" …. ಇತ್ತ ಕಡೆ ಮದಕರಿನಾಯಕ ವ್ಯಾಸರಾಯಮಠದ ಮೇಲೆ ನಿಂತು, ಕೋವಿ ಹಾರಿಸುತ್ತಾ ತನ್ನ ಸೈನಿಕರ ಹೃದಯದಲ್ಲಿ ಧೈರ್ಯ ತುಂಬುತ್ತಿರುವಾಗ, ಅತ್ತ ಹೈದರಾಲಿಯೂ ಮತ್ತಷ್ಟು ಸೇನೆಯೊಂದಿಗೆ ಬಂದು, ತನ್ನ ಕಡೆಯವರನ್ನು ಹುರಿದುಂಬಿಸಲು ಯತ್ನಿಸಿದ.
ಶತ್ರುಸೈನ್ಯದ ಮಧ್ಯದಲ್ಲಿ ಹೈದರಾಲಿಯ ಖಾಸಾ ಹಸಿರು ನಿಶಾನೆಯನ್ನು ಕಾಣುತ್ತಿದ್ದಂತೆಯೇ ದುರ್ಗದ ಸೈನಿಕರಲ್ಲಿ ಮತ್ತಷ್ಟು ರಣೋತ್ಸಾಹವೇರಿ, ಇಮ್ಮಡಿ ಹುರುಪಿನಿಂದ ಶತ್ರುಗಳನ್ನು ಸದೆಬಡಿಯಲಾರಂಭಿಸಿದರು. ಏರಿದ ಬಿಸಿಲಿನಲ್ಲಿ ಸಾವಿರಾರು ಖಡ್ಗಗಳು ಮಿಂಚುಗಳಂತೆ ಹೊಳೆಯುತ್ತಿದ್ದವು. ಕೋವಿಗಳ ಗುಂಡಿನ ಚಟಪಟ ಸದ್ದು, ತೋಫಿನ ಗರ್ಜನೆ, ಸೈನಿಕರ ರಣಕೇಕೆ – ದುರ್ಗದ ಬಂಡೆಗಳನ್ನು ಘಟ್ಟಿಸಿ, ಪುಟನೆಗೆದು ಚೋಳಘಟ್ಟವನ್ನು ಘಟ್ಟಿಸಿ, ಬೆಟ್ಟಗಳೆರಡರ ನಡುವಿನ ಬಯಲು, ಹೋರಾಡುವ ಕುದುರೆ, ಕಾಲಾಳುಗಳಿಂದ ಕಿಕ್ಕಿರಿದು ಬಯಲೇ ಎದ್ದು ನೆತ್ತರ ಹೊಗೆ ಕಾರುತ್ತಾ ಕುದಿಯುತ್ತಿರುವಂತೆ ಕಾಣಿಸಿತು.
'ಆದದ್ದಾಗಲಿ – ಇಂದು ದುರ್ಗವನ್ನು ಗೆಲ್ಲಲೇಬೇಕು' ಎಂಬ ಹಟತೊಟ್ಟೇ ಹೈದರಾಲಿಯ ಸೇನೆ, ಮುರಿದ ಕೋಟೆಯನ್ನೇರಿ, ಆಳವಿಲ್ಲದ ಕಂದಕವನ್ನೂ ಈಸಿ, ಸಿಹಿನೀರು ಹೊಂಡವನ್ನು ರಕ್ತದ ಹೊಳೆಯನ್ನಾಗಿ ಮಾಡಿ, ದುರ್ಗದ ಸೈನಿಕರು ಕಡಿದು ಕೆಡವಿದ ತಮ್ಮ ಹೆಣಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಕೋಟೆಯನ್ನು ಪ್ರವೇಶಿಸಿ, ಶಿರಿಯಪ್ಪನ ಬತೇರಿಯನ್ನು ಹಿಡಿದು ಅದರ ಮೇಲೆ ಹೈದರಾಲಿಯ ಝಂಡಾ ಏರಿಸಿ, ಜಯಘೋಷ ಕೂಗಿದರು.
