ್ತು ಹಲವು ಗೆಳೆಯರು ಕುಳಿತೆವೆಂದರೆ ಮುಗೀತು, ಒಂದೋ ಮಾತಾಡಿ, ಗೋಳು ಹೊಯ್ದುಕೊಂಡೋ, ಕಾಡಿಯೋ, ನಕ್ಕು ನಕ್ಕು ಹೊಟ್ಟೆ ಹುಣ್ಣಾಗಬೇಕು, ಇಲ್ಲವೇ ಯಾರ ದಾದರೂ ಪ್ರಾಯೋಜಕತ್ವದಲ್ಲಿ ಬೆಂಗಳೂರು ರಸ್ತೆಯ ಬಿಸಿ ಬಿಸಿ ಇಡ್ಲಿ ವಡಾನೋ, ಬಾಸುಂಡೆ (ಅದೊಂದು ಸಿಹಿ ಖಾದ್ಯ ) ಮತ್ತೊಂದೋ ಸೆಳೆದು ತಮ್ಮ ತಮ್ಮ ಮನೆ, ರೂಮು ಸೇರುತ್ತಿದ್ದೆವು. ಅದೇ ಇಲಾಖೆಯ ಒಬ್ಬ ನೌಕರನಿದ್ದ ಮುಸ್ತಫಾ ಅಂತ. ಉಳಿದ ನೌಕರರಂತೆ ಅವನೂ ಹರಟೆಗೆ ಸದಸ್ಯನೂ ಹೌದು .. ಅನುಕಂಪದ ಮೇಲೆ ನೌಕರಿಗೆ ಬಂದಿದ್ದ. ಆದರೆ, ಒಬ್ಬ ಒಳ್ಳೆಯ ಅಂತಃಕರಣವಿದ್ದ ಮನುಷ್ಯ.
ಯಾರದಾದರೂ ಹುಟ್ಟುಹಬ್ಬ ಬಂದರೆ, ಅಥವಾ ಅವನಿಗೆ ಖುಷಿಯಾದರೆ ಒಂದೊಂದು ದುಬಾರಿ ಪೆನ್ನು ಗಿಫ್ಟು ಕೊಟ್ಟು ಖುಷಿಪಡುತ್ತಿದ್ದ. ಅವನು ಹುಡುಗಿಯರೊಂದಿಗೆ ಮುಖ ಕೊಟ್ಟು ಮಾತಾಡಿದ್ದನ್ನು ನಾನು ನೋಡಿ ದ್ದಿಲ್ಲ. ಚಿಕ್ಕ ಕುಟುಂಬ ಹೆಚ್ಚಿನ ಜವಾಬ್ದಾರಿ ಮತ್ತವನದು ಚಿಕ್ಕ ವಯಸ್ಸು. ಅಬ್ಬಾಬ್ಬ ಅಂದರೂ ೨೪ರಿಂದ ೨೬ ಇದ್ದವೇನೋ, ಅಷ್ಟೇ. ತಿಂಗಳ ಕೊನೆಗೆ ಅಥವಾ ಮಧ್ಯೆದಲ್ಲಿ ಯಾವುದಾದರೂ ಒಳ್ಳೆ ಸಿನಿಮಾ ಬಂದರೆ ಒಟ್ಟಿಗೆ ಹೋಗಿ ನೋಡಿ ಕೇಕೆ ಹಾಕುತ್ತಿದ್ದೆವು.. ಪ್ರತಿ ಹೊಸ ವರ್ಷಾರಂಭದ ಹೊತ್ತಿಗೆ ಒಂದಷ್ಟು ಗೆಳೆಯರು ಸೇರಿ ಒಂದು ಕಡೆ ಊಟಕ್ಕೆ ವ್ಯವಸ್ಥೆ ಮಾಡಿಕೊಂಡು ಹನ್ನೆರಡರ ತನಕ ಹಾಡು ಕುಣಿತ, ಎಲ್ಲ ನಡೀತಿತ್ತು. ಅಂದು ಮಾತ್ರ ನಮ್ಮ ನಡುವೆ ಜೀವಮಾನದಲ್ಲೇ ಹೆಜ್ಜೆ ಹಾಕದವರೂ ಕುಣಿದು ಬಿಡುವಂತೆ ಮಾಡಿಬಿಡುತ್ತಿದ್ದೆವು.