ದುರ್ಗದ ಬತೇರಿಯ ಮೇಲೆ ಹೈದರಾಲಿಯ ಧ್ವಜ – ಅದನ್ನು ನೋಡುತ್ತಿದ್ದ ಹಾಗೇ ಮದಕರಿನಾಯಕನಿಗೆ ಎಲ್ಲಿಲ್ಲದ ಕ್ರೋಧಾವೇಶ ಮೈತುಂಬಿ ಕೈಯಲಿದ್ದ ಕೋವಿಯನ್ನು ಬಿಸುಟು, ಪರಿಘಾಯುಧವನ್ನು ಹಿಡಿದು – ' ಆ ಧ್ವಜ ಮುರಿಯಬೇಕು, ಇಲ್ಲವೇ – ನಮ್ಮ ತಲೆ ಬೀಳಬೇಕು, ಇವತ್ತು ಉಳಿದಿರುವುದಿಷ್ಟೆ. ' – ಎಂದು ಹೇಳಿ, ವ್ಯಾಸರಾಯರಮಠದ ಮೇಲಿನಿಂದ ಧುಮುಕಿ, ಕೆಣಕಿದ ವನವರಾಹದಂತೆ ಅತ್ತ ನುಗ್ಗಿದ.. "
ಮೇಲಿನ ಸಾಲುಗಳನ್ನು ಓದುತ್ತಿದ್ದರೆ, ಮದಕರಿನಾಯಕ – ಹೈದರಾಲಿಯ ಯುದ್ದವು ಹಾಗೆಯೇ ಕಣ್ಮುಂದೆ ಬಂದಂತಾಗುತ್ತದೆ ಅಲ್ಲವೇ. ಇಂತಹ ಅಮೋಘ ಸಾಲುಗಳು ನಮ್ಮ ನಾಡಿನ ಹೆಮ್ಮೆಯ ಕಾದಂಬರಿಗಳಲ್ಲೊಂದಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ "ದುರ್ಗಾಸ್ತಮಾನ" ಕಾದಂಬರಿಯಲ್ಲಿ ಕಾಣಬಹುದು. ಈ ಕಾದಂಬರಿಯ ಕತೃ ತ.ರಾ.ಸು. ರವರು.
ಈ ಕಾದಂಬರಿಯು ಸುಮಾರು ನಾಲ್ಕು ತಿಂಗಳ ಅವಧಿಯೊಳಗೆ, ಅನಾರೋಗ್ಯದಿಂದ ಮೇಲೆದ್ದು ಕೂರಲಾಗದ ಸ್ಥಿತಿಯಲ್ಲಿದ್ದ ತ.ರಾ.ಸು.ರವರು ಹಗಲು-ರಾತ್ರಿಯೆನ್ನದೇ ಈ ಕಾದಂಬರಿಯ ರಚನೆಯಲ್ಲಿ ತೊಡಗಿದ್ದರು. ಅಂತಹ ಅನಾರೋಗ್ಯದ ಸ್ಥಿತಿಯಲ್ಲೂ ತಮ್ಮ ಭಾವನೆಗಳಿಗೆ ಸರ್ವಭಾವ ತುಂಬಿ ಇಡೀ ಕಾದಂಬರಿಯನ್ನು ಒಂದು ಅದ್ಬುತ ಕಾದಂಬರಿಯನ್ನಾಗಿಸಿರುವುದು ಒಂದು ಹೆಮ್ಮೆಯ ಸಂಗತಿ.
ಇನ್ನೂ ತ.ರಾ.ಸು. ರವರ ಕುರಿತಂತೆ ಹೇಳುತ್ತಾ ಹೋದರೆ… ಅವರು ಬರೆದದ್ದು ದುರ್ಗಾಸ್ತಮಾನ ಕಾದಂಬರಿಯೊಂದೇ ಅಲ್ಲ. ಚಕ್ರತೀರ್ಥ, ಬೇಡದ ಮಗು, ಜೀತದ ಜೀವ, ಯಕ್ಷಪ್ರಶ್ನೆಯಂತಹ ಸಾಮಾಜಿಕ ಕಾದಂಬರಿಗಳು, ರೂಪಸಿ, ತೊಟ್ಟಿಲು ತೂಗಿತು, ಸಮಗ್ರ ಕಥೆಗಳಂತಹ ಕಥಾ ಸಂಕಲನಗಳು, ಜ್ವಾಲಾ, ಮೃತ್ಯು ಸಿಂಹಾಸನ ಎಂಬ ನಾಟಕಗಳು ಹಾಗೂ ನೃಪತುಂಗ, ರಕ್ತರಾತ್ರಿ, ಶಿಲ್ಪಶ್ರೀಯಂತಹ ಐತಿಹಾಸಿಕ ಕಾದಂಬರಿಗಳನ್ನು ಬರೆದವರು. ಹೀಗೆ ಸಾಹಿತ್ಯದ ಎಲ್ಲಾ ಪ್ರಮುಖ ಪ್ರಾಕಾರಗಳಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿದ ಇವರು ಸುಮಾರು 68ಕ್ಕೂ ಹೆಚ್ಚು ಕೃತಿಗಳನ್ನು ಬರೆದರು. ಇವರ ಮೊದಲ ಕೃತಿ – ಪುಟ್ಟನ ಚೆಂಡು.
ತ.ರಾ.ಸು. ರವರ ಪೂರ್ಣ ಹೆಸರು ತಳುಕಿನ ರಾಮಸ್ವಾಮಿ ಸುಬ್ಬರಾಯ. ದಿನಾಂಕ: 21-04-1920 ರಲ್ಲಿ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಗ್ರಾಮದಲ್ಲಿ ಜನಿಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದವರು. ಇವರ ತಂದೆ ರಾಮಸ್ವಾಮಿ ಮತ್ತು ತಾಯಿ ಸೀತಮ್ಮ. ಕರ್ನಾಟಕದ ಅಶ್ವಿನಿ ದೇವತೆಗಳಲ್ಲೊಬ್ಬರು ಎಂದೇ ಹೆಸರಾದ ಶ್ರೀ ಟಿ.ಎಸ್.ವೆಂಕಣ್ಣಯ್ಯನವರು ಇವರ ದೊಡ್ಡಪ್ಪ. ತ.ಸು.ಶಾಮರಾಯರು ಇವರ ಚಿಕ್ಕಪ್ಪ. ಅಂಬುಜಮ್ಮನವರು ಇವರ ಶ್ರೀಮತಿ.
ಆಗಿನ್ನೂ ಸ್ವತಂತ್ರಪೂರ್ವ ಕಾಲ. ಆಂಗ್ಲರ ದಬ್ಬಾಳಿಕೆಯ ವಿರುದ್ಧ ಇಡೀ ದೇಶದಲ್ಲೇ ಭಾರತೀಯರು ಚಳುವಳಿ ಮಾಡತೊಡಗಿದ್ದರು. ತ.ರಾ.ಸು. ರವರ ತಂದೆಯವರ ಸ್ನೇಹಿತರಾಗಿದ್ದ ಹುಲ್ಲೂರು ಶ್ರೀನಿವಾಸ ಜೋಯಿಸರು ಹಾಗೂ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರ ಸಂಗದಿಂದ ಅವರಲ್ಲಿ ಚಳುವಳಿಗಳಲ್ಲಿ ಭಾಗವಹಿಸುವ ಮನಸ್ಸಾಯಿತು. ಅಲ್ಲದೇ ಚಳುವಳಿಗಳಲ್ಲಿ ಧುಮುಕಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. 1942ರ ಆಗಸ್ಟ್ 9 ರಂದು ಕ್ವಿಟ್ ಇಂಡಿಯಾ ಚಳುವಳಿ (ಚಲೇಜಾವ್ ಚಳುವಳಿ) ಆರಂಭವಾಗುತ್ತಿದ್ದಂತೆ ಬ್ರಿಟೀಷರು ಗಾಂಧೀಜಿ ಮೊದಲಾದ ರಾಷ್ಟ್ರನಾಯಕರನ್ನು ಬಂಧಿಸಿದರು. ಇದರಿಂದ ಇಡೀ ಶಾಲಾ ಕಾಲೇಜುಗಳಿಗೆ ಬಹಿಷ್ಕಾರ ಹಾಕಲಾಯಿತು. ವಿದೇಶಿ ವಸ್ತುಗಳ ದಹನ ನಡೆಸಲಾಯಿತು. ಇದಕ್ಕೆ ತ.ರಾ.ಸು. ಮತ್ತು ಇವರ ಮಿತ್ರರೂ ಹೊರತಾಗಿರಲಿಲ್ಲ. ಒಮ್ಮೆ ಈ ತಂಡ ರೈಲು ಹಳಿಗಳನ್ನು ತಪ್ಪಿಸಿ ಸೇತುವೆಯನ್ನು ಉರುಳಿಸುವ ಏರ್ಪಾಡು ಮಾಡಿಕೊಂಡಿದ್ದಾಗ ಅದು ಪೋಲಿಸರ ಗಮನಕ್ಕೆ ಬಂದು ದಸ್ತಗಿರಿಯಾದರು. ಸೆರೆಮನೆಯಲ್ಲಿದ್ದರೂ ಇವರ ಚಳುವಳಿ ಮುಂದುವರೆದಿತ್ತು. 1942ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದರು. ಸೆರೆಮನೆವಾಸ ಕೂಡ ಅನುಭವಿಸಿದರು.
ಬೆಂಗಳೂರಿಗೆ ಬಂದ ಇವರು ಜೀವನ ನಿರ್ವಹಣೆಗಾಗಿ ಪತ್ರಿಕೋಧ್ಯಮ ಆರಿಸಿಕೊಂಡರು. ವಿಶ್ವಕರ್ನಾಟಕ, ಪ್ರಜಾಮತ, ವಾಹಿನಿ, ಮೈಸೂರು ಮತ್ತು ವಿಚಾರವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹೆಚ್ಚು ಆದಾಯವಿರದ ಇವರ ದುಡಿಮೆ ಬಹಳ ಕಷ್ಟಕರವಾಗಿತ್ತು. ಅಂಬುಜಮ್ಮನವರು ಹಾಗೂ ತ.ರಾ.ಸು. ರವರು ಬರೆದ 'ಹಿಂದುರಿಗಿ ನೋಡಿದಾಗ' ಕೃತಿಯನ್ನು ನೋಡಿದಾಗ ಅವರು ಪಟ್ಟ ಕಷ್ಟಗಳ ಪಾಡು ಕಣ್ಮುಂದೆ ಬರುತ್ತದೆ. ಅದೆಷ್ಟೋ ಬಾರಿ, ತಮ್ಮ ಮನೆಯ ಹಾಗೂ ಆಸ್ಪತ್ರೆಯ ತುರ್ತು ಖರ್ಚುಗಳಿಗಾಗಿಯೇ ಕತೆ, ಕಾದಂಬರಿಗಳನ್ನು ಬರೆದರು. ತ.ರಾ.ಸು. ರವರು ಮೂಲತಃ ಹಠಸ್ವಭಾವಿ, ನಿಷ್ಟುರ ಹಾಗೂ ಸ್ವಾಭಿಮಾನಿ. ತನ್ನ ಕಷ್ಟದ ಕಾಲದಲ್ಲಿ ಯಾರ ಮನೆಯ ಬಾಗಿಲಿಗೆ ಸಹಾಯಕ್ಕಾಗಿ ಕೈಚಾಚದೇ ಬಂದವರೊಡನೇ ಮನೆಯ ಕಾಫಿ ಹೀರುತ್ತಾ ಅ.ನ.ಕೃ. ಹಲವರು ಸ್ನೇಹಿತರೊಡನೆ ಹರಟುತ್ತಾ ತಮ್ಮ ನೋವ ಮರೆತವರು.