೨೦೦೩ರ ವರ್ಷಾರಂಭವೂ ಚೆನ್ನಾಗಿಯೇ ಕಳೆದ ನಾನು, ರಾಜು ಮುಸ್ತಫಾ ಇತರರು ಸೇರಿ ಆಗತಾನೇ ಬಿಡುಗಡೆಯಾಗಿದ್ದ ಜೇಮ್ಸ್ ಬಾಂಡ್ ನ "ಡೈ ಅನದರ್ ಡೇ" ಸಿನೆಮಾ ನೋಡಲು ಹೋಗಿದ್ದೆವು. ಅದಾಗಿ ಎರಡು ದಿನವಷ್ಟೇ ಆಗಿದ್ದವು. ಇದ್ದಕ್ಕಿದ್ದಂತೆ ಶಾಕಿಂಗ್ ಸುದ್ದಿ ಕಿವಿಗೆ ಬಿತ್ತು… ಮುಸ್ತಫಾ ಬ್ರೈನ್ ಹ್ಯಾಮೊರೇಜ್ ಖಾಯಿಲೆಗೆ ಒಳಗಾಗಿ ಒಂದೇ ದಿನದಲ್ಲಿ ಇನ್ನಿಲ್ಲವಾಗಿಬಿಟ್ಟ.. ಮೊದಲಿಂದಲೂ ಬೇಡ ಬೇಡ ಎನ್ನುತ್ತಿದ್ದ ಮುಸ್ತಫಾ ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಗೆ ಒಪ್ಪಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಮದುವೆ ಯಾಗಿರದ ಕಾರಣ ಆ ಕುಟುಂಬಕ್ಕೆ ಅನುಕಂಪದ ನೌಕರಿಗೂ ಅವಕಾಶ ಇಲ್ಲದಾಯಿತು. ಅವನ ತಾಯಿ ಮತ್ತು ಇಬ್ಬರು ತಂಗಿಯರು ಇದ್ದರೆಂದು ನಾನು ಕೇಳಿದ್ದೆ. ಅಷ್ಟು ವರ್ಷ ಗೆಳೆಯರೆಲ್ಲಾ ಸೇರಿ ಕಾಡುತ್ತಿದ್ದ, ಛೇಡಿಸುತ್ತಿದ್ದ, ನಗುತ್ತಿದ್ದ, ನಗಲು ಕಾರಣವಾಗುತ್ತಿದ್ದ ಜೀವನದ ಸಣ್ಣ ಸಣ್ಣ ಅವಕಾಶಗಳನ್ನು ವಿಧಿ ಕಿತ್ತು ಕೊಂಡ ಬಗ್ಗೆ ಬಹಳ ದಿನಗಳವರೆಗೆ ಕಾಡುತ್ತಿತ್ತು.
ಗುಣ, ನಡತೆ, ಸಾಮ್ಯತೆ, ನಿಷ್ಕಲ್ಮಶ ಮನಸ್ಸು.. ಆ ಇಬ್ಬರೂ ಗೆಳೆಯರದ್ದೂ ಒಂದೇ . ಬೇರೆ ಬೇರೆ ವಯಸ್ಸಿನ, ಓದುವಾಗಿನ, ಕೆಲಸವಿಲ್ಲದ ಕಾಲದ ಗೆಳೆಯರು ಹಾಗೂ ಸರ್ಕಾರಿ ನೌಕರಿ ಸಿಕ್ಕ ನಂತರದ ಗೆಳೆಯರ ಮಧ್ಯೆ ಇವರಿಬ್ಬರ ಸಾವು ನಮ್ಮ ಕೆಲ ಗೆಳೆಯರನ್ನು ಆಗಾಗ ಕಾಡುವುದುಂಟು…ಇಬ್ಬರೂ ಒಮ್ಮೆ ಬದುಕಿನ ಅವರ ಕೊನೆ ಗಳಿಗೆಯಲ್ಲಿ ಸಿಕ್ಕಿದ್ದರೆ " ಡೈ ಅನದರ್ ಡೇ" ಎಂದು ಹೇಳಿ ಸಾವನ್ನು ಮುಂದೂಡಿ ದ್ದರೆ ಚೆನ್ನಾಗಿತ್ತು ಅನ್ನಿಸುತ್ತೆ… ನನಗೆ ಪ್ರತಿ ವರ್ಷಾರಂಭದ ದಿನದಲ್ಲಿ ಈ ಇಬ್ಬರು ಗೆಳೆಯರು ನೆನಪಾಗು ತ್ತಾರೆ. ಬದುಕಿದ್ದೂ ವರ್ಷದಿಂದ ವರ್ಷಕ್ಕೆ ನಮ್ಮ ಆಯುಷ್ಯದಲ್ಲಿ ಒಂದಂಕಿಯ ವರ್ಷವನ್ನು ಕಳೆಯುತ್ತಾ ಬರುವ ನಾವು, ನಮ್ಮನ್ನು ಒರಳಲ್ಲಿ ಹಾಕಿ ರುಬ್ಬುವ ನಿತ್ಯ, ಸತ್ಯ ಮತ್ತು ವಾಸ್ತವ ಜೀವನದಲ್ಲಿ ವರ್ಷದ ಆರಂಭದ ದಿನದಲ್ಲಿ ಒಂದೊಂದು ಗುರಿಯನ್ನೋ, ನಿಲುವನ್ನೋ ತಲುಪಿ, ತಳೆದು ಕೊಂಚ ಮಟ್ಟಿಗೆ ಸಮಾಧಾನವನ್ನು, ಸಮಝಾಯಿಷಿಯನ್ನು ಕೊಟ್ಟು – ಕೊಂಡು ಇರುವುದು ಅನಿವಾರ್ಯವಾಗಿದೆ. ಈ ವಾರ ದಿಂದ ರಂಜಾನ್ ಹಬ್ಬದ ರೋಜಾ ಶುರುವಾಗಿದೆ. ಕಚೇರಿ ಪಕ್ಕದಲ್ಲೇ ಮಸೀದಿಯಲ್ಲಿ ಹೊತ್ತಿಗೆ ಸರಿಯಾಗಿ ಅಜಾ ಕೂಗುವ ಧ್ವನಿ. ಮತ್ತಿವರಿಬ್ಬರ ನೆನಪು…
ಯಾ ಅಲ್ಲಾಹ್…..
*****
ಕಟು ವಾಸ್ತವ… ಓದಿದ ಮೇಲೆ ಪ್ರತಿಯೊಬ್ಬರ ಜೀವನದಲ್ಲೊ ಇ೦ತಹ ಕೆಲ ಪಾತ್ರಗಳು ಬ೦ದು ಹೊಗಿರುತ್ತವೇನೊ ಅನ್ನಿಸುತ್ತದೆ…
ಚೆನ್ನಾಗಿದೆ…
Really Heart Touching Story Amar…
Kannalli Niru Barisitu Bro…
ಅಮರ್, ತುಂಬಾ ಹೃದಯಸ್ಪರ್ಶಿ ಲೇಖನ! ನನ್ನ ಗೆಳೆಯನೊಬ್ಬನೂ ಇದೇ ತರಹ ನಮ್ಮೆಲ್ಲರ ಬಿಟ್ಟು ಹೋಗುತ್ತಿದ್ದಾನೆ ಅಂತ ಸುದ್ದಿ ಕೇಳಿ ಬೇಜಾರಿನಲ್ಲಿದ್ದೇನೆ :(. ಇದುವೇ ಜೀವನವೇ?
Great Tributes to your friends Amar. Title is very poetic and meaningful. I believe good souls usually depart early, as they are no more bound by 'karma'!
Chennagithu. Yaru ee Bhumi mele shashvatha alla. Olleyavaru agli kettavare agli theerihoda mele avara nenapugalu namma jothe idde irathe. Bhadukiddaga ketta gunagalanna – Saththa mele olle gunagalanna eththi mathadutheve aste.
ಇತ್ತೀಚೆಗಂತೂ…. ಬರಹದ ಮೇಲೆ ಹಿಡಿತ ಸಾಧಿಸಿ ಮತ್ತಷ್ಟು ಓದುವಂತೆ ಗಾರುಡಿಗನ ಶಕ್ತಿ ನಿಮ್ಮಿಂದಾಗಿದೆ. ನೆನಪುಗಳ ಮೂಸೆಯಿಂದ ಮತ್ತಷ್ಟು ಲೇಖನಗಳು ಬರುತ್ತಿರಲಿ.
Heart touched story. Thank u for ur recalling memory in such a constructive story
ಲೇಖನ ಚೆನ್ನಾಗಿದೆ ಸರ್.
ಭಾರಿ ಮಸ್ತ ಅದ