ಕನ್ನಡದ ಕಾದಂಬರಿಗಳನ್ನಾಧರಿಸಿ ಕನ್ನಡ ಚಿತ್ರಗಳನ್ನು ನಿರ್ಮಿಸುವ ಒಂದು ಪರಂಪರೆ 1962ರಲ್ಲಿ ಪ್ರಾರಂಭವಾಯಿತು. ಕೃಷ್ಣಮೂರ್ತಿ ಪುರಾಣಿಕರ “ಧರ್ಮದೇವತೆ” ಕಾದಂಬರಿ ಆಧರಿಸಿದ “ಕರುಣೆಯೇ ಕುಟುಂಬ ಕಣ್ಣು” ಚಿತ್ರವು ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಚಿತ್ರ. ಹಾಗೇ ನೋಡಿದರೆ ತ.ರಾ.ಸು. ರವರ ವಿಶಿಷ್ಟ ಕೃತಿ “ಹಂಸಗೀತೆ”ಯನ್ನಾಧರಿಸಿ ಹಿಂದಿಯಲ್ಲಿ “ಬಸಂತ್ ಬಹಾರ್” ಎಂಬ ಸಿನಿಮಾ ಬಹುಹಿಂದೆಯೇ ತೆರೆಕಂಡಿತ್ತು. 1959ರಲ್ಲಿಯೇ ತ.ರಾ.ಸು. ತಮ್ಮ ಕನ್ನಡ ಚಳುವಳಿ, ರಾಜಕೀಯ ಚಟುವಟಿಕೆಗಳ ಜತೆಗೆ ಸಿನಿಮಾ ಚಟುವಟಿಕೆಯಲ್ಲೂ ತೊಡಗಿದ್ದರು. ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಮಾರ್ಗದರ್ಶಿ (ಮಾರ್ಗದರ್ಶಿ, ಭಾಗ್ಯಶಿಲ್ಪ ಮತ್ತು ಬೆಳಕಿನ ಬೀದಿ ಕಾದಂಬರಿಗಳ ಆಧಾರಿತ), ಪುರ್ನಜನ್ಮ (ಸಾಕುಮಗಳು ಆಧಾರಿತ), ನಾಗರಹಾವು (ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಹಾಗೂ ಸರ್ಪಮತ್ಸರ ಕಾದಂಬರಿಗಳ ಆಧಾರಿತ), ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂ, ಆಕಸ್ಮಿಕ (ಆಕಸ್ಮಿಕ-ಅಪರಾಧ-ಪರಿಣಾಮ ಆಧಾರಿತ), ಇವು ತ.ರಾ.ಸು. ರವರು ಬರೆದ ಕಾದಂಬರಿಗಳ ಆಧಾರಿತ ಚಲನಚಿತ್ರಗಳು. ಎಸ್.ಆರ್.ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ ನಾಗರಹಾವು ಚಿತ್ರ ತೆಲುಗಿನಲ್ಲಿ “ಕೋಡೆನಾಗು” ಎಂದೂ, ತಮಿಳಿನಲ್ಲಿ “ರಾಜನಾಗಂ” ಎಂದು ಮತ್ತು ಹಿಂದಿಯಲ್ಲಿ “ಜಹರೀಲಾ ಇನ್ಸಾನ್” ಎಂದು ತೆರೆಕಂಡಿತು. ಅದೇ ಪುಟ್ಟಣ್ಣನವರ ಕೊನೆಯ ಚಿತ್ರ “ಮಸಣದ ಹೂ” ಸಹ ತ.ರಾ.ಸು. ರವರ ಕಾದಂಬರಿ ಆಧಾರಿತ ಚಿತ್ರ.
ದಿನಾಂಕ: 10-04-1984 ರಂದು ಸಾಹಿತ್ಯರತ್ನ ತ.ರಾ.ಸು. ರವರು ದೈವಾಧೀನರಾದರು. ಇಂತಹ ಅಪರೂಪದ, ಅವಿಸ್ಮರಣೀಯ ವ್ಯಕ್ತಿ ತ.ರಾ.ಸು. ರವರು ನಮ್ಮ ಚಿತ್ರದುರ್ಗ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ.
Nice to get good information
Dhanyavadagalu Sir.
ತ.ರಾ.ಸು.ರವರ ಬಗ್ಗೆ ಉಪಯುಕ್ತವಾದ ಮಾಹಿತಿಇದೆ. ಹಾಗೂ ಲೇಖನ ಉತ್ತಮವಾಗಿ ಮೂಡಿಬಂದಿದೆ
Thank You Sir..
Good One!
ಲೇಖನ ಚೆನ್ನಾಗಿದೆ ಬಹಳ ಇಷ್ಟವಾಯಿತು ….
very nice